ರಾಮ್ ಜೇಠ್ಮಲಾನಿ ಕವಿತೆ: ಆತ್ಮಸಾಕ್ಷಿಯ ಸಾವು


ರಾಮ್ ಜೇಠ್ಮಲಾನಿ

ಕನ್ನಡಕ್ಕೆ: ಸುಧಾ ಆಡುಕಳ

ಕೆಲವೊಮ್ಮೆ ರಾತ್ತಿಯ ಕತ್ತಲಲ್ಲಿ
ನಾನು ನನ್ನ ಆತ್ಮಸಾಕ್ಷಿಯನ್ನು ಸ್ಪರ್ಶಿಸುತ್ತೇನೆ
ಅದು ಇನ್ನೂ ಉಸಿರಾಡುತ್ತಿದೆಯೇ?
ದಿನದಿಂದ ದಿನಕ್ಕದು ನಿಧಾನ ಸಾಯುತ್ತಿದೆ…

ನಾನೊಂದು ಐಷಾರಾಮಿ ಹೋಟೆಲಿನಲ್ಲಿ
ಸುಗ್ರಾಸ ಭೋಜನಕ್ಕಾಗಿ ಕಾದಿರುವಾಗ
ನನಗೆ ನೆನಪಾಗುತ್ತದೆ ಅದರ ಬೆಲೆ
ಬಾಗಿಲು ಕಾಯುವನ ಒಂದು ತಿಂಗಳ ಸಂಬಳಕ್ಕೆ ಸಮ
ಥಟ್ಟನೆ ನಾನು ದೂರ ಸರಿಯಬೇಕೆನಿಸುತ್ತದೆ
ಆತ್ಮಸಾಕ್ಷಿ ಕೊಂಚವೇ ಸಾಯುತ್ತದೆ…

ನಾನು ವ್ಯಾಪಾರಿಯಲ್ಲಿ ತರಕಾರಿ ಖರೀದಿಸುವಾಗ
ಅವನ ಪುಟ್ಟಮಗ ಚೋಟು ಆಲೂಗಡ್ಡೆ ತೂಕ ಮಾಡುತ್ತಿರುತ್ತಾನೆ
ಚೋಟು ಶಾಲೆಯಲ್ಲಿರಬೇಕಾದ ವಯಸ್ಸಿನ ಹುಡುಗ
ನಾನು ಬೇರೆ ದಾರಿ ಹಿಡಿಯುತ್ತೇನೆ
ಆತ್ಮಸಾಕ್ಷಿ ಕೊಂಚವೇ ಸಾಯುತ್ತದೆ…

 

ನಾನು ಚಂದದ ಉಡುಪುಗಳನ್ನು ಹೊಲಿಸುತ್ತಿರುವಾಗ
ಅವು ದುಬಾರಿಯವೂ ಕೂಡಾ ಆಗಿರುತ್ತವೆ
ಆಗೊಬ್ಬಳು ಹೆಣ್ಣುಮಗಳು ಕಾಣಿಸುತ್ತಾಳೆ
ತನ್ನ ಚಿಂದಿ ಬಟ್ಟೆಯಲ್ಲಿ ಮೈಮುಚ್ಚಿಕೊಳ್ಳಲು ಹೆಣಗುತ್ತಾ
ನಾನು ನನ್ನ ಕಿಟಕಿಯನ್ನು ಮುಚ್ಚುತ್ತೇನೆ
ಆತ್ಮಸಾಕ್ಷಿ ಕೊಂಚವೇ ಸಾಯುತ್ತದೆ…

ನಾನು ನನ್ನ ಮಕ್ಕಳಿಗೆ ದುಬಾರಿ ಆಟಿಗೆಗಳನ್ನು ಕೊಳ್ಳುವಾಗ
ದಾರಿಯಲ್ಲಿ ಹರಿದ ಬಟ್ಟೆಯ ಮಕ್ಕಳನ್ನು ನೋಡುತ್ತೇನೆ
ಖಾಲಿ ಹೊಟ್ಟೆ, ಹಸಿದ ಕಣ್ಣುಗಳೊಡನೆ
ಕೆಂಪು ದೀಪಗಳಡಿಯಲ್ಲಿ ಆಟಿಗೆಗಳ ಮಾರುತ್ತಾ
ನಾನು ನನ್ನ ಆತ್ಮಸಾಕ್ಷಿಯನ್ನು ಜೀವಂತವಾಗಿಡಲು
ಕೆಲವನ್ನು ಖರೀದಿಸುತ್ತೇನೆ ಅವರಿಂದಲೂ
ಆದರೂ ಅದು ಕೊಂಚ ಸಾಯುತ್ತದೆ…

ನನ್ನ ಮನೆಯ ಕೆಲಸದವಳು ಹುಷಾರಿಲ್ಲವೆಂದು
ಮಗಳನ್ನು ಕಳಿಸುತ್ತಾಳೆ, ಶಾಲೆಗೆ ರಜೆ ಮಾಡಿಸಿ
ಬೇಡವೆಂದು ಹೇಳಿ ಮರಳಿ ಕಳಿಸಬೇಕೆಂದುಕೊಳ್ಳುವಾಗಲೇ
ಸಿಂಕಿನಲ್ಲಿ ತುಂಬಿರುವ ಪಾತ್ರೆಗಳು ಮತ್ತು ಕೊಳೆಬಟ್ಟೆಗಳು
ನೆನಪಾಗುತ್ತವೆ ನಾಲ್ಕಾರು ದಿನಗಳಿಗಲ್ಲವೆ?
ಸಮಜಾಯಿಸಿ ಕೊಟ್ಟುಕೊಳ್ಳುತ್ತೇನೆ
ಆತ್ಮಸಾಕ್ಷಿ ಕೊಂಚವೇ ಸಾಯುತ್ತದೆ…

ಮಗುವೊಂದರ ರೇಪ್ ಅಥವಾ ಕೊಲೆಯಾದ ಸುದ್ದಿ ಕೇಳಿದಾಗ
ಬೇಸರವಾಗುತ್ತದೆ… ನನ್ನ ಮಗುವಲ್ಲವಲ್ಲ!
ಕೊಂಚ ಸಮಾಧಾನವೂ…
ಕನ್ನಡಿಯಲ್ಲಿ ಮುಖ ನೋಡಲಾರೆ ನಾನು
ಆತ್ಮಸಾಕ್ಷಿ ಕೊಂಚವೇ ಸಾಯುತ್ತದೆ…

ಜನರೆಲ್ಲ ತಮ್ಮ ಧರ್ಮ, ಜನಾಂಗ, ಜಾತಿಗಾಗಿ ಹೋರಾಡುವಾಗ
ನನ್ನ ದೇಶ ವಿನಾಶದ ಅಂಚಿಗೆ ಸಾಗುತ್ತಿದೆ ಎಂದು ಹೇಳುತ್ತೇನೆ
ಎಲ್ಲದಕ್ಕೂ ಭ್ರಷ್ಟ ರಾಜಕಾರಣಿಗಳನ್ನು ಹೊಣೆಮಾಡಿ ಹಗುರಾಗುವಾಗ
ಆತ್ಮಸಾಕ್ಷಿ ಕೊಂಚವೇ ಸಾಯುತ್ತದೆ…

ಇಡಿಯ ಪಟ್ಟಣವೇ ಉಸಿರುಗಟ್ಟುತ್ತಿರುವಾಗ
ಹೊಗೆ ತುಂಬಿ ಉಸಿರಾಡಲು ಹೆಣಗುತ್ತಿರುವಾಗ
ನನ್ನ ಕಾರು ಮಾತ್ರ ದಿನವೂ ಸವಾರಿ ಹೊರಡುತ್ತದೆ
ಸಮೂಹ ಸಾರಿಗೆ ಬಳಸಬೇಕೆನಿಸಿದರೂ…
ಒಂದು ಕಾರಿನಿಂದೇನು ಮಹಾ ಮಾಲಿನ್ಯವಾದೀತು ಎನ್ನುತ್ತಲೇ
ನನ್ನ ಆತ್ಮಸಾಕ್ಷಿ ಕೊಂಚವೇ ಸಾಯುತ್ತದೆ…

ಹೀಗಾಗಿ…
ರಾತ್ರಿಯ ಕತ್ತಲೆಯಲ್ಲಿ ನನ್ನ ಆತ್ಮಸಾಕ್ಷಿಯನು ಸ್ಪರ್ಶಿಸಿದಾಗ
ಅದು ಇನ್ನೂ ಉಸಿರಾಡುತ್ತಿರುವುದೇ ಅಚ್ಚರಿಯೆನಿಸುತ್ತದೆ!
ಯಾಕೆಂದರೆ…
ನಾನೇ ನನ್ನ ಕೈಯ್ಯಾರೆ ಅದನ್ನು ಇಂಚಿಂಚಾಗಿ ಕೊಲ್ಲುತ್ತಿರುತ್ತೇನೆ…
ಸಮಾಧಿ ಮಾಡುತ್ತಿರುತ್ತೇನೆ..!

‍ಲೇಖಕರು nalike

August 5, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

10 ಪ್ರತಿಕ್ರಿಯೆಗಳು

 1. Prakash N.

  ಜೇಠ್ಮಲಾನಿ ಕವಿಗಳೆಂದು ಗೊತ್ತಿರಲಿಲ್ಲ. ಚೆನ್ನಾಗಿ ಬಂದಿದೆ.

  ಪ್ರತಿಕ್ರಿಯೆ
  • Deepak Kumar Meti

   ಬಹಳ ಸುಂದರ ಕವಿತೆ. ಅನುವಾದ ಅನಿಸಲಿಲ್ಲ, ಕನ್ನಡದ್ದೇ ಕವಿತೆ ಅನ್ನಿಸಿತು.

   ಪ್ರತಿಕ್ರಿಯೆ
 2. T S SHRAVANA KUMARI

  ತುಂಬಾ ಚೆನ್ನಾದ ಕವಿತೆ. ಇಷ್ಟವಾಯಿತು.

  ಪ್ರತಿಕ್ರಿಯೆ
 3. reader verifier

  Dear author, editor, had you tried to do your job in the fullest and searched a bit a bit to find out the original poem before posting this out, you would know that its a fakenews to say that jetmalani wrote this poem – one that was busted an year back or so. One Rashmi Trivedi is its original aughor. Not the jootmalani guy.

  ಪ್ರತಿಕ್ರಿಯೆ

ಇದಕ್ಕೆ ಪ್ರತಿಕ್ರಿಯೆ ನೀಡಿ reader verifierCancel reply

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: