ಲಕ್ಷ್ಮಣ ವಿ ಎ ಕಥೆ- ಕಾವೇರಪ್ಪ ಕೇರಾಫ್ ಡೋರ್ ನಂ 468..

ಡಾ ಲಕ್ಷ್ಮಣ ವಿ ಎ

ಕಗ್ಗಲೀಪುರ ಅರ್ಕಾವತಿ ಲೇಔಟಿನ ನಂ 468 “ಸುರಗಿ” ಎಂಬ ಕಾವೇರಪ್ಪನವರ ಮನೆಯ ಡೂಪ್ಲೆಕ್ಸ್ ಮೇಲಿನ ಮಹಡಿಯ ಲೈಟುಗಳು ಮಧ್ಯರಾತ್ರಿಯಾದರೂ ಉರಿಯತ್ತಿದ್ದವು. ಕಾವೇರಪ್ಪ ಈ ಬೆಳಕಿನಲ್ಲೇ ಸುಟ್ಟು ಹೋಗುವ ಪತಂಗದ ಹಾಗೆ ಪಲ್ಲಂಗಿನ ಒಂಟಿ ಹಾಸಿಗೆಯ ಮೇಲೆ ಹೊರಳಾಡುತ್ತ ನಿದ್ದೆ ಬಾರದೆ  ಒಂದರ ಮೇಲೊಂದು ಸಿಗರೇಟು ಸೇದುತ್ತಿದ್ದರು. ತಾನು ಸೇದುತ್ತಿರುವುದು ಇದು ಹತ್ತನೆಯ ಸಿಗರೇಟೆಂದು ಖಾಲಿ ಪ್ಯಾಕು ನೋಡಿ ಅರಿವಾಗಿ ತನ್ನ ಬಗ್ಗೆ ತನಗೇ ಪಿಚ್ಚೆನಿಸಿ ಮರುಕಪಟ್ಟು ಪ್ಯಾಕನ್ನು ಮತ್ತೊಮ್ಮೆ ಜಾಲಾಡಿ ಖಾಲೀಯಾಗಿದ್ದನ್ನು ಮತ್ತೊಮ್ಮೆ  ಖಾತ್ರಿ ಪಡಿಸಿಕೊಂಡು ಕಸದ ಡಬ್ಬಿಗೆ ಎಸೆದರು.

ಅಮಲು ! ಅಮಲಿದು ಎಂಥಾ ಸುಂದರ ಅಮಲು. ಸಿಗರೇಟಿಗಿಲ್ಲದ ವ್ಹಿಸ್ಕಿ ಬಿಯರುಗಳಿಲ್ಲದ ನೆಚ್ಚಿನ ಕವಿತೆಗಳಿಗಿಂತ ಮಿಗಿಲಾದ ಖರ್ಚಿಲ್ಲದ ಅಮಲಿದು! – ಅದು ಮೋಹದ ಅಮಲು! ಹಾಗಂತ ಅವರಿಗೆ ಬೇಗ ಖಾತ್ರಿಯಾಗಿದೆ.

ಎಷ್ಟು ದಿನಗಳಿಂದ ಇವಳ ಫೇಸ್ ಬುಕ್ ಪುಟವನ್ನು ಹಿಂಬಾಲಿಸುತ್ತಿದ್ದೇನೆ. ಅವಳು ಬರೆಯುವ ಪ್ರತಿ ಕವಿತೆ ಚುಟುಕಗಳಿಗೆ ಲೈಕಿಸಿ ಇಷ್ಟುದ್ದ ಕಮೆಂಟಿಸಿದ್ದೇನೆ. ಫ್ರೆಂಡ್ ರಿಕ್ವೆಸ್ಟ ಕಳುಹಿಸಿ ವರ್ಷವೇ ಉಳಿರಬೇಕು. ಅವಳಿಗೆ ಇಪ್ಪತ್ತು ಸಾವಿರದ ಎರಡು ನೂರ ನಲವತ್ತೆಂಟು ಜನ ಫಾಲೋವರ್ಸು… ಇದರಲ್ಲಿ ಯಕಶ್ಚಿತ್ ಕಾವೇರಪ್ಪನವರೂ ಒಬ್ಬರು ! 

ಉಹುಂ! ಎಲ್ಲರಂತಲ್ಲ ಅವಳ ಕವಿತೆಗಳು. ದಿನಕ್ಕೊಂದರಂತೆ ವೃತ ಹಿಡಿದು ಬರೆಯುವವರ ಹಾಗಲ್ಲ. ಕೀಳು ಅಭಿರುಚಿಯ ಸಾಲುಗಳಿಗೆ ಹೆಣ್ಣಿನ  ಅರೆ ಬೆತ್ತಲೆಯ ಫೋಟೊ ಅಂಟಿಸಿ ಹೆಚ್ಚಿನ ಲೈಕುಗಿಟ್ಟಿಸುವ ಯಾವುದೇ ಹುನ್ನಾರಗಳಿದ್ದಂತಲ್ಲ.ಇಷ್ಟು ದಿನಗಳಲ್ಲಿ ಅವಳ ಕವಿತೆಗಳು ಯಾವುದೇ ಪತ್ರಿಕೆಯಲ್ಲಿ ಓದಿದ ನೆನಪಿಲ್ಲ, ಪ್ರಶಸ್ತಿ, ಕಿರೀಟ, ಕುದುರೆ, ಕಾಲಾಳು. ಉಹುಂ! ಅವಳ ವೈಯುಕ್ತಿಕ ಬದುಕಿನ ಒಂದೇ ಒಂದು ಸಣ್ಣ ಗೋಳು ಬರೆದುಕೊಂಡಿದ್ದು ಇವರು ಓದಿಲ್ಲ.

ಕವಿತೆಯೊಂದೇ ಇವಳ ಭಾಷೆ, ನುಡಿ ಮತ್ತು ನಾಲಿಗೆ.

ಸುಮ್ಮನೆ ತಣ್ಣಗೆ ಹರಿಯುವ ನದಿಯ ಹಾಗೆ. ಎಲ್ಲಿ ಹುಟ್ಟಿದವಳೋ! ಯಾವ ಅಮೃತಗಳಿಗೆಯ ಕವಿ ಸಮಯದಲ್ಲಿ ಹುಟ್ಟಿದ ಕವಿತೆಗಳೊ! ಒಮ್ಮೊಮ್ಮೆ  ಕಾಡು ಕೊರಕಲಿನಲಿ ಹರಿಯುವ ಸಣ್ಣ ತೊರೆ, ಮತ್ತೊಮ್ಮೆ ಬಯಲಲಿ ನಿಶಾಂತ ಸಂತನ ಮುಖದಂತೆ ಹರೆಯದ ಹರಿವಿನ ನದಿ. ಕೆಲವೊಮ್ಮೆ ಪ್ರಪಾತದ ಧುಮ್ಮಿಕ್ಕುವ ಜಲಪಾತದಂತಹ ಸಾಲುಗಳು.

ಅವಳ ಹೆಸರು – ಕಾವ್ಯ -ಕನ್ನಿಕೆ. ನಿಜವಾದ ಹೆಸರು ಏನು ? ಯಾರಿಗೂ ಗೊತ್ತಿಲ್ಲ.

ಇದೊಂದು ಗಂಡೂ ಅಲ್ಲದ ಹೆಣ್ಣು ಅಲ್ಲದ ಫೇಕು ಅಕೌಂಟು ಎಂದು ಇವಳ ಮೇಲೆ ಸುಮ್ಮ ಸುಮ್ಮನೆ ಉರಿಯುವ ಪ್ರೋ.ಕೆ.ಡಿ.ಮಲವೇಗೌಡ ಫೇಸ್ ಬುಕ್ಕಿನ ತುಂಬ ಪುಕಾರು ಹಬ್ಬಿದ್ದಾನೆ. ತನ್ನ ಗೋಡೆಯಲ್ಲಿ ಬರೆಯಲು ಏನೂ ತೋಚದಿದ್ದಾಗ ಇವೆಲ್ಲಾ ನಕಲು ಕವಿತೆಗಳು ಅಂತ ಇವಳ ವಾಲಿಗೆ ಬಂದು ಕಾರಿಕೊಂಡು ಹೋಗುತ್ತಾನೆ.

ಇಂಥ ಚೆಲುವೆ ಅವಳಾಗಿಯೇ ನನ್ನೆದಿರೆಂದು ಸ್ನೇಹ – ಹಸ್ತದ ಕೈ ಚಾಚಿದ್ದು ಕನಸೋ! ಭ್ರಮೆಯೋ ! 

ತನ್ನ ತಾ ನಂಬಲಾಗದ ಕಾವೇರಪ್ಪ, ಯಾವುದೋ ಉನ್ಮತ್ತದಲ್ಲಿ ರಾತ್ರಿ  ತೇಲುತ್ತ ಬೇಗ  ಹಗಲಾಗಲಿಯೆಂದು ಕಾಯುತ್ತ… ಹಗಲಿನಲಿ ಬೇಯುತ್ತ  ರಾತ್ರಿಯಾಗಲೆಂದು ಕಾಯುತ್ತ …

ಕಾವೇರಪ್ಪನವರಿಗೆ ಕವಿತೆ ಬರೆಯುವ ಹುಚ್ಚು ಅಮರಿಕೊಂಡಿದ್ದು ತೀರ ಇತ್ತೀಚಿಗೆ, ತಮ್ಮ ನಡುವಯಸಿನಲ್ಲಿ.ಒಂದಲ್ಲ ಒಂದು ದಿನ ತಾನೂ ಒಂದು ಕವಿತೆ ಬರೆದು ದೊಡ್ಡ ಕವಿಯಾಗುತ್ತೇನೆ ಆ ಶಕ್ತಿ ತನಗೆ ಇದೆ ಎಂದು ಖಡಾ ಖಂಡಿತವಾಗಿ ನಂಬಿ ಪ್ರತಿ ದಿನ ಬೆಳಗೆದ್ದು ತಾಯಿ ಭುವನೇಶ್ವರಿಯೆ ! ನನಗೆ ಇವೊತ್ತೊಂದು ಕವಿತೆಯ ಸಾಲಾದರೂ ಹೊಳೆಯಲಿ ಎಂದು ಊರ ಮುಳ್ಳಕಟ್ಟಮ್ಮ ದೇವತೆಗೂ ಮನೆ ದೇವರಾದ ತಿರುಪತಿ ತಿಮ್ಮಪ್ಪನಿಗೂ ಕನ್ನಡಾಂಬೆ ತಾಯಿ ಭುವನೇಶ್ವರಿಗೂ ಅಷ್ಟೇ ಅಲ್ಲ, ಕಂಡ ಕಂಡ ದೇವರಿಗೆಲ್ಲಾ ಕೈ ಮುಗಿದು ಈಡುಗಾಯಿ ಜೋಡುಗಾಯಿ ಒಡೆದು ಮುಡಿ ಕೊಡುವ ಹರಕೆ ಕೂಡ  ಹೊತ್ತಿದ್ದಾರೆ.

ಸನ್ಮಾನ್ಯ ಕಾವೇರಪ್ಪನವರು ಕಚೇರಿಗೆ ಹೊತ್ತಾಯಿತೆಂದು ತಡಬಡಾಯಿಸಿ ಡೂಪ್ಲೇಕ್ಸ್ ಮೆಟ್ಟಿಲು ಇಳಿದು ಬರುವುದನ್ನೇ ಕಾಯುತ್ತಿದ್ದ ಭುವನಾ ‘ಕನ್ನಡದ ಎಳೆವಯಸಿನ ಉದಯನ್ಮೋಖ ಕವಿಗಳಿಗೆ ಸ್ವಾಗತ’ ಹರಿತವಾದ ಕತ್ತಿಯಿಂದ  ತಿವಿದೇ ಇವರನ್ನು ಸ್ವಾಗತಿಸುವುದು ಈಗೀಗ  ಒಂದು ಅಭ್ಯಾಸ. ಎಳೆವಯಸಿನ ಬದಲಿಗೆ ‘ಇಳಿವಯಸಿನ ಮುದುಕ’ ಅಂತ ಅವರಿಗೆ  ಕೇಳಿಸಿದ್ದು  ಕೇವಲ ಕಾಕತಾಳೀಯವಷ್ಟೆ. ಯಾವ ಹಬ್ಬ ಹರಿದಿನವಿಲ್ಲದಿದ್ದರೂ ಭುವನಾ ಸಕ್ಕರೆ ಕಡಿಮೆ ಹಾಕಿರುವ ಶ್ಯಾವಿಗೆ ಪಾಯಸ ತುಸು ಹೆಚ್ಚೇ ಬಡಿಸುತ್ತ ‘ಸಾಹೇಬರಿಗೆ ಶುಗರು ಬೇರೆ ಶುರುವಾಗಿದೆ,ಸಕ್ಕರೆ ಕಡಿಮೆ ಬೆರಸಿ ಮಾಡಿದ್ದು’ ಎಂದು ಇವರ ಆರೋಗ್ಯದ ಮೇಲೂ ಕಾಳಜಿ ಇದೆಯೆಂದು ತೋರುವ ಹಾಗೆ ನಟಿಸುತ್ತ ಮಧ್ಯಾನ್ಹದ ಬಿಸಿ ಊಟದ ಡಬ್ಬಿ ಟೀಪಾಯದ ಇಂದಿ‌ನ ಪ್ರಜಾ ಪ್ರಗತಿ ಪೇಪರಿನ ಮೇಲಿಟ್ಟು ಏನೋ ಗೆದ್ದವರ ಹಾಗೆ ಲವ- ಲವಿಕೆಯಲ್ಲೆ ಮನೆ ತುಂಬ ವೈಯ್ಯಾರದಿಂದ ಓಡಾಡುತ್ತ ಸಾಹೇಬರು ಕವಿಗೋಷ್ಠಿಗೆ ಹಾಕಬೇಕಾದ ಜುಬ್ಬಾಗೆ ಇಸ್ತ್ರಿ ಮಾಡತೊಡಗಿದಳು. ಏಕಕಾಲಕ್ಕೆ ಇತ್ತ ಕಾವೇರಪ್ಪನವರ ಬಾಯಿಯೊಳಗೆ ಬಿಸಿ ಪಾಯಸ ಮತ್ತು ಜುಬ್ಬಾದ ಒಳ ಹೊರಗೆ ಬೇಯುತ್ತಿದ್ದೇನೆಂದೆನಿಸಿ ಇನ್ನಷ್ಟು ಹೊತ್ತು ಇಲ್ಲಿದ್ದರೆ ಇವಳು ಕೊಂಕು ಮಾತಿನಲ್ಲೇ ನನ್ನ ಸುಟ್ಟು ಬೂದಿ ಮಾಡುತ್ತಾಳೆಂದೆನಿಸಿ ಈ ದಿನ ಕೆಲಸಕೆ ಒಲ್ಲದ ಮನಸಿನಿಂದ ಮನೆಯಿಂದ ಹೊರಟರು.

ಕಾವೇರಪ್ಪನವರಿಗೆ ಸರಕಾರಿ ಕೆಲಸ, ಮನೆಯ ಜವಾಬ್ದಾರಿ ,ಪೇಟೆಯಿಂದ ಕೊತ್ತಂಬರಿ ಕರಿಬೇವು, ಸೊಪ್ಪು ತರುವುದು ಇವೆಲ್ಲಾ ಲೌಕಿಕರು ಮಾಡುವ ಯಕಶ್ಚಿತ್ ಕೆಲಸಗಳೆಂಬ ನಂಬಿಕೆ ಈಗೀಗ ಬಲವಾಗತೊಡಗಿದೆ. ತಾನೇನಿದ್ದರೂ ತ.ರಾ.ಸು.ಕುವೆಂಪು, ತೇಜಸ್ವಿಯವರಂತೆ ಕಾದಂಬರಿ ಬರೆದು ಲೋಕವಿಖ್ಯಾತನಾಗಲು ಸ್ವತಃ ತಾಯಿ ಭುವನೇಶ್ವರಿ ತನಗೆ ಪುನರ್ಜನ್ಮ ನೀಡಿರಬಹುದೆಂಬ ಅಚಲ ವಿಶ್ವಾಸದಲ್ಲಿ ಬೀಗುತ್ತಿದ್ದಾರೆ. ಈಗ ತಾನು ಮಾಡುತ್ತಿರುವ ವೆಟರ್ನರಿ ಕಂಪೌಂಡರ ಕೆಲಸ ಕೂಡ ಯಾರೋ ಬಿಟ್ಟು ಹೋದ ಪಾಪದ  ಕೆಲಸವನ್ನು ತಾನು ಮುಂದುವರೆಸಿಕೊಂಡು ಹೋಗುತ್ತಿರುವ ಕರ್ಮವೆಂಬಂತೆ ಯಾವಾಗಲೂ  ಹಳಿಯುತ್ತಿರುತ್ತಾರೆ.

ಇವರ ತಂದೆ ಡಾ.ಸದಾಶಿವಯ್ಯನವರು ಅರಣ್ಯ ಇಲಾಖೆಯ ವ್ಯಾಪ್ತಿಯಲ್ಲಿ ಬರುವ  ಮುತ್ತತ್ತಿ, ಸಂಗಮ, ಮೇಕೆದಾಟು ಕಾಡಿನ ವಿಭಾಗದ ಕಾಡುಪ್ರಾಣಿಗಳನ್ನು ಉಪಚರಿಸುವ ಪಶು ವ್ಯೆದ್ಯರಾಗಿದ್ದರು. ಒಮ್ಮೆ ನಾಡಿಗೆ ಬಂದ ಪುಂಡಾನೆಯನ್ನು ಅರಿವಳಿಕೆ ಕೊಟ್ಟು ಬಂಧಿಸಿ ಪಳಗಿಸಿ ಮತ್ತೆ ಕಾಡಿಗೆ ಬಿಡುವ ಕಾರ್ಯಾಚರಣೆ ನಡೆಸುವಾಗ ಪ್ರಜ್ಞೆ ತಪ್ಪಿದಂತೆ ನಟಿಸಿದ ಗಂಡಾನೆಯ ಕೊಂಬು ತಿವಿದು ಡಾ.ಸದಾಶಿವನಯ್ಯನವರು ಅಸುನೀಗಿದ್ದರು.

ತಂದೆ ತೀರಿದ ಬಳಿಕ ಈ ಅರಣ್ಯ ಇಲಾಖೆಯಲ್ಲಿ ಅನುಕಂಪದ ಆಧಾರದ ಮೇಲೆ ಎರಡನೇಯ ದರ್ಜೆಯ ಗುಮಾಸ್ತನಾಗಿ ಕನಕಪುರದ ಫಾರೆಸ್ಟ ಆಫೀಸಿನಲ್ಲಿ ಕೆಲಸ ಮಾಡುತ್ತಿದ್ದರೂ ಪಿತ್ರಾರ್ಜಿತವಾಗಿ ಬಂದ ಬೆಂಗಳೂರು ಹೊರವಲಯದ ತೋಟದ ಮನೆಯಲ್ಲಿ ಭವ್ಯವಾದ ಬಂಗಲೆ ಕಟ್ಟಿ ವಾಸಿಸುತ್ತಿದ್ದರು. ಅಪ್ಪನ ಏಕೈಕ ಮುದ್ದಿನ ಮಗನಾಗಿ ಬೆಳೆದ ಕಾವೇರಪ್ಪನಿಗೆ ಡಾಕ್ಟರು ಇಂಜಿನೀಯರು ಆಗಬೇಕೆಂಬ ಆಸೆ ಇದ್ದರೂ ಓದು ತಲೆಗಿಳಿಯದೆ ಯಾವುದೂ ಕೈಗೂಡಿರಲಿಲ್ಲ. ಕಷ್ಟ ಪಟ್ಟು ಮೂರು ವರ್ಷದ ಬಿ .ಕಾಂ.ಡಿಗ್ರಿಯನ್ನು ಪಂಚವಾರ್ಷಿಕ ಯೋಜನೆಯೆಂಬಂತೆ ಐದು ವರ್ಷಗಳಲ್ಲಿ ಪೂರೈಸಿ ಯಾವ ನೌಕರಿಯೂ ಸಿಗದೆ ಕೊನೆಗೆ ಎಲ್ಐಸಿ ಇನ್ಸೂರೆನ್ಸ ಕಂಪನಿಯ ಏಜೆಂಟನಾಗಿ ದುಡಿಯುತ್ತಿದ್ದರು. ಆರಂಭದಲ್ಲಿ ಹೆಚ್ಚು ಹೆಚ್ಚು ಪಾಲಿಸಿ ಮಾಡಿಸಿ ಅತಿ ಹೆಚ್ಚು ಕಮೀಷನ್ ಪಡೆದು ಯಶಸ್ವಿಯಾಗಿದ್ದರು. ಮೂರು ವರ್ಷ ಕಳೆದ ಮೇಲೆ ಈ ಕೆಲಸ ಅವರಿಗೆ ಬೋರು ಹೊಡೆಸತೊಡಗಿತು. ಇದ್ದ ಬಿದ್ದ ಸಂಬಂಧಿಕರ ನ್ನು ಹುಡುಕಿ, ರಾಯಚೂರು ಗುಲ್ಬರ್ಗಾದ ತನಕ ತಲುಪಿ ಪಾಲಿಸಿದಾರರಿಗೆ ಬಣ್ಣ ಬಣ್ಣದ ಕನಸು ತುಂಬಿ ಪೂಸಿ ಹೊಡೆದು ಪಾಲಿಸಿ ಪಡೆದ ಇವರ ನೆಂಟಸ್ತನದ ಬಳಗದ ನೆಟ್ ವರ್ಕುಗಳೂ ಖಾಲೀಯಾಗಿ ಈಗೇನಿದ್ದರೂ ಹೊಸಬರನ್ನು ಹುಡುಕಿ ಅವರ ಮನವೊಲಿಸಿ ಪ್ರಯಾಸಪಟ್ಟು ಒಂದು ಪಾಲಿಸಿ ಮಾಡುವಷ್ಟರಲ್ಲಿ ಕುರಿ ಕೋಣ ಬಿದ್ದೋಗುತ್ತಿದ್ದವು. ಈಗಷ್ಟೇ ಮಾರುಕಟ್ಟೆಗೆ ಬಂದ ಮಲ್ಟಿನ್ಯಾಷನಲ್ ಕಂಪನಿಗಳ ತೀವ್ರ ಪೈಪೋಟಿ, ಸ್ಪರ್ದೆಗಳಿಂದಾಗಿ ದೇಶೀಯ ಎಲ್ಲೈಸಿ ಕೂಡ ಪತರುಗುಟ್ಟುತ್ತಿತ್ತು. ಹೊಸ ಪಾಲಿಸಿ ಮಾಡುವ 

ಮಾತು ಹಾಗಿರಲಿ ಹಳೆಯ ಪಾಲಿಸಿಗಳನ್ನು ರಿನ್ಯೂ ಮಾಡಿಸದೇ ಅನೇಕ ಪಾಲಿಸಿಗಳು ಲ್ಯಾಪ್ಸ ಆಗಿದ್ದವು. ನೆಂಟರು ಕಳ್ಳುಬಳ್ಳಿಯವರೂ ಕಾವೇರಪ್ಪನವರ ಫೋನು ಎತ್ತದಂತಾದರು. ಪರಿಚಿತರೂ ಮುಖ ತಿರುಗಿಸಿ ನಡೆದು ಹೋದಾಗ ಕಾವೇರಪ್ಪನವರಿಗೆ ತುಂಬ ಅವಮಾನವಾದಂತಾಗಿ ಪಾಲಿಸಿ ಕಚೇರಿಗೆ ಹೋಗುವುದನ್ನೇ ಕೈ ಬಿಟ್ಟಿದ್ದು ಸಹಜವಾಗಿದ್ದರೂ ಅಸಲು ಈ ಕೆಲಸ ಅವರಿಗೆ ಬಲು ಬೇಗ ಬೋರು ಹೊಡೆಸಿತ್ತು. ಇನ್ನೊಬ್ಬರ ಮುಂದೆ ಅಂಗಲಾಚಿ ಅಮ್ಮಾ ತಾಯಿ ಎಂದು ಭಿಕ್ಷೆ ಬೇಡುವವರಂತೆ  ಒಂದು ಯಕಶ್ಚಿತ್ ಪಾಲಿಸಿ ತಗೊಳ್ಳುವವರು ತಮ್ಮ ಆಸ್ತಿ ಬರೆದುಕೊಡುವವರ ಹಾಗಿನ ಅವರ  ಉಡಾಫೆಯ ನೋಟ ಇವರಲ್ಲಿನ ಸ್ವಾಭಿಮಾನವನ್ನು ಕೆಣುಕುತ್ತಿತ್ತು. ಪರಿಸ್ಥಿತಿ  ಹೀಗಿದ್ದರೂ ಕಾವೇರಪ್ಪನವರ ವಾಸ್ತವವೇ ಬೇರೆ ಯಾವುದೇ ಕೆಲಸ ಮಾಡಲು ಶುರು ಹಚ್ಚಿಕೊಂಡರೂ ಮೊದ ಮೊದಲು ತುಂಬ ಭಯ ಭಕ್ತಿಯಿಂದ ಪ್ರಾಮಾಣಿಕವಾಗಿ ತೊಡಗಿಸಿಕೊಂಡರೂ ಅವರಿಗೆ ಕೆಲಸದ ಮೇಲಿನ ಅಭಿರುಚಿ ಕಳೆದು – ತಾನಿಲ್ಲಿ ಗಾಣಕ್ಕೆ ಕಟ್ಟಿದ ಎತ್ತಿನಂತೆ ಸುತ್ತುತ್ತಿನೆಂದು ಬಲವಾಗಿ ಎನ್ನಿಸಿ ಮತ್ತೆ ಎಲ್ಲಿದ್ದರೋ ಅಲ್ಲಿಗೇ ಮರಳುವ ಖಯಾಲಿ ಮಾಮೂಲಿಯಾಗಿತ್ತು.

ಈಗ ಕವಿಯಾಗಲು ಹೊರಟಿರುವ ಕಾವೇರಪ್ಪನವರ ಉತ್ಸಾಹದ ಹಿನ್ನೆಲೆಯೂ ಬಲು ಮಜವಾಗಿದೆ.

ಫಾರೆಸ್ಟಿನಲ್ಲಿ ಪಶುವೈದ್ಯರಾಗಿದ್ದ ಡಾ.ಸದಾಶಿವನಯ್ಯನವರ ತಮ್ಮ ನಿಖರ ಚಿಕಿತ್ಸೆ ಹಾಗು ಗುರಿ ತಪ್ಪದ ಅರವಳಿಕೆ ಸೂಜಿಗಳಿಂದ ನಾಡಿನಲ್ಲೆಲ್ಲಾ ಪ್ರಸಿದ್ದರಾಗಿದ್ದರು. ಕಾಡಿನಲ್ಲಿ  ಎಲ್ಲಾದರೂ ಪ್ರಾಣಿಗಳ ಉಪಟಳ ಜಾಸ್ತಿಯಾದರೆ ಹುಣಸೂರು, ಮೈಸೂರು, ಮಲೈ ಮಹದೇಶ್ವರ ಬೆಟ್ಟ, ಬಿಳಿಗಿರಿರಂಗನ ಬೆಟ್ಟದ ಫಾರೆಸ್ಟಿನವರು ಅರಿವಳಿಕೆ ಕೊಟ್ಟು ಪ್ರಾಣಿಯನ್ನು ಹಿಡಿಯಲು ವಿಫಲರಾದರೆ ಕೊನೆಯ ಆಯ್ಕೆಯೆಂಬಂತೆ ಇವರನ್ನೇ ಕರೆಸುತ್ತಿದ್ದರು. ಡಾ.ಸದಾಶಿವಯ್ಯನವರು ಸರಕಾರಿ ಕೆಲಸವೆಂಬ ಯಾವುದೆ ಉದಾಸೀನ ಉಪೇಕ್ಷೆ ಮಾಡದೆ ನರಭಕ್ಷಕ ಚಿರತೆ ಹುಲಿಗಳಿಗೆ, ಪುಂಡಾನೆಗಳಿಗೆ ಅವು ನಡೆದು ಬಿಟ್ಟು  ಹೋದ ಹೆಜ್ಜೆಯ ಮೇಲಿಂದಲೇ  ಅವುಗಳ ತೂಕ ಲೆಕ್ಕ ಹಾಕಿ ಅದಕ್ಕೆ ತಕ್ಕಂತೆ ತಮ್ಮ ಅರವಳಿಕೆಯ ಮದ್ದು  ತಯಾರಿಸಿ ಪ್ರಾಣಿಗಳ ಜೀವಕೆ ಯಾವುದೇ ಅಪಾಯವಾಗದ ಹಾಗೆ ಅರವಳಿಕೆ  ಗನ್ನಿನಿಂದ ಹೊಡೆದು ಅವುಗಳನ್ನು ಹಿಡಿಯಲು ಯಶಶ್ವಿಯಾಗುತ್ತಿದ್ದರು. ಕೆಲವೊಮ್ಮೆ ನರಭಕ್ಷಕ ಚಿರತೆಗಳು ಕಣ್ಣಿಗೆ ಕಾಣದೆ ವಾರಾನುಗಟ್ಟಲೇ ಇವರಿಗೆ ಭಲೆ ಆಟ ಆಡಿಸಿ  ಕಾಟ ಕೊಡುತ್ತಿದ್ದವು. ಆಗ ಇವರ ಇಡೀ  ತಂಡ ಕಾಡಿನಲ್ಲೇ ಉಳಿದುಕೊಂಡಿದ್ದೂ ಇದೆ. ಒಮ್ಮೆ ಇಂತಹುದೇ ಒಂದು ಚಿರತೆ ತಮಿಳುನಾಡಿನ ಗಡಿಪ್ರದೇಶ ‘ತಳಿ’ಎಂಬ ಊರಿನಲ್ಲಿ ನಾಲ್ಕೈದು ಜನರನನ್ನು ಬಲಿ ತೆಗೆದುಕೊಂಡು ಎರಡೂ ರಾಜ್ಯದವರಿಗೂ ದೊಡ್ಡ ತಲೆ ನೋವಾಗಿತ್ತು. ಆಗ ನರಹಂತಕ ವೀರಪ್ಪನ್ ಇದೇ ಮಲೈ ಮಹದೇಶ್ವರ ಬೆಟ್ಟದ ಫಾರೆಸ್ಟು ರೇಂಜಿನಲ್ಲಿ ತನ್ನ ಅಟ್ಟಹಾಸ ಮೆರೆಯುತ್ತಿದ್ದ. ಇಂತಹ ಕಗ್ಗಾಡಿನಲ್ಲಿ ನರಹಂತಕ ಚಿರತೆ ಒಂದು ಸವಾಲಾದರೆ ಇನ್ನೊಂದೆಡೆ ಈ ವೀರಪ್ಪನ್ ತಂಡದವರ ಆಕ್ರಮಣದ ಭಯ.ಹೀಗಾಗಿ ಇಲ್ಲಿ  ಕೆಲಸ ಮಾಡಲು ಎಂತಹವರೂ ಹಿಂಜರಿಯುತ್ತಿದ್ದಾಗ ಸದಾಶಿವನಯ್ಯವರು ತಾವೇ ಸ್ವಯಂ ಸ್ಪೂರ್ತಿಯಿಂದ ಬಂದು ಚಿರತೆಯನ್ನು ಹಿಡಿದು ಬೋನಿಗೆ ಕೆಡುಹಲು ಯಶಸ್ವಿಯಾಗಿದ್ದರು. ಇಂತಹ ಸದಾಶಿವಯ್ಯನವರು ಸಂಗೀತ ಸಾಹಿತ್ಯದಲ್ಲಿ ತುಸು ಆಸಕ್ತಿ ಹೊಂದಿದವರಿಂದ ಕಾಡಿನಲ್ಲಿ ತಮಗಾದ ಅನುಭವಗಳನ್ನು ಎದುರಾದ ಸವಾಲುಗಳನ್ನು ಚೊಕ್ಕವಾಗಿ ಒಂದು ನೋಟು ಬುಕ್ಕಿನಲ್ಲಿ ಬರೆದಿಟ್ಟಿದ್ದು ಸಿಕ್ಕಿದ್ದು ಇವರ ಬನಶಂಕರಿಯ ಹಳೆಯ ಮನೆಯಿಂದ ಕಗ್ಗಲೀಪುರದ ಔಟ್ ಹೌಸಿನ ಹೊಸ ಮನೆಯ ಸಾಮಾನು ಸಾಗಿಸುವ ಸಂದರ್ಭದಲ್ಲಿ. ಮಡದಿ ಭುವನಾ ಬೇಡವಾದ ಹಳೆಯ ಸಾಮಾನು ರದ್ದಿಗೆ ಪುಸ್ತಕ ವಿಂಗಡಿಸುವಾಗ ಸಿಕ್ಕು ಅದು ಹೇಗೋ ಕಾವೇರಪ್ಪನವರ ಕಣ್ಣಿಗೆ ಬಿದ್ದಿದ್ದು ಈಗ ಇತಿಹಾಸ.

ಡಾ.ಸದಾಶಿವಯ್ಯನವರ ಬರೆದಿಟ್ಟ ನೋಟ್ಸು  ಓದುತ್ತ ಓದುತ್ತ ಕಾವೇರಪ್ಪ ಕಣ್ಣೀರಾಗಿ ಅಪ್ಪನ ಬಗ್ಗೆ ಬಹಳಷ್ಟು ಅಭಿಮಾನ ಪಟ್ಟುಕೊಂಡ. ಆ ನೋಟ್ಸಿನಲಿ ಕೇವಲ ಅಪ್ಪನ ಸಾಹಸದ ಕತೆಗಳಲ್ಲದೆ ತನ್ನ ವೈಯುಕ್ತಿಕ ಬದುಕಿನ ಸಂಕಟಗಳಿದ್ದವು.ಮದುವೆಯಾಗಿ ಎಷ್ಟೊಂದು ವರ್ಷಗಳಾಗಿದ್ದರೂ ಮಕ್ಕಳಾಗಿರದ ಕೊರಗು ಇತ್ತು. ಮುತ್ತತ್ತಿ ಹನುಮಂತರಾಯನಿಗೆ, ತಲಕಾವೇರಿಯಮ್ಮನಿಗೆ ಹರಕೆ ಹೊತ್ತು ಕೊನೆಗೆ ಪೂಜೆ ಫಲಿಸಿ ಕನಕಪುರದ ಸಿವಿಲ್ ಆಸ್ಪತ್ರೆಯಲ್ಲಿ ಹುಟ್ಟಿದ ತನಗೆ ಕಾವೇರಪ್ಪ ಎಂದು ಹೆಸರಿಡುವ ಸಂಭ್ರಮವಿತ್ತು. ಇವರ ಆತ್ಮಕತೆಯನ್ನು ಪ್ರಕಟಿಸುವ ಆಸೆಯನ್ನೂ ಭುವನಾಳ ಬಳಿ ಹೇಳಿಕೊಂಡ. ಬಿಡುವಾದಾಗ ಮತ್ತೆ, ಮತ್ತೆ ಅಪ್ಪನ ಮುದ್ದಾದ  ಕೈ ಬರಹದ  ನೋಟ್ಸು ಓದುತ್ತ ಕಾವೇರಪ್ಪನವರಿಗೆ ಪ್ರಪಂಚದ ಎಲ್ಲ ಬೇಟೆಯ ಸಾಹಸದ ಪುಸ್ತಕಗಳನ್ನು ಓದಬೇಕೆನಿಸಿತು. ಏಕೆಂದರೆ ಅರವಳಿಕೆ ಕೊಡುವುದೂ ಕೂಡ ನರಭಕ್ಷಕ ಪ್ರಾಣಿಯನ್ನು ಗುಂಡಿಟ್ಟು ಕೊಲ್ಲುವಷ್ಟೇ ರೋಚಕ ಮತ್ತು ಅಪಾಯಕಾರಿ ಸಾಹಸ ಎಂದು ನೋಟ್ಸು ಓದುತ್ತ ಹೋದ ಇವರಿಗೆ ಮನದಟ್ಟಾಗಿತ್ತು.

ಗುಮಾಸ್ತಗಿರಿಯ ಸರಕಾರಿ ಫೈಲುಗಳು, ಕನಕಪುರದ ತನಕದ ಅಷ್ಟು ದೂರದ ಪ್ರಯಾಣ, ಸಂಸಾರ, ಮಗನ ಓದು, ಆತನ ಭವಿಷ್ಯ, ಅರಸಿಕ ಹೆಂಡತಿಯ ಪ್ರೇಮದಲ್ಲಿನ  ನಿರಾಸಕ್ತಿ, ಅಷ್ಟೋ ಇಷ್ಟೋ ಉಳಿದಿರಬಹುದಾದ ಕಾಮ, ಹತಾಶೆ.. ಇವೆಲ್ಲ ಸಧ್ಯದ  ಸಂಕಟಗಳಿಂದ ತನಗೆ  ಓದು ಮಾತ್ರ ಬಿಡುಗಡೆಗೊಳಿಸಲ್ಲದೆಂಬುದನ್ನು ಖಾತ್ರಿ ಪಡಿಸಿಕೊಂಡು ಯಾರನ್ನೋ ವಿಚಾರಿಸಿ ಬೆಂಗಳೂರಿನ ಸಪ್ನ ಪುಸ್ತಕದಂಗಡಿಯಿಂದ ಐದಾರು ಪುಸ್ತಕ ತಂದರು. ಅದರಲ್ಲಿ ತೇಜಸ್ವಿಯವರ ಬೆಳ್ಳಂದೂರಿನ ನರಭಕ್ಷಕ, ಜಾನಕಿ ಕಾಲಂ, ಮತ್ತು ನೀಲು. ಒಂದು ಬೇಟೆಯ ಕತೆಯಾದರೆ ಇನ್ನೆರೆಡು ಹುಡುಗಿಯ ಹೆಸರಿನ ವಿಚಿತ್ರ ಆಕರ್ಷಣೆಯ ತಲೆಬರಹಕ್ಕಾಗಿ. ತಂದ ದಿನವೇ ಜಾನಕಿ ಕಾಲಂ ಓದಿ ಮರುಳಾಗಿ ‘ನೋಡೇ ನೀನೂ ಇದ್ದೀಯ ಇಂಗ್ಲೀಷ್ ಎಮ್.ಎ.ಓದು ಬಾ ಇಲ್ಲಿ ಜಾನಕಿ ಎನ್ನುವ ಹುಡುಗಿ ಎಷ್ಟು ಅದ್ಭುತವಾಗಿ ಬರೆದಿದ್ದಾಳೆ’

ನಿನ್ನ ಯುನಿವರ್ಸಿಟಿಯ ಗೋಲ್ಡ್ ಮೆಡಲುಗಳನ್ನೆಲ್ಲಾ ನಿವಾಳಿಸಿ ಎಸೆಯಬೇಕು ಇದರ ಮುಂದೆ ಎಂದು ಅವಳನ್ನು ತುಸು ಅಲ್ಲಾಡಿಸಿ ಅವಳ ಕಾಲೆಳೆಯಲು ಹೊಸ ಆಯುಧ ಸಿಕ್ಕ ಖುಷಿಯಲ್ಲಿರುವಾಗಲೇ ಅಡುಗೆ ಮನೆಯಲ್ಲಿ ಇದ್ದ ಭುವನಾಳಿಗೆ ‘ಇಂಗ್ಲೀಷ್ ಎಮ್ಮೆ’ ಎಂದು ಕೇಳಿಸಿದ್ದು ಕೇವಲ ಕಾಕತಾಳೀಯ ಎಂದು ಬೇರೆ ಹೇಳಬೇಕಿಲ್ಲ.

“ಸಾಹೇಬರೆ ಜಾನಕಿ ಎನ್ನುವವಳು ಹುಡುಗಿಯಲ್ಲ. ಆ ಲೇಖನ ಬರೆದವರು ಗಿರೀಶರಾವ್ ಹತ್ವಾರ ಅಲಿಯಾಸ್ ಜೋಗಿ. ಜೋಗಿ ಅಂದರೆ ಜ್ಯೋತಿಯ ಗಂಡ ಗಿರೀಶ, ಕನ್ನಡದ ಪ್ರಮುಖ ಕವಿ ಕತೆಗಾರ. ತುಸು ಕಣ್ಣು ಬಿಟ್ಟು ನೋಡಿ ಎಂದು ತುಸು ಜೋರಾಗಿಯೇ ಭುವನಾ ಅಡುಗೆ ಮನೆಯಿಂದಲೇ ಕೂಗಿ ಹೇಳಿದಾಗ ಅವಳು ಹೇಳಿದ್ದನ್ನು ಖಚಿತಪಡಿಸಿಕೊಳ್ಳಲು ಮುನ್ನುಡಿ ಬೆನ್ನುಡಿಯನ್ನು ಮತ್ತೊಮ್ಮೆ ಓದಿ ಎಲಾ ಇವಳಾ ! ಅವಳು ಹೇಳಿದ್ದು ಸರಿ ಇದೆ. ಅವಳ ಜಾಣ್ಮೆಗೆ ಒಳಗೊಳಗೆ ಮೆಚ್ಚುಗೆಯಾಗಿದ್ದರೂ ಅದನ್ನು ತೋರದೆ ಸರಿ ಸರಿ ಒಂದು ಕಾಫಿ ಕೊಡು ಎಂದು ಮಾತು ತೇಲಿಸಿ ಕನ್ನಡಕ ಸರಿಪಡಿಸಿಕೊಂಡು ಬೇಟೆಯ ಪುಸ್ತಕದೊಳಗೆ ಕಣ್ಣು ತೂರಿದರು. ನೀಲಿ ಕವರು ಪೇಜು ಮೇಲಿನ ಹೆಣ್ಣಿನ ಬೆತ್ತಲೆ ಚಿತ್ರದ  ‘ನೀಲು’ ಓದಲು ಮುಜುಗರವಾಗಿ ರಾತ್ರಿಯ ಏಕಾಂತಕ್ಕೆ ತೆಗೆದಿಟ್ಟರು.

“ಪ್ರಸ್ತುತ ಸತ್ಯೋತ್ತರದ ಈ ಕಾಲಘಟ್ಟದಲ್ಲಿ ಮಹಿಳೆ ಎಲ್ಲಾ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿದ್ದರೂ ಅವಳ ಹೊಸ ಸವಾಲುಗಳೇ ಬೇರೆ ಇವೆ. ಕುಟುಂಬ ಮತ್ತು ವೃತ್ತಿ ಜೀವನ ಎಂಬ ಅಡಕತ್ತರಿಯಲ್ಲಿ ಸಿಕ್ಕ ಅವಳಿಗೆ ಇನ್ನಷ್ಟು ಒತ್ತಡ ಹೆಚ್ಚಾಗಿರುವ ಹೊತ್ತಿನಲ್ಲೂ ಹೆಚ್ಚು ಹೆಚ್ಚು ಹೊಸ ಮಹಿಳಾ ಸಂವೇದನೆ ಸಾಹಿತ್ಯ ಸೃಷ್ಟಿಯಾಗುತ್ತಿರುವುದು ಆಶಾದಾಯಕ “ಎಂದು ಪ್ರೋ.ಕೆ.ಡಿ.ಮಲವೇಗೌಡರು ಕೇರಳದ ಎರ್ನಾಕುಲ್ಂ ನ ಮಲೆಯಾಳಿ ಸಾಹಿತ್ಯ ಸಮ್ಮೇಳನದ ಗೋಷ್ಠಿಯಲ್ಲಿ ತಮ್ಮ ಎಂದಿನ ನಿರರ್ಗಳವಾದ ಇಂಗ್ಲೀಷ್ ನಲ್ಲಿ ಭಾಷಣ ಮಾಡುವಾಗ ಭುವನಾ ತನ್ನ ಗೆಳತಿ ಸುಹಾಸಿನಿಯ ಭುಜದ ಮೇಲೆ ತಲೆಯಾಣಿಸಿ ಆಕಳಿಸುತ್ತ ನಿದ್ದೆಗೆ ಜಾರಿದ್ದಳು. ಹೊರಗಿನ ಜಳ ಜಳ ಬಿಸಿಲಿಗೋ ಒಳಗಿನ ತಣ್ಣನೆಯೂ ಏ.ಸಿ.ಗೋ ನಿನ್ನೆ ರಾತ್ರಿಯ ಪಾರ್ಟಿಯ ಹ್ಯಾಂಗೋವರಿಗೋ ಎಲ್ಲ ಕಲಸು ಮೇಲೋಗರವಾಗಿ ಮಲವೇಗೌಡರ ಮಾತುಗಳು ಅಶರೀರವಾಣಿಯಂತೆ ಎಲ್ಲಿಂದಲೋ ತೇಲಿ ಬಂದವರ ಒಳಗಿವಿಗೆ ಅಪ್ಪಳಿಸುತ್ತಿದ್ದವು. ಖಾವಿ ಹಾಕಿಕೊಂಡು ವೇದಿಕೆಯ ಮೇಲೆ ಮಾತನಾಡುವ ಢೋಂಗಿ ಸ್ವಾಮೀಜಿಗಳಿಗೂ, ಚರ್ಚನ ಕಳ್ಳ ಪಾದ್ರಿಗಳೂ, ಮಸೀದಿಯೆ ಖದೀಮ ಮುಲ್ಲಾಗಳ ಮಾತುಗಳಿಗೂ ಸಧ್ಯ ಭಾಷಣ ಬಿಗಿಯುತ್ತಿರುವ ಮಲವೇಗೌಡರ ಮಾತುಗಳಿಗೂ ಹೆಚ್ಚಿನ ವ್ಯತ್ಯಾಸ ಇರದಂತೆ ವೇದಿಕೆಯ ಮೇಲೆ ಮಾತನಾಡುವಾಗ ಅವನು ಒಂದು ಜಿರಳೆಯಂತೆ ಕಾಣಿಸುತಿದ್ದ.

ಇದರ ಹಿಂದಿನ ರಾತ್ರಿ ಬೇಡ ಬೇಡವೆಂದರೂ ಇವರು ಉಳಿದುಕೊಂಡಿದ್ದ ಫೈವ್ ಸ್ಟಾರ್ ಹೋಟೆಲಿನಲಿ ಈ  ಹಡಬಿಟ್ಟಿ ಪ್ರೋಫೆಸರು ಕೋಲ್ಡ್ರಿಂಕಿನಲಿ ಯಾವುದೋ ಮಾದಕ ಪೇಯ ಬೆರಸಿದ್ದು, ಭುವನಾ ಎರಡು ಗುಟುಕು ಕುಡಿಯುವಷ್ಟರಲ್ಲೇ ಅದರ ಘಾಟು ವಾಸನೆ ತಡೆಯದೆ ವಾಂತಿ ಮಾಡಿ ಊಟ ಮಾಡದೇ ಮಲಗಿದ್ದಳು. ರಾತ್ರಿ ಸುಹಾಸಿನಿ ಎಷ್ಟೊತ್ತಿಗೆ ಬಂದಿದ್ದಳೊ!?- ಬಾಗಿಲು ತೆರೆದೊಡನೆ ಅವಳ ಬಾಯೊಳಗಿನ ಸಿಗರೇಟಿನ ಘಾಟಿಗೆ ಇನ್ನೊಮ್ಮೆ ವಾಂತಿ ಮಾಡಿ ಮತ್ತಷ್ಟು ಸುಸ್ತಾಗಿ ಮಲಗಿದ್ದಳು.

ನಡುವಯಸಿನ ಪ್ರೋ.ಕೆ.ಡಿ.ಮಲವೇಗೌಡ ಸ್ಪುರದ್ರೂಪಿ. ಅದ್ಭುತ ವಾಕ್ ಪಟುತ್ವ, ಎಂತಹವರನ್ನೂ ಮೋಡಿ ಮಾಡುವ ಚಾಲಾಕಿತನ ಮತ್ತು ತನ್ನ  ಅಭಿನಯ ಚಾತುರ್ಯದಿಂದಲೇ ಯುನಿವರ್ಸಿಟಿಯಲ್ಲಿ ಪ್ರಸಿದ್ಧಿಯಾಗಿದ್ದ. ಇವರಿಂದ ಮುನ್ನುಡಿ ಬೆನ್ನುಡಿ ಬರೆಸಿಕೊಳ್ಳಲು ಅಮಾಯಕ ಯುವಕ/ ಯುವತಿಯರು ಯಾವಾಗಲೂ ತುದಿಗಾಲ ಮೇಲೆ ನಿಂತಿರುತ್ತಾರೆ. ಈ ಫೇಸ್ ಬುಕ್ಕಿನಲ್ಲಂತೂ ಅವನ ಸಾವಿರಾರು ಫಾಲೋವರ್ ಗಳು. ಆ ದಿನ ಪ್ರೋಫಸರನ ಚೇಂಬರಿನಲಿ ‘ಕವಿತೆ ಚೆನ್ನಾಗಿ ಬರಿತೀಯಮ್ಮ’ಎಂದು ಭುವನಾಳ ಕೈ ಸವರಿದಾಗಲೇ ಇವಳಿಗೆ ಅದೆಂತದೊ ಇರಿಸು ಮುರಿಸಾಗಿತ್ತು ಮೈ ಮೇಲೆ ಹಲ್ಲಿ ಬಿದ್ದವರ ಹಾಗೆ ಮನೆಗೆ ಹೋಗಿ  ಮತ್ತೆ ಸ್ನಾನ ಮಾಡಿದ್ದಳು. ಆದರೆ ಈ ಅಂತರರಾಷ್ಟ್ರೀಯ ಕವಿಗೋಷ್ಠಿಯ ಅವಕಾಶ ತಪ್ಪುಬಾರದೆಂಬ ಕಾರಣಕ್ಕೆ ಅನಿವಾರ್ಯವಾಗಿ ಇಂದು ಇಲ್ಲಿಗೆ ಇವರೊಂದಿಗೆ ಬಂದಿದ್ದು.

ಇನ್ನು ಆ ಲಜ್ಜೆಗೇಡಿ ಸುಹಾಸಿನಿ ಥೂ ! ಪಿ.ಜಿ. ಮುಗಿದು ಮೂರು ವರ್ಷವಾಗಿದ್ದರೂ ಪ್ರೋಫೆಸರನಿಗೆ ತಲೆಹಿಡುಕ ಕೆಲಸ ಮಾಡುತ್ತಿದ್ದಾಳೆ. ಅವಳು ಅದೆಂಥದೋ ಅಕಾಡೆಮಿ ಸದಸ್ಯೆ ಬೇರೆ. ಪ್ರೊಫೆಸರ್ ಕತೆ/ ಕವಿತೆ ಬರೆದು ಇವಳ ಹೆಸರಿನಲ್ಲಿ ಪ್ರಕಟಿಸುತ್ತಾರೆನ್ನುವುದು ಗುಟ್ಟು ಯಾವೊತ್ತೋ ಬಯಲಾಗಿ ಇದ್ದ ಮೂರು ಕಾಸಿನ ಮಾನವೂ ಹರಾಜಾಗಿದ್ದರೂ ಅವಳು ವೇದಿಕೆಗಳಲ್ಲಿ ಮಿಂಚುತ್ತಾಳೆಂದರೆ ಊಹಿಸಿ! ಪತ್ರಿಕೆಯವರೂ ಸತ್ಯಾಸತ್ಯತೆ ಅರಿಯುವ ಗೋಜಿಗೆ ಹೋಗುವುದಿಲ್ಲ.

ಫೇಸ್ ಬುಕ್ಕಿನ ಅವಳ ಕವಿತೆಗೆ ಲೈಕು ಕೊಡುವುಕ್ಕಿಂತ ಅದರ ಮೇಲಿರುವ ಆ ಅರೆಬೆತ್ತಲೆ ಹೆಣ್ಣಿನ ಪೋಸ್ಟರಿಗಳಿಗೆ ಪುಂಡ ಪೋಕರಿಗಳು ಲೈಕೊತ್ತಿ ಆ ಅಶ್ಲೀಲ ಕಮೆಂಟುಗಳಿಗೂ ಲಜ್ಜೆಯಿಲ್ಲದೆ ಹಾರ್ಟು ಒತ್ತುವುದರ ಹಿಂದೆ ಯಾವುದೋ ಕೀಳು ಪ್ರಚಾರ ಪಡೆಯುವ ಹುನ್ನಾರವಿದೆ. ಮತ್ತು ಅದಕ್ಕೆ ಅತ್ಯುತ್ತಮ ಶೃಂಗಾರ ಕವಿತೆಗಳೆಂಬ ಖ್ಯಾತ ವಿಮರ್ಶಕ ಗುಂಪಿನ ಖೊಟ್ಟಿ ಸರ್ಟಿಫಿಕೇಟ್ ಬೇರೆ ಕೇಡು.

ಇಬ್ಬರು ಹೆಂಡಿರನ್ನು ಬೀದಿಪಾಲು ಮಾಡಿ ವೇದಿಕೆಯ ಮೇಲೆ ಹೆಣ್ಣಿನ ಸ್ವಾತಂತ್ರ್ಯ ದ ಬಗ್ಗೆ ಮಾತನಾಡುವ ಮಲವೇಗೌಡ ವೇದಿಕೆ ಇಳಿದರೆ ಸಾಕು ಮಾತುಗಳೆಲ್ಲಾ ಸೊಂಟದ ಸುತ್ತಲೇ ಸುತ್ತುತ್ತವೆ.ನಿನ್ನೆ ರಾತ್ರಿ ಕುಡಿದು ಮಾತೆತ್ತಿದದರೆ, ಬೋದಿಲೇರ, ಶೇಕ್ಸ್‌ಪಿಯರ್‌, ಬ್ರೆಕ್ಟ, ಅಡಿಗ, ಅನಂತಮೂರ್ತಿ ಬಗ್ಗೆ ಬುರುಡೆ ಬಿಡುವ ಬೂಟಾಟಿಕೆಯ ಮಾತು  ಕೇಳಲು ಅವರೇನಾದರೂ ಜೀವಂತವಿದ್ದದ್ದರೆ ನಿಜಕ್ಕೂ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರೊ ಏನೊ !? 

ಹೆಣ್ಣುಬಾಕತನ, ಕೀಳು ಪ್ರಚಾರ, ಅಧಿಕಾರದ ಲಾಲಸೆ, ಲಜ್ಜೆಗೆಟ್ಟ ನಡತೆ, ಕತ್ತುಕುಯ್ಯುವ ಸ್ಪರ್ದೆಗಳು, ತುಸು ಕಣ್ಣು ಬಿಟ್ಟು ನೋಡಿದರೆ ಸಮಾಜದ ಎಲ್ಲ ರಂಗದಲ್ಲೂ ಸಹಜವಾಗೇ  ಇದ್ದರೂ ಈಗಷ್ಟೇ ಈ ಕಾವ್ಯ ಲೋಕಕೆ ಕಾಲಿಟ್ಟು ಜಗತ್ತನ್ನು ಬೆರಗುಗಣ್ಣುಗಳಿಂದ ನೋಡುತ್ತಿದ್ದ ಭುವನಳಿಗೆ  ಈ ಕೀಳು ರಾಜಕೀಯ  ಆಘಾತ  ನೀಡಿತ್ತು.ಕನ್ನಡ ಶಾಲೆಯ ಮೇಷ್ಟ್ರು ಮಗಳಾಗಿ ಬೆಳೆದು ಅಪ್ಪ ಅಮ್ಮ ಹಾಕಿದ ಗೆರೆಯ ನೈತಿಕ ಚೌಕಟ್ಟಿನೊಳಗೆ, ಸುಸಂಸ್ಕೃತ ಆವರಣೊದಳಗೆ ಬೆಳೆದ ಇವಳಿಗೆ ಕನ್ನಡ ಸಾರಸ್ವತ ಲೋಕದ ಪರಂಪರೆಯ ಭವ್ಯ ಚಿತ್ರಣ ಕಣ್ಣು ಮುಂದೆ ಬಂದು ಆ ಲೋಕಕೂ ಪ್ರಸ್ತುತ ತಾನು ಕಾಣುತ್ತಿರುವ ಪಾತಾಳಕ್ಕಿಳಿದ ಈ ಅಧೋಲೋಕದ ಪ್ರಪಂಚಕೂ ತಾಳೆಯಾಗದೆ ಭ್ರಮನಿರಸನಗೊಂಡು ಬರೆಯುವುದನ್ನು ಬಿಟ್ಟೇ ಬಿಟ್ಟು ಕವಿ ಕತೆಗಾರರ ಹೆಸರು ಹೇಳಿದರೆ ಉರಿದುರಿದು ಬೀಳುವ ಹಾಗಾಯ್ತು.

ಆದರೂ ಭುವನಳಿಗೆ ಕಾವ್ಯ ವೆಂಬುದು ಜನ್ಮತಃ ಆತ್ಮಕಟ್ಟಿಕ್ಕೊಂಡು ಬಂದ ಪರಿಮಳದಂತೆ.ಕವಿತೆ ಬರೆಯುವುದೆಂದರೆ ಅವಳಿಗೆ ಜೀವನ್ಮರಣದ ಪ್ರಶ್ನೆ- ಅಷ್ಟು ಸುಲಭವಾಗಿ ಇವಳು ಬಿಟ್ಟರೆ ಕವಿತೆ ಇವಳನ್ನು ಬಿಡಬೇಕಲ್ಲ ! 

ಎಂ.ಎ .ಇನ್ ಇಂಗ್ಲೀಷ್ ಲಿಟರೇಚಿನಲ್ಲಿ ಬಂಗಾರದ ಪದಕದೊಂದಿಗೆ ಪಾಸು ಮಾಡಿ ನೀಟ್ ಬರೆಯುವ ಪ್ರಯತ್ನದಲ್ಲಿದ್ದಾಗಲೇ ಇವಳ ಮದುವೆ ಕಾವೇರಪ್ಪರ ಜೊತೆಯಾಗಿದ್ದು.

ಕೊನೆಗಾಲದಲ್ಲಿ ಕರಳು ಬಳ್ಳಿ ನಂಟು ಹಿಡಿದು ಬಂದ ಡಾ.ಸದಾಶಿವನಯ್ಯವರ ಮಾತು ಮೀರಲು ಇವಳ ತಾಯಿಗೆ ಸಾಧ್ಯವೇ ಇರಲಿಲ್ಲ.ಆಗಲೇ ಗಂಡನ ಸಾವಿನಿಂದ ಬಸವಳಿದಿದ್ದ ಅವರು ಯಾವ ಕೋನದಲ್ಲೂ ತನ್ನ ಮಗಳಿಗೆ ಅನುರೂಪವಾಗದ ಕಾವೇರಪ್ಪನನ್ನು ಅನಿವಾರ್ಯವಾಗಿ  ಅಳಿಯನೆಂದು ಒಪ್ಪಿಕೊಂಡಿದ್ದರು.ಮಹಾಕಾವ್ಯವೊಂದರ ಮುನ್ನುಡಿಯ ಖಾಲಿ ಪುಟದಂತೆ ತೆಳ್ಳಗಿನ ಬಿಳಿ ಹಾಳೆಯಂತೆ ಹಾಲುಗೆನ್ನೆಯ ಮೇಲಿನ ಗುಳಿಗೆ ಎಷ್ಟು ಹುಡುಗರು ಬಿದ್ದಿದ್ದರೆಂಬುದು ಈಗ  ಲೆಕ್ಕಕೆ ಸಿಗಲಾರದು ಬಿಡಿ.

ಇದಕ್ಕೆ ವ್ಯತಿರಿಕ್ತವಾಗಿ ಕಾವೇರಪ್ಪ ಈಗಷ್ಟೇ ಡಿಗ್ರಿ ಮುಗಿಸಿ ಕೆಲಸ ಹುಡುಕುತ್ತಿರುವ, ಕುಳ್ಳಗೆ, ಮೂಗಿನ ಮೇಲೆ ಇಳಿ ಬಿಟ್ಟ ಕನ್ನಡಕದ, ಗಣಪತಿ ಹೊಟ್ಟೆಯ, ಎಣ್ಣೆಗೆಂಪು ಬಣ್ಣದ, ಅಂಗಿ ಬನಿಯನುಗಳ ಮೇಲೆ ನಿಂತರೆ ಗಾರೆ ಕೆಲಸ ಮಾಡುವ ತಮಿಳು ವಲಸಿಗನಂತೆ ಕಂಡರೂ ಒಳಗೊಂದು ಮಗುವಿನ ಮನಸು ಇದೆ.

ಬೆಳ್ಳಂದೂರಿನ ನರಭಕ್ಷಕನ ಕತೆಯಿಂದ ಆರಂಭವಾದ ಕಾವೇರಪ್ಪನವರ ಓದಿನ ಜೈತ್ರಯಾತ್ರೆ ಪ್ರಪಂಚದ ಅಷ್ಟೂ ಬೇಟೆಯ ಕತೆಗಳನ್ನು ಎರಡು ತಿಂಗಳೊಳಗೆ ಓದಿ ಮುಗಿಸಿದ್ದರು. ಈ ನಡುವೆ ಅವರ ಮಾತಿನ ಶೈಲಿ ಶುದ್ಧ ಕನ್ನಡಕೆ ತಿರುಗಿ ಮನೆಯಲ್ಲಿ ಸಹಜವಾಗಿ ಮಾತನಾಡುವಾಗ ಕೂಡ ನಾಟಕೀಯತೆ ಎನಿಸಿ ಭುವನಳಿಗೆ ಇರಿಸು ಮುರುಸಾಗತೊಡಗಿತು. 

ಮಗನ ಓದಿನ ಬಗ್ಗೆ ತಲೆಕೆಡಿಸಿಕೊಳ್ಳುವ ಮಾತು ಹಾಗಿರಲಿ ಅವನು ಎಷ್ಟನೇ ತರಗತಿಯಲ್ಲಿ ಓದುತ್ತಿದ್ದಾನೆಂದು ಯಾರಾದರೂ ಕೇಳಿದರೆ ಹೇಳಲು ತಡಬಡಾಯಿಸುತ್ತಿದ್ದ ಕಾವೇರಪ್ಪನವರು, ಆಗಾಗ ಬಿಡುವಿನಲ್ಲಿ ಮಗನಿಗೆ ಆರನೆಯ ತರಗತಿ  ಕನ್ನಡ ಕಸ್ತೂರಿ ಪಠ್ಯ ಪುಸ್ತಕ ತೆರೆದು ಪಾಠ ಮಾಡತೊಡಗಿದರು.ಗದ್ಯವನ್ನು ಪದ್ಯದಂತೆಯೂ ಪದ್ಯವನ್ನು ಗದ್ಯದಂತೆಯೂ ಓದುವಾಗ ಇಂಗ್ಲೀಷ್ ಮೀಡಿಯಮ್ಮಿನಲಿ ಓದುತ್ತಿರುವ  ಮಗನಿಗೆ ಶಾಲೆಯ ಮೇಷ್ಟ್ರು ಹೇಳಿದ್ದು ನಿಜವೋ ಮನೆಯಲ್ಲಿ ಅಪ್ಪ ಮಾಡುವ ಪಾಠ ನಿಜವೊ ಒಂದೂ ತಿಳಿಯದೆ ಅಪ್ಪನ ಮಾತುಗಳು ಎಲ್ಲೋ ಕೇಳಿದ ನಾಟಕದ ಡೈಲಾಗಿನಂತೆ ಕೇಳಿಸಿ ಮಗ ಇನ್ನಿಲ್ಲದ ಫಜೀತಿಗೆ ಬಿದ್ದ.

ಹೀಗೆ ಒಂದು ದಿನ ಪಾಠ ಮಾಡುವಾಗ ಕವಿ ಬಿ.ಆರ್.ಲಕ್ಷ್ಮಣರಾಯರ ‘ಮಳೆ’ ಪದ್ಯ ಓದಿಸುತ್ತ ಕಾವೇರಪ್ಪ ಭಾವುಕರಾಗಿ ಅವರಿಗೆ ಕರೆ ಮಾಡಿ ಮಗನೊಂದಿಗೆ ಮಾತನಾಡಿಸಿ, ಏಕಕಾಲಕ್ಕೆ ಮಗನಿಗೂ ಮಡದಿಗೂ ದಂಗು ಬಡಿಸಿದ್ದರು. ತಮ್ಮ ಹೊಸ ಮನೆಗೆ ಕೇವಲ ಇಂಗ್ಲೀಷನಲ್ಲಿದ್ದ ನಂಬರ್ 468 ಎಂಬ ಬೋರ್ಡು ತೆಗೆದು ಹಾಕಿ ‘ಸುರಗಿ’ ಎಂಬ ಕನ್ನಡದ ಹೆಸರಿಟ್ಟು ಅದರ ಕೆಳಗೆ ಕಾವೇರಪ್ಪ ಬಿ.ಕಾಂ ‘ಕವಿಗಳು’ ಎಂದು ಬರೆಸಿದ್ದ ನೋಡಿದ ಅಕ್ಕ ಪಕ್ಕದ ಮನೆಯವರು ಈ ಕಾವೇರಪ್ಪನವರ ಇದು ಎಷ್ಟನೇ ಅವತಾರ ಇರಬಹುದೆಂದು ಮನಸಿನಲ್ಲಿ ಲೆಕ್ಕ ಹಾಕಿ ಲೇವಡಿ ಮಾಡಿದರು. 

ಕಾವೇರಪ್ಪನವರು ಅದಾಗಲೇ ಲಂಕೇಶ ತೇಜಸ್ವಿ ಅನಂತಮೂರ್ತಿಯವರ ಬಹುತೇಕ ಪುಸ್ತಕಗಳನ್ನು ಓದಿ ಮುಗಿಸಿದ್ದರು.ಕೇವಲ ಮಲೆನಾಡಿನಲ್ಲಿ ಬೆಳೆಯುವ ಸುರಗಿಯನ್ನು ಶಿವಮೊಗ್ಗದ ಫಾರೆಸ್ಟ ಆಫೀಸಿನಿಂದ ತರಸಿ  ಸಸಿಯನ್ನು ಮನೆ ಮುಂದೆ ನೆಡಸಿದರು. ಜನರ ಕುಹಕ ಮಾತುಗಳು ಇವರ ಕಿವಿಗೆ ಬಿದ್ದರೂ ಇದ್ಯಾವುದನ್ನೂ ತಲೆಗೆ ಅಂಟಿಸಿಕೊಳ್ಳದ ಅವರು ಲೇಔಟ್ ನ  ಅಸೋಸಿಯೇಷನನ ಅಧ್ಯಕ್ಷರನ್ನು ಭೇಟಿ ಮಾಡಿ ಈ ಸಲದ ಕನ್ನಡ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಬೇಕೆಂದೂ ಅದಕ್ಕೆ ಕನ್ನಡದ ಖ್ಯಾತ ಕವಿಗಳನ್ನು ಕರೆತರುವ ಜವಾಬ್ದಾರಿ ತನ್ನದೆಂದೂ ಇದರ ಅಧ್ಯಕ್ಷತೆಯನ್ನು ಈ ಬಾರಿ ಪಂಚಾಯತಿ ಅಧ್ಯಕ್ಷರಿಗೆ  ಕೊಡದೆ ತನಗೇ ಕೊಡಬೇಕೆಂದು ಪಟ್ಟು ಹಿಡಿದು ಮುಂಗಡವಾಗಿ ತುಸು ಅಡ್ವಾನ್ಸ ದುಡ್ಡನ್ನೂ ಕೂಡ ಕೊಟ್ಟು ಬಂದರು.ಅಸಲಿಗೆ ನವೆಂಬರ್ ನ ರಾಜ್ಯೋತ್ಸವ ಇನ್ನೂ ಎರಡು ತಿಂಗಳು ಬಾಕಿ ಇತ್ತು. ಕೆಲ ದಿನಗಳ ಹಿಂದೆಯಷ್ಟೇ ಗಣೇಶ ಚತುರ್ಥಿಯ ಚಂದಾ ಎತ್ತಲು  ಅವರ ಮನೆತನಕ ಹುಡುಗರು ಹೋದಾಗ ‘ಏನ್ರೀ ಒಂದು ಲೇ ಔಟಿನಲ್ಲಿ ಎಷ್ಟು ಗಣೇಶ ಕುಂಡ್ರಿಸ್ತೀರಿ’ ಎಂದು ಬಂದವರಿಗೆಲ್ಲಾ ಒಂದೇ ಅವಾಜು ಹಾಕಿ ಕಳಿಸಿದ್ದರು. ಲೇಔಟಿನಲಿ ತುಂಬ ಜಿಪುಣ ಎಂದು ಗುರುತಿಸಿಕೊಂಡಿದ್ದ ಕಾವೇರಪ್ಪನವರ ಈ ನಡೆಯ ಕಂಡು ಇವರಿಗೆ ನಿಜಕ್ಕೂ ಇವರಿಗೆ ಐಬು  ಹಿಡಿದಿದೆ ಎಂಬ ತೀರ್ಮಾನಕ್ಕೆ ಬಂದರು.

ಕಾವೇರಪ್ಪನವರ ಈ ನಿರಪಾಯ ಕೆಲಸಗಳಿಂದ ಯಾರಿಗೇನೂ ತೊಂದರೆಯಾಗದಿದ್ದರೂ ಭುವನಾಳಿಗೆ ಇವರ ನಡುವಳಿಕೆ  ತುಂಬ ಇರಿಸು ಮುರಿಸು ಉಂಟು ಮಾಡಿತು. ಮಗನ ಶಾಲೆಯಿಂದ ಬಂದ ಪ್ರಗತಿ ಪತ್ರಗಳಿಗೆ ಕನ್ನಡದಲ್ಲಿ ಸಹಿ ಮಾಡಿ ಕನ್ನಡದಲ್ಲಿ ಉತ್ತರಿಸಿದ್ದು ಶಾಲೆಯವರ ಕೆಂಗಣ್ಣಿಗೆ ಗುರಿಯಾಗಿದ್ದರು. ಅದಕ್ಕೆ ತಕ್ಕಂತೆ ಅರ್ಧ ವಾರ್ಷಿಕ ಪರೀಕ್ಷೆಯಲ್ಲಿ ಅವನ  ಅಂಕಗಳು ಬೇರೆ ಕಡಿಮೆ ಬಂದಿದ್ದವು. ಈಗ ಕೊನೆಯ ಬಾರಿಗೆಂಬಂತೆ ನೋಟೀಸು ಬಂದು ಮಗನ ಶೈಕ್ಷಣಿಕ  ಪ್ರಗತಿ ಕುಂಠಿತವಾದರೆ ಈ ಶಾಲೆಯಿಂದ ಟಿ.ಸಿ. ಕಿತ್ತು ಕೊಡುತ್ತೇನೆಂದು ಹೆದರಿಸಿದ್ದರು. ಇದಕ್ಕೆ ಕ್ಯಾರೇ ಎನ್ನದ ಕಾವೇರಪ್ಪ ಹೋದರೆ ಹೋಗಲಿ ಬಿಡು ಮಗನನ್ನು ಕನ್ನಡ ಶಾಲೆಯಲ್ಲಿ ಓದಿಸಿ ದೊಡ್ಡ ಆಫೀಸರನ ಮಾಡುತ್ತೇನೆಂದು ಶಾಲೆಯ ನೋಟಿಸನ್ನು ಕಸದ ಸಮ ಕಂಡು ಉದಾಸೀನ ಮಾಡಿದರು. ಎಲ್ಲಾ ಪತ್ರ ವ್ಯವಹಾರಗಳನ್ನು ಕನ್ನಡದಲ್ಲಿ ವಿಳಾಸ ಬರೆಯುತ್ತಿದ್ದರಿಂದ ಅವು ತಲುಪಬೇಕಾದವರಿಗೆ ತಲುಪದೆ ಇವರ ಮನೆಗೂ ವಾಪಸಾಗದೆ ಮಧ್ಯದಲ್ಲೆಲ್ಲೋ ಮಾಯವಾಗತೊಡಗಿದವು.

ಬ್ಯಾಂಕಿನಲ್ಲೂ ಕೂಡ ಮೊಬಲಗವನ್ನು ಕನ್ನಡದಲ್ಲಿ ಬರೆದು ಆ ಆಕ್ಸಿಸ್ ಬ್ಯಾಂಕಿನ ಉತ್ತರ ಭಾರತದ  ಹಿಂದಿ ಸಿಬ್ಬಂದಿಗಳಿಗೆಲ್ಲಾ ತಬ್ಬಿಬ್ಬುಗೊಳಿಸುತ್ತಿದ್ದರು. ಎಷ್ಟೊಂದು ಚೆಕ್ಕುಗಳೆಲ್ಲಾ ನಗದಾಗದೆ ವಾಪಸು ಬರುತ್ತಿದ್ದವು.

ಅದೊಂದು ದಿನ ಕೋರಿಯರ್ ಕಚೇರಿಯಿಂದ ಧುಮಗುಡುತ್ತ ಮನೆಗೆ ಬಂದವರೆ ‘ಬೋಳಿ ಮಕ್ಕಳಿಗೆ ಕನ್ನಡದ ವಿಳಾಸ  ಅರ್ಥವಾಗುವುದಿಲ್ಲವಂತೆ ಇಂಗ್ಲೀಷಿನಲ್ಲಿ ಬರ್ದ ಕೊಡಬೇಕೆಂತೆ, ಇಂಗ್ಲೀಷರಿಗೆ ಹುಟ್ಟಿದಂಗೆ ಆಡ್ತಾರೆ ,ಕಳ್ಳ ನನ್ನ ಮಕ್ಕಳು ಬೆಂಗಳೂರಿನಲ್ಲಿ ಅದೂ ಕನ್ನಡದ ರಾಜಧಾನಿಯಲ್ಲಿದ್ದು ಇಂಗ್ಲೀಷ ಬೇಕಂತೆ ಇಂಗ್ಲೀಷು!’… ಇವರನ್ನೆಲ್ಲಾ ಒದ್ದು ಅಂಡಮಾನಿಗೆ ವರ್ಗ ಮಾಡಿ ಕರಿನೀರ ಶಿಕ್ಷೆ ವಿಧಿಸಬೇಕು’… ಎಂದು ಆಕಾಶ ಭೂಮಿ ಒಂದು ಮಾಡೋರ ಹಾಗೆ ಕುದಿಯುತ್ತ  ಜಲ ಜಲನೇ  ಬೆವರುತ್ತಿದ್ದರು.ಈ ನಡುವೆ ಇವರಿಗೆ ಬಿ.ಪಿ.ಶುಗರು ಶುರುವಾಗಿ ಸರಿಯಾದ ಸಮಯಕೆ ಮಾತ್ರೆ ಕೂಡ ತೆಗೆದುಕೊಳ್ಳುತ್ತಿಲ್ಲ ಎಂದು ನೆನೆಪಾಗಿ ಭುವನ ಸಮಧಾನಗೊಳಿಸಿ ಶುಗರ್ ಲೆಸ್ ಕಾಫಿ ಮಾಡಿಕೊಟ್ಟು ಅವರನ್ನು ತಿಳಿಯಾಗಿಸಿದ್ದರು. ಈ ಸನ್ನಿವೇಶವನ್ನು ಕದ್ದು ಮುಚ್ಚಿ ಅಕ್ಕ ಪಕ್ಕ ಮನೆಯವರು ಕಿಡಕಿಯಿಂದ ನೋಡಿ ಕೇಳಿಸಿಕೊಂಡು ಕಾವೇರಪ್ಪನ ಕನ್ನಡ ಪ್ರೀತಿಗೆ ನಗಬೇಕೊ ಅಳಬೇಕೊ ಎಂಬ ಗೊಂದಲದಲ್ಲಿ ಮುಳುಗಿ ಹೋದರು.

ಯಾರು ಯಾವ ಗೊಂದಲದಲ್ಲಿದ್ದರೂ ಇವರು ತಲೆ ಕೆಡಿಸಿಕೊಂಡವರಲ್ಲ – ತುರ್ತಾಗಿ ಕಾವೇರಪ್ಪನವರಿಗೆ ಒಂದು ಕವಿತೆ ಬರೆಯಬೇಕು. ಅದು ತಾಯಿ ಭುವನೇಶ್ವರಿಯನ್ನು ಹೊಗಳಿ. ಆ ಕವಿತೆ ನಿಸಾರ ಅಹ್ಮದರ ಜೋಗದ ಸಿರಿಗಿಂತ ಹೆಚ್ಚು ಜನಪ್ರಿಯವಾಗಬೇಕೆಂದು. ಹಾಗಂತ ಪ್ರತಿ ರಾತ್ರಿ ಹಲ್ಲು ಗಟ್ಟಿವೂರಿ ಎಷ್ಟು ತಿಣುಕಿದರೂ ಒಂದು ಸಾಲೂ ಮೂಡುತ್ತಿರಲಿಲ್ಲ. ಕವಿಗಳಿಗೆ  ಯಾವುದಾರದರೂ ನಶೆ ಇರಬೇಕೆಂದು ಯಾರೋ ತುಂಡು ಕವಿ ಬೋದಿಲೇರನ ಉದಾಹರಣೆ ಕೊಟ್ಟು ಹೇಳಿದ್ದಕ್ಕೆ ಯಾವ ದುಶ್ಚಟವೂ ಇಲ್ಲದ ಕಾವೇರಪ್ಪನವರು ಸಿಗರೇಟು ಸೇದಲು ಶುರು ಮಾಡಿ ಮೂಡು ಬರಿಸಲು ಪ್ರಯತ್ನಿಸುತ್ತಿದ್ದರು. ಆದರೆ ಅವರು ಬಿಟ್ಟ ಹೊಗೆಯಿಂದ ಕೆಮ್ಮು ಬಂತೇ ವಿನಹ ಕವಿತೆ ಮೂಡಲಿಲ್ಲ. ಈ ನಡುವೆ ನಗರದಲ್ಲಿ ನಡೆಯುವ ಎಲ್ಲ ಕವಿಗೋಷ್ಠಿಗಳಿಗೂ ತಪ್ಪದೇ ಹಾಜರಾಗಿ ತಮ್ಮ ಉಪಸ್ಥಿತಿಯನ್ನು ಹೆಚ್ಚು ಹೆಚ್ಚು ಖಾತ್ರಿ ಪಡಿಸಿಕೊಳ್ಳಲು ಥೇಟ್ ವರಕವಿಗಳ ಅವತಾರವೆತ್ತಿದಂತೆ ಖಾದಿ ಜುಬ್ಬಾ, ಅದರ ಮೇಲೊಂದು ಖಾದಿ ಕೋಟು, ಕೋಟಿನ ಮೇಲೊಂದು ಚಿಕ್ಕ ಗುಲಾಬಿ ಮೊಗ್ಗು, 

ಬಿಳಿ ಪಾಯಜಾಮ ಕಾಲಿಗೆ ಕೊಲ್ಹಾಪುರಿ ಚಪ್ಪಲಿ, ಹಾಕಿಕೊಂಡು ಸಭೆಗೆ  ಬಂದವರೆ ಮೊದಲೊಂದು ಸೆಲ್ಫೀ ತೆಗೆದು ತಮ್ಮಫೇಸ್ ಬುಕ್ ನಲ್ಲಿ ಪೋಸ್ಟ ಮಾಡುತ್ತಿದ್ದರು. ನಂತರ ಅದರಲ್ಲಿ  ಬಂದ ಎಲ್ಲರ ಅಭಿನಂದನೆಗಳನ್ನು ಸಾದರ ಪೂರ್ವಕವಾಗಿ ಸ್ವೀಕರಿಸಿ ಪ್ರತಿಯೊಬ್ಬರಿಗೂ ಪ್ರತ್ಯೇಕವಾಗಿ ಧನ್ಯವಾದ ಹೇಳಿ ಅವರ ವ್ಯಾಟ್ಸಾಪಿಗೂ ಹೋಗಿ ಧನ್ಯವಾದ ಹೇಳಿ ಮುಗಿಸಿದ ಮೇಲೆಯೇ ಅವರು ತಮ್ಮ ಕವಿತೆ ಓದಲು ಸಜ್ಜಾಗುತ್ತಿದ್ದರು.

ಒಮ್ಮೆ ಹೀಗೆ ನಯನ ಸಭಾಂಗಣದಲ್ಲಿ  ಜರುಗಿದ ರಾಜ್ಯ ಮಟ್ಟದ ಕವಿಗೋಷ್ಠಿಯಲ್ಲಿ ಕಳೆದ ರಾತ್ರಿಯೇ ಕಷ್ಟ ಪಟ್ಟು ಬರೆದ ಕವಿತೆಯನ್ನು ಓದಲು ಗಂಟಲು ಸರಿಮಾಡಿಕೊಂಡು ‘ಅವಳ ಎದೆಯ ಮೂಲೆಯೊಳಗೆ’ ಎಂದು ಓದುವುದರ ಬದಲಿಗೆ ಎದೆಯ ‘ಮೊಲೆ’ಯೊಳಗೆ ಎಂದು ಎರಡೆರಡು ಬಾರಿ ಓದಿ ಕವಿಗೋಷ್ಠಿಯ ಅಧ್ಯಕ್ಷರನ್ನು ಕಂಗೆಡಿಸಿ ಬಿಟ್ಟು ಸಭಿಕರಿಗೆಲ್ಲಾ ಬಿದ್ದು ಬಿದ್ದು ನಗುವ ಹಾಗಾಗಿ ಗಂಭೀರ ಗೋಷ್ಠಿಯ ಮೂಡನ್ನು  ಕಾವೇರಪ್ಪನವರು ಹಾಸ್ಯ ಗೋಷ್ಠಿಗೆ ಬದಲಾಯಿಸಿಬಿಟ್ಟಿದ್ದರು. ಮುಂದೆ ಅವರು ಯಾವುದೇ ಕವಿಗೋಷ್ಠಿಗೆ ಹೋದರೂ ಅವರನ್ನು ಗೇಲಿ ಮಾಡಲು ಕೆಲ ಕು- ಕವಿಗಳು “ಕವಿಗಳೇ  ಎದೆಯ ಮೊಲೆಯ ಪದ್ಯ ಓದಿ” ಎಂದು ಕಾಲೆಳೆಯಲು ಶುರು ಮಾಡಿದಾಗ ಅದನ್ನು ಅವರು ಅಭಿಮಾನದಿಂದಲೇ ಸ್ವೀಕರಿದರು ವಿನ ಅವಮಾನವೆಂದು ತಿಳಿಯಲಿಲ್ಲ.

ಆದರೆ ಗಂಡನಿಗೆ ಹುಚ್ಚು ಹಿಡಿದ ಖಾತ್ರಿಯಾಗಿ ಅವಮಾನದಿಂದ ಕುಗ್ಗಿ ಏನು ತೋಚದೆ ಕಂಗಾಲಾಗಿ ಕಣ್ಣೀರು ಹಾಕಿದವಳೆಂದರೆ ಭುವನ ಒಬ್ಬಳೆ! 

ಕವಿತೆಗಿಂತ ಯಾವುದಾದರೊಂದು ದೊಡ್ಡ ಹುಚ್ಚು ತಗುಲಿದರೆ  ಮಾತ್ರ ಈ ಐಲು ಬಿಡಲು ಸಾಧ್ಯವೆಂದು ಅರಿತು ಆ ಸಮಯ ಬೇಗ ಬರಲೆಂದು ದೇವರಲ್ಲಿ ಬೇಡುತ್ತ ಇವರ ಹುಚ್ಚಾಟವನ್ನು ಸಹಿಸಿಕೊಳ್ಳಲೇಬೇಕಾಯಿತು. ಆದರೆ ಆ ಹುಚ್ಚು ಇದಕ್ಕಿಂತ ತೀವ್ರವಾದರೆ ಎನ್ನುವ ಭಯವೂ ಒಂದು ಕ್ಷಣ ಮನದೊಳಗೆ ಮೂಡಿ  ಇವಳನ್ನು ಕಂಗೆಡಿಸಿತು.

ಕಾವೇರಪ್ಪನವರು ಸಾಮಾನ್ಯವಾಗಿ ಇಂತಹ ಒಂದು ಕೆಲಸದಲ್ಲಿ ತೀವ್ರವಾಗಿ ತೊಡಗುವುದು ಕೇವಲ ಒಂದೈದಾರು ತಿಂಗಳು. ಇಲ್ಲವೇ ಒಂದು ವರ್ಷ ಮಾತ್ರ ಎಂದು ಪೂರ್ತಿ ಅರಿವಾಗಿದ್ದು ತಮ್ಮ ಜಮೀನಿನಲ್ಲಿ ಬೋರವೆಲ್ಲು ಕೊರೆಸುವ ಸಂದರ್ಭದಲ್ಲಿ.

ಮಹಾನಗರಕ್ಕೆ ಅಂಟಿಕೊಂಡೇ ಇರುವ ಈ ಅರ್ಕಾವತಿ  ಬಡಾವಣೆ ಮೂಲತಃ ಕಾವೇರಪ್ಪನವರ ಜಮೀನೇ. ತಮಗೊಂದು ಎಕರೆಗಾಗುವಷ್ಟು ಜಮೀನು ಇಟ್ಟುಕೊಂಡು ಉಳಿಕೆ ಜಮೀನನ್ನು ಆಂಧ್ರದ ಬಿಲ್ಡರರೊಬ್ಬರಿಗೆ ಮಾರಿಕೊಂಡಿದ್ದರು. ಇವರ ಜಮೀನಿಗೆ ಅಂಟಿಕೊಂಡಂತೆ ಶೋಭಾ ಡೆವಲಪರ್ಸನವರ ಐಷಾರಾಮಿ ಅಪಾರ್ಟ್ಮೆಂಟು. ಆದರೆ ಈ ಅಪಾರ್ಟ್ ಮೆಂಟಿನಲ್ಲಿ ಬೇಸಿಗೆಗೆ ವಿಪರೀತ ನೀರಿನ ಕೊರತೆಯಾಗಿ ಎಷ್ಟೊಂದು ಜನ ಅಪಾರ್ಟ್ಮೆಂಟ್ ನ್ನು ತೊರೆದು ಹೋಗಿದ್ದರು. ಅದರೊಳಗಡೆ ಎರಡು ಸಾವಿರ ಅಡಿಯವರೆಗೂ ಬೋರವೆಲ್ಲು ಕೊರೆದರೂ ಕೇವಲ ಅರ್ಧ ಇಂಚು ನೀರು ಬಂದು ಆರು ತಿಂಗಳೊಳಗೆ ಮತ್ತೆ ನೀರಿನ ಸೆಲೆಗಳು ಬತ್ತಿ  ಬಿಡುತ್ತಿದ್ದವು. ಇದರಿಂದ ರೋಷಿ ಹೋದ ಅಪಾರ್ಟ್ಮೆಂಟಿನ ಮ್ಯಾನೇಜರು ಕಾವೇರಪ್ಪನವರ ಸ್ನೇಹ ಸಂಪಾದಿಸಿ ಅವರ ತಲೆ ಕೆಡಿಸಿ ಇನ್ನುಳಿಕೆಯ ಜಮೀನಿನಲ್ಲಿ ಎರಡು ಬೋರು ಕೊರೆಸಿದ್ದರು. ಅಪಾರ್ಟ್ಮೆಂಟಿನ ಆ ಜಾಗಕೂ ಕಾವೇರಪ್ಪನವರ ಕೊರೆಸಿದ ಬೋರಿನ ಜಾಗಕೆ  ಕೇವಲ ನೂರು ಅಡಿಯ ವ್ಯತ್ಯಾಸವಿದ್ದರೂ ಇಲ್ಲಿ ಎಂತಹ ಬೇಸಿಗೆಯಲ್ಲೂ ದಿನದ ಇಪ್ಪತ್ತನಾಲ್ಕು ಗಂಟೆ ಎರಡು ಇಂಚಿನ ನೀರು ಬರುತ್ತಿತ್ತು.

ಈಗ ಈ  ಅಪಾರ್ಟ್ಮೆಂಟಿಗೆ ಇವರ ಬೋರವೆಲ್ಲಿನಿಂದ ಪೈಪು ಲೈನು ಮಾಡಿಸಿ ನೀರು ಬಿಟ್ಟರು.ಅಸೋಸಿಯೇಷನ್ ನ ಜನ ಕಾವೇರಪ್ಪ ನವರನ್ನು ಸಾಕ್ಷಾತ್ ಭಗೀರಥ ಮಹರ್ಷಿಗೆ ಹೋಲಿಸಿ ಕೈ ಮುಗಿದರು. ಇದರಿಂದ ಅವರಿಗೆ ಸಾಕಷ್ಟು ದುಡ್ಡು ಕೂಡ ಬಂದಿತು. ಇದರಿಂದ ಖುಷಿಯಾದ ಮ್ಯಾನೇಜರ್ ಕಾವೇರಪ್ಪನ ಕೈಗುಣ ಚೆನ್ನಾಗಿದೆ ಎಂದು ಹೊಗಳಿ ಅಟ್ಟಕ್ಕೇರಿಸಿದರು. ಏಕೆಂದರೆ ಅವರ ಜಮೀನಿನಲ್ಲಿ ವಾಟರ್ ಪಾಯಿಂಟು ಗುರುತಿಸಿದ್ದು ಇವರೇ. ಮತ್ತು ಇವರು ಹೇಳಿದ ಪಾಯಿಂಟುಗಳೆಲ್ಲೆಲ್ಲಾ ಭರ್ಜರೀ ನೀರೇ ನೀರು.

ಕಾವೇರಪ್ಪನವರು ನೀರಿನ ಪಾಯಿಂಟ್ ಹೇಳುವ ಸುದ್ದಿ ನೀರಿಲ್ಲದೆ ಭಣಗುಡುತ್ತಿದ್ದ ಬೆಂಗಳೂರಿನ ಬಡಾವಣೆಗರಿಗೆಲ್ಲಾ ಕಾಳ್ಗಿಚ್ಚಿನ ವೇಗದಲ್ಲಿ ಹರಡಿತು. ಹೀಗಾಗಿ ಬೆಳಕು ಹರಿಯುವ ಹೊತ್ತಿಗೆ ಇವರ ಮನೆಯ ಮುಂದೆ ಯಾರಾದರೊಬ್ಬರು ತಮ್ಮ  ಸೈಟಿಗೆ, ಜಮೀನಿಗೆ, ಬಡಾವಣೆಗೆ ವಾಟರ್ ಪಾಯಿಂಟ್ ಗುರುತಿಸಲು ಕರೆದೊಯ್ಯತೊಡಗಿದಾಗ ಚೆನ್ನಾಗಿ ಕಾಸೂ ಬರತೊಡಗಿತು. ಕಾವೇರಪ್ಪನವರು ಅದಕ್ಕೆ ತಕ್ಕಂತೆ ಸ್ವಲ್ಪ ಸಸ್ಪೆನ್ಸು, ನಂಬಿಕೆ, ಧರ್ಮ, ನೂಕಿ ಪರಿಸ್ಥಿತಿಯ ಲಾಭ ಎತ್ತಲು ನೋಡಿದರು. ಹೋದಲೆಲ್ಲಾ ಕಾವೇರಪ್ಪನವರು ಕೈಯೊಳಗೆ ತೆಂಗಿನ ಕಾಯಿ ಹಿಡಿದೋ ಅಥವಾ ಕೋಲು ಹಿಡಿದೋ,ನಿಂಬೆ ಹಣ್ಣೋ ಮಂತ್ರಿಸಿಯೋ ಕೊಡುತ್ತಿದ್ದರು. ಏನೂ ತೋಚದಿದ್ದಾಗ ಗಾಳಿಯಲ್ಲಿ ಏನೋ ಬರೆದವರ ಹಾಗೆ ಮಾಡಿ ಆಕಾಶ ನೋಡುತ್ತ ಲೆಕ್ಕ ಹಾಕಿ ಅವರು ನಿಂತಲ್ಲಿ ಪಾಯಿಂಟ್ ಗುರುತಿಸಿ ಬರುತ್ತಿದ್ದರು. ಅದೃಷ್ಟವೋ ದೇವರಾಟವೋ “ಕಾವೇರಪ್ಪ ನಿಂತ ಕಾಲಡಿ ಕಾವೇರಿ ಹರಿಯುತ್ತಾಳೆ” ಎಂಬ ಜನಪದವೇ ಸೃಷ್ಟಿಯಾಗುವಷ್ಟು ಈ ಭಾಗದಲ್ಲಿ ಪ್ರಸಿದ್ದಿಯಾದರು. ಈ ಪ್ರಸಿದ್ಧಿ ಕಾವೇರಪ್ಪನವರ ಎಷ್ಟು ತಲೆಗೇರಿತ್ತೆಂದರೆ ಒಂದು ದಿನ ತಮ್ಮ ಮನೆಯ ಮುಂದೆ ಯಾರೂ ಬರಲಿಲ್ಲವೆಂದರೆ ಅಕ್ಷರಷಃ ಹುಚ್ಚು ಹಿಡಿದವರಂತೆ ಹತಾಶರಾಗುತ್ತಿದ್ದರು. ಯಾರ ಯಾರದೊ ಹಳೆಯ ಪಾಯಿಂಟ್ಗಳಲ್ಲಿ ಎಷ್ಟು ನೀರು ಇದೆ ಎಂದು ತಿಳಿದುಕೊಂಡು ಬರಲು ತಮ್ಮ ಹಳೆಯ ಲೂನಾ ಹತ್ತಿ  ದಿನವಿಡೀ ಸುತ್ತಾಡಿ ಕೆಲ ಹಳ್ಳಿಗಳಿಗೂ ಹೋಗಿ ಯಾವ ಯಾವದೋ ಸುಡುಗಾಡು ಸಿದ್ಧರ ಜೊತೆಗೂಡಿ ಯಂತ್ರ ಮಂತ್ರ ತಂತ್ರ ಕಲಿತರು. ಎರಡು ಮೂರು ದಿನ ಮನೆಯಿಂದ ಹೊರಗಿದ್ದರೂ ಭುವನಳಿಗೆ ಕರೆ ಮಾಡಿ ತನ್ನ ಇರುವನ್ನೂ ತಿಳಿಸದಷ್ಟು ಬೇ-ಖಬರರಾಗಿ ಬಿಡುತ್ತಿದ್ದರು. ಕಾವೇರಪ್ಪನವರ ಈ ಹುಚ್ಚು ಬಿಡಲು ಕೊರೋನ ಎಂಬ ಮಹಾಮಾರಿಯೇ ಬರಬೇಕಾಯಿತು. ಕಾಯಿಲೆ ತೀವ್ರವಾಗಿ ಜನರು ಬೆಂಗಳೂರು ನಗರ ಖಾಲೀ ಮಾಡಿದಾಗ ಸಹಜವಾಗಿ ನೀರಿನ ಬೇಡಿಕೆಯೂ ಕಮ್ಮಿಯಾಗಿ ಕಾವೇರಪ್ಪನವರ ಕಾಲಡಿಯ ಕಾವೇರಿಯ ಪ್ರವಾಹ ಕೂಡ ಇಳಿದು- ಒಂದು ಹುಚ್ಚು ಬಿಟ್ಟಾಗ ಹಿಡಿದಿದ್ದು ಈ ಕವಿತೆಯ ಹುಚ್ಚು.

ಈಗೀಗ ಕಾವೇರಪ್ಪನವರು ತಮ್ಮ ಮನೆಯ ಟೆರೇಸ್ ಮೇಲಿನ ಸ್ಟೋರ್ ರೂಮನ್ನೇ ತಮ್ಮ ಖಾಯಂ ಅಡ್ಡಾವನ್ನಾಗಿ ಪರಿವರ್ತಿಸಿಕೊಂಡಿದ್ದಾರೆ. ರೂಮಿನೊಳಗೆ ಕಾಲಿಡುತ್ತಿದ್ದಂತೆ ಎದಿರು ಗೋಡೆಯ ಮೇಲೆ ತಾಯಿ ಭುವನೇಶ್ವರಿಯ ಫೋಟೊ ಹಾಗು ಸಾಲಾಗಿ ಕನ್ನಡದ ಜ್ಞಾನ ಪೀಠ ವಿಜೇತರ ಫೋಟೋಗಳು. ಕನ್ನಡ ಇಂಗ್ಲೀಷ್ ಭಾಷೆ ಸೇರಿದಂತೆ ಎಲ್ಲ ಪುಸ್ತಕಗಳ ಪುಟ್ಟ ಲೈಬ್ರರಿ. ಮನೆಯ ಹಿಂದಿನ ಭಾಗಕೆ ದೊಡ್ಡ ಕಿಡಕಿಯ ಪಕ್ಕ ಡೈನಿಂಗ್ ಟೇಬಲ್ಲು ಮತ್ತು ಅದರ ಪಕ್ಕ  ಬಣ್ಣ ಬಣ್ಣ ದ ಕಲಾತ್ಮಕ ಕುಸುರಿಯ ಬಾಟಲಿಗಳ ದುಬಾರಿ ವಿದೇಶಿ ಮದ್ಯ ತುಂಬಿದ ಕ್ರಾಕರಿ.

ಕಾವೇರಪ್ಪನವರಿಗೆ ಸಿಗರೇಟಿನ ಜೊತೆಗೀಗ ಕುಡಿತವೂ ಧಾರಾಳವಾಗಿದೆ. ಹಿರಿ ಕಿರಿಯಗೆಳೆಯರ ಜೊತೆಗೂಡಿ ಪ್ರತಿದಿನ ಗುಂಡು ಹಾಕುವುದು ಈಗ ಮಾಮೂಲು. ಮತ್ತು ಹೀಗೆ ಗುಂಡಿನ ಗಮ್ಮತ್ತಿನಲಿ ಲಹರಿಗೆ ಬಿದ್ದರೆಂದರೆ ಆದಿ ಕವಿ ಪಂಪನಿಂದ ಇಂದಿನ  ಚಂಪಾರವರೆಗೆ ಎಲ್ಲಾ ಕವಿಗಳು ಇವರ ನಾಲಿಗೆಯ ತುದಿಯ ಮೇಲೆ ಕುಣಿಯುತ್ತಾರೆ. ಹೀಗೊಮ್ಮೆ ಇವರ ಗುಂಡು ಮೇಜಿನ  ಪರಿಷತ್ತಿಗೆ ಇಂದಷ್ಟೇ ಬಂದ ಕಿರಿಯ ಈ ಚಂಪಾ ಅಂದ್ರೆ ಯಾರು ಸರ್ ? ಎಂದು ಕೇಳಿ ಬಿಟ್ಟ –  ಭಲೇ ಕೋಪದಲ್ಲಿ ನಿಮ್ಮೂರಿನ ಚಂಪಕ್ಕ ಕಣೊ…ಇಡಿಯಟ್ ! ಎಂದು ಮುದ್ದಾಗಿ ರೇಗಿ ನೀವೆಲ್ಲಾ ಓದಬೇಕು ಕಣ್ರೋ! ಎಷ್ಟು ಸಮೃದ್ಧವಾಗಿದೆ ಕನ್ನಡ ಸಾಹಿತ್ಯ ಏನು ಕತೆ. ಎಲ್ಲಿಯ ತೇಜಸ್ವಿ ! ಎಲ್ಲಿಯ ಕೆನೆತ್ ಅಂಡರ್ಸನ್ ? ಎಲ್ಲಿಂದ ಎಲ್ಲಿಗೆ ಈ ಭಾಷೆಯ ನಂಟು, ಬೆಸುಗೆ. ಜಗತ್ತಿನಲ್ಲಿ ಮನುಷ್ಯರನ್ನು ಮನುಷ್ಯರೊಂದಿಗೆ ಬೆಸೆಯುವುದು ಕೇವಲ ಕಲೆ ಸಾಹಿತ್ಯ ಒಂದೇ  ಕಣ್ರೋ ಹುಚ್ಚಪ್ಪಗಳಿರಾ. ಬಾಕಿ ಎಲ್ಲಾ ಬರಿ ಒಣ ಭಾಷಣ, ಬ್ರಿಟನ್ ರಾಣಿ ಎಲಿಜಿಬೆತ್ತು ಅವಳ ಕಿರೀಟದ ಕೋಹಿನೂರು ವಜ್ರ, ಮಲ್ಯ ಮೋದಿ ದೇವೆಗೌಡ್ರು  ಬಾಂಬು, ಬಂದೂಕು ಮತ್ತು ದ್ವೇಷ.

ಇಲ್ಲಿರುವ ಹಲವು ಕಿರಿಯರು ವ್ಹಿಸ್ಕಿಯ ಮೇಲಿನ ಆಸೆಗೊ ಕಾವೇರಪ್ಪನ ಮಾತಿಗೋ ಒಟ್ಟಿನಲ್ಲಿ ಖಾಲೀ ಬಂದವರು ಹೊಟ್ಟೆ ತುಂಬ ವ್ಹಿಸ್ಕಿ ತಲೆ ತುಂಬ ವಿಚಾರ ತುಂಬಿಕೊಂಡು ಹೋಗಿ ಅವರ ಋಣದಲ್ಲಿದ್ದಾರೆ. ಇವರೆಲ್ಲಾ ಹೋದ ಮೇಲೆ ಕೆಳಗಿಳಿದು ಅಡುಗೆ ಮನೆಯಲ್ಲಿದ್ದ ಮೊಸರನ್ನ ಉಂಡು ಮತ್ತೆ ಟೆರೇಸಿಗೆ ಒಂದು ಸಿಗರೇಟಿನ ಹೊಗೆ ಬಿಟ್ಟು ಡರ್ರ್… ಡರ್ರ್. ಅಂತ ತೇಗುವಾಗ ಅರ್ಕಾವತಿ ಲೇ ಔಟಿನಲಿ ತಣ್ಣಗೆ ತಮ್ಮ ತಮ್ಮ ಹೆಂಡಂದಿರ ಕಾಲ ಮೇಲೆ ಕಾಲು ಹಾಕಿ ಮಲಗಿದ ಸೋಂಭೇರಿ ಗಂಡಸರನ್ನು ನೆನೆದು ಇವರಿಗೆಲ್ಲಿ ಈ ಟೇಸ್ಟು ಬರಬೇಕು ಥೂ! ಮೂರ್ಖ ಶಿಖಾಮಣಿಗಳು.. ಎಂದು ಅಚ್ಚ ಕನ್ನಡದಲ್ಲೆ ಬೈದು ಅವರ ಬಗ್ಗೆ ಮರುಕಪಟ್ಟು ಮಲಗಿಬಿಡುತ್ತಾರೆ.

ಹೀಗಿರುವಾಗ ಒಂದು ಮಧ್ಯ ರಾತ್ರಿ ಕಾವೇರಪ್ಪನವರ ಮೊಬೈಲಿಗೆ ಠಣ್ಣ ಅಂತ ಒಂದು ಮೆಸೇಜು ಮೆಸೆಂಜರಿಗೆ ಬರುತ್ತದೆ. ಮತ್ತು ಆ ಮೆಸೇಜು ಬೇರೆ ಯಾರದೂ ಅಲ್ಲದೆ ‘ಕಾವ್ಯ ಕನ್ನಿಕೆ’ಯದ್ದಾಗಿರುತ್ತದೆ. ಕಾವ್ಯ ಕನ್ನಿಕೆ ಅಂದರೆ ಕಳೆದ ಎಷ್ಟೋ ವರ್ಷಗಳಿಂದ ಫೇಸ್ ಬುಕ್ಕಿನ ಸಿಲೆಬ್ರೆಟಿ. ಅದು ಗಂಡೋ ಹೆಣ್ಣೋ ಅಥವ ಎರಡೂ ಅಲ್ಲದ್ದೋ ಎಂಬ ಅನುಮಾನ ಫೇಸ್ ಬುಕ್ಕ ತುಂಬ ಇದೆ.

ಯಾರಾದರೂ ಇರಲಿ. ಅವಳ ಕವಿತೆಗಳೋ ಆಹಾ! ಗಜಲುಗಳೋ ! ಕಾವೇರಪ್ಪನವರಂತೂ ಅವಳ ಕವಿತೆಯೊಳಗಿನ ಕಾರುಣ್ಯ, ಪ್ರೇಮ, ಕಾಮ, ವಾಂಛೆ, ವಿರಹ, ಮೋಸ…ಎಲ್ಲ ಗುಣಿಸಿ ಭಾಗಿಸಿ ಕಳೆದು ಅವರೊಳಗೆ ಅವಳು ಉಳಿದೆದ್ದೇನೆಂದರೆ- ಅವಳೊಬ್ಬ ಚಿರವಿರಹಿ. ಅವರ ನೆಚ್ಚಿನ ಕವಯಿತ್ರಿ. ಮೊಗೆದಷ್ಟೂ ಕೊಡುವ ಪ್ರೀತಿ, ಪ್ರೇಮ ಕಾಮ ತುಂಬಿ ತೊನೆದಾಡುವ ಬಳ್ಳಿ ಮರವನಪ್ಪಲು ಹಂಬಲಿಸುವ ಹೆಣ್ಣು, ಮಣ್ಣಿನ ಗಂಧ. ಅವಳ ಸ್ನೇಹಕ್ಕಾಗಿ ಎಷ್ಟೋ ದಿನಗಳ ಹಿಂದೆ ಕೈ ಚಾಚಿದವ. ಅವಳನ್ನು ತನ್ನ ಕನಸಿಗೆ ಕಾಮನೆಗೆ ಬರಸೆಳೆದವ. ಅವಳೊಂದು ಕೇವಲ  ಕಲ್ಪನೆಯಲ್ಲ ಅದೃಷ್ಟರಿಗೆ ಮಾತ್ರ ಸಿಗುವ  ಕನಸಿನಂತಹ ಹೆಣ್ಣು…

ಇಂದು ಅದೇ ಕಾವ್ಯ -ಕನ್ನಿಕೆ  ಕಾವೇರಪ್ಪನವರ ಮೊಬೈಲಿಗೆ ಬಂದು ಹಾಯ್ ಎಂದಿದ್ದಾಳೆಂದರೆ – 

ಕಾವೇರಪ್ಪನ ಕವಿತೆಯ ಕಾವು ಇಳಿದು ಈಗ ಪ್ರೇಮದ ಕಾವು ಏರಿದಂತೆಯೇ ಸರಿ. ಒಂದು ಹುಚ್ಚು ಬಿಟ್ಟು ಇನ್ನೊಂದಕೆ ಹಾರಲು ಒಂದು ಗೇಣು ಮಾತ್ರ ಗ್ಯಾಪು. ಹಾಗಂತ ಅಂದುಕೊಂಡ  ಭುವನಾ ಎಂಬ ‘ಕಾವ್ಯ- ಕನ್ನಿಕೆ’ ಈ ಬಾರಿ ಗಂಡನ ಮೇಲೆ ಇನ್ನೊಂದು ಹೊಸ ಬಾಂಬು ಎಸೆದು  ದೊಡ್ಡ ಹುಚ್ಚು ಕಳೆಯುವ ಆಟದ ಖುಷಿಯಲ್ಲಿ ಅಂದು ರಾತ್ರಿ ನಿದ್ದೆ ಬರದೆ ಒಂಟಿ ಮಂಚದ ಮೇಲೆ ಹೊರಳಾಡುತ್ತಿದ್ದಾಗ ನೆತ್ತಿಯ ಮೇಲಿನ ಚಂದ್ರ ಇಷ್ಟಗಲ ಬಾಯಿ ತೆಗೆದು ಹುಚ್ಚನಂತೆ ನಗುತ್ತಿದ್ದ.

‍ಲೇಖಕರು avadhi

May 1, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: