ರೇಖಾ ಗೌಡ ಓದಿದ ‘ಹಸುರು ಹೊನ್ನು’

ರೇಖಾ ಗೌಡ

ಸಾಮಾನ್ಯ ಓದುಗರಿಗೆ ಶಾಸ್ತ್ರೀಯ ವಿವರಗಳು ಕೊಂಚ ಬೋರ್ ಎನಿಸಿದರೂ ವಿದ್ಯಾರ್ಥಿ, ಅಧ್ಯಾಪಕರ ನೈಜ ಪಾತ್ರಗಳು, ಅಧ್ಯಯನ ಕ್ಷೇತ್ರವಾದ ಕಾಡು ಮುಂತಾದೆಡೆ ನಡೆಯುವ ಹಾಸ್ಯ ಪ್ರಸಂಗಗಳು ಓದಿಸಿಕೊಳ್ಳುತ್ತವೆ. ಪ್ರಕೃತಿ ಪ್ರೇಮಿಗಳಿಗೆ ಗಿಡಮರಗಳ ಕುರಿತು ಇನ್ನಷ್ಟು ತಿಳಿಯಲು ಮತ್ತು ಶಾಸ್ತ್ರೀಯ ಅಧ್ಯಯನದ ಕುರಿತಾಗಿ ಸ್ಫೂರ್ತಿ ನೀಡುತ್ತದೆ.

ಗಿಡಮರ, ಪ್ರಕೃತಿಯ ಮೇಲೆ ಆಸಕ್ತಿ ಇರುವವರಿಗೂ, ಆಸ್ಥೆ ಇದ್ದೂ ಹೆಚ್ಚಿನ ಅನ್ವೇಷಣೆಗೆ ಸಮಯ ಇಲ್ಲದವರಿಗೂ, ಈ ಕುರಿತು ಅಧ್ಯಯನ ಮಾಡಬಯಸುವವರಿಗೂ, ಅಡುಗೆ, ಆಯುರ್ವೇದ, ಔಷಧ, ಪರಿಸರ ಕ್ಷೇತ್ರಗಳಲ್ಲಿ ಅಪರಿಮಿತ ಆಸಕ್ತಿ ಇರುವವವರಿಗೂ ಸೂಕ್ತ ಪುಸ್ತಕವಿದು. 

ಯಾವ ಯಾವ ಪ್ರಾಚೀನ ಕವಿಗಳಿಗೆ ಯಾವ ಹೂ ಗಿಡ ಮರಗಳು ಹೇಗೆ ಕಂಡವು, ಚಿತ್ರಣ ಇಲ್ಲಿದೆ. ಅವರು ಕಂಡ ರೀತಿ ನಮ್ಮ ಕಲ್ಪನೆಯ ಮಿತಿಯನ್ನು ತೋರಿಸುತ್ತದೆ ಮತ್ತು ಹಿಗ್ಗಿಸುತ್ತದೆ. ಕಾವ್ಯ, ವಿಜ್ಞಾನ ಈ ಕೃತಿಯಲ್ಲಿ ಹೆಚ್ಚು ಕಡಿಮೆ ಜೊತೆ ಜೊತೆಯಲ್ಲಿ ಸಾಗಿವೆ.

ಕೆಲವೊಮ್ಮೆ ಒಣ ವಿಷಯ ಆದರೆ ಮುಖ್ಯ ಎನಿಸುವ ಸಂಗತಿಗಳಿಗೆ ಹೀಗೆ ಕಾವ್ಯ, ಸಾಹಿತ್ಯದ ಸ್ಪರ್ಶ ಕೊಟ್ಟರೆ ಅರಿಯಲು ಸುಲಭ, ಆಸಕ್ತಿಯೂ ಮೂಡುತ್ತದೆ. ಈ ಕೃತಿಯಿಂದ ಸಸ್ಯಶಾಸ್ತ್ರದ ಕುರಿತು ನಮಗೆ ಪರಿಕಲ್ಪನೆಯೊಂದು ದೊರೆಯುತ್ತದೆ. ಕಾಡು ಸುತ್ತಿ ಬಂದ ಅನುಭವವಾಗುತ್ತದೆ ಮತ್ತು ಗಿಡಗಳನ್ನು ಗುರುತಿಸುವ ರೀತಿಯೂ ಪರಿಚಯವಾಗುವುದು.

ಯಾವ ಗಿಡ ಮರವೂ ಸುಮ್ಮನೆ ಇಲ್ಲಿಲ್ಲ, ಎಲ್ಲಾ ಪ್ರಯೋಜನಗಳ ಅರಿವು ನಮಗಿಲ್ಲ!

ಕೃತಿಯ ಆ ದಿನಗಳಲ್ಲಿದ್ದ ಕಾಲೇಜ್ ಗೆಳೆಯ ಗೆಳತಿಯರ ಒಡನಾಟದ ರೀತಿ ಆಸಕ್ತಿದಾಯಕವಾಗಿದೆ, ಅವರ ನಡುವಿನ ಮಾತುಕತೆ ಅಷ್ಟೊಂದು ಕಾವ್ಯಮಯವೂ, ತುಂಟತನದಿಂದ ಕೂಡಿರುವುದೂ, ಚೈತನ್ಯಮಯವಾಗಿರುವುದೂ

ಈ ಕಾಲದವರಿಗೆ ನಂಬಲು ಅಸಾಧ್ಯವಾಗಬಹುದು.

ಕಾವ್ಯಪ್ರೇಮ, ಗಿಡಗಳ ಅಧ್ಯಯನಕ್ಕೆ ಎಷ್ಟು ಹೊಂದಿಕೆ ಮತ್ತು ಪೂರಕವಾಗಬಹುದು, ತಿಳಿಯಲು ಈ ಕೃತಿಯ ಓದಿ ನೋಡಬಹುದು.

ಕಾವ್ಯದ ಮೂಲಕ ವಿವರಗಳ ನೆನಪಿಟ್ಟರೆ ಹೆಚ್ಚು ಸುಲಭವಾಗಬಹುದು, ಉರು ಹೊಡೆವ ತಾಪತ್ರಯ, ತ್ರಾಸದಿಂದ ತಪ್ಪಿಸಿಕೊಳ್ಳಬಹುದು.

ಪ್ರಕೃತಿ, ಗಿಡ ಮರಗಳ ಗಂಭೀರ ಅಧ್ಯಯನಕ್ಕೆ ಹಳೆಯ, ಹೊಸ ಕಾವ್ಯದ ಓದು ಬಹಳ ಮುಖ್ಯವೆನಿಸುತ್ತದೆ, ಕವಿ ಕಂಡದ್ದು ಸಾಮಾನ್ಯ ದೃಷ್ಟಿಗೆ ಕೆಲವೊಮ್ಮೆ ಕಾಣದಿರುವುದರಿಂದ!

ಮನುಷ್ಯರನ್ನು ನಂಬುವುದಕ್ಕಿಂತ, ಪ್ರಕೃತಿಯನ್ನು ನಂಬಬೇಕು, ಅನುಸರಿಸಬೇಕು, ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಬೇಕು, ನೆಚ್ಚಬೇಕು, ಅವಲಂಬಿಸಬೇಕು.

ಪ್ರಕೃತಿ, ಮಾತೆಯ ಮಡಿಲಂತೆ ಪೊರೆಯುತ್ತದೆ ನಾವೂ ಅಂಥಾ ಮಕ್ಕಳಾಗಿದ್ದರೆ!

ಆದರೆ ಕಾಡು, ಪ್ರಕೃತಿಯನ್ನು ಉಳಿಸಲು ಅರಿವು, ಜಾಗೃತಿ, ಪ್ರಜ್ಞೆ ಮುಖ್ಯವಾಗಿರುತ್ತದೆ, ಆ ಅರಿವಿಗಾಗಿ ಇಂಥಾ ವಿಷಯಗಳುಳ್ಳ ಒಂದೆರಡಾದರೂ ಪುಸ್ತಕಗಳ ಮಾನವ ಓದಿ ತಿಳಿಯಬೇಕು, ಇತರರಿಗೆ ತಿಳಿಸಬೇಕು, 

ಮತ್ತು ಸರ್ಕಾರಿ ನೌಕರರಾಗಿ ಕೆಲ ಇತಿಮಿತಿಗಳಲ್ಲೂ ಅಂದುಕೊಂಡದ್ದನ್ನು, ಮಾಡಬೇಕಿರುವುದನ್ನು ಸಾಧಿಸಲು ಸಾಧ್ಯವಿರುವುದನ್ನು ಕೃತಿ ತೋರಿಕೊಡುತ್ತದೆ.

ಲೇಖಕರ ಮತ್ತಷ್ಟು ಪುಸ್ತಕಗಳನ್ನ ಓದಬೇಕೆನಿಸುವುದು, ಅವರಲ್ಲಿನ ಲೇಖಕನಿಗಾಗಿ!

ದಿನದಿನದ ವಾಡಿಕೆಯ ಕೆಲಸಗಳು ತರುವ ಬೇಸರದಿಂದ ಮುಕ್ತರಾಗುವ ದಾರಿ ಹುಡುಕುತ್ತಿದ್ದರೆ, ಪ್ರಕೃತಿಯಲ್ಲಿ ನಿರಂತರ ಅಚ್ಚರಿಗಳ ಸರಮಾಲೆ ನಮಗಾಗಿ ಕಾಯುತ್ತಿರುತ್ತದೆ.

ಆದರೆ ನಮ್ಮ ಆಕರ್ಷಣೆಯೋ ಹೂ, ಕಾಯಿ, ಹಣ್ಣುಗಳಿಗಷ್ಟೇ ಸೀಮಿತವಾಗಿರುತ್ತದೆ.

ಕಾಡೆoದರೆ ನಿತ್ಯವೂ ನೂತನ ಅನುಭವ!

ಇಷ್ಟೆಲ್ಲಾ ಸೋಜಿಗ ಸುತ್ತಲಿಟ್ಟುಕೊಂಡು, ಕಣ್ಣಿಗೆ ಕತ್ತಲಿಟ್ಟುಕೊಂಡವರಂತೆ ಬೋರ್ ಆಗುತ್ತದೆ ಎಂದರೆ ಅದು ನಮ್ಮಲ್ಲಿ ಪ್ರಜ್ಞೆಯ ಕೊರತೆಯನ್ನು ಸೂಚಿಸುತ್ತದೆ.

ಇನ್ನು, ಸಸ್ಯಗಳ ಅಪರೂಪದ ಉಪಯೋಗಗಳ ಕಂಡರೆ ಹಣ, ಮಾರ್ಕೆಟಿಂಗ್ ಮಾಡಲು ಮೊದಲು ಮುಂದಾಗುವ ಮನಸ್ಥಿತಿಯಿಂದ, ಅವುಗಳನ್ನು ಜತನದಿಂದ ಪೊರೆಯುವ, ಅದರ ಅವಶ್ಯವಿರುವವರಿಗೆ ನೆರವಾಗುವ, ಬರುವ ಪೀಳಿಗೆಗಳಿಗೆ ವಿಷಯ, ಜ್ಞಾನ, ವಿವೇಕ ದಾಟಿಸುವ ಮನಸ್ಥಿತಿಗೆ ಬದಲಾಗಬೇಕು. 

ಪರಿಸರ ವ್ಯವಸ್ಥೆಗೆ ತೊಂದರೆಯಾಗದ ಹಾಗೆ ಪ್ರಕೃತಿ ಸಂಪನ್ಮೂಲಗಳನ್ನು ಬಳಸಿಕೊಳ್ಳಲು ಎಲ್ಲಿದೆ ತೊಂದರೆ ಗುರುತಿಸಬೇಕು, ಜನರಿಗೆ ಜಾಗೃತಿ ಮೂಡಿಸಬೇಕು, ಅತಿ ಹೆಚ್ಚು ಜನರ ತಲುಪಬಲ್ಲ ಸೆಲೆಬ್ರಿಟಿಗಳು, ಮಾಧ್ಯಮಗಳು, ಸಿನೆಮಾಗಳು ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕಿದೆ, ಇಲ್ಲವೇ ಉತ್ಸಾಹಿಗಳು, ಆಸಕ್ತರು, ತಜ್ಞರು ಕೈಜೋಡಿಸಿ ನಿರಂತರ ಇದರ ಮೇಲೆ ಕೆಲಸ ಮಾಡಬೇಕಿದೆ, ಗಮನವಿರಿಸಬೇಕಿದೆ.


ಒಂದು ಕೃತಿಯಲ್ಲಿನ ವಿವರದ ಪ್ರಾಮಾಣಿಕತೆ ಸಾಮಾನ್ಯ ಮನುಷ್ಯರಿಗೂ ಅರಿವಿಗೆ ಬರುವಂಥದ್ದು, ಆ ಸದಾಶಯದ ಸದ್ಬಳಕೆ ನಮಗೆ ಬಿಟ್ಟದ್ದು! ಏನೆಲ್ಲಾ ಮಾಡಿದರೂ, ಪ್ರಕೃತಿಯ ವಿಸ್ಮಯ, ಬೆರಗು, ಜಾದೂ ಅದರ ನೈಜ ಪ್ರೇಮಿಗಳಿಗೆ ಮಾತ್ರ ಸೀಮಿತ! 

‍ಲೇಖಕರು Admin

July 10, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: