ರಾಜೇಂದ್ರ ಚೆನ್ನಿ ಕಂಡಂತೆ ಸಿ ಎಸ್ ದ್ವಾರಕಾನಾಥರ ‘ಸಾಕ್ರೆಟಿಸ್’‌

ಸಿ ಎಸ್ ದ್ವಾರಕಾನಾಥ್ ಅವರ ಹೊಸ ಕಥಾ ಸಂಕಲನ ಈಗ ಓದುಗರ ಮುಂದಿದೆ.

ಸಾಕ್ರೆಟಿಸ್ ಮತ್ತು ಇತರ ಕಥೆಗಳು

ಪಾಂಚಾಲಿ ಪಬ್ಲಿಕೇಷನ್ಸ್ ಈ ಕೃತಿಯನ್ನು ಪ್ರಕಟಿಸಿದೆ.

ಬೆಲೆ ೧೪೦ ರೂ

ಈ ಕೃತಿಯನ್ನು ಕೊಳ್ಳಲು ‘ಬಹುರೂಪಿ ಬುಕ್ ಹಬ್’ ನ ವಾಟ್ಸ್ ಅಪ್ ಸಂಖ್ಯೆ 70191 82729 ಗೆ ಮೆಸೇಜ್ ಮಾಡಿ

ಕೃತಿಗೆ ನಾಡಿನ ಖ್ಯಾತ ಚಿಂತಕರಾದ ರಾಜೇಂದ್ರ ಚೆನ್ನಿ ಅವರು ಬರೆದ ಮುನ್ನುಡಿ ಇಲ್ಲಿದೆ-

ರಾಜೇಂದ್ರ ಚೆನ್ನಿ

ದ್ವಾರಕಾನಾಥರು ಹಿಂದುಳಿದ ಜಾತಿಗಳ ಆಯೋಗದ ಅಧ್ಯಕ್ಷರಾದ ಮೇಲೆ ಆವರೆಗೆ ನಾವು ಎಂದೂ ಕೇಳದಿದ್ದ ಜಾತಿಗಳ ಹೆಸರುಗಳನ್ನು ಕೇಳುವಂತಾಗಿತ್ತು. ನಾವು ‘ಪ್ರಗತಿಪರ’ರಾಗಿದ್ದರಿಂದ ಜಾತಿಯೆಂದರೆ ವಿನಾಶ ಮಾಡಬೇಕಾದ ವ್ಯವಸ್ಥೆಯೊಂದರ ಭಾಗವಾಗಿತ್ತೆ ಹೊರತು ಈ ನೂರಾರು ಜಾತಿಗಳ ಮೂರ್ತ ವಾಸ್ತವಗಳ ಬಗ್ಗೆ ನಮಗೆ ಆಸಕ್ತಿಯಿರಲಿಲ್ಲ. ಬಹಳವೆಂದರೆ ಹಿಂದುಳಿದ ದಲಿತ ಜಾತಿಗಳ ಬವಣೆಗಳ ಬಗ್ಗೆ ಆಗುತ್ತಿದ್ದ ಶೋಷಣೆಯ ಬಗ್ಗೆ ಚರ್ಚೆಮಾಡುತ್ತಿದ್ದೆವು.

ತಮ್ಮ ಲೇಖನಗಳಲ್ಲಿ, ಮಾತುಗಳಲ್ಲಿ ಈ ವರೆಗೆ ದಾಖಲೆಯೆ ಆಗದಿದ್ದ ಜಾತಿಗಳ ಬಗ್ಗೆ ದ್ವಾರಕಾನಾಥರು ಪ್ರಸ್ತಾಪಿಸುತ್ತಿದ್ದಾಗ ಇವರು ನಮಗೆ ವಸಾಹತುಶಾಹಿ ಕಾಲದ ಮಾನವಶಾಸ್ತ್ರಜ್ಞರ ಹಾಗೆ ಕಾಣುತ್ತಿದ್ದರು. ಕೆಲವು ತರಲೆ ಗೆಳೆಯರು ದ್ವಾರಕಾನಾಥರೇ ಕೆಲವು ಜಾತಿಗಳನ್ನು invent ಮಾಡುತ್ತಿದ್ದಾರೆ ಎಂದೂ ಹೇಳುತ್ತಿದ್ದರು. ಗಂಭೀರ ಕಾಳಜಿಗಳುಳ್ಳ, ಪ್ರಾಮಾಣಿಕ ಬದ್ಧತೆಯುಳ್ಳ ಮತ್ತು ಅದಕ್ಕೆ ತಕ್ಕುದಾದ ವಿದ್ವತ್ತು ಇರುವ ದ್ವಾರಕಾನಾಥರು ಅನೇಕ ಅಪರಿಚಿತ ಸಾಮಾಜಿಕ ಲೋಕಗಳನ್ನು ತೆರೆದು ತೋರಿಸಿದ್ದಂತೂ ನಿಜ. ಅವರ ಹಾಗೆಯೆ ನಮ್ಮ ಅಲೆಮಾರಿ ವಿದ್ವಾಂಸ ರಹಮತ್ ತರೀಕೆರೆ ಅವರೂ ಕರಡಿ ಕಲಂದರ ಅವರುಗಳ ಬಗ್ಗೆ ಬರೆದದ್ದು ನೆನಪಾಗುತ್ತದೆ.

ನನ್ನಂಥ ಮಧ್ಯಮ ವರ್ಗದ ಓದುಗರಿಗೆ ಈ ಅಪರಿಚಿತ ಲೋಕಗಳನ್ನು ಮೊದಲು ಕುವೆಂಪು ನಂತರ ತೇಜಸ್ವಿ ಪರಿಚಯಿಸಿದರು. ಪುಂಗಿ ಎಂಗ್ಟ್, ಮಾರ ಇವರೆಲ್ಲ ಕನ್ನಡ ಲೋಕವನ್ನು ಪ್ರವೇಶಿಸಿದ್ದು ಸಾಂಸ್ಕೃತಿಕವಾಗಿ ಬಹುಮುಖ್ಯವಾದದ್ದು. ಒಂದು ವೇಳೆ ಇಡೀ ಭಾರತದ ಎಲ್ಲಾ ಜಾತಿಗಳನ್ನು ಹೇಗೆ ಅವುಗಳ ಮೂರ್ತ ವಿವರಗಳೊಂದಿಗೆ, ಜೀವನ ಶೈಲಿಗಳೊಂದಿಗೆ ಒಟ್ಟಿಗೆ ಜೋಡಿಸಿ ನೋಡುವುದಾದರೂ ಸಾಧ್ಯವೇ ಎಂದು ಹಲವಾರು ಬಾರಿ ಯೋಚಿಸಿದ್ದೇನೆ. ಎಷ್ಟೋ ಭಾರತಗಳು ಕೊನೆಗೂ ನಮ್ಮ ಇರುವ ಒಂದು ಜೀವಮಾನದಲ್ಲಿ ನಮಗೆ ಪ್ರತ್ಯಕ್ಷವಾಗುವುದೇ ಇಲ್ಲ.

ದ್ವಾರಕಾನಾಥರ ಬರಹದ ಸಹಜತೆ, ನಿರಾಯಾಸವಾಗಿ ಅದು ಸಾಧಿಸುವ ಲಯ ಇವುಗಳನ್ನು ಮೆಚ್ಚಿಕೊಂಡಿದ್ದೆ. ಆದರೆ ಅವರು ಕತೆಗಾರರು ಎನ್ನುವುದು ನನಗೆ ಗೊತ್ತೇ ಇರಲಿಲ್ಲ. ಒಂದು ತಿಂಗಳ ಕೆಳಗೆ ನನ್ನ ಈ ಕತೆಗಳನ್ನು ಓದಿ ಎಂದು ಕಳಿಸಿದಾಗ ನನಗೆ ಅಚ್ಚರಿಯಾಯಿತು. ಮೊದಲ ಓದಿಗೆ ಅನ್ನಿಸಿದ್ದೆಂದರೆ ಇವು ಅಪ್ಪಟ ಕತೆಗಳೇ. ಇವು ಮಾವನಶಾಸ್ತ್ರೀಯ Ethnographic ನಿರೂಪಣೆಗಳು ಅಲ್ಲ. ಅಥವಾ ಅಂಕಣದ ಶೈಲಿಯ ಘಟನಾ ನಿರೂಪಣೆಗಳೂ ಅಲ್ಲ. ಇವು ಕತೆಗಳು.

ಕನ್ನಡದ ದಲಿತ ಬರಹವು ಮುನ್ನೆಲೆಗೆ ತಂದ ಮಡಿವಂತಿಕೆ ಇಲ್ಲದ ವಾಸ್ತವವಾದಿ ವರ್ಣನೆಗಳು ಹಾಗೂ ವಿವರಗಳ ಶೈಲಿಯಲ್ಲಿ ಬರೆದಿರುವ ಕತೆಗಳು. ‘ಸಭ್ಯ’ ಮಧ್ಯಮವರ್ಗದ ಕನ್ನಡ ಓದುಗರಿಗೆ ಗಲಿಬಿಲಿ ಉಂಟುಮಾಡಿದ್ದ ಈ ಶೈಲಿ ಈಗ ಪರಿಚಿತವಾಗಿದೆ. ಅಷ್ಟು ಮಾತ್ರವಲ್ಲ ಕೆಲವೊಮ್ಮೆ ಒಂದು convention ಅನ್ನುವಷ್ಟು ಪರಿಚಿತವಾಗಿಬಿಟ್ಟಿದೆ. ಆದರೆ ಈ ಶೈಲಿಯನ್ನು ಬಳಸುವ ದ್ವಾರಕಾನಾಥರು ವಿವರಗಳನ್ನೇ ಪೇರಿಸುವ ಹಟದಿಂದ ಬರೆಯುವುದಿಲ್ಲ.

ವಿವರಗಳು ಒಟ್ಟು ಕತೆಯ ಅವಶ್ಯಕ ಭಾಗಗಳಾಗಿಯೇ ಬರುತ್ತವೆ. ಉದಾಹರಣೆಗೆ ಫಾತಿಮಾ ಎನ್ನುವ ಕರಡಿಯ ಕತೆ, ಸುನಂದಾ ಎನ್ನುವ ಬಿಳಿ ಹಂದಿಯ ಕತೆ, ಸಿದ್ದನ ಜೋಪಡಿಯ ವರ್ಣನೆ ಇವೆಲ್ಲವು ಅವಶ್ಯಕತೆಗೆ ತಕ್ಕ ಹಾಗೆ ಮಿತವಾಗಿಯೇ ಬಂದಿವೆ. ಅಲ್ಲದೆ ಕರಡಿ, ಹಾವು, ಹಂದಿ ಇವುಗಳನ್ನು ತಮ್ಮ ಕುಟುಂಬದ ಸದಸ್ಯರ ಹಾಗೆ ನೋಡಿಕೊಂಡು ಬಂದ ಸಮುದಾಯಗಳಿಂದ ಅವುಗಳನ್ನು ‘ಪ್ರಾಣಿದಯಾ ಸಂಘ’ದವರು, ಫಾರೆಸ್ಟ್ ಅಧಿಕಾರಿಗಳು, ಅಧಿಕಾರಶಾಹಿ ಇವರು ಪ್ರಾಣಿದಯೆಯ ಹೆಸರಿನಲ್ಲಿ ಕಿತ್ತುಕೊಳ್ಳುವುದು ಈ ಕತೆಗಳ ಕೇಂದ್ರ ಭಾಗವಾಗಿದೆ. ಇದರ ಹಿಂದೆ ಸಂಕೀರ್ಣವಾದ ಒಂದು ಸಾಮಾಜಿಕ ಪ್ರಕ್ರಿಯೆ ಇದ್ದು ಅದು ಆಧುನಿಕತೆಯ ಜೊತೆಗೆ ತಳಕುಹಾಕಿಕೊಂಡಿದೆ.

ಒಂದು ಕಡೆ ತಮ್ಮ ಆನುವಂಶಿಕ ವೃತ್ತಿಗಳಿಗಾಗಿ ಈ ಪ್ರಾಣಿಗಳನ್ನು ಪ್ರೀತಿಯಿಂದ ನೋಡಿಕೊಂಡ ಈ ಸಮುದಾಯಗಳಿವೆ. ಆದರೆ ಕಾಳಜಿ, ಪ್ರೀತಿ ಇದಾವುದೂ ಇಲ್ಲದ ನೌಕರಶಾಹಿ ಸಂಸ್ಥೆಗಳಿಗೆ ‘ಆಧುನಿಕ’ವೆಂದು ಕರೆಯಲಾಗುವ ಪ್ರಾಣಿದಯೆಯ ಬೆಂಬಲವು ಸಿಕ್ಕಿದೆ. ದ್ವಾರಕಾನಾಥರ ಈ ಕತೆಗಳಲ್ಲಿ ಪ್ರಾಣಿದಯೆಯ ಪರವಾದ ಕಾನೂನುಗಳು ಭ್ರಷ್ಠಾಚಾರ ಹಾಗೂ ರಾಜಕೀಯಕ್ಕಾಗಿ ಬಳಕೆಯಾಗುತ್ತವೆ. ‘ಸಣ್ಣ ತಿಲಕ’ವಿಟ್ಟುಕೊಂಡು ಬರುವ ಪ್ರಾಣಿದಯಾ ಪಾತ್ರಗಳು ಈ ಕತೆಗಳ ಖಳನಾಯಕರು. ಪ್ರಶ್ನೆಯೆಂದರೆ ಪ್ರಗತಿ, ಆಧುನಿಕತೆಯ ಚಕ್ರವನ್ನಂತೂ ಹಿಂದಕ್ಕೆ ತಿರುಗಿಸಲಾಗುವುದಿಲ್ಲ.

ಹೀಗಾಗಿ ಪ್ರಾಣಿಗಳನ್ನು ಅವಲಂಬಿಸಿದ ಈ ಸಮುದಾಯಗಳು ಅನಾಥರಾಗುವುದು ಅನಿವಾರ್ಯ. ಆದರೆ ಪರ್ಯಾಯವೆಲ್ಲಿದೆ? ಈ ಸಮುದಾಯಗಳ ಅಳಿವಿನ ಜೊತೆಗೆ ಒಂದು ಲೋಕದೃಷ್ಟಿ, ನಂಬಿದ ಮೌಲ್ಯಗಳು ಇವೆಲ್ಲವು ಅಳಿದು ಹೋಗುತ್ತವೆ. ಇದು ಭಾವುಕ ಆದರ್ಶಪರತೆಯ ಪ್ರಶ್ನೆ ಅಲ್ಲ, ಇಂಥ ಸಮುದಾಯಗಳಿಗೆ ಪರ್ಯಾಯ ಬದುಕೇ ಕೊಡದಂಥ ಆಧುನಿಕತೆಯ ಅಸಮರ್ಪಕತೆಯ ಪ್ರಶ್ನೆಯಾಗಿದೆ. ತೇಜಸ್ವಿ ‘ಎಂಗ್ಟನ ಪುಂಗಿ’ ಕತೆಯಲ್ಲಿ ಎತ್ತುವ ಗಂಭೀರ ಪ್ರಶ್ನೆಯೂ ಇದೇ ಅಲ್ಲವೆ? ಈಗ ಹಾವುಗಳನ್ನು ಹಿಡಿಯಲಾಗದ ಅಥವಾ ಪ್ರದರ್ಶಿಸಲಾಗದ ಎಂಗ್ಟ್ ತನ್ನ ಜೀವನೋಪಾಯಕ್ಕಾಗಿ ಅನಿವಾರ್ಯವಾಗಿ ಕತೆಯ ನಿರೂಪಕನ ದೃಷ್ಟಿಯಲ್ಲಿ ಸುಳ್ಳು ಎನ್ನುವ ಕೆಲಸಗಳನ್ನು ಮಾಡಬೇಕಾಗುತ್ತದೆ.

ದ್ವಾರಕಾನಾಥರು ಇಂಥ ಪ್ರಶ್ನೆಗಳನ್ನು ಮುನ್ನೆಲೆಗೆ ತರುವ ಈ ಕತೆಗಳನ್ನು ಬರೆದಿದ್ದಾರೆ. ಈ ಕತೆಗಳು ಒಂದು ಕಡೆಗೆ ಇಂಥ ಸಮುದಾಯಗಳ ತಬ್ಬಲಿತನದ ಬಗ್ಗೆ ಕರುಣೆ ಅಥವಾ ವಿಷಾದ ಹುಟ್ಟಿಸುತ್ತವೆ; ಇನ್ನೊಂದು ಕಡೆಗೆ ಅನೇಕ ಸಂದರ್ಭಗಳಲ್ಲಿ ಭಾವುಕವಾದ ಮುಕ್ತಾಯಗಳನ್ನು ಕತೆಗಾರರೆ ಒತ್ತಾಯಿಸಿದಂತೆ ತೋರುತ್ತದೆ. ಉದಾಹರಣೆಗೆ ತನ್ನ ಮುಪ್ಪಿನ ಕರಡಿ ಫಾತಿಮಾಳನ್ನು ಮರಳಿ ಪಡೆದು ಅದಕ್ಕಾಗಿ ದುಡ್ಡು ಕೊಡಲು ಮುಂದಾದಾಗ ‘ಇಲ್ಲಿ ನಾನು ಮಗಳನ್ನು ತಂದೆಗೆ ಮರಳಿಸಲು ದುಡ್ಡು ತೆಗೆದುಕೊಳ್ಳುವುದಿಲ್ಲ’ವೆನ್ನುವ ಉತ್ತರ ಬರುತ್ತದೆ.

ಇಡಿ ಕತೆಯು ಭಾವುಕತೆಯ ನೆಲೆಯಲ್ಲಿಯೆ ಇರುವುದರಿಂದ ಈ ಮುಗಿತಾಯವು ನಿರೀಕ್ಷಿತವೆನಿಸುತ್ತದೆ. ಆದರೆ ಪರಕಾಸನು ತನ್ನ ಪ್ರೀತಿಯ ಬಿಳಿಯ ಹಂದಿಯನ್ನು ಮನೆಯವರು ಮಾಂಸಕ್ಕಾಗಿ ಕೊಂದಿದ್ದಾರೆ ಎಂದು ಗೊತ್ತಾದಾಗ ರೋದಿಸುತ್ತಾನೆ. ಆದರೆ ಕತೆಯ ಕೊನೆಗೆ ಅಳುತ್ತಲೇ ಅದರ ಮಾಂಸವನ್ನು ತಿನ್ನುತ್ತಾನೆ.

ಈ ಬಗೆಯ ತಿರುವುಗಳು ಬಂದಾಗ ಕತೆಗಳು ಹೆಚ್ಚು ಪ್ರಭಾವಿಯಾಗುತ್ತವೆ. ಬಡತನದಿಂದಾಗಿ ಮೈಮಾರಿಕೊಳ್ಳುತ್ತಿದ್ದ ಕುಟುಂಬದ ಭಾನಾಮತಿಯನ್ನು ಮದುವೆಯಾಗಿ ಅತ್ಯಂತ radical ಕೆಲಸ ಮಾಡಿದ ಗೆಳೆಯ ಕೊನೆಗೆ ಅವಳಿಂದ ಅದೇ ಕೆಲಸ ಮಾಡಿಸಿ ಶ್ರೀಮಂತನಾಗುವ ಕತೆ disturbing ಆಗಿದೆ. ಆದರೆ ಕತೆಯ ಮುಕ್ತಾಯವು ಅಷ್ಟೇನೂ ಅನಿರೀಕ್ಷಿತವೆನಿಸುವುದಿಲ್ಲ. ಎಲ್ಲಾ ಕತೆಗಳು ಸಂಕೀರ್ಣವೇ ಆಗಿರಬೇಕೆನ್ನುವ ಒತ್ತಾಯವಿಲ್ಲ. ಆದರೆ ತನ್ನ ವಸ್ತುವಿನ ಸಾಧ್ಯತೆಗಳನ್ನು ಕತೆಯು ಪೂರ್ಣವಾಗಿ ಬಳಸಿಕೊಳ್ಳಬೇಕು ಎನ್ನುವ ನಿರೀಕ್ಷೆ ಇದ್ದೇ ಇರುತ್ತದೆ.

ದ್ವಾರಕಾನಾಥರ ಮುಖ್ಯ ಕಾಳಜಿಯೆಂದರೆ ನಗರಗಳು ಬೆಳೆದಂತೆ ಊರ ಹೊರಗೆ ಇದ್ದ ಸಮುದಾಯಗಳು ಮತ್ತೆ ನೆಲೆಯಿಲ್ಲದೆ ನಿರಾಶ್ರಿತವಾಗುತ್ತವೆ. ಇದು ಆಧುನಿಕತೆಯ ರೋಗಲಕ್ಷಣ ಮಾತ್ರ. ಮೂಲದಲ್ಲಿರುವ ದುರಂತವೆಂದರೆ ಸಮಾಜವೂ ಎಂದೂ ಗಮನಿಸದೇ ಇದ್ದ ಅಲಕ್ಷಿತ ಸಮುದಾಯಗಳು ಈಗ ಮತ್ತೆ ಇರುವ ನೆಲೆಯನ್ನೂ ಕಳೆದುಕೊಂಡು ಅನಾಥರಾಗುವುದು. ಅವುಗಳಿಗೆ ಇರುವ ಒಂದೇ ಪರಿಹಾರವೆಂದರೆ ಆಧುನಿಕ ನಗರಗಳಲ್ಲಿ ಅನಾಮಧೇಯ ಕೂಲಿಗಳಾಗುವುದು. ‘ಸಿದ್ಧರ ಕಾಲನಿ’ ಕತೆಯಲ್ಲಿ ಸಿದ್ದರು ಸಾಕಿದ ಹಂದಿಗಳು ಮಾತ್ರವಲ್ಲ ಇಡೀ ಕಾಲನಿಯನ್ನೇ ಅವರು ಕಳೆದುಕೊಳ್ಳುತ್ತಾರೆ. ‘ಸಾಕ್ರೇಟಿಸ್’ ಕತೆಯಲ್ಲಿ ಕರೆಯಲು ಸದಾ ಹಾಲು ಕೊಡುತ್ತಿದ್ದ ಹಸುವಿನ ಕೆಚ್ಚಲನ್ನೇ ಕತ್ತರಿಸಿ ರೌಡಿಗಳು ಅದರ ಸಾವಿಗೆ ಕಾರಣರಾಗುತ್ತಾರೆ.

ಈ ಕತೆಗಳಲ್ಲಿ ಸ್ಥಾಯಿಯಾಗಿರುವ ವಿದ್ಯಮಾನವೆಂದರೆ ಜಾತಿ ವ್ಯವಸ್ಥೆ. ಇದು ಅಂಬೇಡ್ಕರ್ ವಿವರಿಸಿದಂಥ ‘ತರತಮಗಳುಳ್ಳ ಶ್ರೇಣಿಗಳ ವ್ಯವಸ್ಥೆ’. ಈ ವ್ಯವಸ್ಥೆಯಲ್ಲಿ ತಾನು ಅನುಭವಿಸಿದ ಹೀನಾಯ ತನ್ನ ಮಕ್ಕಳು ಅನುಭವಿಸಬಾರದೆಂದು ಕ್ಷೌರಿಕ ವೃತ್ತಿಯ ತಂದೆಯ ಬವಣೆ ತುಂಬಾ ಮಾರ್ಮಿಕವಾಗಿ ಬಂದಿದೆ. ತನ್ನ ಸಲೂನಿಗೆ ಬರುತ್ತಿದ್ದ ಎಂ.ಎಲ್.ಎ. ನ ಸಹಾಯ ಕೇಳಿ ನಿರಾಶನಾದ ಅವನ ಬೇಡಿಕೆ ವಿಚಿತ್ರವಾದುದು.

ತಾನಿರುವ ಏರಿಯಾದ ಒಳ್ಳೆಯ ಶಾಲೆಗಳ ಬದಲು ಇನ್ನೊಂದು ಏರಿಯಾದ ಕೆಳದರ್ಜೆ ಶಾಲೆಯಲ್ಲಿ ತನ್ನ ಮಕ್ಕಳಿಗೆ ಪ್ರವೇಶಕೊಡಿಸಿ ಎಂದು! ಕಾರಣವೆಂದರೆ ಇದೇ ಏರಿಯಾ ಆದರೆ ತನ್ನ ಮಕ್ಕಳನ್ನು ಅವರ ಸಹಪಾಠಿಗಳು ಹಜಾಮನ ಮಕ್ಕಳು ಎಂದು ಗುರುತಿಸುತ್ತಾರೆ ಎನ್ನುವ ಸಂಕಟ. ತೇಜಸ್ವಿಯವರ ಶೈಲಿಯನ್ನು ನೆನಪಿಸುವ ಶೈಲಿಯಲ್ಲಿರುವ ಈ ಕತೆ ಜಾತಿ ವ್ಯವಸ್ಥೆಯ ಬಹು ದೊಡ್ಡ ನೋವು ಅಂದರೆ humiliation ಎನ್ನುವುದನ್ನು ಪ್ರಭಾವಿಯಾಗಿ ನಿರೂಪಿಸುತ್ತದೆ.

‘ತಿಮ್ಮಪ್ಪನ ಅನುಗ್ರಹ’ ನಿಜವಾಗಿಯೂ hilarious ಆದ ಕತೆ, ವಿಶೇಷವಾಗಿ ಅದರ ಮುಕ್ತಾಯ ಹಾಗೆಯೆ ‘ಮಿಸಾಂದ್ರಿ’ ಅತ್ಯಂತ ವಿಭಿನ್ನ ಶೈಲಿಯ ಕತೆ. ಗಂಡು ಹೆಣ್ಣಿನ ಸಂಬಂಧದ ವಿಚಿತ್ರ ತಿರುವುಗಳ ಬಗೆಗಿನ ಪ್ರಯೋಗಶೀಲ ಕತೆ. ಇದೆಲ್ಲ ಗಮನಿಸಿದರೆ ದ್ವಾರಕಾನಾಥರಿಗೆ ಕೇವಲ ಅಲಕ್ಷಿತ ಸಮುದಾಯಗಳ ನಿರೂಪಕನಾಗುವ ಅವಶ್ಯಕತೆ ಇಲ್ಲ. ಅವರಲ್ಲಿ ಒಬ್ಬ ಒಳ್ಳೆಯ ಕತೆಗಾರನಿದ್ದಾನೆ. ಸಾಮಾಜಿಕ ಬದ್ಧತೆಯ ಆಚೆಗೆ ಅವನಿಗೆ ಸಹಜವಾಗಿ ಬರೆಯಲು ಬಿಟ್ಟರೆ ಇನ್ನೂ ಅನೇಕ ಗಟ್ಟಿಯಾದ ಕತೆಗಳನ್ನು ನಾವು ನಿರೀಕ್ಷಿಸಬಹುದು.

‍ಲೇಖಕರು Avadhi

June 10, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: