ರೇಣುಕಾರಾಧ್ಯ ಎಚ್ ಎಸ್ ಓದಿದ ‘ಆಟಗಾಯಿ’

ಕಡು ವಾಸ್ತವವಾದಿ ಕತೆಗಳು : ಆಟಗಾಯಿ…

ರೇಣುಕಾರಾಧ್ಯ ಎಚ್ ಎಸ್

ಕನ್ನಡ ಕಥಾ ಲೋಕಕ್ಕೆ ಹೊಸ ಸೇರ್ಪಡೆ ಕತೆಗಾರ ಆನಂದ ಗೋಪಾಲರ ಮೊದಲ ಕಥಾ ಸಂಕಲನ “ಆಟಗಾಯಿ” . “ಆಟಗಾಯಿ” ಕಥಾ ಸಂಕಲನದಲ್ಲಿನ ಕತೆಗಳು ಬದುಕಿನ ಸುಡುವಾಸ್ತವವನ್ನು ಹಸಿಹಸಿಯಾಗಿ ನಮ್ಮ ಮುಂದಿಡುತ್ತದೆ. ಸಮಾಜದಲ್ಲಿ ಕುಟುಂಭ ಎಂದರೆ ಸುರಕ್ಷತೆಯ, ನಂಬಿಕೆಯ, ಅಪಾರ ಪ್ರೀತಿಯ, ಬೆಚ್ಚಗಿನ ತಾಣ ಎಂಬ ಜನರಲ್ ಆದ ನಂಬಿಕೆ ಇದೆ.

ಈ ಕುಟುಂಬದ ಎಲ್ಲ ಯಶಸ್ಸಿಗೂ ಗಟ್ಟಿ ನೈತಿಕ ಮೂಲವಾದ ದಾಂಪತ್ಯವೇ ಕಾರಣ ಎಂಬ ಘೋಷಿತ ಸತ್ಯ ಒಡೆದು ಮನುಷ್ಯನ ಬದುಕು ಹಾಗಲ್ಲ ಅದು ಈ ಕುಟುಂಬದ ಕೂಡು ಜೀವನಕ್ಕೆ ಬೇರೆ ಬೇರೆ ಕಾರಣಗಳಿವೆಯೇ ಹೊರತು, ಅದು ಸಹಜವಾದುದಲ್ಲ ಎಂಬ ಕಟು ಸತ್ಯವನ್ನು ಮನಗಾಣಿಸುತ್ತವೆ.

ಮನುಷ್ಯನ ಇರುವಿಕೆ, ಮಾನವೀಯ ಸಂಬಂಧಗಳ ಗಟ್ಟಿತನ, ಟೊಳ್ಳುತನ ಇವೆಲ್ಲವೂ ಕೂಡ ಬದುಕಿನ ಸಂದರ್ಭಗಳ ಮೇಲೆ ನಿರ್ಧಾರಿತವಾದುವೆ ಹೊರತು ಸ್ಥಾಯಿಯಲ್ಲ ಎಂಬ ಸತ್ಯವನ್ನು ಓದುಗನೊಳಕ್ಕೆ ಇಳಿಸುತ್ತವೆ. ಇಲ್ಲಿನ ಕತೆಗಳಲ್ಲಿನ ಕತೆಗಾರ ಮಹಾ ವಾಸ್ತವವಾದಿ, ಬದುಕಿನ ಅದರ್ಶಗಳ ಬಗೆಗೆ, ಲೋಕ ನಂಬಿರುವ ಕೌಟುಂಬಿಕ ಬದುಕಿನ ನಂಬಿಕೆಗಳ ಬಗೆಗೆ ಗುಮಾನಿ ಕಣ್ಣಿನವ. ಮಾನವ ಬದುಕಿನ ಸಹಜತೆ, ಅದರ ಅಸಹಾಯಕತೆ, ಪ್ರೇಮ, ಹಾದರ, ಆದರ್ಶ ಅವುಗಳ ಅನಿವಾರ್ಯತೆಗಳು, ಅವುಗಳ ಸಾರ್ಥಕತೆ, ನಿರರ್ಥಕತೆಗಳು ರೂಪಿಸುವ ಈ ಬದುಕು, ಈ ಬದುಕಿನ ಆಟದ ಕಾಯಿಗಳಾದ (ಆಟಗಾಯಿ) ಹುಲು ಮಾನವರ ಬದುಕು ಎಲ್ಲರ ಕಣ್ಣಿಗೂ ಕಾಣಿವಷ್ಟು ಸಪಾಟಾಗಿಲ್ಲ, ಸರಳವಾಗಿಲ್ಲ ಎಂಬ ಕಟು ವಾಸ್ತವವನ್ನು ಇಲ್ಲಿನ ಕತೆಗಳು ಕಾಣಿಸುತ್ತವೆ.

ಇಲ್ಲಿನ ಕತೆಗಳನ್ನು ಓದುತ್ತಿದ್ದರೆ ದುತ್ತನೆ ಕಣ್ಣ ಮುಂದೆ ಬರುವುದು ಜೈನ ಕಥೆಗಳು. ಬದುಕಿನ ನಗ್ನ ಸತ್ಯವನ್ನು ಹೇಳಲು ಜೈನ ಕತೆಗಾರರು ಒಂದು ಕತೆಯನ್ನು ಹೇಳಲು ತೊಡಗಿ, ಆ ಕತೆಯಲ್ಲಿ ಮತ್ತೊಂದು ಕತೆಯನ್ನು , ಮತ್ತದರೊಳಗೊಂದು ಕತೆಯನ್ನು ಕಟ್ಟುವ ತಂತ್ರ ಬಳಸುತ್ತಾರೆ. ಆನಂದ ಗೋಪಾಲರ ಕತೆಗಳಲ್ಲೂ ಈ ತಂತ್ರವೇ ಇದೆ. ಜೈನ ಕತೆಗಾರರು ವಾಸ್ತವದ ಕತೆಗಾರರು, ಆದರ್ಶದ ಹಾಡುಗಾರರಲ್ಲ ಎಂಬಂತೆ ಆನಂದ ಗೋಪಾಲ್ ಕೂಡ ಕಡು ವಾಸ್ತವವಾದಿ ಕತೆಗಾರ.

ಕನ್ನಡ ಕಥಾ ಪರಂಪರೆಯಲ್ಲಿ ಕೌಟುಂಬಿಕ ಬದುಕಿನ ವಿಘಟನೆಗಳನ್ನೆ ಕೇಂದ್ರವಾಗಿಟ್ಟು ಕೊಂಡ ಕಥಾ ಲೋಕವನ್ನು ಕೊಟ್ಟವರು ಖಾಸನೀಸರು, ವ್ಯಾಸರು, ಮತ್ತು ಬಿ.ಸಿ.ದೇಸಾಯಿಯವರು. ಅವರುಗಳ ನಂತರದಲ್ಲಿ ಕೌಟುಂಬಿಕ ಜಗತ್ತನ್ನು ಒಳ ಹೊಕ್ಕು ಅಲ್ಲಿನ ಸಹಜತೆ ಮತ್ತು ಅಸಹಜತೆಗಳನ್ನು ನಿರ್ಮಮಕಾರದಲ್ಲಿ ಕಂಡು, ಕಾಣಿಸುವ ನಮ್ಮ ತಲೆಮಾರಿನ ಗಟ್ಟಿ ಕತೆಗಾರ ಆನಂದ ಗೋಪಾಲ್ ಎಂಬುದಕ್ಕೆ ಇಲ್ಲಿನ ಕತೆಗಳೆ ಸಾಕ್ಷಿ.

ಈ ಸಂಕಲನದಲ್ಲಿನ “ಧರೆಗಿಳಿದ ನಕ್ಷತ್ರ” “ಬೇಬಿ” ” ರಂಕು ರಾಟ್ನ” “ವ್ರಣ” “ದೀಪದ ಬುಡ” ” ಉಸುಬು” “ನಾಲ್ವರು” ಓದಲೇಬೇಕಾದ ಕತೆಗಳು. ಈ ಬದುಕು ಹೇಗೆ ಒಂದೇ ಅನುಭವಕ್ಕೆ ಮನುಷ್ಯನ ಹಿಡಿತಕ್ಕೆ ಸಿಗುವುದಿಲ್ಲವೋ ಹಾಗೆಯೇ ಆನಂದ ಗೋಪಾಲರ ಕತೆಗಳೂ ಕೂಡ ಒಂದೇ ಓದಿಗೆ ಕೈಗೆ, ಕಣ್ಣಿಗೆ, ಸಿಗುವಂತಹವು ಅಲ್ಲ. ಹಾಗಾಗಿ ಇಲ್ಲಿನ ಕತೆಗಳು ಒಂದಕ್ಕಿಂತ ಹೆಚ್ಚು ಓದನ್ನು ಬಯಸುವಂತಹವು. ನಾಳೆ ಬೆಳಿಗ್ಗೆ ಹನ್ನೊಂದಕ್ಕೆ ಆನಂದ ಗೋಪಾಲರ ” ಆಟಗಾಯಿ” ಕಥಾ ಸಂಕಲನ ಮೈಸೂರಿನ ಜೆ ಎಲ್ ಬಿ ರಸ್ತೆಯಲ್ಲಿರುವ ಜಾವಾ ರೋಟರಿ ಸಭಾಗಂಣದ ಆರ್ ಟಿ.ಎನ್. ದೇವೆಗೌಡ ಸಭಾಂಗಣದಲ್ಲಿ ಬಿಡುಗಡೆ ಆಗುತ್ತಿದೆ.

ಹೊಸ ತಲೆಮಾರಿನ ಬರಹಗಾರರ ಬರವಣಿಗೆಯ ಬಗೆಗೆ ಗಟ್ಟಿ ನಂಬಿಕೆ ಮತ್ತು ಆಶಾವಾದವನ್ನು ಇಟ್ಟುಕೊಂಡು, ಸಾಕಷ್ಟು ಯುವ ಬರಹಗಾರರಿಗೆ ಪ್ರೋತ್ಸಾಹ ನೀಡುತ್ತಲಿರುವ ಕನ್ನಡದ ಹಿರಿಯ ಕತೆಗಾರರೂ, ಅನುವಾದಕರೂ ಆಗಿರುವ ಕೇಶವ ಮಳಗಿಯವರು “ಆಟಗಾಯಿ” ಕಥಾಸಂಕಲವನ್ನು ಬಿಡುಗಡೆ ಮಾಡಲಿದ್ದಾರೆ. ಹೊಸ ಬರಹಗಾರರ ಬರಹಗಳನ್ನು ತಪ್ಪದೇ ಓದಿ, ಅವರ ಬರಹಗಳ ಶಕ್ತಿಯನ್ನೂ, ಮಿತಿಯನ್ನೂ ತಮ್ಮ ಅಭಿಪ್ರಾಯ, ಪ್ರತಿಕ್ರಿಯೆ, ಬರಹಗಳ ಮೂಲಕ ವೈಯುಕ್ತಿಕವಾಗಿ ಹಾಗು ಪತ್ರಿಕೆಯ ಮೂಲಕ ವ್ರತದಂತೆ ನಿರಂತರವಾಗಿ ಮಾಡಿಕೊಂಡುಬರುತ್ತಿರುವವರು ಕವಿ, ಕತೆಗಾರ, ವಿಮರ್ಶಕ ಮತ್ತು ಪತ್ರಕರ್ತರಾದ ಚ.ಹ.ರಘುನಾಥ್ ಅವರು ಕಥಾ ಸಂಕಲನ ಕುರಿತು ಮಾತನಾಡಲಿದ್ದಾರೆ.

ಈ ಕಥಾ ಸಂಕಲನವನ್ನು ಪ್ರಕಟಮಾಡಿರುವುದು ನಮ್ಮ ತಲೆಮಾರಿನ ವಿಶಿಷ್ಟ ಕವಿ, ಸಂಕಥನ ಪ್ರಕಾಶನದ ಪ್ರಕಾಶಕ ರಾಜೇಂದ್ರ ಪ್ರಸಾದ್ ಅವರು. ಈ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ಶೈಲಜಾ ನಾಗರಘಟ್ಟ ಅವರು ಇರಲಿದ್ದಾರೆ. ಈ ಕಾರ್ಯಕ್ರಮಕ್ಕೆ ತಮ್ಮ ಮಧುರ ಗಾಯನದಿಂದ ಚಾಲನೆ ಕೊಡುವವರು ಶ್ವೇತಾ ಮಡಪ್ಪಾಡಿ ಅವರು…. ಇವರೆಲ್ಲರಿಗೂ ಅನಂತ ಧನ್ಯವಾಗಳನ್ನು ತಿಳಿಸುತ್ತಾ… ಕನ್ನಡ ಕಥಾ ಲೋಕಕ್ಕೆ ಇನ್ನಷ್ಟು ಗಟ್ಟಿ ಕತೆಗಳನ್ನು ಗೆಳೆಯ ಆನಂದ್ ಗೋಪಾಲ್ ಕೊಡಲಿ ಎಂದು ಆಶಿಸುತ್ತಾ… ನಾಳಿನ ಈ ಕಾರ್ಯಕ್ರಮಕ್ಕೆ ದಯಮಾಡಿ ಮೈಸೂರು ಹಾಗೂ ಸುತ್ತಮುತ್ತಲ ಹಿರಿಯರು, ಗೆಳೆಯರು ಬನ್ನಿ, ಭೇಟಿಯಾಗೋಣ ಎಂದು ಪ್ರೀತಿಯಿಂದ ಆಹ್ವಾನಿಸುತ್ತಿದ್ದೇನೆ.

ಆನಂದ ಗೋಪಾಲ್ ಮೂಲತಃ ಕೋಲಾರ ಜಿಲ್ಲೆಯ ಮಾಲೂರಿನವರು. ಬೆಂ.ವಿ ವಿ. ಕನ್ನಡ ಅಧ್ಯಯನ ಕೇಂದ್ರದಿಂದ ಕನ್ನಡ ಎಂ ಎ ಯನ್ನು ಮೊದಲ ರ್ಯಾಂಕ್ ಜೊತೆಗೆ ನಾಲ್ಕು ಚಿನ್ನದ ಪದಕಗಳೊಂದಿಗೆ ಪಡೆದು, ಕತೆಗಾರ ಕೆ. ಸತ್ಯನಾರಾಯಣ ಅವರ ಕತೆಗಳ ಬಗೆಗೆ ಮೈಸೂರು ವಿ ವಿ ಯಿಂದ ಪಿ.ಎಚ್ ಡಿ ಪಡೆದು ಸದ್ಯ ಮೈಸೂರಿನ ಶಾರದ ವಿಲಾಸ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿದ್ದಾರೆ. “ಆಟಗಾಯಿ” ಇವರ ಮೊದಲ ಕಥಾ ಸಂಕಲನ. ಸದ್ಯದಲ್ಲೆ ಕಾದಂಬರಿಯೊಂದು ಪ್ರಕಟವಾಗಲಿದೆ.

‍ಲೇಖಕರು Admin

June 7, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: