‘ರೀಲ್ ದಿಲ್ಲಿ-ರಿಯಲ್ ದಿಲ್ಲಿ’

ಆಗ ಅಂಗೋಲಾದಲ್ಲಿದ್ದ ಪ್ರಸಾದ್ ನಾಯ್ಕ್ ಈಗ ದೆಹಲಿ ವಾಸಿ. ಆಗ ಅವಧಿಗೆ ‘ಹಾಯ್ ಅಂಗೋಲಾ’ ಬರೆದರು. ಈಗ ‘ಚಲೋ ದಿಲ್ಲಿ..’

ದಿಲ್ಲಿಗೆ ಬಂದ ಕ್ಯಾಮೆರಾಗಳು ಕನ್ನಾಟ್ ಪ್ಲೇಸಿಗೆ ಬರಲೇಬೇಕು.

ಇದು ಶಹರದ ಬಗ್ಗೆ ದಿಲ್ಲಿ ಮತ್ತು ಸುತ್ತಮುತ್ತಲಿನ ಸಿನೆಮಾಪ್ರಿಯರಲ್ಲಿ ಕಾಣಸಿಗುವ ಅಲಿಖಿತ, ರೆಡಿಮೇಡ್ ಅಂದಾಜುಗಳಲ್ಲೊಂದು. ಇದೊಂಥರಾ ಊರಿಗೆ ಬಂದವಳು ನೀರಿಗೆ ಬರದಿರುತ್ತಾಳೆಯೇ ಎಂಬಂತಿನ ದಿಲ್ಲಿಗರ ಖಚಿತ ಲೆಕ್ಕಾಚಾರದ ಧಾಟಿ.

ಶ್ರೀಜಿತ್ ಮುಖರ್ಜಿ ನಿರ್ದೇಶನದ ‘ಬೇಗಮ್ ಜಾನ್’ ಹೆಸರಿನ ಬಾಲಿವುಡ್ ಚಿತ್ರವೊಂದಿದೆ. ಅದರಲ್ಲಿ ಹೀಗೊಂದು ಕಾಡುವ ದೃಶ್ಯ ಬರುತ್ತದೆ. ಅದು ರಾತ್ರಿಯ ಹೊತ್ತು. ದಿಲ್ಲಿಯಲ್ಲಿ ನಡೆಯುತ್ತಿರುವ ಕಥಾನಕ. ಬಸ್ಸಿನಲ್ಲಿ ಗೆಳೆಯನೊಂದಿಗೆ ತನ್ನ ಪಾಡಿಗಿದ್ದ ಯುವತಿಯೋರ್ವಳನ್ನು ಬಸ್ಸಿನಲ್ಲಿದ್ದ ಕೆಲ ಯುವಕರು ಛೇಡಿಸುತ್ತಾರೆ. ಕಾಮಾತುರಕ್ಕೆ ಬಿದ್ದ ಕೀಚಕರಂತೆ ಕೆಟ್ಟದಾಗಿ ವ್ಯವಹರಿಸುತ್ತಾರೆ. ಹೀಗೆ ಸಾಗುವ ಬಸ್ಸು ಸ್ವಲ್ಪ ಹೊತ್ತಿನ ನಂತರ ಒಂದೆಡೆ ನಿಲ್ಲುತ್ತದೆ. ಬಸ್ಸು ನಿಂತ ಕೂಡಲೇ ಅಲ್ಲಿಂದ ನುಣುಚಿಕೊಂಡು, ಜೀವಭಯದಿಂದ ಓಡತೊಡಗುವ ಅವಳನ್ನು ಮತ್ತೆ ಬೇಟೆಯ ಪ್ರಾಣಿಯಂತೆ ಅಟ್ಟಾಡಿಸಲಾಗುತ್ತದೆ. ಆಗ ಈ ಯುವಕರ ವೇಗಕ್ಕೆ ಅಡ್ಡಗಟ್ಟುವುದು ಓರ್ವ ಅಜ್ಜಿ.

ಕುಳ್ಳಗಿನ ಗಾತ್ರದ ಈ ಅಜ್ಜಿ ಯುವಕರನ್ನು ಅಡ್ಡಗಟ್ಟಿ ಒಂದೆರಡು ಕ್ಷಣ ಸುಮ್ಮನೆ ದುರುಗುಟ್ಟುತ್ತಾಳೆ. ನಂತರ ಒಂದೊಂದಾಗಿಯೇ ತನ್ನ ಬಟ್ಟೆಗಳನ್ನು ಕಳಚಿಕೊಂಡು, ಕೊನೆಗೆ ಬಟಾಬತ್ತಲಾಗಿ ನಿಲ್ಲುತ್ತಾಳೆ. ನಿಮಗೆ ಬೇಕಿರುವುದು ಹೆಣ್ಣಿನ ದೇಹವಲ್ವಾ, ಇಲ್ಲಿದೆ ತಗೊಳ್ಳಿ ಎಂದು ತಣ್ಣಗೆ ಸವಾಲೊಡ್ಡುತ್ತಾಳೆ. ಅವಳ ಇಳಿಬಿದ್ದ ಚರ್ಮ, ನೆರಿಗೆಯನ್ನು ಹೊದ್ದ ದೇಹ, ಒಡ್ಡೊಡ್ಡಾಗಿರುವ ಆಕಾರಗಳು ವಿಕ್ಷಿಪ್ತ ರೀತಿಯಲ್ಲಿ ಸನ್ನಿವೇಶದ ಭೀಕರತೆಯನ್ನು ಹೆಚ್ಚಿಸುತ್ತವೆ. ರಾತ್ರಿಯ ಹೊತ್ತಿನಲ್ಲಿ ಆಗಂತುಕ ಅಜ್ಜಿಯಿಂದ ಇಂಥದ್ದೊಂದು ವಿಲಕ್ಷಣ ನಡೆಯನ್ನು ನಿರೀಕ್ಷಿಸದ ಯುವಕರ ಗುಂಪು ಗಾಬರಿಯಾಗಿ ಅಲ್ಲಿಂದ ಓಡುತ್ತದೆ.

ವಿದ್ಯಾ ಬಾಲನ್ ಅಭಿನಯದ ಬೇಗಮ್ ಜಾನ್ ಚಿತ್ರವು ಆರಂಭವಾಗುವುದೇ ಮೇಲೆ ದಾಖಲಿಸಿರುವ ದೃಶ್ಯದೊಂದಿಗೆ. ಈ ಸನ್ನಿವೇಶಕ್ಕೆ ದಿಲ್ಲಿಯ ಹಿನ್ನೆಲೆಯಿರುವುದರಿಂದ ಹೆಚ್ಚಿನವರಿಗೆ ಥಟ್ಟನೆ ನೆನಪಾಗುವುದು ನಿರ್ಭಯಾ ಪ್ರಕರಣ. ಆದರೆ ಚಿತ್ರವನ್ನು ವೀಕ್ಷಿಸುವಾತ ದಿಲ್ಲಿಯನ್ನು ತಕ್ಕಮಟ್ಟಿಗೆ ಬಲ್ಲವನಾದರೆ, ಆತನಿಗೆ ತಕ್ಷಣ ಗಮನ ಸೆಳೆಯುವ ಅಂಶವೆಂದರೆ ಚಿತ್ರದ ಸನ್ನಿವೇಶವನ್ನು ಚಿತ್ರೀಕರಿಸಿದ ಸ್ಥಳ. ಅದೇ ಸರ್ಕಲ್ಲು, ಅದೇ ಸುಂದರ ಶ್ವೇತಕಂಬಗಳು. ಸಂಶಯವೇ ಇಲ್ಲ; ಅದು ಸಿ.ಪಿ ಎಂದೇ ದಿಲ್ಲಿಯ ನಿವಾಸಿಗಳಿಗೆ ಆಪ್ತವಾಗಿರುವ ಕನ್ನಾಟ್ ಪ್ಲೇಸ್.

ಬಹುತೇಕರಂತೆ ನಾನು ಕೂಡ ಟಿವಿ ಮತ್ತು ಸಿನೆಮಾ ಜಗತ್ತಿನೊಂದಿಗೆ ಮುಖಾಮುಖಿಯಾಗಿದ್ದು ಓರ್ವ ವೀಕ್ಷಕನಾಗಿಯೇ. ಇಪ್ಪತ್ತು ವರ್ಷಗಳ ಹಿಂದೆ ನನ್ನ ಮಟ್ಟಿಗೆ ಅದೊಂದು ಅದ್ದೂರಿ ಮತ್ತು ಅಚ್ಚರಿಯ ಕಲಸುಮೇಲೋಗರದಂತಿದ್ದ ಹೊಸ ಲೋಕವಾಗಿತ್ತು. ಶಾಲೆಯ ರಜಾದಿನಗಳಲ್ಲಿ ನನ್ನ ಬೆಳಗು ಶುರುವಾಗುತ್ತಿದ್ದಿದ್ದೇ ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ ಸುಬಹ್-ಸವೇರೇ ಟಿವಿ ಶೋ ಜೊತೆ. ಒಂದಿಷ್ಟು ಸುದ್ದಿ, ಏನೋ ಚರ್ಚೆ ಇತ್ಯಾದಿಗಳ ಹದವಾದ ಪಾಕವಾಗಿತ್ತದು.

ಜೊತೆಗೆ ಆ ಕಾಲದಲ್ಲಿ ಸಾಕಷ್ಟು ಜನಪ್ರಿಯತೆಯನ್ನು ಪಡೆದಿದ್ದ ಮತ್ತೊಂದು ಕಾರ್ಯಕ್ರಮವೆಂದರೆ ‘ಸುರಭಿ’. ಈ ಕಾರ್ಯಕ್ರಮಕ್ಕೆ ವೀಕ್ಷಕರಿಂದ ಬರುತ್ತಿದ್ದ ಪತ್ರಗಳನ್ನು ರಾಶಿ ಹಾಕಿ, ಪತ್ರಗಳ ಪುಟ್ಟಗುಡ್ಡದ ಮುಂದೆ ಪದ್ಮಾಸನದಲ್ಲಿ ಕೂತು, ಆಯ್ದ ಪತ್ರಗಳನ್ನು ಲವಲವಿಕೆಯಿಂದ ಓದುತ್ತಿದ್ದರು ಹಿಟ್ ನಿರೂಪಕ ಜೋಡಿಯಾಗಿದ್ದ ರೇಣುಕಾ ಶಹಾನೆ ಮತ್ತು ಸಿದ್ದಾರ್ಥ ಕಕ್. ೧೯೯೩ ರಲ್ಲಿ ಸುರಭಿ ಕಾರ್ಯಕ್ರಮವು ಭಾರತದ ವಿವಿಧ ಮೂಲೆಗಳ ವೀಕ್ಷಕರಿಂದ ಹದಿನಾಲ್ಕು ಲಕ್ಷ ಪತ್ರಗಳನ್ನು ಪಡೆದ ನಂತರ ಅಂಚೆ ಇಲಾಖೆಯು ಪೋಸ್ಟ್ ಕಾರ್ಡನ್ನು ಪರಿಚಯಿಸಿತ್ತಂತೆ. ಮುಂದೆ ಈ ಅಭೂತಪೂರ್ವ ಮೈಲಿಗಲ್ಲು ಲಿಮ್ಕಾ ದಾಖಲೆಯಲ್ಲೂ ಸೇರಿಕೊಂಡಿತು. 

ಇನ್ನು ವೀಡಿಯೋ ಕ್ಯಾಸೆಟ್ ರೆಕಾರ್ಡರ್ (ವಿ.ಸಿ.ಆರ್) ಮತ್ತು ಆಡಿಯೋ ಕ್ಯಾಸೆಟ್ಟುಗಳ ಯುಗವೂ ಅದಾಗಿತ್ತು. ಆಗ ದಿನಕ್ಕೆ ಇಪ್ಪತ್ತೋ, ಇಪ್ಪತ್ತೆöÊದೋ ರೂಪಾಯಿ ಕೊಟ್ಟರೆ ಒಂದು ದಿನಕ್ಕೆ ವಿ.ಸಿ.ಆರ್ ಕ್ಯಾಸೆಟ್ ಬಾಡಿಗೆಗೆ ಸಿಗುತ್ತಿತ್ತು. ನಮ್ಮ ಚಿಕ್ಕ ಮಕ್ಕಳ ಗುಂಪೊಂದು ಸುಭಾಷ್ ಘಾಯ್ ನಿರ್ದೇಶನದ ‘ತಾಲ್’ ಚಿತ್ರವನ್ನು ಆಗ ಕಡತಂದಿದ್ದ ನೆನಪು. ಹೀಗೆ ಕ್ಯಾಸೆಟ್ ತಂದಾಗಲೆಲ್ಲಾ, ಒಂದೇ ಚಿತ್ರವನ್ನು ದಿನಕ್ಕೆ ಎರಡು-ಮೂರು ಬಾರಿ ವೀಕ್ಷಿಸುವುದು ನಾವಾಗ ಮಾಡುತ್ತಿದ್ದ ಭರ್ಜರಿ ಪೈಸಾ ವಸೂಲ್ ಕಿಲಾಡಿತನಗಳಲ್ಲೊಂದಾಗಿತ್ತು.

ಅಂದಹಾಗೆ ಶೂಟಿಂಗ್ ಎಂಬ ಹೊಸ ಪದದ ಮೊದಲ ಪರಿಚಯವು ನನಗಾಗಿದ್ದು ಉಡುಪಿಯಲ್ಲಿ. ನಾವು ಉಡುಪಿಯಲ್ಲಿದ್ದಾಗ ಒಮ್ಮೆ ‘ಹಮ್ ತುಮ್ ಪೇ ಮರ್ತೇ ಹೈ’ ಚಿತ್ರದ ಇಡೀ ತಂಡವು ಚಿತ್ರೀಕರಣಕ್ಕಾಗಿ ಮಣಿಪಾಲದ ಎಂಡ್-ಪಾಯಿಂಟಿನಲ್ಲಿ ಝಾಂಡಾ ಹೂಡಿತ್ತು. ಈ ಚಿತ್ರದ ಅಂದಾಜು ಎಂಭತ್ತು ಪ್ರತಿಶತದಷ್ಟು ಚಿತ್ರೀಕರಣವಾಗಿದ್ದು ಮಣಿಪಾಲದಲ್ಲಿ. ಆಗ ಬಹಳಷ್ಟು ಮಂದಿ ಶೂಟಿಂಗ್ ಸ್ಪಾಟಿನಲ್ಲಿ ಗೋವಿಂದ, ಊರ್ಮಿಳಾರನ್ನು ಕಣ್ಣಾರೆ ನೋಡಿದೆವೆಂದು ಬಂದು ರೋಚಕವಾಗಿ ಕತೆ ಹೇಳುವುದೂ ಇರುತ್ತಿತ್ತು.

ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ ಚಿತ್ರಹಾರ್ ಕಾರ್ಯಕ್ರಮವನ್ನು ಹೊರತುಪಡಿಸಿದರೆ, ಟೇಪ್ ರೆಕಾರ್ಡರುಗಳಲ್ಲಿ ಹಾಕಲಾಗುವ ಅಂಗೈಯಗಲದ ಕ್ಯಾಸೆಟ್ಟುಗಳು ನಮಗಾಗ ಹೊಸ ಹಿಂದಿ ಚಿತ್ರಗೀತೆಗಳನ್ನು ಪರಿಚಯಿಸುತ್ತಿದ್ದವು. ಕೆಲ ವರ್ಷಗಳ ನಂತರ ಈ ಕ್ಯಾಸೆಟ್ಟುಗಳ ಒಳಕವರಿನ ಮೇಲೆ ಹಾಡಿನ ಸಾಹಿತ್ಯವೂ ಪ್ರಕಟವಾಗುವ ರೂಢಿಯು ಶುರುವಾಯಿತು. ನನ್ನ ಹಿಂದಿಯು ತನ್ನಷ್ಟಕ್ಕೇ ಸುಧಾರಿಸಿಕೊಂಡಿದ್ದು ಹೀಗೆ. ಇನ್ನು ‘ಮಿಲೇ ಸುರ್ ಮೇರಾ ತುಮ್ಹಾರಾ’ ನಾವೆಲ್ಲಾ ಬಹಳ ಅಭಿಮಾನದಿಂದ ಟಿವಿಯಲ್ಲಿ ವೀಕ್ಷಿಸುತ್ತಿದ್ದ ಮೆಚ್ಚಿನ ಹಾಡುಗಳಲ್ಲೊಂದು. ಭೀಮಸೇನ್ ಜೋಶಿ, ವಹೀದಾ ರೆಹಮಾನ್, ಪ್ರಸನ್ನ, ಮಿರಾಂಡಾ… ಅದೆಷ್ಟು ದಿಗ್ಗಜರಿದ್ದರು ಒಂದೇ ಹಾಡಿನಲ್ಲಿ!

ನಮ್ಮಂತಹ ತೊಂಭತ್ತರ ದಶಕದ ಮಕ್ಕಳಿಗೆ ಪಾಪ್ ಕೂಡ ಬಹುತೇಕ ಇದೇ ಕಾಲದಲ್ಲಿ ಪರಿಚಯವಾಗಿತ್ತು. ಬಾಂಬೇ ವೈಕಿಂಗ್ಸ್ ತಂಡದ, ನೀರಜ್ ಶ್ರೀಧರ್ ಹಾಡಿದ್ದ ‘ವೋ ಚಲೀ’, ಅಲಿಶಾ ಚಿನಾಯ್ ದನಿಯಲ್ಲಿ ‘ಮೇಡ್ ಇನ್ ಇಂಡಿಯಾ’, ಫಾಲ್ಗುಣಿ ಪಾಠಕ್ ರವರ ‘ಯಾದ್ ಪಿಯಾ ಕೀ ಆನೇ ಲಗೀ’, ಕುನಾಲ್ ಗಾಂಜಾವಾಲಾನ ಡಿಫರೆಂಟ್ ದನಿಯಲ್ಲಿ ‘ಛನ್ನಾ ವೇ’… ಇತ್ಯಾದಿಗಳು ಬಹುಜನಪ್ರಿಯವಾದವು. ಮನೆಯಲ್ಲಿ ಕೇಬಲ್ ಕನೆಕ್ಷನ್ ಇನ್ನೂ ಬರದಿದ್ದ ಕಾಲದಲ್ಲಿ ಈ ಹಾಡುಗಳೆಲ್ಲಾ ನನಗೆ ದಕ್ಕಿದ್ದು ದನಿಯಾಗಿ ಮಾತ್ರ. ಮುಂದೆ ಇಂಟರ್ನೆಟ್ಟಿನ ಯುಗವು ಆಗಮಿಸಿದ ತರುವಾಯ ಇವುಗಳಲ್ಲಿ ಕೆಲವನ್ನು ವೀಡಿಯೋಗಳಾಗಿ ನೋಡಿದೆ. ಆಗ ಸಂತಸ, ಭ್ರಮನಿರಸನಗಳೆರಡೂ ಆಗಿದ್ದವು. ಹೀಗೆ ಬರೆಯುತ್ತಾ ಹೋದರೆ ಸಿನೆಮಾ ಜಗತ್ತಿಗೆ ತೆರೆದುಕೊಂಡಿದ್ದೇ ಒಂದು ದೊಡ್ಡ ಕತೆಯಾಗಿಬಿಡುತ್ತದೆ. ಅದೊಂದು ಮುಗಿಯದ ಮೋಹ.

