
ಲೀಲಾ ಅಪ್ಪಾಜಿ ಎಂದಾಕ್ಷಣ ಹಕ್ಕಿ ಫೋಟೋ ಪ್ರಿಯರ ಕಣ್ಮುಂದೆ ಹಕ್ಕಿಗಳ ಸಾಲುಮೆರವಣಿಗೆ. ಪ್ರಾಧ್ಯಾಪಕಿಯಾಗಿ ವೃತ್ತಿ ಜೀವನದಲ್ಲಿ ಸಾಗಿ ಪ್ರಾಂಶುಪಾಲೆಯಾಗಿ ನಿವೃತ್ತಿ ಹೊಂದಿದ ಲೀಲಾ ಅಪ್ಪಾಜಿಯವರ ಬದುಕಿನ ಬಗೆಯೇ ಒಂದು ಸ್ಪೂರ್ತಿಗಾಥೆ. ಅವರು ಕನ್ನಡ ಎಂಎ ಮಾಡಿದ್ದಿರಬಹುದು, ನಂತರ ಹಂತಹಂತವಾಗಿ ವೃತ್ತಿ ಜೀವನ ರೂಪಿಸಿಕೊಂಡಿದ್ದಿರಬಹುದು, ನಿವೃತ್ತಿಯ ನಂತರ ಪ್ರವೃತ್ತಿಯ ಬೆನ್ನುಹತ್ತಿ ಮನಸಿನ ನಂದನವನ್ನು ಹಕ್ಕಿಗಳ ತಾಣ ಮಾಡಿಕೊಂಡಿದ್ದಿರಬಹುದು ಇಡೀ ಪಯಣವೇ ಅಚ್ಚರಿಯೊಂದಿಗೆ ಅಬ್ಬಾ ಎನ್ನಿಸುವಂತಿದೆ.
ಏನಿರಲಿ, ಇಲ್ಲದಿರಲಿ ಮನದ ನಿಶ್ಚಯವೊಂದು ಅಚಲವಿರಲಿ ಎಂದು ಅಂದುಕೊಂಡ ಹಾದಿಯಲಿ ಛಲಬಿಡದೆ ನಡೆದವರು.
ನಿವೃತ್ತಿಯ ನಂತರ ಏನು ಮಾಡಬೇಕೆಂದು ಹುಡುಕಾಡುತ್ತಿದ್ದ ಮನಸ್ಸು ಒಂದು ದಿನ ಫೋಟೋಗ್ರಫಿ ಎಂದು ನಿರ್ಧರಿಸಿದ್ದೇ ಕ್ಷಣವೂ ತಡಮಾಡದೆ ಆ ಫೀಲ್ಡಿಗೆ ಇಳಿದು ಟ್ರಯಲ್ ಅಂಡ್ ಎರರ್ ಮಾಡುತ್ತಲೇ ಕಲಿತೇಬಿಟ್ಟರು. ಗಾಂಧಿ ಮತ್ತು ಕುವೆಂಪುವನ್ನು ತಮ್ಮ ಆದರ್ಶವೆಂದು ಹೇಳುವ ಲೀಲಾ ಮೇಡಂ ಬರವಣಿಗೆಯೂ ಅವರ ಮಾತಿನಷ್ಟೇ ಮುದನೀಡುವಂತಹದ್ದು.
ತಮ್ಮ ಹಕ್ಕಿಗಳೊಡನಾಟದ ನೆನಪುಗಳನ್ನು ಈ ಅಂಕಣದ ಮೂಲಕ ‘ಅವಧಿ’ಯ ಓದುಗರೊಂದಿಗೆ ಹಂಚಿಕೊಳ್ಳಲಿದ್ದಾರೆ.
14.1
ಬಿತರಕನ್ನಿಕಾ
ಒಮ್ಮೆ ಕರ್ನಾಟಕದ ಗಡಿ ದಾಟಿದ ಬಳಿಕ ಹಕ್ಕಿಗಳಿಗಾಗಿ ಇತರೆಡೆಗೂ ಎಡತಾಕುತ್ತಲೇ ಇರುವ ಸೆಳೆತ ಸೃಷ್ಟಿಯಾಗುತ್ತದೆ. ಭಾರತದ ಮುಖ್ಯ ಹಕ್ಕಿ ಕ್ಷೇತ್ರಗಳಲ್ಲಿ ಮಂಗಲಜೋಡಿ-ಬಿತರ್‌ಕನ್ನಿಕಾ ಸೇರುತ್ತವೆ. ಚೋಪ್ತಾ ಪ್ರವಾಸ ಮುಗಿಸಿದ ಬಳಿಕ ಗುಡ್ಡಗಾಡುಗಳ ಬದಲಿಗೆ ನೀರಿಗಿಳಿಯುವ ಪ್ರವಾಸ ಮಾಡಬೇಕೆನ್ನುವ ಆಸೆಗೆ ಸೂಕ್ತ ತಾಣವಾಗಿದ್ದವು. ಉತ್ಕಲದ ಪಕ್ಷಿ ಪ್ರವಾಸಕ್ಕೆ ರೆಕ್ಕೆ ಕೊಡವಲು ಎರಡು ತಿಂಗಳ ಮೊದಲೇ ನಿರ್ಧರಿಸಿದ್ದೆ. ಒರಿಸ್ಸಾದ ಹಕ್ಕಿ ಛಾಯಾಗ್ರಾಹಕ, ಹಕ್ಕಿ ಮಾರ್ಗದರ್ಶಿ ಅನುಪಮ್ ದಾಸ್ ವಯಸ್ಸಾದ ಕಾಲಾಗದ ನನಗೆ `ಬನ್ನಿ ಮ್ಯಾಮ್ ಇಲ್ಲೊಬ್ಬ ಮಗ ಇದ್ದಾನೆಂದ’ ಮೇಲೆ ಬೇರೆ ಯೋಚನೆಗೆ ಎಡೆಗೊಡದೆ ಹೊರಡಲು ನಿರ್ಧರಿಸಿದೆ. ವೈಯಕ್ತಿಕ ಬದುಕಿನ ಒತ್ತಡಗಳಿಂದ ಉತ್ಕಲದ ಪ್ರವಾಸ ರದ್ದಾಗುವಂತಿದ್ದರೂ ಪರಿಸ್ಥಿತಿ ಸುಧಾರಿಸಿದ ಬಳಿಕ ಭುವನೇಶ್ವರಕ್ಕೆ ಹೊರಟು ನಿಂತೆ.
ಗಣರಾಜ್ಯೋತ್ಸವದ ಮುನ್ನಾ ದಿನ ನಡುರಾತ್ರಿಯಲ್ಲಿ ಬೆಂಗಳೂರಿನ ಕೆಂಪೇಗೌಡ ಏರ್‌ಪೋರ್ಟಿನಲ್ಲಿಳಿದೆ. ಗಣರಾಜ್ಯೋತ್ಸವದ ಬಿಗಿಕಾವಲಿನ ಬಿಸಿ ತಾಗಿದ್ದು ಲಗೇಜು ಸಾಗಿಸಿ ಸೆಕ್ಯುರಿಟಿ ಚೆಕ್‌ಗೆ ಹೋದಾಗ. ಕ್ಯಾಮೆರಾ ಬ್ಯಾಗ್ ತೆಗಿಯಿರಿ ಎಂದರು. ಪ್ರತಿ ಟೂರಿನಲ್ಲಿ ಬ್ಯಾಗು ಚೆಕ್ ಮಾಡಿ ಕ್ಯಾಮೆರಾ ಕಂಡು ಇದು ಯಾರಿಗೆ ಎಂದು ಕೇಳುವುದು ಮಾಮೂಲಿ. ನಾನೆ ಫೋಟೋಗ್ರಫಿ ಮಾಡುವವಳು ಎನ್ನೋದು, ಅವರು ನನ್ನನ್ನು ಹೌದಾ ಎನ್ನುವಂತೆ ಬೆರಗುಗಣ್ಣಿನಿಂದ ನೋಡುವುದು ನನಗೆ ರೂಢಿ. ನೆಟ್ಟಗೆ ನಡೆಯಲೂ ಆಗದ ಇವಳು ಅದೇನು ಫೋಟೋಗ್ರಫಿ ಮಾಡುತ್ತಾಳಪ್ಪ ಎಂಬ ಬೆರಗಿನ ಪ್ರಶ್ನೆ ಅವರ ನೋಟದಲ್ಲಿರುತ್ತದೆ. ಕ್ಯಾಮೆರಾ ಬ್ಯಾಗ್ ತೆಗೆದೆ. ಅಲೈನ್ ಕೀ ಎಲ್ಲಿ ಎಂದಾಗ ತೋರಿಸಿದೆ. ಇದನ್ನು ಲಗೇಜ್ ಬ್ಯಾಗಿಗೆ ಹಾಕಿ, ಕ್ಯಾಬಿನ್ನಿಗೆ ತೆಗೆದುಕೊಂಡು ಹೋಗಲು ಬಿಡೋಲ್ಲ’ ಎಂದರು. ಟ್ರೈಪಾಡ್ ಕ್ಯಾಮೆರಾ ಅಡ್ಜೆಸ್ಟ್ಮೆಂಟಿನ ಅಲೈನ್ ಕೀಯಿಂದ ವಿಮಾನವನ್ನು ಹೇಗೆ ಪುಡಿಪುಡಿ ಮಾಡಬಲ್ಲೆ ಎಂದು ಎಷ್ಟು ಯೋಚಿಸಿದರೂ ಹೊಳೆಯಲಿಲ್ಲ. ಕೆಳಗೆ ಹೋಗಿ ಬ್ಯಾಗ್ ತೆಗೆಸಿ ಕೀ ಹಾಕುವ ರಗಳೆ ಕಷ್ಟದ್ದೆನ್ನಿಸಿಹೋಗಲಿ ಬೇಡ ಬಿಡಿ’ ಎಂದದ್ದೇ ತಡ ನನ್ನೆದುರೆ ಡಸ್ಟ್ಬಿನ್ನಿಗೆ ಎಸೆದರು, ಒರಿಜಿನಲ್ ಅಲೈನ್ ಕೀ ಕಸದಬುಟ್ಟಿ ಸೇರಿತು. ಎರಡು ತೊಟ್ಟು ಕಣ್ಣೀರು ಒಳಗೆ ಸುರಿಸಿದೆ, ಹೊರಗೆ ಸುರಿಸಲು ಅವಮಾನವಾಗಿ.

ಬೋರ್ಡಿಂಗ್ ಪಾಸ್ ಪಡೆದು ಕಾಯುತ್ತಿದ್ದೆ. ಇನ್ನೇನು ಬೋರ್ಡಿಂಗ್ ಶುರುವಾಗಬೇಕಿತ್ತು. ಅನೌನ್ಸ್ಮೆಂಟ್ ಬಂತು, ನನ್ನ ಹೆಸರು ಕೂಗಿ. ವಿಮಾನ ಹತ್ತುವುದಿರಲಿ, ಮೆಟ್ಟಿಲುಗಳನ್ನು ಸರಸರ ಇಳಿದು ಓಡಿ ಸೆಕ್ಯೂರಿಟಿ ಚೆಕ್ಕಿಂಗಲ್ಲಿ ತಿಳಿಸಿ ಕೆಳಗಿಳಿದು ಬ್ಯಾಗು ತೆಗೆಸಿ ಒಳಗಿದ್ದ ಪವರ್ ಬ್ಯಾಂಕು ಎತ್ತಿಕೊಂಡು, ಮೇಲೆ ಹತ್ತಿ ಸೆಕ್ಯೂರಿಟಿ ಚೆಕ್ಕಿಂಗ್ ಮುಗಿಸಿ ದಡದಡ ಓಡಿದೆ. ಬೋರ್ಡಿಂಗ್ ದಾಟಿ ನನ್ನೊಬ್ಬಳಿಗಾಗಿ ಕಾಯುತ್ತಿದ್ದ ಬಸ್ ಹತ್ತಿ ವಿಮಾನದ ಬಳಿ ಹೋದೆ. ಆದರೆ ಮುಂದಿನ ಬಾಗಿಲು ಮುಚ್ಚಿದ್ದರು. ಹಿಂದಿನ ಬಾಗಿಲಿನಿಂದ ಹತ್ತಿದ್ದೇ ತಡ ಬಾಗಿಲು ಮುಚ್ಚಿ ರೈಟ್ ರೈಟ್ ಎಂದರು. ಸ್ವಯಂಕೃತ ಎಡವಟ್ಟುಗಳಿಂದ ಬಹುತೇಕ ರನ್ನಿಂಗ್ ರೇಸ್ ಮಾಡಿದ್ದೆ. ಸೀಟಿನಲ್ಲಿ ಕುಸಿದಾಗ ಹೃದಯದ ಬಡಿತ ತಹಬದಿಗೆ ಬಂದಿತು. ಹಾರು ಹಕ್ಕಿ ಹಾರು, ಏರು ನಭವನೇರು ಹಾರಿ ಏರಿ ಗುರಿಯ ಸೇರು’ ಎನ್ನುತ್ತಾ ಆರು ಹಗಲು ಐದು ಇರುಳುಗಳಲ್ಲಿ ಎರಡು ಊರುಗಳಲ್ಲಿ ನೀರ ಹಕ್ಕಿಗಳಿಗಾಗಿ, ಮಿಂಚುಳ್ಳಿಗಳ ಅರಸಾಟಕ್ಕಿದ್ದ ವಿಘ್ನ ದಾಟಿ ಭುವನೇಶ್ವರದತ್ತ ನನ್ನ ಪ್ರಯಾಣ ಹೊರಟಿತು, ನಿಗದಿತ ಸಮಯಕ್ಕಿಂತ ಕಾಲು ತಾಸು ಮೊದಲೇ ಭುವನೇಶ್ವರದಲ್ಲಿಳಿದೆ. ಅನುಪಮ್ ‘ಇಲ್ಲೇ ಕಾಯುತ್ತಿದ್ದೇನೆ’ ಎಂದು ಸಂದೇಶ ನೀಡಿ ಸಂದೇಹ ನಿವಾರಿಸಿದ್ದರು.
ಸಫಾರಿ ಗಾಡಿಯನ್ನು ಸ್ವತಃ ಡ್ರೈವ್ ಮಾಡುತ್ತಿದ ಅನುಪಮ್ ನಾಲ್ಕೂವರೆ ತಾಸಿನ ಪ್ರಯಾಣದ ಬಳಿಕ 180 ಕಿ.ಮೀ ದೂರದ ಕೇಂದ್ರಪಾರ ಜಿಲ್ಲೆಯ ಬಿತರ್‌ಕನ್ನಿಕಾ ನ್ಯಾಷನಲ್ ಪಾರ್ಕಿಗೆ ತಲುಪಿಸಿದರು. ರೆಸ್ಟ್ ಹೌಸಿನಲ್ಲಿ ಲಗೇಜ್ ಇರಿಸಿ ದೋಣಿ ಸವಾರಿ ಸ್ಥಳಕ್ಕೆ ತಲುಪುವ ಸಂಧಿಯಲ್ಲಿ ಮರದ ಕೊಂಬೆಗಳಲ್ಲಿ ಮುದುಡಿ ಕೂತಿದ್ದ ಮೂರು ಹಾಲಕ್ಕಿಗಳನ್ನು ಕಂಡೆ. ಓಹ್ ಹಾಲಕ್ಕಿ ಕಂಡರೆ ಶುಭ ತಾನೆ. ಶುಭ ನುಡಿಯೆ ಶಕುನದ ಹಕ್ಕಿ’ ಎಂದು ಬದುಕಿನಲ್ಲಿ ಕವಿದ ಕಾವಳದಲ್ಲಿ ಶುಭದ ನಿರೀಕ್ಷೆಯನ್ನು ಬೇಂದ್ರೆ ಮಾಡಿದ್ದಾರೆ. ನನಗೂ ಶುಭವಾಗುತ್ತದೆ ಎಂದು ಹೋದರೆ ಅಂದು ರಿಪಬ್ಲಿಕ್ ಡೇ ಎಂದು ಪಬ್ಲಿಕ್ಕಿಗೆ ರಜೆ ಇತ್ತು. ದೋಣಿಯಾನಕ್ಕೆ ರಸೀತಿ ಮಾಡಿಸುವವನ ಬಳಿಗೆ ಹೋದಾಗ ಆತನ ಉಡಾಫೆ ಮಾತಿಗೆ ದಾಸ್ ನನಗರ್ಥವಾಗದ ಭಾಷೆಯಲ್ಲಿ ಬೈಯ್ದರು. ಬೈಯ್ಗುಳದ ಬಿಸಿ ತಾಗಿದ ಮೇಲೆ ದೋಣಿ ವ್ಯವಸ್ಥೆ ಮಾಡಲು ಒಪ್ಪಿದ.
ಬಿತರ್‌ಕನಿಕಾದ ದೋಣಿಯೇರುವ ಯಾನೆ ಲೀಲಾಳನ್ನು ದೋಣಿ ಏರಿಸುವ ಕಾರ್ಯ ಒಂದು ಹಂತದ ಗೆಲುವೇ ಸರಿ. ಅರ್ಧ ಅಡಿ ಮೆಟ್ಟಲಿಗೆ ಯೋಚಿಸಿ ಕಾಲಿಡುವವಳು ನಾನು. ಎರಡೆರಡು ಮೆಟ್ಟಲು ಹಾರಿ ಹತ್ತಿ-ಇಳಿಯುತ್ತಿದ್ದ (ಧುಮುಕುತ್ತಿದ್ದ ಯಾನೆ ನೆಗೆಯುತ್ತಿದ್ದ) ಕಾಲವಿತ್ತೆಂದು ನೆನೆನೆನೆದು ಅಳುವ ಕಾಲುಗಳು ನನ್ನವು. ನದಿಯಲ್ಲಿನ ನೀರಿನ ಲೆವಲ್‌ಗೆ ತಕ್ಕಂತೆ ದೋಣಿ ಹತ್ತುವ ಇಳಿಯುವ ಕೆಲಸವೂ ವ್ಯತ್ಯಾಸವಾಗುತ್ತಿತ್ತು. ದೋಣಿಯೊಳಗಿಳಿದು ಮತ್ತೆ ಐದು ಮೆಟ್ಟಿಲು ಹತ್ತಿ ದೋಣಿಯ ಟಾಪ್ ಏರಿದೆ. ಕ್ಯಾಮೆರಾ, ಟ್ರೈಪಾಡ್ ಕ್ಯಾಮೆರಾ ಬಿಗಿಯಾಗಿ ಹಿಡಿದು ಕುಳಿತು ಸವಾರಿ ಸಾಗಬೇಕಿತ್ತು. ಕಸರತ್ತು ಮಾಡಿ ಹತ್ತಿ ಪೀಠಸ್ಥಳಾಗಿ ರೆಡಿ 1, 2, 3… ಅಪರೇಷನ್ ಕಿಂಗ್ ಫಿಶರ್ ಶುರು.

ಬಯಸಿದಂತೆ ಹಕ್ಕಿ ಸಿಗುವುದು ಒಂದ್ ತರಹದ ಲಕ್. ಎಷ್ಟೋ ದೂರ ಹೋಗಿಯೂ ಬರಿಗೈಯಲ್ಲಿ ಬರೋದೂ ಒಂದು ರೀತಿಯ ಅನುಭವ. ಕಾಯ್ದು ಪಡೆದ ಫಲ ಮಧುರ ತಾನೆ. ಬಿತರಕನ್ನಿಕಾದಲ್ಲಿ ದೋಣಿ ಏರಿದ ಕೂಡಲೆ ಕಂಡ ಬಿಳಿಯೆದೆಯ ಮಿಂಚುಳ್ಳಿ ಇಲ್ಲಿ ಮಿಂಚುಳ್ಳಿ ಸಿಕ್ಕೇ ಸಿಗುತ್ತವೆಂಬ ಆಸೆಯ ಹಾಯಿಪಟವನ್ನು ಹಾರಿಸಿತು. ಮೊದಲ ದಿನದ ಸ್ಟೀಂಬೋಟ್ ಸವಾರಿ ಮುಗಿಯಿತು. ಹತ್ತಿದ್ದು ಒಂದೆಡೆಯಾದರೆ ಇಳಿದದ್ದು ಇನ್ನೊಂದೆಡೆ. ಇಳಿದು ಬಿತರಕನ್ನಿಕಾದ ಪಾರ್ಕ್ ಆವರಣದ ಫಾರೆಸ್ಟ್ ರೆಸ್ಟ್ ಹೌಸಿನ ಸುಂದರಿ ಭವನದಲ್ಲಿ ಬೀಡು ಬಿಟ್ಟೆ. ಒಂದು ದಿನಕ್ಕೆ ಮಾತ್ರ ಅಲ್ಲಿರಲು ಅವಕಾಶ ಸಿಕ್ಕಿದ್ದರಿಂದ ಮರುದಿನ ನ್ಯಾಷನಲ್ ಪಾರ್ಕ್ ಹತ್ತಿರದ ರಿಸಾರ್ಟಿನಲ್ಲಿ ಉಳಿಯುವ ವ್ಯವಸ್ಥೆ ಆಗಿತ್ತು.
ಮರುದಿನ ಮುಂಜಾನೆಯ ದೋಣಿ ಸವಾರಿಗೆ ಅಣಿಯಾದೆ. ಚಳಿಯಿನ್ನೂ ಜಾಗ ಖಾಲಿ ಮಾಡಿರಲಿಲ್ಲ. ದೋಣಿಯ ಮರದ ಮೇಲಿದ್ದ ಇಬ್ಬನಿ ಹನಿಗಳು ಕಾಲಿಟ್ಟ ಕೂಡಲೇ ಜಾರಿಸುತಿತ್ತು. ಎಷ್ಟೇ ಎಚ್ಚರಿಕೆ ವಹಿಸಿ ಏರಹೋದರೂ ಕಾಲು, ಕಾಲಿನ ಎಕ್ಕಡ ಕೈಕೊಟ್ಟು ಡೈವ್ ಹೊಡೆದು ದೋಣಿಗೊಂದು ನಮಸ್ಕಾರ ಸಲ್ಲಿಸಿದೆ. ಡೈವ್ ಹೊಡೆದ ಸ್ಪೀಡಲ್ಲೇ ಸಾವರಿಸಿ ಮೇಲೆದ್ದು ಹ್ಹಿ….ಹ್ಹಿ… ಎನ್ನುತ್ತಾ ದೋಣಿಯೇರಿದೆ. ಬೀಳುವುದು ಏಳುವುದು ಸಹಜ. ಮಗು ಬಿದ್ದೆದ್ದೆ ನಡಿಗೆ ಕಲಿತದ್ದು. ಅರವತ್ತು ದಾಟಿದ ನನಗೆ, ಅಲ್ಲಿಯವರೆಗೂ ಆರೋಗ್ಯದ ಕಡೆಗೆಂದೂ ಗಮನವೇ ಕೊಡದಿದ್ದ ನಾನು ಪ್ಲಸ್ ಅರವತ್ತನ್ನು ಮತ್ತೊಬ್ಬರಿಗೆ ತೊಂದರೆ ಕೊಡದಂತೆ ಕಾಳಜಿಯಿಂದ ಚಟುವಟಿಕೆಯಿಂದ ಇರಿಸಿಕೊಳ್ಳಲು ಕೈಜೋಡಿಸಿದ್ದೇ ಹಕ್ಕಿಪಯಣ. ಅಂತಹುದರಲ್ಲಿ ಒಂದು ಡೈವ್ ಗೆ ಹೆದರುವುದು ಉಂಟೆ? ಎಲ್ಲಿಯಾದರೂ ಉಂಟೆ?
ಎರಡು ರಾತ್ರಿ ಮೂರು ಹಗಲು ಉಳಿದಿದ್ದ ಭಾರತದ ಎರಡನೇ ದೊಡ್ಡ mangrove forest ಇದ್ದ ಬಿತರಕನ್ನಿಕಾದ ಬ್ರಾಹ್ಮಣಿ ನದಿಯಲ್ಲಿ ನಾಲ್ಕು ಸಲ ದೋಣಿ ಸಫಾರಿ ಮಾಡಿದೆ. ನಾನೇರಿದ್ದ ನಾವೆ ನಮಗೆ ಮೀಸಲಿತ್ತು. ಬೇಕೆಂದ ಕಡೆಗೆ ಹೋಗಿ ಬೇಕಾದಾಗ ನಿಲ್ಲಿಸಬಹುದಿತ್ತು. ಅನುಪಮ್ ಬಿತರ್ಕನ್ನಿಕಾ, ಮಂಗಲಜೋಡಿಯ ಹಕ್ಕಿ ಎಕ್ಸ್ಪರ್ಟ್ ಆಗಿದ್ದರಿಂದ ಸನ್ನಿವೇಶದ ಅವಶ್ಯಕತೆಗೆ ತಕ್ಕಂತೆ ದೋಣಿ ನಿಲ್ಲಿಸುವ, ತಿರುಗಿಸಿಸುವ ಕೆಲಸ ಮಾಡಿಸುತ್ತಿದ್ದರು. ದೋಣಿಯ ಅಲುಗಾಟ-ಕುಲುಕಾಟದ ನಡುವೆ ನಾವು ಫೋಕಸ್ ಮಾಡಿದ್ದು ಕ್ಲಿಕ್ಕಿಸಿದಾಗ ಮತ್ತೇನೋ ಚಿತ್ರ ಇರುತ್ತಿತ್ತು. ನಾನಾದರೋ ಮಿಂಚುಳ್ಳಿಗಳ ಹಿಂದೆ ಬಿದ್ದಿದ್ದವಳು. ಮಿಂಚುಳ್ಳಿಯದು ಮಿಂಚಿನ ವೇಗ. ಅದು ಕುಳಿತಿರುವ ಕಡೆಗೆ ದೋಣಿ ತಿರುಗಿಸಿದರೆ ಆ ಮಿಂಚುಳ್ಳಿ ಹಾರಿ `ಓಡಿ ಬಾ, ಓಡೋಡಿ ಬಾ, ಲೀಲಾ ನೀ ಓಡಿ ಬಾ ಜೂಟ್’ ಎನ್ನುತ್ತಿತ್ತು. ಸುಲಭವಾಗಿ ಸಿಗದೇ ಇರುವುದನ್ನೇ ಹಿಡಿಯುವುದು ಪಂಥಾಹ್ವಾನವೇ ಸರಿ. ಪ್ರಯತ್ನ ಮಾಡದೆ ಸೋಲುವುದುಂಟೆ ಸುಲಭದಲ್ಲಿ.
ದೋಣಿ ಮುಂದೆ ಮುಂದೆ ಸಾಗಿದಂತೆ ಇಕ್ಕೆಲಗಳ ಹಸಿರ ನಡುವೆ ಕಣ್ಣಾಡಿಸುತ್ತಾ ಮಿಂಚುಳ್ಳಿ ಚಿತ್ರವಾಗುವ ಹಿನ್ನೆಲೆ ಸನ್ನಿವೇಶಕ್ಕೆ ಕಾಯುತ್ತಿದ್ದೆ. ಆಗಾಗ ಕಣ್ಣಿಗೆ ಬಿದ್ದ ಮಿಂಚುಳ್ಳಿ ನೀಲ ಬಣ್ಣದ ಬಿಳಿಯ ಕೊರಳಪಟ್ಟಿಯ collared kingfisher. ಬೆಳಗಿನ ಬಿಸಿಲಲ್ಲಿ ಮೂತಿಗೆ ಮಣ್ಣು ಮೆತ್ತಿಕೊಂಡ ಈ ಮುದ್ಮುದ್ದು ಮಿಂಚುಳ್ಳಿ ಬಿಳಿಗಿರಿರಂಗನಬೆಟ್ಟದ ಸೋಲಿಗರ ಹಾಡೊಂದನ್ನು ನೆನಪಿಸಿತು. ಮಣ್ಣಾ ತೆಗೆತೆಗೆ ಮಣ್ಣಕ್ಕಿ ಮಾವ ಮಣ್ಣುಮಣ್ಣೆಲ್ಲಾ ಮಣ್ಣಕ್ಕಿ ಗೂಡು ಎನ್ನುತ್ತಾ ಮಣ್ಣಲ್ಲಿ ಹಕ್ಕಿ ಗೂಡು ಕಟ್ಟುವ ವಿವರಣೆಯ ಹಾಡದು. ಎಲ್ಲಿಯ ಬಿತರ್‌ಕನ್ನಿಕಾ, ಎಲ್ಲಿಯ ಬಿಳಿಗಿರಿರಂಗನ ಬೆಟ್ಟ. ಮುದ್ದುರಂಗಾ… ಮುದ್ದು ಮಿಂಚುಳ್ಳಿ… ಅಮ್ಮಾ ಕೂರಿಸಿಹೋದ ಕಂದುರೆಕ್ಕೆಯ ಮಿಂಚುಳ್ಳಿ ಮರಿ ಮುದ್ದು ನೋಟ ಬೀರುತ್ತಾ ನಾವು ಸನಿಹಕ್ಕೆ ಹೋದರೂ ಸದ್ದಿಲ್ಲದೆ ಕುಳಿತು ಕ್ಲಿಕ್ಕಿಸಲು ಅನುವು ಮಾಡಿಕೊಟ್ಟಿತು. ಕಂದು ರೆಕ್ಕೆಯ ಅಡಿಯಲ್ಲಿದ್ದ ಆಕಾಶನೀಲಿ ಬಣ್ಣ ವಿಶಿಷ್ಟ ಚೆಲುವನ್ನಿತ್ತಿತ್ತು. ಮುಂದೆ ಕಂಡದ್ದು ಕಪ್ಪು ಟೋಪಿಯ ಮಿಂಚುಳ್ಳಿ. ಟೋಪಿ ಕಪ್ಪಗಿದ್ದರೂ ಕಡುನೇರಿಳೆ ಮೈಬಣ್ಣ ಹೊಟ್ಟೆಯ ತೆಳುಕಿತ್ತಳೆ ರಂಗು ಅದರಂದಕ್ಕೆ ವಿಶಿಷ್ಟ ಸ್ಪರ್ಶವಿತ್ತಿತ್ತು. ಮಿಂಚುಳ್ಳಿಗಳತ್ತಲೇ ನನ್ನ ಗಮನ ಕೇಂದ್ರೀಕರಿಸಿತ್ತು ನಿಜ.

ಬಿತರ್‌ಕನ್ನಿಕಾಕ್ಕೆ ಬಂದಿರೋದೆ ಅದಕ್ಕೆ ಎಂದುಕೊಂಡಿದ್ದರೂ ಬೇರೆಯದು ಕಂಡಾಗ ಕೈ, ಕ್ಯಾಮೆರಾ ಸುಮ್ಮನಿರಬಹುದೆ? ಹಸಿರು ಕಾನನ, ಆ ಹಸಿರನ್ನೇ ಬಿಂಬಿಸಿದ್ದ ನೀರು, ಈ ನಡುವೆ ಹಸಿರೂ ಬೇರೆ ರೂಪಗಳಲ್ಲಿ ಇಣುಕಿತು. ಹಸಿರ ನಡುವೆ ಹಸಿರು ಕೊಕ್ಕಿನ ಮಲ್ಕೋಹಾ ಇಣುಕಿದಾಗ ಸೆರೆಯಿಡಿದೆ. ನೀರ ನಡುವಣ ಒಣಮರದಲ್ಲಿ ಹಸಿರು ಗಿಣಿಗಳೆರಡೂ ಜೂಟಾಟ ಆಡ್ತಾ ಇದ್ದವು. ಬಾ ಏನೋ ತೋರಿಸ್ತೀನಿ ಎಂದು ಗೂಡಿನಿಂದ ಮೈಚಾಚಿ ಕರೆದಾಗ ಹಿಂದಿದ್ದ ಗಿಣಿ ಮುಂದಿನ ಗೆಲ್ಲಿಗೆ ಹಾರಿಬಂದು ಕುಳಿತು ನೋಡಿತು. ಇತ್ತ ಕಂಡದ್ದು ನಾಲಗೆ ಚಾಚಿದ ಹಸಿರು ಹಾವು. ಹಸಿರಿತ್ತಲ್… ಹಸಿರತ್ತಲ್… ಹಸಿರೆತ್ತತ್ತಲ್… ಹಸಿರಾದುದು ಮೈ… ಹಸಿರಾದುದು ಆತ್ಮ… ಬಿತರ್‌ಕನ್ನಿಕಾ ಕೈಕೊಡವದೆ ದೂರದಿಂದ ಬಂದವಳ ಕೈಹಿಡಿಯಿತು. ಇನ್ನೂ ಚೆನ್ನಾಗಿ ಸಿಗಬಹುದಿತ್ತೋ ಏನೋ. ನಿರೀಕ್ಷೆಗಳಿದ್ದೇ ಇರುತ್ತವೆ. ಇಷ್ಟಿದ್ದರೆ ಅಷ್ಟರ ಆಸೆ. ಆದರೆ ಲೀಲಾ ಆಕಾಶಕ್ಕೆ ಕೈ ಚಾಚದಿದ್ದರೂ ಸಿಕ್ಕ ಅವಕಾಶವನ್ನು ಕೈ ಬಿಡುವವಳಲ್ಲ. ಒಂದೇ ದಿನದಲ್ಲಿ ಏಳೂ ಮಿಂಚುಳ್ಳಿಗಳು ಸಿಕ್ಕಿ ಸ್ವರ್ಗ ಕೈಗೆ ಸಿಕ್ಕಿದಂತಾಗಿತ್ತು.
ಬಿಳಿಪಟ್ಟಿಯ ಮಿಂಚುಳ್ಳಿಯಿಂದ ಆರಂಭವಾದ ಮಿಂಚುಳ್ಳಿ ಪಯಣ ಬ್ರೌನ್‌ವಿಂಗ್ಡ್ ಮಿಂಚುಳ್ಳಿ, ಕಪ್ಪು ಟೋಪಿಯ ಮಿಂಚುಳ್ಳಿ, ಪೈಡ್ ಮಿಂಚುಳ್ಳಿ, ಸ್ಟಾರ್ಕ್ಬಿಲ್ಲಿನ ಮಿಂಚುಳ್ಳಿ, ಕಿರುಮಿಂಚುಳ್ಳಿ ಕೊನೆಗೆ ಬಿಳಿಯೆದೆಯ ಮಿಂಚುಳ್ಳಿ… ಹೀಗೆ ಏಳು ಮಿಂಚುಳ್ಳಿಗಳು ಸಿಕ್ಕಿದಾಗ ಭಲೆ ಲೀಲಾ ನೀನು ಲಕ್ಕಿ ಎಂದುಕೊಂಡೆ. ಬೇರೆ ಇನ್ನೂ ಹಕ್ಕಿಗಳೂ ಸಿಕ್ಕವು. ಆದರೆ ಮಿಂಚುಳ್ಳಿಗಳ ಸಿಕ್ಕಿನಲ್ಲಿ ಸಿಕ್ಕಿಕೊಂಡ ನನಗೆ ಆ ಹಕ್ಕಿಗಳು ಅಷ್ಟು ಆಕರ್ಷಣೆ ಹುಟ್ಟಿಸಲಿಲ್ಲ. ಬೆಳಿಗ್ಗೆ ಸಂಜೆ ಸೂರ್ಯ ಹಸಿರಿನ ನಡುವೆ ತೂರಿಕೊಂಡು ನೀರಿಗೂ ರಂಗು ತಂದು ಹೊಂಬಣ್ಣ-ಕೆಂಬಣ್ಣದಿಂದ ಮಿರುಗುತ್ತಿದ್ದ ನೋಟವೂ ಮೋಹಕವಾದ್ದರಿಂದ ಅದನ್ನೂ ಕ್ಲಿಕ್ಕಿಸುತ್ತಿದ್ದೆ.
ಬಿತರ್‌ಕನ್ನಿಕಾಕ್ಕೆ ಕೆಲವರು ಮಿಂಚುಳ್ಳಿಗಳಿಗಾಗಿ, ಹಕ್ಕಿಗಳಿಗಾಗಿ ಬಂದರೆ, ಇನ್ನು ಕೆಲವರು ಎರಡೂ ದಡಗಳಲ್ಲಿ ವಿರಮಿಸುವ ಉಪ್ಪು ನೀರಿನ ಮೊಸಳೆ ಕಾಣಲೆಂದು ಬರುವರು. ಅಲ್ಲಿ ಮೊಸಳೆ, ಇಲ್ಲಿ ಮೊಸಳೆ ಎಂದು ಕೂಗಿ ಕಣ್ತುಂಬಿಕೊಳ್ಳುತ್ತಿದ್ದರು. ಮೊಸಳೆಗಳನ್ನು ರಂಗನತಿಟ್ಟಿನಲ್ಲಿ ತೀರಾ ಸನಿಹದಿಂದ ಕಂಡಿದ್ದೆ. ಅವುಗಳ ಬ್ರಹ್ಮಾಂಡ ಬಾಯಿಯ ದರ್ಶನವೂ ಸಿಗುತ್ತಿತ್ತು. ತಮಿಳುನಾಡಿನ ಪ್ರವಾಸದಲ್ಲಿ crocodile parkನಲ್ಲಿ ತರಹೇವಾರಿ ಮೊಸಳೆಗಳನ್ನು ಕಂಡು ಕಾಣುವ ಕುತೂಹಲ ಕಳೆದುಕೊಂಡವಳು. ಜೊತೆಗೆ ಭಯ… ಇನ್ನೇನೋ… ಇರಬೇಕು. ಆದರೂ ನೀರಿನ ಭರ ಕಡಿಮೆ ಆದಾಗ ದಡಗಳಲ್ಲಿ ಮರಿ, ಕಿರಿ, ಹಿರಿ ಮೊಸಳೆಗಳ ಸಮೂಹ ಕಣ್ಣಿಗೆ ಬೀಳುತ್ತವೆ. ಬಿತರ್‌ಕನ್ನಿಕಾದಲ್ಲಿ ಮೊಸಳೆಮರಿ ಪಾಲನೆ ಮಾಡಿ ಬೆಳೆಸುವ ಕೇಂದ್ರವೂ ಇದೆ. ಮೊಸಳೆ ನಮ್ಮ ದೋಣಿ ಮೇಲೇರುವ ಸಾಧ್ಯತೆ ಇಲ್ಲದಿದ್ದುರಿಂದ ಫೋಟೋ ತೆಗೆಯಲು ಯಾವುದೇ ಅಡ್ಡಿ ಆಗಲಿಲ್ಲ. ಈ ಮೊಸಳೆಗಳು ನಮ್ಮೂರ ಮೊಸಳೆಗಳಿಗಿಂತ ಬಣ್ಣದಲ್ಲಿ ಭಿನ್ನವಾಗಿದ್ದವು ಹಾಗೂ ಬಹು ದೊಡ್ಡವೂ ಆಗಿದ್ದವು.

ಬಿತರ್‌ಕನ್ನಿಕಾಕ್ಕೆ ಬಂದಿದ್ದ ಮುಖ್ಯ ಉದ್ದೇಶ ಕೈಗೂಡಿತ್ತು. ಮುಂದಿನ ಪಯಣಕ್ಕೆ ಅಣಿ ಆಗಬೇಕಿತ್ತು. ದೋಣಿಯವನು ನೀವು ಒಂದು ದಿನ ಹೋಗಿ, ಒಂದೇ ಸೆಷನ್ ಹೋಗಿ ಇಂತಿಷ್ಟೇ ದುಡ್ಡು ಎಂದು ವಾದ ಮಾಡಿ ಒಂದಷ್ಟು ಸಮಯ ಕೊಂದ ಬಳಿಕ ಕೊನೆಯ ಸೆಷನ್ನಿನ ದೋಣಿ ಪಯಣಕ್ಕೆ ಕ್ಷಣಗಣನೆ ಆರಂಭ. ಯಥಾಪ್ರಕಾರ ಆಸೀನಳಾದೆ. ಸೆಲ್ಫಿ ಹೊಡೆದುಕೊಂಡೆ. (selfie expert ಅಲ್ಲ ನಾನು) ನೀನು ಇಲ್ಲಿಂದ ಹೋಗ್ತೀಯಾ’ ಎಂದು ಆಕಾಶಗಾಮಿ ಬಿಳಿಹೊಟ್ಟೆಯ ಮೀನುಗಿಡುಗ (white bellied seaeagle) ಮರದ ಮೇಲಿನಿಂದಲೇ ನನ್ನನ್ನು ಕೇಳಿದರೆ, ಚಿಂತೆಗೊಳಗಾದಂತೆ ನೋಡುತ್ತಿದ್ದ ಪಾರಿವಾಳ (collared dove) ಕೊರಳು ಚಾಚಿಹೌದಾ’ ಎಂದರೆ ನೀರಕಾಗೆ (cormorant) ಕೊರಳನ್ನು ಕೊಂಕಿಸುತ್ತಾ ನಿನಗೆ ಹೋಗುವ ಮನಸ್ಸು ಎಲ್ಲಿದೆ’ ಎಂದಿತು. ಒಣಮರದ ಬುಡವೇರಿದ ಇರುಳ ಬಕ (straited heron or mangrove heron) ನನ್ನನ್ನೇ ನೋಡುತ್ತಾ ಹೋಗುವ ಮನಸಿದೆಯೆ’ ಎಂದು ಕೆಣಕಿತು.
ನಾನು ಹೊರಟೇಬಿಡುತ್ತೇನೆಂದು ವ್ಯಥಿತವಾದ ದಡದ ಮಣ್ಣಿನ ಮೇಲೆ ಕುಳಿತಿದ್ದ ಕೋಗಿಲೆ ಚಾಣ (common hawk cuckoo) ಪ್ರಶ್ನಿಸಿತು. ಮಂಗನಿಗೆ ಮಂಡೆ ಬಿಸಿಯಾಗಿ ನೀನು ನಿಜವಾಗಿಯೂ ಹೋಗ್ತೀಯಾ ಹೇಳು’ ಎಂದು ಬಾಯ ಮೇಲೆ ಬೆರಳಿಟ್ಟು ಕೇಳುತ್ತಾ ಬೆರಗಿನಿಂದ ನೋಡುತ್ತಿತ್ತು. ಹೋಗುವ ಸಮಯ ಸನಿಹವಾಗಿತ್ತು. ಮಿಂಚುಳ್ಳಿಗಳ ಆಕರ್ಷಣೆ ತಗ್ಗಿರಲಿಲ್ಲ. ಮಿಂಚುಳ್ಳಿಯೊಂದು ಹಾರುತ್ತಾ ಬಂದು ಆಹಾ ನೀನು ಹೋದರೆ ಮತ್ತೆ ಬಾರದೆ ಇರ‍್ತೀಯಾ’ ಎಂದು ನನ್ನತ್ತ ಬಾಯಿಬಿಟ್ಟು ನೋಡಿತು ನನ್ನ ಹಾಗೆಯೇ. ಪಕ್ಕದ ದೋಣಿಯಲ್ಲಿ ಸಾಗುತ್ತಿದ್ದ ಮಕ್ಕಳು… ‘ಹೋಗುವುದೆಂದರೆ ಹೋಗುವುದಲ್ಲ…ಮತ್ತೆ ಮತ್ತೆ ಬರಲಿಕ್ಕೆ ಹೋಗಿಬರುವುದು’ ಎಂದು ಕೈಬೀಸಿ ಬೀಳ್ಕೊಟ್ಟರು. ನೀವು ಮತ್ತೊಮ್ಮೆ ಬಂದೇ ಬರ್ತೀರಿ ಅಂತಾ ನಮಗೆ ಗೊತ್ತು ಲೀಲಾ ಮೇಡಂ… ನಿಮಗಿನ್ನೂ ನೀವು ಆಸೆಪಟ್ಟ ಪಿಟ್ಟ (mangrove pitta) ಇಷ್ಟಪಟ್ಟಂತೆ ಸರಿಯಾಗಿ ಸಿಕ್ಕಿಲ್ಲ, ಅದಕ್ಕಾಗಿ ಬಂದೇ ಬರುತ್ತೀರಿ’ ಎಂದು ಸಾಂತ್ವನಿಸಿದರು ಅನುಪಮ್. ಬೈಬೈ ಬಿತರ್‌ಕನ್ನಿಕಾ ಎಂದೆ ಒಲ್ಲದ ಮನದಿಂದ. ಪ್ರತಿ ಹಕ್ಕಿ ಪ್ರವಾಸದ ಅಂತ್ಯದಲ್ಲಿ ತಳಮಳ ಕಾಡುತ್ತಲೇ ಇರುತ್ತದೆ. ಕಾಡದಿದ್ದರೆ ಅದೂ ಒಂದು ನೋಟವೆ!? ಎಷ್ಟು ಮಾತ್ರಕ್ಕೂ ಸಾಕೆನಿಸದೆ ಮತ್ತೆ ಮತ್ತೆ ಬೇಕೆನ್ನಿಸುವಷ್ಟು ವಿಸ್ಮಯಕಾರಿ ಹಕ್ಕಿ ಜಗತ್ತು.
। ಇನ್ನು ಮುಂದಿನ ವಾರಕ್ಕೆ ।






0 ಪ್ರತಿಕ್ರಿಯೆಗಳು