ನಿವೇದಿತಾ ಧನ್ವ
ಕನ್ನಡ ಸಾಹಿತ್ಯಕ್ಕೆ ಪ್ರಬಂಧಗಳ ಲಾಲಿತ್ಯವನ್ನು ಪರಿಚಯಿಸಿ ಕನ್ನಡ ಓದುಗರಿಗೆ ತಮ್ಮ ಪ್ರಬಂಧಗಳ ಮೂಲಕ ರಸದೌತಣ ನೀಡಿದವರಲ್ಲಿ ಗೊರೂರು ರಾಮಸ್ವಾಮಿ ಅಯ್ಯಂಗಾರರ ಹೆಸರು ಅಜರಾಮರ. ಸೂಕ್ಷ್ಮ ಸಂವೇದನೆಯುಳ್ಳ ಕತೆಗಳು, ಕಾದಂಬರಿಗಳು ಗೊರೂರರ ಅಮೂಲ್ಯ ಕೊಡುಗೆ.
ಅಪ್ಪಟ ಗಾಂಧೀವಾದಿಯಾಗಿದ್ದ ಗೊರೂರರು ತಮ್ಮ ನವಿರು ಹಾಸ್ಯ ಶೈಲಿಯೊಂದಿಗೆ, ಆಗಿನ ಕನ್ನಡ ಜೀವನದ ಸೊಗಡನ್ನು ನವಿರು ಹಾಸ್ಯದೊಂದಿಗೆ ಓದುಗರಿಗೆ ನೀಡಿದವರು. ತನ್ಮೂಲಕ, ಸ್ವಾತಂತ್ರ್ಯ ಪೂರ್ವದಲ್ಲಿ ಕರ್ನಾಟಕದ ಹಳ್ಳಿಗಳ ಜೀವನ ಶೈಲಿ, ಜನರ ಔದಾರ್ಯ, ಸಮಾಜದಲ್ಲಿದ್ದ ಓರೆಕೋರೆಗಳು, ತಾರತಮ್ಯಗಳು ಎಲ್ಲವನ್ನೂ ದಾಖಲಿಸಿ, ಮುಂದಿನ ಪೀಳಿಗೆಗೆ ಕಾಪಿಟ್ಟವರು. ಗಾಂಧೀ ಆಶ್ರಮದಲ್ಲಿ ತಾವು ಕಲಿತ ಜೀವನ ತತ್ವಗಳನ್ನು ಹೃತ್ಪೂರ್ವಕವಾಗಿ ಅಳವಡಿಸಿಕೊಂಡು ಅವನ್ನು ತಮ್ಮ ಸುತ್ತಲಿನ ಜನರಿಗೂ ಅರ್ಥಮಾಡಿಸಲು, ಅನುಸರಿಸಲು ಸ್ಫೂರ್ತಿಯಾದ ಮಹನೀಯರು.
ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿರುವ ಇಂದಿನ ಸಮಾಜಕ್ಕೆ ಹಿಂದಿನ ಶತಮಾನದ ಗೊರೂರರ ವಿಚಾರಗಳು ಧ್ಯೇಯಗಳು ಇಂದಿಗೂ ಪ್ರಸ್ತುತ. ಅದಲ್ಲದೆ ಮನೆಯ ಸುತ್ತ, ಮನಸಿನ ಸುತ್ತ ಗೋಡೆಗಳನ್ನು ಕಟ್ಟಿಕೊಂಡು ಬದುಕುತ್ತಿರುವ, ಆಧುನಿಕತೆಯ ಸೋಗಿನಲ್ಲಿ ಚಿಪ್ಪಿನೊಳಗೆ ಹುದುಗಿ ಹೋಗುತ್ತಾ, ಜೀವನ ಮೌಲ್ಯಗಳನ್ನು ಮರೆತು ಸ್ವಾರ್ಥಗಳಾಗುತ್ತಿರುವ ನಮಗೆ, ಸೌಹಾರ್ದಯುತ ಸಾಂಘಿಕ ಜೀವನದ ಮೌಲ್ಯ ತಿಳಿದಿಲ್ಲ, ಅದರಿಂದ ಸಮಾಜ ಸ್ವಸ್ಥವಾಗಿರುತ್ತದೆ ಎಂಬ ಅರಿವು ಆಗುತ್ತಿಲ್ಲ.
ಇತ್ತೀಚೆಗೆ ಮೈಸೂರಿನ ಕಿರುರಂಗಮಂದಿರದಲ್ಲಿ ‘ನಿರಂತರ’ ತಂಡದವರು ಪ್ರಸ್ತುತ ಪಡಿಸಿದ ನಾಟಕ, ʻಗೊರೂರುʼ ಇದಕ್ಕೆಲ್ಲಾ ಉತ್ತರದಂತಿತ್ತು. ಗೊರೂರರ ಕೃತಿಗಳು ಹಿರಿ-ಕಿರಿತೆರೆಗಳ ಮೇಲೆ ರಾರಾಜಿಸಿದ್ದರೂ, ರಂಗದ ಮೇಲೆ ಬಂದಿರಲಿಲ್ಲ. ಹಾಗಾಗಿ ಗೊರೂರರ ಬರಹಗಳನ್ನಾಧರಿಸಿದ ನಾಟಕ ಒಂದು ಹೊಸ ಪ್ರಯತ್ನ ಮತ್ತು ಪ್ರಯೋಗವಾದರೂ, ಗೊರೂರರ ಸಾಹಿತ್ಯಸೆಲೆಯ ಸ್ರೋತವನ್ನು ಸಮರ್ಥವಾಗಿ ಪ್ರಸ್ತುತ ಪಡಿಸಿತು.
ನಿರೂಪಕನಾಗಿ ಬರುವ ಗೊರೂರರ ಪಾತ್ರಧಾರಿ ನಾಟಕದ ಪಾತ್ರಧಾರಿಗಳ ಸ್ಥೂಲ ಪರಿಚಯ ಮಾಡಿಸಿ, ಗೊರೂರಿನ ಸ್ವರೂಪವನ್ನು ನಮಗೆ ಮನದಟ್ಟು ಮಾಡುತ್ತಾನೆ. ನಂತರದಲ್ಲಿ, ಮೃದು ಹಾಸ್ಯದೊಂದಿಗೆ ಗೊರೂರರ ಪ್ರಬಂಧಗಳಲ್ಲಿ ಬರುವ ಸನ್ನಿವೇಶಗಳ ನಾಟಕೀಕರಣ. ಸನ್ನಿವೇಶಗಳು ನಗೆಯುಕ್ಕಿಸುವಂತಿದ್ದರೂ, ಅವುಗಳ ಹಿಂದೆ ಇರುವ ಜೀವನಪಾಠ ನೋಡುಗನನ್ನು ಚಿಂತನೆಗೆ ಹಚ್ಚುವಂತಿವೆ. ಅಂದಿನ ಹಳ್ಳಿಗಳಲ್ಲಿ ಬೇರೂರಿದ್ದ ಅಸ್ಪೃಶ್ಯತೆ, ಮೂಢನಂಬಿಕೆ, ಅನಕ್ಷರತೆ, ಬಡತನ, ಭೇದಭಾವಗಳ ಬಗ್ಗೆ ಹೇಳುತ್ತಾರಾದರೂ, ಅದಕ್ಕೂ ಮೀರಿ, ಹಳ್ಳಿಗಳಲ್ಲಿ ಸಹಬಾಳ್ವೆ, ಸಾಮರಸ್ಯ, ಸಹಕಾರ, ಸಾಹಚರ್ಯದ ಒಂದು ಮಾನವೀಯ ಮುಖವೂ ಇತ್ತು ಎಂಬುದನ್ನು ತೋರಿಸುವಾಗ, ಆಗಿನ ಹಳ್ಳಿಗಳೆಂದರೆ ನೋವಿನ ಕೂಪಗಳಷ್ಟೇ ಎಂಬ ನಮ್ಮ ತಪ್ಪುಕಲ್ಪನೆ ಬದಲಾಗುತ್ತದೆ.
ಅತಿಯಾದ ನಗರ ವ್ಯಾಮೋಹದಿಂದ, ವೇಗದ ಜೀವನಕ್ಕೆ ಪಕ್ಕಾಗಿ, ದುಡ್ಡಿನ ಹಿಂದೆ ಬಿದ್ದು ವ್ಯಾವಹಾರಿಕವಾಗುತ್ತಿರುವ ನಾವುಗಳು ಜೀವನದಲ್ಲಿ ಕಳೆದುಕೊಳ್ಳುತ್ತಿರುವುದಾದರೂ ಏನನ್ನು ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡಿ, ಮತ್ತೆ ಆ ಸುಂದರ ಮುಗ್ಧ ಹಳ್ಳಿಯ ದಿನಗಳು ಮರುಕಳಿಸಬಾರದೇ ಎಂದು ಪ್ರತಿ ಪ್ರೇಕ್ಷಕನೂ ಖಂಡಿತಾ ಹಳಹಳಿಸಿದ್ದು ನಿಜ.
ಬಹುತೇಕ ಹೊಸ ಪ್ರತಿಭೆಗಳೇ ತುಂಬಿದ್ದ ನಟವರ್ಗದ ಲವಲವಿಕೆಯ ನಟನೆ ನಾಟಕದ ಜೀವಾಳ. ಸುಮಧುರ ಸಂಗೀತ, ಅಂದಿನ ಹಳ್ಳಿಗಳನ್ನು ನೆನಪಿಸುವ ರಂಗಸಜ್ಜಿಕೆ, ಉತ್ತಮ ಬೆಳಕಿನ ನಿರ್ವಹಣೆ ನಾಟಕಕ್ಕೆ ಜೀವ ತುಂಬಿದವು. ಅಂದಿನ ಕಾಲದ ಉಡುಗೆ ತೊಡುಗೆಗಳನ್ನು ಬಹುತೇಕ ಯಥಾವತ್ತಾಗಿ ವೇದಿಕೆಗೆ ತಂದ ವಸ್ತ್ರವಿನ್ಯಾಸಕರು ಅಭಿನಂದನಾರ್ಹರು.
ರಂಗಪಠ್ಯ, ವಿನ್ಯಾಸ ಮತ್ತು ನಿರ್ದೇಶನದ ಹೊಣೆ ಹೊತ್ತುಕೊಂಡ ಮಂಜುನಾಥ್ ಎಲ್ ಬಡಿಗೇರ, ಕನ್ನಡ ನಾಟಕರಂಗದ ಸಮರ್ಥ ಸೂಕ್ಷ್ಮಗ್ರಾಹಿ ನಿರ್ದೇಶಕರೆನ್ನುವುದಕ್ಕೆ ಯಾವುದೇ ಅಡ್ಡಿಯಿಲ್ಲ. ಗೊರೂರರ ಬರಹಗಳನ್ನು ಮತ್ತೆ ತಿರುವಿ ಹಾಕಬೇಕೆಂಬ ಹಂಬಲ ಹುಟ್ಟಿಸಿದ ನಾಟಕ ʻಗೊರೂರುʼ.
0 Comments