ಪಪ್ಪನ ಗಡ್ಡ: ಅಂದು, ಇಂದು
ಪ್ರಿಯದರ್ಶಿನಿ ಎಸ್. ಶೆಟ್ಟರ
ಇತ್ತೀಚಿಗೇನೋ ಗಡ್ಡ ಬಿಡುವುದು ಫ್ಯಾಷನ್ ಆದಂತಿದೆ. ಕೆಲವು ಟೀ-ಶರ್ಟ್ಗಳ ಮೇಲೆ ‘ರಿಯಲ್ ಮೆನ್ ಡೋಂಟ್ ಶೇವ್…!’ ಎಂದು ಬರೆದಿರುವುದನ್ನು ನೀವು ನೋಡಿರಬಹುದು.
ನಮ್ಮ ಪಪ್ಪ ಗಡ್ಡ ಬಿಡುವುದರ ಬಗ್ಗೆ ನಮಗೆ- ಅಂದರೆ ನಾನು, ನನ್ನ ತಂಗಿ ಮತ್ತು ಮಮ್ಮಿಗೆ ಇರುವ ತಕರಾರು ಇಂದು-ನಿನ್ನೆಯದಲ್ಲ. ‘ಗಡ್ಡ ಬಿಟ್ಟ ವ್ಯಕ್ತಿಗೆ ಒಬ್ಬ ಲೇಖಕ/ ಶಿಕ್ಷಕ/ ವಿಚಾರವಾದಿಯ ಲುಕ್ ಬರುತ್ತದೆ’ ಎಂಬುದೂ ಸುಳ್ಳಲ್ಲ. ಈ ಕುರಿತು ಪಪ್ಪ ವಾದ ಮಾಡಿದ್ದೂ ಇದೆ. ಪಪ್ಪನ ಹಳೆಯ ಫೋಟೋಗಳನ್ನೊಮ್ಮೆ ನೋಡಿದಾಗ ಅವರು ದಾಡಿಯಿಲ್ಲದೆ ಚೆಂದ ಕಾಣುತ್ತಿದ್ದರು ಅನ್ನಿಸುತ್ತಿತ್ತು.
ನಾವೆಲ್ಲ ಪಪ್ಪನನ್ನು ದಾಡಿ ತೆಗೆಯುವಂತೆ ಪೀಡಿಸಿದ್ದೂ ಇದೆ. ನಮ್ಮ ಶ್ರಮ ವ್ಯರ್ಥವಾಯಿತೇ ವಿನಃ ಗಡ್ಡಕ್ಕೆ ಕತ್ತರಿ ಬೀಳಲಿಲ್ಲ! ಪೂರ್ತಿಯಾಗಿ ತೆಗೆಯದೇ ಹೋದರೂ ಎಟ್ ಲೀಸ್ಟ್, ಫ್ರೆಂಚ್ ಬಿಯರ್ಡ ರೀತಿಯಲ್ಲಿ ಮಾರ್ಪಾಡು ಮಾಡಿದ್ದರೂ ಸಾಕಿತ್ತು.
ಹಲವಾರು ಬಾರಿ ನಾನು ಮತ್ತು ನನ್ನ ತಂಗಿ ಮೇಘ ಮಮ್ಮಿಗೆ ಹೇಳಿದ್ದುಂಟು- “ಒಂದಿನ ರಾತ್ರಿ ಪಪ್ಪ ಮಲಗಿರುವಾಗ ಅರ್ಧ ದಾಡಿ ಶೇವ್ ಮಾಡಿ ಬಿಡೋಣ, ಇನ್ನರ್ಧ ತಾವೇ ತೆಗೆಯುತ್ತಾರೆ”!! ಆ ‘ಒಂದಿನ ರಾತ್ರಿ’ ಬಂದೇ ಇಲ್ಲ…
ಇಂತಿಪ್ಪ ಪಪ್ಪನ ಗಡ್ಡದ ಕುರಿತು ಒಂದು ಲಲಿತ ಪ್ರಬಂಧ ಬರೆಯಬೇಕೆಂಬುದು ಬಹುದಿನಗಳ ಆಸೆಯಾಗಿತ್ತು. ಪಪ್ಪನ ತಂದೆ ಶ್ರೀಯುತ ವೀರಪ್ಪ ಶೆಟ್ಟರ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು. ಅವರ ತಾಯಿಯ ತಂಗಿಯ ಮಗ ಶ್ರೀಯುತ ಹುಕ್ಕೇರಿ ಬಾಳಪ್ಪನವರು- ‘ಸಾವಿರ ಹಾಡುಗಳ ಸರದಾರ’ ಎಂದೇ ಹೆಸರಾದವರು, ನನ್ನ ಪಪ್ಪನ ಚಿಕ್ಕಪ್ಪ. ಅವರು ಪಪ್ಪ ಹದಿಹರೆಯದವರಾಗಿದ್ದಾಗ ಹೇಳುತ್ತಿದ್ದರಂತೆ- “ಗಡ್ಡ ತೆಗಿ, ನಿನಗೆ ಹೆಣ್ಣು ನೋಡುತ್ತೇನೆ. ಗಡ್ಡ ಬಿಟ್ಟರೆ ಮುಸಲ್ಮಾನರ ತರಹ ಕಾಣುತ್ತೀ!” ಎಂದು.
ಒಮ್ಮೆ ಪಪ್ಪನ ಜುಬ್ಬಾ, ಗಡ್ಡ, ಪಪ್ಪನ ಹೆಸರು ಶಿವಾನಂದ ಎಂದು ಅರಿತ ಯಾರೋ ಒಬ್ಬರು ಪಪ್ಪನಿಗೆ, “ತಮ್ಮದು ಯಾವ ಮಠ?” ಎಂದು ಕೇಳಿದ್ದರಂತೆ! ಮನೆಯಲ್ಲಿ ಪಪ್ಪ ಇದನ್ನು ಹೇಳಿದಾಗ ನಾವೆಲ್ಲ ಬಿದ್ದೂ ಬಿದ್ದು ನಕ್ಕಿದ್ದೆವು.
ಪಪ್ಪನ ಜೊತೆಗೆ ಪೇಟೆಗೆ ಹೋದಾಗ ಸಾಕಷ್ಟು ಸಲ ವ್ಯಾಪಾರಸ್ಥರು ನಾವು ಅವರ ಬಳಿ ಹೋಗುತ್ತಿದ್ದಂತೆ, ಪಪ್ಪನನ್ನೂ ಅವರ ಗಡ್ಡವನ್ನೂ ಕಂಡ ಅವರು ಮಾತನಾಡುತ್ತಿರುವ ಕನ್ನಡವನ್ನು ನಿಲ್ಲಿಸಿ ನಮ್ಮೊಂದಿಗೆ ಹಿಂದಿ ಅಥವಾ ಉರ್ದುನಲ್ಲಿ ಮಾತಿಗಿಳಿಯುತ್ತಿದ್ದರು.
೨೦೧೪ನೇ ಇಸವಿಯ ಜೂನ್ ತಿಂಗಳಲ್ಲಿ ಪಪ್ಪ ಮಮ್ಮಿಯ ೨೫ನೇಯ ವಿವಾಹ ವಾರ್ಷಿಕೋತ್ಸವ ಆಚರಿಸಲು ನಾವೆಲ್ಲ ನಿರ್ಧರಿಸಿದೆವು. ನಮಗೆಲ್ಲ ಸರ್ಪ್ರೈಸ್ ಎಂಬಂತೆ ಪಪ್ಪ ಫ್ರೆಂಚ್ ಬಿಯರ್ಡ ರೀತಿಯಲ್ಲಿ ದಾಡಿ ಬದಲಾಯಿಸಿಕೊಂಡಿದ್ದರು. ಮೊದಲಿಗಿಂತ ಚೆನ್ನಾಗಿ ಕಾಣುತ್ತಿದ್ದರು. ಅದೂ ನಾವೆಲ್ಲ ಗಡ್ಡದ ಕುರಿತು ತಕರಾರು ತೆಗೆಯುವ ಮೊದಲೇ! ಅಂದಿನಿಂದ ಇಂದಿನವರೆಗೂ ನಾವು ತಕರಾರು ತೆಗೆಯುವ ಸಂದರ್ಭವೂ ಬಂದಿಲ್ಲ.
ಒಮ್ಮೆ ನನ್ನ ಪರೀಕ್ಷೆಯ ದಿನ ಪಪ್ಪ ನನ್ನನ್ನು ಕಾಲೇಜಿಗೆ ಡ್ರಾಪ್ ಮಾಡಲು ಬಂದಿದ್ದರು. ಅವರು ತೆರಳಿದ ನಂತರ ನನಗೆ ಪರಿಚಯವಿರದ ಸಹಪಾಠಿಯೊಬ್ಬಳು ನನ್ನೊಂದಿಗೆ ಕಾಲೇಜಿನತ್ತ ಹೆಜ್ಜೆ ಹಾಕುತ್ತಿದ್ದಳು. ಆಕೆ ನನ್ನ ಹೆಸರು ಕೇಳಿದಳು. “ಪ್ರಿಯದರ್ಶಿನಿ” ಅಂದೆ. ಆಕೆ “ಕ್ರಿಶ್ಚಿಯನ್ನರು ಬಹಳ ಜನರು ಹೀಗೆ ಹಿಂದೂ ಹೆಸರಿಡಲು ಇಷ್ಟಪಡುತ್ತಾರೆ, ಅಲ್ಲವೇ?” ಎಂದಳು. ಆಗ ನಾನು- “ನಾನು ಯಾವಾಗ ಹೇಳಿದೆ ನಾವು ಕ್ರಿಶ್ಚಿಯನ್ನರು ಎಂದು?” ಅಂತ ಕೇಳಿದೆ.
ಆಗ ಆಕೆ “ಅಯ್ಯೋ! ನಾನು ನಿನ್ನ ತಂದೆಯವರು ಧರಿಸಿದ ಬಿಳಿ ಬಣ್ಣದ ಜುಬ್ಬಾ, ಅವರ ಫ್ರೆಂಚ್ ಬಿಯರ್ಡ ನೋಡಿ ಹೀಗೆ ಕೇಳಿಬಿಟ್ಟೆ” ಅಂದಳು. ನಾನು ಎಂ.ಎಸ್ಸಿ.ಗೆ ಸೇರಿಕೊಂಡ ನಂತರ ನನ್ನ ಹಳೆಯ ಮಿತ್ರರು ಸಿಕ್ಕಾಗ “ಏನು, ಅಂಕಲ್ ದಾಡಿಯ ಸ್ಟೈಲ್ ಚೇಂಜ್ ಆಗಿದೆ?!” ಎಂದೂ ಕೇಳಿದವರಿದ್ದಾರೆ. ಅಂತೂ ದಾಡಿಯಿಂದಲೂ ‘ನ್ಯಾಷನಲ್ ಇಂಟಿಗ್ರೇಷನ್’ ಸಾಧಿಸಬಹುದು ಅನಿಸುತ್ತಿದೆ…
ಚೆನ್ನಾಗಿದೆ.
Thank you madam…
Nice article
Thank you Renuka
Nice dear..
Thank you Priya