ಇರಲಿ, ಮರಳಿ ದಿಲ್ಲಿಗೆ ಬರೋಣ. ದಿಲ್ಲಿಯ ಸುಂದರ ತಾಣಗಳಿಗೂ, ಸಿನೆಮಾಗೂ ಇರುವ ನಂಟು ಹಳೆಯದ್ದು. ಅದರಲ್ಲೂ ಸಿನೆಮಾದ ಕತೆಯಲ್ಲಿ ದಿಲ್ಲಿ ಬಂತೆಂದರೆ ಫಿಲ್ಮೀ ನಿರ್ಮಾತೃಗಳಿಗೆ ಕ್ಯಾಮೆರಾ ಫ್ರೇಮಿನಲ್ಲಿ ಕನ್ನಾಟ್ ಪ್ಲೇಟ್ ಬರಲೇಬೇಕು ಎನ್ನುವಷ್ಟಿನ ಹಂಬಲ. ಕನ್ನಾಟ್ ಪ್ಲೇಸ್ ಅಥವಾ ಸಿ.ಪಿ ಎಂದು ಕರೆಯಲಾಗುವ ಈ ಸ್ಥಳದ ಇತಿಹಾಸಕ್ಕೆ ಅದರದ್ದೇ ಆದ ತೂಕವಿದೆ. ಅದನ್ನು ಒಂದು ಕ್ಷಣ ಬದಿಗಿಟ್ಟರೂ, ಈ ಸ್ಥಳವು ಇಂದಿನವರೆಗೂ ಉಳಿಸಿಕೊಂಡು ಬಂದಿರುವ ಪ್ರಸ್ತುತತೆಯು ಕಡೆಗಣಿಸುವಂಥದ್ದೇನಲ್ಲ.

ಇಂದು ದಿಲ್ಲಿಯ ಅತೀ ದುಬಾರಿ ಪ್ರದೇಶಗಳಲ್ಲಿ ಒಂದಾಗಿರುವ ಕನಾಟ್ ಪ್ಲೇಸ್ ಶಹರದ ಪ್ರಮುಖ ವಾಣಿಜ್ಯ ಕೇಂದ್ರಗಳಲ್ಲೊಂದು. ಉದ್ಯಮಿಗಳಿಗೆ ಇದೊಂದು ಹಾಟ್ ಸ್ಪಾಟ್. ಮಿಲೇನಿಯಲ್ ಮಂದಿಗೆ ಇದೊಂದು ಹ್ಯಾಂಗೌಟ್ ಅಡ್ಡಾ. ದಿಲ್ಲಿಯ ಮೆಟ್ರೋ ರೈಲುಗಳ ಸಂಕೀರ್ಣ ಜಾಲಕ್ಕೆ ಸಿ.ಪಿ ಎಂದರೆ ವೃತ್ತದ ಕೇಂದ್ರಬಿಂದುವಿದ್ದಂತೆ. ಇಲ್ಲಿರುವ ರಾಜೀವ್ ಚೌಕ್ ಮೆಟ್ರೋ ಸ್ಟೇಷನ್ನಿನಲ್ಲಿ ನಿತ್ಯವೂ ಕಾಣಸಿಗುವ ಜನಜಾತ್ರೆಯ ಖರ‍್ರೇ ಬೇರೆ. ಇತ್ತ ಇಂಡಿಯಾ ಗೇಟ್-ಪಾರ್ಲಿಮೆಂಟ್ ಗಳಂತಹ ಆಯಕಟ್ಟಿನ ಪ್ರದೇಶಗಳಿಗೂ ಕೂಡ ಪ್ರಮುಖ ಲ್ಯಾಂಡ್ ಮಾರ್ಕ್ ಆಗಿ ಬೆಸೆದುಕೊಳ್ಳುವ ಸ್ಥಳವಿದು.

ಕನ್ನಾಟ್ ಪ್ಲೇಸಿನ ವಿಶಿಷ್ಟ ವಾಸ್ತುಶಿಲ್ಪವು ಈ ಸ್ಥಳದ ಸೌಂದರ್ಯವನ್ನು ಹೆಚ್ಚಿಸಿದರೆ, ಇರುವಿಕೆಯ ಸ್ಥಾನವು ಇದರ ಮಾರುಕಟ್ಟೆ ಮೌಲ್ಯವನ್ನು ಗಣನೀಯವಾಗಿ ಹೆಚ್ಚಿಸಿದೆ. ಮಟ್ಟಸವಾಗಿ ಕೈವಾರದಲ್ಲಿ ಕೊರೆದ ವೃತ್ತದಂತಿರುವ ಇದು ಔಟರ್ ರಿಂಗ್ (ಹೊರವೃತ್ತ) ಮತ್ತು ಇನ್ನರ್ ರಿಂಗ್ (ಒಳವೃತ್ತ) ಹೆಸರಿನ ವಿಶಾಲ ಸಂಕೀರ್ಣಗಳನ್ನು ಹೊಂದಿದ್ದು, ಎಲ್ಲವನ್ನೂ ಒಂದಕ್ಕೊಂದು ಬೆಸೆಯುವ ರಸ್ತೆಗಳಿಂದ ವ್ಯವಸ್ಥಿತವಾಗಿ ನಿರ್ಮಿಸಲ್ಪಟ್ಟಿದೆ. ಇಂದು ದಿಲ್ಲಿಯ ಅತ್ಯಂತ ಜನನಿಬಿಡ ಪ್ರದೇಶಗಳಲ್ಲಿ ಸಿ.ಪಿ ಕೂಡ ಒಂದು. 

ಸಿ.ಪಿ ಯ ವಿಶಿಷ್ಟ ಮತ್ತು ಆಕರ್ಷಕ ವಾಸ್ತುಶಿಲ್ಪವು ಚಿತ್ರರಂಗವನ್ನು ದಶಕಗಳಿಂದ ಸತತವಾಗಿ ಆಕರ್ಷಿಸಿದೆ. ಚೇಸಿಂಗ್ ದೃಶ್ಯಗಳಿಗಂತೂ ಇದು ಹೇಳಿಮಾಡಿಸಿದ ಪ್ರದೇಶ. ಅಕ್ಷಯ್ ಕುಮಾರ್ ಅಭಿನಯದ ಸ್ಪೆಷಲ್ ೨೬ ಚಿತ್ರದಲ್ಲಿ ಇಂಥದ್ದೊಂದು ಚೇಸಿಂಗ್ ದೃಶ್ಯವಿದೆ. ಆಯಿಷಾ, ಮಾನ್ಸೂನ್ ವೆಡ್ಡಿಂಗ್, ೩ ಈಡಿಯಟ್ಸ್, ರಾಕ್ ಸ್ಟಾರ್, ಮೇರೆ ಬ್ರದರ್ ಕೇ ದುಲ್ಹನ್, ಬಧಾಯಿ ಹೋ, ವಿಕ್ಕಿ ಡೋನರ್, ವೀರೇ ದಿ ವೆಡ್ಡಿಂಗ್, ಸೂಯಿ ಧಾಗಾದಂತಹ ಮುಖ್ಯವಾಹಿನಿಯ ಬಾಲಿವುಡ್ ಚಿತ್ರಗಳಲ್ಲೂ ಸಿ.ಪಿ ಯ ಕೆಲ ಝಲಕ್ ಗಳನ್ನು ವೀಕ್ಷಕರು ಕಾಣಬಹುದು.

ಹಾಗೆಂದು ಕನ್ನಾಟ್ ಪ್ಲೇಸಿನಲ್ಲಿ ಶೂಟಿಂಗ್ ಮಾಡುವುದು ಸುಲಭವೇನಲ್ಲ. ಮೊದಲೇ ಹೇಳಿದಂತೆ ಇದು ದಿಲ್ಲಿಯ ಅತ್ಯಂತ ಹೆಚ್ಚಿನ ಚಟುವಟಿಕೆಯುಳ್ಳ ಮತ್ತು ಜನನಿಬಿಡ ಪ್ರದೇಶಗಳಲ್ಲೊಂದು. ಇನ್ನು ಚಿತ್ರೀಕರಣ ಮತ್ತು ಚಿತ್ರನಟ-ನಟಿಯರನ್ನು ನೋಡಲು ಜನಜಂಗುಳಿಯು ಸೇರಿದರೆ ಅದನ್ನು ನಿಯಂತ್ರಿಸುವುದು ದೊಡ್ಡ ಸವಾಲು. ಹೀಗಾಗಿ ಭದ್ರತೆ, ಟ್ರಾಫಿಕ್ಕಿನಂತಹ ಹತ್ತಾರು ಸಮಸ್ಯೆಗಳು ಶಹರದಲ್ಲಿ ಈಗಾಗಲೇ ಇರುವಾಗ ಇಂಥವೆಲ್ಲಾ ಸ್ಥಳೀಯ ಆಡಳಿತಕ್ಕೆ ಬೇಡದಿರುವ ತಲೆನೋವುಗಳು.

ಈ ಬಗ್ಗೆ ಇಲ್ಲಿನ ಟ್ರೇರ‍್ಸ್ ಅಸೋಸಿಯೇಷನ್ ಕೂಡ ಕೆಲ ವರ್ಷಗಳ ಹಿಂದೆ ತನ್ನ ಆಕ್ಷೇಪವನ್ನು ವ್ಯಕ್ತಪಡಿಸಿತ್ತು. ಕೆಲವೊಮ್ಮೆ ಸಿನೆಮಾದ ಚಿತ್ರಕಥೆ ಮತ್ತು ನಿರೀಕ್ಷಿತ ದೃಶ್ಯಕ್ಕನುಗುಣವಾಗಿ ವಾಣಿಜ್ಯ ಸಂಕೀರ್ಣದ ಪರಿಸರದಲ್ಲಿ ಚಿಕ್ಕಪುಟ್ಟ ತಾತ್ಕಾಲಿಕ ಬದಲಾವಣೆಗಳನ್ನು ಮಾಡಬೇಕಾಗುತ್ತದೆ, ಚಿತ್ರೀಕರಣದ ತಂಡವು ಶೂಟಿಂಗಿನಲ್ಲಿ ವ್ಯಸ್ತವಾಗಿಬಿಟ್ಟರೆ ದಿನದ ನಿರ್ಣಾಯಕ ಸಮಯದ ವ್ಯಾಪಾರದಲ್ಲಿ ಗ್ರಾಹಕರನ್ನು ಕಳೆದುಕೊಳ್ಳಬೇಕಾಗುತ್ತದೆ… ಇತ್ಯಾದಿ ದೂರುಗಳು ಅಸೋಸಿಯೇಷನ್ ಕಡೆಯಿಂದ ಬಂದಿದ್ದವು. ಇತ್ತ ಚಿತ್ರತಂಡಗಳಿಗೂ ಕೂಡ ದಿಲ್ಲಿಯಲ್ಲಿ ಶೂಟಿಂಗಿಗೆ ಅನುಮತಿ ಪಡೆಯುವುದೆಂದರೆ ಸಾಕಷ್ಟು ಕಸರತ್ತಿನ ಕೆಲಸ. ಅದಕ್ಕೆ ಶ್ರಮ, ಸಮಯ, ಸಂಪರ್ಕ, ಬುದ್ಧಿವಂತಿಕೆಗಳೆಲ್ಲವೂ ಸಾಕಷ್ಟು ಬೇಕು.

ಇಷ್ಟಿದ್ದರೂ ಚಿತ್ರತಂಡಗಳಿಗೆ ಕನ್ನಾಟ್ ಪ್ಲೇಸ್ ಬಗ್ಗೆ ವಿಶೇಷ ಒಲವು. ಏಕೆಂದರೆ ದಿಲ್ಲಿಯ ಯಾವ ಜಾಗವೂ ಕೂಡ ಇಲ್ಲಿಯ ವಿಶಿಷ್ಟ ಸೊಬಗಿಗೆ ಪರ್ಯಾಯವಾಗಿಸುವಷ್ಟು ಶಕ್ತವಲ್ಲ. ಬಜೆಟ್ಟಿನಲ್ಲಿ ಬಾಡಿಗೆ ಖರ್ಚುಗಳು ತುಟ್ಟಿಯಾದರೂ, ಪರವಾನಗಿ-ಅನುಮತಿ ಸಂಬಂಧಿ ಕೆಲಸಗಳು ಕೊಂಚ ಕಷ್ಟವಾದರೂ ಪ್ರೊಡಕ್ಷನ್ ತಂಡಗಳು ದಿಲ್ಲಿಯ ಈ ಒಂದು ಸ್ಥಳವನ್ನು ಮಾತ್ರ ಬಿಡಲು ತಯಾರಿಲ್ಲ. ಡೆಲ್ಲಿ ಟೈಮ್ಸ್ ವರದಿಯ ಪ್ರಕಾರ ೨೦೧೮ ರ ಒಂದು ವರ್ಷದಲ್ಲೇ ಇಪ್ಪತ್ತು ಚಲನಚಿತ್ರಗಳನ್ನು ಕನ್ನಾಟ್ ಪ್ಲೇಸಿನಲ್ಲಿ ಚಿತ್ರೀಕರಣ ಮಾಡಲಾಗಿತ್ತಂತೆ. 

ದಿಲ್ಲಿಯ ಆಧುನಿಕ ನಗರನೋಟವನ್ನು ಹಿಡಿದಿಡಲು ಚಿತ್ರತಂಡಗಳು ಸಾಮಾನ್ಯವಾಗಿ ಆರಿಸುವುದು ಕನಾಟ್ ಪ್ಲೇಸ್ ಭಾಗವನ್ನೇ. ಇಲ್ಲಿನ ವೃತ್ತದಲ್ಲಿ ಸಾಲುಗಟ್ಟಿರುವ ನೂರಾರು ಬ್ರಾಂಡೆಡ್ ಮಳಿಗೆಗಳು ಶಹರದ ರಾಜಧಾನಿ ವೈಭವಕ್ಕೆ ಸಾಕ್ಷಿಯಾದರೆ, ಜನನಿಬಿಡ ಬೀದಿಗಳು ಮಹಾನಗರಿಯ ದೈನಂದಿನ ಜಂಜಾಟಗಳ ಸಂಕೀರ್ಣತೆಗೆ ರೂಪಕವಿದ್ದಂತೆ. ಇಲ್ಲಿರುವ ಹಲವು ಪುಟ್ಟ ಅಂಗಡಿಗಳಿಗೆ ದಶಕಗಳ ಇತಿಹಾಸವಿದೆ. ಹಾಗಂತ ಹೊಸ ಉತ್ಸಾಹಿಗಳಿಗಾಗಿ ಇಲ್ಲಿಯ ಅಂಗಳದಲ್ಲಿ ಹೆಕ್ಕಿಕೊಳ್ಳಲು ಕನಸುಗಳೂ ಇಲ್ಲದಿಲ್ಲ. ಇದು ಕನ್ನಾಟ್ ಪ್ಲೇಸಿನ ಕಮಾಲ್.

ಅಂದಹಾಗೆ ಖ್ಯಾತ ಬಾಲಿವುಡ್ ಚಿತ್ರನಿರ್ದೇಶಕ ಇಮ್ತಿಯಾಝ್ ಖಾನ್ ದಿಲ್ಲಿ ಯೂನಿವರ್ಸಿಟಿಯ ವಿದ್ಯಾರ್ಥಿಯಾಗಿದ್ದವರು. ಲವ್ ಆಜ್ ಕಲ್, ರಾಕ್ ಸ್ಟಾರ್, ತಮಾಷಾಗಳಂತಹ ಜನಪ್ರಿಯ ಚಿತ್ರಗಳಲ್ಲಿ ಅವರು ನಿರೂಪಣೆಯ ನೆಪದಲ್ಲಿ ಮತ್ತೆ ದಿಲ್ಲಿಗೆ ಮರಳುತ್ತಾರೆ. ತನ್ನ ಪ್ರತಿಯೊಂದು ಹೊಸ ಚಿತ್ರದಲ್ಲೂ ದಿಲ್ಲಿಯ ಮೇಲಿರುವ ಅವರಿಗಿರುವ ಅಭಿಮಾನವು ಹೆಚ್ಚಿದಂತೆ ಹಲವರಿಗೆ ಕಂಡಿದ್ದು ಸತ್ಯ. ಅದೇಕೆ ಹೀಗೆ ಎಂದು ಪತ್ರಕರ್ತರೊಬ್ಬರು ಕೇಳಿದಾಗ ಇಮ್ತಿಯಾಝ್ ಖಾನ್ ಹೀಗಂದಿದ್ದರು: ‘ಹಳೆಯ ಸೊಬಗು ಮತ್ತು ಹೊಸತರ ಹುಮ್ಮಸ್ಸುಗಳೆರಡೂ ಫ್ರೇಮಿನಲ್ಲಿ ಜೊತೆಯಾಗಿ ಕಾಣಬೇಕಾದರೆ ನೀವು ದಿಲ್ಲಿಗೇ ಬರಬೇಕು’!

ಖಾನ್ ಹೇಳಿದ್ದು ಅಕ್ಷರಶಃ ಸತ್ಯ. ಸೆಲ್ಯೂಲಾಯ್ಡ್ ನಲ್ಲಿ ಹೀಗೆ ಆಗಾಗ ಕಾಣಸಿಗುವ ದಿಲ್ಲಿಯೆಂಬ ಮಹಾನಗರಿಯ ಮಾಯೆಯನ್ನು ಇದಕ್ಕಿಂತ ಚಿಕ್ಕದಾಗಿ ಮತ್ತು ಚೊಕ್ಕದಾಗಿ ಹಿಡಿದಿಡುವುದು ಕಷ್ಟ!

May 17, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: