‘ರಾಜನೀತಿಯ ಅಖಾಡವಾಗಿ ದಿಲ್ಲಿ’

ಅಂಗೋಲಾದಲ್ಲಿದ್ದ ಪ್ರಸಾದ್ ನಾಯ್ಕ್ ಈಗ ದೆಹಲಿ ವಾಸಿ. ಆಗ ಅವಧಿಗೆ ‘ಹಾಯ್ ಅಂಗೋಲಾ’ ಬರೆದರು. ಈಗ ‘ಚಲೋ ದಿಲ್ಲಿ..’

ದಿಲ್ಲಿ ನಮ್ಮ ದೇಶದ ರಾಜಕೀಯ ಶಕ್ತಿ ಕೇಂದ್ರ. 

ಹೀಗಾಗಿ ಪತ್ರಿಕೆಗಳಿಂದ ಹಿಡಿದು ಸುದ್ದಿವಾಹಿನಿಗಳವರೆಗೆ ದಿಲ್ಲಿ ಯಾವತ್ತೂ ಸುದ್ದಿಯಲ್ಲಿರುವ ಮಹಾನಗರಿ. ನಾನು ಬಾಲ್ಯದಲ್ಲಿ ದಿಲ್ಲಿಯ ಹಲವು ಆಯಕಟ್ಟಿನ ಕಚೇರಿಗಳನ್ನು ಲೆಕ್ಕವಿಲ್ಲದಷ್ಟು ಬಾರಿ ಟಿವಿಯಲ್ಲಿ ನೋಡಿದ್ದೆ. ಎಷ್ಟರ ಮಟ್ಟಿಗೆಂದರೆ ಸಂಜೆ ಏಳರ ವಾರ್ತೆ ಪ್ರಸಾರವಾಯಿತೆಂದರೆ ಇವುಗಳು ಒಂದಲ್ಲಾ ಒಂದು ಕಾರಣಗಳಿಂದ ಕಾಣಲೇಬೇಕು ಎನ್ನುವಷ್ಟು. ಆಗೆಲ್ಲಾ ನಮಗೆ ದಿಲ್ಲಿ ಎಂದರೆ ಸುಪ್ರೀಂ ಕೋರ್ಟ್ ಕಟ್ಟಡದ ಗುಮ್ಮಟ, ಸಂಸತ್ ಭವನ, ತೀನ್ ಮೂರ್ತಿ ಬಳಿ ಗಾಂಧಿ ತನ್ನ ಸಂಗಡಿಗರೊಂದಿಗೆ ನಡೆಯುತ್ತಿರುವ ಮೂರ್ತಿ, ಇಂಡಿಯಾ ಗೇಟ್, ಕೆಂಪುಕೋಟೆ ಇತ್ಯಾದಿಗಳಷ್ಟೇ.

ಹಾಗಂತ ಇದು ದಿಲ್ಲಿಗಷ್ಟೇ ಸೀಮಿತವಲ್ಲ. ಬೆಂಗಳೂರು ಎಂದರೆ ವಿಧಾನಸೌಧ, ಮುಂಬೈ ಎಂದರೆ ಸ್ಟಾಕ್ ಎಕ್ಸ್ ಚೇಂಜ್ ಕಟ್ಟಡ, ಅಮೆರಿಕಾ ಎಂದರೆ ಸ್ಟಾಚ್ಯೂ ಆಫ್ ಲಿಬರ್ಟಿ ಅಥವಾ ಶ್ವೇತಭವನ, ಈಜಿಪ್ಟ್ ಎಂದರೆ ಪಿರಾಮಿಡ್… ಹೀಗೆ ದೂರದರ್ಶನದ ಕಾಲದಲ್ಲಿ ನಾವೆಲ್ಲಾ ಆಗಷ್ಟೇ ನೋಡುತ್ತಿದ್ದ ಜಗತ್ತು ಈ ಬಗೆಯದ್ದಾಗಿತ್ತು. ಹೀಗಾಗಿ ದಿಲ್ಲಿಗೆ ಬಂದಿಳಿದ ನಂತರ ಹಲವು ಸರಕಾರಿ ಮಂತ್ರಾಲಯಗಳ ಕಚೇರಿಗಳ ಭವ್ಯ ಕಟ್ಟಡಗಳನ್ನು ನೋಡಿ ರೋಮಾಂಚನವಾಗುವುದಕ್ಕಿಂತ ಹೆಚ್ಚಾಗಿ, ಹಳೆಯ ಗೆಳೆಯನೊಬ್ಬನನ್ನು ಹಲವು ವರ್ಷಗಳ ಬಳಿಕ ಮತ್ತೆ ಕಂಡಂತೆ ಹಾಯ್ ಎಂದಿದ್ದೇ ಹೆಚ್ಚು. 

ಶಾಲಾದಿನಗಳಲ್ಲಿ ದೇಶದ ರಾಜಕೀಯ ಸ್ಥಿತಿಗತಿಗಳನ್ನು ಒಂದು ಮಟ್ಟಿಗೆ ಅರಿಯುವ ಹಂತಕ್ಕೆ ಬಂದ ನಂತರ ರಾಜ್ಯ ಮತ್ತು ಕೇಂದ್ರಗಳ ಜುಗಲ್ಬಂದಿಯ ಬಗ್ಗೆ ಒಂದಷ್ಟು ತಿಳಿಯತೊಡಗಿತ್ತು. ಸಂಪಾದಕೀಯಗಳನ್ನು ಓದುತ್ತಾ ದಿಲ್ಲಿ ಲಾಬಿ, ಹೈಕಮಾಂಡ್ ನಂತಹ ಸಂಗತಿಗಳ ಪರಿಚಯವಾದವು. ಪಕ್ಷಾಂತರಗಳನ್ನಷ್ಟೇ ಕಂಡಿದ್ದ ನಾವೆಲ್ಲಾ ಮುಂದೆ ಆಪರೇಷನ್ ಕಮಲ, ರೆಸಾರ್ಟ್ ರಾಜಕಾರಣಗಳಂತಹ ಪದಗಳನ್ನೂ ನಮ್ಮ ಪದಪುಂಜಗಳಲ್ಲಿ ಸೇರಿಸಿಕೊಂಡೆವು. ರಾಜನೀತಿಯು ಜನಸೇವೆಗಿಂತ ಹೆಚ್ಚಾಗಿ, ಭಯಂಕರ ಲೆಕ್ಕಾಚಾರದ ಆಟವೆಂಬುದು ಇಷ್ಟಿಷ್ಟಾಗಿಯೇ ನಮ್ಮ ತಲೆಯೊಳಗೆ ಸೇರತೊಡಗಿತ್ತು. 

ಇತ್ತ ದಿಲ್ಲಿಗೆ ಬಂದ ನಂತರ ಇವುಗಳನ್ನೆಲ್ಲಾ ಕಲೆಕ್ಟಿವ್ ಆಗಿ ಕಾಣುವ ಅವಕಾಶಗಳು ಸಿಗತೊಡಗಿದ್ದವು. ದಿಲ್ಲಿಯಲ್ಲಿ ಯಾವುದಾದರೊಂದು ರಾಜ್ಯದ ಭವನಕ್ಕೆ ಊಟಕ್ಕೋ, ಗೆಳೆಯರನ್ನು ಭೇಟಿಯಾಗುವುದಕ್ಕೋ ಹೋಗುವುದಾದರೆ, ಆಯಾ ರಾಜ್ಯದ ರಾಜಕೀಯ ಸ್ಥಿತಿಯೂ ಕೂಡ ನಮ್ಮ ಖಾಸಗಿ ಕಾರ್ಯಕ್ರಮಗಳ ನಡುವೆ ಥಕಥೈ ಕುಣಿಯುವುದು ಸಾಮಾನ್ಯವಾಗಿತ್ತು. ರಾಜ್ಯದ ಭವನಗಳಲ್ಲಿ ಆಯಾ ರಾಜ್ಯಗಳ ಮುಖ್ಯಮಂತ್ರಿಗಳು, ಕ್ಯಾಬಿನೆಟ್ ಸಚಿವರು ದಿಲ್ಲಿಗೆ ಬಂದಾಗಲೆಲ್ಲಾ ಓಡಾಡುವುದು, ಬಂದು ಉಳಿಯುವುದು ಸಾಮಾನ್ಯ. ಇನ್ನು ಸರಕಾರ ಕಟ್ಟುವ ಮತ್ತು ಉರುಳಿಸುವ ಕಸರತ್ತುಗಳೇನಾದರೂ ದಿಲ್ಲಿಯಲ್ಲಿ ನಡೆಯುತ್ತಿದ್ದರೆ ರಾಜ್ಯಭವನಗಳು ಕೊಂಚ ಹೆಚ್ಚೇ ವ್ಯಸ್ತವಾಗಿರುತ್ತವೆ. ಇತ್ತ ಸ್ಕೂಪ್ ತಲಾಶೆಯಲ್ಲಿರುವ ಸುದ್ದಿವಾಹಿನಿಗಳ ಮಂದಿಯೂ ಕೂಡ ಭವನಗಳಲ್ಲಿ ಸಾಮಾನ್ಯವಾಗಿ ಓಡಾಡುತ್ತಿರುತ್ತಾರೆ. 

