ಲೀಲಾ ಅಪ್ಪಾಜಿ ‘ಹಕ್ಕಿಯಾನ’ ಅಂಕಣ – ಆಸೆಗಳ ಆಕಾಶ…

ಲೀಲಾ ಅಪ್ಪಾಜಿ ಎಂದಾಕ್ಷಣ ಹಕ್ಕಿ ಫೋಟೋ ಪ್ರಿಯರ ಕಣ್ಮುಂದೆ ಹಕ್ಕಿಗಳ ಸಾಲುಮೆರವಣಿಗೆ. ಪ್ರಾಧ್ಯಾಪಕಿಯಾಗಿ ವೃತ್ತಿ ಜೀವನದಲ್ಲಿ ಸಾಗಿ ಪ್ರಾಂಶುಪಾಲೆಯಾಗಿ ನಿವೃತ್ತಿ ಹೊಂದಿದ ಲೀಲಾ ಅಪ್ಪಾಜಿಯವರ ಬದುಕಿನ ಬಗೆಯೇ ಒಂದು ಸ್ಪೂರ್ತಿಗಾಥೆ. ಅವರು ಕನ್ನಡ ಎಂಎ ಮಾಡಿದ್ದಿರಬಹುದು, ನಂತರ ಹಂತಹಂತವಾಗಿ ವೃತ್ತಿ ಜೀವನ ರೂಪಿಸಿಕೊಂಡಿದ್ದಿರಬಹುದು, ನಿವೃತ್ತಿಯ ನಂತರ ಪ್ರವೃತ್ತಿಯ ಬೆನ್ನುಹತ್ತಿ ಮನಸಿನ ನಂದನವನ್ನು ಹಕ್ಕಿಗಳ ತಾಣ ಮಾಡಿಕೊಂಡಿದ್ದಿರಬಹುದು ಇಡೀ ಪಯಣವೇ ಅಚ್ಚರಿಯೊಂದಿಗೆ ಅಬ್ಬಾ ಎನ್ನಿಸುವಂತಿದೆ.

ಏನಿರಲಿ, ಇಲ್ಲದಿರಲಿ ಮನದ ನಿಶ್ಚಯವೊಂದು ಅಚಲವಿರಲಿ ಎಂದು ಅಂದುಕೊಂಡ ಹಾದಿಯಲಿ ಛಲಬಿಡದೆ ನಡೆದವರು.

ನಿವೃತ್ತಿಯ ನಂತರ ಏನು ಮಾಡಬೇಕೆಂದು ಹುಡುಕಾಡುತ್ತಿದ್ದ ಮನಸ್ಸು ಒಂದು ದಿನ ಫೋಟೋಗ್ರಫಿ ಎಂದು ನಿರ್ಧರಿಸಿದ್ದೇ ಕ್ಷಣವೂ ತಡಮಾಡದೆ ಆ ಫೀಲ್ಡಿಗೆ ಇಳಿದು ಟ್ರಯಲ್‌ ಅಂಡ್‌ ಎರರ್‌ ಮಾಡುತ್ತಲೇ ಕಲಿತೇಬಿಟ್ಟರು. ಗಾಂಧಿ ಮತ್ತು ಕುವೆಂಪುವನ್ನು ತಮ್ಮ ಆದರ್ಶವೆಂದು ಹೇಳುವ ಲೀಲಾ ಮೇಡಂ ಬರವಣಿಗೆಯೂ ಅವರ ಮಾತಿನಷ್ಟೇ ಮುದನೀಡುವಂತಹದ್ದು.

ತಮ್ಮ ಹಕ್ಕಿಗಳೊಡನಾಟದ ನೆನಪುಗಳನ್ನು ಈ ಅಂಕಣದ ಮೂಲಕ ‘ಅವಧಿ’ಯ ಓದುಗರೊಂದಿಗೆ ಹಂಚಿಕೊಳ್ಳಲಿದ್ದಾರೆ.

13.2

ಹೊರಳಿ ಮರಳಿ ಚೋಪ್ತಾ – ಮಂಡಲಕ್ಕೆ ಭಾಗ -2

ತುಂಗಾನಾಥಕ್ಕೆ ಇಷ್ಟು ಕಟ್ಟಪಟ್ಟು ಹತ್ತಿದ ಮೇಲೆ ಹಕ್ಕಿ ಸಿಕ್ಕರೆ ಚಿತ್ರ ತೆಗೆಯುತ್ತಿದ್ದೆ. ಅವೂ ಸಿಗದಿದ್ದಾಗ ಮತ್ತೇನು ಮಾಡೋದು? ಕಂಡದ್ದನ್ನೆಲ್ಲ ಫೋಟೋಗ್ರಫಿಸಿದೆ. ನಮಗಿನ್ನ ಮೊದಲೇ ಏರಿದ್ದ ಮನುಕುಲದ ಮೂಲಪುರುಷರು ಅಲ್ಲಲ್ಲಿ ಕುಳಿತು, ಅಡ್ಡಾಡುತ್ತಾ ಬಂದವರು ನನಗೇನು ತಂದಿದ್ದಾರೆಂದು ಪರಿಪರಿಯಲ್ಲಿ ಪರಿಶೀಲಿಸುತ್ತಿದ್ದರು. ಕಂಭವನ್ನೇರಿ ಮುದ್ದು ಮಾಡಿಕೊಳ್ಳುತ್ತಿದ್ದ ಇಬ್ಬರು ಅಪ್ಯಾಯ ನೋಟವಿತ್ತರು. ರಾಹುಲ್–ಖುಷ್ಬೂ ತುಂಗಾನಾಥದಿಂದ ಚಂದ್ರಶಿಲೆಗೂ ಹೋಗುವುದಿತ್ತು, ನಾನಂತೂ ಇಲ್ಲಿಯೇ ಕುಳಿತಿರುತ್ತೇನೆ ಮೇಲೆ ಬರುವುದಿಲ್ಲ ಎಂದು ಬಿಲ್ಕುಲ್ ನಿರಾಕರಿಸಿದ್ದೆ. ಬನ್ನಿ ಸ್ನೋ ಪಾಟ್ರಿಡ್ಜ್ ಸಿಗುತ್ತದೆ’ ಎಂದೊಡ್ಡಿದ ಬಲೆಗೆ ಬಲಿಯಾಗಲಿಲ್ಲ. ಅವರೂ ಚಂದ್ರಶಿಲೆಗೆ ಹೋಗಲಿಲ್ಲ. ಬ್ಯಾಕ್ ಟು ಪೆವಿಲಿಯನ್. ಮತ್ತೆ ಅಶ್ವಾರೋಹಿಸಿದೆ. ಬೆಟ್ಟದಿಂದ ಇಳಿಯುವಾಗ ಕುದುರೆ ಮೇಲೆ ಕುಳಿತು ಬ್ಯಾಲೆನ್ಸ್ ಮಾಡೋದು ತುಂಬಾ ದುಸ್ತರ. ಕುದುರೆಗೆ ಮುಂಭಾರ ಆಗಬಾರದೆಂದು ಇಳಿಯುವಾಗ ಜೀವ ಬಿಗಿ ಹಿಡಿದೇ ಕೂತಿದ್ದೆ.ಇನ್ನೆಂದೂ ಕುದುರೆ ಏರುವುದಿಲ್ಲ ತುಂಗಾನಾಥನನ್ನು ಕಾಣಲು ಬರುವುದಿಲ್ಲ, ಸಾರಿ ಕಣೊ ತುಂಗಾನಾಥ’ ಎಂದು ಕೂಗಿದೆ. ನಂತರದ ಚೋಪ್ತಾದ ಎರಡೂ ಪ್ರವಾಸಗಳಲ್ಲಿ ಉಳಿದವರು ಹತ್ತಿಹೋದರೂ ನಾನು ಕೆಳಗೆ ಕಾಲಯಾಪನೆ ಮಾಡಿದ್ದೆನೆ ವಿನಾ ತುಂಗನಾಥನಿಗೆ ನನ್ನ ದರ್ಶನ ಭಾಗ್ಯ ಕರುಣಿಸಲಿಲ್ಲ. ಅವನೂ ಅಟೆಂಡೆನ್ಸ್ ಕೂಗಲೂ ಇಲ್ಲ.

