ರೇಖಾ ಭಟ್
ಒಂದು ವಾರ ರಜೆ
ಹಗುರಾಗಲೆಂದು
ತವರಿಗೆ ಹೊರಟ
ಎರಡನೆಯ ದಿನವೇ
ಮಾತನಾಡಿತು ಮೊಬೈಲು
‘ಮನೆಗೆ ನೆಂಟರ ಆಗಮನ
ಇವತ್ತೇ ವಾಪಸಾದರೆ ಚೊಲೊ ಇತ್ತು’
ಬ್ಯಾಗ್ ನಲ್ಲಿ ಹುದುಗಿದ್ದ ಬಟ್ಟೆಗಳು
ಇನ್ನೂ ತವರಿನ ನೀರಲ್ಲಿ ನೆಂದಿಲ್ಲ
ಮಗಳ ಗೊಂಬೆ ಚಪ್ಪಲಿಗಳನ್ನು
ತೋಟ ಗದ್ದೆಯ ಮಣ್ಣು ಮುದ್ದಿಸಿಲ್ಲ
ಆಯಿ ಕಡುಬಿಗೆಂದು
ಕೊಯ್ದಿಟ್ಟ ಹಲಸಿಕಾಯಿಯ
ಕಂಪು ಮನೆತುಂಬಿಲ್ಲ
ಮುಂದಿನ ಮನೆ ಹಿರಿಯಬ್ಬೆಯ
ಕಷಾಯ ಸವಿದು
ರೆಸೆಪಿ ತಲೆಗಿಳಿಸಿಬರುವ
ಯೋಜನೆಗೆ ಸದ್ಯ ಆಯವೇ ಇಲ್ಲ
ಆಚೆಮನೆ ಕೊಟ್ಟಿಗೆಯ ಕರುವಿಗೆ
ಹಳ್ಳದ ಬದಿಯ ಹುಳಿಮಾವಿಗೆ
ಈ ಗೆಜ್ಜೆ ಸಪ್ಪಳ ಕೇಳಿಸಿಲ್ಲ
ಗುಡ್ಡದ ಹನುಮನ ಗುಡಿಯೊಳಗೂ
ಪಕ್ಕದ ದೊಡ್ಡ ಬಂಡೆಯ ಮೇಲೂ
ನಮ್ಮ ಹಾಜರಿ ದಾಖಲೇ ಆಗಿಲ್ಲ
ನಾಡಿದ್ದು ಅರಳಲು ತಯಾರಿ
ನಡೆಸುತ್ತಿರುವ ಮಲ್ಲಿಗೆಯ
ಇಂದೇ ಮುಡಿಯುವುದು ಹೇಗೆ
ಪಾದ ಊರಿದಲ್ಲೆಲ್ಲ ಪುಟಿದೇಳುವ
ತವರ ಮಿಡಿತಗಳಿಗೆ
ಬರೀ ಎರಡು ದಿನ- ಸಾಕೇ?
ತುಂಬಾ ಸೊಗಸಾಗಿ, ಸರಳವಾಗಿ ಭಾವನೆಗಳು ವ್ಯಕ್ತವಾಗಿವೆ. ಇಷ್ಟ ಆಯ್ತು