ಕೆ ರಾಜಕುಮಾರ್
**
ಇದು ರಾಮನ ಕಥೆಯಲ್ಲ. ಹಾಗಾಗಿ ರಾಮಾಯಣವಲ್ಲ. ಇದು ಬೆವರು ಬಸಿದು ಬದುಕು ಕಟ್ಟಿಕೊಂಡ ಪುಸ್ತಕ ಪ್ರಕಾಶಕ ಹಾಗೂ ಮಾರಾಟಗಾರ ಎಂ. ಲಕ್ಷ್ಮಣ ಎಂಬ ಶ್ರಮಜೀವಿಯ ಸಾಹಸ ಗಾಥೆ. ಇದು ಕನಸನ್ನು ನನಸು ಮಾಡಿಕೊಂಡ ನನಸುಗಾರನ ಕಥೆ. ಹಾಗಾಗಿ ಇದು ಲಕ್ಷ್ಮಣಾಯಣ.
ಲಕ್ಷ್ಮಣ್ ಬುದ್ಧಿಯನ್ನು ನಂಬಿ ಬದುಕಿದವರಲ್ಲ. ಬೆವರನ್ನು ಬಸಿದು ಸಾಧಿಸಿದವರು. ಹದಿಹರೆಯದಲ್ಲೇ ಬೆಂಗಳೂರಿಗೆ ಬಂದು ಸೋದರಮಾವನ ಪುಸ್ತಕದ ಅಂಗಡಿಯಲ್ಲಿ ಸಹಾಯಕರಾಗಿ ಸೇರಿಕೊಂಡರು. ದಿನಕ್ಕೆ ರೂ. 2/-ರಂತೆ ಸಂಬಳ ನಿಗದಿ. ಪ್ರತಿದಿನ ರಾತ್ರಿ ಕೆಲಸ ಮುಗಿಸಿ ಹೊರಡುವಾಗ ಮಾವ (ದಿ) ಹರಿನಾಥ್ ಅವರು ಬಟಾಣಿ , ಪುರಿ, ಉಪ್ಪುಕಡಲೆ ತೆಗೆದುಕೊಳ್ಳಲು ಸೋದರಳಿಯನಿಗೆ ಹತ್ತು ಪೈಸೆ ಭಕ್ಷೀಸು ನೀಡುತ್ತಿದ್ದರು. ಮಾವನ ಪುಸ್ತಕ ಮಳಿಗೆ ಇದ್ದದ್ದು ಎಲ್ಲಿ ಗೊತ್ತೆ? ಅವೆನ್ಯೂ ರಸ್ತೆಯ ಅಂಚೆ ಕಚೇರಿಯ ಮೂರು ಮೆಟ್ಟಿಲ ಮೇಲೆ! ಇದು ಮೂರು ಮೆಟ್ಟಿಲ ಸೌಧ! ಇವರ ಆಸೆ ಮೊಳೆತಿದ್ದು; ಕನಸು ಚಿಗುರಿದ್ದು ಮಣ್ಣಿನಲ್ಲಲ್ಲ. ಅವೆನ್ಯೂ ರಸ್ತೆ ಎಂಬ ಇರುಕು ಬೀದಿಯ ಕಾಲುಹಾದಿಯ ಧೂಳು, ದುಮ್ಮು ಹಾಗೂ ಇವುಗಳ ಜೊತೆಗಿನ ಫಳಫಳ ಬಿಸಿಲಿನಲ್ಲಿ.
ಮುಂದೆ ಲಕ್ಷ್ಮಣ್ ಸ್ವತಂತ್ರರಾದರು. ಎರಡಡಿ ಆಳ ಮತ್ತು ಎಂಟಡಿ ಎತ್ತರಕ್ಕೆ ಗೋಡೆ ಕೊರೆದು, ಅದನ್ನೇ ಅಂಗಡಿಯೆಂದು ಮಾಡಿದ್ದ ಮಳಿಗೆಯಲ್ಲದ ಮಳಿಗೆ ಒಂದಿತ್ತು. ಅದನ್ನೇ ಎಮ್ಮ ಲಕ್ಷ್ಮಣ್ ಬಾಡಿಗೆಗೆ ಪಡೆದರು. ಅಲ್ಲಿ ಹಳೆಯ ಪಠ್ಯಪುಸ್ತಕಗಳನ್ನು ಮಾರಲು ತೊಡಗಿದರು. ಜೊತೆಗೆ ಬೇಡಿಕೆಯಿದ್ದ ಕೆಲವು ‘ಜನರಲ್ ಬುಕ್ಸ್’ ಅಲ್ಲಿರುತ್ತಿದ್ದವು. ಅವರು ವ್ಯಾಪಾರದಲ್ಲಿ ಕಡ್ಡಿ ತುಂಡು. ನೇರಾ ನೇರ ವ್ಯಾಪಾರ. ಆದರೆ ಯಾರಿಗೂ ಮುಳುಗಿಸಿದ್ದು, ಉಂಡೆನಾಮ ತಿಕ್ಕಿದ್ದು ನಾ ಅರಿಯೆ. ಯಾರೂ ಈ ಕುರಿತು ದೂರಿದ್ದನ್ನೂ ನಾ ಕೇಳಿಲ್ಲ.
ಅನಂತರ ಪಕ್ಕದಲ್ಲೇ ಒಂದು ಅಂಗಡಿ ಕೊಂಡರು. ಅದಕ್ಕೆ ‘ಪೂಜಾ ಪುಸ್ತಕ ಭಂಡಾರ’ ಎಂದು ಕರೆದರು. ಪುಸ್ತಕವೆಂದರೆ ಏನೂ ಅರಿಯದ ಮಡದಿ ಪ್ರೇಮಾ ಅವರನ್ನು ನೇರ ಅಡುಗೆ ಮನೆಯಿಂದ ಕರೆತಂದು ಅಲ್ಲಿ ಕೂರಿಸಿ ವ್ಯಾಪಾರದ ಗುಟ್ಟು ಮತ್ತು ಸೂತ್ರಗಳನ್ನು ಕಲಿಸಿದರು. ಅವೆನ್ಯೂ ರಸ್ತೆಯ ತುಂಬ ಸಾಲು ಸಾಲು ಪಠ್ಯಪುಸ್ತಕದ ಅಂಗಡಿಗಳು. ಹಾಗಾಗಿ ಲಕ್ಷ್ಮಣ್ ಪಠ್ಯಪುಸ್ತಕಗಳ ಉಸಾಬರಿಗೆ ಹೋಗಲಿಲ್ಲ. ದಿನನಿತ್ಯದ ಬದುಕಿಗೆ ಬೇಕಾದ ಆರೋಗ್ಯ, ಅಡುಗೆ, ಶಿಕ್ಷಣ, ಪೂಜೆ ಪುನಸ್ಕಾರಗಳಿಗೆ ಸಂಬಂಧಿಸಿದ ಕೃತಿಗಳನ್ನು ಅಲ್ಲಿ ಸಗಟು ಮಾರಾಟಕ್ಕಿಟ್ಟರು. ಬೇರೆ ಊರುಗಳಿಂದ ಅವೆನ್ಯೂ ರಸ್ತೆಗೆ ಪುಸ್ತಕ ಖರೀದಿಗೆ ಬರುವವರಿಗೆ ತಮ್ಮ, ತಮ್ಮ ಅಂಗಡಿಗಳಿಗೆ ಬೇಕಾದ ‘ಜನರಲ್ ಬುಕ್ಸ್’ ಅಲ್ಲೇ ಸಿಗುವಂತಾಯಿತು. ಪರ ಊರುಗಳವರು ಅವುಗಳಿಗಾಗಿ ಬೆಂಗಳೂರಿನಲ್ಲಿ ಅಲ್ಲಿ, ಇಲ್ಲಿ ತಡಕಾಡುವುದು ತಪ್ಪಿತು. ಸಮಯ ಉಳಿಯಿತು. ಲಕ್ಷ್ಮಣ್ ಬೆಳೆದರು. ಪ್ರಕಾಶಕರಾದರು. ಸುಮಾರು 400 ಕನ್ನಡ ಕೃತಿಗಳನ್ನು ಪ್ರಕಟಿಸಿದರು. ಪ್ರೊ. ಎಲ್.ಎಸ್. ಶೇಷಗಿರಿ ರಾವ್ ಅವರಿಂದ ಷೇಕ್ ಸ್ಪಿಯರನ ನಾಟಕಗಳ ಕಥಾರೂಪವನ್ನು ಬರೆಯಿಸಿ ಪ್ರಕಟಿಸಿ ಸಂಭ್ರಮಿಸಿದರು.
ಅನಂತರ ಏನಾಯಿತು? ಆದದ್ದೆಲ್ಲ ಹೀಗೂ ಉಂಟೆ ಎಂಬ ಅಚ್ಚರಿ. ಅವರು ತಮ್ಮ ಅಂಗಡಿಯ ಅಕ್ಕ, ಪಕ್ಕ, ಮೇಲೆ ಇದ್ದ ಮೂರು ಅಂಗಡಿಗಳನ್ನು ಕೊಂಡರು. ಜೊತೆಗೆ ತಮ್ಮ ಪ್ರಕಟಣೆಗಳ ದಾಸ್ತಾನಿಗಾಗಿ ಅವೆನ್ಯೂ ರಸ್ತೆಯ ಆಜೂಬಾಜಿನಲ್ಲಿ ನಾಲ್ಕು ಗೋದಾಮುಗಳನ್ನು ಬಾಡಿಗೆಗೆ ಪಡೆದರು. ಇವರು ವ್ಯಾಪಾರದಲ್ಲಿ ಗೆಲ್ಲುವುದಿಲ್ಲ ಮುಳುಗುತ್ತಾರೆ. ಖೇಲ್ ಖತಂ ದುಕಾನ್ ಬಂದ್ ಆಗುತ್ತದೆ. ಇರುವ ಪುಟ್ಟ ಮನೆಯನ್ನೂ ಮಾರಿಕೊಳ್ಳುತ್ತಾರೆ ಎಂದು ಅಶುಭ ನುಡಿದವರೂ ಸಹ ಇವರು ಜಿಗಿದ ಎತ್ತರ ಕಂಡು ಮೂಕರಾದರು. ಲಕ್ಷ್ಮಣ್ ಜಿಗಿಜಿಗಿಯುತ ನಲಿ ಎಂದು ಏರುತ್ತಲೇ ಇದ್ದರು. ಅವರು ಅಕ್ಷರಪ್ರೇಮಿ. ತಾವು ನಂಬಿದ ಪುಸ್ತಕ ತಮ್ಮನ್ನು ಕೈಬಿಡಲಿಲ್ಲ ಎಂಬ ತೃಪ್ತಭಾವ ಅವರಲ್ಲಿ ಮನೆ ಮಾಡಿತ್ತು. ಹ್ಞಾಂ, ಮನೆಯನ್ನು ಮಾರಿಕೊಳ್ಳಲಿಲ್ಲ. ಬಂಗಲೆಯಂತಹ ಮನೆಯನ್ನು ಕೊಂಡರು.
ಯಾವ ಚಟಗಳೂ ಅವರಿಗಿರಲಿಲ್ಲ. ಒಳ್ಳೆಯ ಕೆಲಸವೆಂದು ಮನವರಿಕೆಯಾದರೆ, ತಾವಾಗಿ ಬಂದು ಪಾಲು ನೀಡುತ್ತಿದ್ದರು. ಒಳ್ಳೆಯ ಉದ್ದೇಶವುಳ್ಳ ಸಂಘ ಸಂಸ್ಥೆಗಳ ಸದಸ್ಯರಾಗುವುದರಲ್ಲೂ ಅವರಿಗೆ ಇನ್ನಿಲ್ಲದ ಆಸಕ್ತಿ. ಒಮ್ಮೆಯೂ ತಿರುಪತಿಯನ್ನು ನೋಡಲಾಗದ ಬಡವರನ್ನು ಹುಡುಕಿ, ಒಗ್ಗೂಡಿಸಿ ಪ್ರತ್ಯೇಕ ಬಸ್ಸು ಮಾಡಿ ಅವರನ್ನು ಸಗೌರವದಿಂದ ಕರೆದೊಯ್ದು ತಿರುಪತಿ ಯಾತ್ರೆ ಮಾಡಿಸುತ್ತಿದ್ದರು. ಪೂರ್ತಿ ಖರ್ಚನ್ನು ಭರಿಸುತ್ತಿದ್ದ ಉದಾರಿ ಅವರು.
ವಯಸ್ಸು 74 ಆಯಿತು. ಆರೋಗ್ಯ ವಂಚಿತರಾದರು. ವಯೋಸಹಜ ಕಾಯಿಲೆಗಳು ಬಾಧಿಸಿದವು. ಹಾಸಿಗೆ ಹಿಡಿದ ಕ್ಷಣದವರೆಗೆ ದುಡಿಮೆ, ದುಡಿಮೆ, ದುಡಿಮೆ. ಅದರಲ್ಲೇ ಸಾರ್ಥಕತೆ ಕಂಡ ಜೀವಿ ಎಂ. ಲಕ್ಷ್ಮಣ್. ಇದೀಗ ಅವರು ಹಾಕಿಕೊಟ್ಟ ಹಾದಿಯಲ್ಲಿ ಅವರ ಮಗನ ಯಾನ ಸಾಗಿದೆ. ಮುಗಿಯದಿರಲಿ ಈ ಅಕ್ಷರ ಪಯಣ.
0 ಪ್ರತಿಕ್ರಿಯೆಗಳು