ಆಲಯಬಂಧಿ ತುಂಗಾನಾಥನಿಗೆ ಕೊನೆಯ ಸೆಲ್ಯೂಟ್ ಹೊಡೆದೆ. ಕುದುರೆಯ ಏರಿವ್ನಿ ಜೀನಾವ ಹಿಡಿದಿವ್ನಿ’ ಎನ್ನುತ್ತಾ ಜೀನನ್ನು ಬಿಗಿಯಾಗಿ ಹಿಡಿದು ಕುಳಿತು ಜೀಕು ಜೀಕುತ್ತಾ ತುಂಗದ ಉತ್ತುಂಗದಿಂದ ನೆಲಕ್ಕೆ ಬಂದೆ. ನೆಲಕ್ಕಿಳಿದ ಬಳಿಕ ಕುದುರೆಗೂ ಮಾರ್ಗದರ್ಶಿಗೂ ಗುಡ್ ಬೈ ಹೇಳಿ ಶಿಶುಪಾಲನ ಗ್ರೀನ್ ವ್ಯೂ ರಿಸಾರ್ಟಿಗೆ ತಲುಪಿದೆವು. ಅವನಿತ್ತ ಬ್ರೇಕ್ಫಾಸ್ಟನ್ನು ಫಾಸ್ಟಾಗಿ ತಿಂದು ಬಿಸಿಲ ಧಗೆಗೆ ವಿಶ್ರಾಂತಿಸಿದೆವು. ಮಧ್ಯಾಹ್ನ ಚೋಪ್ತಾದ ರಸ್ತೆಯಲ್ಲಿ ಡ್ರೈವಿಸಿದೆವು. ಕತ್ತಲಿಳಿಯುವ ತನಕ ಹುಡುಕಿಯೂ ಕೋಕ್ಲಾಸ್ ಸಿಗಲೇ ಇಲ್ಲ. ಕೋಕ್ಲಾಸ್ ಎಂದು ಜಪ ಮಾಡುವ ನಮ್ಮ ಹೈಕಳಿಬ್ಬರು ಹ್ಯಾಪುಮೋರೆ ಹಾಕಿಕೊಂಡು ಬಿಡಾರಕ್ಕೆ ಬಂದರು. ಅಂದು ಕನಸಿನಲ್ಲಿ ಕೋಕ್ಲಾಸ್ ಅಲ್ಲಲ್ಲ ಟೋಟಲ್ ಲಾಸ್ ಎಂದು ಬಡಬಡಿಸಿರಬೇಕು. ಇನ್ನು ಉಳಿದದ್ದು ಒಂದೇ ದಿನ. ಮರುದಿನ ಬೆಳಿಗ್ಗೆಯೆ ಮಂಡಲಕ್ಕೆ ಹೊರಟೆವು. ಚೋಪ್ತಾದಿಂದ ಮಂಡಲಕ್ಕೆ ಇಪ್ಪತ್ತೇ ಕಿ.ಮೀಟರ್ ದೂರ ಇದ್ದರೂ ಸಂಚಾರದ ಅವಧಿ ಗಂಟೆಗೂ ಹೆಚ್ಚು. ಬಿಂಕದ ಸಿಂಗಾರಿಯಂತಿದ್ದ ಕಾರು ಬಹು ವೈಯಾರದಿಂದ ಬೆಟ್ಟದ ದಾರಿಯಲ್ಲಿ ಮಂದಗತಿಯಲ್ಲಿ ಜಂಬೂಸವಾರಿ ಮಾಡುತ್ತಿತ್ತು ಕೊನೆಗೂ ಮಂಡಲ ಮುಟ್ಟಿದೆವು.

ಆ ಬೆಟ್ಟದಲ್ಲಿ ಆ ಇಳಿಜಾರಿನಲ್ಲಿ ಅತ್ತಿತ್ತಣ ಹೊಲಗಳ ಬಳಿ ಸುಳಿದಾಡಿದೆವು. ಪುಟ್ಟಪುಟ್ಟ ಹಕ್ಕಿಗಳು ಅತ್ತಿತ್ತ ಸುಳಿದಾಡಿದವು. ಮುಂದಿನರೆ ತಾಸಿನಲ್ಲಿ ಬೆಟ್ಟಗುಡ್ಡ ದಾಟಿ ಇಣುಕಿದ ಸೂರಪ್ಪನಿತ್ತ ಬೆಳಕಿನ ಅತಿವೃಷ್ಟಿಯಿಂದ ಬಣ್ಣದ ಹಕ್ಕಿಗಳು ಅಂದ ಚಂದ ಕಳೆದುಕೊಂಡವು. ಇನ್ನೇನಿದ್ದರೂ ಬಿಸಿಲಿಳಿದ ಸಂಜೆಗೆ ಕಾಯಬೇಕು. ಹಕ್ಕಿಗಳ ಬಗ್ಗೆ ಆಸಕ್ತಿ ಇಲ್ಲದವರೂ ಮರುಳಾಗಬೇಕು ಅಂತಹ ಮೋಹ ಹುಟ್ಟಿಸುವ ಬಣ್ಣವಿದೆ scarlet finchಗೆ. ಆದರೆ ನನಗಲ್ಲಿ ಸಿಕ್ಕ ನಾಲ್ಕೈದು ಕ್ಲಿಕ್ harsh lightನಲ್ಲಿ ನಿರಾಶೆ ಹುಟ್ಟಿಸಿದ್ದವು. ಅವಾದರೂ ಹೆಚ್ಚು ಹೊತ್ತು ಇರದೆ ಹಾರಿ ದೂರಕೆ ಮರೆಯಾದವು. ಅಲ್ಲಿಂದ ಸಮೀಪದಲ್ಲಿದ್ದ ನದಿಯ ಬಳಿಗೆ ಹೋದೆವು. ನದಿಯಲ್ಲಿ dipper, little forktail ಮುಂತಾದ ಪುಟ್ಟ ಹಕ್ಕಿಗಳು ಮೇಲಿಂದ ಕಾಣುತ್ತಿದ್ದವು. ರಾಹುಲ್, ಆನಂದ್ ನದಿಗೇ ಇಳಿದು ಹೋದರು ನಮ್ಮಿಬ್ಬರನ್ನು ಮೇಲೆ ಬಿಟ್ಟು. ಇಳಿಯಲಾರದ ಬಡಪಾಯಿಯಾದ ನಾನು ಸೇತುವೆ ಮೇಲೆ ಸಂಧಿಯಲ್ಲಿ ಕ್ಯಾಮೆರಾ ಇರಿಸಿ ಎರಡು ಬಗೆಯ forktail, dipper, plumbous redstartಗಳನ್ನು ತೆಗೆದೆ. ಕೊನೆಗೆ ಹುಲ್ಲುಹೊರೆ ಹೊತ್ತು ತರುತ್ತಿದ್ದ ಮಹಿಳೆಯರನ್ನೂ ಕ್ಲಿಕ್ಕಿಸಿದೆ.

