ಲೀಲಾ ಅಪ್ಪಾಜಿ ಎಂದಾಕ್ಷಣ ಹಕ್ಕಿ ಫೋಟೋ ಪ್ರಿಯರ ಕಣ್ಮುಂದೆ ಹಕ್ಕಿಗಳ ಸಾಲುಮೆರವಣಿಗೆ. ಪ್ರಾಧ್ಯಾಪಕಿಯಾಗಿ ವೃತ್ತಿ ಜೀವನದಲ್ಲಿ ಸಾಗಿ ಪ್ರಾಂಶುಪಾಲೆಯಾಗಿ ನಿವೃತ್ತಿ ಹೊಂದಿದ ಲೀಲಾ ಅಪ್ಪಾಜಿಯವರ ಬದುಕಿನ ಬಗೆಯೇ ಒಂದು ಸ್ಪೂರ್ತಿಗಾಥೆ. ಅವರು ಕನ್ನಡ ಎಂಎ ಮಾಡಿದ್ದಿರಬಹುದು, ನಂತರ ಹಂತಹಂತವಾಗಿ ವೃತ್ತಿ ಜೀವನ ರೂಪಿಸಿಕೊಂಡಿದ್ದಿರಬಹುದು, ನಿವೃತ್ತಿಯ ನಂತರ ಪ್ರವೃತ್ತಿಯ ಬೆನ್ನುಹತ್ತಿ ಮನಸಿನ ನಂದನವನ್ನು ಹಕ್ಕಿಗಳ ತಾಣ ಮಾಡಿಕೊಂಡಿದ್ದಿರಬಹುದು ಇಡೀ ಪಯಣವೇ ಅಚ್ಚರಿಯೊಂದಿಗೆ ಅಬ್ಬಾ ಎನ್ನಿಸುವಂತಿದೆ.
ಏನಿರಲಿ, ಇಲ್ಲದಿರಲಿ ಮನದ ನಿಶ್ಚಯವೊಂದು ಅಚಲವಿರಲಿ ಎಂದು ಅಂದುಕೊಂಡ ಹಾದಿಯಲಿ ಛಲಬಿಡದೆ ನಡೆದವರು.
ನಿವೃತ್ತಿಯ ನಂತರ ಏನು ಮಾಡಬೇಕೆಂದು ಹುಡುಕಾಡುತ್ತಿದ್ದ ಮನಸ್ಸು ಒಂದು ದಿನ ಫೋಟೋಗ್ರಫಿ ಎಂದು ನಿರ್ಧರಿಸಿದ್ದೇ ಕ್ಷಣವೂ ತಡಮಾಡದೆ ಆ ಫೀಲ್ಡಿಗೆ ಇಳಿದು ಟ್ರಯಲ್ ಅಂಡ್ ಎರರ್ ಮಾಡುತ್ತಲೇ ಕಲಿತೇಬಿಟ್ಟರು. ಗಾಂಧಿ ಮತ್ತು ಕುವೆಂಪುವನ್ನು ತಮ್ಮ ಆದರ್ಶವೆಂದು ಹೇಳುವ ಲೀಲಾ ಮೇಡಂ ಬರವಣಿಗೆಯೂ ಅವರ ಮಾತಿನಷ್ಟೇ ಮುದನೀಡುವಂತಹದ್ದು.
ತಮ್ಮ ಹಕ್ಕಿಗಳೊಡನಾಟದ ನೆನಪುಗಳನ್ನು ಈ ಅಂಕಣದ ಮೂಲಕ ‘ಅವಧಿ’ಯ ಓದುಗರೊಂದಿಗೆ ಹಂಚಿಕೊಳ್ಳಲಿದ್ದಾರೆ.
ಭಾಗ-1
ಇಳಿವಯಸ್ಸಿನಲ್ಲಿ ಏರುತ್ತಲೇ ಹೋದ ಹಕ್ಕಿ ಸುಳಿಗೆ ಸಿಕ್ಕಿ ಹಕ್ಕಿಪ್ರೇಮಿಯಾದ ಮೇಲೆ ಹಕ್ಕಿ ಸಿಕ್ಕುವಲ್ಲಿ ಲೀಲಾ ಸಿಕ್ಕೇ ಸಿಗುತ್ತಾಳೆನ್ನುವಂತೆ ಹಕ್ಕಿ ಒಡ್ಡಿದ ಪ್ರೀತಿಯ ಜಾಲದಲ್ಲಿ ಲೀಲಾ ಸೆರೆ ಸಿಕ್ಕಿಯೇ ಕೊಂಡಳು. ಮೊದಲ ಬಾರಿಗೆ ಮಂಡ್ಯದ ಅಕ್ಕಪಕ್ಕದ ಊರುಗಳ ದಾರಿ ಹಿಡಿದೆ, ಅಲ್ಲಲ್ಲ ಹಕ್ಕಿಗಳು ಹಿಡಿಸಿದವು. ಹತ್ತಿರದಲ್ಲಿ ಹತ್ತಾರು ಹಳ್ಳಿಗಳಿದ್ದರೂ ಇತರ ಹಳ್ಳಿಗಳಿಗೆ ಅಪರೂಪಕ್ಕೆ ಹೋದರೂ ಮಂಡ್ಯಕ್ಕೆ ಹತ್ತಿರದ ಮೂರು ಹಳ್ಳಿಗಳಲ್ಲಿ ಹಕ್ಕಿ ಜೈತ್ರಯಾತ್ರೆ ಸಾಗಿತು. ಮೂರು ಹಳ್ಳಿಗಳೂ ಮಂಡ್ಯದ ಮೂರು ದಿಕ್ಕಿನಲ್ಲಿದ್ದವು. ಒಂದೆಡೆ ಚೀರನಹಳ್ಳಿ, ಮತ್ತೊಂದೆಡೆ ಕ್ಯಾತುಂಗೆರೆ ಮಗದೊಂದೆಡೆ ಮೋಳೆಕೊಪ್ಪಲು. ಈ ಮೂರು ನೆಲೆಗಳು ಬರಸೆಳೆದು ತಮ್ಮಂಗಳಕ್ಕೆ ಬರುತ್ತಿದ್ದ ಹಕ್ಕಿಲೋಕಕ್ಕೆ ಕರೆದೊಯ್ದಿವೆ. ಹಕ್ಕಿಗಳಿಗೆಂದು ಅಲೆದಾಡಲು ಹೋಗುವ ಮೊದಲು ಈ ಯಾವ ಹಳ್ಳಿಗಳಿಗೂ ನಾನು ಎಂಟ್ರಿ ಕೊಟ್ಟಿರಲಿಲ್ಲ. ನಿಜ ಹೇಳಬೇಕೆಂದರೆ ಕೆಲವು ಊರುಗಳ ಹೆಸರೂ ಕೇಳಿರದ ಅಪ್ಪಟ ಮಂಡ್ಯನ್ನಳು ನಾನು. ಮಂಡ್ಯದಿಂದ ಬನ್ನೂರಿಗೆ ಹೋಗುವ ದಾರಿಯಲ್ಲಿ ಕ್ಯಾತುಂಗೆರೆ, ಮೈಸೂರು ಬೆಂಗಳೂರಿನ ಮುಖ್ಯರಸ್ತೆಯ ಕಿರಂಗೂರು ದಾಟಿ ಹೋದರೆ ಮೋಳೆಕೊಪ್ಪಲು. ಇದೇ ಹೆದ್ದಾರಿಯಿಂದ ಐದಾರು ಕಿ.ಮೀ. ಒಳಗೆ ಹೋದರೆ ಚೀರನಹಳ್ಳಿ. ಹಳ್ಳಿಗಳೆಂದರೆ ಈ ಹಳ್ಳಿಗಳ ಅಕ್ಕಪಕ್ಕದ ಗದ್ದೆಹೊಲಗಳು. ಅಲ್ಲೆ ನನ್ನ ಹಕ್ಕಿ ಹುಡುಕಾಟ.
ಈ ಹಳ್ಳಿ ದಾರಿಗಳ ಅರಿವಿರದ ನಾನು ನನ್ನ ಗಂಡನನ್ನು `ಕ್ಲಿನಿಕ್ಕಿಗೆ ಹೋಗುವ ಮೊದಲು ಒಂದಿಷ್ಟು ಹೊತ್ತು ಹಕ್ಕಿಗಾಗಿ ಸುತ್ತಾಡಿಸಿ’ ಎಂದೆ ಒಂದು ದಿನ. ಆ ದಿನ ಒಳ್ಳೆಯ ಮೂಡಿನಲ್ಲಿದ್ದುದಕ್ಕೆ ಒಂದೇ ಸಲಕ್ಕೆ ಒಪ್ಪಿ ಆಗಲೆಂದು ಕ್ಯಾಮೆರಾ ಹಿಡಿದ ನನ್ನನ್ನು ಕಾರೇರಿಸಿಕೊಂಡು ಚೀರನಹಳ್ಳಿ ದಾರಿಯಲ್ಲಿ ಕರೆದುಕೊಂಡು ಹೋದ. ಅಲ್ಲಲ್ಲಿ ಹಕ್ಕಿ ಕಂಡಾಗ ನಿಲ್ಲಿಸಲು ಕೂಗಿ ಕಿರುಚಿ ಹೇಳಿ ನಿಲ್ಲಿಸುವಷ್ಟರಲ್ಲಿ ಐವತ್ತು ಮೀಟರ್ ಮುಂದೆ ನಿಂತು ಹಕ್ಕಿ ಹಾರಿಹೋಗಿರುತ್ತಿತ್ತು. `ನೀನು ಮೊದಲೇ ಹೇಳು ನಿಲ್ಲಿಸ್ತೀನಿ. ಸಡನ್ನಾಗಿ ಹೇಳಿದರೆ ಹೇಗೆ ಸಾಧ್ಯ’ ಎಂದಾಗ `ಹಕ್ಕಿ ಕಂಡಾಗಲ್ವೆ ಹೇಳಲು ಸಾಧ್ಯ’ ಎಂದೆ. ಆ ದಿನ ಮುನಿಯ, ನವಿಲು, ಗಿಡುಗ ಮುಂತಾದ ಹಕ್ಕಿಗಳನ್ನು ನೋಡಿದೆ ಅಷ್ಟೆ. ಮೂರ್ನಾಲ್ಕು ದಿನ ಕಳೆದು ಮತ್ತೊಮ್ಮೆ ಕರೆದುಕೊಂಡು ಹೋಗಲು ಬೇಡಿಕೆ ಇಡಲೆ ಬೇಡವೇ ಎಂದು ತಲೆ ಕೆಡಿಸಿಕೊಂಡೆ. ಕ್ಲಿನಿಕ್, ಪ್ರ್ಯಾಕ್ಟೀಸ್ ನಡುವಣ ಒತ್ತಡದಲ್ಲಿ ಬನ್ನಿ ಎಂದು ಕರೆದು ಗಂಡನಿಗಿನ್ನು ತೊಂದರೆ ಕೊಡದೆ ನನ್ನ ಪಾಡಿಗೆ ನಾನೇ ಹಕ್ಕಿಗೆ ಹೋಗೋಣ ಎಂದು ನಿರ್ಧರಿಸಿ ಹೊರಟ ಪಯಣ ನಂತರ ನಿರಂತರವಾಗಿ ಮುಂದುವರೆಯಿತು.
ಗದ್ದೆಲಿಂಗಯ್ಯ ಹೆಸರಿನ ನನ್ನಪ್ಪ ಹೆಸರಿನಲ್ಲಿ ಮಾತ್ರ ಗದ್ದೆಯುಳಿಸಿಕೊಂಡು ತನ್ನ ಕಷ್ಟಕ್ಕೆ ಇದ್ದ ಗದ್ದೆಯನ್ನೂ ಮಾರಿದ್ದವರು. ಇನ್ನು ಮಾವ ಕಷ್ಟದಿಂದಲೇ ಬದುಕಿ ಕಟ್ಟಿಕೊಂಡು ವ್ಯವಸಾಯದಲ್ಲೇ ಮುಳುಗಿ ಎದ್ದು ಮರೆಯಾದವರು. ಉಸಿರು ಬಿಡುವ ದಿನವೂ ಜಮೀನಿಗೆ ಹೋಗಿ ಬಂದೆ ಉಸಿರು ಬಿಟ್ಟವರು. ನನ್ನ ಗಂಡನೋ ಇಲ್ಲಿ ಹಲ್ಲು ಕಿತ್ತು ದುಡಿದದ್ದನ್ನು ಅಲ್ಲಿ ಹಾಕಿ ರೈತನಾಗ್ತೀನಿ ಅನ್ನುತ್ತಿದ್ದವ. ರೈತರ ಮನೆಯಿಂದಲೇ ಬಂದರೂ ಗದ್ದೆ ಹೊಲಕ್ಕಿಳಿಯದ ಈ ಅಕ್ಷರದಾಸಿಯ ಬದುಕಿಗೆ ಬಂದ ಹಕ್ಕಿ ನನಗೆ ನನ್ನ ಬಂಧುಗಳ ಕಷ್ಟ ಕಾಪರ್ಣ್ಯಗಳನ್ನೂ ಕಣ್ಣಾರೆ ಕಂಡು ಮನಕ್ಕಿಳಿಸಿ ಕಣ್ಣಂಚು ತೇವಗೊಳಿಸಿತು.
ಒಮ್ಮೆ ಚೀರನಹಳ್ಳಿಯ ಹೊಲದಲ್ಲಿ ಮುನಿಯಗಳಿಗೆ ಮರೆಯಲ್ಲಿ ಕಾಯುತ್ತಾ ಕೂತಿದ್ದವಳ ಕ್ಯಾಮೆರಾ ಕಂಡ ಜಮೀನಿನ ಒಡೆಯ ರೈತ ಕೇಳಿದ್ದ `ತಾಯಿ ಇದನ್ನೆಲ್ಲಾ ಅಳತೆ ಮಾಡಿ ಸರ್ಕಾರಕ್ಕೆ ಕೊಟ್ಟೀಯಾ, ನಮಗೆ ಸರ್ಕಾರ ಏನಾರಾ ಸಹಾಯ ಮಾಡೀತಾ’. ಕೆ.ಆರ್.ಎಸ್. ತುಂಬದೆ ತುಂಬಾ ದಿನಗಳಾಗಿದ್ದವು. ಕೆಲವು ಊರುಗಳಿಗೆ ನಾಲೆಯ ನೀರು ಬರುತ್ತಿರಲಿಲ್ಲ. ಮಳೆ ಬಂದಾಗ ಮಾತ್ರ ಬೆಳೆ. ಮಳೆಯೂ ನಿರ್ದಿಷ್ಟ ಇರಲಿಲ್ಲ. ಮಳೆಹನಿಗಿಂತ ರೈತನ ಕಣ್ಣಿನಲ್ಲೇ ಹೆಚ್ಚು ನೀರಹನಿ ತುಂಬಿತ್ತು. ಅವನ ಹತ್ತರಿಯದ ಕಷ್ಟಗಳ ನಡುವೆ ಅವನದ್ದೇ ಜಮೀನಿನಲ್ಲಿ ಹಕ್ಕಿಗಾಗಿ ಕುಳಿತ ನಾನೇನು ಮಾಡುತ್ತಿದ್ದೇನೆಂದು ನಾಚಿ ಮನಸು ಬೆಂದು ನರಳಿತು. ನನಗೆಯೆ ನನ್ನ ಬಗ್ಗೆ ಜುಗುಪ್ಸೆ ಹುಟ್ಟಿತು. ಒಂದೆರಡು ದಿನ ವಿರಕ್ತಿಯ ಸಿಂಹಾಸನದಲ್ಲಿ ಕುಳಿತು ಕ್ಯಾಮೆರಾಗೆ ರಜೆ ಕೊಟ್ಟೆ. ಸೀಜನ್ನಿನಲ್ಲಿ ಮೌನ ವಹಿಸಿದರೆ ಹಕ್ಕಿ ಕೈ ತಪ್ಪಿಹೋಗುತ್ತವೆಂದು ಹಳಹಳಿಸಿ ಅದೇ ಜಮೀನನತ್ತ ಹೋದಾಗ ಅವನು `ನಿನ್ನೆ ಮೊನ್ನೆ ಹಕ್ಕಿ ಚಿತ್ರ ತೆಗೆಯೋಕ್ಕೆ ಬರಲಿಲ್ಲ ತಾಯಿʼ ಕಾಳಜಿಯಿಂದ ಕೇಳಿದ. ಅವನ ಕಷ್ಟಗಳ ನಡುವೆಯೂ ನನ್ನ ಬಗ್ಗೆ ಕಾಳಜಿ ತೋರಿದವನ ಅಂತಃಕರಣ ಅರಿತು ಮಾತಾಡಬಹುದೆ ನಾನು ಏನನ್ನಾದರೂ, ಮಾತಿತ್ತೆ. ಮೌನದಿಂದಲೇ ನೋಟದಿಂದಲೇ ನಮಿಸಿ ಮುಂದೆ ನಡೆದೆ.
ಚೀರನಹಳ್ಳಿಯಲ್ಲಿ ಒಂದು ಸಲ ತೆನೆಗೆ ಹಾಲು ತುಂಬುತ್ತಿದ್ದ ಗದ್ದೆ ಬದಿಯಲ್ಲಿ ಕಾಯುತ್ತಾ ಮುತ್ತಿಗೆ ಹಾಕಿದ್ದ ಗೀಜಗ, ಮುನಿಯಗಳ ಹಿಂಡಿನತ್ತ ಕಣ್ಣಿಟ್ಟಿದ್ದೆ. ಅವನ್ನು ನೋಡುವುದೂ ಹಿತವಾಗಿತ್ತು. ವಯಸ್ಸಾದ ಗದ್ದೆಯೊಡೆಯ ಡಬ್ಬ ಕೋಲು ಹಿಡಿದು ಬಡಿಯತೊಡಗಿದ. ನಾನೇನು ಮಾಡುವುದು. ತೆನೆಗಟ್ಟುವ ಹೊತ್ತಿನಲ್ಲಿ ಹಾಲು ಹೀರಿದರೆ ಉಳಿಯುವ ಜೊಳ್ಳಿನಿಂದ ಅವನನ್ನು ನಂಬಿದವರ ಹೊಟ್ಟೆ ತುಂಬದಲ್ಲ. ಆತ ಬಡಿದ, ಬಡಿದೇ ಬಡಿದ. ಬಡಿಯುತ್ತಿದ್ದಂತೆ ಹಾರಿಹೋಗುತ್ತಿದ್ದ ಹಕ್ಕಿವಿಂಡು ನಿಲ್ಲಿಸಿದಾಕ್ಷಣ ಮತ್ತೆ ಮುತ್ತಿಗೆ ಹಾಕುತ್ತಿದ್ದವು, ಅವುಗಳಿಗೂ ಹೊಟ್ಟೆಪಾಡು. ಈ ಕಣ್ಣುಮುಚ್ಚಾಲೆ ಆಟ ಬದುಕಿನುದ್ದಕ್ಕೂ ಇರುವ ಸತ್ಯ ತಾನೆ. ಬಡಿದು ಸುಸ್ತಾಗಿ ಅವ ಅತ್ತ ಹೋದ, ಇವು ಮತ್ತೆ ಗದ್ದೆಯಲ್ಲಿ ಹಾರಾಟದ ಅಲೆಗಳೇಳಿಸುತ್ತಿದ್ದವು.
ಚೀರನಹಳ್ಳಿಯ ರೈತನೊಬ್ಬ ಹೊಲದ ತುಂಬಾ ಟೊಮೊಟೊ ಬೆಳೆದಿದ್ದ. ಹಣ್ಣು ಬಿಡಿಸುವ ಹೊತ್ತಿಗೆ ಗಿಳಿ, ಮುನಿಯ ಬಂದಾವೆಂದು ಕುಳಿತಿದ್ದೆ. ಬಿಡಿಸಿಕೊಡುವವರು ಕೆಲವರು, ಹೊತ್ತು ತಂದು ಸುರಿಯುತ್ತಿದ್ದವರು ಕೆಲವರು. ಅವ ಹೇಳಿದ `ನೀವೊಂದಿಷ್ಟು ತಗೊಂಡೋಗಿ.’ ಮನೆಗೆ ತರುವ ಕೊಳ್ಳುವ ಯವ್ವಾರ ನಿಲ್ಲಿಸಿ ದೂರವಿದ್ದ ನನಗೆ ಅದೆಲ್ಲಾ ಮತ್ತೆ ಒಗ್ಗುವ ಬಾಬತ್ತಲ್ಲ. ಅವ ಮುಂದುವರೆಸಿದ `ನೀವೇ ನೋಡಿದ್ರಿ, ಅಷ್ಟು ದಿನದಿಂದ ಎಷ್ಟು ಹೊಡೆದಾಡಿದ್ವಿ ಅಂತ. ಮಾರ್ಕೆಟಲ್ಲಿ ರೇಟೆ ಇಲ್ಲ. ಬೆಳೆದಿದ್ದ ಖರ್ಚಿರಲಿ, ಕೀಳಿಸೋಕೆ ಮಾಡಿದ ಸಾಲ ತೀರಿಸಲೂ ಸಾಲಲ್ಲ. ಬಾಡಿಗೆ ಗಾಡಿ ಮಾಡಿ ಸಾಗಿಸಬೇಕಿದೆ. ಸುಮ್ಮನೆ ಸುರಿದು ಬುಡೋದೆ ಮೇಲು, ಇಲ್ಲ ಹೊಲದಲ್ಲೆ ಬಿಟ್ರೂ ಆಯ್ತು.’ ನನ್ನ ಬಳಿಯಾದರೂ ಉತ್ತರವೆಲ್ಲಿತ್ತು? ರೂಪಾಯಿಗೆ ಎರಡು ಕೆಜಿ ಕೊಡುವ ಹಾಗಾದರೆ ಅವನಿಗೇನು ಬಂತು. ಮೌನ ವಹಿಸಿಯೂ ಹಾರಿ ಬಂದ ಮರಕುಟುಕದ ಮೇಲೆ ಕಣ್ಣಿಟ್ಟೆ ಕಿವುಡಿಯಾಗಿ. ಮಾರ್ಕೆಟ್ಟಿಗೆ ಬೆಳೆ ತಂದವರು ಎಷ್ಟೊ ಸಲ ಅಲ್ಲೇ ಸುರಿದು ಹೋಗುವವರ ಕಣ್ಣಿನಲ್ಲಿ, ಬೆಳೆದ ಕಬ್ಬಿಗೆ ಗದ್ದೆಯಲ್ಲೇ ಬೆಂಕಿ ಹಾಕಿದವರ ಎದೆಯಲ್ಲಿ ಇನ್ನೂ ಉರಿವ ಬೆಂಕಿ ಇತ್ತೆಂದು ಅರ್ಥವಾಗಿತ್ತು. ಕಿವುಡು ಕುರುಡ ದರ್ಬಾರಿನಲ್ಲಿ ಅನ್ನದಾತನ ಬದುಕೇ ನರಕವಾಗಿತ್ತು, ಇದೆ.
ಗದ್ದೆ ಹೊಲಗಳೆಡೆಗೆ ಬಹುತೇಕ ಯುವ, ಮಧ್ಯವಯಸ್ಕ ಗಂಡಸರು ಸೈಕಲ್, ಬೈಕೇರಿ ಹೊರಟರೆ, ಹೆಂಗಸರು, ವಯಸ್ಸಾದ ಗಂಡಸರು ಕುಡುಗೋಲು ಹಿಡಿದೋ, ಎಮ್ಮೆ, ದನ, ಕುರಿ ಅಟ್ಟಿಕೊಂಡೋ ಹೋಗುತ್ತಿದ್ದರು. ಮೇವು ತರುವಾಗ ತರತರದ ವಾಹನಗಳಲ್ಲೋ ಕಾಲ್ನಡಿಗೆಯಲ್ಲೋ ಮರಳುತ್ತಿದ್ದರು. ‘ಏನವ್ವ’, ‘ಏನ್ ಮೇಡಂ ಏನ್ ಮಾಡ್ತಿದೀರಿ’ ಪ್ರಶ್ನೆಗಳಿಗೆ ಉತ್ತರಿಸಿದರೆ ಅವರ ಮೊಗದಲ್ಲೊಂದು ಬೆರಗು, ಒಂದಿಷ್ಟು ನಗು.’ಹಕ್ಕಿ ಚಿತ್ರ ತೆಗ್ದಾರಂತೆ’ ‘ಇನ್ನೂ ಬೇಗ ಬನ್ನಿ, ನವಿಲು ಜಾಸ್ತಿ ಬರ್ತಾವೆ” ಎಂದು ಸಲಹೆ ಕೊಟ್ಟು ಮುನ್ನಡೆಯುತ್ತಿದ್ದರು. ಹಾಗೆ ನೋಡುತ್ತಿದ್ದರೆ ತಲೆಯ ಮೇಲೆ ಭಾರದ ಬುಟ್ಟಿ ಹೊತ್ತು ಬರುತ್ತಿದ್ದಾಕೆ ಊಟ ತರುತ್ತಿರಬಹುದೆ ಎನ್ನಿಸಿತು. ಆದರೆ ಹತ್ತಿರ ಬರುತ್ತಿದ್ದಂತೆ ‘ಅವ್ವಾ ಸಗಣಿ ಕಣವ್ವಾ, ನಮ್ಮ ಗದ್ದೆಗೆ ಹಾಕಕ್ಕೆ’ ಎನ್ನುತ್ತಾ ಹೊತ್ತ ಹೊರೆ ಹೊರೆಯಲ್ಲ ಎನ್ನುವಂತೆ ಆ ತಾಯಿ ಹೆಜ್ಜೆ ಹಾಕಿದ್ದಳು. ಆಕೆ ಸದಾ ಅನ್ನ ಕೊಡುವ ಭೂಮ್ತಾಯಿಗೆ ಸತ್ವಯುತವಾದ ಬುತ್ತಿ ಹೊತ್ತು ತಂದಿದ್ದಳು. ನೆಲಕ್ಕೆ ನಮಿಸಿ ನಗುತ್ತಾ ದುಡಿವ ರೈತಮಕ್ಕಳಿವರು.
ಮಯೂರ ಚಿತ್ರದಲ್ಲಿ ರಾಜ್ ಆಡಿದ ಮಾತು ಭಯವೆ? ಹಾಗೆಂದರೇನು? ಈ ಮಾತು ಪದೇ ಪದೇ ನೆನಪಾಗುತ್ತದೆ. ಇದೇ ಮಾತನ್ನು ವೃತ್ತಿಯ ಕೊನೆಯ ದಿನಗಳಲ್ಲಿ ನೆನಪು ಮಾಡಿಕೊಳ್ಳುತ್ತಿದ್ದೆ. ನೀನು ಸರಿಯಾಗಿದ್ದರೆ ಭಯಪಡುವ ಅಗತ್ಯವೆಲ್ಲಿದೆ? ನಿರ್ಭಯವಾಗಿರೆಂದು ಹೇಳಿಕೊಂಡು ನನ್ನ ನಿಲುವುಗಳಲ್ಲೇ ಉಳಿಯುತ್ತಿದ್ದೆ. ಮಾಮೂಲಿ ಹೋಗುವ ಚೀರನಹಳ್ಳಿಯ ರಸ್ತೆಯ ಟ್ರ್ಯಾಕ್ ಬದಲಿಸಿ ಬೀರೇಶ್ವರನ ಗುಡಿ ಪಕ್ಕದ ಮಾರ್ಗಕ್ಕೆ ಹೊರಳಿದೆ. ಮಳೆ ಇಲ್ಲದೆ, ನಾಲೆಯಲ್ಲಿ ನೀರಿಲ್ಲದೆ ಬೆಂಗಾಡಾದ ಹೊಲಗದ್ದೆಗಳ ನಡುವೆ ಬೋರ್ ಇದ್ದವರು ಕಬ್ಬು, ರಾಗಿ ಬೆಳೆದಿದ್ದರೆ ಕೆಲವರು ಟೊಮೋಟೊ, ಬದನೇಕಾಯಿ, ಸೌತೆ ಬೆಳೆದಿದ್ದರು. ಟೊಮೋಟೊ ಬೆಳೆದ ಜಮೀನು ಕಾಣಿಸಿತು.
ಇಡೀ ಜಮೀನಿನಲ್ಲಿ ಎದ್ದು ಕಾಣಿಸಿದ್ದು ದೃಷ್ಟಿ ಆಗದಿರಲೆಂದು ಬೋರಲು ಹಾಕಿದ ಸುಣ್ಣ ಬಳಿದ ಮಡಿಕೆ. ಹಾಗೆ ನೋಡುತ್ತಿದ್ದೆ. ಬೂದು ಚೇಕಡಿ (Great Tit) ಹಾರಿಬಂದಿತು. ಆದರೆ ಮುಸುಡಿಯೇ ಕಾಣ್ದಂಗೆ ಕಚ್ಚಿತಂದ ಕೂದಲಿನ ಜೊತೆ ಹಾರಿಬಂದ ಅದನ್ನು ನೋಡಿ ಬೆಚ್ಚಿದೆ. ಹಕ್ಕಿಗಳು ಗೂಡಿಗೆ ನಾನಾ ನಮೂನೆ ಸರಕು ಸಂಗ್ರಹಿಸಿ ಕಟ್ಟಿಕೊಳ್ಳುತ್ತೆ, ನಿಜ. ಆದರೆ ಈ ಪಾಟಿ ಕೂದಲನ್ನು ತಂದು ಗೂಡಿಗೆ ಬೆಚ್ಚನೆ Blanket ಮಾಡಿಕೊಳ್ಳುತ್ತಲ್ಲ ಅದರ ಕಥೆ ಏನು ಅಂತ. ಆದರೆ ಇಷ್ಟು ಕೂದಲನ್ನು ಅದ್ಯಾವ ಮೂಲೇಲಿ ಹುಡುಕಿ, ಒಗ್ಗೂಡಿಸಿ ಕೊಕ್ಕಿನಲ್ಲಿ ತಂದು ತಮ್ಮ ಮಕ್ಕ-ಮರಿಗಾಗಿ ಒದ್ದಾಡ್ತದಲ್ಲ ಶಿವನೆ! ಅದರ ಜೊತೇದು ಹಂಗಂಗೆ ರೆಕ್ಕೆ ಬೀಸ್ಕಂಡು ಬಂತೆ ವಿನಾ ಒಂದೆಳೆಯ, ಒಂದ್ ಕೂದಲನಾರೂ ತರಲಿಲ್ಲ. ಆಸರೆಗೋಲಿನ ಮೇಲೆ ಕೂತ ಅದನ್ನು ಕಂಡು ಎಲ್ಲಿ ಗೂಡು ಕಟ್ಟುತ್ತಿದೆ ಎಂದು ಹುಡುಕಿದರೆ ಕಾಯುತ್ತಿದ್ದ ಚೇಕಡಿ ಅತ್ತಿತ್ತ ನೋಡಿ ಯಾರೂ ಇಲ್ಲವೆಂಬುದು ಖಾತ್ರಿಯಾಗಿ ಬೋರಲು ಹಾಕಿದ ಮಡಿಕೆಯ ಬಳಿಗೆ ಹಾರಿ ಬಂತು. ಬಿಟ್ಟ ಬಾಯಿ ಬಿಟ್ಟೇ ಇದ್ದೆ. ಸರ್ರೆಂದು ಮಡಿಕೆಯೊಳಕ್ಕೆ ನುಗ್ಗಿ ಕೆಲಸ ಮುಗಿಸಿ ಭರ್ರೆಂದು ಹಾರಿಹೋಯಿತು. ಭಯ ಪಡಿಸಲು, ದೃಷ್ಟಿ ತಾಗದಿರಲೆಂದು ಹಾಕಿದ ಮಡಿಕೆಯಲ್ಲೇ ಸಂತತಿ ಬೆಳೆಸಲು ಹೊರಟ ಹಕ್ಕಿಗೆ ಯಾವ ಭಯ… ಮನುಷ್ಯರನ್ನು ಬಿಟ್ಟು. ಬೇಸಿಗೆಯಲ್ಲಿ ತಂಪಾದ ಮಡಿಕೆಯ ಒಳಗೆ ಬೆಚ್ಚನೆಯ ಗೂಡು ಕಟ್ಟಿ ಮರಿ ಮಾಡಿಕೊಳ್ಳುವ ಹವಣು ಚೇಕಡಿಯದ್ದಾಗಿತ್ತು. ಅಷ್ಟೊಂದು ಕೂದಲನ್ನು ಯಾವ ನಾಪಿತನ ಅಂಗಡಿಯಿಂದ ಎತ್ತಿತಂದಿತ್ತೊ ಎಂದುಕೊಳ್ಳುವಾಗ ಹಿಂದೊಮ್ಮೆ ನನ್ನ ಮನೆಯಂಗಳಕ್ಕೆ ಬಂದ ಚೇಕಡಿ ನಾಯಿಗೂಡಿನ ಬಳಿ ಬಿದ್ದಿದ್ದ ನಾಯಿಯ ಕೂದಲನ್ನೂ ಸಂಗ್ರಹಿಸಿಕೊಂಡಿದ್ದು ನೆಪ್ಪಾಯ್ತು.
ಒಮ್ಮೆ ಚೀರನಹಳ್ಳಿಯಲ್ಲಿ ಜೋಳದ ತೆನೆಗೆ ಬಾಯಿ ಹಾಕಿದ್ದ ಗಿಳಿ ಕ್ಲಿಕ್ಕಿಸುವಷ್ಟರಲ್ಲಿ ಹಾರಿದವು. ನಾನು ಮತ್ತೆ ಅಲ್ಲಿಗೆ ಹೋಗಲಾಗಿರಲಿಲ್ಲ. ಹೊರಗಿನ ಬಿಸಿಲಿನ ಬಿಸಿಗೆ ಸರಿಸಮವಾಗಿ ಮೈಯಲ್ಲೂ ಬಿಸಿಯೇರಿ ಜ್ವರದ ತಾಪದಲ್ಲಿ ಮೂರ್ನಾಲ್ಕು ದಿನ ಪವಡಿಸು ಪರಮಾತ್ಮ ಎಂದಾಗಿದ್ದೆ. ಸುಸ್ತೋ ಸುಸ್ತು, ಜ್ವರದಿಂದಲ್ಲ. ಜ್ವರ ಹೋಗಲೆಂದು ನುಂಗಿದ ಮಾತ್ರೆಗಳ ಕಾಟದಿಂದ. ಯಾವ ಮಾತ್ರೆ ನುಂಗಿದರೂ ನಂತರದ ಪರಿಣಾಮಗಳಿಂದ 90% ಮಾತ್ರೆ ನುಂಗಲು ಹಿಂದೇಟು ಹಾಕ್ತೀನಿ. ಆದರೆ ಆಂಟಿಬಯಾಟಿಕ್ಸ್ ಹಂಗೆ ಮಾಡಾಕ್ಕಾಗಲ್ವೆ. ಸ್ವಲ್ಪ ಸುಧಾರಿಸಿಕೊಂಡ ಮೇಲೆ ಕ್ಯಾಮೆರಾಗೆ ಇನ್ನು ರೆಸ್ಟ್ ಕೊಟ್ಟರೆ ಅದು ಫೋಟೊ ತೆಗೆಯೋದನ್ನೇ ಮರೆತುಬಿಡುತ್ತದೆಂದು ಯತ್ಲಾಗೆ ಹೋಗ್ಲಿ ಅನ್ಕೊಂಡವಳು ಯತ್ತಗದಹಳ್ಳಿ ಎಡೆಗೆ ತಿರುಗಿದೆ. ಜೋಳದ ಹೊಲದಲ್ಲಿ ಗಿಳಿಗಳನ್ನು ಕಂಡ ಕೂಡಲೇ ಗಾಡಿ ನಿಲ್ಲಿಸಿ, ಸರಸರ ಹಳ್ಳ ಇಳಿದು ಹತ್ತಿ ಸೆಟ್ ಮಾಡ್ಕೊಳ್ಳೋ ಬಹುಭಾಗ ಗಿಳಿ ಹಾರಿದ್ದವು. ಇದ್ದವುಗಳ ಸ್ಪೀಡಿ ಹಾರಾಟಕ್ಕೆ ಇನ್ನೂ ನನ್ನ ದೇಹ, ಕಾಲು, ಕೈ-ಕಣ್ಣು-ಕ್ಯಾಮೆರಾಗಳ ಹೊಂದಾಣಿಕೆ ನಡೀತಾ ಇತ್ತು. ಒಂದ್ಕಡೆ ತೆನೆಯೊಂದರ ಮೇಲೊಂದು ಗಿಳಿ ಮುಖ ಮುಚ್ಚಿಕೊಂಡು ಕೂತಂಗಿತ್ತು. ಯಾಕಿಂಗೆ ಮುಖ ಮುಚ್ಕೊಂಡಿದೆ ಅಂತಾ ಸುತ್ತಾ ಮುತ್ತಾ ನೋಡಿದೆ. ಅರೆ! ಹೊಲದೊಡೆಯ ಒಂದ್ಕೈಲಿ ಸೈಜುಗಲ್ಲು ಹೊತ್ಕೊಂಡು, ಮತ್ತೊಂದು ಕೈಲಿ ಕುಡುಗೋಲು, ಹಗ್ಗ ಹಿಡ್ಕೊಂಡು ಬರ್ತಾ ಇದ್ದರು. ಪ್ಯಾಂಟು ಮಡಿಸಿದ ಶೈಲಿ, ತಲೆಯ ಟೋಪಿ. ಗಿಳಿ ಹೆದರಲು ಇನ್ನೇನು ಕಾರಣ? ಎದೆ ಧಸಕ್ಕಂತು. ಹೊಲದೊಡೆಯರ ಅಪ್ಪಣೆ ಇಲ್ಲದ tress passer ನಾನು. ಕಲ್ಲು, ಕುಡ್ಲು, ಹಗ್ಗ. ನಾಳೆ ನ್ಯೂಸ್. ಕಾಯೋ ಕರುಣಾಳು ವೆಂಕಟೇಶ… ವೆಂಕಟೇಶಾ… ಜಪ ಮಾಡಲೆ! ನನ್ನ ತಾಕಲಾಟದಲ್ಲಿ ಗಿಳಿ ಮೆಲ್ಲಗೆ ಹಾರಿ ಹೋಯಿತು. ಇನ್ನು ನನ್ನ ಗತಿ! ಸ್ವಲ್ಪ ದೂರದಲ್ಲೇ ಕಲ್ಲು ಎತ್ತಿಹಾಕಿ, ಮುಂದೆ ಬಂದ ಆತ `ನಮಸ್ಕಾರ ಮೇಡಂ… ನಾನು ವೆಂಕಟೇಶ’ ಎಂದರು. ಮಾತಿಲ್ಲದೆ ಪಿಳಿಪಿಳಿ ನೋಡಿದೆ.
`ನೀವು ಮದ್ದೂರು ಕಾಲೇಜಿನ ಪ್ರಿನ್ಸಿಪಾಲ್ ಆಗಿದ್ರಿ ಮೇಡಂ, ನೀವು ಮಂಡ್ಯದಲ್ಲೂ ಕೆಲಸ ಮಾಡಿದ್ದು ಗೊತ್ತು’ ಅಂತಾ ಕುಶಲೋಪರಿ ವಿಚಾರಿಸಿ `ಲೇಟಾಗಿ ಬಂದರೆ ಗಿಳಿ ಹೊರಟು ಹೋಗಿರ್ತವೆ, ಸ್ವಲ್ಪ ಬೇಗ ಬನ್ನಿ ಆರಾಮಾಗಿ ಫೋಟೋ ತಗೋಳಿ’ ಅಂದರು ವೆಂಕಟೇಶ್. `ಮೇವಿಗೆ ಜೋಳ ಕುಯ್ಯಬೇಕು, ಈ ಕುಡುಗೋಲ್ನ ಹರಿತ ಮಾಡ್ಕೊಳ್ಳೋಕೆ ಆ ಕಲ್ಲು, ಹಗ್ಗ ಹೊರೆ ಕಟ್ಟೋಕೆ… ಹೆದರಿದ್ರಾ’ ನಕ್ಕರು. ನಾನು ನಗಬೇಕೋ ಅಳಬೇಕೊ ಗೊತ್ತಾಗದೆ ನಾಲ್ಕು ಮಾತಾಡಿದೆ. ಅವರು ಮುಂದೆ ಸಾಗಿದರು. ಅವತ್ತು ಮತ್ತೆ ಗಿಳಿ ಬರಲಿಲ್ಲ. ನಾನೂ ಅಲ್ಲಿಂದ ಎದ್ದು ಅರ್ಧ ಕಿ.ಮೀ. ದೂರದ ಯತ್ತಗದಹಳ್ಳಿಗೆ ಬಂದು ಮಡಿವಾಳದ ಜೋಡಿ ಮರಿಗೆ ಹುಳುಹುಪ್ಪಟೆ ಹಿಡಿಯಲು ಬರುತ್ತವೆಂದು ಕಾಯುತ್ತಾ ಕೂತಿದ್ದೆ. ಅದೇ ವೆಂಕಟೇಶ್ ಮೇವಿನ ಹೊರೆ ಹೊತ್ತ ಬೈಕಿನಲ್ಲಿ ಬರ್ತಾ ಇದ್ದವರು ಗಾಡಿ ನಿಲ್ಲಿಸಿ `ಬೇಲಿ ಅಂಚಲ್ಲಿ ಕೂತ್ಕೊಬೇಡಿ, ಸ್ವಲ್ಪ ಈ ಕಡೆ ಬನ್ನಿ’ ಎಂದು ಎಚ್ಚರಿಸಿ ಹೋದರು. ಮುಂದೆ ಸರಿದು ಕೂತೆ. ಅದಾದ ಸ್ವಲ್ಪ ಹೊತ್ತಿಗೆ ನಾಲ್ಕಾರು ಅಡಿ ದೂರದಲ್ಲೇ ವಂಡರಕಪ್ಪೆಯೊಂದಕ್ಕೆ ಹಾವು ಬಾಯಿ ಹಾಕಿರಬೇಕು. ಜೊಂಡಿನ ಒಳಗಿನಿಂದ ಎದೆ ಸೀಳುವಂತೆ ಕಪ್ಪೆಯ ಆರ್ತನಾದ ಕೆಲಕ್ಷಣ ತಾರಕದಲ್ಲಿದ್ದು ತಗ್ಗಿಗಿಳಿಯಿತು. ನನ್ನ ಮೆದುಳಿನಿಂದ ಹರಿದ ಮಿಂಚಿನ ಎಳೆಯೊಂದು ಬೆನ್ನಿನ ಹುರಿಯ ಮೂಲಕ ಹಾದು ನೆಲಕಿಳಿಯಿತು. ಸಿಡಲಪ್ಪಳಿಸಿದಂತೆ ಮೈಯೆಲ್ಲಾ ಬಿಸಿಯೇರಿತ್ತು. ಕಾಯೋ ಕರುಣಾಳು ವೆಂಕಟೇಶ! ನಮೋ ವೆಂಕಟೇಶ!
ಇದೇ ಯತ್ತಗದಹಳ್ಳಿಯ ಊರಾಚೆ ಮುಸ್ಲಿಂ ಕುಟುಂಬವೊಂದು ಕಣದಲ್ಲಿ ಧಾನ್ಯ ತೂರುತ್ತಿದ್ದದನ್ನು ಕಂಡು ಹಕ್ಕಿ ಮರೆತು ತೂರುವ ಚಿತ್ರ ತೆಗೆಯುವ ಐಡಿಯಾ ತಲೆಯಲ್ಲಿ ತೂರಿಬಂತು. ಕ್ಯಾಮರಾ ಕೈಗೆತ್ತಿಕೊಂಡೆ, ಆ ಕುಟುಂಬದ ಯಜಮಾನ `ಮೇಡಂ, ಬೇಡ ಮೇಡಂ ತೆಗೆಯಬೇಡಿ’ ಎಂದ. ಹೀಗ್ಹೀಗೆ ಎಂದೆ. ಆದರೂ ಬೇಡಿ ಮೇಡಂ, ನಂ ಹೆಂಗಸ್ರ ಚಿತ್ರ ತೆಗೆಯಬೇಡಿ’ ಎಂದ ಮೇಲೆ `ಸರಿಯಪ್ಪ’ ಎಂದು ಮುಂದಡಿಯಿಟ್ಟೆ. ಬೇಕಾದರೆ ನಮ್ಮ ಫೋಟೋ ತೆಗೆಯಿರಿ ಎಂದು ಪೋಸ್ ಕೊಡೋದೆ. ಎಲಾ ಇವನ, ಇವನ ನ್ಯಾಯವೆ ಎಂದು ಒಂದೆರಡು ಚಿತ್ರ ತೆಗೆದೆ ಅಷ್ಟೆ.
ಚೀರನಹಳ್ಳಿಯ ಕಿರುದಾರಿಯಲ್ಲಿದ್ದ ಸಣ್ಣ ಸೇತುವೆ ಮೇಲೆ ಸ್ವಲ್ಪ ಹೊತ್ತು ಕೂರುವ ಅಭ್ಯಾಸ. ಮರಗಳ ನೆರಳಲ್ಲಿ ತಂಗಾಳಿಗೆ ಮುಖವೊಡ್ಡಿದಾಗ ಹೊಸ ಚೈತನ್ಯ. ಅಲ್ಲೊಂದು ಮತ್ತಿ ಮರ. ಅದರ ಹಣ್ಣಿಗೆ ಹಲವು ಹಕ್ಕಿ ಬರುತ್ತಿದ್ದವು. ಹಕ್ಕಿ ಮಾತ್ರ ಯಾಕೆ ದಾರಿಯಲ್ಲಿ ಹೋಗುವವರೂ ಕೈಗೆಟುಕುತ್ತಿದ್ದ ಹಣ್ಣು ತಿಂದು ಬಾಯಿಗೆ ಬಣ್ಣ ಬರಿಸಿಕೊಳ್ಳುತ್ತಿದ್ದರು. ಆ ಮರದ ಮೇಲೆ ಕಂಡ Asian Paradise flycatcherಗೆ ಕಾಯುತ್ತಿದ್ದರೆ ಅದು ಬಾಲಬೀಸುತ್ತಾ ಮೇಲೆ ಹಾರಿಯೇ ಹೋಗಿತ್ತು, ನಾನೇ ಪ್ರಮಾಣ ಮಾಡಿ ಇದು ಬಾಲದಂಡೆ ಎನ್ನುವಂತಿದ್ದ ಚಿತ್ರ ತೆಗೆದಿದ್ದೆ. ನಂತರದ ನಾಲ್ಕಾರು ದಿನ ಹೋಗಿದ್ದರೂ ಅದು ಕಾಣಸಿಗದೆ, ಸಿಕ್ಕಿದ್ದನ್ನೇ ಮರೆತೆಬಿಟ್ಟಿದ್ದೆ. ಮತ್ತೊಂದು ಮುಂಜಾನೆ ಸೇತುವೆ ಮೇಲೆ ಕುಳಿತಾಗ ಕೀಟ ಅಟ್ಟುತ್ತಾ ಕಣ್ಣಿಗೆ ಎಷ್ಟು ಹತ್ತಿರ ಹಾರಿತೆಂದರೆ ಹಕ್ಕಿ ಯಾವುದೆಂದು ಗೊತ್ತಾಗದೆ ಕೂತಿದ್ದೆ. ಹಾರಿದ ಹಕ್ಕಿ ನನ್ನ ಪಕ್ಕದ ಗಿಡದ ಮೇಲೆ ಕೂತಿತು. ಅರೆ! ಪ್ಯಾರಡೈಸ್. ಕ್ಯಾಮೆರಾದ ಲೈಟ್, ಸ್ಪೀಡ್, ಅಪರ್ಚರ್ ಯಾವುದನ್ನೂ ಹೊಂದಿಸಲಿಲ್ಲ. ಆಲೋಚನೆಗೂ ಅವಕಾಶವಿರಲಿಲ್ಲ. ಹಾರಿ ಹೋದೀತೆಂಬ ಆತಂಕ. ಕ್ಲಿಕ್ ಬಂದರೆ ಲಕ್. ಸರಿದರೆ ಹೊತ್ತು ಜಾರಿದ ಮುತ್ತು. ಮೂರು ಮತ್ತೊಂದು ಕ್ಲಿಕ್. ಅದು ಹಾರಿತು, ನಾನು ಭಾವ ಸಮಾಧಿಯಿಂದ ಹೊರಬಂದೆ. ಸ್ವರ್ಗದ ಹಕ್ಕಿ ಸಿಕ್ಕ ಸುಖದ ಮುಂದೆ ಇನ್ನೇನು ಬೇಕೆನಿಸಲಿಲ್ಲ. ಮುಂದಿನ ನಾಲ್ಕೈದು ದಿನ ಮತ್ತೆ ಸಿಕ್ಕೀತೆಂಬ ಕನಸಿನಿಂದ ಅದೇ ಜಾಗದಲ್ಲಿ ಕಾಯ್ದೆ, ಬರಲಿಲ್ಲ. ಸಿಗಲಿಲ್ಲ ಎಂಬ ಕೊರಗಿರಲಿಲ್ಲ. `ಇರುವ ಭಾಗ್ಯವ ನೆನೆದು ಬಾರೆನೆಂಬುವುದನ್ನು ಬಿಡು ಹರುಷಕ್ಕಿದೇ ದಾರಿ’ ಎಂದು ಡಿ.ವಿ.ಜಿ ಹೇಳಿದ ಮಾತು ಮನದಲ್ಲಿದ್ದ ಮೇಲೆ ಕೊರಗೆಲ್ಲಿಯದು.
ಒಂದು ಬೆಳಿಗ್ಗೆ ಚೀರನಹಳ್ಳಿಯ ಗದ್ದೆ ಬದಿಯ ರಸ್ತೆಯಲ್ಲಿ ಕಾಯುತ್ತಿದ್ದಾಗ ತಿರುಗಿ ನೋಡಿದರೆ ಹತ್ತಿಪ್ಪತ್ತು ಮಾರು ದೂರದಲ್ಲಿ Indian golden jackal ಮರಿ ಮತ್ತು ಅಮ್ಮ ನಿಂತಿವೆ. ಒಂದು ಬೆಳಕಿನಲ್ಲಿ, ಮತ್ತೊಂದು ಪೂರಾ ನೆರಳಿನಲ್ಲಿ. ಮೈಯಲ್ಲಿ ಮಿಂಚಿನ ಸಂಚಾರವಾಗದಿದ್ದೀತೆ! ಥಟ್ ಅಲ್ಲ ಪಟಾರ್ ಅಂತ ಫೋಕಸ್ ಮಾಡಿಕೊಂಡೆ. ಕ್ಲಿಕ್ ಮಾಡಬೇಕು, ಅಷ್ಟರಲ್ಲಿ ಆ ಕಡೆಯಿಂದ ಬೈಕ್ ಬರ್ತಾ ಇರೋದು ಕಾಣಿಸಿತು. ಅವಿನ್ನು ನಿಲ್ಲುತ್ತವೆಯೆ? ಓಡೋದು ಗ್ಯಾರಂಟಿ ಅಂತಾ ಆಯ್ತು. ಅಮ್ಮ ಸಿಗಲೇ ಇಲ್ಲ. ಮರಿಯ ಮೂರ್ನಾಲ್ಕು ಕ್ಲಿಕ್ ಮಾಡಲು ಅಷ್ಟೆ ಆಗಿದ್ದು. ಹಕ್ಕಿ ಜೊತೆಗೆ ನರಿ ಬೋನಸ್. ಯಾರಿಗುಂಟು ಯಾರಿಗಿಲ್ಲ. ಬೆಳಿಗ್ಗೆ ಎದ್ದು ನರಿ ಮುಖ ನೋಡಿದರೆ ಅದೃಷ್ಟ ಅಂತೆ. ಬೆಳಿಗ್ಗೆ ಹಕ್ಕಿಗೆಂದು ಬಂದವಳಿಗೆ ನರಿಯೆ ಎದುರಾದರೆ ಡಬ್ಬಲ್ ಬೋನಸ್ ತಾನೆ.
ಇದೇ ರಸ್ತೆಯ ಮರದಲ್ಲಿ ಮಿನಿವೆಟ್ ಅಂದರೆ ಚಿತ್ರಪಕ್ಷಿ ಗೂಡು ಮಾಡಿತ್ತು. ಬೆಳಿಗ್ಗೆ ಹಾಜರಾತಿ ಹಾಕಿದರೂ ಒಂದು ದಿನ ಸಂಜೆಗೂ ಆಸೆ ಸೆಳೆಯಿತು. ಹೋದರೆ ಏನೂ ಸದ್ದಿರಲಿಲ್ಲ. ಕಿರುಹಾದಿ ದಾಟಿ ಮೈನ್ ರೋಡಿಗಿಳಿದರೆ ನೀಲಣ್ಣ ರಸ್ತೆ ಬದಿಯಲ್ಲಿ ಕುಳಿತ್ತಿದ್ದ. ನಾನೂ ರಸ್ತೆಯಲ್ಲೆ ಕುಳಿತೆ, ಅವನನ್ನು ಹಿಡಿಯಲು. ರಸ್ತೆಯಲ್ಲಿ ಗಾಡಿ, ಜನ ಓಡಾಡಿದರೂ ಅವ ಮೂರು ಕಾಸಿನ ಮುಲಾಜಿಲ್ಲದೆ ಕುಳಿತು ನಾಲ್ಕೆಂಟು ಚಿತ್ರ ಕ್ಲಿಕ್ಕಿಸಲು ಅವಕಾಶ ಇತ್ತ. ಬಳಿಕ ಫ್ರೇಮ್ ದಾಟಿ ಹಾರಿ ದೂರ ಕುಳಿತು ಕರೆದ. ಕತ್ತಲೂ ಇಳಿಯುತ್ತಿತ್ತು. ಹೋಗತ್ಲಾಗೆ ಎಂದು ಎದ್ದು ಮನೆಗೆ ಬಂದೆ. ಸಿಕ್ಕಿದ್ದಕ್ಕೆ ತೃಪ್ತಿಯಂತೂ ಇತ್ತು. ಲೈಫಲ್ಲೂ ಇಂತಹ ಅನಿರೀಕ್ಷಿತ ಅವಕಾಶಗಳ ಬುತ್ತಿ ನಮ್ಮ ಪಾಲಿಗೆ ದಕ್ಕುತ್ತಿರಲಿ.
ಚೀರನಹಳ್ಳಿಯ ಒಂದು ತೆಂಗಿನ ತೋಟವನ್ನು ನನ್ನದೆಂದೆ ಹಕ್ಕಿನಿಂದ ಹೋಗಿ ಕೂರುತ್ತಿದ್ದೆ. ಹಕ್ಕಿಗಳು ಬಂದಾಗ ಹೊರಳು, ಇಲ್ಲದಿರೆ ತೆಂಗಿನ ನೆರಳು. ಗಿಳಿ, ನವಿಲು, ಕಂಚುಗಾರ ಕುಟ್ರ, ಕೆಂಬೂತ, ಸೂರಕ್ಕಿ ಹೀಗೆ ಹತ್ತು ಹಲವು ವಿಹಗಗಳ ವಿಹಾರ ತಾಣ. ಕಂಚುಗಾರ ಮರಿಗಳಿಗಾಗಿ ಪುರಸೊತ್ತಿಲ್ಲದೆ ಮರ ಕುಟ್ಟಿ ಗೂಡು ಮಾಡಿತ್ತು. ಸೊಪ್ಪುಕುಟ್ರ ಕೂಗಿ ಕರೆಯುತ್ತಿತ್ತು. ಗಿಳಿಗಳಿಗಂತೂ ತಮ್ಮದೆ ನೆಲೆಯೆಂಬ ಧಿಮಾಕಿನ ಹಾರಾಟ. ಒಮ್ಮೆ ತೆಂಗಿನ ತುದಿಯಲ್ಲಿ ಗಿಳಿಯೊಂದಿತ್ತು. ಗಿಳಿಗೆ ಕ್ಯಾಮರಾ ಕೀಲಿಸಿದ್ದೆ. ಮೆಲ್ಲನೆ ಮೇಲೆರಿತು ಹೊಂಬೆನ್ನಿನ ಮರಕುಟುಕ. ಗಿಳಿ ಸಣ್ಣ ಸೌಂಡ್ ಮಾಡಿತು. ಕುಟುಕ ಮತ್ತೂ ಏರುತ್ತಿದ್ದಂತೆ ದೂರ್ವಾಸ ದೃಷ್ಟಿ ಬೀರುತ್ತಾ ತಿರುಗಿ ನೋಡೋದೆ ಈ ಗಿಳಿರಾಯ. ಕುಟುಕ ಸುಟ್ಟೇನೂ ಹೋಗಲಿಲ್ಲ. ಕೆಲ ಕಾಲದ ಬಳಿಕ ಗಿಳಿಯೂ ಹಾರಿಹೋಯಿತು, ಕುಟುಕವೂ ಸರಿಯಿತು. ಆದರೆ ಜಾಗ ತನ್ನದೆನ್ನುವಂತೆ ಹಕ್ಕಿನಿಂದ ಕೆಕ್ಕರಿಸಿ ಹಕ್ಕಿ ನೋಡಿದ ನೋಟದ ಸಿಟ್ಟು ಮಾತ್ರ ಚಿತ್ರವಾಗಿ ಸೆರೆಯಾಯಿತು.
ಚೀರನಹಳ್ಳಿಯ ಕಾಲುದಾರಿಯಲ್ಲಿ ಹೋಗುವಾಗ ನನ್ನ ಸ್ಕೂಟರ್ ನೆಲಮೋಹಿಯಾಯಿತು. ಎತ್ತಿನ ಗಾಡಿ ಓಡಾಡಿ ಕೊರಕಲಾಗಿ ಹುಲ್ಲು ಬೆಳೆದು ದಾರಿ ಕಾಣುತ್ತಿರಲಿಲ್ಲ. ನಾನು ಗಾಡಿಯಡಿಯಲ್ಲಿದ್ದೆ. ಸುತ್ತಮುತ್ತ ಯಾರೂ ಇರಲಿಲ್ಲ ಗಾಡಿ ಎತ್ತಿ ನನ್ನನ್ನು ಬಚಾವೋ ಎಂದು ಕೂಗಲು. ಗಾಡಿಯಲ್ಲೇ ಕ್ಯಾಮೆರಾ ಲೆನ್ಸಿದ್ದವು. ಅರೆಕ್ಷಣ ಗಾಡಿಯಡಿ ರಿಲ್ಯಾಕ್ಸಿಸಿಕೊಂಡೆ. ಬಿದ್ದ ಗಾಬರಿಯಿಂದ ಹೊರಬರಲು ಅದಲ್ಲದೆ ಬೇರೆ ದಾರಿ ಇರಲಿಲ್ಲ. ನಿನಗೆ ನೀನೇ ಸಖಿ ಚಂದ್ರಮುಖಿ ಎನ್ನುತ್ತಾ ನಿಧಾನವಾಗಿ ಗಾಡಿಯನ್ನು ಅಡಿಯಿಂದಲೇ ಮೇಲೆತ್ತಿದೆ, ಹೊರಬಂದೆ. ಕ್ಯಾಮೆರಾ ಲೆನ್ಸ್ ಚೆಕ್ ಮಾಡಿದೆ. ಕಾಲುಗಳ ಸ್ಥಿತಿ ಚೆಕ್ ಮಾಡಲು ಅಡ್ಡಾಡಿದೆ. ನೋಡ್ತೀನಿ, ಒಂದಡಿ ಆಚೆ ಬಿದ್ದಿದ್ದರೆ ಮೂರ್ನಾಲ್ಕು ಅಡಿ ಕೆಳಗಿದ್ದ ಗದ್ದೆಗೆ ಗಾಡಿಸಮೇತ ಬಿದ್ದಿರುತ್ತಿದ್ದೆ. ನನ್ನ ಕಥೆ ಏನಾಗಿರುತ್ತಿತ್ತೋ!? ಓಹೋ ಅವನಿಗೆ ನಾನಿನ್ನೂ ಕೆಲವು ಚಿತ್ರ ತೆಗೆಯೋದು ಬೇಕಿದೆ ಎಂದುಕೊಂಡೆ. ಫ್ರೆಂಡೆ ನಿನಗೆ ಕೋಟಿ ನಮನವನ್ನು ಸಲ್ಲಿಸುವೆ ಸ್ವೀಕರಿಸೋ ಎಂದೆ ಕೈಯೆತ್ತದೆ ಮನದಲ್ಲೆ ಮುಗಿದೆ.ಚೀರನಹಳ್ಳಿಯ ಗದ್ದೆಯೊಂದಕ್ಕೆ ಸಣ್ಣ ಕಾಲುವೆ ದಾಟಿ ಹೋಗಬೇಕಿತ್ತು. ನಾನೇ ಮಹಾಶೂರೆ, ಎಂತೆಂತಹ ದಾರಿಯಲ್ಲಿ ಹೋಗಿದ್ದೀನಿ, ಇದೇನ್ಮಹಾ ಎಂದು ಜೂರತ್ತಿನಿಂದಲೇ ಸ್ಕೂಟರಿನಲ್ಲೇ ದಾಟಹೋದೆ. ಅಲ್ಲಿ ನೀರು ಮಾತ್ರವಲ್ಲ, ಜೊತೆಗೆ ಕೆಸರು, ಪಾಚಿ, ಮರಳೂ ಇತ್ತು. ಹೋದೆನಾ, ಹೋದೆ. ಆದರೆ ಮರುಕ್ಷಣವೇ ಜಲಶಯ್ಯೆಯಲ್ಲಿದ್ದೆ, ಸ್ಕೂಟರ್ ಸಮೇತ. ಕ್ಯಾಮೆರಾ, ಲೆನ್ಸಿನ ಬ್ಯಾಗ್ ನೀರಿಗೆ ಇಣುಕುತ್ತಿತ್ತು. ಕೂಗಿ ಕರೆಯಲೂ ಸುತ್ತಮುತ್ತಣ ಗದ್ದೆ ಬಯಲಿನಲ್ಲಿ ಯಾರೂ ಇರಲಿಲ್ಲ. ಇನ್ನೇನು ಮಾಡೋದು! ನಾನೇ ಎದ್ದೆ. ನಾನು, ನನ್ನ ಬಟ್ಟೆ ನೀರಿನಲ್ಲಿ ತೊಯ್ದು ತೊಪ್ಪಡಿಯಾಗಿ ಕೆಸರಿನ ಒಡವೆ ಧರಿಸಿದ್ದೆವು. ಕ್ಯಾಮೆರಾ ಬ್ಯಾಗ್ ಕೈಗೆತ್ತಿಕೊಂಡೆ, ಕ್ಯಾಮೆರಾ ಲೆನ್ಸ್ ಜೋಡಿಸಿ ನೋಡಿ, ತಲೆ ಮೇಲೆತ್ತಿ ಕೂಗಿದೆ, `ಥ್ಯಾಂಕ್ಸ್ ಕಣೊ ಗೆಳೆಯನೆ, ಇನ್ನು ಜಾಸ್ತಿ ರಿಸ್ಕ್ ತಗೊಳಲ್ಲ ಕಣೊ’. ಬೀಳುವುದು ಏಳುವುದು ಬಾಳಿನಲ್ಲಿ ಸಹಜ ತಾನೆ! ಆದರೆ ಬಿದ್ದ ಮೇಲೆ ಏಳಲಾಗದಿದ್ದರೆ ಹಕ್ಕಿ ಹಿಡಿಯಲು ಆಗಲ್ವೆ? ಅದಕ್ಕೆ ಇಂತಹ ಕಿರುದಾರಿಗಳಲ್ಲಿ ಹಕ್ಕಿ ಹಿಡಿಯುವ ಸಾಹಸ ಕೈಬಿಟ್ಟೆ. ಬಿಟ್ಟಿದ್ದಕ್ಕೆ ಇನ್ನೂ ನಾನು ಸುಸ್ಥಿಯಲ್ಲುಳಿದು ಹಕ್ಕಿ ಅರಸುತ್ತಿರುವೆ, ಚಿತ್ರ ಅರಳಿಸುತ್ತಿರುವೆ.
। ಇನ್ನು ಮುಂದಿನ ವಾರಕ್ಕೆ ।
0 ಪ್ರತಿಕ್ರಿಯೆಗಳು