ರಾಮ ಜಪ ಮಾಡ್ತೀರಿ ಸರಿ, ಆದರೆ…

ಅಭಿಜಿತ್ ಬಾಲಕೃಷ್ಣ ಮುಂಡೆ – ಅಭಿ ಮುಂಡೆ

‘ಸೈಕೋ ಶಾಯರ್’ ಎಂದೇ ಜನಪ್ರಿಯವಾದವರು ಅಭಿ ಮುಂಡೆ. ಹಿಂದಿ ಕವಿ. ಅತ್ಯಂತ ಪ್ರಬಲವಾದ ಪ್ರತಿಭಟನಾ ಕಾವ್ಯಕ್ಕೆ ಹೆಸರು ವಾಸಿಯಾಗಿದ್ದಾರೆ.  ಶೋಷಿತ ಸಮುದಾಯದ ಕುರಿತ ಕವನಗಳನ್ನು ತೀವ್ರವಾಗಿ ರಚಿಸುವ ಅಭಿ ಮುಂಡೆ, ರಾಮಾಯಣದ ಶಂಭೂಕ, ಮಹಾಭಾರತದ ಕರ್ಣ ಇತ್ಯಾದಿ ಹಳೆಯ (ಶೋಷಿತ) ಪಾತ್ರಗಳ ಬಗ್ಗೆ ಅಲ್ಲದೆ ವರ್ತಮಾನದ ಘಟನೆಗಳನ್ನೂ ಕುರಿತ ಕವನಗಳನ್ನು ರಚಿಸಿದ್ದಾರೆ.

ಅದನ್ನು ನಾಟಕೀಯವಾಗಿ ವಾಚಿಸುವ ಸೈಕೋ ಶಾಯರ್ ಗೆ ಸಿಕ್ಕಾಪಟ್ಟೆ (272 ಲಕ್ಷ) ಹಿಂಬಾಲಕರಿದ್ದಾರೆ.

ಈಚೆಗೆ ರಾಮನ ಕುರಿತಾದ ಆತನ ವಿಡಿಯೋಗಳು ವೈರಲ್ ಆಗಿವೆ.  ಇದೊಂದು ಅಂಥದ್ದೇ ವಿಡಿಯೋ. ಕನ್ನಡಕ್ಕೆ ಅನುವಾದ ಮಾಡಿದರೂ ಹಿಂದಿಯ ಮೂಲದ ಧ್ವನಿ ತರುವುದು ಕಷ್ಟ. ಅರ್ಥಕ್ಕೆ ಪ್ರಾಧಾನ್ಯತೆ ಕೊಟ್ಟಿದ್ದರಿಂದಾಗಿ ಕನ್ನಡದಲ್ಲಿ ಲಯ ಮತ್ತು ಪ್ರಾಸ ಹಿಂದೆ ಬಿದ್ದಿದೆ. ವಿಡಿಯೋವನ್ನು ನೋಡಿಕೊಂಡು ಕನ್ನಡವನ್ನು ಓದಿಕೊಳ್ಳಬಹುದು.

ರಾಮ

ಅನುವಾದ: ಪ್ರತಿಭಾ ನಂದಕುಮಾರ್

**

ಹತ್ತು ಎಣಿಸುತ್ತೇನೆ

ರಾಮ ಎಂದು ಬರೆದಾಕ್ಷಣ, ಕೇಳಿಸಿದಾಕ್ಷಣ, ನೋಡಿದ ತಕ್ಷಣ

ಅಥವಾ ಕಾಣಿಸಿದ ತಕ್ಷಣ

ಮನದಲ್ಲಿ ಬರುವ ಮೊದಲ ವಿಚಾರವನ್ನು

ನಾಲಿಗೆಯ ಮೇಲಿಟ್ಟುಕೊಳ್ಳಿ, ಕೇಳತೀನಿ

ಒಂದು … ಎರಡು … ಮೂರು … ನಾಲ್ಕು… ಐದು… ಆರು… ಏಳು… ಎಂಟು… ಒಂಭತ್ತು

ಒಂಭತ್ತು…ಒಂಭತ್ತು.. ಒಂಭತ್ತು

ಕೈ ಕತ್ತರಿಸಿ ಕೊಟ್ಟು ಬಿಡ್ತೀನಿ

ಈ ಹೆಸರು ನಿಮಗರ್ಥವಾದರೇ.

ಎಷ್ಟು ಕಷ್ಟ ಗೊತ್ತೇ

ಒಂದು ಪಕ್ಷ ರಾಮ ಅರ್ಥವಾಗಿಬಿಟ್ಟರೇ!

ಅಲ್ಲಾ, ರಾಮ ಜಪ ಮಾಡ್ತೀರಿ ಸರಿ ಆದರೆ

ಸಹಿಸಬೇಕಾಗುತ್ತದೆ ರಾಮನಿಗೆ ಬಂದಂಥ ದುಃಖವನ್ನೂ

ಮೊದಲ ಸವಾಲು ಇದಾಗುತ್ತದೆ

ಮರ್ಯಾದೆಯಿಂದ ಇರಬೇಕಾಗುತ್ತದೆ.

ಮರ್ಯಾದೆಯಿಂದ ಇರೋದೆಂದರೆ ವಿಶೇಷವೇನಿಲ್ಲ

ತ್ಯಾಗವನ್ನು ಅಪ್ಪಿಕೊಳ್ಳಬೇಕಾಗುತ್ತದೆ

ಅಹಂಕಾರವನ್ನು ಸುಡಬೇಕಾಗುತ್ತದೆ, ಇಷ್ಟೇ.

ಮತ್ತೆ ನಿಮ್ಮ ರಾಮನಿಗಾಗಿ ಇಷ್ಟನ್ನಾದರೂ ಮಾಡಲಾಗುವುದಿಲ್ಲವೇ?

ಮತ್ತೆ ಶಬರಿಯ ಎಂಜಲು ತಿಂದರೆ ಮಾತ್ರ

ಪುರುಷೋತ್ತಮನೆನ್ನಿಸಿಕೊಳ್ತೀರಾ.

ಕಾಮ ಕ್ರೋಧಗಳ ಸುಳಿಯಲ್ಲಿದ್ದೂ ತಣ್ಣಗಿರಬೇಕಾಗುತ್ತದೆ

ಬುದ್ಧ ಮರದ ನೆರಳಲ್ಲಿ ಕೂತ ಹಾಗೇ ಆಲದ ಮರವಾಗಬೇಕು

ಇದೆಲ್ಲ ಆಗಬೇಕು, ಮಾಡಬೇಕು ಜೊತೆಗೆ ಇನ್ನಷ್ಟು, ಅದೂ ಶೂನ್ಯದಲ್ಲಿದ್ದುಕೊಂಡು.

ಆಗಲೇ ಅರ್ಥವಾಗಲು ಸಾಧ್ಯ ಎಂತಹ  ಅದ್ಭುತ ನಮ್ಮಯ ರಾಮ

ನಾನ್ಯಾರೆಂದು ಯೋಚಿಸುತ್ತಿರುವಿರಾ?

ಸರಿ, ನಡೀರಿ, ಹೇಳೇ ಬಿಡುವೆ.

ನೀವೇ ನನಗೆ ಹೆಸರಿಟ್ಟಿರಿ

ಹುಚ್ಚ ಅಂತ ಕರೀತಾರೆ ನನ್ನ.

ಇಲ್ಲಿಗೆ ಹೊಸಬ ಯಾರನ್ನೂ ಮೊದಲು ನೋಡಿಲ್ಲ

ಹೇಳಬೇಕೆಂದರೆ ತ್ರೇತಾಯುಗದವನು ನನ್ನನ್ನು ಕೃಷ್ …

ಬಿಡಿ… ಯಾರೋ ಕಲಿಯುಗಕ್ಕೆ ಕಳಿಸಿದರು.

ಸ್ವಾಮಿ, ಸುದ್ದಿ ಅಲ್ಲೀತನಕ ಮುಟ್ಟಿದೆ

ಇಲ್ಲೇನೋ ಮಂಗಳ ಕಾರ್ಯ ನಡೆಯಲಿದೆಯಂತೆ

ಭರತನಿಂದಾಗಿ ಭಾರತವಾದ ದೇಶದಲ್ಲಿ

ಶ್ರೀರಾಮ ಬರುವರಂತೆ, ಕೇಳ್ಪಟ್ಟೆ.  

ನೀವೆಷ್ಟು ಭಾಗ್ಯಶಾಲಿಗಳು

ಅಲ್ಲೂ ಜನ ಇದನ್ನೇ ಹೇಳುತ್ತಾರೆ

ನಾವೇನೋ ರಾಮರಾಜ್ಯದಲ್ಲೇನೋ ಇರುತ್ತಿದ್ವಿ ಆದರೆ

ನಿಮ್ಮೆಲ್ಲರಲ್ಲಿ ರಾಮನೇ ಅಡಗಿದ್ದಾನೆ ಅಂದರೆ

ನಿಮ್ಮೆಲ್ಲರಲ್ಲಿ ನೆಲೆಸಲು ರಾಮ ಬರುತ್ತಿದ್ದಾನೆ ಅಂದರೆ

ಸುದ್ದಿ ಸುಳ್ಳೋ ನಿಜವೋ ತಿಳಿಯದು

ನಿಜವಾಗಿದ್ದರೆ ಏನು ಹೇಳಲಿ

ಹಾಗಾದರೆ ಎಲ್ಲರಿಗೂ ರಾಮ ಗೊತ್ತೇ ಇದೆ

ಮನೆಯ ಹಿರಿಯರು ಹೇಳಿರ್ತಾರೆ  

ಹಾಗಾದ್ರೆ ಹೇಳಿ

ಹೇಳಿ

ರಾಮ ಅಂದರೆ ಏನು?

ರಾಮ ಅಂದರೆ ಏನು?

ಹೇಳಿ

ಅರೇ ಗೊತ್ತಿದೆ ನಿಮಗೆ ರಾಮ ಯಾರು

ಅದೇ ಆ ಏಳು ಬಿಲ್ಲನ್ನು ಭದ್ರ ಎಳೆದು ಕಟ್ಟಿ

ಕಾಡಲ್ಲಿ ಕಾಲ ಕಳೆದು

ಅಥವಾ ರಾವಣ ಹೇಗೆ ಇವನ ತಮ್ಮ ಲಕ್ಷ್ಮಣನನ್ನು ಹೊಡೆದ

ಇವನ ಹೆಂಡತಿ ಸೀತಾಮಾತೆ

ಹಾಗಾದರೆ ಇದೂ ಅದೇ ಥರದ ಕಥೆ

ಒಬ್ಬ ರಾಜ ಇದ್ದ ಒಬ್ಬಳು ರಾಣಿ ಇದ್ದಳು

ನಿಜಕ್ಕೂ ನಿಮಗೆ ರಾಮ ಗೊತ್ತೇ?

ಅಥವಾ ಅದನ್ನೂ ನಾನೇ ಬಂದು ಹೇಳಬೇಕೇ?

ಬಹಳ ದಿನಗಳಿಂದ ಇಲ್ಲಿದ್ದೇನೆ

ಎಲ್ಲಾ ನೋಡುತ್ತಿದ್ದೇನೆ ಆವತ್ತಿಂದ.

ನಮ್ಮ ಪ್ರಭುವನ್ನು ಸಂಧಿಸಲು ಬಂದೆ

ಅವನನ್ನು ಬಿಟ್ಟು ಮಿಕ್ಕೆಲ್ಲರನ್ನು ಕಂಡೆ.

ಒಂದು ಮಾತು ಹೇಳ್ತಿನಿ, ತಪ್ಪು ತಿಳಿಯಬೇಡಿ

ಇಲ್ಲಾ, ನೀವು ಬಹಳ ಬೇಗ ಸಿಟ್ಟಾಗುತ್ತೀರಿ,

ನನ್ನ ಮಾತು ಕೇಳಿಸಿಕೊಳ್ಳುವುದಿಲ್ಲ ಪೂರಾ

ಮನೆಯೊಳಗೇ ನುಗ್ಗುತ್ತೀರಿ ಸೀದಾ

ಈಚೆಗೆ ನಿಮ್ಮ ನಾಮಸ್ಮರಣೆಯಲ್ಲಿ ಮೊದಲಿನ

ಅಪ್ಯಾಯತೆ ಇಲ್ಲ

ನಿಮ್ಮ ನಾಮ ಸ್ಮರಣೆಯಲ್ಲಿ ಮೊದಲಿನ ಆರಾಮವಿಲ್ಲ

ಜಬರ್ದಸ್ತಿನ ಜೈ ಶ್ರೀರಾಮ್ ನಲ್ಲಿ ಎಲ್ಲಾ ಇದೇ, ಆದರೆ ರಾಮನಿಲ್ಲ.

ಈ ರಾಜಕಾರಣದ ಎಡ ಬಲ, ಮನಸ್ಸಿದ್ದಷ್ಟು ಆಡಿ,

ಅದೇ ಎಡ ಬಲ..

ನಿಮ್ಮ ವರ್ತಮಾನದ ಭಾಷೆಯಲ್ಲಿ ಏನಂತೀರಿ

ಲೆಫ್ಟ್ ಅಂಡ್ ರೈಟ್

ಈ ರಾಜಕಾರಣದ ಎಡಬಲದಲ್ಲಿ ನಿಮ್ಮ ಮನಸೋ ಇಚ್ಛೆ ಆಡಿರಿ

ಆದರೆ ನನ್ನ ತಂಟೆಗೆ ಬರಬೇಡಿ

ಸ್ವಾರ್ಥಕ್ಕೆ ಯಾರಾದರೂ ರಾಮನಾಮ ಜಪಿಸಿದರೆ

ಹುಷಾರ್ ನನ್ನ ರಾಮನನ್ನು ವಿಭಜಿಸಿ ಹಂಚಿದರೆ

ಭರತಭೂಮಿಯ ಕವಿ ನಾನು

ಅದಕ್ಕೇ ಭಯವಿಲ್ಲದೆ ಹೇಳುತ್ತಿರುವೆ

ನನ್ನ ಸಕಲ ರಚನೆಯಲ್ಲಿ ರಾಮನಿದ್ದಾನೆ

ನಾನಿರುವೆ ಭಜರಂಗದಲ್ಲಿ

ಭಾರತದ ಸತ್ವ ಕವಿತೆಯಲ್ಲಿದೆ 

ನಮ್ಮ ಮಾತಲ್ಲಿ ಸತ್ಯವಿದೆ

ಅದಕ್ಕೇ ನಮ್ಮ ಲೇಖನಿ ಹರಿತ

ನಮ್ಮ ಕೈಯಲ್ಲಿ ಸಾಹಿತ್ಯ

ಸ್ವಲ್ಪ ಯೋಚಿಸಿ ಹೇಳಿರಿ ರಾಮನ ಹೆಸರು

ಇದೇನು ಬರಿ ಆವೇಶದ ಘೋಷಣೆಯಲ್ಲ

ಎಲ್ಲಿಯವರೆಗೆ ನಿಮ್ಮ ಹೃದಯದಲ್ಲಿ ರಾಮನಿಲ್ಲವೋ

ಅಲ್ಲಿಯವರೆಗೆ ಕರೆಯಲಾರಿರಿ ನೀವು ರಾಮನ ಹೆಸರು

ರಾಮ ಕೃಷ್ಣರ ಪ್ರತಿಭೆಯ ಬಗ್ಗೆ

ಮೊದಲೇ ಎದ್ದಿತ್ತು ಒಂದು ಸವಾಲು

ಆ ಲಂಕೆ ಮತ್ತು ಕುರುಕ್ಷೇತ್ರ

ಸುಮ್ಮ ಸುಮ್ಮನಾಯಿತೇ ಕೆಂಪು?

ಪ್ರಸನ್ನನಾಗಿ ಮುಗುಳ್ನಗಲೂ ಬೇಕು ಕ್ಷಣಕ್ಷಣ ಅಳಲೂ ಬೇಕು

ಸಕಲವನ್ನೂ ಪಡೆದುಕೊಂಡು ನಂತರ ಎಲ್ಲವನ್ನು ಕಳೆದುಕೊಂಡು

ರಾಮ ರಾಮ

ಬ್ರಹ್ಮನ ಕುಲದವನು ಕಾಡಲ್ಲಿ ಮಲಗಿದನು

ಗೆಲುವಿನ ಸಂಭ್ರಮ ಬಿಟ್ಟು ರಾವಣನ ಸಾವಿಗೆ ಮರುಗಿದನು

ಶಿವನೇ ಇವನ ಸೇವೆಗೆ ಮಾರುತಿಯಂತೆ ರೂಪವ ತಾಳಿ

ಶೇಷನಾಗ ಸ್ವಯಂ ಲಕ್ಷ್ಮಣನಾಗಿ ಇವನ ರಕ್ಷಕನಾಗಿ

ನೀವು ನೋಡಿದರೆ ಅಹಂಕಾರ ಛಲ ಕಪಟತನವನ್ನಪ್ಪಿಕೊಂಡು ಮಲಗಿ

ಮತ್ತೆ ಹೇಗವನ ಭಕ್ತನಾಗುವಿರಿ?

ರಾಮನನ್ನು ಹೇಗೆ ಅರಿಯುವಿರಿ?

ಅರ್ಪಣೆಯೆಂದರೆ ತಿಳಿದೇ ಇಲ್ಲ ಶಿವನ ವರದಾನ ಬೇಕಂತೀರಿ

ಬ್ರಹ್ಮನ ಜ್ಞಾನವಿಲ್ಲ ಇವರಿಗೆ ಭಕ್ತ ಸ್ವಯಂ ಹನುಮಂತ ಬೇಕಂತೆ

ಭಾಗವಾ ಏನೆಂದು ಗೊತ್ತೇ ಇಲ್ಲಾ, ಹಾರಿಸುವ ತುಡಿತ ಎಲ್ಲರಿಗೆ

ನಿಜಕ್ಕೂ ಭಾಗವಾ ಹೊದ್ದು ಮಲಗಿದವನಿಗೇ ಗೊತ್ತು ಅದರ ಬಗ್ಗೆ  

ರಾಮನನ್ನು ನೋಡಬೇಕು ರಾಮನನ್ನು ನೋಡಬೇಕು

ರಾಮನನ್ನು ನೋಡಬೇಕೆ ನೀವು?

ಖಂಡಿತಾ ಹೋಗಿರಿ ಮಂದಿರಕ್ಕೆ

ಅದಕ್ಕೆ ಮೊದಲು ನಿಮ್ಮೊಳಹೊಕ್ಕು ಕರೆತನ್ನಿ ರಾಮನನ್ನು.   

ಜೈ ಸೀತಾರಾಮ

ಹಾ… ಅವಧಪುರಿಯ ಉತ್ಸವವಿದೆ

ಯಾವ ಕೊರೆಯೂ ಇಲ್ಲದಂತೆ  

ಸುಗಮವಾಗಲಿ ಸಂಭ್ರಮಾಚರಣೆ.

ನನ್ನ ಪ್ರಭು ಬರುತ್ತಿದ್ದಾರೆ

ಸಿಂಗಾರಗೊಳ್ಳಲಿ ಅವನ ರಥ.

ದ್ವಾಪರದಲ್ಲಿ ಕೆಲವರು ಕಾದಿದ್ದಾರೆ

ಅವರನ್ನು ನಾನು ಹೋಗಿ ಕರೆತರಬೇಕಿದೆ

ನಾನೂ ಅಯೋಧ್ಯೆಗೆ ಬರಬೇಕಿದೆ

ಸರಿ ಮತ್ತೆ ಸಿಗೋಣಾ

ಮತ್ತೆ ಜೈ ಸೀತಾರಾಮ

***

‍ಲೇಖಕರು avadhi

January 8, 2024

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಇಳೆಯ ಬೆಂಕಿಯನು ತಣಿಸಿಬಿಡಬಹುದಾದರೆ..

ಇಳೆಯ ಬೆಂಕಿಯನು ತಣಿಸಿಬಿಡಬಹುದಾದರೆ..

ಬಿ ಎಸ್ ದಿನಮಣಿ ** ನೆತ್ತಿಗೇರಿದ ಕಡುಕೋಪಇನ್ನೇನು ಸ್ಫೋಟಿಸಿಅನಾಹುತವಾಗಬೇಕುಪ್ರೀತಿಸುವ ಜೀವದ ಸಣ್ಣ ಒಂದು ಮುತ್ತುಅದನ್ನು ಜರ್ರನೆ...

ತಪ್ಪಿ ಬರುವ ಕನಸಿಗೊ ಬಣ್ಣವೆ ಇಲ್ಲ..

ತಪ್ಪಿ ಬರುವ ಕನಸಿಗೊ ಬಣ್ಣವೆ ಇಲ್ಲ..

ಸರೋಜಿನಿ ಪಡಸಲಗಿ ** ಕನಸುಗಳಿಗೆ ಮುನಿಸೇ ಸುಳಿವಿಲ್ಲ  ಅಚ್ಚರಿ ಮನಸೂ ಅತ್ತ ಹೋಗ್ತಿಲ್ಲ ಏನಾಯ್ತು ಗಡಬಡ ಯಾಕೀ ಮೌನ  ಬುದ್ಧಿ ಪೂರಾ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This