ಉತ್ತರಾಖಂಡ ಸೇರಿದಂತೆ ಹಲವು ಕಡೆ ಹೆಂಗಸರು ನಡು ಬಗ್ಗಿಸಿ ಬೆನ್ನಮೇಲೆ ಹೊಲ್ಲಿನ ಹೊರೆ ಹೊತ್ತು ತರುವುದು ಸಾಮಾನ್ಯ ನೋಟ. ಇನ್ನಿಲ್ಲದ ಕಸರತ್ತು ಮಾಡಿ ನದಿಗಿಳಿದ ಇಬ್ಬರೂ ಶೂರರಿಗೆ ಹಕ್ಕಿ ಸಿಗದೆ ಹತಾಶರಾಗಿ ಮೇಲೆ ಬಂದರು. ಮೂರ್ನಾಲ್ಕು ದಿನಗಳಿಂದ ಕಾಣಸಿಗುತ್ತಿದ್ದ ನೋಟ ಆನಂದರದ್ದು. ಸರ‍್ರೆಂದು ನೆಲದ ಮೇಲೆ ಜಾರಿ ಮೈಚಾಚಿ ground level ಷಾಟ್ ಬೇಕೆಂದು ಕ್ಲಿಕ್ ಮಾಡುತ್ತಿದ್ದರು. ಮೊನಾಲ್ ಕ್ಲಿಕ್ ಮಾಡುವಾಗಲೂ ಧರಾಶಾಯಿಯಾಗಿದ್ದರು. ನದಿಯ ಕಲ್ಲು ಬಂಡೆಗಳ ಸಂಧಿಯಲ್ಲಡಗಿ ಕಾಯುತ್ತಿದ್ದರು. ಆದರೆ ಹಕ್ಕಿ ದೇವರು ಒಲಿಯಲಿಲ್ಲ ಅಷ್ಟೆ. ಮಂಡಲದಲ್ಲಿ ಬೆಳಗಿನ ಸೆಷನ್ ಮುಗಿಸುವ ಹೊತ್ತಿಗೆ ರಾಹುಲನ ಹೊಟ್ಟೆಯಲ್ಲಿ ತೋಳ ಹೊಕ್ಕಿತ್ತು. ಚೋಪ್ತಾ ತಲುಪುವ ತನಕ ಈ ತೋಳ ಸುಮ್ಮನಿರುವಂತಿರಲಿಲ್ಲ. ಮಂಡಲ ಊರೊಳಗಿನ ಪುಟ್ಟ ಹೊಟೇಲಿನಲ್ಲಿ ತಿಂಡಿಗೆ ಆರ್ಡರಿಸಿ ಕಾಯ್ದು ತಿಂದ ನಂತರ ರಾಹುಲ್ ಚೋಪ್ತಾ ಕಡೆ ಕಾರು ಹೊರಳಿಸಿದರು. ನಾನು ಗೊಣಗುತ್ತಲೇ ಇದ್ದೆ. ಮಂಡಲದಲ್ಲಿ ಹಕ್ಕಿಗಳ ಚಿತ್ರ ತೆಗೆಯುವ ಹಸಿವೆಗೆ ತೃಪ್ತಿ ಸಿಕ್ಕಿರಲಿಲ್ಲ. ಕೇವಲ ಎರಡು ಗಂಟೆ ಸೆಷನ್ ಆಗಿತ್ತು. ಚೋಪ್ತಾಗೆ ಹೋದರೆ ಮತ್ತೆ ಅದೇ ಕೋಕ್ಲಾಸ್ ಬೆನ್ನು ಹತ್ತಿ ಬೋರ್ ಹೊಡೆಸುತ್ತಾರೆನ್ನುವ ಭಯಂಕರ ಸತ್ಯದ ಅರಿವಿನಿಂದ ಮುಖ ಧುಮ್ಮಿಸಿಕೊಂಡಿದ್ದೆ. ನನ್ನ ಖದರ್ ನೋಡಿ ಏನೆಂದ ಖುಷ್ಬೂಗೆ ನನಗಿನ್ನೂ ಮಂಡಲದಲ್ಲೆ ಫೋಟೋಗ್ರಫಿ ಮಾಡಬೇಕಿತ್ತೆಂದೆ.

ಮಣಿದ ರಾಹುಲ್ ಮಂಡಲದ ಕಡೆಗೆ ಗಾಡಿ ತಿರುಗಿಸಿದರೂ ಉರಿಬಿಸಿಲು ಇದ್ದುದರಿಂದ ಅದೇ ಹೋಟೆಲಿಗೆ ಹೋದೆವು ಊಟಕ್ಕೆ ಆರ್ಡರಿಸಲು. ಬಿಸಿಲಿಳಿದ ಬಳಿಕ ಸಿಕ್ಕಿದ ಹಕ್ಕಿಗಳನ್ನು ಕಂಡು ಹಲೋ ಹೇಳಿ ಇನ್ನೊಮ್ಮೆ ಬರ್ತೀವಿ, ಆಗ ಸರಿಯಾಗಿ ಸಿಗಬೇಕು ಎಂದು ವಿನಂತಿಸಿ ಚೋಪ್ತಾ ದಾರಿ ಹಿಡಿದೆವು. ಗೂಬೆಪ್ರೀತಿಯ ಖುಷ್ಬೂ ಗೂಬೆಗಳನ್ನು ಅರಸುತ್ತಾ ಇರುಳಿನ ಸಂಚಾರ ಮಾಡಿಸಿಸಿದರು. ಗೂಬೆ ಸಿಗದಿದ್ದರೂ ಮುದ್ದಾದ ಹಿಮಾಲಯದ ಕೆಂದಳಿಲು ಸಿಕ್ಕಿತು. ಸಿಗುವ ಹಕ್ಕಿಗಳು ಸಾಕಷ್ಟಿದ್ದರೂ ಮರುದಿನ ಮುಂಜಾನೆಯೆ ಹೊರಡುವುದು ಅನಿವಾರ್ಯವಾಗಿತ್ತು. ಮತ್ತೆ ಚೋಪ್ತಾಗೆ ಮಂಡಲಕ್ಕೆ ಬಂದೇ ಬರುತ್ತೇನೆಂದು ಮನಸ್ಸಿಗೆ ಸಾಂತ್ವನ ನೀಡಿಯೇ ಗಾಡಿಯೇರಿದೆ. ನಾಲ್ಕಾರು ಹಕ್ಕಿಗಳು ದಾರಿಯಲ್ಲಿ ಹೋಗಿ ಬಾ ಲೀಲಾ ಮತ್ತೊಮ್ಮೆ ಬಂದಾಗ ಸಿಕ್ಕಿಯೇ ಸಿಗುತ್ತೇವೆಂದು ಮಬ್ಬು ಬೆಳಕಿನಲ್ಲಿ ಹಾರೈಸಿ ಬೀಳ್ಕೊಟ್ಟವು.

ಒಂದೆಡೆ long tail minivetಗಳು ಕಂಡಾಗ ಹಿಡಿಯಲೇಬೇಕೆಂದೆ. ರಾಹುಲ್ ಗಾಡಿ ನಿಲ್ಲಿಸಿ ಲೇಲೋ ಮಾ’ ಎಂದ. ನಾನೂ ಹಕ್ಕಿ ಕ್ಲಿಕ್ಕಿಸುವ ಪ್ರಯತ್ನ ಮಾಡಿದೆ. ಮುಂದೆ ಒಂದೆಡೆ ವಿದ್ಯುತ್ ತಂತಿಯ ಮೇಲೆ asian barred owlet ಕುಳಿತಿತ್ತು. ಖುಷ್ಬೂ ಸುಮ್ಮನಿರಲು ಸಾಧ್ಯವೆ? ನನಗೂ ಲೈಫರ್ ಆಗಿದ್ದರಿಂದ ತಂತಿ ಮೇಲಾದರೇನು ಶಿವಾ, ಜಂತಿ ಮೇಲಾದರೇನು ಶಿವಾ ಗೂಬೆಯೇ ಬೇಕು ಶಿವಾ ಎಂದು ಕ್ಲಿಕ್ಕಿಸಲು ಸಿದ್ಧವಾದೆ.

ಟ್ರೈಪಾಡ್ ಹಾಕುವಷ್ಟು ಸಮಯವಿರದೆ ಖುಷ್ಬೂ ಬೆನ್ನ ಮೇಲೆಯೇ ಕ್ಯಾಮೆರಾ ಇಟ್ಟು ಟ್ರೈಪಾಡಿನ ಪಾಡು ನೋಡಿಕೊಂಡೆ. ದೆಹಲಿಯತ್ತಣ ಪ್ರಯಾಣ ಸುದೀರ್ಘವಾದುದ್ದರಿಂದ ಹಕ್ಕಿ ಕಂಡ ಕಡೆಯೆಲ್ಲಾ ನಿಲ್ಲಿಸಲು ಸಾಧ್ಯವಿರಲಿಲ್ಲ. ಆದರೂ ನದಿಯಲ್ಲಿ ಕಿರೀಟ ಮಿಂಚುಳ್ಳಿ ಹೊಂಚು ಹಾಕುತ್ತಿದ್ದುದರಿಂದ ನಿಲ್ಲಿಸಿದೆವು. ಒಟ್ಟಾರೆ ಈ ಪ್ರವಾಸದಲ್ಲಿ Monal Phesant (Male-Female), koklass Phesant female, Black chinned babbler, Slaty Headed Parakeet, Snow Pigeon, Collared Falconet, Himalayan Alpine Accentor, Wren Babbler, long tailed minivet, Crested Kingfisher, Asian Barred owlet, Scarlet Male ಲೈಫರುಗಳಾದವು ಎಂದು ಲೆಕ್ಕಿಸಿಕೊಂಡೆ. ಅಂದು ಸರಿರಾತ್ರಿಗೆ ದೆಹಲಿ ತಲುಪಿ ಬೆಳಿಗ್ಗೆಯೆ ಬೆಂಗಳೂರಿನತ್ತ ಮರುಪಯಣಿಸಿದೆ ಚೋಪ್ತಾದ ಮತ್ತೊಂದು ಪಯಣದ ಕನಸಿನೊಡನೆ.

ಮೊನಾಲ್ ಸಿಕ್ಕಿದ ಮೇಲೆ ಅದನ್ನು ಮತ್ತೂ ಭೇಟಿ ಮಾಡುವ ಕನಸಿನ ತತ್ತಿ ಮರಿಯಾದದ್ದು ೨೦೧೮ರ ನವೆಂಬರಿನಲ್ಲಿ. ಚೋಪ್ತಾ-ಮಂಡಲದ ಎರಡನೆಯ ಪ್ರವಾಸಕ್ಕೆ ಸಿದ್ಧವಾದೆ. ರಾಹುಲ್ ಖುಷ್ಬೂ ಸೇರಿ ಆರು ಜನರಿದ್ದೆವು. ಜೊತೆಗೂಡಿದ್ದ ಮೈಸೂರಿನ ಮೂವರು ಕನ್ನಡಿಗರಾಗಿದ್ದರಿಂದ ಸವಿಗನ್ನಡ ಸವಿಯುವ ಸದವಕಾಶವಿತ್ತು. ಸತ್ತಾಲದಲ್ಲಿ ಒಟ್ಟುಗೂಡಿದ ನಾವು ಚೋಪ್ತಾದತ್ತ ಹೊರಟೆವು. ಚೋಪ್ತಾಗೆ ಬರುವವರ ಕಣ್ಣು ಮೊನಾಲ್ ಮೇಲೆ ಇರುವುದರಿಂದ ನಾಲ್ಕು ದಿನಗಳಲ್ಲಿ ಎರಡು ದಿನ ಮೊನಾಲ್‌ಗೆ ಒಂದು ದಿನ ಕೊಕ್ಲಾಸ್‌ಗೆ ಇನ್ನೊಂದು ದಿನ ಮಂಡಲಕ್ಕೆ ಮೀಸಲಿತ್ತು. ಮೂವರೂ ಹೊಸಬರಾದ್ದರಿಂದ ಮೊನಾಲಿಗೆ ಹೆಚ್ಚು ಸಮಯ ಕಳೆದರು. ಮೊದಲ ಪ್ರವಾಸದಲ್ಲಿ ಸಿಕ್ಕ ರೀತಿಯಲ್ಲಿ ಮೊನಾಲ್ ಸಿಗಲೇ ಇಲ್ಲ. ರಸ್ತೆಯಲ್ಲೆ ಎರಡು ಗಂಟೆ ಮೌನದಲ್ಲಿ ಕುಳಿತು ಕಾಯ್ದರೂ ಕೆಳಗೆ ಕಾಣುತ್ತಿದ್ದ koklass pheasant ಮೇಲೆ ಬರಬಹುದೆಂಬ ನಿರೀಕ್ಷೆ ಕೈಗೂಡಲಿಲ್ಲ. ವಿಧಿ ಇಲ್ಲದೆ ಅದು ಇದ್ದಲ್ಲಿಗೆ ಕ್ಯಾಮೆರಾ ತಿರುಗಿಸಿ ತೆಗೆದು ಹಕ್ಕಿಗಳ ಲೆಕ್ಕದ ಪಟ್ಟಿಯಲ್ಲಿ ಸೇರಿಸಿದೆ.

ಮೈಸೂರಿನ ಮೂವರು ಹರಯ ದಾಟಿದ್ದರೂ ದೈಹಿಕವಾಗಿ ಅಪಾರ ಕ್ಷಮತೆ ಉಳ್ಳವರು. ಒಂದು ಬೆಳಿಗ್ಗೆ ತುಂಗಾನಾಥಕ್ಕೆ ಚಾರಣ ಹೊರಟೇಬಿಟ್ಟರು. ನಾನಂತೂ ಮೊದಲ ಪ್ರವಾಸದ ಮಧುರ ಸ್ಮೃತಿಯ ಭಾರವನ್ನೇ ಇನ್ನೂ ಅರಗಿಸಲು ಆಗಿರಲಿಲ್ಲ. ಕೆಳಗೆ ಉಳಿದು ಅತ್ತಿಂದಿತ್ತ ಅಡ್ಡಾಡಿ ಹೆಣ್ಣು ಮೊನಾಲಿನ ಚಿತ್ರ ತೆಗೆದೆ. ಮೊನಾಲ್ ಪ್ರಿಯರೆಲ್ಲರೂ ಕೇವಲ ಗಂಡಿನತ್ತಲೇ ಆಕರ್ಷಿತರು. ಅವರ ದೃಷ್ಟಿಯಲ್ಲಿ ಹೆಣ್ಣಿನದು ಸಪ್ಪೆ ಸೌಂದರ್ಯ. ಹತ್ತಿರದಿಂದ ನೋಡಿದರೆ ಗಂಡಿಗೆ ಬಣ್ಣದ ಬೆಡಗು ಇದ್ದರೆ, ಹೆಣ್ಣಿಗೆ ಕುಸುರಿ ಕೆಲಸದ ರೆಕ್ಕೆಪುಕ್ಕಗಳ ವಿನ್ಯಾಸದ ಸೊಬಗಿದ್ದು ಹೆಣ್ಣು ಯಾರಿಗೇನು ಕಡಿಮೆ ಇಲ್ಲವೆಂಬ ಸತ್ಯ ಅರಿವಾಗುವುದು. ಲೋಕದಲ್ಲಿನ್ನೇನು, ಗಂಡಿನ ಸಾಧನೆಯ ಮಾಪನದಲ್ಲೇ ಹೆಣ್ಣನ್ನೂ ಅಳೆಯುತ್ತಾರೆ. ಅವನಿಗಿತ್ತ ಅನಂತ ಅವಕಾಶಗಳಲ್ಲಿ ಅರ್ಧದಷ್ಟನ್ನಾದರೂ ಇವಳಿಗಿತ್ತ ಬಳಿಕ ಅಳೆದರೆ ತಾನೆ ವಾಸ್ತವ ಸತ್ಯ ತಿಳಿಯಲು ಸಾಧ್ಯ. ಹೆಣ್ಣು ಮೊನಾಲ್ ಕುಸುರಿಕಲೆ ಬಲ್ಲ ಕಲಾವಿದನ ಕೈಲಿ ರೂಪುಗೊಂಡಂತಿದೆ.

ಮರುದಿನ ನಮ್ಮ ತಂಡ ಇಡೀ ದಿನ ಮಂಡಲದಲ್ಲಿ ಫೋಟೋಗ್ರಫಿ ಮಾಡಲಿತ್ತೆಂಬ ಖುಷಿ. ಆದರೆ ಅಲ್ಲಿಗೆ ಹೋದಾಗ ಅವರಂತೆ ಅಸಮತಲ ನೆಲದಲ್ಲೆಲ್ಲಾ ನುಗ್ಗುವ ಚೈತನ್ಯ ಸಾಲದ ಕಾಲಿನವಳಾದ ನಾನು ಕಾಲು ಎಲ್ಲಿ ಹೋಗಲು ಸಾಧ್ಯವೋ ಅಲ್ಲಿಗೆಲ ಹೋಗಿ ತೃಪ್ತಿಗೊಳ್ಳುತ್ತಿದ್ದೆ. scarlet finch ಸಿಕ್ಕಿದವು ನಿಜ. ಮುಕ್ಕುವ ಆತುರದಲ್ಲಿದ್ದ ಅವು ಮುಖವನ್ನೂ ಮೇಲೆತ್ತದೆ ಮುಕ್ಕಿ ಹಾರುತ್ತಿದ್ದವು. ಗಂಡಿನ scarlet ಬಣ್ಣ ಹೆಣ್ಣಿನ ಹಳದಿ ಬಣ್ಣ ಜೊತೆಯಲ್ಲಿದ್ದಾಗ ಚಂದ ಕಾಣುತ್ತಿತ್ತು. ಆದರವು ಬಿಸಿಲು ಕಾಯುವವರಂತೆ ಸಿಗುತ್ತಿದ್ದರಿಂದ ಚಿತ್ರ ಚಂದಿರಲಿಲ್ಲ. ಮತ್ತೆ ಮಂಡಲಕ್ಕೆ ಬರಲಾರೆ ಎಂದುಕೊಂಡೇ ಮೂರು ಸಲ ಹೋಗಿದ್ದೇನೆ. ಮತ್ತೆ ಹೋಗುವ ಆಸೆ ಇದೆಯೆಂದರೆ ತೃಪ್ತಿಯಾಗುವಂತೆ ಸ್ಕಾರ್ಲೆಟ್ ಸಿಕ್ಕಿಲ್ಲವೆಂದರ್ಥ.

ಮಂಡಲದಲ್ಲಿ ನೂರಿನ್ನೂರು ಮೀಟರ್ ವ್ಯಾಪ್ತಿಯಲ್ಲಿ ಹಲವು ಹಕ್ಕಿ ಕಾಣಸಿಗುತ್ತವೆ. finches, laughing thrush, accenteor, wood pecker, warblers, flycatchers, fantail flyctachers, rose finch, red start ಮುಂತಾದವು ಸೀಜನ್ನಿನಲ್ಲಿ ಬರುತ್ತವೆ. parakeets, titಗಳಿವೆ. golden bush robin ಸಿಕ್ಕಿದ್ದರೂ ತೃಪ್ತಿಯಾಗಿಲ್ಲ. ಪ್ರತಿ ಟೂರ್ ಮುಗಿದ ಬಳಿಕ ಮತ್ತೊಂದು ಪ್ರವಾಸದ ಬೀಜ ಅದಲ್ಲಿರುತ್ತದೆ, ಇರಿಸಿಕೊಂಡು ಹೆಮ್ಮರವಾಗಿಸಿಕೊಳ್ಳುತ್ತೇನೆ. ಎರಡನೆಯ ಪ್ರವಾಸದಲ್ಲಿ Small Nilatwa, Himalayan Griffon, Large billed Crow, Plain Mountain Finch, Koklass Pheasant Male, Lemon Rumped Wabler, Mountain Hawk Eagle, Maroon Oriole, Golden Eagle, Blue fronted Redstart, Striated Yuhina, Rusty Flanked Tree Creeper, Golden Bush Robin Male- Female, Chestnut headed thrush female, Blue capped redstart Femaleಗಳು ಲೈಫರಾದವು.

ನಾಲ್ಕು ದಿನಕ್ಕೆ 16 ಲೈಫರೆಂದರೆ ಟೂರ್ ಸಕ್ಸೆಸ್ ಎಂದರ್ಥ. ಹಕ್ಕಿಗಳೆಲ್ಲ ಚಂದವಾಗಿ ಸಿಕ್ಕಿದವೆಂದಲ್ಲ, ಒಟ್ಟಾರೆ ಸಿಕ್ಕಿದವು. ಫಿಂಚುಗಳನ್ನು ಚೆನ್ನಾಗಿ ಕ್ಲಿಕ್ಕಿಸುವ ಆಸೆಯಿಂದ ಮತ್ತೊಮ್ಮೆ ಚೋಪ್ತಾ ಮಂಡಲಕ್ಕೆ ಹೊರಟದ್ದು ೨೦೧೯ರ ಡಿಸೆಂಬರಿನಲ್ಲಿ. ಖುಷ್ಬೂಗೆ ಪುಟ್ಟಮಗನ ಜವಾಬ್ದಾರಿ ಇದ್ದ ಕಾರಣ ರಾಹುಲ್ ನಾಯಕತ್ವದಲ್ಲಿ ಹೊರಟೆವು. ಟೂರಿನ ಬಹುತೇಕ ವ್ಯವಸ್ಥೆಯನ್ನು ಖುಷ್ಬೂ ಮಾಡಿದ್ದರು. ರಾಹುಲ್ ಫೋಟೋಗ್ರಫಿ, ಹಕ್ಕಿಗೆ ಲೀಡ್ ಮಾಡಿದ್ದರೆ ಖುಷ್ಬೂ ವ್ಯವಸ್ಥೆ ಬಗ್ಗೆ ನಿಗಾ ವಹಿಸುತ್ತಿದ್ದರು.

ಬೆಂಗಳೂರಿನ ಸುಜಾತಾ ಮೋರ್ಚಿಂಗ್ ನಾನು ಕನ್ನಡದಲ್ಲಿ ಮಾತಾಡಿಕೊಳ್ಳುತ್ತಿದ್ದೆವು. ಗುಂಪಿನಲ್ಲಿ ದೆಹಲಿ, ಗುಜರಾತ್, ಕರ್ನಾಟಕ ಮೂಲಗಳಿಂದ ಬಂದವರಿದ್ದರು. ಹಿಂದಿನ ಸಲಗಳಂತೆ ಚೋಪ್ತಾದಲ್ಲಿ ಉಳಿಯದೆ ಮಂಡಲದಲ್ಲಿ ಬಿಡಾರ ಬಿಟ್ಟು ಶಿಶುಪಾಲನನ್ನು ವಧಿಸುವ ಅವಕಾಶದಿಂದ ಪಾರಾಗಿದ್ದೆವು. ಶಿಶುಪಾಲನ ನೆಲೆಯಲ್ಲಿ ಕರೆಂಟೆ ಇರಲಿಲ್ಲ, ಫೋನು ಸಂಪರ್ಕವೂ ಸಿಗದೆ ಫೋನೂ ಇಲ್ಲ, ಫ್ಯಾನೂ ಇಲ್ಲ’ ಎನ್ನುವಂತಿತ್ತು. ಮಂಡಲದಲ್ಲಿ ಕರೆಂಟಿತ್ತು, ಫೋನೂ ಸಿಗುತ್ತಿತ್ತು. ಊಟವೂ ತಿನ್ನೆಬಲ್ಲಾಗಿತ್ತು. ಆದರೂ ಚೋಪ್ತಾದ ನೋಟ ಮಂಜಿನ ಮಾಯಕದಲ್ಲಿ ಮೋಹಕವಾಗಿತ್ತು. ಚೋಪ್ತಾ ಹಿಮಾಚ್ಛಾದಿತ ಆಗುತ್ತದೆಂದು ಕೇಳಿದ್ದೆ, ನೋಡಿರಲಿಲ್ಲ. ಚೋಪ್ತಾದ ಹಾದಿಯದ್ದಕ್ಕೂ ಎತ್ತ ನೋಡಿದರತ್ತ ಮಂಜೋ ಮಂಜು. ಹಕ್ಕಿ ಬೇಡ, ಏನೂ ಬೇಡಾ ಸುಮ್ಮನೆ ನೋಡುತ್ತಿರಬೇಕೆನಿಸುತ್ತಿತ್ತು. ರಾಹುಲ್ಇದು ಹೊಸ ಹಿಮ, ಜಾರುವುದಿಲ್ಲ, ನಿಮ್ಮ ಫೋಟೋ ತೆಗೆಯುತ್ತೀನಿ ಇಳಿಯಿರಿ ಅಮ್ಮಾ’ ಎಂದು ಎಷ್ಟೇ ಒತ್ತಾಯಿಸಿದರೂ ಲಡಾಖಿನಂತೆ ತೊಂದರೆ ಕೊಡುವ ಆಲೋಚನೆ ಬಿಲ್ಕುಲ್ ಇಲ್ಲವೆಂದು ನಿರಾಕರಿಸಿದೆ. ಆದರೂ ಒಂದೆಡೆ ಸುಜಾತಾ ಕೈ ಹಿಡಿದು ನಡೆದೆ ವಾಷ್ ರೂಮಿಗೆ ಹೋಗಲು. ತುಂಗಾನಾಥನೆನ್ನುವ ಬದಲು ಮಂಜುನಾಥ ಎನ್ನುವಂತೆ ಇತ್ತು. ಗುಡಿಯ ಶಿವನಿಗೆ ಬದಲಾಗಿ ಅಣುರೇಣು ತೃಣಕಾಷ್ಠಗಳಲ್ಲೆಲ್ಲಾ ಅವ ಮಂಜಾಗಿ ಕಂಡ.

ಮಂಡಲದಲ್ಲಿ ಬೆಳಿಗ್ಗೆ ಬೆಳಕು ಮಂದ. ಸ್ವಲ್ಪ ಬೆಳಕು ಬರಲೆಂದು ಕಾಯುತ್ತಿದ್ದಂತೆ ಜೊತೆಗೆ ಬಿಸಿಲೂ ಬಂದು ಇತ್ತ ತಿರುಗಿದರೆ ಬ್ಯಾಕ್ ಲೈಟ್, ಅತ್ತ ತಿರುಗಿದರೆ ಹಾರ್ಷ್ ಲೈಟ್. ಬಿಸಿಲು ಕಡಿಮೆ ಆದಂತೆಲ್ಲಾ ಕ್ಲಿಕ್ಕಿಸುತ್ತಿದ್ದೆವು. ಹಾದಿಬದಿಯ ಗಿಡ, ಪೊದೆ, ಮರಗಳೆ ಹಕ್ಕಿಗಳ ಆವಾಸಸ್ಥಾನ. ಎಲ್ಲರೂ ಬೆಳಿಗ್ಗೆ ಸೆಷನ್ ಮಂಡಲದಲ್ಲಿ ಮುಗಿಸಿ ಚೋಪ್ತಾಗೆ ಹೊರಡುತ್ತಿದ್ದರು. ಒಂದು ದಿನ ನಾನು ಚೋಪ್ತಾಗೆ ಬರುವುದಿಲ್ಲವೆಂದು ಮಂಡಲದಲ್ಲೆ ಎರಡು ಗಂಟೆ ರಸ್ತೆಯಲ್ಲೇ ಕುಳಿತು ಹಿಮಾಲಯನ್ ಬ್ಲೂ ಟೇಲ್ ಗಾಗಿ ಕಾಯುತ್ತಿದ್ದೆ. ಅದೂ ಆಗಾಗ ಬಂದು ಕೆಲವು ಒಳ್ಳೆಯ ಷಾಟ್ ತೆಗೆಯಲು ಅನುವು ಮಾಡಿಕೊಟ್ಟಿತು. ಕೆಲವೊಮ್ಮೆ ಬೇಕಾದ ಹಕ್ಕಿ ಸಿಗದಿದ್ದರೆ ಸಿಕ್ಕ ಮಾಮೂಲಿ ಹಕ್ಕಿಗಳ ಆಕ್ಷನ್ ಕಡೆಗೆ ಕಣ್ಣು ಹಾಯಿಸುವೆ. ಉಲಿಯಕ್ಕಿಯೊಂದು ಒಂದಡಿ ಉದ್ದದ ಗಿಡದ ತುದಿಯಲ್ಲಿ ಕೂರಲು ಕಸರತ್ತು ನಡೆಸಿದ್ದನ್ನು ಕಂಡೆ. ಕಳಿಂಗವೊಂದು ಇಡಿಯಾಗಿ ಮಿಡತೆಯನ್ನು ನುಂಗಿ ಗಂಟಲಲ್ಲಿ ಸಿಕ್ಕಿಕೊಂಡು ಸಂಕಟಿಸಿ ಕೊನೆಗೆ ಹೊರಗೆಳೆದು ನಿರಾಳವಾದದ್ದನ್ನು ಕಂಡು ಅದೂ ಮನುಷ್ಯರಂತೆಯೇ ಅಳತೆ ಮೀರಿ ಗೆಬಕಿಕೊಳ್ಳುವ ಚಾಳಿಯದ್ದು ಎನ್ನಿಸಿತು. ತಿನ್ನುವುದೂ ಒಂದು ಕಲೆ, ಕೌಶಲ್ಯ ಅಂತೆಯೇ ಜೀವನ ನಡೆಸುವುದು ಕೂಡಾ

ಚೋಪ್ತಾದಲ್ಲೊಂದು ಕಡೆ white browed shrike babbler ಹೆಣ್ಣು ಕುಳಿತಿದ್ದನ್ನು ಕಂಡು ಗಾಡಿ ನಿಲ್ಲಿಸಿಸಿದೆ. ಗಂಡು ಪಶ್ಚಿಮಬಂಗಾಳದ ರಿಷಬ್‌ನಲ್ಲಿ ಸಿಕ್ಕಿದ್ದ, ಮೂರು ದಿನ ಕಾಯ್ದರೂ ಹೆಣ್ಣು ಬಂದಿರಲಿಲ್ಲ. ಕೆಲವು ಹಾಗೆ ಕಾಯಿಸುತ್ತವೆ, ಸತಾಯಿಸುತ್ತವೆ. ರಮೇಶ್ ಹೇಳಿದಂತೆ ‘ಕಾಯಿಸುವ ಹುಡುಗಿಯರ ನಂಬಬಾರದು’ ಎಂದಂತೂ ಹೇಳಲಾರೆ. ಕಾಯುತ್ತಿದ್ದರೆ ಒಂದು ದಿನ ಸಿಕ್ಕೇ ಸಿಗುತ್ತದೆಂದು ನಂಬಿದವಳು ನಾನು. ನನ್ನ ಗಾಡಿ ನಿಂತಿದ್ದನ್ನು ನೋಡಿ ಇತರ ಗಾಡಿಯವರೂ ಇಳಿದು ನುಗ್ಗಿದರು. ಇತರ ತಂಡದಿಂದ ಸುದೂರ ಅಂತರದಲ್ಲಿದ್ದು ಬೇರೆ ಹಕ್ಕಿಗಳ ಸಾಧ್ಯತೆಯತ್ತ ಕಣ್ಣು ಹಾಯಿಸುತ್ತಿದ್ದ ನೋಟ ಗಮನಿಸಿದವರು ನಾನು ನಿಲ್ಲಿಸುವಲ್ಲಿ ಹಕ್ಕಿ ಇರುತ್ತದೆಂದು ಕಂಡುಕೊಂಡಿದ್ದರು. ಬಿಡದೆ ಹಿಂಬಾಲಿಸಿದವರ ಆತುರದಿಂದ ಹಕ್ಕಿಗಳಿಗೆ ಆತಂಕವಾಗಿ ಆ ಸ್ಥಳದಲ್ಲಿದ್ದ white browed shrike babbler ಗಂಡು-ಹೆಣ್ಣು, ಮರಕುಟುಕ, ಮೆರೂನ್ ಓರಿಯೋಲ್ ಹಾರಿಹೋದವು.

ಹಾರುವ ಮುನ್ನ ಕ್ಲಿಕ್ಕಿಸಿಕೊಂಡ ಕೆಲವು ಷಾಟ್ ಮಾತ್ರ ಸಿಕ್ಕವು. ಯಾರನ್ನು ಶಪಿಸಲಿ? ಇರಲಿ ಎಲ್ಲರಿಗೂ ಆಸೆ. ಹಕ್ಕಿ ಹಿಡಿದೇ ಹಿಡಿಯಬೇಕೆಂಬ ತೀರದ ಆಸೆ. ಅವಕಾಶಕ್ಕೆ ಕಾಯುವುದಾದರೆ ಆಸೆ ಕೈಗೂಡುತ್ತದೆ, ಆತುರವಾದರೆ ಕೆಲಸ ಕೆಡುತ್ತದೆಂಬ ಅರಿವು ಬೇಕಷ್ಟೆ. ಅರಿವು ಮರೆವಿನ ನಡುವೆ ಸಾಗುವ ಈ ಜೀವಕ್ಕೆ ಅರಿವಾದರೂ ಅದು ಶಾಶ್ವತವಾಗಿ ಉಳಿದಿರುತ್ತದೆಯೆ? ಹಕ್ಕಿ ಚಿತ್ರಗಾರಿಕೆಗೆ ತೊಡಗಿಸಿಕೊಂಡ ದಿನಗಳಿಂದಲೂ ಹದ್ದು, ರಣಹದ್ದು, ಗಿಡುಗಗಳ ಬಗ್ಗೆ ಆಕರ್ಷಣೆ ಸ್ವಲ್ಪ ಕಡಿಮೆ. ಎದುರಿಗೆ ಕಂಡರೆ ಚಿತ್ರವಾಗುತ್ತದೆಯೇ ವಿನಾ ಹುಡುಕಿ ತೆಗೆಯೋದಿಲ್ಲ. ಈ ಪ್ರವಾಸದಲ್ಲಿ ಹಿಮಾಲಯದ ರಣಹದ್ದು ಎದುರಿಗೆ ಫುಲ್‌ಫ್ರೇಮಿಗೆ ಕುಳಿತಾಗ ಮನ ತಡೆಯಲಿಲ್ಲ. ಹಿಂದಿನ ಪ್ರವಾಸದಲ್ಲಿ ಮರದ ತುದಿಯಲ್ಲಿ ಸಿಕ್ಕಿದ್ದ ರಣಹದ್ದು ಈ ಸಲ ground shotಗೆ ಸಿಕ್ಕಿತು.

monal, koklassಗಳ ಹುಡುಕಾಟವೇ ಪ್ರಮುಖ. ಒಬ್ಬಿಬ್ಬರು ಹೊಸಬರಿದ್ದ ಕಾರಣದಿಂದ ಕಾಯುವುದು ಅನಿವಾರ್ಯ. ಮೊನಾಲ್ ಸಿಕ್ಕಿದರೂ ಸಿಕ್ಕುತ್ತದೆ, koklass ಕಾಡಿಸುತ್ತದೆ. ಹಾಗಾಗಿ ಹುಡುಕಾಟ ಹೆಚ್ಚು. ಕೊಕ್ಲಾಸ್ ಸಿಗುವಂತಿದ್ದಾಗ ಗುಂಪಿನ ಗದ್ದಲ, ಆತುರದಿಂದ ಕೈತಪ್ಪಿ ಹೋದೀತೆಂದು ಕಾಯುವಾಗ ಎಚ್ಚರಿಸಿ ರಾಹುಲ್ ಕಾವಲಿದ್ದು ಕಾಯಿಸಿದ. ಆದರೆ ಕಲಿತ ಬುದ್ಧಿ ಸುಲಭದಲ್ಲಿ ಬಿಟ್ಟಾರೆ. ಬಹಳ ಹೊತ್ತು ಕಾಯ್ದ ಬಳಿಕ ಸಮೀಪದಲ್ಲೇ ಹೋದರೂ ಕಂಡ ತಕ್ಷಣ ಆವೇಶಕ್ಕೆ ಒಳಗಾದ ಉಳಿದವರ ಅಡ್ಡಗೋಡೆಯ ಕೋಟೆಯಿಂದ ಕೊನೆಗೂ ಒಳ್ಳೆಯ ಪಟ ಸಿಕ್ಕಲಿಲ್ಲ.

ಮೊನಾಲ್ ಮರದ ಮೇಲಿರುವ ಚಿತ್ರ ತೆಗೆಯುವ ಕನಸಿತ್ತು. ಒಮ್ಮೆ ಒಂದು ತಿರುವಿನಲ್ಲಿ ಕಣಿವೆ ಹತ್ತಿ ಬರುತ್ತಿದ್ದ ಮೊನಾಲಿಗೆ ಕಾಯುತ್ತಿದ್ದೆ. ಮತ್ತೊಂದು ಮೊನಾಲ್ ಹಾರುತ್ತಾ ಇನ್ನೊಂದು ತಿರುವಿನ ಮರದಲ್ಲಿ ಇಳಿದಿತ್ತು. ಹಿಮದಲ್ಲಿ ಕ್ಯಾಮೆರಾ ಟ್ರೈಪಾಡ್ ಹೊತ್ತು ಹೋಗುವುದು ಕಷ್ಟವಿತ್ತು. ಕಾರುಗಳೆಲ್ಲ ನಮ್ಮನಿಳಿಸಿ ಆ ತಿರುವಿನಲ್ಲಿ ನಿಂತಿದ್ದವು. ಚಿತ್ರ ತೆಗೆಯಲಿಲ್ಲ ಎಂದಲ್ಲ, ಖಂಡಿತಾ ತೆಗೆದೆ. ದೂರದ ಷಾಟ್ ಆಗಿತ್ತು. ಹತ್ತಿರದಲ್ಲಿ ತೆಗೆದಿದ್ದರೆ ಚಂದದ ಪಟ ಆಗಿರುತ್ತಿತ್ತು. ಆದರೇನು ಮಾಡಲಿ, ಮಂಜಿನ ಭಯ, ಕಾಲಿನ ಭಯ. ಕಣ್ಣೆದುರೆ ಕನಸು ಕರಗಿತು.
ಮತ್ತೊಂದು ಟೂರ್ ಇದೆ, koklass, scarlet finch ಮನತುಂಬುವಂತೆ ಸಿಗಬೇಕೆನ್ನುವ ಆಶಯದಿಂದ ಕಾಯುತ್ತಿದ್ದೇನೆ. ಇಂಡಿಯಾದ 1300 ಹಕ್ಕಿಗಳಲ್ಲಿ ಅರ್ಧಕ್ಕಿಂತ ಹೆಚ್ಚು ಸಿಗುವುದು ಉತ್ತರಾಖಂಡದಲ್ಲಿ. ಹಕ್ಕಿಪ್ರಿಯರಿಗೆ ಪಕ್ಷಿಕಾಶಿ ಇದ್ದಂತೆ. ಕುವೆಂಪು ಹೋಗುವೆನು ನಾ ಹೋಗುವೆನು ನಾ ನನ್ನ ಮಲೆಯ ನಾಡಿಗೆ, ಮಳೆಯ ಬೀಡಿಗೆ’ ಎಂದು ಹೇಳಿಕೊಂಡಂತೆ ನಾನೂ,ಹೋಗುವೆನು ನಾ ಹೋಗುವೆನು ನಾ ಆ ಹಕ್ಕಿಗಳ ಗೂಡಿಗೆ; ಮಲೆಯ ನಾಡಿಗೆ, ಮಂಜಿನ ಬೀಡಿಗೆ, ಸಿರಿಯ ಇಂಚರದ ಸಗ್ಗಕೆ ಆ ಹಿಮದ ಸನ್ನಿಧಿಯ ದೂರದ ಉತ್ತರಾಖಂಡಕೆ’ ಎಂದು ಹಾಡಿಕೊಳ್ಳುತ್ತಲೇ ಇರುತ್ತೇನೆ.

| ಇನ್ನು ಮುಂದಿನ ವಾರಕ್ಕೆ |

‍ಲೇಖಕರು avadhi

February 26, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: