ಲೀಲಾ ಅಪ್ಪಾಜಿ
(ಹುಸೇನ್ ರಚಿಸಿದ ಬುದ್ಧ ಹಾಗೂ ಗಾಂಧಿ ವರ್ಣಚಿತ್ರ)
ಅವನು ಬದ್ಧ ಹಾಗೂ ಬುದ್ಧ
ಸಿದ್ಧಾರ್ಥನಾಗಿದ್ದವ
ಅರ್ಥಕ್ಕೆ ಸೀಮಿತವಾದರೆ ಅನರ್ಥ
ಎನ್ನುವುದನ್ನರಿತ.
ಮೋಹದ ಬಲೆಯಿಂದ ಪಾರಾಗಲು
ನಡುರಾತ್ರಿಯಲ್ಲಿ ಬೆಳಕ ಅರಸಿ
ಅರಸಿಯ ತೊರೆದು ಹೊರಟೇಬಿಟ್ಟ
ಅಣೋರಣಿಯಾನ್ ಮಹತೋಮಹೀಯಾನ್
ಶೂನ್ಯದ ಹಾದಿಯನು ಹಿಡಿದವ
ಮತ್ತೆ ಜಗದ ಬಾಗಿಲಿಗೆ
ಬೆಳಕಿನೊಡನೆ ಬಂದ
ಬಳಿಗೆ ಬಂದವರಿಗೆ
ಬೆಳಕ ಝಳಕ ಮಾಡಿಸಿದ
ಇವನು ಗಾಂಧಿ ಮತ್ತು ಅಪ್ಪ
ಬ್ಯಾರಿಸ್ಟರ್ ಗಾಂಧಿ
ಕೋರ್ಟಿನ ಕಟ್ಟಳೆಗೆ ವಾದಿಸುತ್ತಾ
ಜನರೊಡನೆ ಸಂವಾದಿಸುತ್ತಾ
ಪ್ರಯೋಗಗಳಿಗೆ ಒಡ್ಡಿಕೊಂಡ
ಬಾ ಎಂದ, ಬಾಗು ಎಂದ, ಬಾ..ಗೆ
ಹೆತ್ತ ನಾಲ್ವರಿಗೆ ಲೋಕ ಬಯಸಿದಂತೆ
ಅಪ್ಪನಾಗಲಿಲ್ಲ ನಿಜ…
ನಡುರಾತ್ರಿಯಲಿ ಗಡಿ ದಾಟುವಂತೆ ಮಾಡಿ
ಸ್ವಾತಂತ್ರ್ಯದ ಬೆಳಕ ನೀಡಿ
ದೇಶಕ್ಕೆ ಅಪ್ಪನಾದ..
ಹಾಲಾಹಲವನಿತ್ತವರಿಗೂ
ಶಾಂತಿಯಮೃತವನಿತ್ತ.
ಇಬ್ಬರೂ ತಿರುತಿರುಗಿ ತಿರುಗಿದರು
ಲೋಕ ಕೊಟ್ಟುದ ಲೋಕಕಿತ್ತವರು.
ಅವನೋ ಅಹಿಂಸೆಯೇ ಪರಮ ಧರ್ಮ ಎಂದ
ಇವನೋ ಅಹಿಂಸೆಯೇ ನನಗೂ ಧರ್ಮವೆಂದ
ಅವನೂ ಧ್ಯಾನ ಮಾಡಿ ಬೆಳಕು ಪಡೆದ
ಇವನೂ ಧ್ಯಾನ ಮಾಡಿ ಬೆಳಕು ನೀಡಿದ
ಬುದ್ಧ…. ಬೇರೆಯಲ್ಲ; ಗಾಂಧಿಯೂ… ಬೇರೆಯಲ್ಲ.
ನೈಸ್ ಕವಿತೆ