ಹಾಗೆಲ್ಲ ನೀ ಹೇಳಿದೊಡನೆ
ಕೇಳುವವರಲ್ಲ ನಾವು!
ಎಲ್ಲ ಮಾಯೆ ಎಂದೊಡನೆ
ಒಪ್ಪಿ ತಬ್ಬಬೇಕಿತ್ತೇನು!!?
ನಾವೇ ಬೀಳಬೇಕು ಹಗಲಲ್ಲಿ
ಇರುಳಲ್ಲಿ ಕಂಡ ಬಾವಿಯಲ್ಲಿ
ಇಣುಕುವ ಮೊಲೆಗಳನ್ನೂ
ಬಿಟ್ಟವರಲ್ಲ ನಾವು
ಕಣ್ಣಲ್ಲಿ ಕಾಮದ ಚೂರಿ ಹಿಡಿದು
ಚುಚ್ಚಿ ಚುಚ್ಚಿ ಗಾಯಗೊಳಿಸಿದ್ದೇವೆ
ಅರ್ಧದಲ್ಲಿ
ಅರ್ಥವಾದರೆ ನಿಲ್ಲಿಸಲಾದೀತೆ!
ಮೂಲೆಗೆಸೆಯಲ್ಪಟ್ಟ ಬಟ್ಟೆಗಳು
ಗೊಳ್ಳೆಂದು ನಕ್ಕವು
ಬೆತ್ತಲೆ ದೇಹಗಳು ಅವಾಕ್ಕಾಗಿವೆ
ಹಾಸಿಗೆಗಳು ಎಂದೂ ತಟಸ್ಥ
ಹೊದಿಕೆಗಳೇ ಸಮಾಧಾನ ಮಾಡುವುದು

ಇದೆಲ್ಲ ಈ ರಾತ್ರಿಗೆ
ಮುಗಿದು ಹೋಗಲಿ
ಬೆಳಗ್ಗೆಗೆ ನನ್ನ ಬದುಕಷ್ಟೇ ಇರಲಿ
ಮುಂದೆಂದೋ ತುಂಬಾ ಹಲುಬಿ
ಅವನಂತೆ
ಹಸುಗೂಸಿನೊಡನಿದ್ದವಳನ್ನು
ರಾತ್ರೋರಾತ್ರಿ ತೊರೆದು ಹೋಗಲಾದೀತೆ?!!
ಅರಮನೆ
ಆಳು-ಕಾಳು ಎಲ್ಲಾ ಬಿಟ್ಟು ಹೋದನಂತೆ
ನಮಗೇನಿದೆ ಬಿಡಲು
ಬಣ್ಣದ ನಗರದ ಬಾಡಿಗೆಮನೆ
ತಿಂಗಳಿಗೂ ಸಾಕಾಗದ
ಸಂಬಳದ ಕೆಲಸ
ಎಲ್ಲವೂ ಮಾಯೆ ಎಂದ
ಯಾವುದು ಮಾಯೆ?
ಜೀವ ಹೋಗುವ ನೋವು ತಿಂದು
ಹಡೆದು
ಹಗಲಿರುಳು ದುಡಿದು
ನಮಗೊಂದು ಸೂರು ಮಾಡಿ
ರೂಪಾಯಿಗೆ ರೂಪಾಯಿ ಕೂಡಿಟ್ಟು
ವಿದ್ಯೆಗೆ ಹಚ್ಚಿ ದುಡಿತಕ್ಕೆ ದೂಡಿ
ಮೊಮ್ಮಕ್ಕಳಿಗೆ ಹಾಡುತ್ತಿರುವ ಲಾಲಿಯ?

ಇದು ಮಾಯೆಯಾದರೆ
ಆಗಲಿ ಬಿಡಿ
ಬದುಕಬೇಕು ಇದನ್ನೇ
ಈ ಮಾಯೆಯೇ ನಮ್ಮ ಬದುಕು
ಇದುವೇ ಇವತ್ತಿನ
ಇಷ್ಟರಮಟ್ಟಿಗಿನ ಜ್ಞಾನೋದಯ
ಇದು ನಿನ್ನ ಬದುಕಲ್ಲ ಬಿಡು
ನಮ್ಮದು ಕೇವಲ ನಮ್ಮದಷ್ಟೇ
0 ಪ್ರತಿಕ್ರಿಯೆಗಳು