ಲಕ್ಷ್ಮೀನಾರಾಯಣ ಭಟ್
ಶೀರ್ಷಿಕೆಯೇ ಹೇಳುವಂತೆ ಇದೊಂದು ಚಿಣ್ಣರ ಕಥೆ ಪುಸ್ತಕ. ಇಲ್ಲಿ ಒಟ್ಟು ಮೂವತ್ತು ಕಥೆಗಳಿವೆ. ಮಕ್ಕಳ ಕೈಯಲ್ಲಿ ಸುಲಭದಲ್ಲಿ ಹರಿದುಹೋಗದಂತೆ, ಮುಕ್ಕಾಗದಂತೆ, ನುಣುಪು ಕಾಗದದಲ್ಲಿ, ವರ್ಣಮಯ ಚಿತ್ರಗಳೊಂದಿಗೆ ಈ ಪುಸ್ತಕ ಮುದ್ರಿತವಾಗಿದೆ. ಸಮಾಯಾಭಾವದಿಂದ ನಲುಗುತ್ತಿರುವ ಇಂದಿನ ಧಾವಂತದ ಬದುಕಿನಲ್ಲಿ ಚಿಕ್ಕ ಮಕ್ಕಳಿರುವ ಪ್ರತಿಯೊಂದು ಮನೆಯಲ್ಲಿ ಇರಬೇಕಾದ ಪುಸ್ತಕ ಇದು ಎಂದು ಧಾರಾಳವಾಗಿ ಹೇಳಬಹುದು. ಇಂಗ್ಲೀಷ್ ಪ್ರಾಧ್ಯಾಪಕಿಯಾಗಿ, ಉತ್ತಮ ಅನುವಾದಕಿಯಾಗಿ, ಪ್ರಬುದ್ಧ ಲೇಖಕಿಯಾಗಿ ಪಳಗಿರುವ ಗೀತಾ ಶ್ರೀನಿವಾಸನ್ ತನ್ನ ಮೊಮ್ಮಕ್ಕಳಿಂದ ಸ್ಫೂರ್ತಿ ಪಡೆದು ಬರೆದ “ಅಜ್ಜಿ ಕಥೆ”ಗಳು ಇವು! ಮೊಮ್ಮಕ್ಕಳಿಗೇನು ಬೇಕು, ಎಷ್ಟು ಬೇಕು, ಯಾಕೆ ಬೇಕು ಎಂಬುದು ಅಜ್ಜಿಗಿಂತ ಚೆನ್ನಾಗಿ ಬೇರೆ ಯಾರಿಗೆ ತಾನೇ ಗೊತ್ತಿರಲು ಸಾಧ್ಯ! ಮಕ್ಕಳ ಮನಸ್ಸು ಹಸಿ ಗೋಡೆಯಂತೆ – ತನ್ನತ್ತ ಬಂದ ಎಲ್ಲವನ್ನೂ ಮನೋಭಿತ್ತಿಯಲ್ಲಿ ಅನಾಯಾಸವಾಗಿ ಗಬಕ್ಕನೆ ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಮಕ್ಕಳಿಗಿರುತ್ತದೆ. ಕಥೆಗಳ ಮೂಲಕ ನೀತಿ ಬೋಧನೆ ಹಿಂದಿನಿಂದಲೂ ನಡೆದುಕೊಂಡು ಬಂದ ಒಂದು ಪದ್ಧತಿಯಲ್ಲವೇ! ಪಂಚತಂತ್ರದ ಕಥೆಗಳು, ಈಸೋಫನ ನೀತಿಕಥೆಗಳು ಅದೆಷ್ಟೋ ತಲೆಮಾರಿನ ಮಕ್ಕಳನ್ನು ರಂಜಿಸುತ್ತಲೇ ನೀತಿಬೋಧನೆ ಮಾಡಿವೆ. ಒಂದು ಕಾಲದಲ್ಲಿ “ಚಂದಮಾಮ”, “ಬಾಲಮಿತ್ರ” ಎಂಬ ಮಾಸಿಕಗಳು ಮಕ್ಕಳ ಅನಿವಾರ್ಯ ಸಂಗಾತಿಗಳಾದ್ದವು. ಇಂದು “ಅಮರ ಚಿತ್ರ ಕಥಾ” ಆ ಕಾರ್ಯವನ್ನು ಮಾಡುತ್ತಿವೆ. ರಾಮಾಯಣ, ಮಹಾಭಾರತದ ಪಾತ್ರಗಳು ಜೀವಂತವಾಗಿ ಮಕ್ಕಳ ಹೃದಯದಲ್ಲಿ ನೆಲೆಸಲು ಈ ಎಲ್ಲಾ ಪುಸ್ತಕಗಳು ನೆರವಾಗಿವೆ.
ಈ ಹಿನ್ನೆಲೆಯಿಂದ ನೋಡಿದಾಗ ಗೀತಾ ಶ್ರೀನಿವಾಸನ್ ಅವರ ಪುಸ್ತಕ ಹತ್ತರಲ್ಲಿ ಹನ್ನೊಂದಾಗದೆ ತನ್ನ ವಿಶಿಷ್ಟತೆಯಿಂದ ನಮ್ಮ ಗಮನ ಸೆಳೆಯುತ್ತದೆ. ಅಂದರೆ ಇಲ್ಲಿರುವ ಕಥೆಗಳು ಚರ್ವಿತ ಚರ್ವಣವಲ್ಲ. ಇಂದಿನ ಪರಿಸರಕ್ಕೆ, ವಿಶೇಷವಾಗಿ ಪಟ್ಟಣವಾಸಿಗಳಿಗೆ ಅನ್ವಯವಾಗುವಂತೆ ಬರೆಯಲ್ಪಟ್ಟ ಸ್ವಂತ ರಚನೆಗಳು ಇವು. ಉದಾಹರಣೆಗೆ ಕಥೆ ಸಂಖ್ಯೆ 14 ಮಳೆ ಕೊಯ್ಲಿನ ಕುರಿತು, ಕಥೆ ಸಂಖ್ಯೆ 3 ಪರಿಸರ ಸಂರಕ್ಷಣೆ ಕುರಿತು ಮಗುವಿಗೆ ಮಾಹಿತಿ ಕೊಡುತ್ತದೆ. ಇಲ್ಲಿನ ಕಥೆಗಳು ಪುರಾಣ, ಇತಿಹಾಸಗಳ ಭಾರದಿಂದ ನಲುಗುವುದಿಲ್ಲ.
ಮಕ್ಕಳ ಮನಸ್ಸಿಗೆ ನೇರವಾಗಿ ಮುಟ್ಟುವಂತೆ, ಅವರ ಅನುಭವದ ಪರಿಧಿಯಲ್ಲಿ ಸಹಜವಾಗಿ ಇರುವಂಥಾ ಸನ್ನಿವೇಶಗಳ ಹಿನ್ನೆಲೆಯಲ್ಲಿ ಈ ಕಥೆಗಳು ಬರೆಯಲ್ಪಟ್ಟಿವೆ. ಉದಾಹರಣೆಗೆ, ಕಥೆ ಸಂಖ್ಯೆ 29 – “ರಾಜ್ಯೋಸ್ತವ” (ರಾಜ್ಯೋತ್ಸವ) ಕೆಲವು ಪದಗಳನ್ನು ಉಚ್ಛರಿಸುವಲ್ಲಿ ಮಕ್ಕಳಿಗೆ ಸಹಜವಾಗಿ ಉಂಟಾಗುವ ತೊಡಕುಗಳನ್ನು ತಮಾಷೆಯಾಗಿ ಹೇಳುವಂತೆ ತೋರಿದರೂ ಅದರೊಳಗಿನ ಸೂಕ್ಷ್ಮ ನಮ್ಮ ಗಮನ ಸೆಳೆಯುವಂತಿದೆ ಮತ್ತು ಮಕ್ಕಳನ್ನು ಹೆದರಿಸದೆ, ನಯವಾಗಿ ತಿದ್ದುವುದು ಹೇಗೆ ಎಂಬುದನ್ನೂ ಇಲ್ಲಿ ಹೇಳಲಾಗಿದೆ. ಕಥೆ ಸಂಖ್ಯೆ 28 ರಲ್ಲಿ ಬರೀ ಸುಳ್ಳಿನ ಕಂತೆ ಕಥೆಯಾಗುವುದಿಲ್ಲ ಎಂಬ ಮಾರ್ಮಿಕತೆಯನ್ನು ತಾಯಿ ತನ್ನ ಮಗಳಿಗೆ ಹೇಳುವ ರೀತಿಯಿಂದ ಕಥೆ ಹೊಸೆಯುವುದು ಹೇಗೆ ಎನ್ನುವ ಪಾಠ ಮಗು ಮನಸ್ಸಿಗೆ ತಾನೇ ತಾನಾಗಿ ಗೊತ್ತಾಗುವಂತಿದೆ. ತುಂಟ ಮಕ್ಕಳನ್ನು ಉಪಾಯದಿಂದ ಬೇರೆ ಚಟುವಟಿಕೆಗಳಲ್ಲಿ ತೊಡಗಿಸುವಂತೆ ಮಾಡುವುದರಿಂದ ಅವರು ತಮ್ಮ ಕುಚೇಷ್ಟೆ ಬಿಟ್ಟು ಹೇಗೆ ಉತ್ತಮ ಗುಣಗಳನ್ನು ಬೆಳೆಸಿಕೊಳ್ಳಬಹುದು ಎಂಬುದನ್ನು ಕಥೆ ಸಂಖ್ಯೆ 26 ಹೇಳುತ್ತದೆ.
ಪ್ರತಿಯೊಂದು ಕಥೆಯನ್ನೂ ವಿಮರ್ಶಿಸುವುದು ನನ್ನ ಉದ್ದೇಶವಲ್ಲ. ಬದಲಿಗೆ ಸ್ಥೂಲವಾಗಿ ಈ ಕಥೆಗಳ ಸ್ವರೂಪವನ್ನು ಪರಿಚಯಿಸುವುದಷ್ಟೇ ನನ್ನ ಕೆಲಸ. ಇಲ್ಲಿನ ಕಥೆಗಳು ನೀತಿಬೋಧನೆ ಮಾಡುವುದು ಬರೀ ಒಣ ಉಪದೇಶದಂತಲ್ಲ. ಮಕ್ಕಳು ಬೆಳೆಯುತ್ತಿರುವ ಪರಿಸರದ ಹಿನ್ನೆಲೆಯಲ್ಲಿ ನೀತಿಬೋಧನೆ ಅಡಕವಾಗಿರುವಂತೆ ಕಥಾ ಹಂದರವನ್ನು ವಿನ್ಯಾಸಮಾಡಲಾಗಿದೆ. ಕಥೆಗಳು ದೀರ್ಘವಾಗಿಲ್ಲವಾದರೂ, ಈ ಕಥೆಗಳನ್ನು ಹೇಳುವ ಅಜ್ಜಿಯಂದಿರೋ, ಅಮ್ಮಂದಿರೋ ತಮ್ಮ ತಮ್ಮ ಸ್ವಾನುಭವದಿಂದಲೋ, ಬುದ್ಧಿವಂತಿಕೆಯಿಂದಲೋ ಅಲ್ಲಲ್ಲೇ ಮತ್ತೆ ಮುಂದುವರಿಸುವ ಸಾಧ್ಯತೆಗಳನ್ನೂ ಇಲ್ಲಿನ ಕಥೆಗಳು ಒಳಗೊಂಡಿರುವುದು ಇನ್ನೊಂದು ವಿಶೇಷ.
ಪರೋಕ್ಷವಾಗಿ ಹಿಂಸಾರತಿಯನ್ನು ಪ್ರಚೋದಿಸುವ Tom & Jerry ಸರಣಿಯಲ್ಲಿ, ಹಾಗೂ ಅನಗತ್ಯವಾಗಿ ಮೊಬೈಲ್ ಸ್ಕ್ರೀನ್ ನಲ್ಲಿ ಮಕ್ಕಳು ಕಳೆದುಹೋಗದಂತೆ ಹಿರಿಯರು ಎಚ್ಚರ ವಹಿಸಬೇಕಾದ ಸನ್ನಿವೇಶ ಇರುವ ವರ್ತಮಾನದ ಸ್ಥಿತಿಯಲ್ಲಿ ಇಂತಹ ಪುಸ್ತಕಗಳು ಸ್ವಲ್ಪ ಮಟ್ಟಿಗಾದರೂ ಸ್ವಸ್ಥ ಮನೋರಂಜನೆಯ ಜೊತೆಗೆ, ಬದುಕಿನ ಮೌಲ್ಯಗಳನ್ನು ಮಕ್ಕಳಿಗೆ ಕಲಿಸಿಕೊಡಲು ಸಹಕಾರಿ ಎಂಬುದರಲ್ಲಿ ಯಾವ ಉತ್ಪ್ರೇಕ್ಷೆಯೂ ಇಲ್ಲ.
ಲೇಖಕಿ ಗೀತಾ ಶ್ರೀನಿವಾಸನ್ ಅವರನ್ನು ಅಭಿನಂದಿಸುತ್ತಾ ಅವರು ಇನ್ನಷ್ಟು ಕಥೆಗಳನ್ನು ಚಿಣ್ಣರಿಗಾಗಿ ಬರೆಯಲಿ ಎಂದು ಹಾರೈಸುತ್ತೇನೆ.
0 ಪ್ರತಿಕ್ರಿಯೆಗಳು