ಪರಾಗ ಸ್ಪರ್ಶ | ಏಳು ಪ್ರೇಮಪದ್ಯಗಳು
ರಾಜೇಂದ್ರ ಪ್ರಸಾದ್
1.
ಒಂದೊಂದು ಹಾಳೆಯ ನಡುವಲ್ಲೂ
ನಿನ್ನ ಬೆರಳ ಹೂ ಘಮದ ಅಂಟು
ನೆತ್ತಿಗೇರಿಸುತ್ತಿದೆ ಅಸಾಧ್ಯದ ಅಮಲು.
ಬಿಡಿಸಿರುವ ಲೆಕ್ಕದ ಸೂತ್ರಗಳೊಳಗೆ
ಎಷ್ಟೊಂದು ಕಗ್ಗಂಟುಗಳು ಕಾಣಿಸುತ್ತಿವೆ!
ಮತ್ತೊಮ್ಮೆ ಸನಿಹ ನಿಂದು ಭುಜವ ಗುದ್ದಿ
ಮುಚ್ಚಿದ ಕಣ್ಣಿನತ್ತ ಉಫ್ ಎಂದು ಉರುಬಿ
ಬಿಡಿಸಿಬಿಡು ಗಂಟುಗಳೊಳಗಾದರೂ ಸಿಕ್ಕೋಣ
ಹುಸಿ ಪೆದ್ದನ ಲೆಕ್ಕಕೆ ಒಲವಿನದೇ ಬಡ್ಡಿದರ.
ಈ ಬೆರಳಚ್ಚಿನ ಪುಸ್ತಕ ಮಾತ್ರ ಇರಲಿ ನನ್ನಲ್ಲೇ,
ಅಂಟಿನ ನೆಪದಲ್ಲಿ ಉಳಿದ ನೆಂಟಸ್ತನದಂತೆ!
2.
ಬರೆದ ಪ್ರೇಮಪತ್ರದ ಹಾಳೆ ತರತರನೇ ನಡುಗುತ್ತಿದೆ
ಉಸಿರೊಳಗೆ ಯಾವುದೋ ಮುಳ್ಳು ಚುಚ್ಚಿದಂತೆ
ಕೈಯಿಂದ ಕೈಗೆ ಬದಲಾಗುತ್ತಾ ಸಾಗುತ್ತಾ ಪ್ರೇಮಸಂದೇಶ.
ಶ್ರೀಕಾರ, ಉಭಯಕುಶಲೋಪರಿ ಸಾಂಪ್ರತ ಇತ್ಯಾದಿ
ಮುಗಿಸಿ ಮುಂದೆ ಕವಿತೆಯ ನಾಲ್ಕು ಕವಲಿನ ಯಾದಿ
ಕೊನೆಯಲ್ಲೊಂದು ಒಲವಿನ ಉಡುಗೊರೆ ;
ಮುತ್ತಿನ ತುಟಿ ಮತ್ತು ಹೃದಯ ರೂಪದ ವಿದ್ಯುದ್ದೀಪ.
ಪತ್ರದೊಳಗೆರಡು ಗುಲಾಬಿ ಹೂವಿನ ಪಕಳೆ ನಕ್ಕಿವೆ
ಹಾಳೆಗಂಟಿದ ಘಮ ಮತ್ತು ಬಣ್ಣ ರಕ್ಕೆ ಕಟ್ಟಿವೆ
ಕೊನೆಯ ಬೆಂಚಿನಾಚೆಗೆ ಪತ್ರ ನೆಗೆದು ಹರಿದಿದೆ
ಇನ್ನೊಂದೇ ಗಳಿಗೆ.. ಪ್ರೇಮ ಪತ್ರ ಕೈ ಸೇರಲಿದೆ.
ಪ್ರಳಯವೆಂಬುದು ಕುರ್ಚಿಯ ತುದಿಯಲಿ ಕುಳಿತಿರಲು!
3
ಗುಂಪುಗುಂಪು ಕೆಂಪುನಕ್ಷತ್ರಗಳ ನಡುವೆಯೂ
ಚಂದಿರೆಯಂತೆ ಬೆಳಗುತ್ತಿರುವವಳ ಮೊಗದಲ್ಲಿ
ಮುಂಗುರುಳ ಎಳೆ, ಹೂ ಬಳ್ಳಿಯಂತೆ ಹಾರಾಡುತ್ತಿದೆ
ಸುತ್ತಮುತ್ತೆಲ್ಲ ಒಂದಲ್ಲ ಎರಡಲ್ಲ ಜೇನ್ನೊಣದ ಗುಂಪು.
ನೋಡಿದಂತೆಲ್ಲಾ ತಿರುಗಿನೋಡುವ ಬಯಕೆ
ತೀರದ ಮೋಹದ ಜಾಲ, ಉನ್ಮತ್ತ ಮಾರ್ಜಾಲ
ಪುಟಕ್ಕನೆ ನೆಗೆದು ಹಾರಿ ಮಾಯವಾದಂತೆ
ಕೈಗೆ ಸಿಗದ ಮಂಜು, ಮೈಗೆ ತಾಗುವ ತಂಬೆಲರು
ಕಣ್ಣಲ್ಲೇ ಕಟ್ಟಿ ಎಳೆದು ಬಿಟ್ಟ ಬಾಣದ ಕಾಮನಬಿಲ್ಲು.
ನಕ್ಷತ್ರ ಮುಟ್ಟಲು ನಾಚಬಾರದು, ಛಲ ಕಟ್ಟಬೇಕು
ನೂರು ಬಣ್ಣದ ಗಾಳೀಪಟ ಮುಗಿಲು ತಾಗಬೇಕು.
4
ಮೊದಲು ಕಂಡು ಮೋಹಗೊಂಡ ಕಣ್ಣುಗಳು
ಮತ್ತೆ ಮತ್ತೆ ಮುದದಿ ಸಂಧಿಸಿದವು ಸಲುಗೆಯಲಿ
ಯಾವ ಕಾಂತಕ್ಷೇತ್ರ ಸೆಳೆದುದೋ ಸಮ್ಮೋಹದಲಿ
ಹಾಡುವ ಮೊದಲು ಇಬ್ಬರೂ ಯುಗಳ ಗೀತೆ.
ಪಾಠದ ನಡುವೆ ಪಟ್ಟನೆ ಬರುವ ನಗುವಿನಲೆ
ಪುಸ್ತಕದೊಳಗೆ ಸಿಕ್ಕುವ ಬಣ್ಣದ ನವಿಲುಗರಿ
ಬರೆದಷ್ಟೇ ಇಟ್ಟುಕೊಂಡ ಪ್ರೇಮಪತ್ರ ಭಂಡಾರ
ಮುಟ್ಟಿದಂತೆ, ಮುತ್ತಿಕ್ಕಿದಂತೆ ಹಗಲುಗನಸು!
ತಿಂಗಳು ಕಳೆದು ವರ್ಷ ಬಂತು ಮಾತಿಲ್ಲವಿನಿತು
ಕಣ್ಣಿನೊಳಗೆ ನುಡಿಯ ಕಟ್ಟಿ ಎಸೆದ ಕಲ್ಲು ಬಿತ್ತು
ಅನುರಾಗದ ಹೊಳೆಗೆ ಎದ್ದು ಅಲೆಯ ದಂಡು
ಇಬ್ಬರ ಕಾಲಬೆರಳ ತುದಿಯ ಚುಂಬಿಸುವಂತೆ
ತಾಕುತ್ತಿದೆ, ಒಲವಿಗುಂಟು ಕಣ್ಣಿನದೇ ಸ್ವಂತ ಭಾಷೆ!
5
ಟಪಾಲಾದ ಪ್ರೇಮಪತ್ರಗಳು ಎಲ್ಲಿ ಮುಟ್ಟಿದವೋ
ಉತ್ತರ ಮಾತ್ರ ನೂರು ಕಣ್ಣುಗಳಲಿ ಮಿಂಚಿ ಮಿರುಗಿ
ಕಾಲೇಜಿನ ದಾರಿಯುದ್ದಕೂ ಅದೆಷ್ಟು ಹೂ ನಗುಗಳು
ಲೈಬ್ರರಿಯ ಪ್ರತಿ ಬೆಂಚಿನಲ್ಲಿ ಒಂದೊಂದು ಖಾಲಿಸೀಟು!
ಮೀನಿಗೆಸೆದ ಗಾಳಕ್ಕೆ ನಕ್ಷತ್ರಗಳು ಬಿದ್ದು, ಒಂದೇ ಜಟಾಪಟಿ!!
ಒಂದೊಂದು ಪತ್ರವೂ ವಸಂತದ ಹೂದಂಡೆಯಂತೆ
ದಿಬ್ಬಣವ ಹೊರಟರೆ ಕವಿತೆಗಳ ಸಂಗಾತ ಜೊತೆಗೆ.
ಅಲ್ಲಿ ಕೆಂಡ ಸಂಪಿಗೆಯ ಮರದಾಚೆಗೊಂದು ಉಸಿರು
ಇಲ್ಲಿ ಆಟದ ಮೈದಾನದೊಳಗೊಂದು ಬಿಸಿಯುಸಿರು
ಎರಡೂ ಬೆಸೆವ ಗಾಳಿಗೆ ಗಂಧದ ಮೈಮಾಟ.
ಪತ್ರಗಳು
ರವಾನೆಯಾಗುತ್ತಲೇ ಇವೆ ವಿಳಾಸವಿಲ್ಲದ ಲಕೋಟೆಗಳಲಿ
ಸಿಕ್ಕವರಿಗೆ ಮಾತ್ರ ಒಲವಿನ ಅನುಬಂಧ ಅದೃಷ್ಟದಲಿ
ಕಾಯುತ್ತಲೇ ಇರುವೆ ಆ ದಾರಿಮೂಲೆಯ ಕೊನೆಯಲ್ಲಿ.
6.
ಒಲವ ಕಾಯುತ್ತ ಕಣ್ಣು ಸೋಲುವಷ್ಟು ಕೂರಬೇಕು
ಕಾಲದ ಕಪಟಕ್ಕೆ ಹೆದರುವುದೇ ವಿರಹದ ಮೌನ!
ಅಗೆದಂತೆ ಆಳಕ್ಕೆ ಮಣ್ಣು, ಸಿಕ್ಕಂತೆ ಹೊಳೆವ ವಜ್ರ
ಅದೃಷ್ಟವಿಲ್ಲಿಲ್ಲ ಅಗೆದವನೇ ಮಣ್ಣೆಳೆದುಕೊಳ್ಳಬೇಕು
ಮುಡಿ ತುಂಬಿ ಉಸಿರುಗಟ್ಟಿ ನೋಯಬೇಕು ಒಳಗೆ;
ಹೊರಗೆ ಮೈ ಕೆರೆತ, ಕೀವು-ಬಾವು ಬಿದ್ದು ರಕ್ತಪರೀಕ್ಷೆ
ಎಲ್ಲ ಮುಗಿದಾಗ ಒಲವು ಕೈಗಂಟಿದ ಅಮೃತ ಬಳ್ಳಿ.
ದಾರಿ ಹಾಗೇ ಇರುತ್ತದೆ, ಇದ್ದ ಹಾಗೆ.. ಕಂಡ ಹಾಗೆ..
ಅದಕ್ಕೆ ನೆನ್ನೆ ನಾಳೆಗಳ ಹಂಗಿಲ್ಲ, ಈ ದಿನದ ತುರ್ತಿಲ್ಲ
ಹೊಸ ಹೆಜ್ಜೆಗೆ ಹಳೆನೋವಿಗೆ ಅಲ್ಲಿರುವುದೊಂದೇ ಔಷಧ
ಅದೋ ಎಲ್ಲರಂತೆ ಸರದಿಯಲ್ಲಿ ಕಾಯಬೇಕು ನಮ್ಮೊಲವಿಗೆ. ~
7.
ಹೂವಿನ ಸಂತೆಯಲಿ ತುಟಿಗೆ ತುಟಿ ತಾಗಿಸಿ
ಥಟ್ಟನೆ ತಿರುಗಿ ಓಡಿದವಳ ಬೆನ್ನುಬಿದ್ದು ಬಯಲ್ಲಲ್ಲಿ
ಉಸ್ಸೆಂದು ಬುಸುಗುಟ್ಟಿ ಅಲೆಯುತಿದೆ ಎದೆಬಡಿತ
ಹೆಜ್ಜೆ ಗುರುತು ಕಾಣುತ್ತಿದೆ ಮೈಗಂಧ ಘಮಿಸುತ್ತಿದೆ
ಎದೆಬಡಿತಕ್ಕೆ ಮಿಡಿವ ಒಲವ ತರಾಂತರಂಗ ಹೊಮ್ಮುತ್ತಿದೆ
ಎಲ್ಲಿತ್ತು ಎಲ್ಲಿಂದ ಯಾಕಾಗಿ ಇತ್ತ ಸುಳಿದು ಬಂದಿತ್ತು
ಈ ಮೋಹಕ ಪಗಡೆಯಾಟದ ದಾಳ ಉರುಳಿಸಿತ್ತು
ಎಣಿಸದೇ ಏನೊಂದು ಎತ್ತರೆತ್ತರ ಎದೆಬಡಿತ ಏರುತ್ತಿದೆ
ದಡದಡನೆ ಇಳಿಯುತ್ತಿದೆ.. ಅಂಕೆಗೆ ಸಿಗದ ಚಿನ್ನಾಟ.
ಸಿಕ್ಕವರ ಸಂಖ್ಯೆಗೆ ಲೆಕ್ಕವಿಲ್ಲ ಅದರೊಬ್ಬರಿಗೂ
ತುಟಿಯ ಮೇಲೆ ಒತ್ತಿದ ಮುದ್ರೆಯ ಪರಿಚಯವಿಲ್ಲ
ಆ ಮುತ್ತೊಂದು ಹಾಗೆ ಉಳಿದುಹೋಯಿತು
ಓದಲಾಗದೆ ಬಿಟ್ಟುಹೋದ ಪ್ರೇಮಪತ್ರದಂತೆ!
Sundara Kavitegalu