ದಿಲ್ಲಿಯೆಂಬುದು ನಮ್ಮ ಹಳ್ಳಿಗಳಿಗೂ ಹೊಸತೇನಲ್ಲ. ದಿಲ್ಲಿಯ ಸುದ್ದಿಗಳನ್ನು ಪತ್ರಿಕೆಗಳಲ್ಲಷ್ಟೇ ಓದುತ್ತಿದ್ದ ಕಾಲದಲ್ಲೂ ಜನರಿಗೆ ದಿಲ್ಲಿಯ ಬಗ್ಗೆ ಒಂದಷ್ಟು ಮಟ್ಟಿಗೆ ತಿಳಿದಿತ್ತು. ಬೆಂಗಳೂರು-ದಿಲ್ಲಿಗಳನ್ನು ಕೇಳಿಯಷ್ಟೇ ತಿಳಿದಿದ್ದ ಹಳ್ಳಿಯ ಜನಸಾಮಾನ್ಯರಿಗೂ ವಿಧಾನಸೌಧ, ರಾಜಭವನ, ಸಂಸತ್ತು… ಇತ್ಯಾದಿಗಳು ನಾಮಬಲದಿಂದ ಗೊತ್ತಿದ್ದವು. ಜೈಕಾರದ ಮತ್ತು ಪ್ರತಿಭಟನೆಯ ಘೋಷಣೆಗಳಲ್ಲಿ ದಿಲ್ಲಿ ಆಗಾಗ ಕಾಣಿಸಿಕೊಳ್ಳುತ್ತಲಿತ್ತು. ಹೀಗಿದ್ದ ಮೇಲೆ ದೃಶ್ಯಮಾಧ್ಯಮಗಳು ಬಂದ ನಂತರ ಕೇಳಬೇಕೇ? ಕ್ಯಾಮೆರಾಗಳು ಆಯಕಟ್ಟಿನ ಶಕ್ತಿಕೇಂದ್ರಗಳ ಅಂಗಣಕ್ಕೂ ಬಂದವು; ರಾಜಕೀಯ ಕಸರತ್ತುಗಳನ್ನು ಭಾರತೀಯರಿಗೆ ನೇರಪ್ರಸಾರದಲ್ಲಿ ತೋರಿಸಿದವು. 

ಹಾಗೆ ನೋಡಿದರೆ ಮಾಧ್ಯಮಗಳಲ್ಲಿ ಅಷ್ಟಾಗಿ ಕಾಣಿಸಿಕೊಳ್ಳದ ದಿಲ್ಲಿಯ ಏಕೈಕ ಶಕ್ತಿಕೇಂದ್ರವೆಂದರೆ ರಾಷ್ಟ್ರಪತಿ ಭವನ. ಹೀಗಾಗಿ ಜನಸಾಮಾನ್ಯರಲ್ಲಿ ರಾಷ್ಟ್ರಪತಿ ಭವನದೊಳಗಿನ ಬದುಕಿನ ಬಗ್ಗೆ ಕುತೂಹಲಗಳಿರುವುದು ಸಾಮಾನ್ಯ. ಎ.ಪಿ.ಜೆ ಅಬ್ದುಲ್ ಕಲಾಂರವರು ಭಾರತದ ರಾಷ್ಟ್ರಪತಿಗಳಾಗಿದ್ದಾಗ ನಡೆದ ಸ್ವಾರಸ್ಯಕರ ಘಟನೆಯೊಂದರ ಬಗ್ಗೆ ಅವರ ಕಾರ್ಯದರ್ಶಿಯಾಗಿದ್ದ ಪಿ. ಎಮ್. ನಾಯರ್ ತನ್ನ ಕೃತಿಯಲ್ಲಿ ಹೀಗೆ ನೆನಪಿಸಿಕೊಳ್ಳುತ್ತಾರೆ.

ಕಲಾಂರವರು ರಾಷ್ಟ್ರಪತಿಯಾಗಿದ್ದು ಹಲವು ಕಾರಣಗಳಿಂದ ದೇಶದಾದ್ಯಂತ ಸುದ್ದಿ ಮಾಡಿತ್ತು. ಈ ದೇಶ ಕಂಡ ಖ್ಯಾತಿ ವಿಜ್ಞಾನಿಯೆಂಬುದು ಒಂದು ಕಡೆಯಾದರೆ, ಅವರು ಅವಿವಾಹಿತರು ಎಂಬ ಸಂಗತಿಯೂ ಇವುಗಳಲ್ಲೊಂದಾಗಿತ್ತು. ಮುಂದೆ ಕಲಾಂರವರು ಪ್ರಮಾಣವಚನವನ್ನು ಸ್ವೀಕರಿಸಿ ದೇಶದ ರಾಷ್ಟ್ರಪತಿಯಾಗಿ ಅಧಿಕಾರವನ್ನು ವಹಿಸಿಕೊಂಡ ನಂತರ ಅವರಿಗೆ ದೇಶದ ಮೂಲೆಮೂಲೆಗಳಿಂದ ಪತ್ರಗಳು ಮತ್ತು ಇ-ಮೈಲ್ ಗಳು ಬರುತ್ತಿದ್ದವು. ಜನಾಡಳಿತಕ್ಕೆ ಸಂಬಂಧಪಟ್ಟಂತೆ ಮುಖ್ಯ ಸಂಗತಿಗಳಿಂದ ಹಿಡಿದು, ತಲೆಬುಡವಿಲ್ಲದ ಪತ್ರಗಳೂ ಕೂಡ ದಂಡಿಯಾಗಿ ಕಲಾಂರವರಿಗೆ ಬರುತ್ತಿದ್ದವಂತೆ. ಅಂತಹ ಸ್ವಾರಸ್ಯಕರ ಪತ್ರಗಳಲ್ಲಿ ಇದೂ ಒಂದು. 

ಸನ್ಮಾನ್ಯ ರಾಷ್ಟ್ರಪತಿಗಳಿಗೆ,

ನಾನು ರಾಷ್ಟ್ರಪತಿ ಭವನದ ಅಧಿಕೃತ ಒಡತಿಯಾಗಿ ಸೇವೆ ಸಲ್ಲಿಸಬಲ್ಲೆ. ನಾನೋರ್ವ ಆಕರ್ಷಕ ವ್ಯಕ್ತಿತ್ವದ, ಐವತ್ತರ ಪ್ರಾಯದ ಮಹಿಳೆ. ಪಟ್ನಾ ವಿಶ್ವವಿದ್ಯಾಲಯದಿಂದ ಮಾಸ್ಟರ್ಸ್ ಮಾಡಿದ್ದೇನೆ. ಹೋಂ ಸೈನ್ಸ್ ನನ್ನ ನೆಚ್ಚಿನ ವಿಷಯ. ಹಾಸ್ಪಿಟಾಲಿಟಿ ಬಗ್ಗೆ ನನಗೆ ನಂಬಿಕೆಯಿದೆ. ರಾಷ್ಟ್ರಪತಿ ಭವನಕ್ಕೆ ಬರುವ ಅತಿಥಿಗಳನ್ನು ಗೌರವಪೂರ್ವಕವಾಗಿ ಸ್ವಾಗತಿಸುವುದು, ಬಂದವರನ್ನು ಆದರದಿಂದ ಕಾಣುವುದು ಇತ್ಯಾದಿಗಳನ್ನು ನಾನು ಮಾಡಬಲ್ಲೆ. 

ಈ ಪತ್ರದೊಂದಿಗೆ ನನ್ನದೊಂದು ಭಾವಚಿತ್ರವನ್ನು ಕೂಡ ಲಗತ್ತಿಸಿದ್ದೇನೆ. ಈ ಬಗ್ಗೆ ನನ್ನ ಗಂಡ ಪ್ರೊಫೆಸರ್ …… ಬಳಿ ಕೂಡ ಚರ್ಚಿಸಿದ್ದೇನೆ. ಮುಕ್ತಮನೋಭಾವದ ವ್ಯಕ್ತಿಯಾಗಿರುವ ಅವರು ಇದಕ್ಕೆ ಸಮ್ಮತಿಸಿದ್ದಾರೆ. ಯಾರಿಗಾದರೂ ನೆರವಾಗುವುದೆಂದರೆ ಅವರಿಗೆ ಬಹಳ ಇಷ್ಟ. ನಮ್ಮ ಮನೆಯಲ್ಲಿ ನಾವಿಬ್ಬರು ಮಾತ್ರ ಸದಸ್ಯರು. 

ದಯವಿಟ್ಟು ನಿಮ್ಮ ಮತ್ತು ನಿಮ್ಮ ಇಡೀ ತಂಡದ ಸೇವೆ ಮಾಡಲು ಅವಕಾಶ ಮಾಡಿಕೊಡಿ.

ಧನ್ಯವಾದಗಳೊಂದಿಗೆ,

…………..

ಎಂ. ಪಿ. ನಾಯರ್ ಮೇಲಿನ ಪತ್ರದ ಬಗ್ಗೆ ವಿನೋದದ ಧಾಟಿಯಲ್ಲಿ ಬರೆಯುತ್ತಾ “ಫಸ್ಟ್ ಲೇಡಿ” ಕಲಾಂರವರಿಗೂ, ದೇಶಕ್ಕೂ ಆ ಅವಧಿಯಲ್ಲಿ ಬೇಕಿರಲಿಲ್ಲ ಎನ್ನುತ್ತಾರೆ. ಜೊತೆಗೇ ಪತ್ರದಲ್ಲಿ ಹೇಳಿರುವ ಈ ಮುಕ್ತ ಮನೋಭಾವದ ಗಂಡನ ಕಾನ್ಸೆಪ್ಟ್ ಅವರಿಗೆ ಅರ್ಥವಾಗಲಿಲ್ಲವಂತೆ. 

ಹೀಗೆ ರಾಷ್ಟ್ರಪತಿ ಭವನಕ್ಕೆ ಕಲಾಂ ಅವಧಿಯಲ್ಲಿ ಬರುತ್ತಿದ್ದ ಪತ್ರಗಳ ಸ್ಯಾಂಪಲ್ ಇದು. ಅಪಾರ ಅಭಿಮಾನಿ ಬಳಗವುಳ್ಳ ರಾಜಕಾರಣಿಯೊಬ್ಬರಿಗೆ ಇದು ಸಹಜವೂ ಹೌದು. ನಾಯರ್ ಹೇಳುವಂತೆ ಕಲಾಂರವರಿಗೆ ಎಲ್ಲಾ ಪತ್ರಗಳೂ ಮುಖ್ಯವಾಗಿರುವುದೇ ಆಗಿದ್ದವು. ಒಬ್ಬನಂತೂ ಸ್ವತಃ ತನ್ನನ್ನೇ “ವಿಶ್ವನಾಯಕ” ಮತ್ತು “ವಿಶ್ವ ರಾಷ್ಟ್ರಪತಿ” ಎಂದು ಸಂಬೋಧಿಸಿಕೊಂಡು ಪತ್ರವೊಂದನ್ನು ಬರೆದಿದ್ದ. ವ್ಯಾಟಿಕನ್ ಮತ್ತು ಮೆಕ್ಕಾಗಳನ್ನು ಬಳಸಿಕೊಂಡು ರಷ್ಯಾವನ್ನು ಅಮೆರಿಕಾದಿಂದ ಹೇಗೆ ರಕ್ಷಿಸಬಹುದು ಎಂಬ ಬಗ್ಗೆ ಕಲಾಂರವರಿಗೆ ಆ ಪತ್ರದಲ್ಲಿ ಸಲಹೆಯಿತ್ತು. ಕೊನೆಯಲ್ಲಿ “ಭಗವಂತನ ರಾಯಭಾರಿ” ಎಂದು ಸಹಿಯೂ ಇತ್ತು. 

ತಮಾಷೆಯೆಂದರೆ ಅಧಿಕಾರಕ್ಕೆ ಬಂದ ಆರಂಭದ ದಿನಗಳಲ್ಲಿ ಇಂತಹ ಪತ್ರಗಳನ್ನೂ ಕೂಡ ಕಲಾಂ ತನ್ನ ಕಾರ್ಯದರ್ಶಿಯೊಂದಿಗೆ ಚರ್ಚಿಸುತ್ತಿದ್ದರು. ದೇಶದ ಘನತೆವೆತ್ತ ರಾಷ್ಟ್ರಪತಿಯವರ ಅಮೂಲ್ಯ ಸಮಯವು ಇಂತಹ ಕೀಟಲೆಯ ಪತ್ರಗಳಲ್ಲಿ ವ್ಯಯವಾಗಬಾರದೆಂಬ ಸದುದ್ದೇಶದಿಂದ, ಮುಂದೆ ಪತ್ರಗಳಿಗೆ ಸಂಬಂಧಪಟ್ಟಂತೆ ನಾಯರ್ ಬದಲಿ ವ್ಯವಸ್ಥೆಗಳನ್ನು ರೂಪಿಸಿದರು. ದಿಲ್ಲಿಯ ರಾಷ್ಟ್ರಪತಿ ಭವನದಂತಹ ಆಯಕಟ್ಟಿನ ಕಚೇರಿಗಳಲ್ಲಿ ದಿನಚರಿಯಂತೆ ನಡೆಯುವ ಸ್ವಾರಸ್ಯಗಳಿಗೆ ಇದೊಂದು ಚಿಕ್ಕ ಇಣುಕುನೋಟ.      

ಹೀಗೆ ರಾಜಕೀಯದ ಬಗ್ಗೆ ಏನೇನೂ ಗೊತ್ತಿಲ್ಲದವರಿಗೂ ದಿಲ್ಲಿಯ ಶಕ್ತಿಕೇಂದ್ರಗಳಲ್ಲಿ ಕೂತಿರುವ ಜನಪ್ರತಿನಿಧಿಗಳ ಬಗ್ಗೆ ಕುತೂಹಲವಿರುತ್ತದೆ. ಅವರ ಜೀವನಶೈಲಿಯ ಬಗ್ಗೆ ಆಸಕ್ತಿಯಿರುತ್ತದೆ. ಇತ್ತೀಚಿನ ಕೆಲ ವರ್ಷಗಳಲ್ಲಿ ಸಾಮಾಜಿಕ ಜಾಲತಾಣಗಳು ಬಂದ ನಂತರ ಬಹಳಷ್ಟು ಜನಪ್ರತಿನಿಧಿಗಳು ತಮ್ಮ ಪ್ರಯಾಣಗಳಿಂದ ಹಿಡಿದು, ಉಂಡ ಆಹಾರದ, ಉಟ್ಟ ಬಟ್ಟೆಯ, ಸೆಲೆಬ್ರಿಟಿ ಸೆಲ್ಫಿಯ ಬಗ್ಗೆ… ಹೀಗೆ ಹಲವು ಖಾಸಗಿ ಸಂಗತಿಗಳನ್ನು ಜನರೊಂದಿಗೆ ಹಂಚಿಕೊಳ್ಳುವ ಪರಿಪಾಠಗಳು ಬಂದಿವೆ. ಇವುಗಳಲ್ಲದೆ ಕ್ಯಾಮೆರಾ ಮುಂದೆ ವಿಪರೀತವೆನಿಸುವಷ್ಟು ಕಾಣಿಸಿಕೊಳ್ಳುವ ರಾಜಕಾರಣಿಗಳೂ ನಮ್ಮ ನಡುವೆ ಇದ್ದಾರೆ.  

ರಾಷ್ಟ್ರಪತಿ, ಪ್ರಧಾನಮಂತ್ರಿ, ಲೋಕಸಭಾ ಸ್ಪೀಕರ್ ಗಳಿಂದ ಹಿಡಿದು ಕೇಂದ್ರ ಸಂಪುಟದ ಸಚಿವರ ಮನೆ ಮತ್ತು ಕಾರ್ಯಾಲಯಗಳ ಬಿಡುವಿಲ್ಲದ ಚಟುವಟಿಕೆಗಳನ್ನು ನಿಭಾಯಿಸಲು ಸಿಬ್ಬಂದಿಗಳ ಒಂದು ದೊಡ್ಡ ವರ್ಗವೇ ಇರುತ್ತದೆ. ಈಚೆಗೆ ದಿಲ್ಲಿಯಲ್ಲಿ ಮಾತಿಗೆ ಸಿಕ್ಕ ಮಾಜಿ ಸೈನಿಕನೊಬ್ಬ ಹಿರಿಯ ಕಾಂಗ್ರೆಸ್ ನಾಯಕಿಯೊಬ್ಬರ ಮ್ಯಾನೇಜರ್ ಆಗಿ ಸೇವೆ ಸಲ್ಲಿಸಿದ ಅನುಭವಗಳ ಬಗ್ಗೆ ಹೇಳುತ್ತಿದ್ದ. ಒಮ್ಮೆ ಖ್ಯಾತ ಕೆನಡಿಯನ್ ಗಾಯಕ ಬ್ರಯಾನ್ ಆಡಮ್ಸ್ ದಿಲ್ಲಿಗೆ ಬಂದಾಗ “ನನಗೆ ಗ್ಲುಟೆನ್ ಫ್ರೀ ಡಯೆಟ್ಟೇ ಮಾಡಿಸಿ ಪ್ಲೀಸ್” ಎಂದು ಇವರಲ್ಲಿ ಸ್ವತಃ ಕೋರಿದ್ದನಂತೆ.  

ಅಧಿಕಾರದಲ್ಲಿರುವಷ್ಟು ಕಾಲ ರಾಜಕಾರಣಿಗಳ ಸರಕಾರಿ ನಿವಾಸಗಳು ಮದುವೆ ಮನೆಗಳಂತೆ ಸದಾ ಚಟುವಟಿಕೆಯಿಂದಿರುತ್ತವೆ. ಇನ್ನು ಜನಸಾಮಾನ್ಯರಿಂದ ಕ್ರಮೇಣ ದೂರವಾಗುತ್ತಾ ಹೋಗುವ ವಿಶ್ರಾಂತ ರಾಜಕಾರಣಿಗಳು ತಮ್ಮದೇ ಆದ ಖಾಸಗಿ ಜಗತ್ತಿನ ಗೂಡಿನಲ್ಲಿ, ತಮ್ಮ ಪಾಡಿಗೆ ನೆಮ್ಮದಿಯಿಂದಿರುವುದೂ ಕೂಡ ಸಹಜ. ಕೆಲ ವರ್ಷಗಳ ಹಿಂದೆ ನನ್ನ ಹಿರಿಯ ಮಿತ್ರರೊಬ್ಬರೊಂದಿಗೆ ಲೋಕಸಭಾ ಸ್ಪೀಕರ್ ಆಗಿದ್ದ ಶ್ರೀಮತಿ ಮೀರಾ ಕುಮಾರ್ ನಿವಾಸಕ್ಕೆ ಭೇಟಿಗೆಂದು ಹೋಗಿದ್ದೆವು. ಪ್ರಚಲಿತ ರಾಜಕರಣದಿಂದ ತಕ್ಕಮಟ್ಟಿಗೆ ಮರೆಯಾದ ನಂತರ ಮೀರಾ ಕುಮಾರ್ ತಮ್ಮ ಹೆಚ್ಚಿನ ಸಮಯವನ್ನು ಕಳೆಯುತ್ತಿದ್ದಿದ್ದು ಓದಿನಲ್ಲಿ. ಇನ್ನು ಅವರ ನಿವಾಸದ ಗೋಡೆಗಳನ್ನು ಅಲಂಕರಿಸಿದ್ದ ಹಲವು ಸುಂದರ ವರ್ಣಚಿತ್ರಗಳು ಸ್ವತಃ ಅವರದ್ದೇ ಆಗಿದ್ದವು. 

ಇನ್ನು ಅಂಬೇಡ್ಕರ್, ನೆಹರೂ, ಇಂದಿರಾ, ಶಾಸ್ತ್ರಿಯವರನ್ನೊಳಗೊಂಡಂತೆ ಹಲವು ದಿಗ್ಗಜರು ಓಡಾಡಿದ ಭಾಗಗಳು ಇಂದು ಅವರ ನೆನಪುಗಳನ್ನು ಜೋಪಾನವಾಗಿರಿಸಿಕೊಂಡ ವಸ್ತು ಸಂಗ್ರಹಾಲಯಗಳಾಗಿವೆ. ಕಳೆದ ತಲೆಮಾರಿನ ರಾಷ್ಟ್ರನಾಯಕರ ಶ್ರೀಮಂತ ಪರಂಪರೆಯನ್ನು ದಿಲ್ಲಿ ಇಂದಿಗೂ ಉಸಿರಾಡುತ್ತಿರುವುದು ಹೀಗೆ. ಅವುಗಳು ರಾಷ್ಟ್ರರಾಜಧಾನಿಯ ಹೆಮ್ಮೆಯೂ ಹೌದು. ಇವುಗಳಲ್ಲದೆ ಇಂದಿರಮ್ಮ ತನ್ನದೇ ಅಂಗರಕ್ಷಕರ ಕೈಯಲ್ಲಿ ಕೊಲೆಯಾದ ಜಾಗ, ಗೋಡ್ಸೆ ಗುಂಡೇಟಿಗೆ ಗಾಂಧಿ ಹತ್ಯೆಯಾದ ಗಾಂಧಿ ಸ್ಮøತಿಯ ಒಳಾಂಗಣ, ಬಾಂಬ್ ಸ್ಫೋಟದ ಭೀಕರತೆಯನ್ನು ಕಣ್ಣಿಗೆ ಕಟ್ಟುವಂತೆ ನೀಡುವ ರಾಜೀವ್ ಬಟ್ಟೆಯ ಚೂರುಗಳು… ಇಂತಹ ರಕ್ತಸಿಕ್ತ ಇತಿಹಾಸದ ನೆನಪುಗಳನ್ನೂ ಕೂಡ ದಿಲ್ಲಿಯು ತನ್ನೊಡಲಿನಲ್ಲಿ ಜೋಪಾನವಾಗಿ ಕಾದಿರಿಸಿದೆ.   

ಹೀಗೆ ದಿಲ್ಲಿ ಮತ್ತು ರಾಜಕೀಯ ಎಂದರೆ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಹೀಗಾಗಿ ರಾಷ್ಟ್ರರಾಜಧಾನಿಯ ಆಯಕಟ್ಟಿನ ಅಂಗಳಗಳಲ್ಲಿ ವಿಭಿನ್ನವಾದದ್ದು ಏನು ನಡೆದರೂ ಸುದ್ದಿಯಾಗುತ್ತದೆ. ದಿಲ್ಲಿಗೆ ಯಾವುದೋ ದೇಶದ ರಾಷ್ಟ್ರಾಧ್ಯಕ್ಷರೋ, ಪ್ರಧಾನಮಂತ್ರಿಯೋ ಬರುವುದಾದರೆ ರಾಷ್ಟ್ರಾಧ್ಯಕ್ಷರು ತಂಗಿರುವ ಪಂಚತಾರಾ ಹೋಟೀಲಿನ ಸುತ್ತಮುತ್ತಲ ಮತ್ತು ದಿಲ್ಲಿಯ ಆಯ್ದ ಬೀದಿಗಳು ಅತಿಥಿಯನ್ನು ಆದರಪೂರ್ವಕವಾಗಿ ಸ್ವಾಗತಿಸುವ ಫ್ಲೆಕ್ಸುಗಳಿಂದ ತುಂಬಿಹೋಗುತ್ತವೆ. ರಾಯಭಾರ ಕಚೇರಿಗಳು ಗರಿಗೆದರುತ್ತವೆ. ಟ್ರಾಫಿಕ್ ವ್ಯವಸ್ಥೆಗಳು ಅನುಕೂಲಕ್ಕೆ ತಕ್ಕಂತೆ ಮಗ್ಗುಲು ಬದಲಿಸುತ್ತವೆ. ಅಂತಾರಾಷ್ಟ್ರೀಯ ಆಯೋಜನೆಗಳಿಗೆ ದಿಲ್ಲಿಯು ವೇದಿಕೆಯಾದರಂತೂ ಶಹರಕ್ಕೆ ಅಪ್ಪಟ ಮದುವಣಗಿತ್ತಿಯ ಕಳೆ. 

ಹೀಗೆ ದೇಶ ಮತ್ತು ಜಾಗತಿಕ ಮಟ್ಟದ ರಾಜಕೀಯ ಆಯಾಮದಲ್ಲಷ್ಟೇ ದಿಲ್ಲಿಯನ್ನು ಒಂದರೆಕ್ಷಣ ಕಂಡರೆ ಇಲ್ಲಿ ಎಲ್ಲವೂ ಸುಂದರ, ಸುಸಜ್ಜಿತ ಮತ್ತು ಸರಾಗ.

‍ಲೇಖಕರು Admin

October 4, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: