ಲಾಂಗೂಲಾಚಾರ‍್ಯರು ಇಲ್ಲಿದ್ದಾರೆ..

ಎಂ ಬಿ ರಾಜೇಶ್

ಗೋವೆಯಲ್ಲಿರುವ ನಮ್ಮ ಕುಲದೇವರ ಸನ್ನಿಧಿಗೆ ವರ್ಷದಲ್ಲಿ ಎರಡು ಬಾರಿ ತಪ್ಪದೇ ಹೋಗಿ ಬರುವುದು ರೂಢಿ. ಮೈಸೂರಿನಿಂದ ನೇರ ಟ್ರೈನ್ ಸೌಕರ್ಯವಿಲ್ಲದ ಕಾರಣ ನೈಟ್ ಟ್ರೈನಿನಲ್ಲಿ ಹುಬ್ಬಳ್ಳಿಗೆ ಹೋಗಿ ಮಧ್ಯಾಹ್ನ ಹಳೆಯ ಬಸ್ ನಿಲ್ದಾಣದ ಎದುರಿರುವ ಬಸವೇಶ್ವರ ಖಾನಾವಳಿಯಲ್ಲಿ ಜೋಳದ ರೊಟ್ಟಿ ಊಟ ಮಾಡಿ ಸಂಜೆ ಗಿರ್ಮಿಟ್ ಮತ್ತು ಮಿರ್ಚಿ ಬಜ್ಜಿ ಸವಿದು ಹುಬ್ಬಳ್ಳಿಯ ಶಹರಿನಲ್ಲಿ ಒಂದು ಸುತ್ತು ಹೊಡೆದು ಮಡಗಾಂವ್ ಗೆ ಮುಂದಿನ ಪ್ರಯಾಣ ಬೆಳೆಸುವುದು ಸಹ ರೂಢಿ.

ಒಮ್ಮೆ ಹೀಗೆ ಮಡಗಾಂವ್ ಗೆ ಹೋಗಲು ರೈಲ್ವೆ ಪ್ಲಾಟ್‌ಫಾರ್ಮ್ ಬೆಂಚಿನಲ್ಲಿ ಕುಳಿತು ಟ್ರೈನಿನ ನಿರೀಕ್ಷೆಯಲ್ಲಿದ್ದಾಗ ನನ್ನ ಪಕ್ಕದಲ್ಲಿ ಕುಳಿತಿದ್ದ ಒಬ್ಬ ವ್ಯಕ್ತಿ ವಿಚಿತ್ರ ಲೇಖಕನ ಹೆಸರಿರುವ ನೀಲಿ ಅಂಚಿನ ನಗೆ ಬರಹಗಳ ಕನ್ನಡ ಪುಸ್ತಕವೊಂದನ್ನು ಓದುತ್ತಿದ್ದರು. ಮೈಸೂರಿಗೆ ಬಂದ ನಂತರ ಲೇಖಕನ ಬಗ್ಗೆ ಮತ್ತು ಲೇಖಕನು ರಚಿಸಿರುವ ಕೃತಿಗಳ ಬಗ್ಗೆ ಹುಡುಕಲಾರಂಭಿಸಿದೆ.

ಕರ್ತೃವಿನ ಪರಿಚಯ:
‘ಪ್ರಬಂಧಗಳಲ್ಲಿ ಹಾಸ್ಯ ಅಂದರೆ ಏನು ಅನ್ನೋದನ್ನ ನೋಡಬೇಕೆಂದು ಇಷ್ಟಪಡುವವರು ಮತ್ತು ಪತ್ರಕರ್ತರ ಭಾಷೆಯನ್ನು ತಿದ್ದುವುದಕ್ಕೆ ಸಹಾಯ ಮಾಡಿ ಅವರಿಗೆ ಮಾರ್ಗದರ್ಶಕರಾಗಿ ನಿಂತವರು ಜನಾನುರಾಗಿಗಳು ಮತ್ತೆ ಸಮಾಜದ ನಾಡಿಯನ್ನು ಮೀಟಿದವರು. ಇವರು ಪಾವೆಂ ಆಚಾರ್ಯ ಅಂತ ಹೇಳಿ ಪಾಡಿಗಾರು ವೆಂಕಟರಮಣ ಆಚಾರ್ಯ (೧೫ನೇ ಫೆಬ್ರವರಿ ೧೯೧೫ – ೪ನೇ ಎಪ್ರಿಲ್ ೧೯೯೨).

