ಲಂಕೇಶ್ ಬರೆದ ಮೂರು ಕಾಡುವ ಹಾಡುಗಳು

 

ಎಲ್ಲಿಂದಲೋ ಬಂದವರು ಸಿನೆಮಾಕ್ಕೆ ಲಂಕೇಶರು ಬರೆದ ಮೂರು ಹಾಡುಗಳು ಕನ್ನಡ ಚಿತ್ರರಂಗದಲ್ಲೇ ಬಲು ಅಪರೂಪದವು. ಅವುಗಳಲ್ಲಿ “ಕೆಂಪಾದವೋ…” ಹಾಡು ಅತ್ಯಂತ ಜನಪ್ರಿಯ. ಅದರ ಜೊತೆಗೇ “ಎಲ್ಲಿದ್ದೆ ಇಲ್ಲೀತಂಕ…” ಮತ್ತು “ಕರಿಯವ್ನ ಗುಡಿ ತಾವ…” ಹಾಡುಗಳನ್ನು ಇಲ್ಲಿ ಕೊಡುತ್ತಿದ್ದೇವೆ. ಪಠ್ಯವಾಗಿ ಅವನ್ನು ಓದಿಕೊಳ್ಳುವಾಗ ಸಿಗುವ ಖುಷಿ ನಿಮ್ಮದೂ ಆಗಲಿ ಎಂದು.

 

peacock on cupಕೆಂಪಾದವೋ ಎಲ್ಲಾ
ಕೆಂಪಾದವೋ

ಹಸುರಿದ್ದ ಗಿಡಮರ
ಬೆಳ್ಳಗಿದ್ದ ಹೂವೆಲ್ಲ
ನೆತ್ತರ ಕುಡಿಧಾಂಗೆ ಕೆಂಪಾದವೋ

ಹುಲ್ಲು ಬಳ್ಳಿಗಳೆಲ್ಲ
ಕೆಂಪಾದವು
ನೂರು ಕಂದಮ್ಮಗಳು
ಕೆಂಪಾದವು

ಜೊತೆಜೊತೆಗೆ ನಡೆದಾಗ
ನೀಲ್ಯಾಗಿ ನಲಿದಂಥ
ಕಾಯುತ್ತ ಕುಂತಾಗ
ಕಪ್ಪಾಗಿ ಕವಿದಂಥ
ನುಡಿನುಡಿದು ಹೋದಾಗ
ಪಚ್ಚಾಯ ತೆನೆಯಂಥ
ಭೂಮಿಯು ಎಲ್ಲಾನೂ
ಕೆಂಪಾದವೋ
ನನಗಾಗ ಕೆಂಪಾದವೋ

ಕೆಂಪಾದವೋ ಎಲ್ಲಾ
ಕೆಂಪಾದವೋ

* * *

gujjar ladyರಿಯವ್ನ ಗುಡಿ ತಾವ
ಅರಳ್ಯಾವೆ ಬಿಳಿ ಹೂವು
ಸೀಮೆಯ ಜನ ಕುಣಿದು ನಕ್ಕಾಂಗದ
ತುಂಟ ಹುಡುಗ್ಯಾರಲ್ಲಿ
ನೆವ ಹೇಳಿ ಬರುತಾರೆ
ಹರೆಯದಾ ಬಲೆಯಲ್ಲಿ ಸಿಕ್ಕಾಂಗದ

ಊರಿಂದ ನಾಕ್ ಹೆಜ್ಜೆ
ಹಾಕಿದರೆ ಕಾಣ್ತೈತೆ
ಚೆಂದಾಗಿ ಹರಿತಾಳೆ ಐರಾವತಿ
ಮಳೆಗಾಲ ಬಂದಾಗ
ಮೈಮರೆತು ಹರಿದವಳು
ಬ್ಯಾಸ್ಗ್ಯಾಗೆ ಬಸವಳಿದ ಐರಾವತಿ

ಕರಿಯವ್ನ ಗುಡಿ ತಾವ
ಪಣ ತೊಟ್ಟು ಗೆದ್ದವರು
ಇನ್ನೂ ಬದುಕೇ ಅವರೆ ಸರದಾರರು
ಕಟ್ಟೊಡೆದು ಬಡಿದಾಡಿ
ಉಯ್ಯಾಲೆ ತೂಯ್ದಾಡಿ
ಮನಸಾರೆ ಮೆಚ್ಚಿಸಿದ ಸರದಾರರು

ಅಲ್ಲೊಂದು ಗಿಣಿ ಕೂತು
ಕಥೆಯೊಂದ ಹೇಳೈತೆ
ಕೇಳಾಕೆ ನಾನಿಲ್ಲ ಊರೊಳಗೆ
ಕಥೆ ನಡೆದ ದಿನದಿಂದ
ಕೆಂಪಾಗಿ ಹರಿದವಳೆ
ಕಥೆಗಳಾ ಮಾರಾಣಿ ಐರಾವತಿ

ಕರಿಯವ್ನ ಗುಡಿ ತಾವ
ಅರಳ್ಯಾವೆ ಬಿಳಿ ಹೂವು
ಸೀಮೆಯ ಜನ ಕುಣಿದು ನಕ್ಕಾಂಗದ
ತುಂಟ ಹುಡುಗ್ಯಾರಲ್ಲಿ
ನೆವ ಹೇಳಿ ಬರುತಾರೆ
ಹರೆಯದಾ ಬಲೆಯಲ್ಲಿ ಸಿಕ್ಕಾಂಗದ

* * *

leaves designಎಲ್ಲಿದ್ದೆ ಇಲ್ಲೀತಂಕ
ಎಲ್ಲಿಂದ ಬಂದ್ಯವ್ವ
ನಿನ ಕಂಡು ನಾನ್ಯಾಕೆ ಕರಗಿದೆನೊ

ಸುಡುಗಾಡು ಹೈದನ್ನ
ಕಂಡವಳು ನೀನ್ಯಾಕೆ
ಈಟೊಂದು ತಾಯಾಗಿ ಮರುಗಿದೆಯೊ

ನೂರಾರು ಗಾವುದ
ಬಂದಿದ್ದೆ ಕಾಣವ್ವ
ಬಂದಿಲ್ಲ ಅನಿಸಿತ್ತು ನೋಡಿದರೆ

ಇಲ್ಲೇ ಈ ಮನೆಯಾಗೆ
ಹುಟ್ಟಿದ್ದೆ ಅನಿಸಿತ್ತು
ನಿನ್ನನ್ನ ಆ ಗಳಿಗೆ ನೋಡಿದರೆ

ಎಲ್ಲಿದ್ದೆ ಇಲ್ಲೀತಂಕ
ಎಲ್ಲಿಂದ ಬಂದ್ಯೆವ್ವ
ನಿನ ಕಂಡು ನಾನ್ಯಾಕೆ ಕರಗಿದೆನೊ

 

‍ಲೇಖಕರು admin

November 5, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: