ರುದ್ರಪ್ಪ ಹನಗವಾಡಿ ಆತ್ಮಕಥೆಯ ತುಣುಕು

ರುದ್ರಪ್ಪ ಹನಗವಾಡಿ

ಈ ದೇಶದಲ್ಲಿ ದಲಿತರ ಮತ್ತು ಕೆಳವರ್ಗದವರ ನೋವುಗಳು ಬೇರೆಯವರ ಅಂದಾಜಿಗೂ ಸಿಕ್ಕುವುದಿಲ್ಲ. ಕತ್ತಲೆಯ ಲೋಕದಿಂದ ಅವರು ಬೆಳಕಿಗೆ ಹೆಜ್ಜೆ ಹಾಕುವುದೇ ಮಹಾನ್‍ ಸಾಹಸ. ರುದ್ರಪ್ಪ ಹನಗವಾಡಿ ಇಂಥ ಸಾಹಸಿಗರಲ್ಲಿ ಒಬ್ಬರು. ಓದಿನೊಂದಿಗೆ ಸೆಣಸಿ, ಗೆದ್ದ ರುದ್ರಪ್ಪ ಅಧ್ಯಾಪಕರಾಗಿ ಮತ್ತು ಸರ್ಕಾರಿ ಅಧಿಕಾರಿಯಾಗಿ ಹೆಸರು ಮಾಡಿದವರು. ದಲಿತ ಸಂಘರ್ಷ ಸಮಿತಿಯ ಜೊತೆಯಲ್ಲಿ ನಿರಂತರವಾಗಿ ಕ್ರಿಯಾಶೀಲರಾಗಿದ್ದ ರುದ್ರಪ್ಪ ದಸಂಸ ನಾಯಕ ಪ್ರೊ.ಬಿ.ಕೃಷ್ಣಪ್ಪ ಅವರ ನಿಕಟವರ್ತಿಯಾಗಿದ್ದವರು. ರುದ್ರಪ್ಪನವರ ಆತ್ಮಕತೆಯ ಕೆಲವು ಪುಟಗಳು ಇಲ್ಲಿವೆ:

1967ರಲ್ಲಿ ಎಸ್.ಎಸ್.ಎಲ್.ಸಿ. ಪಾಸಾದ ದಿನಗಳಿಂದ ಮೈಸೂರಿನಲ್ಲಿ ಓದಬೇಕೆಂಬ ಹಂಬಲ 1969ರಲ್ಲಿ ಹಲವರ ಸಹಕಾರದಿಂದ ಈಡೇರಿತ್ತು. ಮಹಾರಾಜಾ ಕಾಲೇಜಿನ ಭವ್ಯ ಕಟ್ಟಡ, ಪಕ್ಕದಲ್ಲಿದ್ದ ಭವ್ಯವಾದ ಲೈಬ್ರರಿ ಉಳಿದುಕೊಳ್ಳಲು ಸಿಕ್ಕ ಮಹಾರಾಜಾ ಕಾಲೇಜಿನ ಹಾಸ್ಟೆಲ್, ಇನ್ನು ಮೇಧಾವಿ ಅಧ್ಯಾಪಕರ ಮಾರ್ಗದರ್ಶನದ ಪಾಠಗಳು. ನನಗೆ ಒಂದು ಬಹು ದೊಡ್ಡ ಬಳುವಳಿಯಾಗಿತ್ತು. ಅರ್ಥಶಾಸ್ತ್ರದ ವಿಭಾಗದಲ್ಲಿ ಸಿದ್ದೇಗೌಡ ಮತ್ತು ಹರಿಚರಣ್‍ರವರಿದ್ದರು. ಕನ್ನಡ ವಿಭಾಗದಲ್ಲಿ ಸುಜನಾ, ನಂಜುಂಡಯ್ಯ, ಜಿ.ಹೆಚ್. ನಾಯಕ್, ಬಿ.ಎನ್. ಚಂದ್ರಯ್ಯ ಇನ್ನು ಕೆಲವರು ಇದ್ದರು. ಮೈನರ್ ಹಿಸ್ಟರಿಗೆ ಅಬ್ದುಲ್ ರಜಾಕ್‍ಖಾನ್ ಅವರು ಇದ್ದರು. ಚರಿತ್ರೆಯೆಂಬುದು ಬೋರಿಂಗ್ ಎಂದು ಅಂದುಕೊಂಡಿದ್ದ ನನಗೆ ಇಲ್ಲಿನ ಅಧ್ಯಾಪಕರು ಭಾರತೀಯ ಇತಿಹಾಸ ಪಾಠ ಮಾಡುತ್ತ ನನ್ನೊಳಗೆ ವಿಶೇಷ ಆಸಕ್ತಿ ಮೂಡಿಸಿದ್ದರು.

ಇಂಗ್ಲಿಷ್ ಪಠ್ಯಕ್ಕೆ ಗುರುರಾಜರಾವ್, ಬರ್ಕಲಿ ಗೋವಿಂದ ರಾವ್ ಮತ್ತು ಮೈಲಾರಿ ರಾವ್, ರಾಮಸ್ವಾಮಿ, ಸೇತು ಸಾವಿತ್ರಿ ಅವರುಗಳಿದ್ದರು. ಅವರ ವಿದ್ವತ್ ಪಾಠಗಳನ್ನು ಗ್ರಹಿಸಲು ನಮ್ಮೆಲ್ಲ ಸಾಮರ್ಥ್ಯವನ್ನು ಕ್ರೋಢೀಕರಿಸಿಕೊಂಡು ಕೇಳಬೇಕಾಗಿತ್ತು. ಕನ್ನಡ ವಿಭಾಗದ ಸುಜನಾ ಅವರ ಪಾಠ ಅದರೊಟ್ಟಿಗಿನ ಸಾಮಾನ್ಯ ವಿಷಯಗಳ ಬಗ್ಗೆ ಬೇಕಾದ ಹಲವಾರು ವಿಷಯಗಳನ್ನು ತಿಳಿ ಹೇಳುತ್ತಿದ್ದ ಅವರ ರೀತಿಗೆ ನಾನು ಮಾರುಹೋಗಿದ್ದೆ. ಷೇಕ್ಸ್‍ಪಿಯರ್‍ನ ಹ್ಯಾಮ್ಲೆಟ್ ನಾಟಕವನ್ನು ಇಂಗ್ಲಿಷ್ ಅಧ್ಯಾಪಕ ಮೈಲಾರಿ ರಾವ್ ಅವರು ಸ್ವತಃ ಅಭಿನಯಿಸಿ ತೋರಿಸಿ ಪಾಠ ಹೇಳುತ್ತಿದ್ದ ರೀತಿ, ಅವರಿಂದ ಕಲಿತವರ್ಯಾರು ಎಂದಿಗೂ ಮರೆತಿರಲು ಸಾಧ್ಯವಿಲ್ಲ. ಅವರ ಹ್ಯಾಮ್ಲಟ್ ನಾಟಕದ ಪಾಠ ಕೇಳಲು ಪಕ್ಕದ ಯುವರಾಜ ಕಾಲೇಜಿನ ಹಾಗೂ ಇತರೆ ಕಾಲೇಜಿನ ಅನೇಕ ವಿದ್ಯಾರ್ಥಿಗಳು ಬಂದು ಅನುಮತಿ ಕೋರಿ, ಕೂರುತ್ತಿದ್ದರು.

ಇನ್ನೂ ತರಗತಿಗಳು ಮುಗಿದ ನಂತರ ಸಂಜೆ ಹತ್ತಿರದಲ್ಲಿ ಶತಮಾನೋತ್ಸವ ಭವನದಲ್ಲಿನ ಸಾಂಸ್ಕಂತಿಕ ಸಾಮಾಜಿಕ ಸಭೆ ಸಮಾರಂಭಗಳಿಗೆ ನಾನು ಮತ್ತು ಮಹೇಶ ಬಿಡದೆ ಹಾಜರಾಗುತ್ತಿದ್ದೆವು. ನಾನು ಮೈಸೂರಿನ ಹೊಸ ವಾತಾವರಣಕ್ಕೆ ಹೊಂದಿಕೊಳ್ಳುತ್ತಿದ್ದ ಎರಡು ಮೂರು ತಿಂಗಳಲ್ಲಿಯೇ ಮಹಾರಾಜ ಕಾಲೇಜಿನಲ್ಲಿನ ವಿದ್ಯಾರ್ಥಿಗಳಿಂದ ಎ‌ಕ್ಸ್ ಪೋ – 70 ಕಾರಣದಿಂದ ವಿದ್ಯಾರ್ಥಿಗಳಿಂದ ಪ್ರತಿಭಟನೆ ಪ್ರಾರಂಭವಾಗಿತ್ತು. ಅದೊಂದು ಸಾಂಸ್ಕಂತಿಕ Exchange Programme ಸಲುವಾಗಿ ಜಪಾನಿಗೆ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ಕಳಿಸುವುದಾಗಿತ್ತು.

ಇದರಲ್ಲಿ ರಾಜಕಾರಣಿಗಳ ಮಕ್ಕಳು ಮತ್ತು ಇತರೆ ಪ್ರಭಾವಿ ರಾಜಕಾರಣಿಗಳ ಸಂಬಂಧಿಗಳನ್ನು ಕಳಿಸಿದ್ದಾರೆ. ಸೂಕ್ತವಾದ ವಿದ್ಯಾರ್ಥಿ ನಾಯಕರನ್ನು, ಸಾಂಸ್ಕಂತಿಕವಾಗಿ ವಿದ್ವತ್ ಇರುವ ವಿದ್ಯಾರ್ಥಿಗಳಿಗೆ ಮೋಸವಾಗಿದೆ ಎಂದು ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ವಿರುದ್ದ ಪ್ರತಿಭಟನೆ ಪ್ರಾರಂಭವಾಗಿತ್ತು. ಅದರಲ್ಲಿ ಬೇರೆಲ್ಲ ಕಾಲೇಜುಗಳಿಂದ ಬಂದ ಕಾಲೇಜು ವಿದ್ಯಾರ್ಥಿಗಳು ಕೂಡ ಭಾಗವಹಿಸಿದ್ದರು. ನಾನೇನು ಅದರ ಗೋಜಿಗೆ ಹೋಗದವ. ತರಗತಿಗಳು ರದ್ದಾದ ತಕ್ಷಣ ಹಾಸ್ಟೆಲ್‍ಗೆ ಬಂದು, ಹಲವು ದಿನಗಳಿಂದ ತೊಳೆಯದಿರದ ಬಟ್ಟೆಗಳನ್ನು ತೊಳೆದುಕೊಂಡು ಹೋಗಿ ಬರುವ ಸಮಯಕ್ಕೆ, ಹಾಸ್ಟೆಲ್ ಒಳಗೆ ಪೋಲೀಸರು ನುಗ್ಗಿ ಸಿಕ್ಕ ಸಿಕ್ಕವರನ್ನು ಲಾಠಿಗಳಿಂದ ಥಳಿಸಲು ಶುರುಮಾಡಿದ್ದರು.

ವಿದ್ಯಾರ್ಥಿಗಳ ಪ್ರತಿಭಟನೆ ಮತ್ತು ಇದರ ಯಾವ ಪರಿವೆ ಇಲ್ಲದೆ, ಪಂಚೆ ಬನಿಯನ್ನಿನಲ್ಲಿ ಸಿಕ್ಕ ನನ್ನನ್ನು ಪೋಲೀಸರು ಬಾರಿಸ ತೊಡಗಿದರು. ಏಟು ತಿನ್ನುತ್ತಲೇ ರೂಂ ಕಡೆ ಓಡಿದರೂ ಬಿಡದೆ ಎಳೆದುಕೊಂಡು ಬಂದು  ಪೊಲೀಸ್ ವ್ಯಾನ್‍ನಲ್ಲಿ ತುಂಬಿ ಅಶೋಕ್ ರಸ್ತೆಯ ಕೊನೆಯಲ್ಲಿರುವ ಪೋಲೀಸ್ ಠಾಣೆಯಲ್ಲಿ, ನಮ್ಮನ್ನೆಲ್ಲ ಗುಡ್ಡೇ ಹಾಕಿದರು. ಅಷ್ಟರಲ್ಲಿ ಯಾರೋ ಹಿರಿಯ ಪೋಲೀಸ್ ಆಫೀಸರ್ ಬಂದು ನಮ್ಮನ್ನೆಲ್ಲ `ನೋಡಿ ನೀವೇನು ವಿದ್ಯಾರ್ಥಿಗಳ, ಇಲ್ಲ ಗೂಂಡಾಗಳ’ ಎಂದು ನಿಂದಿಸಿ ತನ್ನ ಚೇಂಬರ್ ಕಡೆಗೆ ಹೋದ. ಎಷ್ಟೋ ಹೊತ್ತಿನ ನಂತರ ವಿಶ್ವವಿದ್ಯಾಲಯದಿಂದ ಬಂದ ವಿದ್ಯಾರ್ಥಿಗಳ ಕ್ಷೇಮಪಾಲಕರಾಗಿದ್ದ ಉ.ಕ. ಸುಬ್ಬರಾಯಚಾರ್ ಹಾಜರಾದರು. ಅವರ ಬಿಳಿಪಂಚೆ, ಬಿಳಿ ಅಂಗಿಯಲ್ಲಿ ಶುಭ್ರವಾಗಿದ್ದ ಅವರನ್ನು ನೋಡಿ ಸಮಾಧಾನಗೊಂಡು, ಲಾಠಿಯಿಂದ ತಿಂದ ಏಟುಗಳ ನೋವನ್ನು ಅವರಿಗೆ ತಿಳಿಸಿದೆವು.

ಅಲ್ಲಿಂದ ನಮ್ಮನ್ನು ಕೆ.ಆರ್. ಹಾಸ್ಪಿಟಲ್ ಹೊರ ರೋಗಿಗಳಾಗಿ ಉಪಚರಿಸಿ ಹಾಸ್ಟೆಲ್‍ಗೆ ಹೋಗಲು ಬಿಡುಗಡೆಗೊಳಿಸಿದರು. ನನ್ನ ಎಡಗೈ ಮತ್ತು ಬೆರಳುಗಳಿಗೆ ಬಲವಾದ ಏಟು ಬಿದ್ದ ಕಾರಣ ನನಗೆ ಪೂರ್ತಿ ಬ್ಯಾಂಡೇಜ್ ಹಾಕಿದ್ದರು. ಮಾರನೆ ದಿನದಿಂದ ಹಾಸ್ಟೆಲ್‍ನ್ನು ಮುಚ್ಚಿ ಎಲ್ಲಾ ವಿದ್ಯಾರ್ಥಿಗಳಿಗೂ ಅವರವರ ಊರಿಗೆ ಹೋಗುವ ಬಗ್ಗೆ ಹಾಸ್ಟೆಲ್‍ನಲ್ಲಿ ಮುಂಗಡವಾಗಿ ಕಟ್ಟಿಸಿಕೊಂಡ ಹಣದಿಂದ ಬಸ್ ಮತ್ತು ರೈಲು ಚಾರ್ಜುಗಳನ್ನು ವಿಚಾರಿಸಿಕೊಂಡು ಹಣ ನೀಡಿದರು.

ನಾನು ಊರಿಗೋಗುವ ಮುನ್ನ ಪಾರ್ವತಮ್ಮರಿಗೆ ಹೇಳಿಬರೋಣವೆಂದು ಅವರ ಮನೆಗೆ ಹೋದೆ. ನನ್ನ ಸ್ಥಿತಿ ನೋಡಿದ ಅವರು ಈ ರೀತಿಯ ಬ್ಯಾಂಡೇಜ್ ಹಾಕಿಕೊಂಡು ನೀನು ಊರಿಗೆ ಹೋದರೆ ನಿನ್ನ ಓದು-ಗೀದು ಬೇಡವೆಂದು ನಿಮ್ಮ ಊರಿನವರು ತೀರ್ಮಾನಿಸುತ್ತಾರೆ. ನಿನ್ನ ಹಾಸ್ಟೆಲ್ ಪುನಃ ಪ್ರಾರಂಭವಾಗವವರೆಗೆ ನಮ್ಮಲ್ಲೇ ಇರು ಎಂದು ಸಲಹೆ ನೀಡಿದರು. ನನಗೂ ಅದು ಸರಿ ಎಂದು ಸುಮಾರು 15-20 ದಿನಗಳವರೆಗೆ ಹಾಸ್ಟೆಲ್ ತೆರೆಯುವವರೆಗೂ ಕಾಲೇಜು ಮತ್ತು ಊಟ-ತಿಂಡಿಗೆಂದು ಅವರಲ್ಲಿಗೆ ಹೋಗಿ ಬಂದು ಮಾಡುತ್ತಿದ್ದೆ.

ಸಾಗರದಲ್ಲಿ ಸುಮಾರು 8 ವರ್ಷಗಳ ಕಾಲ ಅಕ್ಕನ ಮನೆಯಲ್ಲಿ ಸಣ್ಣ ಪುಟ್ಟ ಕೆಲಸಗಳನ್ನು ಮಾಡಿಕೊಂಡಿದ್ದೆನಾದರೂ ಪಾರ್ವತಮ್ಮನವರ ಮನೆಯಲ್ಲಿದ್ದುಕೊಂಡು ಸೈ ಎನ್ನಿಸಿಕೊಳ್ಳುವುದು ಸವಾಲಿನ ಕೆಲಸವಾಗಿ ಕಂಡಿತು. ಅವರ ಮನೆಯಲ್ಲಿ ಆಂಜನಪ್ಪ ಎಸ್.ಎಸ್.ಎಲ್.ಸಿ. ಫೇಲಾಗಿದ್ದ ಅವನನ್ನು ಪಾಸು ಮಾಡಿಸಿ ಮುಂದೆ ಓದುವ ಸಲುವಾಗಿ ಇಟ್ಟುಕೊಂಡಿದ್ದರಾದರೂ ಅವನು ಸಾಮಾನ್ಯವಾದ ಕಸ-ಮುಸುರೆ ಕೆಲಸಗಳನ್ನು ಮಾಡುತ್ತಿದ್ದ. ಮನೆಯಲ್ಲಿ ಯಾರೇ ಕೆಲಸದವರೆಂದು ಇರಲಿಲ್ಲ. ಅವರೇ ಅಡಿಗೆ ಮಾಡಿಕೊಳ್ಳುತ್ತಿದ್ದರು.

ಅಕ್ಕನ ಸರಳತನ, ಅವರ ಬಟ್ಟೆ-ತಟ್ಟೆ ಎಲ್ಲ ಕೆಲಸಗಳನ್ನು ಅವರೇ ಮಾಡಿಕೊಂಡು, ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಕೇಂದ್ರದಲ್ಲಿ ಮುಖ್ಯಸ್ಥೆಯಾಗುವ ಮಟ್ಟಕ್ಕೂ ಬೆಳೆದು ದೊಡ್ಡ ಹೆಸರು ಮಾಡಿದ್ದರು. ತಿಂಗಳು-ಎರಡು ತಿಂಗಳಿಗೊಮ್ಮೆ ದೊಡ್ಡ ದೊಡ್ಡ ಸೆಮಿನಾರ್ಗಳಿಗೆ ದೆಹಲಿ, ಹೈದರಾಬಾದ್, ಬಾಂಬೆ ವಿಶ್ವವಿದ್ಯಾಲಯಗಳಿಗೆ ಮೈಸೂರಿನಿಂದ ಬೆಂಗಳೂರಿಗೆ, ಅಲ್ಲಿಂದ ವಿಮಾನದಲ್ಲಿ ಹೋಗಿ ಬರುತ್ತಿದ್ದರು. ಪಾರ್ವತಕ್ಕನ ಮನೆಯಲ್ಲಿ ಅವರ ತಾಯಿಯ ತಾಯಿ ಅಂದರೆ ಅವರ ಅಜ್ಜಿ ಒಬ್ಬರಿದ್ದರು. ಅವರಿಗೆ ಸಕಾಲಕ್ಕೆ ಅಡಿಗೆ – ಊಟದ ವ್ಯವಸ್ಥೆಯನ್ನು ಅವರಿಗೆ ಆಂಜನಪ್ಪನೇ ನೋಡಿಕೊಳ್ಳುತ್ತಿದ್ದ ಅವರ ಆರೋಗ್ಯದಲ್ಲಿ ಏರುಪೇರಾದರೆ ಊಟ ತಿಂಡಿಯಲ್ಲಿ ವ್ಯತ್ಯಾಸ ಮಾಡಿದ್ದೀಯ ಎಂದು ಆಂಜಪ್ಪನಿಗೆ ಪಾರ್ವತಕ್ಕ ಗದರಿಸುತ್ತಿದ್ದರು.

ಮತ್ತೆ ಕಾಲೇಜು ಪ್ರಾರಂಭವಾದ ಹೆಚ್ಚಿನ ಸಮಯ ಓದು ಬಿಡುವಾದಾಗ ಪಾರ್ವತಕ್ಕನ ಮನೆ ಕಡೆ ಹೋಗಿ ಬರುತ್ತಿದ್ದೆ. ಈ ಮಧ್ಯೆ ಊರಿಗೋದಾಗ ಪಾರ್ವತಕ್ಕನ ಮನೆ, ಊಟ ಅವರ ಶಿಸ್ತು ಎಲ್ಲಾ ವಿಷಯಗಳ ಬಗ್ಗೆ ಅಭಿಮಾನಪೂರ್ವಕವಾಗಿ ಅಪ್ಪ ಅವ್ವನಿಗೆ ಹೇಳುತ್ತಿದ್ದೆ. ನಮ್ಮ ಊರಿನಿಂದ  ಬರುವಾಗ ನನ್ನ ವಸ್ತುಗಳ ಜೊತೆ ಬೆಳೆದ ರಾಗಿಯನ್ನೋ, ಎಲೆ ಮತ್ತು ತರಕಾರಿಗಳ ಜೊತೆ ಹತ್ತಿಪ್ಪತ್ತು ರೊಟ್ಟಿ, ಚಟ್ನಿಪುಡಿ ಕಟ್ಟಿಸಿಕೊಂಡು ಬರುತ್ತಿದ್ದೆ. ವಿಶೇಷ ಸಂದರ್ಭಗಳಲ್ಲಿ ಬೆಣ್ಣೆ ಮತ್ತು ಗಿಣ್ಣ ಅವ್ವ ಒಪ್ಪ ಮಾಡಿ ಪಾರ್ವತಕ್ಕನಿಗೆ ಕೊಡು ಎಂದು ಕಳಿಸುತ್ತಿದ್ದಳು.

ಸಾಗರದಿಂದ ರಾಮನಗರಕ್ಕೆ ಬಂದ ಅಕ್ಕ ಭಾವನ ಸಂಸಾರ ಅಲ್ಲಿನ ಪಿ.ಡಬ್ಲೂ.ಡಿ. ಕ್ವಾರ್ಟರ್ಸ್‍ನಲ್ಲಿ ವಾಸಿಸುತ್ತಿದ್ದರು. ಮೈಸೂರಿನಿಂದ ಆಗಾಗ ನಾನು ರಾಮನಗರಕ್ಕೂ ಹೋಗಿಬರುತ್ತಿದ್ದೆ. ನಮ್ಮ ಊರಿಗೋದಾಗ ನಾನು ಮೈಸೂರಿನ ಪ್ರತಿಷ್ಠಿತ ಕಾಲೇಜಿನಲ್ಲಿ ಓದುತ್ತಿರುವ ವಿಷಯವನ್ನು ಇತರರಿಗೆ ತಿಳಿಸುವಾಗ ಹೆಮ್ಮೆಯೆನಿಸುತ್ತಿತ್ತು. ಹಾಗೆಯೇ ನಮ್ಮ ಮನೆಯವರೂ ಸೇರಿದಂತೆ ಊರ ಇತರೆ ಎಲ್ಲರೂ ನನ್ನನ್ನು ಅಭಿಮಾನದಿಂದ ವಿಚಾರಿಸುವಂತಾಗುವ ವ್ಯಕ್ತಿಯಾಗಿ ರೂಪುಗೊಂಡಿದ್ದೆ. ಹೀಗೆ ಒಂದು ವರ್ಷದಲ್ಲಿ ಎರಡನೇ ಬಿ.ಎ. ಮುಗಿಸಿ ಅಂತಿಮ ಬಿ.ಎ.ಗೆ ಸೇರಿಕೊಂಡಾಗ ಮೈಸೂರು ಹೆಚ್ಚು ಪರಿಚಿತ ನೆಲೆಯಂತಾಯಿತು.

ಕಾಲೇಜಿನಲ್ಲಿನ ಚುನಾವಣಾ ಸಮಯದಲ್ಲಿ ನನ್ನ ರೂಂಮೆಟ್‌ ಆಗಿದ್ದ ಮಹೇಶನ ಜೊತೆ ಭಕ್ತ ರಾಮೇಗೌಡ, ಅರ್ಕೇಶ, ಚಿಕ್ಕ ಸಾವಕ ಇತರೆ ಸ್ನೇಹಿತರು ಪರಿಚಯವಾಗಿದ್ದರು. ಮಹಾರಾಜಾ ಕಾಲೇಜಿನಲ್ಲಿಯೇ ಓದುತ್ತಿದ್ದ ದೇವನೂರು ಮಹಾದೇವ ಪಕ್ಕದ ವಿಭಾಗದಲ್ಲಿದ್ದ. ಅವನು ಆಗಲೇ ಕಥೆ ಕವನಗಳನ್ನು ಬರೆದು ಹೆಸರು ಮಾಡಿದ್ದ. ಯಾವ ಮಾಯದಲ್ಲೋ ಏನೋ ಒಮ್ಮೆ ಕ್ಯಾಂಟೀನ್‍ನಲ್ಲಿ ಮಹಾದೇವ, ಡಾ. ಯು.ಆರ್. ಅನಂತಮೂರ್ತಿ, ಆಲನಹಳ್ಳಿ ಕೃಷ್ಣ ಮುಂತಾದವರ ಜೊತೆ ಕೂತು ಸಿಗರೇಟ್ ಸೇದುತ್ತಾ ಟೀ ಕುಡಿಯೋದು ನೋಡಿ ನಾನು ಮಹೇಶ, ಭಕ್ತ, ಅರ್ಕೇಶ ಅವರ ಜೊತೆ ಸೇರಿಕೊಂಡಿದ್ದೆವು. ಅವರ ಮಾತುಗಳನ್ನು ಕೇಳಿಸಿಕೊಳ್ಳುವುದನ್ನು ಬಿಟ್ಟರೆ ಮತ್ತೇನು ನಮಗೆ ಹೊಳೆಯುತ್ತಿರಲಿಲ್ಲ. ಸ್ವಲ್ಪ ದಿನಗಳ ನಂತರ ಪ್ರೊ. ನಂಜುಂಡಸ್ವಾಮಿಯವರು ಸಹ ನಮ್ಮ ಕ್ಯಾಂಟೀನ್‍ಗೆ ಬಂದು ಎಂಟು ಹತ್ತು ಹುಡುಗರ ಜೊತೆ ಟೀ ಕುಡಿಯುತ್ತಾ ಮಾತಾಡುತ್ತಿದ್ದರು.

ಅಲ್ಲಿ ಕೂತು ನಡೆಯುತ್ತಿದ್ದ ಚರ್ಚೆಗಳಾವುವು ಕಾಲೇಜಿನ ಪಠ್ಯ ಮತ್ತು ಪರೀಕ್ಷೆಗಳಿಗೆ ಸಂಬಂಧಿಸಿದ, ವಿಷಯಗಳಾಗಿರದೆ, ರಾಷ್ಟ್ರದಲ್ಲಿದ್ದ ಇಂದಿರಾ ಗಾಂಧಿಯವರ ಆಡಳಿತ ವೈಖರಿ, ರಾಜ್ಯದಲ್ಲಿನ ರಾಜಕಾರಣ, ಆಡಳಿತ ಪಕ್ಷದಲ್ಲಿನ ಸ್ವಾರ್ಥ ನಡವಳಿಕೆಗಳು, ವಿದ್ಯಾರ್ಥಿಗಳ ಜವಾಬ್ದಾರಿ, ಜಾತೀಯತೆ, ವರದಕ್ಷಿಣೆ, ರೈತ ಸಮೂಹದ ಶೋಷಣೆ, ದಲಿತರ ಮೇಲಿನ ದೌರ್ಜನ್ಯಗಳ ಪಿಡುಗಾಟಗಳ ಬಗ್ಗೆ ವಿದ್ಯಾರ್ಥಿಗಳು ಸಂಘಟಿತ ಹೋರಾಟ ಮಾಡಬೇಕೆಂಬುದರ ಬಗ್ಗೆ ಮಾತನಾಡುತ್ತಿದ್ದರು.

ಪ್ರೊ. ನಂಜುಂಡಸ್ವಾಮಿ ವಿದೇಶದಲ್ಲಿ ಕಾನೂನು ಪದವಿ ಓದಿಕೊಂಡು ಬಂದವರು. ಅವರ ತಂದೆಯವರು ಆಗಿನ ಕಾಲದಲ್ಲಿ ಜನಾನುರಾಗಿಯಾಗಿದ್ದ ಲಾಯರ್. ಜೊತೆಗೆ ಸಾಕಷ್ಟು ಭೂಮಿ ಹೊಂದಿದ್ದ, ದೊಡ್ಡ ಮನೆತನದವರಾಗಿದ್ದರು. ಅನಂತಮೂರ್ತಿಯವರಂತೂ ಆಗ `ಸಂಸ್ಕಾರ’ ಕಾದಂಬರಿ ಬರೆದು ಶೈಕ್ಷಣಿಕ ವಲಯದಲ್ಲಿ ಹೆಚ್ಚು ಪರಿಚಿತರಾಗಿದ್ದರು. ಹಾಗೇಯೇ ಆಲನಹಳ್ಳಿ ಕೃಷ್ಣ, ಮಹಾರಜಾ ಕಾಲೇಜಿನಲ್ಲಿ ಮತ್ತು ಕೆ. ರಾಮದಾಸ್ ಯುವರಾಜ ಕಾಲೇಜಿನಲ್ಲಿ ಅಧ್ಯಾಪಕರಾಗಿದ್ದವರು. ಆಲನಹಳ್ಳಿ ಕೃಷ್ಣ ಕಥೆ – ಕಾದಂಬರಿಗಳನ್ನು ಬರೆದು ಅವರ ಕಥೆಗಳು ಇತರೆ ಭಾಷೆಗಳಿಗೆ ಭಾಷಾಂತರಗೊಂಡು ಹೆಚ್ಚು ಪರಿಚಿತರಾಗಿದ್ದವರು. ಪರಿಚಯವಿಲ್ಲದವರಿಗೆ ಆಲನಹಳ್ಳಿ ಕೃಷ್ಣ, ಪರಿಚಯವಾಗುವಂತದ್ದೇನಾದರೂ ಮಾಡಿ ಪರಿಚಯವಾಗುತ್ತಿದ್ದ.

ಕೆ. ರಾಮ್‍ದಾಸ್, ಎಸ್.ವೈ.ಎಸ್.ನಲ್ಲಿ ಗಂಭೀರ ಸಂಘಟಕರಾಗಿದ್ದರು. ಹೀಗೆ ಪರಿಚಿತರಾದ ಗೆಳೆಯರ ಬಳಗದಲ್ಲಿ ಭಕ್ತ ರಾಮೇಗೌಡ ವಿದ್ಯಾರ್ಥಿ ಸಂಘದ ಚುನಾವಣೆಗೆ ನಿಂತು ಕಾಲೇಜಿನ ವಿದ್ಯಾರ್ಥಿ ಸಂಘದ ಕಾರ್ಯದರ್ಶಿಯಾಗಿ ಚುನಾಯಿತನಾಗಿದ್ದ. ಅವನ ಬೆಂಬಲಕ್ಕೆ ಅರ್ಕೇಶ, ಮಹೇಶ ನಾನು ಮತ್ತು ಇತರೆ ಎಲ್ಲಾ ಸ್ನೇಹಿತರು ಇದ್ದು, ಆ ಚುನಾವಣಾ ಕಾರಣದ ನೆಪದಲ್ಲಿ ನಾವೆಲ್ಲರೂ ಹಾಗೇ ಸ್ನೇಹಿತರಾಗಿ ಮುಂದುವರಿದೆವು. ದೇವನೂರ ಮಹಾದೇವ, ನಂಜನಗೂಡು ಚಂದ್ರು ಇನ್ನೂ ಹಲವರು ಸೇರಿ ಸಭೆ ಕರೆದು ಸಮಾಜವಾದಿ ಯುವ ಜನಸಭಾ ಎಂಬ ವಿದ್ಯಾರ್ಥಿ ಘಟಕದ ಪದಾಧಿಕಾರಿಗಳನ್ನು ಆಯ್ಕೆ ಮಾಡಿದರು. ಅದರಲ್ಲಿ ತಳಬುಡ ತಿಳಿಯದ ನಾನು ಎಸ್.ವೈ.ಎಸ್.ನ ಕಾರ್ಯದರ್ಶಿಯಾಗಿಯೂ ಮಹೇಶ ಖಜಾಂಚಿಯಾಗಿಯೂ ಕೆಲಸ ಮಾಡಲು ಸೂಚಿಸಿ ಮಹಾದೇವ ಒಪ್ಪಿಸಿದ.

ಅವನ ಬಗ್ಗೆ ಏನು ತಿಳಿಯದಿದ್ದರೂ ಅವನ ಮೌನ, ಮತ್ತು ಹಿರಿಯರಾಗಿದ್ದ ಪ್ರೊ. ಎಂ.ಡಿ. ನಂಜುಂಡಸ್ವಾಮಿ, ಯು.ಆರ್. ಅನಂತಮೂರ್ತಿ, ಕೆ. ರಮದಾಸ್, ವಕೀಲರಾದ ಟಿ.ಎನ್. ನಾಗರಾಜ್, ಆಲನಹಳ್ಳಿ ಕೃಷ್ಣ ಅವರ ಜೊತೆ ಸಮಾನ ಕೂತು ನಮ್ಮದೇ ಸಹಪಾಠಿಯೊಬ್ಬ ಸಿಗರೇಟು ಸೇದತ್ತಾ ಮಾತನಾಡುತ್ತಿದ್ದ ಅವನ ಬಗ್ಗೆ ನಮಗೆ ಒಂದು ರೀತಿಯ ಅಭಿಮಾನ, ಸ್ನೇಹ ಬೆಳೆದಿತ್ತು.

ಮೈಸೂರಿನಲ್ಲಿ ನನ್ನ ಓದಿನ ಜೊತೆ ಸಮಾಜವಾದಿ ಚಿಂತನೆಯನ್ನು ಮೈಗೂಡಿಸಿಕೊಂಡಿದ್ದ ಅಧ್ಯಾಪಕರು, ವಕೀಲರು, ಹೋರಾಟಗಾರರುಗಳ ಬಹು ದೊಡ್ಡ ಸಮೂಹದ ಜೊತೆ ಒಡನಾಡಲು ನನಗೆ ದಾರಿ ಸಿಕ್ಕಂತಾಯಿತು. ಮಹಾದೇವ ತಯಾರಿಸುತ್ತಿದ್ದ ಕರಪತ್ರಗಳನ್ನು ಹಿರಿಯ ಸಮಾಜವಾದಿ ಹೋರಾಟಗಾರರಾದ ಪಿ. ಮಲ್ಲೇಶ್ ಅವರ ಮಯೂರ ಪ್ರೆಸ್‍ನಲ್ಲಿ ಅಚ್ಚಾಕಿಸುತ್ತಿದ್ದೆವು. ಅವುಗಳನ್ನು ಕ್ಯಾಂಟೀನ್ ಮತ್ತು ಕಾಲೇಜಿನಲ್ಲಿ ಹಂಚುತ್ತಿದ್ದೆವು. ಹಾಗೆ ಇತರೆ ಹುಡುಗರು ನಮ್ಮನ್ನು ಏನು ಸಮಾಜವಾದಿಗಳು ಎಂದು ಮಾತನಾಡಿಕೊಳ್ಳುವ  ಮಟ್ಟಕ್ಕೆ ನಮ್ಮ ಪರಿಚಯವಾಗುತ್ತಾ ನನ್ನ ಬಿ.ಎ. ಅಂತಿಮ ವರ್ಷ ಮಹಾರಾಜಾ ಕಾಲೇಜಿನಲ್ಲಿ ಪಾಸು ಮಾಡಿದೆ.

ಎಂದಿನಂತೆ ನಾನು ಬಿ.ಎ. ಪಾಸು ಮಾಡಿದ ಸುದ್ದಿಯನ್ನು ಊರಲ್ಲಿ ಹೇಳಿ ಸಂಭ್ರಮಪಟ್ಟಿದ್ದೆ. ಎಲ್ಲರಿಗಿಂತ ಅಪ್ಪನಿಗೆ ಹೆಚ್ಚು ಸಂತೋಷವಾಗಿತ್ತು. ನಂತರ ಕೆಲಸ ಹುಡುಕುವುದೋ ಇಲ್ಲ ಮುಂದೆ ಓದುವುದೋ ಎಂದು ಯೋಚಿಸುತ್ತಿರುವಾಗಲೇ ಮೈಸೂರಿಗೆ ಬಂದು ಶಾರದಾ ವಿಲಾಸ ಲಾ ಕಾಲೇಜಿಗೆ ಕನ್ನಡ ಮತ್ತು ಅರ್ಥಶಾಸ್ತ್ರ ಎಂ.ಎ. ವಿಭಾಗಗಳಿಗೆ ಸೇರಿಕೊಳ್ಳಲು ಗಂಗೋತ್ರಿಯ ಆಡಳಿತ ವಿಭಾಗಕ್ಕೆ ಅರ್ಜಿ ಹಾಕಿದೆ.

ನನ್ನ ಮೊದಲ ಆದ್ಯತೆ ಲಾಯರ್ ಆಗಬೇಕೆಂಬುದನ್ನು ತಿಳಿದ ಪಾರ್ವತಕ್ಕ `ನೀನು ಸಿದ್ದವೀರಪ್ಪನವರ ಜೊತೆಗೆ ರಾಜಕಾರಣಿಯಾಗಿ ಅಲೆಯ ಬೇಕಾ?’ ಎಂದು ಛೇಡಿಸುವ ರೀತಿ ಮಾತಾಡಿದರು. ನನಗೆ ಮೊದಲಿನಿಂದಲೂ ಸಿದ್ದವೀರಪ್ಪ ನವರು ಊರಿಗೆ ಬಂದಾಗ ಜನರೊಡನೆ ಅವರ ಒಡನಾಟ ನೋಡಿದ್ದೆ ಹಲವು ಹತ್ತಾರು ಸಮಸ್ಯೆಗಳಿಗೆ ಸ್ಪಂದಿಸುತ್ತಾ ಜನರೊಡನೆ ಇರುವುದನ್ನು ಕಂಡಿದ್ದು ಅವರಂತಾಗುವ ಕನಸು ನನ್ನಲ್ಲಿ ಮೊಳಕೆಯೊಡೆದಿತ್ತು.

ನಾನು ಅವರಂತೆ ಆಗಬೇಕೆಂದೂ ಆಸೆ ಇತ್ತು. ಆದರೆ ಎಲ್.ಎಲ್.ಬಿ. ಸೇರಿದ ಕಾರಣಕ್ಕೆ ಉಳಿಯುವುದೆಲ್ಲಿ? ಎಂಬ ಪ್ರಶ್ನೆ ಬಂತು. ಲಾ ಓದುವ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಅನುಕೂಲಗಳು ಇರಲಿಲ್ಲ. ಆ ಬಗ್ಗೆ ಕೂಡ ಯೋಚಿಸುತ್ತಿರುವಾಗ ನನಗೆ ಕನ್ನಡ ಎಂ.ಎ.ಗೆ ಸೀಟು ಸಿಕ್ಕಿತ್ತು. ಪ್ರೊ. ಹಾ.ಮಾ. ನಾಯಕ್ ಅವರು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರಾಗಿದ್ದರು. ಹೆಚ್.ಎಂ. ಚನ್ನಯ್ಯ, ವೆಂಕಟಾಚಲ ಶಾಸ್ತ್ರಿ, ಪ್ರೊ. ತಿಪ್ಪೇರುದ್ರಸ್ವಾಮಿ, ಪ್ರೊ. ಎಲ್. ಬಸವರಾಜು ಹಾಗೂ ಅನೇಕ ದಿಗ್ಗಜರಿದ್ದ ಕಾಲವದು. ಆದರೆ ನಾನು ಅಲ್ಲಿ ಮುಂದುವರಿಯಲಿಲ್ಲ.

ಅರ್ಥಶಾಸ್ತ್ರ ವಿಭಾಗದಲ್ಲಿ ಮೊದಲ ಮತ್ತು ಎರಡನೇ ಲಿಸ್ಟ್‍ಗಳು ಹಾಕಿದ್ದರೂ ನನಗೆ ಸೀಟು ಸಿಕ್ಕಿರಲಿಲ್ಲ. ನಾನು ಕನ್ನಡ ಎಂ.ಎ.ಗೆ ಸೇರಿದ ಕಾರಣಕ್ಕೆ ಪಾರ್ವತಕ್ಕ ಮತ್ತೆ ತಮ್ಮ ಅಸಮಧಾನವನ್ನು ಹೊರಹಾಕಿದರು. ಕನ್ನಡ ಎಂ.ಎ. ಮಾಡಿದವರಿಗೆ ಕೆಲಸಗಳಿಲ್ಲ. ನೀನು ಅಲ್ಲಿ ಸೇರಿ ಏನು ಮಾಡುತ್ತಿ? ಎಂದೆಲ್ಲ ಹೇಳಿ ಆಗ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿದ್ದ ಜಿ.ಟಿ. ಹುಚ್ಚಪ್ಪನವರನ್ನು ಹೋಗಿ ಕಾಣು ಎಂದು ಹೇಳಿದರು. ನಾನು ಹೋಗಿ ಭೇಟಿಯಾದಾಗ ನೋಡೋಣ ಕಾಯಿರಿ ಎಂದು ಹೇಳಿದರು. ಪಾರ್ವತಕ್ಕನು ಅದಕ್ಕೂ ಮುಂಚೆ ಅವರೊಡನೆ ಮಾತಾಡಿದ್ದರು ಎಂದು ಕಾಣುತ್ತದೆ. ನಂತರ ಇನ್ನೊಂದು ವಾರದಲ್ಲಿ ಮೂರನೇ ಲಿಸ್ಟ್‍ನಲ್ಲಿ ನನಗೆ ಸೀಟು ಸಿಕ್ಕಿತ್ತು. ನನಗೆ ಎಂ.ಎ. ಅರ್ಥಶಾಸ್ತ್ರದಲ್ಲಿ ಸೀಟು ಸಿಗಲು ಕೂಡ ಪಾರ್ವತಕ್ಕನವರೇ ಕಾರಣರಾಗಿದ್ದರು. ಹಾಗೇ ಗಂಗೋತ್ರಿಯ ಪಿ.ಜಿ. ಹಾಸ್ಟೆಲಿಗೆ ಅರ್ಜಿ ಸಲ್ಲಿಸಿ ಅಲ್ಲಿಯೂ ನನಗೆ ಸೀಟು ಸಿಗಲು ತೊಂದರೆಯಾಗಲಿಲ್ಲ.

ಅರ್ಥಶಾಸ್ತ್ರ ವಿಭಾಗದಲ್ಲಿ ಡಾ. ಜಿ.ಟಿ. ಹುಚ್ಚಪ್ಪ, ಎ.ಪಿ. ಶ್ರೀನಿವಾಸಮೂರ್ತಿ, ಡಾ. ಎಸ್.ಎಂ. ವೀರರಾಘವಚಾರ್, ಡಾ. ಎಂ. ಮಾದಯ್ಯ, ಡಾ. ಶ್ರೀಕಂಠ ಆರಾಧ್ಯ, ಡಾ. ಎಸ್. ನಾಗರಾಜ್, ಎನ್. ಪ್ರಭುಸ್ವಾಮಿ, ಡಾ. ರೇಣುಕಾರ್ಯ ಇವರುಗಳಿದ್ದರು. ನನಗೆ ಲೇಬರ್ ಎಕಾನಮಿಕ್ಸ್ ಐಚ್ಚಿಕ ವಿಷಯ ನೀಡಿ ಎಂ.ಎ. ಅರ್ಥಶಾಸ್ತ್ರದ ಪ್ರಥಮ ವರ್ಷ ಪ್ರಾರಂಭವಾಗಿತ್ತು. ಪ್ರಥಮ ಎಂ.ಎ.ಗೆ ಸೇರಿದಾಗ ನನಗೆ ಮೊದಲೇ ಸೀನಿಯರ್ ಆಗಿ ಸಾಗರದಲ್ಲಿ ಪರಿಚಯವಾಗಿದ್ದ ಸೊರಬ ತಾಲ್ಲೂಕಿನ ಕುಮ್ಮೂರ ಬಸವಣ್ಯಪ್ಪನಿದ್ದನು.

ಸಾಗರ ಕಾಲೇಜಿನಲ್ಲಿದ್ದಾಗಲೇ ಅವನು ಹಲವು ಬಾರಿ ಮೈಸೂರಿಗೆ ವಿಶ್ವವಿದ್ಯಾಲಯ ಮಟ್ಟದ ಚರ್ಚಾಕೂಟದಲ್ಲಿ ಭಾಗವಹಿಸಿ ಬಹುಮಾನ ಪಡೆದವನಾಗಿದ್ದ. ಅವನು ಮೈಸೂರಿಗೆ ಬಂದಾಗ ನಾನಿದ್ದ ಹಾಸ್ಟೆಲ್‍ಗೆ ಬಂದು ಹೋಗುತ್ತಿದ್ದ. ಅವನು ಎಂ.ಎ.ಗೆ ಸೀಟು ಪಡೆಯಲು ಬಂದಾಗ ಪರಿಚಯವಾಗಿ ನಂತರ ಅವನಿಗೆ ಹಿಂದುಳಿದ ವರ್ಗಗಳ ಹಾಸ್ಟೆಲ್‍ಗಾಗಿ ಮೈಸೂರಿನ ಮುನಿಸಿಫಲ್ ಹಾಸ್ಟೆಲ್‍ಗೆ ಓಡಾಡಿ ಆಗಿನ ಪುರಸಭೆಯ ಅಧ್ಯಕ್ಷರಾಗಿದ್ದ ಜೋಗಿ ಸಿದ್ದಯ್ಯ ಅವರ ಶಿಫಾರಸ್ಸಿನಿಂದ ಸೀಟು ಪಡೆದಿದ್ದ.

ಅವನೀಗ ಎಂ.ಎ. ಅಂತಿಮ ವರ್ಷದಲ್ಲಿರುವಾಗ ನಾನು ಪ್ರಥಮ ಎಂ.ಎ.ಗೆ ಸೇರಿಕೊಂಡಿದ್ದೆ. ಒಂದು ವರ್ಷಗಳ ಅಂತರದ ಎಂ.ಎ. ವ್ಯಾಸಂಗದಲ್ಲಿದ್ದರೂ ನಾನು ಅವನು ಕಾಲೇಜಿನ ಹೊರಗಡೆ ಸದಾ ಜೊತೆಗಿರುತ್ತಿದ್ದೆವು. ಬಸವಣ್ಯಪ್ಪ ಬುದ್ದಿವಂತ, ಯಾವುದೇ ಸಮಸ್ಯೆಗಳನ್ನು ಕೂಲಂಕಷವಾಗಿ ಚರ್ಚಿಸಿ ತನ್ನ ವಾದ ಸರಣಿಯಿಂದ ಜೊತೆಗಿರುವವರನ್ನು ಒಪ್ಪಿಸುವ ಛಾತಿಯುಳ್ಳವನಾಗಿದ್ದನು. ಆ ವಿದ್ಯಾರ್ಥಿ ದೆಸೆಯಲ್ಲಿಯೇ ಚೈನಾದ ಮಾವೋತ್ಸೆತುಂಗ್, ರಷ್ಯಾದ ಕಾರ್ಲ್‍ಮಾಕ್ರ್ಸ್ ಮತ್ತು ಬರ್ಟೆಂಡ್ ರಸ್ಸೆಲ್ ರಂತಹವರ ವಾದ ಸರಣಿಗಳನ್ನು ತನ್ನ ಮಾತಿನ ಮದ್ಯೆ ಉಲ್ಲೇಖಿಸಿ ಮಾತನಾಡುತ್ತಿದ್ದನು.

ಹೆಚ್ಚಿನ ಸಮಯ ಓದದಿದ್ದರೂ ಓದಿದಷ್ಟನ್ನೇ ಚೆನ್ನಾಗಿ ನೆನಪಿಡುವ ವಿಶೇಷ ಶಕ್ತಿ ಅವನಿಗಿತ್ತು. ಆಗ ನನ್ನ ಸ್ನೇಹಿತರಾಗಿದ್ದವರೆಲ್ಲ ಅವನ ಸ್ನೇಹಿತರು, ಅವರ ಕಡೆಯಿಂದ ಇದ್ದ ಸ್ಯೇಹಿತರು, ನನ್ನ ಸ್ನೇಹಿತರೂ ಆಗಿದ್ದರು. ಹೀಗಿರುವಾಗ ಒಂದು ದಿನ ಪಾರ್ವತಕ್ಕನವರ ಮನೆಗೆ ಹೋಗುತ್ತಿರುವ ಬಗ್ಗೆ ನೀನು ಬಾ ಎಂದು ಕರೆದೆ. ಅವನೂ ಕೂಡ ನನ್ನ ಜೊತೆಗೆ ಅವರ ಮನೆಗೆ ಬಂದ. ಪಾರ್ವತಮ್ಮನವರಿಗೆ ಪರಿಚಯಿಸಿದೆ. ಪಾರ್ವತಕ್ಕನ ಮನೆಯಲ್ಲಿ ಯಾರೂ ಕೆಲಸಗಾರರೂ ಇಲ್ಲದಿರುವ ಬಗ್ಗೆ ಮೊದಲೇ ಹೇಳಿದ್ದೇನೆ. ಬಸವಣ್ಯಪ್ಪನನ್ನು ಜೊತೆಗೆ ಕರೆದುಕೊಂಡು ಹೋಗಿ ಪರಿಚಯಿಸಿದೆ. ಅವರು ಕೊಟ್ಟ ತಿಂಡಿಯ ಪ್ಲೇಟು ಹಾಗೂ ಕಾಪಿ ಲೋಟಗಳನ್ನು ಬಂದವರೇ ತೊಳೆದಿಡಬೇಕಾಗಿತ್ತು. ಹಾಗೆ ತೊಳೆದು ಇಡುವುದು ಸಮಸ್ಯೆಯಲ್ಲ. ಅದನ್ನು ಅವರು ಇಡುವ ರೀತಿಯಲ್ಲಿ ಇಡದಿದ್ದಾಗ ಅದನ್ನೊಂದು ದೊಡ್ಡ ದೋಷವೆಂದು ಬಂದವರಿಗೆ ಮುಜುಗರ ಆಗುವಂತೆ ಮಾಡುತ್ತಿದ್ದರು.

ಅವರು ತಿರುಗಾಡಿದ ದೇಶ ಮತ್ತು ಅಲ್ಲಿನ ರೀತಿ ರಿವಾಜುಗಳನ್ನು ನಮ್ಮ ಮದ್ಯೆಯೂ ಹೇಳುತ್ತಾ ಸ್ವಚ್ಛತೆಯ ಪರಾಕಾಷ್ಠೆಯನ್ನು ನಮ್ಮಿಂದ ತಕ್ಷಣದಲ್ಲಿ ಅನುಷ್ಠಾನಗೊಳಿಸಲು ಹೆಣಗುತ್ತಿದ್ದರು. ಹೇಳಿಕೇಳಿ ನಾವಿಬ್ಬರೂ ಹಳ್ಳಿಗರಾಗಿದ್ದರಿಂದ ಹೊರಗಿನ ಅವರ ಕೈತೋಟದಲ್ಲಿ ಅಗೆಯುವುದು, ಗಿಡ ನೆಡುವುದು, ಗಿಡಗಳಿಗೆ ನೀರು ಹಾಕುವುದನ್ನು ಆರಾಮವಾಗಿ ಮಾಡುತ್ತಿದ್ದರೂ, ಮನೆಯ ಒಳಗೇ ಅವರೊಡನೆ ಊಟ ಮಾಡುವುದು, ತಟ್ಟೆ ತೊಳೆದಿಡುವುದರಲ್ಲಿ ನೂರು ತಪ್ಪು ಕಂಡು ಹಿಡಿದು ಕಿರಿಕಿರಿ ಮಾಡುತ್ತಿದ್ದರು. ಮೊದಮೊದಲು ಅರ್ಥವಾಗದಿದ್ದರೂ, ಕ್ರಮೇಣ ನಮಗೆ ಅವರ ಸ್ವಭಾವ ತಿಳಿದುಕೊಳ್ಳುತ್ತಾ ಹೆಚ್ಚು ತಪ್ಪುಗಳು ಆಗುವುದರಿಂದ ತಪ್ಪಿಸಿಕೊಳ್ಳುತ್ತಿದ್ದೆವು.

ಹಾಸ್ಟೆಲ್‍ನಲ್ಲಿ ನನಗೆ ಊಟ/ವಸತಿ ಸಮಸ್ಯೆ ಇರಲಿಲ್ಲ. ಆದರೆ ಸಂಜೆ ಇವರ ಮನೆಗೆ ಬಂದು ಹೊರಡಲುನುವಾದಾಗ ಊಟ ಮಾಡಿಕೊಂಡು ಹೋಗೆಂದು ಒತ್ತಾಯ ಮಾಡುತ್ತಿದ್ದರು. ಊಟಕ್ಕೆಂದು ಕೂತರೆ ಅವರ ಮನೆಯಲ್ಲಿ ಸಣ್ಣ ತಟ್ಟೆಯಲ್ಲಿ ಉಣ್ಣುವಾಗ ಒಂದಗಳು ಕೆಳಗೆ ಬಿದ್ದರೂ `ಅದೇನು ಎಕಾನಾಮಿಕ್ಸ್ ಓದುತ್ತೀರೋ ನೀವು’ ಎಂದು ಹೇಳಿತ್ತಿದ್ದುದು ನಮಗೆ ಅಭ್ಯಾಸವಾಗಿತ್ತು. ಅವರು ಉಣ್ಣಲು ಹೇಳಿದ್ದನ್ನು ಮೀರಿ ಹೋಗುವಂತಿರಲಿಲ್ಲ. ಹೊಟ್ಟೆ ತುಂಬಾ ಊಟ ಮಾಡಲು ಆಗುತ್ತಿರಲಿಲ್ಲ. ಒಂದು ರೀತಿಯಲ್ಲಿ ಅವರ ಮನೋಸ್ಥಿತಿಯನ್ನು ಅರ್ಥಮಾಡಿಕೊಳ್ಳುವಲ್ಲಿ ನಾವಿಬ್ಬರು ಹೆಣಗಾಡುತ್ತಿದ್ದೆವು.

ಬಸವಣ್ಯಪ್ಪ ಮೊದಲೇ ಒಳ್ಳೆಯ ಚರ್ಚಾಪಟುವಾಗಿದ್ದ ಅವರ ಜೊತೆ ರಾಜಕೀಯ ಮತ್ತು ಸಾಮಾಜಿಕ ಸಮಸ್ಯೆಗಳನ್ನು ಚರ್ಚಿಸುತ್ತಿದ್ದ. ಅವನ ಬುದ್ದಿವಂತಿಕೆಯನ್ನು ಗಮನಿಸಿದ ಅವರು ಆಂಜನಪ್ಪನಿಗೆ ಆಗಾಗ ಬಂದು ಪಾಠ ಹೇಳಿಕೊಡಲು ಹೇಳಿದರು. ಬಸವಣ್ಯಪ್ಪನೂ ಒಪ್ಪಿ – ನನ್ನ ಜೊತೆಗೆ ಬಂದು ಪಾಠ ಹೇಳಿಕೊಡುತ್ತಿದ್ದ. ಸಂಜೆ ತಡವಾದಾಗ ಅವರು ತಯಾರಿಸುತ್ತಿದ್ದ ರುಚಿಕಟ್ಟಾದ ಊಟಕ್ಕೂ ನಿಂತು ಸ್ಮಲ್ಪವೇ ಊಟಮಾಡಿ ಹಾಸ್ಟೆಲ್‍ಗೆ ಹೋಗುತ್ತಿದ್ದೆವು. ಈಗ ಪಾರ್ವತಕ್ಕನವರು ಮನೆಗೆ ನಾನು ಬಸವಣ್ಯಪ್ಪ ಕ್ರಮವಾಗಿ ಹೋಗಿ ಬರುವುದು ಮತ್ತು ಅವರು ಬೇರೆ ಬೇರೆ ವಿಶ್ವವಿದ್ಯಾಲಯಗಳಿಗೆ ಸೆಮಿನಾರಿಗೊ, ಪರೀಕ್ಷೆಗೋ ಹೋದಾಗ ಮನೆಯಲ್ಲಿದ್ದು ನೋಡಿಕೊಳ್ಳುತ್ತಿದ್ದೆವು. ಆಂಜನಪ್ಪನೂ ನಮಗೆ ವಿಶ್ವಾಸಿಕನಾಗಿ ಹೊಂದಿಕೊಂಡಿದ್ದನು.

1970 ಪ್ರಾರಂಭದ ದಿನಗಳು

1970ರ ದಶಕ ಹಲವಾರು ಕಾರಣದಿಂದ ಭಾರತದ ಇತಿಹಾಸದಲ್ಲಿ ಗಮನಾರ್ಹವಾದದ್ದು. ಕೇಂದ್ರದಲ್ಲಿ ಇಂದಿರಾ ಗಾಂಧೀಯವರ ಸರ್ಕಾರವಿತ್ತು. 1970ರ ಪ್ರಾರಂಭದ ದಿನಗಳು ರಾಜ್ಯದಲ್ಲಿ ಜನತಾ ಪರಿವಾರದ ವೀರೇಂದ್ರ ಪಾಟೀಲರ ಸರ್ಕಾರ. ಬೆಲೆ ಏರಿಕೆ, ನಿರುದ್ಯೋಗ, ಕಾರ್ಮಿಕ ಸಂಘಟನೆಗಳ ಮತ್ತು ರೈಲ್ವೇ ಉದ್ಯೋಗಿಗಳ ಪ್ರತಿಭಟನೆ, ಮುಷ್ಕರ ಹೀಗೆ ರಾಜ್ಯ ಮತ್ತು ರಾಷ್ಟ್ರದಲ್ಲಿ ಅನಿಶ್ಚಯದ ವಾತಾವರಣವಿತ್ತು. ಈ ವಿಷಯಗಳ ಬಗ್ಗೆ ಸಮಾಜವಾದಿ ಯುವಜನ ಸಭಾದಲ್ಲಿ ಚರ್ಚೆಗಳಾಗುತ್ತಿದ್ದವು.

ರಾಷ್ಟ್ರವನ್ನಾಳುತ್ತಿದ್ದ ಕಾಂಗ್ರೇಸ್ ಪಕ್ಷದಲ್ಲಿ ಎರಡು ಗುಂಪುಗಳಾಗಿ ಹಣಕಾಸಿನ ಸಚಿವರಾಗಿದ್ದ ಉಪ ಪ್ರಧಾನ ಮಂತ್ರಿ ಮುರಾರ್ಜಿ ದೇಸಾಯಿಗೆ, ಕಾಮರಾಜ್, ಎಸ್. ನಿಜಲಿಂಗಪ್ಪ, ಸಂಜೀವ ರೆಡ್ಡಿ, ಎಸ್.ಕೆ. ಪಾಟೀಲ್ ಇವರುಗಳು ಇಂದಿರಾ ಗಾಂಧಿ ವಿರುದ್ಧ ಅಸಮಾಧಾನಿತರಾಗಿದ್ದರು. ಇದರ ಟ್ರಿಗರಿಂಗ ಪಾಯಿಂಟ್ ಎಂಬಂತೆ ರಾಷ್ಟ್ರಪತಿ ಚುನಾವಣೆ 1971ರಲ್ಲಿ ಘೋಷಣೆಯಾಯಿತು. ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ನೀಲಂ ಸಂಜೀವ ರೆಡ್ಡಿಯಾಗಿದ್ದರೆ, ಇಂದಿರಾ ಗಾಂಧಿಯವರ ಬೆಂಬಲಿತ ಅಭ್ಯರ್ಥಿಯಾಗಿ ವಿ.ವಿ. ಗಿರಿಯವರು ಕಣದಲ್ಲಿದ್ದು, ಚುನಾವಣೆಯಲ್ಲಿ ವಿ.ವಿ. ಗಿರಿಯವರು ಗೆದ್ದದ್ದು ಈಗ ಇತಿಹಾಸ. ನಂತರದ ಬೆಳವಣಿಗೆಯಲ್ಲಿ ಕಾಂಗ್ರೆಸ್ ಇಬ್ಬಾಗವಾಗಿ ಕಾಂಗ್ರೆಸ್ ಹಿರಿಯ ತಲೆಗಳಾದ ಮುರಾರ್ಜಿ ದೇಸಾಯಿ, ಎಸ್. ನಿಜಲಿಂಗಪ್ಪ, ಕಾಮರಾಜ್, ಎಸ್.ಕೆ. ಪಾಟೀಲ್ ಮುಂತಾದವರನ್ನು ಕಾಂಗ್ರೆಸ್ ಪಕ್ಷದಿಂದ ಉಚ್ಚಾಟಿಸಲಾಯಿತು. ನಂತರದಲ್ಲಿ ಕಾಂಗ್ರೆಸ್ (ಐ) ಮತ್ತು ಕಾಂಗ್ರೆಸ್ (ಒ) ಎಂದು ಎರಡು ಹೋಳಾಗಿ ಕೇಂದ್ರದಲ್ಲಿ ಇಂದಿರಾ ಕಾಂಗ್ರೆಸ್ ಇದ್ದರೆ, ರಾಜ್ಯದಲ್ಲಿ ಕಾಂಗ್ರೆಸ್ (ಒ)ನ ನೇತೃತ್ವದಲ್ಲಿ ವೀರೇಂದ್ರ ಪಾಟೀಲರ ಸರ್ಕಾರವಿತ್ತು.

ಇಂದಿರಾ ಗಾಂಧಿಯ ಅಭ್ಯರ್ಥಿ ರಾಷ್ಟ್ರಪತಿಯಾಗಿ ಚುನಾಯಿತರಾದ ಮೇಲೆ ಇಂದಿರಾ ಗಾಂಧಿಯವರ ಆಡಳಿತ ವೈಖರಿಯಲ್ಲಿ ಹೆಚ್ಚಿನ ಆತ್ಮವಿಶ್ವಾಸದಿಂದ ಬ್ಯಾಂಕ್ ರಾಷ್ಟ್ರೀಕರಣ, ರಾಜಧನ ರದ್ದು, ಇನ್ನೂ ಮುಂತಾದ ಜನಪರ ನೀತಿಗಳನ್ನು ಘೋಷಿಸಿದ್ದರು. ಕಾಂಗ್ರೆಸ್ ಪಕ್ಷದ ಇಬ್ಬಾಗ ಇಂದಿರಾ ಗಾಂಧಿಯವರ ಜನಪರ ಪಾಲಿಸಿಗಳು ಈ ಯಾವ ಅಂಶಗಳೂ ರಾಷ್ಟ್ರ ಮತ್ತು ರಾಜ್ಯದಲ್ಲಿನ ಬೆಲೆ ಏರಿಕೆ, ನಿರುದ್ಯೋಗ, ರಾಜಕೀಯ ಅಸ್ತಿರತೆ ನೀತಿ ಜೊತೆಗೆ ಪಾಕಿಸ್ತಾನ – ಬಾಂಗ್ಲಾ ಯುದ್ಧ ಪ್ರಾರಂಭವಾಗಿ ಭಾರತದ ಸೇನೆ ಶಾಂತಿ ಸ್ಥಾಪಿಸುವ ಕಾರಣ ಹೇಳಿ ಬಾಂಗ್ಲಾ ದೇಶದ ಉಗಮಕ್ಕೆ ಕಾರಣವಾಗಿದ್ದು ಈಗ ಇತಿಹಾಸ.

ಇದೇ ಸಮಯಕ್ಕೆ ಹಿರಿಯ ಗಾಂಧಿವಾದಿ ಜಯಪ್ರಕಾಶ್ ನಾರಾಯಣ್ ಬೆಲೆ ಏರಿಕೆ ಮತ್ತು ನಿರುದ್ಯೋಗದ ವಿರುದ್ಧ ದೆಹಲಿ ಮತ್ತು ಪಾಟ್ನ ನಗರಗಳಲ್ಲಿ ವಿದ್ಯಾರ್ಥಿಗಳನ್ನು ಒಳಗೊಂಡಂತೆ ಆಂದೋಲನ ಪ್ರಾರಂಭಿಸಿದ್ದರು. ಜೆಪಿ ಆಂದೋಲನದ ಪರವಾಗಿ ಮೈಸೂರಿನಲ್ಲಿ ಪಿ. ಮಲ್ಲೇಶ್, ನಂಜುಂಡಸ್ವಾಮಿ, ಮಹಾದೇವ ಅನೇಕ ವಿಶ್ವವಿದ್ಯಾಲಯದ ಅಧ್ಯಾಪಕರು, ವಕೀಲರು ಕಾಂಗ್ರೆಸ್ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಈ ಆಂದೋಲನದಲ್ಲಿ ಭಾಗವಹಿಸುತ್ತಿದ್ದರು. ವಿದ್ಯಾರ್ಥಿಗಳಾಗಿದ್ದ ನಾವು ಭಕ್ತ, ಮಹೇಶ, ಅರ್ಕೆಶ, ಗೊಟ್ಟಿಗೆರೆ ಶಿವರಾಜು, ತಾವರೆಕೆರೆ ಶಂಕರಲಿಂಗಪ್ಪ, ಜಯರಾಮಯ್ಯ, ಶಿವರಾಮು ಕಾಡನಕುಪ್ಪೆ ಒ. ನಾಗೇಂದ್ರಪ್ಪ, ಚಂದ್ರಶೇಖರ ತಾಳ್ಯ ಎಲ್ಲಾ ನಾವುಗಳು ಕಾಲಾಳುಗಳಂತೆ ಕೆಲಸ ಮಾಡುತ್ತಿದ್ದೆವು.

ಇದೇ ಸಂದರ್ಭದಲ್ಲಿ ಕಾಂಗ್ರೆಸ್ (ಒ) ಸರ್ಕಾರದಲ್ಲಿನ ಅನೇಕ ಎಂ.ಎಲ್.ಎ.ಗಳು ಕಾಂಗ್ರೆಸ್ (ಒ) ತೊರೆದು ಅಂದು ಕಾಂಗ್ರೆಸ್ (ಐ)ನ ಸಂಚಾಲಕರಾಗಿದ್ದ  ಡಿ. ದೇವರಾಜ ಅರಸು ಅವರ ಪಕ್ಷಕ್ಕೆ ಸೇರಿಕೊಂಡರು. ಅದರ ಪರಿಣಾಮವಾಗಿ ವೀರೇಂದ್ರ ಪಾಟೀಲರ ಸರ್ಕಾರ ಬಹುಮತದ ಕೊರತೆಯಿಂದಾಗಿ ತೆರವಾಗಿ, ರಾಜ್ಯಪಾಲರ ಆಡಳಿತ ಕರ್ನಾಟಕದಲ್ಲಿ ಕಾಲಿರಿಸಿತು. ನಂತರ ನಡೆದ ಸಾರ್ವಜನಿಕ ಚುನಾವಣೆಯಲ್ಲಿ ರಾಜ್ಯ ಮತ್ತು ಕೇಂದ್ರದಲ್ಲಿ ಇಂದಿರಾ ಗಾಂಧಿಯವರ ಕಾಂಗ್ರೆಸ್ (ಐ) ಪಕ್ಷ ಅಭೂತಪೂರ್ವ ಜಯಭೇರಿ ಬಾರಿಸಿ ಗೆಲುವು ಸಾಧಿಸಿತ್ತು.

ರಾಜ್ಯದಲ್ಲಿ ಡಿ. ದೇವರಾಜ ಅರಸು ಮುಖ್ಯಮಂತ್ರಿಯಾಗಿ ಕರ್ನಾಟಕದ ಪ್ರಬಲ ಜಾತಿಗಳಾದ ಲಿಂಗಾಯುತ ಮತ್ತು ಒಕ್ಕಲಿರಲ್ಲದವರೊಬ್ಬರು ಮುಖ್ಯಮಂತ್ರಿ ಆದದ್ದು ಹೊಸ ಬೆಳವಣಿಗೆಯಾಗಿತ್ತು. ಅವರ ಸಚಿವ ಸಂಪುಟದಲ್ಲಿ ಸೇರಿಕೊಂಡಿದ್ದ ನಮ್ಮ ಊರಿನ ಹೆಚ್. ಸಿದ್ದವೀರಪ್ಪನವರು ಮುಖ್ಯಮಂತ್ರಿ ಗಾದಿಯ ಪ್ರಬಲ ಆಕಾಂಕ್ಷಿಯಾಗಿದ್ದರು. ಆದರೆ ಅವರು ಕೊನೆಯಲ್ಲಿ ಆರೋಗ್ಯ ಸಚಿವರಾಗಿ ಉಳಿಯಲು ಮಾತ್ರ ಸಾಧ್ಯವಾಯಿತು. ದೇವರಾಜ ಅರಸರು ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಹಾಗೂ ಹಿಂದುಳಿದ ಜಾತಿಗಳ ಶಾಸಕರನ್ನ ತಮ್ಮ ಕ್ಯಾಬಿನೆಟ್‍ನಲ್ಲಿ ಪ್ರಮುಖ ಖಾತೆಗಳನ್ನು ನೀಡಿ ಮಂತ್ರಿಗಳನ್ನಾಗಿಸಿದರು. ದಲಿತರಲ್ಲಿ ನಮ್ಮ ಹರಿಹರದವರಾದ ನಮ್ಮ ದೂರದ ಸಂಬಂಧಿ ಬಿ. ಬಸವಲಿಂಗಪ್ಪ, ಕೆ.ಹೆಚ್. ರಂಗನಾಥ್ ಹಾಗೂ ಮೈಸೂರು ಜಿಲ್ಲೆಯ ಎನ್. ರಾಚಯ್ಯ, ಹಿಂದುಳಿದ ಜಾತಿಗಳಿಂದ ಇನ್ನು ಅನೇಕ ಶಾಸಕರು ಕರ್ನಾಟಕದಲ್ಲಿ ಮೊದಲ ಬಾರಿಗೆ ಮಂತ್ರಿಗಳಾಗಿದ್ದರು.

ದೇವರಾಜ ಅರಸು ಅವರ ಆಡಳಿತ ಇರುವಾಗ, ಮೈಸೂರಿನ ನಮ್ಮ ಸಮಾಜವಾದಿ ಯುವಜನ ಸಭಾದ ಸಂಘಟಕರು ಕಾಂಗ್ರೆಸ್ ವಿರುದ್ಧವಿದ್ದು, ಜೆಪಿ ಹೋರಾಟದ ಸಂಪೂರ್ಣ ಕ್ರಾಂತಿಗಾಗಿ ನೀಡುತ್ತಿದ್ದ ಕರೆಗಳಲ್ಲಿ ನಾವು ಸಕ್ರಿಯರಾಗುತ್ತಿದ್ದೆವು. ಪಠ್ಯಕ್ರಮದ ಪುಸ್ತಕಗಳನ್ನು ಬಿಟ್ಟು ಅಂಬೇಡ್ಕರ್, ಲೋಹಿಯಾ, ಗಾಂಧಿ, ವಿನೋಭಾ ಬಗ್ಗೆ ಇರುವ ಕನ್ನಡದಲ್ಲಿ ಸಣ್ಣ ಸಣ್ಣ ಪುಸ್ತಕಗಳ ರೂಪದಲ್ಲಿ ಮಾಹಿತಿಯನ್ನು ತಲುಪಿಸುತ್ತಿದ್ದರು. ಸ್ನೇಹಿತರೊಡನೆ ಹಾಗೆ ಒಂದು ದಿನ ಮೈಸೂರು ಕೃಷ್ಣಮೂರ್ತಿಯವರ ಮಾಲೀಕತ್ವದಲ್ಲಿದ್ದ `ಪೀಪಲ್ಸ್ ಬುಕ್ ಹೌಸ್’ನಲ್ಲಿ ಅಂಬೇಡ್ಕರ್ ಬರೆದಿದ್ದ ‘Annhilation of Caste ಮತ್ತು Gandhi & Gandhism’ ಓದಲು ಜೊತೆಗೆ ಕೆಲವು Communist Party ಹುಟ್ಟು ಬೆಳವಣಿಗೆಯ ಬಗ್ಗೆ ಇದ್ದ, ಹಾಗೂ ಲೋಹಿಯಾರ ಕುರಿತಾದ ಪುಸ್ತಕಗಳನ್ನು ಕೊಂಡು ಓದಲು ಪ್ರಾರಂಭಿಸಿದೆ.

ಲೋಹಿಯಾ ಅವರು ಅಪ್ಪಟ ಗಾಂಧಿವಾದಿಯಾಗಿದ್ದು ಸ್ವಾತಂತ್ರ್ಯಾ ನಂತರ ಕಾಂಗ್ರೆಸ್ ತೊರೆದು ಸಮಾಜವಾದಿ ಪಕ್ಷ ಕಟ್ಟಿ ಗ್ರಾಮೀಣ ಜನರ ಆರ್ಥಿಕ ಅಭಿವೃದ್ಧಿಗಾಗಿ ತಮ್ಮದೇ ಸಿದ್ಧಾಂತಗಳನ್ನು ಹೇಳುತ್ತಾ„ ಕಾಂಗ್ರೆಸ್‍ಗೆ ಪರ್ಯಾಯವಾಗಿ ಪಕ್ಷ ಸಂಘಟಿಸುತ್ತಿದ್ದರು. ಕರ್ನಾಟಕದ ಕಾಗೋಡು ಸತ್ಯಾಗ್ರಹ ಸಮಯದಲ್ಲಿ ಕರ್ನಾಟಕದ ಸಮಾಜವಾದಿ ಪಕ್ಷದ ಗೋಪಾಲಗೌಡರ ಜೊತೆ ಹೋರಾಟದಲ್ಲಿ ಭಾಗವಹಿಸಿದ ಬಗ್ಗೆ ಸಮಾಜವಾದಿ ಯುವ ಸಭಾದಲ್ಲಿ ಚರ್ಚಿಸುತ್ತಿದ್ದೆವು.

ಮೈಸೂರಿನಲ್ಲಿ ನನ್ನೆರಡು ವರ್ಷಗಳ ಬಿ.ಎ. ಮತ್ತು ಗಂಗೋತ್ರಿಯಲ್ಲಿ ಎರಡು ವರ್ಷಗಳ ಎಂ.ಎ. ಓದು ಮುಗಿಸುವಲ್ಲಿಗೆ ಅನೇಕ ಹಿರಿಕಿರಿಯ ಸ್ನೇಹಿತರ ಜೊತೆ ಬೆರೆತು ಹೋಗಿದ್ದೆ. ಹಿರಿಯ ಗಾಂಧಿವಾದಿಗಳಾಗಿದ್ದ ಅನಂತರಂಗಾಚಾರ್, ಪಿ. ಮಲ್ಲೇಶ್, ಹಿರಿಯ ವಕೀಲರಾದ ಟಿ.ಎನ್. ನಾಗರಾಜ್ ಅವರು ನಮ್ಮ ಸಹಪಾಠಿ ಮತ್ತು ಸಮಾಜವಾದಿ ಹೋರಾಟಗಳನ್ನು ಮಾಡುತ್ತಿದ್ದ ದೇವನೂರ ಮಹಾದೇವ, ಭಕ್ತ ರಾಮೇಗೌಡ, ಕೆ. ಅರ್ಕೇಶ್, ವೈ. ಮಹೇಶ, ಬಸವಣ್ಯಪ್ಪ ಗೊಟ್ಟಿಗೆರೆ ಶಿವರಾಜು ಇವರುಗಳ ಜೊತೆ ಒಡನಾಡುತ್ತಿದ್ದೆನು.

ಮೈಸೂರು ತಾಲ್ಲೂಕಿನ ಕುಪ್ಪೇಗಾಲ ಊರಿಗೆ ಮಹೇಶನ ಹಿರಿಯ ಸ್ನೇಹಿತರಾಗಿದ್ದ ಸಿದ್ದರಾಮನಹುಂಡಿಯ ಸಿದ್ದರಾಮಯ್ಯನವರು ಅದಾಗಲೇ ಕಾನೂನು ಪದವಿ ಮುಗಿಸಿ ಸಯ್ಯಾಜಿರಾವ್ ರಸ್ತೆಯಲ್ಲಿರುವ ಹಿರಿಯ ವಕೀಲರಾದ ಚಿಕ್ಕಬೋರಯ್ಯನವರ ಕಛೇರಿಯಲ್ಲಿ ಶಿಕ್ಷಣಾರ್ಥಿ ವಕೀಲರಾಗಿದ್ದರು. ನಾನು ಮಹೇಶ ಅನೇಕ ಬಾರಿ ಅವರ ಕಛೇರಿಗೆ ಹೋಗಿ ಮಾತಾಡಿಕೊಂಡು ಬರುತ್ತಿದ್ದೆವು. ಉಳಿದ ಸಮಯದಲ್ಲಿ ಅವರ ರೂಂ ಕಡೆಗೂ ಹೋಗಿ ಬರುತ್ತಿದ್ದೆವು.

ಗಂಗೋತ್ರಿ ಪಿ.ಜಿ. ಹಾಸ್ಟೆಲ್‍ನಲ್ಲಿ ಮಹಾದೇವನೂ ಸೇರಿದ್ದ. ತರಗತಿಗಳಿಗೆ ಕ್ರಮವಾಗಿ ಹೋಗಿ ಬರುವ ಶಿಸ್ತನ್ನೇನೋ ಅವನು ಪಾಲಿಸುತ್ತಿರಲಿಲ್ಲ. ತಡರಾತ್ರಿ ಯಲ್ಲಿ ಕೂತು ಬರೆದ ಕಥೆಗಳನ್ನು ಬೆಳಿಗ್ಗೆ ಎದ್ದು ಬಂದಾಗ ತೋರಿಸುತ್ತಿದ್ದ. ಪ್ರತಿ ರೂಂನಲ್ಲಿ ಇಬ್ಬರಿಗೆ ಅವಕಾಶವಿದ್ದು ನನಗೆ ಮಾತ್ರ ಎಂ.ಎ. ಅಂತಿಮ ವರ್ಷದಲ್ಲಿ ಪ್ರತ್ಯೇಕ ರೂಮ್ ಸಿಕ್ಕಿತ್ತು. ಮಾದೇವ ಮತ್ತು ಜಿಎಂ. ಬಾಲರೆಡ್ಡಿ ರೂಮ್‍ಮೇಟ್ಸ್ ಆಗಿದ್ದರು. ಬಾಲರೆಡ್ಡಿ ದಾವಣಗೆರೆ ಜಿಲ್ಲೆ ಚಳ್ಳಕೆರೆ ತಾಲ್ಲೂಕಿನ ಶ್ರೀಮಂತ ಮನೆತನಕ್ಕೆ ಸೇರಿದವನಾಗಿದ್ದನು. ಬಾಲರೆಡ್ಡಿ ಕೊರಳಲ್ಲೊಂದು ಚಿನ್ನದ ಸರ, ಮಯ್ಯೆಲ್ಲಾ ಕಾಣುವ ಟರ್ಲಿನ್ ಷರ್ಟ್‍ನ ಜೇಬಿನಲ್ಲಿ ನೂರು ರೂಗಳ ನೋಟನ್ನು ಇಟ್ಟುಕೊಂಡು ಇರುವುದನ್ನ ನಾವೆಲ್ಲ ನೋಡಿಕೊಂಡು ಅವನಿಂದ ಖರ್ಚು ಮಾಡಿಸುತ್ತಿದ್ದೆವು

ಇವರು ಕ್ಯಾಂಪಸ್ಸಿನ ಕ್ಯಾಂಟೀನ್‍ಗಳಲ್ಲಿ ಅದೂ ಇಂಗ್ಲಿಷ್ ಡಿಪಾರ್ಟ್‍ಮೆಂಟ್ ಹುಡುಗಿಯರ ಜೊತೆ ಇಂಗ್ಲೀಷ್‍ನಲ್ಲಿ ಮಾತಾಡಿಕೊಂಡು ಹೆಚ್ಚು ಮಿಂಚುತ್ತಾ ಇರುತ್ತಿದ್ದ. ಜಿ.ಎಂ. ಬಾಲರೆಡ್ಡಿ ನಮ್ಮ ಸ್ನೇಹ ವಲಯದಲ್ಲಿದ್ದರೂ ಹೆಚ್ಚು ಸಮಯ ಇಂಗ್ಲಿಷ್ ಡಿಪಾರ್ಟ್‍ಮೆಂಟಿನಲ್ಲಿ ಹುಡುಗಿಯರ ಜೊತೆ ತಿರುಗಾಡುತ್ತಾ ಇನ್ನು ಕೋರ್ಸ್ ಮುಗಿಯುವ ಮೊದಲೇ ಇಂಗ್ಲಿಷ್ ಡಿಪಾರ್ಟ್‍ಮೆಂಟ್‍ನ ಹುಡುಗಿಯೊಬ್ಬಳನ್ನು ಪ್ರೀತಿಸುತ್ತಿದ್ದಾನೆ ಎಂಬ ಗುಸುಗುಸು ಸುದ್ದಿ ಇತ್ತು. ನನಗೂ ಒಮ್ಮೆ ಅವಳನ್ನು ತೋರಿಸಿ `ಈ ಹುಡುಗಿ ಹೆಂಗೆ’ ಎಂದು ಕೇಳಿದ. ನನಗೆ ನೋಡಲು ತೆಳ್ಳಗೆ ಕುಳ್ಳಗೆ ದೊಡ್ಡ ಕನ್ನಡಕ ಹಾಕಿದ್ದ ಅವಳನ್ನು ನೋಡಿ ಅವಳ ಬಗ್ಗೆ ಏನೂ ತಿಳಿದಿರದಿದ್ದ ನಾನು, ಜರಿದುಬಿಟ್ಟಿದ್ದೆ.

ನಾನಾಡಿದ ಮಾತು ಮರೆಯುವ ಮುನ್ನ ಬಾಲರೆಡ್ಡಿ ಒಂದು ದಿನ ಸಂಜೆ ಆ ಹುಡುಗಿ ಇವನ ಪ್ರೇಮ ಭಿಕ್ಷೆಯನ್ನು ನಿರಾಕರಿಸಿದಳು ಎಂಬ ಕಾರಣದಿಂದ ಇವನು ನಿದ್ರೆ ಮಾತ್ರೆಗಳನ್ನು ಹುಡುಗಿಯರ ಹಾಸ್ಟೆಲ್ ಮುಂದೆ ಕೂತು ತೆಗೆದುಕೊಂಡು, ಅಲ್ಲಿಂದ ನೇರ ಹಾಸ್ಟೆಲ್‍ನ ನನ್ನ ರೂಂಗೆ ಬಂದು, `ನೋಡು ನೀನು ನಮ್ಮ ಊರಿಗೆ ಹೋಗಿ ನಮ್ಮ ಅಪ್ಪ ಅಮ್ಮನನ್ನು ಸಮಾಧಾನ ಪಡಿಸಬೇಕು’. ಜೀವನದಲ್ಲಿ ಏನು ಶಾಶ್ವತವಿಲ್ಲ ಎಂದು ಏನೇನೋ ಬಡಬಡಿಸುತ್ತಿದ್ದ.

ಮೊದಲು ಸ್ವಲ್ಪ ಬೀರು ಕುಡಿದಿರಬಹುದೆಂದು ಅನುಮಾನಿಸಿದೆ. ನಂತರ ಅವನ ಹಾವಭಾವಗಳನ್ನು ನೋಡಿ ನನಗೆ ಹೆದರಿಕೆಯಾಗಿ ಆಗ ಹಾಸ್ಟೆಲ್ ವಿದ್ಯಾರ್ಥಿ ಸಂಘದ ಪ್ರೆಸಿಡೆಂಟ್ ಆಗಿದ್ದ ಶಿವಮೊಗ್ಗದ ಕಡೆಯ ಮುಖೇಶ್ ಮತ್ತಿತರ ಸ್ನೇಹಿತರೊಡಗೂಡಿ ಏನೋ ಅನಾಹುತ ಮಾಡಿಕೊಂಡಿದ್ದಾನೆಂದು ತಿಳಿಸಿ, ಕೆ.ಆರ್. ಆಸ್ಪತ್ರೆಗೆ ಪೋನ್ ಮಾಡಿ ತುರ್ತು ಚಿಕಿತ್ಸಾ ವ್ಯಾನ್ ತರಿಸಿ ನಾನು ಮತ್ತು ಇತರೆ ಗೆಳಯರೊಡನೆ ಅವನನ್ನು ಹಾಸ್ಟಿಟಲ್‍ಗೆ ಸೇರಿಸಿ ತೆಗೆದುಕೊಂಡಿದ್ದ ನಿದ್ರೆಮಾತ್ರೆಗಳನ್ನು ವಾಂತಿ ಮುಖಾಂತರ ಹೊರತೆಗೆದು ಡಾಕ್ಟರ್ ಅವನಿಗೆ ಹಸಿಮೊಟ್ಟೆ ಕುಡಿಸಿದರು.

ಬೆಳಗಿನ ಜಾವಕ್ಕೆ ಅವನಿಗೆ ಪ್ರಜ್ಞೆ ಬಂದು, ಇನ್ನು ತೊಂದರೆ ಇಲ್ಲವೆಂದು ತಿಳಿದಾಗ  ನಾನು ಹಾಸ್ಟೆಲ್‍ಗೆ ವಾಪಾಸ್ ಬಂದೆ. ಆ ನಂತರವೂ ಅವನು ಎರಡು ಮೂರು  ದಿನ ಕೆ.ಆರ್. ಆಸ್ಪತ್ರೆಯಲ್ಲಿದ್ದು ಊರಕಡೆಯ ಗೆಳೆಯರು ಮತ್ತು ಅವರ ಅಣ್ಣನನ್ನು ಕರೆಯಿಸಿದ್ದು, ಈಗ ಎಲ್ಲ ನೆನಪಾಗುತ್ತಿದೆ. ನಾನೇನಾದರೂ ನನ್ನ ರೂಮಿನಲ್ಲಿಯೇ ಮಲಗಲು ಬಿಟ್ಟು ನಾನು ಸುಮ್ಮನೆ ಮಾತಾಡದೆ ಮಲಗಿದ್ದರೆ, ಬಾಲರೆಡ್ಡಿಯ ಕ್ಷಣಾರ್ಧದಲ್ಲಿ ತೆಗೆದುಕೊಂಡ ದುಡುಕಿನ ತೀರ್ಮಾನ ದುರಂತಮಯವಾಗಿರುತ್ತಿತ್ತು.

ನಮ್ಮೆಲ್ಲರ ಅದೃಷ್ಟ ಹಾಗೇನೂ ಆಗದೆ ಗಂಡಾಂತರದಿಂದ ಬದುಕುಳಿದಿದ್ದ. ನಂತರ ಎಂ.ಎ. ಮುಗಿಸಿ ಸಮಾಜಶಾಸ್ತ್ರದ ಅಧ್ಯಾಪಕನಾಗಿ, ಪ್ರಾಂಶುಪಾಲನಾಗಿ, ಮನೆ ತುಂಬ ಮಕ್ಕಳು, ಮೊಮ್ಮಕ್ಕಳೊಂದಿಗೆ ಈಗ ಸುಖವಾಗಿದ್ದಾನೆ. ಅವನ ಮನೆಗೋದಾಗೊಮ್ಮೆ ನಿನ್ನ ಹಳೆ ಪುರಾಣ ಎಲ್ಲ ನಿನ್ನ ಶ್ರೀಮತಿಗೆ ಗೊತ್ತೇನೋ ಎಂದಿದ್ದಕ್ಕೆ ಚೂರು ಚೂರು ಅವಳಿಗೂ ಗೊತ್ತಾಗಿದೆ ಎಂದು ನಗಾಡುತ್ತಾನೆ.

‍ಲೇಖಕರು Avadhi

September 13, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. T S SHRAVANA KUMARI

    ಸುಧಿರ್ಘವಾದ ಒಂದು ಕಾಲದ ಶೈಕ್ಷಣಿಕ, ಸಾಮಾಜಿಕ, ರಾಜಕೀಯ ವಲಯಗಳ ಚಿತ್ರಣ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: