ಲಕ್ಷ್ಮಣ ವಿ ಎ
ಪ್ರತಿ ರೈಲು ನಿಲ್ದಾಣದಲ್ಲೊಂದು
ಎಂಜಿನ್ನಿನಿಂದ ಎಂದೋ ಬೇರ್ಪಟ್ಟು ತುಕ್ಕು ಹಿಡಿದ ಬೋಗಿಯೊಂದು ಹಳೆಯ ಹಳಿಗಳ ಮೇಲೆ ನಿಂತೇ ಇರುತ್ತದೆ
ಕವಿತೆಯಿಂದ ಕೈ ಬಿಟ್ಟ ಅನಾಥ ಪದದಂತೆ
ಮಾಲೆಯಿಂದ ಅಕಸ್ಮಾತ್ ಕಳಚಿ ಬಿದ್ದ
ಬಿಡಿ ಹೂವಿನಂತೆ
ಎಂದಾದರೊಂದು ದಿನ ತನಗೂ ಯಾವುದಾದರೊಂದು ಎಂಜಿನ್ನು ಕರೆದು ಜೋಡಿಸಿಕೊಂಡು ಹೋಗುವ ಆಸೆ ಇನ್ನೂ
ಇದ್ದೇ ಇದೆ ಜೀವಂತ
ಎಲ್ಲಸರಿ ಇರುವಾಗಲೇ
ಇದ್ದಕ್ಕಿದ್ದ ಹಾಗೆ ಬದುಕಿನ ಹಳಿ ತಪ್ಪಿದ್ದೆಲ್ಲಿ
ಎಂದು ಚಿಂತಿಸಿ ಹಲುಬಿ
ಅರೆ ಜೀವಗೊಂಡ ನಿಂತ ಅಸ್ಥಿಪಂಜರದಂತೆ
ಈಗ ಈ ಹತಭಾಗ್ಯ ಬೋಗಿ
ಇಂತಹುದೆ
ಯಾವುದೋ ಒಂದು ದಿನ
ಏನೋ ಮಹಾ ತುರ್ತು ಇರುವ
ಹಾಗೆ ಎಕ್ಸ್ಪ್ರೆಸ್ ರೈಲು ತನ್ನ ಕೊಂಡಿಯಿಂದ ನಿಂತ ನಿಲುವಿನಲ್ಲೆ ನಿರ್ದಯವಾಗಿ ಕಳಚಿ ಓಡಿದ್ದೆ ಕೊನೆ..
ಅಂದಿನಿಂದ ಇಂದಿನವರೆಗೆ

ಯಾವ ರೈಲಿನ ಸದ್ದಾದರೂ ಈ ಬೋಗಿಯ
ಎದೆಯಲೇನೋ ಪುಳಕ ಸಣ್ಣ ಕಂಪನ
ಹೋಗಿ ಬರುವ ರೈಲುಗಳೆಲ್ಲಾ
ಮೈ ಮೇಲೆಯೇ ಹರಿದು ಹೋದವರಂತೆ ಬಲು ಧಿಮಾಕಿನಲಿ ಬೆಂಕಿ ಬೆಳಕು ಗೀರಿ ಹೋದವೇ ಹೊರತು
ಎಂದೂ ತಮ್ಮವನಾಗಿಸಲಿಲ್ಲ
ಕಳಚಿಕೊಂಡ ಬೋಗಿಗೀಗ
ಕಳೆದುಕೊಳ್ಳಲೇನೂ ಇಲ್ಲ ತನ್ನ
ಹಳೆಯ ನೆನಪುಗಳ ಹೊರತು
ಸುಖಾಸೀನ ಹಾಸು ಕನ್ನಡಿ ಕಮೋಡು
ಎಂದೊ ಕಳ್ಳರ ಪಾಲಾಗಿವೆ
ಈಗ
ಹಗಲಾದರೆ ಯಾವುದೋ ಹಕ್ಕಿ
ಇರುಳಾದರೆ ಇಲಿ ಹೆಗ್ಗಣ
ಮತ್ತು ನಟ್ಟಿರುಳಿನಲ್ಲಿ ಇಳಿದು ಇಲ್ಲಿ ಮಲಗಿ
ಬೆಳಕು ಹರಿಯುವುದರೊಳಗೆ ಓಡಿ ಹೋಗುವ ಮುದಿ ಭಿಕ್ಷುಕ
ಹರೆಯದಲಿ ಹಳಿಯಗುಂಟ ಹಾದು ಬಂದಿ ಹಾದಿ
ಏರಿದ ಗಿರಿ ಶಿಖರ ಗವ್ವರ ಕಾಡು ಕಣಿವೆಯ
ಅಚ್ಚರಿಯ ಏರು ತಿರುವು
ಉಕ್ಕಿನ ಸೇತುವೆಗಳ ಮೇಲೆ ಎದೆ ನಡಗಿಸುವ
ಲಯಬದ್ದ ಸ್ವರಗಳ ಏರಿಳಿತ
ಸವೆದ ಪಾದಗಳಂತಹ ಗಾಲಿ ಸುಮ್ಮನೇ
ಯಾರಾದರೂ ಮೈದಡವಿ ಮಾತಿಗಿಳಿದಿದ್ದರೆ
ಸಾಕಿತ್ತು
ಬೋಗಿಯ ಮೈ ಮನದ ತುಂಬ ಮಾತೇ ಮಾತುಗಳು
ನದಿಗಳಂತೆ ಹರಿದು ಕಡಲಿನ ಅಲೆಗಳಂತೆ ಅನುರಣಿಸಿ ಅನು ದಿನ
ಸುತ್ತತ್ತವೆ ನಟ್ಟಿರುಳಿನ ನಿರ್ಜನ ಪ್ಲಾಟ್ ಫಾರ್ಮಿನ ಮೇಲೆ ಅತೃಪ್ತ ಆತ್ಮದ ಕೂಗಿನ ಹಾಗೆ
ಇತಿಹಾಸದ ಪುಟದಿಂದ ಕಣ್ತಪ್ಪಿದ
ಅಖಂಡ ಅಧ್ಯಾಯವೊಂದು ಇಲ್ಲಿ
ತುಕ್ಕು ಹಿಡಿದ ಉಕ್ಕಿನ ರಥದಂತೆ
ಮೈಯ ಕಣ ಕಣದಲ್ಲೂ ಕಥೆಯ ಹೊತ್ತು
ಬೊಚ್ಚು ಬಾಯಿಯ ಮುದುಕನೊಬ್ಬ ಅಮೇರಿಕದಿಂದ ಬರುವ ತನ್ನ ಮೊಮ್ಮಗನಿಗೆ
ಬಲು ಕಾತರದಿಂದ ಕತೆ ಹೇಳಲು
ಜೋಡು ಹಳಿಗಳ ಮೇಲೆ ಕಣ್ಣಿಟ್ಟು
ಕಾಯುವ ಹಾಗೆ ಕಾಯುತ್ತಲೇ ಇದೆ ..ಎಷ್ಟೋ ದಿನಗಳಿಂದ
ತುಂಬಾ ಚೆನ್ನಾಗಿದೆ ಲಕ್ಷ್ಮಣ್ ಅವರೆ
ಚೆಂದದ ಕವಿತೆ