ಬಿ ಕೆ ಸುಮತಿ
**
ಜುಲೈ 23. ರಾಷ್ಟ್ರೀಯ ಪ್ರಸಾರ ದಿನ. ಭಾರತದಲ್ಲಿ ರೇಡಿಯೋ ಪ್ರಸಾರ ಆರಂಭವಾದ ದಿನ. ಜುಲೈ 2002 ರಲ್ಲಿ, 75ನೇ ವರ್ಷ ಆಚರಿಸಿದ ಹೆಮ್ಮೆ ನಮ್ಮ ಭಾರತೀಯ ಆಕಾಶವಾಣಿ ಪ್ರಸಾರಕ್ಕೆ. ಅಂದರೆ, ನೂರು ತುಂಬಲು ಇನ್ನು ಮೂರೇ ವರ್ಷ ಬಾಕಿ. ನೂರು ವರ್ಷದಲ್ಲಿ ಹಲವು ರೂಪ ತಾಳಿದೆ ಈ ಮಾಧ್ಯಮ. ಮೊದಲು 1927 ರಲ್ಲಿ ಭಾರತೀಯ ಪ್ರಸಾರ ಕಂಪನಿ (IBC), 1930 ರಲ್ಲಿ Indian broadcasting service (IBS) 1936 ರಲ್ಲಿ All India Radio ಹೀಗೆ ನಾಮ ಬದಲಾವಣೆ. ಮೊದಲು ಕಾರ್ಮಿಕ ಖಾತೆಗೆ ಸೇರಿತ್ತು. ಆಮೇಲೆ ಸಂವಹನ ಖಾತೆ, ತದನಂತರ ಮಾಹಿತಿ ಮತ್ತು ಪ್ರಸಾರ ಖಾತೆಗೆ ಒಳಪಟ್ಟಿತು. 1997 ರಲ್ಲಿ ಪ್ರಸಾರಭಾರತಿ, ಭಾರತದ ರಾಷ್ಟ್ರೀಯ ಪ್ರಸಾರಕ ಎಂದು ಪರಿವರ್ತಿತವಾಯಿತು. ಪ್ರಸಾರಭಾರತಿ ಕಾಯಿದೆ 1998 ರಲ್ಲಿ ಅಂಗೀಕಾರವಾಯಿತು.
1923 ರಲ್ಲಿ ಬಾಂಬೆ ಮತ್ತು ಕಲಕತ್ತ ನಗರಗಳಲ್ಲಿ club radio ಗಳು ಅಸ್ತಿತ್ವದಲ್ಲಿ ಇದ್ದವು. ಇವುಗಳು ಒಂದುಗೂಡಿಯೇ 1927ರ ಜುಲೈ 23 ಭಾರತೀಯ ಪ್ರಸಾರ ಆರಂಭವಾಗಿದ್ದು. ಹಾಗಾಗಿಯೇ ಇಂದು ಭಾರತೀಯ ಪ್ರಸಾರ ದಿನ. ಈ ಮಧ್ಯೆ 1935 ರಲ್ಲಿ ನಮ್ಮ ಮೈಸೂರಿನಲ್ಲಿ ಎಂ ವಿ ಗೋಪಾಲಸ್ವಾಮಿ ಅವರು ತಮ್ಮದೇ ಖರ್ಚಿನಲ್ಲಿ ವಿದೇಶದಿಂದ transmitter ತಂದು, ಸ್ವಂತ ರೇಡಿಯೋ ಕೇಂದ್ರ ಆರಂಭ ಮಾಡಿದ್ದರು. ಸ್ವಲ್ಪ ಕಾಲ ತಾವೇ ನಡೆಸಿದರು. ನಂತರ ಅವರಿಗೆ ನಡೆಸುವುದು ಕಷ್ಟವಾಗಿ ಕೇಂದ್ರ 1942 ರಲ್ಲಿ ಮೈಸೂರು ಮಹಾರಾಜರ ಅಧೀನವಾಯಿತು. ನಂತರದ ದಿನಗಳಲ್ಲಿ ಸರ್ಕಾರಕ್ಕೆ ಸೇರಿಕೊಂಡಿತು. ಭಾರತೀಯ ಪ್ರಸಾರ ಇತಿಹಾಸದಲ್ಲಿ ಮೈಸೂರಿಗೆ ಬಹು ವಿಶಿಷ್ಟ ಸ್ಥಾನವಿದೆ. ದೇಶದ ಮೊದಲ ಖಾಸಗಿ ರೇಡಿಯೋ ಕೇಂದ್ರ ಎಂದೂ ದಾಖಲಾಗಿದೆ. Club, ಖಾಸಗಿ, ಸರ್ಕಾರ, ವಿವಿಧ ಖಾತೆಗಳು, ಹೊಸ ಹೊಸ ತಾಂತ್ರಿಕ ಆವಿಷ್ಕಾರಗಳು, ಬದಲಾವಣೆಗಳು, ನೇಮಕಾತಿ, ಸಿಬ್ಬಂದಿ, ಪ್ರತಿ ಹಂತದಲ್ಲೂ ಬೇರೆ ಬೇರೆ ರೂಪ ತಾಳಿದೆ ಆಕಾಶವಾಣಿ. 1947 ರಲ್ಲಿ ಸ್ವಾತಂತ್ರ್ಯಬಂದಾಗ ಇದ್ದದ್ದು ಆರು ಕೇಂದ್ರಗಳು. ಲಕ್ನೋ, ಮದ್ರಾಸ್, ಮತ್ತು ತಿರುಚಿರಾಪಲ್ಲಿ, (ಪೇಶಾವರ್, ಢಾಖ, ಲಾಹೋರ್ ಪಾಕಿಸ್ತಾನ ಸೇರಿದವು) ಆಗ, ಪ್ರಸಾರ ಶೇಕಡಾ 2.5 ಭೌಗೋಳಿಕ ವ್ಯಾಪ್ತಿ, ಹೊಂದಿತ್ತು. ಮತ್ತು ಶೇಕಡಾ 11 ರಷ್ಟು ಜನಸಂಖ್ಯೆಯನ್ನು ತಲುಪುತ್ತಿತ್ತು.
ಈಗ 590 ಕ್ಕೂ ಹೆಚ್ಚು ಕೇಂದ್ರಗಳು! 23 ಕ್ಕೂ ಹೆಚ್ಚು ಭಾಷೆಗಳಲ್ಲಿ ಪ್ರಸಾರ. 179 ಉಪಭಾಷೆಗಳು. ದಿನವೊಂದಕ್ಕೆ 647 ಸುದ್ದಿ ಬುಲೆಟಿನ್ ಗಳು. 300 ಕ್ಕೂ ಹೆಚ್ಚು ಮುಖ್ಯಾಂಶ ಸುದ್ದಿಗಳು! ಈಗ ಶೇಕಡಾ 92 ರಷ್ಟು ಭೌಗೋಳಿಕ ವ್ಯಾಪ್ತಿ ಮತ್ತು ಶೇಕಡಾ 99 ರಷ್ಟು ಜನಸಂಖ್ಯೆ
ತಲುಪುತ್ತಿದೆ ಆಕಾಶವಾಣಿ. ಸಂಗೀತ, ಭಾಷಣ, ಚರ್ಚೆ, ಕೃಷಿ, ಜನಪದ, ಮಹಿಳೆಯರು, ಮಕ್ಕಳು, ಯುವ ಜನತೆ, ಹಿರಿಯರು, ಆರೋಗ್ಯ, ಚಲನಚಿತ್ರ, ಚಿತ್ರಗೀತೆ, ವಿಭಾಗಗಳಲ್ಲಿ ವಿಶಿಷ್ಟ ಸೇವೆ ಆಕಾಶವಾಣಿಯದ್ದು. ಸಂಸ್ಕೃತಿ, ಕಲೆ, ಸಾಮಾಜಿಕ ಕಳಕಳಿ ಅಂದರೆ ಅದು ಆಕಾಶವಾಣಿ. ಹಲವು ದಶಕಗಳಲ್ಲಿ ಹಲವು ತಲೆಮಾರುಗಳನ್ನು ಪೋಷಿಸಿ, ದೇಶದ ಬೌದ್ಧಿಕ ಸಂಪತ್ತು, ಕಲಾ ಸಂಪತ್ತನ್ನು ಬೆಳೆಸಿದ್ದು ಆಕಾಶವಾಣಿ. ಮೀಡಿಯಂ ವೇವ್, ಶಾರ್ಟ್ ವೇವ್, ಕೇಂದ್ರಗಳನ್ನು ಹೊಂದಿದ್ದ ಆಕಾಶವಾಣಿ ಕಾಲಕ್ಕೆ ಅನುಸಾರವಾಗಿ FM ತಂತ್ರಜ್ಞಾನ ಕ್ಕೆ ಹೊಂದಿಕೊಂಡಿತು. ನಿಮಗೆ ಆಶ್ಚರ್ಯ ಆಗಬಹುದು, ಭಾರತದಲ್ಲಿ ಮೊದಲು fm ಪ್ರಸಾರ ಶುರು ಆಗಿದ್ದು ಚೆನ್ನೈ ನಲ್ಲಿ. 1977 ರಲ್ಲಿ. ಹಲವು ವಿವಿಧ ಭಾರತಿ ಕೇಂದ್ರಗಳು fm ತಂತ್ರಜ್ಞಾನಕ್ಕೆ ತೊಂಭತ್ತರ ದಶಕದಲ್ಲೇ ಬದಲಾದವು. ಆದರೆ fm ತಂತ್ರಜ್ಞಾನ ಜನಪ್ರಿಯವಾಗಿ ಜನರ ಕೈಗೆ ಸೆಟ್ ಗಳು ಬರಬೇಕಾದರೆ, ಹಲವು ವರ್ಷಗಳು ಬೇಕಾದವು. ಇಸವಿ 2000 ನಂತರ ಖಾಸಗಿ ರೇಡಿಯೋ ಕ್ಷೇತ್ರ ತೆರೆದುಕೊಂಡ ಸಂದರ್ಭದಲ್ಲಿ ಭಾರತದ ಪ್ರಸಾರದ ಚಿತ್ರ ಮತ್ತೂ ಬದಲಾಯಿತು. ಕಾನೂನು ಬದಲಾಯಿತು. ಭಾಷೆ ಬದಲಾಯಿತು. ಕಾರ್ಯಕ್ರಮ ಸ್ವರೂಪ ಬದಲಾಯಿತು. ಸಿಬ್ಬಂದಿ, ಕಲಾವಿದರು, ರೀತಿ ನೀತಿ ನಿಯಮಾವಳಿಗಳು, ಸಂಬಳ, ಸಾರಿಗೆ ಒಂದೇ ಎರಡೇ ಕಾಲಾಯ ತಸ್ಮೈ ನಮಃ ಬದಲಾವಣೆಯ ಪರ್ವ ಆರಂಭವಾಯಿತು.
ರಾಷ್ಟ್ರೀಯ ಪ್ರಸಾರ ಸಾರ್ವಭೌಮ ಪ್ರಸಾರಭಾರತಿ ಸ್ಪರ್ಧೆಗೆ ಇಳಿಯಬೇಕಾಯಿತು. Marketing ಜಗತ್ತಿಗೆ ತೆರೆದುಕೊಳ್ಳುವ ಅನಿವಾರ್ಯ ಎದುರಾಯಿತು. ಭಾರತೀಯ ಪ್ರಸಾರ ಆಕಾಶದಲ್ಲಿ ಮೊದಲ ಐವತ್ತು ವರ್ಷಗಳ ರೀತಿ ಒಂದಾದರೆ, ನಂತರದ ದಿನಗಳ ಬೆಳವಣಿಗೆ ಬಹಳ ಭಿನ್ನ ಎಂದೇ ಹೇಳಬೇಕಾಗುತ್ತದೆ. ಈಗಲೂ ಆಕಾಶವಾಣಿ ಇದೆಯಾ? ರೇಡಿಯೋ ಕೇಳುವ ಜನ ಇದ್ದಾರಾ ಎಂದು ಕೇಳುವ “ಅತಿ ಪ್ರಬುದ್ಧ” ಮಂದಿ ಒಂದು ಕಡೆ. ರೇಡಿಯೋ ಕೇಂದ್ರ ಮುಚ್ಚುತ್ತಿದ್ದಾರೆ, ಅನ್ಯಾಯ ಆಗುತ್ತಿದೆ, ಎಂದು ಚಳುವಳಿ ಹೂಡುವ “ಬುದ್ಧಿವಂತ” ಆಕಾಶವಾಣಿ ಪ್ರೇಮಿಗಳು ಮತ್ತೊಂದು ಕಡೆ. ಎರಡರ ನಡುವೆ ಒಂದು ಸಮತೋಲನ ಸಾಧಿಸುವ, ಎರಡೂ ಧೃವ ಗಳನ್ನೂ ಮೇಳೈಸುವ ಒಂದು “ನವಪಲ್ಲವಿ” ಮೂಡಿಸುವ ಕಾಲ ಸನ್ನಿಹಿತವಾಗಿದೆ. 24 ಗಂಟೆ ಪ್ರಸಾರ ನಿರ್ವಹಿಸುತ್ತಿದ್ದ ಆಕಾಶವಾಣಿಯ ರಾಷ್ಟ್ರೀಯ ವಾಹಿನಿ, 2019ರಲ್ಲಿ ಸ್ಥಗಿತಗೊಂಡಿತು. ಯಾಕೆ? ಖಾಸಗಿ ಕೇಂದ್ರಗಳು ಬೇರೆಯೇ ತಂತ್ರಗಾರಿಕೆ ಅನುಸರಿಸುತ್ತಿವೆ. ಕಾರ್ಯಕ್ರಮ ಸತ್ವ (content) ಮತ್ತು marketing(ಮಾರಾಟ), ಪ್ರಾಯೋಜಕತ್ವ, ವಾಹಿನಿಯೊಂದರ ಆದಾಯ, ಖರ್ಚು ವೆಚ್ಚ, ನಿರ್ವಹಣೆ ಇವೆಲ್ಲ ಈಗ ಪ್ರಧಾನ ಭೂಮಿಕೆಯಲ್ಲಿ. ತಂತ್ರಜ್ಞಾನ ಅಂಗೈಯಲ್ಲಿ.
ಇಂದು, dth. Direct to home. ಉಪಗ್ರಹ ಉಡಾವಣೆ, ಪ್ರಸಾರ ಕ್ಷೇತ್ರದಲ್ಲಿ ಬಹುಮುಖ್ಯ ಪಾತ್ರ ವಹಿಸಿದೆ. ಅಂದು, transmitter, set, ದೊಡ್ಡ ದೊಡ್ಡ ಸ್ಟುಡಿಯೋ, ಅಗತ್ಯ ಇತ್ತು. ಇಂದು mobile ಮೂಲಕ ವಿಶ್ವದ ಯಾವುದೇ ಜಾಗದಿಂದ ಕನ್ನಡ ಆಕಾಶವಾಣಿ ಅಥವಾ ನಿಮ್ಮಿಷ್ಟದ ಕೇಂದ್ರವನ್ನು ಕೇಳಲು ಸಾಧ್ಯವಾಗುತ್ತದೆ. ಹಲವು ಮೀಡಿಯಂ ವೇವ್ ವಾಹಿನಿಗಳು Fm ತಂತ್ರಜ್ಞಾನಕ್ಕೆ ಒಗ್ಗುತ್ತವೆ. ಮುಂದೆ fm ಗಿಂತಲೂ ಚೆಂದ ಎಂದು ಹೇಳಲಾಗುವ drm ತಂತ್ರಜ್ಞಾನ ಅಡಿ ಇಡುತ್ತದೆ. ಎಲ್ಲವೂ ಡಿಜಿಟಲ್ ಆಗಲಿವೆ. ಹಾಗಾಗಿಯೇ ಹೊಸ ಕೇಂದ್ರಗಳು ಹುಟ್ಟುತ್ತವೆ, ಹಳೆಯದೇ ಹೊಸತಾಗಲಿದೆ. ಆಕಾಶವಾಣಿ ತನ್ನದೇ app ಹೊಂದಿದೆ. News on air ಮೂಲಕ ದೇಶದ ಯಾವುದೇ ಭಾಷೆಯ ಯಾವುದೇ ವಾಹಿನಿಯ ಕಾರ್ಯಕ್ರಮ ಕೇಳಲು ಸಾಧ್ಯವಿದೆ. You tube ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಆಕಾಶವಾಣಿ ಪ್ರಚಾರ ಪ್ರಸಾರ ಆರಂಭಿಸಿದೆ. ಹೊಸ ಯುಗದ ಹೊಸ ಸವಾಲುಗಳನ್ನು ಎದುರಿಸಲು ಸನ್ನದ್ಧವಾಗಿದೆ. ಇದಕ್ಕೆ ಸಮೃದ್ಧ ಸ್ವೀಕಾರ ಬೇಕಿದೆ. ನಾವು ಸಾರ್ವಜನಿಕ ಪ್ರಸಾರದ ಇತಿಮಿತಿಗಳನ್ನು ಅರ್ಥ ಮಾಡಿಕೊಂಡು ಹೊಸ ಭಾಷ್ಯವನ್ನೇ ಬರೆಯಬೇಕಿದೆ. ಮತ್ತೊಮ್ಮೆ ಪ್ರಸಾರ ದಿನದ ಶುಭಾಶಯಗಳು.
0 ಪ್ರತಿಕ್ರಿಯೆಗಳು