ರಾಜೇಶ್ವರಿ ಹುಲ್ಲೇನಹಳ್ಳಿ ಕಥೆ- ಸಾಲವನು ಉಂಬಾಗ…

ರಾಜೇಶ್ವರಿ ಹುಲ್ಲೇನಹಳ್ಳಿ

ಶಿವಸ್ವಾಮಿಯವರು ಕೆಲಸ ಮಾಡುತ್ತಿದ್ದುದು ಒಂದು ಜಿಲ್ಲಾ ಸಹಕಾರಿ ಕೇಂದ್ರ ಬ್ಯಾಂಕ್. ಸಹಕಾರಿ ಬ್ಯಾಂಕುಗಳೆಂದ ಮೇಲೆ ಹಳ್ಳಿಯ ರೈತರ ಲೇವಾದೇವಿಯೇ ಹೆಚ್ಚಿತ್ತು. ಬ್ಯಾಂಕಿನಲ್ಲಿ ಗ್ರಾಹಕರ ಹಲವಾರು ಹಾಸ್ಯ ಘಟನೆಗಳು ನೆಡೆಯುತ್ತಿದ್ದುದು ಸರ್ವೇಸಾಮಾನ್ಯವಾಗಿತ್ತು. ಹಾಗೇ ಅದನ್ನು ಮನೆಯಲ್ಲಿ ಹೆಂಡತಿ ಮಕ್ಕಳೊಂದಿಗೆ ಹಂಚಿಕೊಳ್ಳುವುದು ಸಹ ನಡೆಯುತ್ತಿತ್ತು.

ಅಂದು ಸಂಜೆ ಬ್ಯಾಂಕಿನಿಂದ ಬಂದ ಶಿವಸ್ವಾಮಿಯವರು ತಮ್ಮಷ್ಟಕ್ಕೆ ತಾವೇ ನಗುತ್ತಿದ್ದರು. ಜಯಾಳಿಗೋ ಅಚ್ಚರಿ! ಏನಪ್ಪಾ ಇದು ತಮ್ಮಷ್ಟಕ್ಕೆ ತಾವೇ ನಗುತ್ತಿದ್ದಾರೆ ಅಂದಮೇಲೆ ನಿಜವಾಗಿ ಇವತ್ತೂ ಬ್ಯಾಂಕಲ್ಲಿ ಏನೋ ನಗೆಪಾಟಲು ನಡೆದಿರಹುದೆನಿಸಿ, ಕಾಫಿ ಕೊಟ್ಟು ಕೇಳೋಣವೆಂದು ಅಡಿಗೆ ಮನೆಗೆ ಹೊರಟಳು. ಅಷ್ಟರಲ್ಲಿ ಕೈಕಾಲು ತೊಳೆದು ಬಟ್ಟೆ ಬದಲಾಯಿಸಿ ಬಂದು ಈಸೀ ಛೇರ್‌ನಲ್ಲಿ ಕುಳಿತ ಯಜಮಾನರಿಗೆ ಕಾಫಿ ಕೊಡುತ್ತಾ ಏನ್ರೀ ಅದು ಒಬ್ಬೊಬ್ಬರೇ ನಗ್ತಿದೀರಲ್ಲಾ ಇವತ್ತೇನಾಯ್ತು ಬ್ಯಾಂಕಲ್ಲಿ ಎಂದಳು. ತಡಿಯೆ ಮಾರಾಯ್ತಿ ಹೇಳ್ತಿನಿ ಎಂದು ಕಾಫೀ ಹೀರುತ್ತಾ ಹೇಳತೊಡಗಿದರು.

ನಮ್ಮ ಸಹಕಾರಿ ಬ್ಯಾಂಕು ಅಂದ್ರೆ ನಿನಗೇ ಗೊತ್ತಲ್ಲಾ ನಮ್ಮ ಗ್ರಾಮೀಣ ರೈತರ ಲೇವಾದೇವಿಯೇ ಹೆಚ್ಚು. ಹಾಗೇ ಬಹಳಷ್ಟು ವರ್ಷಗಳಿಂದಲೂ ಬ್ಯಾಂಕಿನಲ್ಲಿ ಉಳಿತಾಯ ಖಾತೆ ತೆರೆಯದೆ ಒಡವೆಗಳನ್ನು ಇಟ್ಟು ಚಿನ್ನದ ಸಾಲವನ್ನು ಪಡೆಯುವ ವ್ಯವಸ್ಥೆ ಜಾರಿಯಲ್ಲಿದೆ. ಇವತ್ತು ಬೆಳಗ್ಗೇನೆ  ಒಬ್ಬ ರೈತ ಚಿನ್ನದ ಸಾಲ ಮಂಜೂರಾತಿ ವಿಭಾಗದಲ್ಲಿದ್ದ ನನ್ನ ಬಳಿ ಬಂದು ಸಾ ಎಂದ. ಏನಪ್ಪಾ ಎಂದೆ. ಸಾ ಸಾಲ ತಗೋಬೇಕಾಗಿತ್ತು ಎಂದ. ಸಾಲನಾ… ಯಾವ ಸಾಲನಪ್ಪಾ? ಎಂದೊಡನೆ ಸಾ ನನಿಗೆ ವಸಿ ಒಡವೆ ಸಾಲ ಬೇಕಾಗಿತ್ತು ಎಂದ. ಸರಿ ಕೊಡೋಣ ಯಾವ ಊರು? ಎಂದೆ. ನಮ್ಮದು ಇಲ್ಲೇ ಕಸಬಾ ಸಾ ಎಂದ. ಸರಿ ಕಸಬಾದಲ್ಲಿ ಯಾವ ಊರು? ಎಂದೊಡನೆ ಅದೇ ಬನವಾಸೆ ಸಾ ಎಂದ. ಹೌದಾ ಎಂದೊಡನೆ ಸಾಲ ಯಾವಾಗ ಸಿಗುತ್ತೇ ಸಾ? ಎಷ್ಟು ಕೊಡ್ತೀರಾ ಸಾರ್ ಎಂದ.

ನೋಡಪ್ಪಾ ಅದಕ್ಕೆಲ್ಲಾ ಕೆಲವು ರೂಲ್ಸ್ ಪ್ರೊಸೀಜರ್, ಇದೆ ಅದೆಲ್ಲ ಆದಮೇಲೆ ಕೊಡೋದು ಅಂದೆ. ಅದೇನೋ ಹೇಳಿ ಸಾ ಎಂದ. ಏನಿಲ್ಲ ಒಡವೆ ಸಾಲ ಪ್ರತಿ ದಿನ ಕೊಡಲ್ಲ ವಾರದಲ್ಲಿ ಎರೆಡು ದಿನ ಮಾತ್ರ. ನೀವು ಗುರುವಾರ ಒಡವೆ ತಗೊಂಡು ನಿಮ್ಮದೆರೆಡು ಫೋಟೋ ತಗೊಂಡು ಬನ್ನಿ ಎಂದರು. ಸರಿ ತತ್ತೀನಿ ಬುಡಿ, ಸಾ ಎಂದು ಹೊರಟವನು ಮತ್ತೆ ಹಿಂದಿರುಗಿ ಬಂದು, ಒಂದು ಅನುಮಾನ ಕೇಳ್ಬಹುದಾ ಸಾ ಅಂದ. ಕೇಳಪ್ಪಾ ಅದೇನು ಎಂದೆ. ಮತ್ತೆ ನಮ್ಮ ಒಡವಿಗೆ ಗ್ಯಾರೆಂಟಿ ಏನ್ ಕೊಡ್ತೀರಾ? ಅಂದ ಓಹ್ ಸರಿಯಾದ ಪ್ರಶ್ನೆ ಇದು. ನಾವು ಕೊಡೋ ಸಾಲಕ್ಕೆ ಗ್ರಾಹಕರಿಂದ ಏನೆಲ್ಲ ಗ್ಯಾರೆಂಟಿ, ಶ್ಯೂರಿಟಿ ತಗೋತಿವಿ ಚಿನ್ನ ಇಟ್ಕೋತಿವಿ ಅವರ ಒಡವೆಗೆ ನಾವೇನು ಗ್ಯಾರೆಂಟಿ ಕೊಡ್ತೀವಿ? ನಾವು ನಮ್ಮ ಬ್ಯಾಂಕೇ ಗ್ಯಾರೆಂಟಿ ಅಂದ್ಕೊಳ್ತೀವಿ ಅವನು ಕೇಳುತಿರೋದೂ ಸರಿನೇ ಎನಿಸಿ, ನಿನ್ನ ಒಡವೆ ಇಟ್ಟು ಹಣ ಕೊಟ್ಟಿದ್ದಕ್ಕೆ ಒಂದು ರಸೀದಿ ಕೊಡ್ತೀವಿ ಏನೇ ಹೆಚ್ಚು ಕಡಿಮೆಯಾದರೂ ನಿನ್ನ ಒಡವೆ ನಿನಗೆ ವಾಪಸ್ ಕೊಡೋದು ಬ್ಯಾಂಕಿನ ಜವಾಬ್ದಾರಿ ಎಂದೆ.

ಹಾಗೆ ನಮ್ಮ ಬ್ಯಾಂಕಿನ ಲಾಕರ್‌ನಲ್ಲಿ ಜೋಪಾನವಾಗಿ ಇಟ್ಟಿರ‍್ತೀವಿ, ನೀನು ಬಂದು ಸಾಲದ ಹಣ ಬಡ್ಡಿ ಕಟ್ಟಿದ ದಿನ ನಿನ್ನ ಒಡವೆ ವಾಪಸ್ ಕೊಡ್ತೀವಿ ಅಷ್ಟೆ ಎಂದೆ. ಸಾಲವನು ಉಂಬಾಗ ಹಾಲೋಗರ ಉಂಡಂತೆ, ಸಾಲಿಗರು ಬಂದು ಎಳೆವಾಗ ಕಿಬ್ಬದಿಯ ಕೀಲು ಮುರಿದಂತೆ ಸರ್ವಜ್ಞ ಎನ್ನುವ ಪದ್ಯದ ಸಾಲನ್ನು. ಸಾಲವನ್ನು ಕೊಡುವಾಗಲೇ ಕಿಬ್ಬದಿಯ ಕೀಲು ಮುರಿದಂತೆ ಎಂದು ಬದಲಿಸಿಕೊಳ್ಳಬೇಕೆನಿಸಿತು ನನಗೆ.

ಅವನು ಮತ್ತೆ ಅನುಮಾನದಲ್ಲಿ ಸಾ… ಕಳ್ತನ ಗಿಳ್ತನ ಏನೂ ಅಗಕಿಲ್ಲವಾ? ಎಂದ. ನಾವು ನಿನ್ನ ಒಡವೆನ ಲಾಕರ್‌ನಲ್ಲಿಡ್ತೀವಿ. ಲಾಕರ್ ಅಂದ್ರೆ ನಿಮ್ಮನೆ ಬೀರು ಅಂದ್ಕೊಂಡಿದಿಯಾ ಇದು ತುಂಬಾ ಸೇಫ್ಟಿ ಯಾರೂ ಆ ಲಾಕರ್ ಒಡೆಯೋಕೆ ಆಗಲ್ಲ. ಅಕಸ್ಮಾತ್ ಹೊಡೀಬೇಕು ಅಂದ್ರೆ ೨.೩ ದಿನ ಬೇಕಾಗುತ್ತೆ. ಅಂದೆ. ಸರಿ ಸಾ ರಾತ್ರೆ ಹೊತ್ತು ಬ್ಯಾಂಕ್ ಬಾಗ್ಲಾಕ್ಕಂಡೋಗಿರ‍್ತಿರಲ್ಲ ಆಗ ಯಾರಾರು ಕಳ್ಳರು ಗಿಳ್ಳರು ಬಂದ್ರೆ? ನನ್ನ ಒಡವೆ ಬಿಡಿಸ್ಕಳವರಿಗೂ ನಾನೂ ಬಂದು ಇಲ್ಲೆ ನಿಮ್ಮ ಬ್ಯಾಂಕಿನ ಮುಂದೆ ಮಲಗಬೌದಾ ಅಂತಾ… ಅಂದ. ಏಯ್ ಅದಕ್ಕೆ ರಾತ್ರಿ ಹೊತ್ತು ಸೆಕ್ಯೂರಿಟಿ ಗಾರ್ಡ ಕಾವಲ ಇರ‍್ತಾರೆ. ಏನ್ ಮಾತಾಡ್ತಿಯಪ್ಪಾ ನಿನ್ನಂಥ ನೂರಾರು ಜನ ಎಷ್ಟೆಷ್ಟೋ ಲಕ್ಷ ರೂಪಾಯಿನ ಒಡವೆ ಇಟ್ಟಿದಾರೆ ಅವರ‍್ಯಾರೂ ಬಂದು ಇಲ್ಲೇ ಬ್ಯಾಂಕಿನ ಮುಂದೆ ಮಲಗ್ತೀವಿ ಅಂದಿಲ್ಲ, ನೀನೆನಯ್ಯಾ ಹೀಗೆ ಕೇಳ್ತಿಯ ಯಾರಾದ್ರೂ ಕೇಳಿಸ್ಕೊಂಡ್ರೆ ನಕ್ಕಾರು ಹೋಗು ಮಾರಾಯ ಅಂದೆ.

ಸಾ ಎಷ್ಟು ಜನ ಕಾವಲ ಇರ‍್ತಾರೆ ಅಂದ ಒಬ್ಬರು ಎಂದೆ. ಸಾ ಅವ್ನೊಬ್ನೇ ಇರ‍್ತನೆ ಕಳ್ಳರು ಜಾಸ್ತಿ ಜನ ಬಂದ್ರೆ ಏನ್ ಮಾಡ್ತಾನೆ ಅದುಕ್ಕೆ ಅಂಗಂದೆ ಬುಡಿ ಸಾ ಬ್ಯಾಸರಾ ಮಾಡ್ಕಬೇಡಿ ಅಂದ. ಏಯ್ ಕಳ್ಳರು ಬಂದು ಲಾಕರ್ ಮುಟ್ಟಿದ್ರೆ ಸೈರನ್ ಅಗುತ್ತೆ ಪೋಲೀಸು ಬರ‍್ತಾರೆ. ಹಾಗೇನು ಆಗಲ್ಲ ನೀನು ತಲೆ ಕೆಡಿಸ್ಕೋಬೇಡ  ಹೋಗು ನಾನೇಳಿದ್ದೆಲ್ಲಾ ತಗೊಂಡು ಗುರುವಾರ ಬಾ ೨ ಫೋಟೋ ತರೋದು ಮರೀಬೇಡ ಅಂದೆ. ಆತ ಆಗ್ಲೀ ಸಾ ಎಂದು ಹೋದ. ಸರಿ ಇಂಥ ಗಿರಾಕಿಗಳು ದಿನಕ್ಕೆ ಒಂದಿಬ್ರು ಬಂದ್ರೆ ನಮ್ಮ ಬ್ಯಾಂಕಿನ ಕೆಲಸ ಮಾಡಿದಂಗೇ ಸರಿ ಎಂದುಕೊಂಡು ಅವನ ಅನುಮಾನ ಮುಗ್ಧತೆ,ಒಡವೆ ಬಗೆಗಿನ ನಿಗಾ, ನೆನಪಿಸಿಕೊಂಡು ನಗು ಬಂತು.

ಗುರುವಾರ ಬೆಳಗ್ಗೆ ಬ್ಯಾಂಕ್ ಬಾಗಿಲು ತೆರೆದೊಡನೆ ನನ್ನ ಮುಂದೆ ಬಂದು ಒಡವೆ ತಂದಿದಿನಿ ಸಾ ಎಂದ. ಇರಲಿ ಬನ್ನಿ ಕೂತ್ಕೊಂಡಿರಿ ನಮ್ಮ ಅಕ್ಕಸಾಲಿಗರು ಬರಲಿ, ಅವರು ಬಂದ ಮೇಲೆ ತೂಕ ಹಾಕಿಸಿ ಒಡವೆ  ಪರೀಕ್ಷಿಸಿ ಅದಕ್ಕೆ ಎಷ್ಟು ಹಣ ಕೊಡಬಹುದು ಅಂತ ನಿಗದಿ ಮಾಡಿದ ಮೇಲೆ ಹಣ ಕೊಡ್ತೀವಿ ಎಂದು ಅವನಿಂದ ಬೇಕಾದ ಎಲ್ಲಾ ರೆಕಾರ್ಡ್ಸ ಕೇಳಿದೆ ಕೊಟ್ಟ ಅದರಲ್ಲಿ ಫೋಟೋ ಇರಲಿಲ್ಲ. ಸರಿ ಫೋಟೋ ಎಲ್ಲಿ ಅಂದೆ. ಆತ ಕೊಡ್ತೀನಿ ತಗಳಿ ಸಾ ಎಂದು ಒಂದು ದೊಡ್ಡ ಬ್ಯಾಗಿನಿಂದ ಫೋಟೋ ತೆಗೆದು ನನ್ನ ಕೈಗಿತ್ತ.!

ಅದೋ ಕಟ್ಟು ಹಾಕಿಸಿದ ಗೋಡೆ ಮೇಲೆ ನೇತು ಹಾಕುವ ಫೋಟೋ! ನನಗೋ ಬಂದ ನಗುವನ್ನು ತಡೆಯಲಾಗಲಿಲ್ಲ ಒಮ್ಮೆಗೇ ನಗು, ಅಚ್ಚರಿ ಕೋಪ ಎಲ್ಲವೂ. ಅದನ್ನ ಕೈಗೆತ್ತಿಕೊಂಡ ನಾನು ಮೊಳೆ ತರಲಿಲ್ಲವಾ ಅಂದೆ.! ಯಾಕೆ ಸಾ ಅಂದ. ಈ ಫೋಟೋನ ಬ್ಯಾಂಕಿನ ಗೋಡೆಗೆ ನೇತು ಹಾಕೋಕೆ ಅಂದೆ. ಸಾ ಮಳೆ ಇಲ್ಲೇ ಇಲ್ವಾ ಸಾ ಮಳೆ ಇಲ್ಲೇ ಇರ‍್ತವೆ ಅಂತ ಬಂದೆ ಅನ್ನೋದಾ!. ಅವನದು ಮುಗ್ಧತೆಯೋ, ಪೆದ್ದುತನವೋ ಏನೂ ತಿಳಿಯಲಿಲ್ಲ. ಅಯ್ಯೋ ದೇವರೆ ಇದೆಂತಹ ಜನ, ನಾನು ಲೆಡ್ಜರಿಗೆ ಅಂಟಿಸಲು ಪಾಸ್ ಪೋರ‍್ಟ್ ಸೈಜ್ ಫೋಟೊ ತರಲು ಹೇಳಿದರೆ ಈತ ಗೋಡೆ ಮೇಲೆ ನೇತು ಹಾಕೋ ಫೋಟೋ ತಂದಿದಾನಲ್ಲ ಎಂದು ನಾನೆ ತಬ್ಬಿಬ್ಬಾಗಿ, ಆತನನ್ನು ಕೂರಿಸಿ ನಮ್ಮ ಅಟೆಂಡರನ್ನು ಕರೆದು ೩೦ ರೂ ಕೊಟ್ಟು ೫ ನಿಮಿಷದಲ್ಲಿ ಫೋಟೋ ತೆಗೆದು ಕೊಡೋ  ಸ್ಟುಡಿಯೋಗೆ ಕರೆದುಕೊಂಡು ಹೋಗಿ ಫೋಟೋ ತೆಗೆಸಿಕೊಂಡು ಬಾ ಅಂದೆ.

ನಂತರ ೨ ಫೋಟೋ ಇಟ್ಟುಕೊಂಡು ಎಲ್ಲ ಫಾರ್ಮಾಲಿಟೀಸ್ ಮುಗಿಸಿ ಅಡವಿಟ್ಟ ಒಡವೆಯ ಹಣವನ್ನು ಅವನ ಕೈಗೆ ಕೊಟ್ಟು, ಇಲ್ಲೇ ಕೂತು ಸರಿಯಾಗಿ ಎಣಿಸಿಕೋ ಮತ್ತೇನಾದರೂ ವ್ಯತ್ಯಾಸವೆಂದು ಬಂದರೆ ನಾವು ಜವಬ್ದಾರರಲ್ಲ ಎಂದೆ. ಹಣವನ್ನು ಎರೆಡೆರಡು ಬಾರಿ ಎಣಿಸಿ ಬ್ಯಾಗಿನಲ್ಲಿಟ್ಟುಕೊಂಡ ನಂತರ ಸಾ ನನ್ನ ಕಟ್ಟಾಕ್ಸಿರೋ ಫೋಟೊ ನಿಮ್ಮತ್ರನೇ ಅವೆ ಕೊಡಿ ಸಾ ಮರ‍್ತು ಬುಟ್ಟೇನು ಎಂದ!

‍ಲೇಖಕರು Avadhi

June 26, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: