ರೇಖಾ ರಂಗನಾಥ ಲಹರಿ- ಸವಾರಿ…

ರೇಖಾ ರಂಗನಾಥ

ಬೆಲ್ಲದ ಸವಿಯ ಸವಿಗಾರನೇ ಸವಿಗಾಣುವಂತೆ, ಸವಾರಿಯಲ್ಲಿರೋ ಮಜಾ ಸವಾರನೇ ಬಲ್ಲ. ಕುದುರೆ ಸವಾರಿ, ಒಂಟೆ ಸವಾರಿ, ಕಡಲ ತೆರೆಗಳ ಮೇಲೆ ಸವಾರಿ, ತೇಲುವ ಗಾಳಿಯೊಂದಿಗೆ ತೇಲಿಕೊಂಡು ಸವಾರಿ.. ಹೀಗೆ ಅನೇಕ ಸವಾರಿಗಳ ಪಟ್ಟಿ ಬೆಳೆದಂತೆ ಈ ಸವಾರಿ ಪದ ನನ್ನ ಮೇಲೆ ಸವಾರಿ ಹೂಡತಾನೇ ಇತ್ತು. ಅದೇ ಕಾರಣಕ್ಕೆ ನಾನು ತಿರುಗಿ ಅದರ ಮೇಲೆಯೆ ಸವಾರಿ ಹೂಡಿ ಎಲ್ಲಿಂದ ಶುರುವಿಟ್ಟು ಅಂತ್ಯಗೊಳ್ಳುವುದೆಂಬ ಹುಡುಕಾಟದಲ್ಲಿ ಎಡೆಬಿಡದೆ ತೊಡಗಿಸಿಕೊಂಡಿದ್ದು. ನಂತರದಲ್ಲಿ ನನಗನ್ನಿಸಿದ್ದು ಮೊದಮೊದಲು ವಿಚಿತ್ರವೆನಿಸಿದರು ಸಚಿತ್ರವಾಗಿಯೇ ಕಂಡಿತು.

ಅಲ್ಲಮ ಪ್ರಭುವರು,
ಎತ್ತಣ ಮಾಮಾರ ಎತ್ತಣ ಕೋಗಿಲೆ
ಎತ್ತಣಿಂದೆತ್ತ ಸಂಭಂದವಯ್ಯಾ?..
ಎನ್ನುವಂತೆ ಈ ಸವಾರಿ ಮತ್ತು ಭಗವಂತನನ್ನು ನಾವು ಸಮೀಕರಿಸಬಹುದು. ಈಗ ನಿಮ್ಮ ಮೆದಳು ಚುರುಕಾಗಿ ಅಲೆಗಳು ಎಳುತ್ತಿರಬಹುದು. ಶ್ರೀಮನ್ನ ನಾರಾಯಣನೆಲ್ಲಿ? ಸವಾರಿ ಎಲ್ಲಿ? ಎಲ್ಲಿಂದ ಎಲ್ಲಿಗೆ? ಹೇಗೆ ಸಮಾನವೆಂಬ ಸವಾಲು ಸುತ್ತುತ್ತಿರಬಹುದು. ಹೇಗೆಂಬುದನ್ನ ಸಾಕ್ಷಿ ಸಹಿತ ನಾನು ಉತ್ತರಿಸಬಲ್ಲೆ. ಮನುಷ್ಯನ ಇಚ್ಛೆ, ಕಟ್ಟಿಕೊಂಡ ಹರಿಕೆಗಳಿಗೆಲ್ಲ ಆ ನಾರಾಯಣ ತಥಾಸ್ತು ವೆನ್ನುವ ಹಾಗೆ ಸವಾರಿ ಖಂಡಿತವಲ್ಲ. ಡಾ. ರಾಜಕುಮಾರವರ ಅಭಿನಯದ ಭಕ್ತ ಪ್ರಲ್ಹಾದ ಸಿನೆಮಾ ನೋಡದೆ ಉಳಿದವರಾರು ಇಲ್ಲ. ತಪ್ಪು ಹೆಜ್ಜೆ ಹಾಕೋ ಮಕ್ಕಳಿಂದ ಹಿಡಿದು ತೆಪ್ಪಗೆ ಊರುಗೋಲು ಊರಿ ಚಲಿಸುವ ಮುಪ್ಪಾನು ಮುಪ್ಪು ಮಕ್ಕಳವರೆಗೂ ಭಕ್ತ ಪ್ರಲ್ಹಾದನ ಕಥೆ ಸೆಳೆದಿಡುವುದು.

ಹಿರಣ್ಯ ಕಶಿಪು ಮಗ ಪ್ರಲ್ಹಾದನಿಗೆ,
“ಹರಿ ಹರಿ ಎಂದು ಗಂಟಲು ಹರಿದುಕೊಳ್ಳುವೆಯಲ್ಲಾ? ಎಲ್ಲಿದ್ದಾನೆ ಆ ನಿನ್ನ ಹರಿ? ಭೂಮಿಯಲ್ಲಿ, ಆಕಾಶದಲ್ಲಿ, ಬೆಂಕಿಯಲ್ಲಿ ನೀರಿನಲ್ಲಿ, ಗಾಳಿಯಲ್ಲಿ, ನನ್ನಲ್ಲಿ, ನಿನ್ನಲ್ಲಿ…?

ಪ್ರಲ್ಹಾದ ಉತ್ತರವಾಗಿ ಅಲ್ಲಿಯೂ ಇದ್ದಾನೆ, ಇಲ್ಲಿಯೂ ಇದ್ದಾನೆ. ನನ್ನಲ್ಲಿಯೂ ನಿನ್ನಲ್ಲಿಯೂ ಎಲ್ಲೆಲ್ಲಿಯೂ ಇದ್ದಾನೆವೆಂದು ನುಡಿವನು. ಸವಾರಿ ಕೂಡ ಇದಕ್ಕೆ ಹೊರತಾಗಿಲ್ಲ. ಮಗು ಜನ್ಮ ತಳೆಯುವ ಮೊದಲೆ ತಾಯಿಯ ಗರ್ಭದಲ್ಲಿ ಸವಾರಿ ಹೂಡಿಕೊಂಡೆ ಜಗತ್ತಿಗೆ ಅವತರಿಸಿ ತಾಯಿಯ ಮಡಿಲಿಗೆ, ಅಪ್ಪನ ಬೆನ್ನಿಗೆ, ಅಜ್ಜ ಅಜ್ಜಿಯಂದಿರು ತೊಡೆಯ ಮೇಲೆ ಸವಾರಿ ನಂತರದಲ್ಲಿ ಸೈಕಲ್ಲು, ಬಸ್ಸು, ಟ್ರೇನು, ಹಡುಗು, ವಿಮಾನ, ಪ್ಯಾರಾಚ್ಯುಟ, ಕುದುರೆ, ಒಂಟೆ ಹೀಗೆ ಭೌತಿಕ ಸವಾರಿ ಹೂಡಿದರೆ : ಆನೇಕಾನೇಕ ವಿಷಯಗಳಲ್ಲಿ ಬೌದ್ಧಿಕ ಸವಾರಿಯು ಹೂಡುವುದು.

ದಾಂಪತ್ಯ ಕಲಹದಲ್ಲಿ ಗಂಡ ಹೆಂಡತಿಯ ಮೇಲೆ ಹೆಂಡತಿ ಗಂಡನ ಮೇಲೆ, ಅತ್ತೆ ಸೊಸೆ ಮೇಲೆ ಸೊಸೆ ಅತ್ತೆ ಮೇಲೆ ಕೊನೆಗೆ ಏಕಾಂಗಿಯಾಗಿರುವಾಗಲೂ ಬೇಕಿರುವುದು ಬೇಡದಿರುವ ಹಲವಾರು ಸಂಗತಿಗಳು ಮೆದುಳಿನ ಮೇಲೆ ಸವಾರಿ ಹೂಡತಾನೆ ಇರುತ್ತವೆ. ಕೊನೆಗೆ ವ್ಯಕ್ತಿಯ ಅಂತ್ಯದಲ್ಲೂ ಅಗ್ನಿ ಸ್ಪರ್ಶದೊಂದಿಗೆ ಆತನ ಸವಾರಿ ಕೊನೆಗೂಳ್ಳುವುದು. ಒಟ್ಟಾರೆಯಾಗಿ ಸವಾರಿಯ ಮಂಥನ ಕೈಗೊಂಡಾಗ ಇದು ನನ್ನಲ್ಲಿಯೂ, ನಿನ್ನಲ್ಲಿಯೂ, ಆಕಾಶದಲ್ಲಿಯೂ, ಗಾಳಿಯಲ್ಲಿಯೂ, ನೀರಿನಲ್ಲಿಯೂ, ಭೂಮಿಯಲ್ಲಿಯೂ, ಕೊನೆಗೆ ಅಗ್ನಿಯಲ್ಲೂ ಸವಾರಿ ಕೈಗೊಳ್ಳುವ ಕಾರಣ ಭಗವಂತನಂತೆ ಸರ್ವಾಂತರ್ಯಾಮಿಯಾಗಿ ಸಮೀಕರಿಸಬಹುದು.

ಬೌದ್ಧಿಕ ಸವಾರಿ ಯಾರ ಪರವಾನಿಗೆಗೂ ಕಾಯದೇ ನಿಗೂಢ ಕಾರ್ಯ ಪ್ರವರ್ತವಾಗುವುದು. ಭೌತಿಕ ಸವಾರಿಗಳಿಗೆ ಅವಕಾಶವು, ಅದೃಷ್ಟವೂ, ಸವಾರಿ ಬಯಸುವ ಮನಸ್ಥಿತಿಯು ಬೇಕು. ಮೊದಲಿನ ದಿನಗಳಲ್ಲಿ ಮಕ್ಕಳಿಗೆ ಧೈರ್ಯ ತುಂಬಲೆಂದು ಮನೆ ಎದುರು ಕರಡಿ ಆಡಿಸುವರು ಬಂದಾಗ ಕರಡಿ ಮೇಲೆ ಎಳೆ ಮಕ್ಕಳ ಸವಾರಿ ಹಾಗೆ ಜಾತ್ರೆ ದಿನಗಳಲ್ಲಿ ಮಾವುತನೊಟ್ಟಿಗೆ ಆನೆ ಮೇಲೆ ಮಕ್ಕಳ ಸವಾರಿ ಕಂಡಿದ್ದಿದೆ. ಈಗಿನ ದಿನಗಳಲ್ಲೂ “ಯಾರೇ ಕೂಗಾಡಲಿ ಊರೇ ಹೋರಾಡಲಿ ಎಮ್ಮೆ ನಿನಗೆ ಸಾಟಿಯಿಲ್ಲ…” ರಾಜಕುಮಾರವರ ಹಾಡು ಹಾಡುತ ಎಮ್ಮೆ ಮೇಲೆ ದನಗಾಹಿ ಹುಡುಗನ ಸವಾರಿ, ಅಷ್ಟೇ ಏಕೆ ಬೆಳ್ಳಕ್ಕಿ, ಕಾಗೆಗಳು ಕೂಡ ಎಮ್ಮೆ ಮೇಲೆ ಸವಾರಿ ಸಾಗುವ ನೈಸರ್ಗಿಕ ಸೌಂದರ್ಯವನ್ನು ಸವಿಯಬಹುದು.

ಒಂಟೆ ಸವಾರಿ, ಕುದುರೆ ಸವಾರಿಯಲ್ಲಿ ಸಾಕಷ್ಟು ಬಾರಿ ಸಾಗಿದಷ್ಟು ಮತ್ತೆ ಬೇಡಿಕೆಯ ಪಟ್ಟಿಯಲ್ಲಿ ಆದ್ಯತೆ ಗಿಟ್ಟಿಸಿಕೊಳ್ಳುವುದು. ಇನ್ನೂ ಸೈಕಲ್ ಸವಾರಿಯಂತೂ ನನ್ನ ಮಟ್ಟಿಗೆ ಕಂಡಾಗಲೊಮ್ಮೆ ಸವಾರಿ ಹೂಡುವಷ್ಟು ಬಯಕೆಯ ಚಿಗುರು. ಇತ್ತೀಚಿಗೆ ನಮ್ಮೂರಲ್ಲಿ ನಡೆದ ಅದ್ದೂರಿ ಸೈಕಲ್ಲೋತ್ಸವದಲಿ ಹಳದಿ ಬಾನಾಡಿಗಳಂತೆ ಸೈಕಲ್ ಸವಾರರು ಕಂಡದ್ದು. ಮೇಲೆ ಹಾರಾಡುವ ಡ್ರೋನ್, ಹಿಂದೆ ಸಾಗಿ ಬರುವ ಆಂಬುಲೆನ್ಸ್, ನೂರ್ ಜಹಾನ್ ಬಂದ್ಲಾ ಅಂತ ಇಣುಕುತ್ತಲೆ ಕೀರ್ತಿ ಹುಷಾರು ಎಲ್ಲರೊಟ್ಟಿಗಿರು ಮುಂದೆ ಹೋಗಬೇಡ .. ಹೇಳೊ ನಾನು. ತನ್ನ ಪಟ್ಟದ ಗೆಳತಿ ಜೊತೆ ಮುಂದೆ ಸಾಗಿರೋ ಕೋಮಲ್, ನಾಪತ್ತೆ ಆಗಿರೋ ವಿಕಾಸ ಸರ್, ಸುಹೇಲ್, ತೇಜು ಭಾವನಾ, ಆವಾಜ್ ಇರದ ನವಾಜ್, ಇವರ ಯಾದಿಯಲ್ಲಿ ಇರದ ಆದಿ.

ಸೈಕಲ್ ಚೈನು ಕಳುಚಿ ತಳ್ಳುತ್ತಿರುವ ಆಯೇಷಾ.. ಇವರೆಲ್ಲ ಕಾರ್ಯ ತತ್ಪರತೆ ನಗು ಉಕ್ಕಿಸುವಂತದ್ದು. ಅದೇನೋ ಸೈಕಲ್ ಕಂಡ ಕ್ಷಣಕ್ಕೆ ಸೈಕಲ್ ಸವಾರಿ ಸುತ್ತ ರೋಚಕ ಅನುಭವಗಳ ನಾಡಿ ಮಿಡಿತಕ್ಕೆ ಮೈ ಗುಡಿ ಕಟ್ಟುವುದು. ಮನೆಯಿಂದ ನಾಲ್ಕು ಹೆಜ್ಜೆ ನೆಡೆದು ಮುಖ್ಯ ರಸ್ತೆಗೆ ಸೇರಿದ್ರೆ ಕಾಣುವ ಗೂಡಂಗಡಿ. ಅದೇ.. ಶೌಕತ್ ಅಲಿ ಭೈಯಾದೊಂದು ಸೈಕಲ್ ದುಖಾನ್. ಅವನೊಬ್ಬ ಪ್ರಪಂಚದ ಅತ್ಯಂತ ಸುಖ ಜೀವಿ. ತನಗೆ ಬೇಕೆಂದ ದಿನಗಳಲ್ಲಿ ಸೂರ್ಯ ನೆತ್ತಿಗೆ ಬಂದ ಬಳಿಕವಷ್ಟೇ ದುಖಾನ್ ತೆರೆಯುವುದು.

ಇಡೀ ಏರಿಯಾದಲ್ಲಿ ಈತನೊಬ್ಬನದೇ ಸೈಕಲ್ ದುಖಾನ್. ಯಾವುದೇ ಕೆಲಸ ಇತನಿಂದ ನೇರೆವೆರಬೇಕೆಂದಾದರೆ, “ಜೀ ಹುಜೂರ್” ಏನ್ನಲೇ ಬೇಕು. ಮಕ್ಕಳಿಗೆಂದೇ ಒಂದೆರಡು ಸೈಕಲ್ ಬಾಡಿಗೆ ನೀಡಲು ಇಟ್ಟುಕೊಂಡಿದ್ದ. ಟೈರುಗಳಿಗೆ ಗಾಳಿ ತುಂಬಿಸುವುದು, ಪಂಚರ್ ತಿದ್ದುವ ಕಾಯಕ. ಜೊತೆಗೆ ಪಾದಾಚಾರಿಗಳಿಗೋ ಇಲ್ಲವೇ ಯಾರದೋ ಗಾಡಿಗೆ ಗುದ್ದಿ, ಸೈಕಲ್ ಅಡಿಯಲ್ಲಿ ನಾವು ಮಣ್ಣ ಬಣ್ಣ ಹುಡುಕುವಾಗಲೆಲ್ಲ : ಮಕಾಡೆ ಬಿದ್ದ ಸೈಕಲ್ ಹ್ಯಾಂಡಲ್ಲಗಳೆಲ್ಲದು ತಿರುಗು ಮುರುಗಾಗಿ ಬೊಬ್ಬೆಯಿಡುವ ಗಳಿಗೆಗೆ ಸೈಕಲ್ ಚಿಕಿತ್ಸಕನಾಗಿ ಆಸರೆಗೆ ನಿಲ್ಲುವ ಏಕೈಕ ಜೀವಿ ಶೌಕತ್ ಅಲಿ ಭೈಯಾ.

ಶಾಲೆ ರಜೆ ದಿನಗಳಲ್ಲಿ ಬಾಡಿಗೆ ಸೈಕಲ್ಲು ಪಡೆಯಲು ದುಖಾನ ಕಡೆಗೆ ನಮ್ಮ ದೃಷ್ಟಿನೆಟ್ಟು ದೂರದರ್ಶಿಗಳಾಗಿ ಕಾದು ಕೂರುವುದೊಂದು ದುರ್ಭರ ಕಾರ್ಯ. ಗಳಿ-ಗಳಿಗೆಗೂ ಆತನ ಶೋಧನೆಗೆ ಕಣ್ಣುಗಳು ತೊಡಗುವುದು. ಒಂದೊಮ್ಮೆ ಕಾಣಿಸಿಕೊಂಡರೆ ಖಗೋಳದಲ್ಲಿ ಹೊಸ ಗ್ರಹ ಕಂಡಷ್ಟೇ ಸಂಭ್ರಮ ಸಡಗರ. ಆತನೆಡೆ ಇರುವ ಬೆರಳೆಣಿಕೆಯ ಸೈಕಲ್ಲುಗಳನ್ನು ಬಾಡಿಗೆ ಪಡೆಯಲು ಮೊದಲಿಗರಾಗುವುದೊಂದು ಪ್ರತಿಷ್ಠೆಯ ಸಂಗತಿ. ಆ ಸೈಕಲ್ಲುಗಳದ್ದೋ… ಕಥೆ. ಬಾಡಿಗೆ ಕೊಂಡೋಯ್ದವರಿಂದ ಮಗುಚಿ ಬಿದ್ದು ಪೆಟ್ಟು ತಿಂದ ಗಾಯಕ್ಕೆ ಕೋರ್ ಕೋರ್ ಸದ್ದು, ಯಾವತ್ತಿಗೂ ಸಡಿಲಗೊಂಡಿರುವ ಸರಪಳಿ, ಸದಾ ತೇಪೆ ಹಾಕಿಸಿಕೊಂಡ ಗಾಲಿಗಳು ತಗಲದ ಬ್ರೇಕ್ ಗಳು; ದುರ್ಭಲವಾದ ಅಸ್ಥಿತ್ವ ಇಟ್ಟುಕೊಂಡೆ ರಾಯಭಾರ ಮಾಡುವುದರಲ್ಲಿ ಮುಂಚೂಣಿ ಸ್ಥಾನ ಗಿಟ್ಟಿಸಿದ್ದವು.

ಸೈಕಲ್ ಬಾಡಿಗೆ ಪಡೆಯುವುದೊಂದು ಸಾಮಾನ್ಯ ಕೆಲಸವೇ ಆಗಿರಲಿಲ್ಲ. ಮೊಟ್ಟಮೊದಲು ಅವನ ಬರುವಿಕೆಗೆ ಕಾದಿದ್ದು ಗಾಳ ಹಾಕಬೇಕು. ಮೊದಲಿಗರಿಗೆ ಮಾತ್ರವೇ ಬಾಡಿಗೆ ಸಿಕ್ಕುವ ಸೈಕಲ್ಲು.. ನಂತರದಲ್ಲಿ ದಕ್ಕುವುದು ಇನ್ನೂ ಕಷ್ಟಕರ ಸಂಗತಿ. ತಡವಾದಲ್ಲಿ ಯಾರದೋ ಬಾಡಿಗೆ ಪಾಲಾಗಿ ಅವರು ಮರಳಿ ಬರೋವರೆಗೂ ಕಾಯಬೇಕು. ಅಷ್ಟರಲ್ಲಿ ಅವಸಾನದ ಸ್ಥಿತಿಗೆ ಜಾರಿದ್ರೆ ಮತ್ತೆ ಶೌಕತ್ ಅಲಿ ಭೈಯಾ ಜೀವ ಕಳೆ ತುಂಬುವವರೆಗೂ ಕಾಯಬೇಕಾದ ಮತ್ತೊಂದು ಕಾಯುವ ಘಟ್ಟ. ಈ ಮಜಲುಗಳನ್ನೆಲ್ಲವ ದಾಟಿ ನಾವು ಬಾಡಿಗೆ ಪಡೆಯುವ ವೇಳೆಗೆ ಸೂರ್ಯ ನಮ್ಮನ್ನೆಲ್ಲ ಕತ್ತಲಿಗೆ ದೂಡಲು ಕಾದು ಕೂತಿರುವ.

ಇನ್ನೂ ಶೌಕತ್ ಅಲಿ ಭೈಯಾ ನಮ್ಮ ಇಂಗಿತವನ್ನು ನಾಳೆಯ ದಿನಕ್ಕೆ ಮುಂದೂಡುವ.ಎಲ್ಲ ಹಂತಗಳಲ್ಲೂ ನಾವು ಪಾರಾಗಬೇಕು. ಸೈಕಲ್ ನಮ್ಮ ಕೈಸೇರಿ ಅವಧಿ ನಿಗಧಿಯಾಗುತ್ತಿದ್ದಂತೆ ಅದರ ಹಿಂದೆ ನಾಲ್ಕರಿಂದ ಐದು ಜನ ಮೇಲೈಸುತ್ತೇದ್ದೆವು. ಅದಾಗಲೇ ದುರಾವಸ್ಥೆಯಲ್ಲಿರುವ ಸೈಕಲ್ಲುಗಳು ಒಂದು ಸುತ್ತು ತಿರುವು ಮುಗಿಯುವುದಲ್ಲೇ ನಾಲ್ಕೈದು ಬಾರಿ ಸರಪಳಿ ಕಳಚುವುದು. ವ್ಯಥೆಗೊಂಡ ನಾವು ಕ್ಷಣ ಮಾತ್ರವು ಹಾಳುಗೆಡುವುದಂತೆ ಜೋಡಿಸುವುದರಲ್ಲಿ ಸಂಪೂರ್ಣ ವಾಗಿ ಮಿಂದು ಅದು ಎಷ್ಟೇ ಜೋಡಿಸಿದಾಗಲು ತನ್ನ ಕಾಯಕವೆಂಬಂತೆ ಐದಾರು ಬಾರಿ ಪೇಡಲ್ ತುಳಿಯುವುದರಲ್ಲಿ ಮತ್ತೆ ಕಳಚುವುದು.ಸರಪಳಿ ಕಳಚುವ -ಜೋಡಿಸುವ ಕಾಯಕದಲ್ಲಿ ಸಮಯ ಅಂತ್ಯಗೊಂಡು ಸರದಿಯಂತೆ ಸೈಕಲ್ ಆಡಿದಾಗ.. ಆಡಿದ್ದಕ್ಕಿಂತ ಹೆಚ್ಚಾಗಿ ಸರಪಳಿ ಜೋಡಿಸಿದ ಸಮಯವೇ ಸಾಕಷ್ಟಿತ್ತು.

ಇಂದಿನ ಪೀಳಿಗೆಗೆ ಸೈಕಲ್ ಕಲಿಕೆ ಕಷ್ಟಕರವೇನಲ್ಲ. ಉದ್ದೇಶದಿಂದಲೇ ಬೀಳಬೇಕೆಂದಾಗಲು ಬೀಳದಂತೆ ಸೈಕಲ್ ಅಕ್ಕ ಪಕ್ಕ ಬ್ರೇಕ್ ಗಾಲಿಗಳಿದ್ದು ಅವಘಡ ತಪ್ಪಿಸುವುದು. ಕಣ್ಣು – ಮೂಗು ಕೈ – ಕಾಲು ಯಾವುದು ಗಾಯವಾಗದಂತೆ ನಾವೆಲ್ಲ ಸೈಕಲ್ ಕಲಿತಿದ್ದೆ ಇಲ್ಲ. ನೆಲಕ್ಕೆ ಬಿದ್ದಾಗಲೇ ಸೈಕಲ್ ಕಲಿಕೆ ಸಾಧ್ಯವೆಂಬ ನಂಬಿಕೆ.ಬೀಳು ಏಳುಗಳಿಗೆ ಅಪ್ಪ ಅಮ್ಮ ಕುಂದಿದವರೇ ಅಲ್ಲ. ಈಗಿನ ಕಾಲಕ್ಕೆ ತುಸು ಕಷ್ಟವೇ. ಪೋಷಕರಿಂದ ಮಕ್ಕಳವರೆಗೂ ಎಲ್ಲ ಬೊಬ್ಬೆಯಿಡುವವರೆ. ಹಿರಿಯ ತೆಲೆಮಾರುಗಳಿಂದ ನಮ್ಮ ಪೀಳಿಗೆಯರಿಗೂ ಸೈಕಲ್ ಕಲಿತಿದ್ದು ಅಟ್ಲಾಸ್ ಕಂಪನಿ ಸೈಕಲ್ಲಲೆ. ಮೊದಲೊಂದು ಧೈರ್ಯವಿರಬೇಕು.

ಚಿಕ್ಕಂದಿನಲಿ ನಮ್ಮ ತಲೆ ಎತ್ತರಕೆ ಸೀಟಿರುವ ಅಪ್ಪನ ಸೈಕಲ್ ಏರಿ ಪೇಡಲ್ ತುಳಿಯುವುದು ಸಾಧ್ಯವಿರದ ಮಾತು. ಹ್ಯಾಂಡಲಿಗೂ ಸೀಟಿಗೂ ಮಧ್ಯದಲ್ಲಿರುವ ಸ್ಟೀಲ್ ರಾಡನ್ನು ನಮ್ಮ ಬಲ ಹಸ್ತದಿಂದ ಹಿಡಿದು ದೇಹದ ಭಾರವನ್ನು ಭುಜಗಳ ಮೂಲಕ ಸೀಟಿನ ಮೇಲೆ ಹಾಕಿ ಎರಡು ಹ್ಯಾಂಡಲ್ ಹಿಡಿದು ದೇಹ ಮತ್ತು ಸೈಕಲ್ ಎರಡನ್ನು ಬ್ಯಾಲೆನ್ಸ್ ಮಾಡಬೇಕಿತ್ತು. ಹತೋಟಿ ತಪ್ಪಿದ್ದಲ್ಲಿ ಗಾಯಗೊಳ್ಳುವುದು ಖಂಡಿತ. ಕಲಿಕೆ ನಂತರವು ಅದೆಷ್ಟೋ ಬಾರಿ ಬಿದ್ದು ಕಣ್ಣು ಮೂಗು ಊದಿಸಿಕೊಂಡಿದ್ದಿದೆ.

ದಿನ ಒಂದರಲ್ಲಿಯೇ ಅಪ್ಪನೊಟ್ಟಿಗೆ ಹಠ ಮಾಡಿ ಬಿ.ಎಸ್.ಎ. ಎಸ್.ಎಲ್.ಆರ್. ಸೈಕಲ್ ಖರೀದಿಸಿದ ಸಂಭ್ರಮ ನೆನೆದಾಗ ಮನದಲ್ಲೊಂದು ಸೆಳಕು ಇಗಲೂ ಹಾದು ಹೋಗುವುದು. ಸೈಕಲ್ ತುಳಿಯಲು ಗೆಳತಿಯರೊಲ್ಲೊಂದು ಪೈಪೋಟಿ ಇದ್ದೆ ಇತ್ತು. ಶಾಲಾ ದಿನಗಳಲ್ಲಿ ಪಾದಾಚಾರಿಗಳಿಗೆಂದೇ ಇದ್ದ ಕಿರಿದಾದ ಗೇಟನಲ್ಲಿ ಸೈಕಲ್ ಇಳಿಯದೆ ನುಗ್ಗುವುದು ನನಗೊಂದು ಅತಿಪ್ರಿಯವಾದ ಸಂಗತಿ. ತೋಶಿಖಾನ್ ಟೀಚರ ಕಣ್ಣು ತಪ್ಪಿಸಿ ಚಿಕ್ಕ ಗೇಟ್ ಲ್ಲಿ ನುಸುಳಿ ಮುಖಕ್ಕೆ ಮಂಗಳಾರತಿ ಆಗಿದ್ದಿದೆ. ಆದಾಗಲೂ ನುಸುಳುವ ವ್ಯಾಮೋಹ ಕುಗ್ಗಿರಲಿಲ್ಲ.
ಇಂದಿಗೂ ಸೈಕಲ್ ಎಂದಾಕ್ಷಣ ಕಣ್ಣಿಗೆ ಕಟ್ಟುವುದು ನಮ್ಮ ಹಿರಿಯರ ಅಪ್ಪನ ಕಾಲದ ಅಟ್ಲಾಸ್ ಸೈಕಲ್.

ಅಟ್ಲಾಸ್ ಎಂದರೇನೇ ಸೈಕಲ್ ಎನ್ನುವ ಮಟ್ಟಿಗೆ ಅಟ್ಲಾಸ್ ಸಂಸ್ಥೆ ಪ್ರಸಿದ್ಧಿ ಪಡೆದಿತ್ತು. ಧಡೂತಿ ದೇಹ ಕರಗಿಸಲೋ ಬಳಕುವಂತಾಗಲೋ ಸೈಕಲ್ ತುಳಿಯುವ ಅಭ್ಯಾಸ ಹಲವರಿಗುಂಟು. ಪರಿಸರ ಸ್ನೇಹಿ ಎಂತಲೇ ಹೇಳಬಹುದು. 1951ರಲ್ಲೇ ಅಟ್ಲಾಸ್ ಸಂಸ್ಥೆ ಪ್ರಾರಂಭಗೊಂಡು ಮುಂಚೂಣಿಯ ಸ್ಥಾನ ಗಿಟ್ಟಿಸಿಕೊಂಡಿತ್ತು. ನಂತರದ ದಿನಗಳಲ್ಲಿ ಹಲವಾರು ಸೈಕಲ್ ಸಂಸ್ಥೆಗಳು ಮಾರುಕಟ್ಟೆಗೆ ಲಗ್ಗೆಯಿಟ್ಟು, 2020 ರ ಹೊತ್ತಿಗೆ “ಬೈಸಿಕಲ್ ಡೇ” ದಿನಗಳಲ್ಲೇ ಅಟ್ಲಾಸ್ ಸಂಸ್ಥೆಯು ಬಾಗಿಲು ಮುಚ್ಚಿ ಇತಿಹಾಸ ಪುಟ ಸೇರಿದ್ದು ಅತ್ಯಂತ ಮನ ಹಿಂಡುವ ಸಂಗತಿ.

‍ಲೇಖಕರು Admin

March 26, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: