ರಾಜಶ್ರೀ ಟಿ ರೈ ಪೆರ್ಲ
**
ಮೊನ್ನೆ ಸಂಬಂಧಿಕರೊಬ್ಬರು ತಾವು ಹೊಸತಾಗಿ ನಿರ್ಮಿಸಿದ ಮನೆಯ ಗೃಹಪ್ರವೇಶಕ್ಕೆ ಆಹ್ವಾನ ಕೊಡಲು ಬಂದಿದ್ದರು. ಆಮಂತ್ರಣ ಪತ್ರಿಕೆ ನೋಡುವಾಗ ಮನೆಯೊಡತಿಯ ಮೊಗದಲ್ಲಿ ಸಣ್ಣ ಸಂಭ್ರಮ! ‘ಹೋ..! ಇದು ಪುತ್ತೂರು ಆಗಿಯೇ ಹೋಗಬೇಕು. ಹೇಗೂ ಹೋಗಲಿಕ್ಕುಂಟಲ್ಲ, ಹಾಗೆ ಒಂದು ಸೀರೆ ಖರೀದಿಸಿ ಬರಬೇಕು’ ಅವರ ಉವಾಚ! ಕಾರಿನ ಪೆಟ್ರೋಲ್ ಜೊತೆಗೆ ನಾರಿಯ ಸಾರಿಯ ಡಬ್ಬಲ್ ಖರ್ಚಿಗೆ ದಾರಿಯಾಯಿತು. ಆದರೆ ಅನಿರೀಕ್ಷಿತವಾಗಿ ಗೃಹಪ್ರವೇಶದವರಿಗೆ ಸೂತಕ ವಕ್ರಿಸಿ ಗೃಹಪ್ರವೇಶ ಮುಂದೂಡಲ್ಪಟ್ಟಿತು. ಸದ್ಯಕ್ಕೆ ಡಬ್ಬಲ್ ಉಳಿತಾಯ!
ಇನ್ನೊಮ್ಮೆ ಮಕ್ಕಳಿಗೆ ರಜೆಯಿದ್ದ ಕಾರಣ ಧರ್ಮಸ್ಥಳ, ಸುಬ್ರಹ್ಮಣ್ಯ ಯಾತ್ರೆಗೆ ಹೋಗುವುದು ಅಂತ ನಿಶ್ಚಯವಾಯಿತು. ಹೇಗೂ ವಾಹನ ಮಾಡಿಕೊಂಡು ಹೋಗುವುದು ಪಕ್ಕದ ಮನೆಯವರೂ ಬರಲಿ ಎಂಬ ಉದಾರ ಭಾವ. ಜಾಮ್ ಟೈಟ್ ಆಗಿ ಮಿಸುಕಾಡಲೂ ಆಗದೆ ಕುಳಿತಾಗಲೂ ಹೀಗೆಲ್ಲ ಒಟ್ಟಿಗೆ ಹೋಗುವುದು ಒಂಥರಾ ಖುಷಿ ಅಲ್ವಾ ಅಂತ ಹೇಳಿಕೊಂಡು ಹೇಗೂ ಸಮಾಧಾನಿಸಿಕೊಂಡದ್ದಾಯಿತು. . ದಾರಿ ಮಧ್ಯೆ ಯಾರೋ ಒಬ್ಬರು ‘ನಾವು ಸೌತಡ್ಕಕ್ಕೆ ಕೂಡ ಹೋಗುವ, ಹೇಗೂ ಹೊರಟಿದ್ದೇವೆ ಅಲ್ವಾ’ ಅಂದ್ರು. ಸರಿ, ಇಲ್ಲೇ ಹತ್ತಿರ ಅಲ್ವಾ ಅಂತ ಗಾಡಿ ಅತ್ತ ತಿರುಗಿಸಿದ್ದಾಯಿತು. ಹೀಗೇ ಹೇಗೂ ಬಂದದ್ದರಲ್ಲಿ ಹಾದಿ ಬದಿಯ ಇನ್ನಷ್ಟು ಮಂದಿರ, ಪ್ರೇಕ್ಷಣೀಯ ಸ್ಥಳಗಳಿಗೆ ಹೋಗುವಂತಾಯಿತು. ಕೆಲವರಿಗೆ ಹೀಗೆ, ಮನೆ ಬಿಟ್ಟು ಹೊರಡುವುದು ಒಂದು ಗೊತ್ತು, ಸದಾ ಹೋಗುತ್ತಾ ಇರೋಣ ಅಂತ ಅನ್ನಿಸುವುದು. ಮರಳಿ ಬಂದರೆ ಇದೆಯಲ್ಲ ನಿತ್ಯದ್ದು. ‘ಹೇಗೂ ಹೊರಟಿದ್ದೇವೆ ಅಲ್ವಾ ,ಇನ್ನು ಪಕ್ಕ ಹಾಗೆಲ್ಲ ಮನೆ ಬಿಟ್ಟು ಹೊರಡುವುದಕ್ಕೆ ಆಗುತ್ತದೆಯೇ?’ ಎಂಬ ಸ್ವಯಂ ಕ್ಷಮೆ. ಅಂತೂ ಇಂತೂ ಯಾತ್ರೆ ಮುಗಿಯುವಾಗ ರಾತ್ರೆ ಆಯಿತು.
ಇತ್ತೀಚೆಗೆ ಹತ್ತಿರದ ಬಂಧುವೊಬ್ಬರ ಮದುವೆಗೆಂದು ದೂರದ ಊರಿಗೆ ಹೋಗಿದ್ದಾಗ ಅಲ್ಲಿಯೇ ಪಕ್ಕದಲ್ಲಿ ವಾಸವಿದ್ದ ಇನ್ನೊಬ್ಬ ಆತ್ಮೀಯರು ಭೇಟಿಯಾಗಿ ‘ಹೇಗೂ ಬಂದಿದ್ದೀರಿ, ಒಮ್ಮೆ ಮನೆಗೂ ಬಂದು ಹೋಗಿ,ಇನ್ನು ಯಾವಾಗ ಈ ಕಡೆಗೆ ಬರುವುದೋ, ಮತ್ತೆ ನಮ್ಮಲ್ಲಿಗೇ ಅಂತ ನೀವು ಹೇಗೂ ಬರಲಿಕ್ಕಿಲ್ಲ?’ ಅಂದಾಗ ಹೇಗೆ ಆಗುವುದಿಲ್ಲ ಎಂದು ಹೇಳುವುದು. ಇದ್ದ ಸಮಯ ಹೇಗೂ ಹೊಂದಿಸಿ ಅಲ್ಲಿಗೂ ಹೋಯಿತು.
ಇದೇ ರೀತಿ ಒಂದು ಸಲ ಬಂಧುವೊಬ್ಬರ ಮನೆಗೆ ಹೋದಾಗ ಅಲ್ಲಿಂದ ಸ್ವಲ್ಪ ದೂರದಲ್ಲಿ ಇರುವ ಇನ್ನೊಬ್ಬ ಬಂಧುವಿನ ಮನೆಗೂ ಹೋಗಿ ಬರುವ ಪ್ರಸ್ತಾಪ ಬಂತು. ‘ಅವರು ಎಲ್ಲಿ ಸಿಕ್ಕಿದರೂ ಒಮ್ಮೆ ಮನೆಗೆ ಬನ್ನಿ ಎಂದು ಒತ್ತಾಯ ಮಾಡುವುದರಲ್ಲಿ ಆಗುವುದಿಲ್ಲ. ಒಮ್ಮೆ ಮುಖ ತೋರಿಸಿ ಬರುವ’ ಎನ್ನುವ ಅಭಿಪ್ರಾಯ ಬಂತು. ‘ಅಯ್ಯೊ, ನಮಗೆ ಹಾಲು ಕರೆಯುವ ದನ ಇದೆ. ಹೀಗೆಲ್ಲ ಪುರುಸೋತಲ್ಲಿ ನೀವು ಅಲ್ಲಿಗೆಲ್ಲ ಹೋಗಿ ನಿಮ್ಮ ಹೊತ್ತಿಗೆ ಹಿಂತಿರುಗುವುದು ಅಂತ ಗೊತ್ತಿದ್ದರೆ ನಾನು ಹೊರಡುತ್ತಲೇ ಇರಲಿಲ್ಲ’ ಎಂದು ಜೊತೆಗೆ ಬಂದವರೊಬ್ಬರ ತಗಾದೆ. ಹೇಗೂ ಅವರನ್ನು ಒಪ್ಪಿಸಿ ಅಲ್ಲಿಗೂ ಹೋಯಿತು. ಅಲ್ಲಿಯದ್ದು ಬೇರೆ ಸಂಕಟ. ಅಪರೂಪದ ಅತಿಥಿಗಳನ್ನು ಬೇಗ ಬಿಟ್ಟುಕೊಡುತ್ತಾರೆಯೇ? ಅವರ ಮಕ್ಕಳ ಪ್ರತಿಭಾ ಪ್ರದರ್ಶನ, ಆಧುನಿಕ ವಿದ್ಯಾಭ್ಯಾಸದ ಸವಾಲುಗಳು, ಮತ ಸೌಹಾರ್ದತೆಯ ಬಗ್ಗೆ ದೀರ್ಘ ಸಂವಾದ ನಡೆಸಿದರು. ಕೊನೆಗೆ ಎಲ್ಲಾ ಮುಗಿಯುವಾಗ ಕತ್ತಲಾಯಿತು. ಹಾಲು ತುಂಬಿದ ದನದ ಕೆಚ್ಚಲಿಗಿಂತ ಬಾತ ಮೊಗ ನಮ್ಮ ಸಹ ಪಯಣಿಗರದ್ದು! ಹೊರಡುವಾಗ ನಮ್ಮಲ್ಲೆ ಒಬ್ಬರು ‘ನಿಮ್ಮಲ್ಲಿಗೆ ಬರಬೇಕು ಅಂತಲೇ ಬಂದದ್ದು ಅಂತ ಅತಿಥೇಯರ ಖುಷಿಗೆ ತುಪ್ಪ ಸುರಿದರು. ಅಷ್ಟರಲ್ಲಿ ನಮ್ಮ ಜೊತೆಗಿದ್ದ ಒಬ್ಬ ಪುಟಾಣಿ ಪೋಕ್ರಿ, “ಹೇಗೂ ಬಂದಿದ್ದೇವೆ ಅಲ್ವಾ…? ನಿಮ್ಮ ಚೊರೆ ನೆನಪಾಯಿತು’ ಎಂದ! ಅವನ ಅಧಿಕ ಪ್ರಸಂಗದಲ್ಲಿ ಸಮಯ, ತಾಳ್ಮೆ, ಹಣ ಧರ್ಮಕ್ಕೆ ಕಳೆದುಕೊಳ್ಳುವಂತಾಯಿತು.
ಕೆಲವು ತಿಂಗಳುಗಳ ಹಿಂದೆ ಒಮ್ಮೆ ಗುಜರಾತಿಗೆ ಹೋಗಬೇಕಾದ ಸಂದರ್ಭ ಬಂತು, ಹೊರಡುವ ಸುದ್ದಿ ತಿಳಿದದ್ದೆ ಹಲವು ಆತ್ಮೀಯರು, “ಹೇಗೂ ಹೋಗಲಿಕ್ಕುಂಟಲ್ಲ, ಸೂರತ್ ಗೆ ಹೋಗಿ ಸೂರತ್ ಸಾರಿ ತನ್ನಿ, ಹೋಲ್ ಸೇಲ್ಗೆ ತುಂಬಾ ಚೀಪ್ ರೇಟ್ ಅಂತೆ ಅಂದರು. ಸರಿ ಮರ್ಯಾದಿ ಪ್ರಶ್ನೆ. ನಮ್ಮ ಸಂಬಂಧಿಕರು ಇರುವ ಸ್ಥಳ ಗುಜರಾತಿನ ಒಂದು ಮೂಲೆಯಾದರೆ ಸೂರತ್ ಸರೀ ವಿರುದ್ಧದ ಇನ್ನೊಂದು ಮೂಲೆ. ಹೋಗಲಿ ಹೇಗೂ ಬಂದಿದ್ದೇವಲ್ಲ ಎಂದು ಕಾರು ಬಾಡಿಗೆ ಹಿಡಿದು ಟ್ರಾಫಿಕ್ ಕಿರಿಕಿರಿಯಲ್ಲಿ ದಿನ ಇಡೀ ಪಯಣಿಸಿ ಸೂರತ್ ಸೇರಿ ಸಾರಿ ಖರೀದಿಸಿ ಹೇಗೂ ತಂದದ್ದಾಯಿತು. ಊರಿಗೆ ಬಂದು ಅದನ್ನು ಹಂಚುವಾಗ ‘ಇದು ಎಂಥ ಸೂರತ್ ಸಾರಿ? ನಮಗೆ ಪುತ್ತೂರಿನಲ್ಲಿ ಇದಕ್ಕಿಂತ ವೆರೈಟಿ ಚೀಪ್ ರೇಟಿನ ಸೂರತ್ ಸಾರಿ ಸಿಗುತ್ತದೆ ‘ಎಂಬ ಮಾತು ಬಂತು. ಮತ್ತೆ ಕಾಂಚಿ, ಬನಾರಸ್ ಗೆ ಹೋಗುವಾಗ ಪಕ್ಕದ ಮನೆಯವರಲ್ಲೂ ಸುದ್ದಿ ಹೇಳಲಿಲ್ಲ!
ಈ ಹೇಗೂ. ಇಷ್ಟಕ್ಕೆ ಸೀಮಿತವಲ್ಲ. ಮಡದಿಗೆ ಹೊಟ್ಟೆ ನೋವು, ಚಿಕಿತ್ಸೆಗೆ ಹೋಗಿದ್ದೆ ಅಂದರೆ, ಹೌದಾ, ಹೇಗೂ ಹೋಗಿದ್ದಿರಿ ಅಲ್ವಾ, ನಿಮಗೂ ಒಮ್ಮೆ ಕಂಪ್ಲೀಟ್ ಬಾಡಿ ಚೆಕಪ್ ಮಾಡಿಸಿಕೊಳ್ಳಬಹುದಿತ್ತು ಎನ್ನುವ ಸಲಹೆ ಬರುತ್ತದೆ. ಮಾಡಿಸಿದೆವೋ ಏನಾದರೊಂದು ಎಡವಟ್ಟು ಕಾಣಿಸಿ ಹೇಗೂ ಒಂದೆರಡು ಮಾತ್ರೆ ಡಾಕ್ಟರ್ ಬರೆದೇ ಬರೆಯುತ್ತಾರೆ.
ಈ ಹೇಗೂಗಳಲ್ಲಿ ಪೆಟ್ಟೊಂದು ತುಂಡೆರಡು ಎನ್ನುವ ಹಾಗೆ ಲಾಭ ನಷ್ಟ ಎರಡೂ ಉಂಟು.
ಹೇಗೂ ವಾಕಿಂಗ್ ಹೋದವರು ನಾಲ್ಕು ಹೆಜ್ಜೆ ಜಾಸ್ತಿ ಹಾಕಿ ಹಾಲು ತರುವುದು, ಹೇಗೂ ತರಕಾರಿಗೆ ಹೋದವರ ದಿನಸಿ ತರುವುದು, ಹೇಗೂ ಪೋಸ್ಟ್ ಆಪೀಸಿಗೆ ಹೋದವರು ಕರೆಂಟ್ ಆಪೀಸಿಗೂ ಹೋಗಿ ಬರುವುದು,ಹೇಗೂ ಒಂದು ರಜೆ ಉಂಟು, ಇನ್ನೊಂದು ಮಾಡಿದರೆ ಊರಿಗೆ ಹೋಗಿ ಬರಬಹುದು ಅನ್ನಿಸುವುದು, ಇತ್ಯಾದಿ ಲಾಭಗಳಾದರೆ, ಹೇಗೂ ಹೋದದ್ದರಲ್ಲಿ ಕಡಿಮೆ ರೇಟಿಗೆ ಸಿಕ್ಕಿತು ಎಂದು ತರುವ ಅನಗತ್ಯ ಸಾಮಾನುಗಳು, ಹೇಗೂ ಹೋಗಿದ್ದೇವೆ ಅಲ್ವಾ ಎಂದು ಬಂದ ಉದ್ದೇಶಕ್ಕಿಂತ ಬೇರೆಯ ವಿಚಾರಕ್ಕೆ ಸಮಯ, ಹಣ ವ್ಯಯಿಸುವುದು, ಇತ್ಯಾದಿಗಳು ಬರೇ ನಷ್ಟದ ದಾರಿಗಳು.ಹಾಗೂ ಹೀಗೂ ಈ ಹೇಗೂ…ಗಳ ಪಟ್ಟಿ ಮುಗಿಯುವದೇ ಇಲ್ಲವೇನೋ…ಯಾಕೆಂದರೆ ಹೇಗೂ ಜನಿಸಿ ಆಗಿದೆ ಸಾಯುವವರೆಗೆ ಹೇಗೂ ಬದುಕಬೇಕಲ್ಲ!
ಹೇಗೂಗಳ ಲೋಕದಲ್ಲಿ ಒಂದು ಕಿರು ಪಯಣ, ಚೆನ್ನಾಗಿದೆ (ಹೇಗೂ ಸಮಯ ಮಾಡಿಕೊಂಡು ಓದಲು ಕಳಿತಿದ್ದೆ. ಈ ಲೇಖನವನ್ನೂ ಓದಿ ಮುಗಿಸಿದೆ).