ಬಹಳ ದೊಡ್ಡ ಹೆಸರು ಅವರದು. ಅದರಿಂದ ಅವರಿಗೆ ಎಷ್ಟು ಅನುಕೂಲ ಆಗಿದೆ ಅಂದ್ರೆ ಬೇಕಾದಷ್ಟು ತರಹ ಹೆಸರು ಮಾಡಿಕೊಂಡಿದ್ದಾರೆ ಪಾ.ವೆಂ., ಪಾ.ವೆಂ. ಆಚಾರ್ಯ, ಪಿ.ವಿ. ಆಚಾರ್ಯ ಈ ಎಲ್ಲ ಹೆಸರುಗಳಿಂದಲೂ ಪ್ರಸಿದ್ಧರಾಗಿದ್ದಾರೆ.

ಉಡುಪಿಯ ಈ ವ್ಯಕ್ತಿಗೆ ತನ್ನ ವಿಶಿಷ್ಟ ಹರಟೆಗಳೆಲ್ಲ ನಗೆ, ಚೇಷ್ಟೆ, ವಕ್ರತೆ, ವಿಡಂಬನೆ, ಕೆಣಕಾಟ, ಕಿಡಿಗೇಡಿತನಗಳಿಂದ ಕೂಡಿರುವಾಗ ಮೇಲಿನ ಗಂಭೀರ ಹೆಸರುಗಳಾವುವೂ ಸರಿಯಲ್ಲ ಎನಿಸಿರಬೇಕು. ಆದ್ದರಿಂದ ‘ಲಾಂಗೂಲಾಚಾರ‍್ಯ’ ಎಂಬುದಾಗಿ ಸ್ವನಾಮಕರಣ ಮಾಡಿಕೊಂಡಿದ್ದಾರೆ. ಅಲ್ಲಿಗೂ ಬಾಲದಯ್ಯ ಅಂತಲೋ ಲಾಂಗೂಲಯ್ಯ ಅಂತಲೋ ಇಟ್ಟುಕೊಳ್ಳದೆ ‘ಆಚಾರ್ಯ’ ಎಂಬ ದಪ್ಪ ಬಿರುದಿನ ಮೊರೆಹೊಕ್ಕಿದ್ದಾರೆ. ಅವರ ಲೇವಡಿ ಸ್ವಭಾವಕ್ಕೆ ಇದೊಂದು ಒಳ್ಳೆಯ ನಿದರ್ಶನ ಎಂದು ಫ್ರೊ. ಅ.ರ.ಮಿತ್ರ ಹೇಳಿದ್ದಾರೆ.

ಲಾಂಗೂಲವಿರುವ ಆಚಾರ್ಯ, ಅಂದರೆ ಬಾಲವಿರುವ ನಮ್ಮ ಪೂರ್ವಜರನ್ನು ನೆನಪಿಸುವಂಥ ಹೆಸರನ್ನು ‘ಲಾಂಗೂಲಾಚಾರ‍್ಯ’ ಎಂಬ ಕಾವ್ಯನಾಮದಿಂದ ನಗೆಬರಹಗಳನ್ನು ಬರೆಯುತ್ತಿದ್ದರು.

ಲಾಂಗೂಲವಂತ ಜಾತಿಗಳ ಬಗ್ಗೆ ಪಾವೆಂ ಆಚಾರ್ಯರಿಗೆ ಇರುವ ಆದರವೊಂದು ಮತ್ತು ಅವುಗಳೊಡನೆ ಮನುಷ್ಯ ಜಾತಿ ಪುನಃ ಸಮಾವೇಶ ಹೊಂದಿದರೇನೇ ಅದರ ಉದ್ಧಾರ ವಿದೆಯೆಂಬ ಅಚಲ ವಿಶ್ವಾಸವೊಂದು ಇವೆರಡು ಅವರು ಈ ಬಿರುದು ಸ್ವೀಕರಿಸಲು ಕಾರಣ. ಯಾವಾಗ ವಾನರನು ಬಾಲ ಕಳೆದುಕೊಂಡು ನರನಾದನೋ ಅಂದಿಗೇ ಅವನಲ್ಲಿ ದುರಾಶೆ, ವಂಚನೆ ಮೊದಲಾದ ದುರ್ಬುದ್ಧಿಗಳು ಹುಟ್ಟಿದವು‌.
ನಮ್ಮ ವಾನರ, ಅವನು ಕರ್ಮಯೋಗಿಯಾದರೂ ಅದರ ಫಲದಲ್ಲಿ ಅನಾಸಕ್ತ.

ಹನುಮಂತನಿಗೆ ಬಹುಮಾನವಾಗಿ ಮುತ್ತಿನ ಸ್ವರವೊಂದು ಸೀತಾಮಾತೆ ಕೊಡುತ್ತಾಳಂತೆ. ಹನುಮಂತನು ಅದರ ಒಂದೊಂದೇ ಮುತ್ತನ್ನು ಕಿತ್ತು ಕೆರೆಯಲ್ಲಿ ಹಾಕಿ ಅದರ ಸಪ್ಪಳದಿಂದ ಸಂತುಷ್ಟನಾಗುತ್ತಾನೆ. ಪಾರ್ಥಿವ ಸಂಸತ್ತಿನಲ್ಲಿ ಅವನೆಷ್ಟು ವಿರಕ್ತ. ಬಾಲವಿರುವವರ ಸದ್ಗುಣಗಳನ್ನು ಬಾಲಹೀನರು ಅನುಸರಿಸಿದರೆ ಲೋಕಕ್ಕೆ ಎಷ್ಟು ಸುಭಿಕ್ಷೆಯಾದೀತು. ಅದಕ್ಕೇ ಪಾವೆಂ ಆಚಾರ್ಯರು ಆ ಬಿರುದನ್ನು ಧರಿಸಿರುವುದು ಆಗಿ ‘ಲೋಕದ ಡೊಂಕು’ ವಿಡಂಬನಾ ಲೇಖನಗಳ ಸಂಕಲನದಲ್ಲಿ ಹೇಳಿದ್ದಾರೆ.

ಪಾಡಿಗಾರು ಲಕ್ಷ್ಮೀನಾರಾಯಣಾಚಾರ ಮತ್ತು ಸೀತಮ್ಮ ದಂಪತಿಗಳಿಗೆ ಐವರ ಸಂತಾನದಲ್ಲಿ ಪಾವೆಂ ಆಚಾರ್ಯರು ಕಿರಿಯರು. ಐದನೇ ವಯಸ್ಸಿನಲ್ಲಿ ಪಿತೃವಿಯೋಗ. ಆರ್ಥಿಕ ಅಡಚಣೆಯಾಗಿ ತಮ್ಮ ಶಿಕ್ಷಣವನ್ನು ಮೆಟ್ರಿಕ್‍ವರೆಗೆ ಸೀಮಿತಗೊಳಿಸಬೇಕಾಯಿತು. ಹೋಟೆಲ್ನಲ್ಲಿ ಮಾಣಿಯಾಗಿ, ಬಿಲ್ ರೈಟರ್, ಮುದ್ರಣ ಕೆಲಸ, ಶಾಲೆಯಲ್ಲಿ ಶಿಕ್ಷಕನಾಗಿ, ಅಂಗಡಿ ಗುಮಾಸ್ತ, ಕಂಪೆನಿ ಸೆಕ್ರೆಟರಿ, ಪ್ರೆಸ್ ಮೆನೇಜರ್, ಅಕೌಂಟೆಂಟ್ ಮುಂತಾದ ಉದ್ಯೋಗಗಳಲ್ಲಿ ಕೆಲಸ ಮಾಡಿದ ನಂತರ ಸಂಯುಕ್ತ ಕರ್ನಾಟಕ ಸಂಸ್ಥೆಯಲ್ಲಿ ಕರ್ಮವೀರ ಉಪಸಂಪಾದಕರಾಗಿ ಪತ್ರಿಕಾ ವ್ಯವಸಾಯ ಆರಂಭಿಸಿದರು.

ವೈಯಕ್ತಿಕ ಕಾರಣಗಳಿಂದಾಗಿ ಕರ್ಮವೀರ ಪತ್ರಿಕೆಯ ಮುಖ್ಯ ಸಂಪಾದಕರಾದ ಎಚ್.ಆರ್. ಪುರೋಹಿತ್ ರವರು ಆರು ವಾರಗಳ ದೀರ್ಘಕಾಲ ರಜೆಯ ಮೇಲೆ ಹೋಗಬೇಕಾದ ಸಂದರ್ಭದಲ್ಲಿ ಅವರ ಜವಾಬ್ದಾರಿಯನ್ನು ಆಚಾರ್ಯರ ಹೆಗಲಿಗೆ ವಹಿಸಲಾಗಿತ್ತು. ಅವರ ಲೇಖನಗಳು ಸಮೂಹದೊಂದಿಗೆ ತ್ವರಿತ ಜನಪ್ರಿಯತೆಯನ್ನು ಗಳಿಸಿ ನಿಯತಕಾಲಿಕದ ಪ್ರಸರಣವನ್ನು ಹೆಚ್ಚಿಸುವಲ್ಲಿ ಅವರು ಕಾರಣವಾದಿಗಳೆಂದು ಪರಿಗಣಿಸಲ್ಪಟ್ಟಿದ್ದಾರೆ.

೧೯೫೯ ರಲ್ಲಿ ಕಸ್ತೂರಿ ಡೈಜೆಸ್ಟ್ ಪತ್ರಿಕೆ ಆರಂಭವಾದಾಗ ಪಾವೆಂ ಆಚಾರ್ಯರಿಗೆ ಅದರ ಸಂಪಾದಕತ್ವವನ್ನು ವಹಿಸಿಕೊಡಲಾಯಿತು. ಒಂದೂವರೆ ಸಾವಿರಕ್ಕೂ ಹೆಚ್ಚು ಹಾಸ್ಯ ಲೇಖನವನ್ನು ಬರೆದ ಕೀರ್ತಿ ಇವರಿಗೆ ಸಲ್ಲುತ್ತದೆ. ಪಾವೆಂ ಆಚಾರ್ಯರ ಸಹಧರ್ಮಿಣಿಯ ಹೆಸರು ಲಕ್ಷ್ಮೀದೇವಿ. ಸಂತಾನಲಕ್ಷ್ಮಿಯ ಕೃಪೆಯಿಂದ ಇವರಿಗೆ ಎಂಟು ಮಕ್ಕಳು. ವಿದ್ಯಾದೇವತೆ ಸರಸ್ವತಿಯ ಕೃಪೆ ಪಾವೆಂ ಆಚಾರ್ಯರ ಮೇಲೆ ದಾರಾಳವಾಗಿದ್ದರು ಜೀವನವಿಡಿ ಧನಲಕ್ಷ್ಮಿ ಕೃಪೆಯಿಂದ ವಂಚಿತರಾಗಿದ್ದರು.

ಸಾಗರತನಯೆ ಎಂಬ ಹೆಸರಿನಲ್ಲಿ ಕತೆಗಳನ್ನು ಬರೆಯುತ್ತಿದ್ದರೆಂಬುದು ಅನೇಕರಿಗೆ ಗೊತ್ತಿರಲಿಕ್ಕಿಲ್ಲ ಎಂದು ಜುಲೈ ೧೯೯೨ರ ಕಸ್ತೂರಿ ಸಂಚಿಕೆಯಲ್ಲಿ ರವಿಬೆಳಗೆರೆಯವರು ಹೇಳಿದ್ದಾರೆ. ಪಾವೆಂ ಆಚಾರ್ಯರ ಗರಡಿಯಲ್ಲಿ ಪತ್ರಿಕೋದ್ಯಮ ಕಲಿತೆ ಮತ್ತು ಅವರ ಆಶೀರ್ವಾದ ದಲ್ಲಿ ಬದುಕಿದೆ ಎಂದು ಕೈಮುಗಿದು ಹೇಳುತ್ತಾರೆ.

ಪಾವೆಂ ಆಚಾರ್ಯರ ಪಂಚಮುಖಗಳು. ಕೃತಿರಚನೆಯ ಭೂಮಿಕೆಯನ್ನು ಐದು ಮುಖಗಳಲ್ಲಿ ರೇಖಿಸಬಹುದು ಎಂದು ಹೇಳುತ್ತಾರೆ. ಅವು ಯಾವುದೆಂದರೆ – ಕಲ್ಪಕತೆ, ಚಿಂತನಪರತೆ, ಶಬ್ದಾಸಕ್ತಿ, ಪತ್ರಿಕಾಧರ್ಮ ಮತ್ತು ಅಣಕ ಪ್ರವೃತ್ತಿ. ಪತ್ರಿಕಾಲಯದವರ ಸಹವರ್ತಿಗಳು ಪಾವೆಂರವರನ್ನು ‘ಸರ್ವಜ್ಞಾಚಾರ್ಯ’ ಎಂದು ಕರೆಯುತ್ತಿದ್ದರಂತೆ.

ಹರಟೆ, ವ್ಯಂಗ್ಯ, ವಿಡಂಬನಾತ್ಮಕ ಪ್ರಬಂಧ, ವೈಜ್ಞಾನಿಕ, ವೈದ್ಯಕೀಯ, ರಾಜಕೀಯ, ಆರ್ಥಿಕ ಸಾಮಾಜಿಕ, ಅಂತಾರಾಷ್ಟ್ರೀಯ ವಿದ್ಯಮಾನ, ಸಾಹಿತ್ಯಿಕ, ಪದಗಳ ಅರ್ಥ ಭಾಷಾಶಾಸ್ತ್ರಕ್ಕೆ ಸಂಬಂಧಿಸಿದ ವಿಶ್ಲೇಷಣಾತ್ಮಕ, ವೈಚಾರಿಕ ಲೇಖನಗಳು ಪುಂಖಾನುಪುಂಖವಾಗಿ ಅವರಿಂದ ಪ್ರಕಟವಾಗುತ್ತಿತ್ತು. ತುಳು ಭಾಷಾ ಸಾಹಿತ್ಯದಲ್ಲಿಯೂ ಸಹ ಇವರ ಕೊಡುಗೆ ಇದೆಯಂತೆ. ೧೯೯೨ರಲ್ಲಿ ಪತ್ರಿಕೋದ್ಯಮದಲ್ಲಿ ಅಖಿಲ ಭಾರತ ಮಟ್ಟದ ‘ಗೋಯೆಂಕಾ ಪ್ರಶಸ್ತಿ’ ಸ್ವೀಕರಿಸಲೆಂದು ಮುಂಬಯಿಗೆ ಹೋಗಿದ್ದರಂತೆ ನಿಗದಿಪಡಿಸಿದ ದಿನದಂದು ಸಮಾರಂಭ ಕಾರಣಾಂತರಗಳಿಂದ ರದ್ದಾಯಿತು. ಪ್ರಶಸ್ತಿ ಸ್ವೀಕರಿಸುವ ಮುಂಚೆಯೇ ದಿನಾಂಕ ೪ನೇ ಎಪ್ರಿಲ್ ೧೯೯೨ ರಂದು ಸ್ವರ್ಗಸ್ಥರಾದರು.

ಲಾಂಗೂಲಾಚಾರ‍್ಯರ ಕುರಿತು ಹುಬ್ಬಳ್ಳಿಯಲ್ಲಿರುವ ಕನ್ನಡ ಶಿಕ್ಷಕಿ ಡಾ. ಸರ್ವಮಂಗಳಾ ಶಾಸ್ತ್ರಿ ಅವರು ಡಾ. ಶ್ಯಾಮಸುಂದರ ಬಿದರಕುಂದಿಯವರು ಮಾರ್ಗದರ್ಶನದಲ್ಲಿ ‘ಪಾವೆಂ ಆಚಾರ್ಯರ ಬದುಕು ಬರೆಹಗಳು ಒಂದು ಅಧ್ಯಯನ’ ಈ ವಿಷಯದ ಮೇಲೆ ಬರೆದ ಮಹಾಪ್ರಬಂಧಕ್ಕಾಗಿ ೨೦೧೫ರಲ್ಲಿ ಇವರಿಗೆ ಹಂಪಿ ವಿಶ್ವವಿದ್ಯಾಲಯವು ಪಿಎಚ್.ಡಿ ಪದವಿಯನ್ನು ಪ್ರದಾನಿಸಿತು.

ಪಾವೆಂ ಆಚಾರ್ಯರು ಬರವಣಿಗೆ ಹತ್ತು ಸಾವಿರ ಪುಟಗಳಷ್ಟು ಮೀರುವುದು ಆದರೆ ಪುಸ್ತಕರೂಪದಲ್ಲಿ ಬಂದದ್ದು, ‘ಪ್ರಹಾರ’, ‘ವಕ್ರದೃಷ್ಟಿ’, ‘ವಿಪರೀತ’ ಮತ್ತು ‘ಲೋಕದ ಡೊಂಕು’ ಇವು ಹರಟೆಗಳ ಸಂಗ್ರಹಗಳು‌‌. ‘ರಶಿಯದ ರಾಜ್ಯಕ್ರಾಂತಿ’ ಮತ್ತು ‘ಸ್ವತಂತ್ರ ಭಾರತ’ ಎರಡು ರಾಜಕೀಯ ವಿಶ್ಲೇಷಣೆಗಳು ಮತ್ತು ಎರಡೇ ಕವನ ಸಂಗ್ರಹಗಳು . ಅಲ್ಲದೆ ಎದ್ದು ಕಾಣುವ ಕೃತಿಗಳೆಂದು ‘ಪದಾರ್ಥ ಚಿಂತಾಮಣಿ’ ಹಾಗೂ ‘ಸುಭಾಷಿತ ಚಮತ್ಕಾರ’.

ಇದು ಲಾಂಗೂಲಾಚಾರ‍್ಯ ನಗೆಬರಹಗಳ ಮೂರನೇ ಸಂಗ್ರಹ. ಇದರಲ್ಲಿ ಒಟ್ಟು ಇಪ್ಪತ್ತಾರು ನಗೆಬರಹಗಳಿವೆ. ಇವುಗಳು ಮೊದಲೇ ಕರ್ಮವೀರ, ಕಸ್ತೂರಿ, ತುಷಾರ ಪತ್ರಿಕೆಗಳಲ್ಲಿ ಪ್ರಕಟವಾಗಿರುತ್ತದೆ. ಓದುಗರು ನನ್ನ ಬರಹಗಳನ್ನು ಮೆಚ್ಚುವರೆಂಬುದು ನಮ್ಮೆಲ್ಲರ ನಂಬಿಕೆ ಇವರೆಲ್ಲರಿಗೂ ನಾನು ಕೃತಜ್ಞ. ಯಾಕೆಂದರೆ ಲೋಕವನ್ನು ಕಂಡು ನಗುವವರಿಗೆ ತಮ್ಮೊಡನೆ ನಗುವವರಿಗಿಂತ ದೊಡ್ಡ ಉಪಕಾರಿಗಳಿಲ್ಲ ಎಂದು
ಲಾಂಗೂಲಾಚಾರ‍್ಯ ಅವರು ಹೇಳಿದ್ದಾರೆ.

‘ದೇವಾಸ್ತೃಪ್ತ್ಯಂತು’ ಲಾಂಗೂಲಾಚಾರ‍್ಯರಿಗೆ ತಮ್ಮ ಧರ್ಮದ ಬಗ್ಗೆ ಸಿಟ್ಟು ಬಂದು ಬೇರೆ ಧರ್ಮದ ಮಿತ್ರನ ಧರ್ಮದ ಸಾಧಕ ಬಾಧಕಗಳು ದೇವರ ಗುಣಗಳು ತಿಳಿದುಕೊಂಡು ಕೊನೆಯದಾಗಿ ಅವರ ದೇವರು ಏನನ್ನು ತಿನ್ನುತ್ತಾನೆ? ಎಂದು ಕೇಳುತ್ತಾರೆ. ‘ನಮ್ಮ ದೇವರು ಏನೂ ತಿನ್ನುವುದಿಲ್ಲ, ಕುಡಿಯುವುದಿಲ್ಲ. ತಿನ್ನುವ ಕುಡಿಯುವ ಪದಾರ್ಥಗಳನ್ನೆಲ್ಲ ಅವನು ನಮಗಾಗಿಯೇ ಸೃಷ್ಟಿಸಿದ್ದಾನೆ’ ಎಂದು ಹೇಳುತ್ತಾನೆ.

ಏನನ್ನೂ ತಿನ್ನದ ಕುಡಿಯದ ದೇವರ ಕೈಲಿ ಜುಟ್ಟನ್ನು ಕೊಡಲು ಅವರಿಗೆ ಧೈರ್ಯ ಬರಲಿಲ್ಲವಂತೆ. ಸ್ವತಃ ಏನೂ ಬೇಕಾಗದ ದೇವರಿಗೆ ನಮ್ಮ ಸುಖದುಃಖಗಳು ಸರಿಯಾಗಿ ಸಾಧ್ಯವೇ? ಉಂಡುಪವಾಸಿಗಳು. ನಮ್ಮ ದೇವರುಗಳು ಉಪವಾಸಿಗಳಲ್ಲ. ಮೊನ್ನೆ ಗಣೇಶ ಚೌತಿಗೆ ಮಾಡಿದ ಕೊನೆಯ ಉಂಡೆಗಳನ್ನು ಜಗಿಯುತ್ತ ಈ ಲೇಖನವನ್ನು ಬರೆಯುತ್ತಿರುವುದಾಗಿ ಆಚಾರ್ಯರು ಹೇಳಿ ಗಣೇಶ ಎಂದು ಹೊಟ್ಟೆಯನ್ನು ಖಾಲಿ ಇಟ್ಟುಕೊಳ್ಳುವವನಲ್ಲ.

ಒಂದು ಕೈಯಲ್ಲಿ ಮೋದಕವನ್ನು ಯಾವಾಗಲೂ ಹಿಡಿದಿರುತ್ತಾನೆ. ಮೋದಕಪ್ರಿಯ ಅಂತಲೇ ಅವನಿಗೆ ಇನ್ನೊಂದು ಹೆಸರು. ಹಾಗೆಂದು ಇತರ ಸಿಹಿತಿಂಡಿಗಳು ವ್ಯರ್ಜ್ಯ ಎಂದೇನೂ ಇಲ್ಲ. ಅಕ್ಕಿ, ಗೋಧಿ, ಹೆಸರು, ಎಳ್ಳು ಅಥವಾ ಮತ್ತಾವುದಾದರೂ ಲಡ್ಡುಗೆಗಳನ್ನು ಗಣೇಶ ಮೆಚ್ಚುತ್ತಾನೆ. ಒಂದು ಸಿಹಿ ತಿಂಡಿಗೂ ಇನ್ನೊಂದಕ್ಕೂ ನಡುವೆ ಖಾರ ತಿನ್ನದೆ ಹೋದರೆ ರುಚಿ ಬೇಧವೇ ಗೊತ್ತಾಗೋದಿಲ್ಲವಲ್ಲ. ಆದ್ದರಿಂದ ಚಕ್ಕುಲಿ,ಕೋಡುಬಳೆ ಇತ್ಯಾದಿ ನವವಿಧ ಸೇವರಿಗಳೂ ಅವನಿಗೆ ನೈವೇದ್ಯವಾಗುತ್ತವೆ. ಇವೆಲ್ಲವೂ ವರ್ಷಕ್ಕೊಮ್ಮೆ ಬರುವ ಒಂದು ದಿನದ ಹಬ್ಬದ ಮಾತಾಯಿತು.

ಪ್ರತಿ ತಿಂಗಳ ಸಂಕಷ್ಟ ಚತುರ್ಥಿ ದಿನ ಹೋಮ ನೈವೇದ್ಯಕ್ಕೆ ಪಂಚಕಜ್ಜಾಯವೆ ಸಾಕೆಂಬ ಅವನು ದೊಡ್ಡ ಮನಸ್ಸು ಮಾಡಿದ್ದಾನೆ. ಕೆಲವೊಂದು ಊರಿನ ಗಣಪತಿ ಕೆಲವೊಂದು ವಿಶಿಷ್ಟಭಕ್ಷ್ಯಕ್ಕೆ ಪ್ರಾಶಸ್ತ್ಯ ಕೊಡುವುದು ಉಂಟು. ಕಡುಬೆಂದರೆ ಕುಂಭಾಶಿಯ ಗಣಪನಿಗೆ ಪ್ರಾಣವಂತೆ. ಉತ್ತರ ಕರ್ನಾಟಕದ ಕರಿಗಡುಬಲ್ಲ, ಕೊಟ್ಟೆ ಕಡುಬು ದಕ್ಷಿಣಕನ್ನಡದ ವಿಶೇಷ.

‘ಕವಿಂ ಕವೀನಾಂ’, ‘ವಿಪ್ರತಮಂ ಕವೀನಾಂ’ ಎಂದು ಗಣೇಶನ ಬಗ್ಗೆ ವೇದಗಳಲ್ಲಿ ವರ್ಣನೆ ಇದೆ. ಆದರೆ ಗಣೇಶ ಬರೆದ ಕವಿತೆಗಳು ಈಗ ಉಪಲಬ್ಧವಾಗಿಲ್ಲ. ಸುಖಭೋಜನಪ್ರಿಯನಾದ ಗಣೇಶ ಖಂಡಿತವಾಗಿಯೂ ಹಸಿದ ನವ್ಯ ಕವಿತೆಗಳನ್ನು ಬರೆದಿರಲಾರ. ಗಣೇಶ ರೊಮ್ಯಾಂಟಿಕ್ ಸಂಪ್ರದಾಯದವನೇ ಆಗಿರಬೇಕು.

‘ನಾಗರಪಂಚಮಿ ನಗುತ್ತಾ ಬಂತು, ಯುಗಾದಿ ಹಬ್ಬ ಆಳುತಾ ಹೋಯ್ತು’ ಅನ್ನುವ ಗಾದೆಯಲ್ಲಿ, ಯುಗಾದಿಯಿಂದ ನಾಲ್ಕು ತಿಂಗಳ ಹಬ್ಬ ವಿರಾಮವನ್ನು ಕುರಿತು ಅತ್ತಿದ್ದೇನೆ. ನಾಗರಪಂಚಮಿ, ಯಾರನ್ನಾದರೂ ಕೊಂದನಂತರ ನಾವು ಅವರ ಪ್ರೀತ್ಯರ್ಥವಾಗಿ ಹಬ್ಬ ಆಚರಿಸುತೇವೆ ಅನ್ನುವುದಕ್ಕೆ ದೀವಳಿಗೆ ಹಬ್ಬವೂ ಒಂದು ಸಾಕ್ಷಿಯಾಗಿದೆ ತಾನೆ. ನಾಗರಪಂಚಮಿಯ ಹೆಚ್ಚಳವೆಂದರೆ ತಂಬಿಟ್ಟಿನ ನೈವೇದ್ಯ.

ಶ್ರೀಕೃಷ್ಣ ಮಗನಿಗಿಂತಲೂ ನಿರ್ದಯ ದೇವರು ಎಂದು ನಮಗೆ ಅನ್ನಿಸುತ್ತಿತ್ತು. ರುಚಿಯಾದ ಮಗಮಗಿಸುವ ಭಕ್ಷಗಳು ನಮ್ಮ ಮೂಗುಗಳನ್ನು ಉತ್ತೇಜನ ಗೊಳಿಸುತ್ತಿರುವಾಗ ಅರ್ಧರಾತ್ರಿಯವರೆವಿಗೂ ಕಾಯುವುದು ಯಮಯಾತನೆ. ಶ್ರೀಕೃಷ್ಣನ ಅಭಿರುಚಿಗಳು ಹೆಂಡಂದಿರ ಸಂಖ್ಯೆಯಿಂದ ಮಾತ್ರವಲ್ಲ ಅವನಿಗಾಗಿ ಮಾಡುವ ನೈವೇದ್ಯಗಳ ಸಂಖ್ಯೆಯಿಂದಲೂ ತಿಳಿಯುತ್ತದೆ. ಅರಳುಹಿಟ್ಟಿನಿಂದ ಹಿಡಿದು ಗೇರುಬೀಜದ ಚೂರುಗಳ ವರೆಗಿನ ಎಷ್ಟೆಲ್ಲ ಬಗ್ಗೆ ಲಡ್ಡುಗೆಗಳು. ಮೂರು, ಐದು, ಏಳು, ಒಂಬತ್ತು ಸುತ್ತಿನ ಚಕ್ಕುಲಿಗಳು. ಅರ್ಧರಾತ್ರಿಯಲ್ಲಿ ಪೂಜೆ ಮುಗಿಯುವವರೆಗೆ ನಾಲಿಗೆಯನ್ನು ನಿದ್ರೆಯನ್ನು ಏಕಕಾಲಕ್ಕೆ ನಿಗ್ರಹಿಸಿ ಕೊಂಡಿರಬೇಕು. ಚಳಿಯಲ್ಲಿ ಬರಿಮೈಯಲ್ಲಿ ಕೃಷ್ಣನಿಗೆ ಅರ್ಘ್ಯ ಕೊಡಬೇಕು.

ಸತ್ಯನಾರಾಯಣ ಹುಟ್ಟಿ ೧೮೦ ಕ್ಕಿಂತ ಹೆಚ್ಚು ವರ್ಷಗಳಾಗಿಲ್ಲವೆಂದು ಸಂಶೋಧಕರು ಕಂಡುಹಿಡಿದಿದ್ದಾರೆ. ಮೂಲ ನಾರಾಯಣನಾದರೂ ಬಹಳ ಹಳೆಯವನಲ್ಲ, ವೇದಕಾಲದ ಕಡೆಕಡೆಗೆ ಹುಟ್ಟಿಕೊಂಡವನು ಎಂದೂ ತಜ್ಞರ ಹೇಳಿಕೆ, ಸತ್ಯನಾರಾಯಣ ಮೂಲ ನಾರಾಯಣನಿಗಿಂತ ಕಡಿಮೆ ಅವಧಿಯಲ್ಲಿ ದೇಶದಲ್ಲೆಲ್ಲಾ ಜನಪ್ರಿಯನಾಗಿದ್ದಾನೆ. ಅವನ ಜನಪ್ರಿಯತೆಯ ರಹಸ್ಯವೇನು? ಅವನ ಅಭಿರುಚಿ ಪಾಕಾಭಿರುಚಿ ಎಂದು ತೋರುತ್ತದೆ. ಅವನ ನೈವೇದ್ಯಕ್ಕೆ ಬೇಕಾಗಿ ತಯಾರಿಸುವ ಸಪಾದಭಕ್ಷ್ಯ ತನ್ನ ಸರಳತನ ಮತ್ತು ರುಚಿಯಿಂದಾಗಿ ಸತ್ಯವನ್ನು ನಂಬದವರೂ ಸತ್ಯನಾರಾಯಣನನ್ನು ನಂಬುವಂತಾಗಿದೆ.

ಹಾಲು, ತುಪ್ಪ, ರವೆ, ಸಕ್ಕರೆ ಇವುಗಳ ಇಂಥ ಹಿತಮಿತವಾದ ಸಮ್ಮಿಶ್ರಣವನ್ನು ಮತ್ತಾವ ದೇವರು ಕಂಡುಹಿಡಿದಿದ್ದಾನೆ? ಅವನ ಪ್ರಸಾದ ಅದರ ಎಲ್ಲ ಅಂಗಗಳನ್ನು ಸಪಾದ ಅಂದರೆ ಒಂದೂಕಾಲರ ಮಾಸಾಲೆಯಲ್ಲಿ ಹಾಕಬೇಕಂತೆ. ಪ್ರಸಾದವನ್ನು ಹೊಟ್ಟೆತುಂಬಾ ಅಲ್ಲ ನಾಲಿಗೆಗೆ ರುಚಿ ಎನಿಸುವಷ್ಟೇ ಪ್ರಮಾಣದಲ್ಲಿ ಹಂಚಬೇಕು. ಇವು ಲಾಂಗೂಲಾಚಾರ‍್ಯರಿಗೆ ನಿರ್ಣಯಿಸಲು ಆಧಾರವಾಗಿ ಹಿಂದೂ ಧರ್ಮದಲ್ಲಿಯೇ ಉಳಿಯಲು ನಿಶ್ಚಯಿಸುತ್ತಾರೆ.

‍ಲೇಖಕರು Admin

December 4, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: