ರಹಮತ್ ತರೀಕೆರೆ ನೆನಪಿನಲ್ಲಿನ ಹಾಡುಪಾಡು ರಾಮು

‘ಆಂದೋಲನ’ದ ಭಾನುವಾರ ಪುರವಣಿ ‘ಹಾಡು ಪಾಡು’ಗೆ ಹೊಸ ಸ್ಪರ್ಶ ನೀಡಿದ ಕಾರಣಕ್ಕೆ ಹಾಡು ಪಾಡು ರಾಮು ಎಂದೇ ಹೆಸರಾಗಿದ್ದ ರಾಮು ಅವರು ಇಂದು ನಿಧನರಾಗಿದ್ದಾರೆ.

ಅವರ ನೆನಪಿಗೆ ಈ ಹಿಂದೆ ರಹಮತ ತರೀಕೆರೆ ಅವರು ಬರೆದಿದ್ದ ಬರಹವನ್ನು ಪ್ರಕಟಿಸುತ್ತಿದ್ದೇವೆ

ಸರಸ್ವತಿಪುರಂನ ೭೩ನೇ ನಂಬರಿನ ಮನೆ

ರಹಮತ್ ತರೀಕೆರೆ

ಆಂದೋಲನ ಮೈಸೂರು ೧೫.೩.೨೦೨೩

ಚಿತ್ರಗಳ ಕೃಪೆ: ಪ್ರಸನ್ನ ಸಂತೆಕಡೂರು, ಸವಿತಾ ನುಗಡೋಣಿ

ಮೈಸೂರಿಗೆ ಹೋದಾಗಲೆಲ್ಲ ನಾನು ಸರಸ್ವತಿಪುರಂನ ೭ನೇ ಕ್ರಾಸಿನ ೭೩ನೇ ನಂಬರಿನ ಮನೆಗೆ ಹೋಗುತ್ತೇನೆ. ಇದು ಭವಿಷ್ಯದಲ್ಲಿ ನನಗೆ ತಿಳಿವಳಿಕೆ ಊಟ ಪ್ರೀತಿ ಕೊಡುವ ಬೆಚ್ಚನೆಯ ಗೂಡಾದೀತೆಂಬ ಕಲ್ಪನೆಯೇ ಇರದೆ, ನಲವತ್ತು ವರ್ಷಗಳ ಹಿಂದೆ ಇದರ ಬದಿಯೇ ಅಡ್ಡಾಡುತ್ತಿದ್ದೆ. ಮೊದಲನೇ ಮೇನಿನಲ್ಲಿದ್ದ ಮುಸ್ಲಿಂ ಹಾಸ್ಟೆಲಿನಿಂದ ಮಾನಸಗಂಗೊತ್ರಿಗೆ ಹೋಗಿಬರುತ್ತಿದ್ದೆ. ಇದರ ಮುಂದಿನ ಮನೆ ನಟ ಅಂಬರೀಶ ಅವರ ತಂಗಿಯದಾಗಿದ್ದು, ಅಲ್ಲಿ ಅವರು ಕೆಲವೊಮ್ಮೆ ಕಾಣಿಸಿಕೊಳ್ಳುತ್ತಿದ್ದರು. ಈ ಕಾರಣಕ್ಕಾಗಿ ಆ ಮನೆಯತ್ತ ಕುತೂಹಲದಿಂದ ತಿರುಗಿನೋಡುವ ಅಭ್ಯಾಸವಿತ್ತು.

೭೩ನೇ ನಂಬರಿನ ಮನೆಯಲ್ಲಿ ಒಂದು ಕೂಡು ಕುಟುಂಬ ವಾಸವಿದೆ. ಮಹಡಿಯ ಒಂದು ಕೋಣೆಯಲ್ಲಿ ರಾಮು ಯಾನೆ ಟಿ.ಎಸ್.ರಾಮಸ್ವಾಮಿ ಇದ್ದಾರೆ. ಶ್ರೀಯುತರು ಹಿಂದೆ ‘ಆಂದೋಲನ’ದ ರವಿವಾರದ ಪುರವಣಿ ನೋಡಿಕೊಳ್ಳುತ್ತಿದ್ದ ಕಾರಣ, ಮಾಜಿ ಪತ್ರಕರ್ತ ಎಂದು ಕರೆಯಬಹುದು. ಇವರ ಕೋಣೆಗೆ ಲಗತ್ತಾಗಿ ಕತೆಗಾರ ತುಕಾರಾಂ ಅವರ ಸಂಸಾರವಿದೆ. ಇದರ ಕೆಳಗೆ ಸಂಗೀತದಲ್ಲಿಯೂ ಅನುವಾದದಲ್ಲಿಯೂ ದೊಡ್ಡ ಕೆಲಸ ಮಾಡಿರುವ ವೇಣುಗೋಪಾಲ-ಶೈಲಜ ಅವರ ಕೋಣೆಯಿದೆ. ಇನ್ನೊಂದರಲ್ಲಿ ರಾಮು ಅವರ ತಂಗಿ ಮತ್ತೊಂದರಲ್ಲಿ ಅಮ್ಮ. ನಡುವಿರುವ ಅನುಭವ ಮಂಟಪದಂತಹ ಪುಟ್ಟ ಹಾಲು, ಮನೆಗೆ ಬಂದು ಹೋಗುವ ಸಾರ್ವಜನಿಕರು ಸೇರುವ ತಾಣ.

ರಾಮು ಅವರ ಸಂಪರ್ಕ ನನಗೆ ಹೇಗಾಯಿತೊ ನೆನಪಾಗುತ್ತಿಲ್ಲ. ಅವರು ನನಗೆ ಕಾಲೇಜಿನಲ್ಲಿ ಮೇಷ್ಟರಾಗಿದ್ದ ಓ.ಎಲ್‌. ನಾಗಭೂಷಣಸ್ವಾಮಿಯವರ ಸಹಪಾಠಿ, ಈ ಅರ್ಥದಲ್ಲಿ ಗುರುಸಮಾನ. ಆದರೆ ಅವರು ಕೊಟ್ಟಿರುವ ಅತಿಯಾದ ಸಲುಗೆಯನ್ನು ಬಳಸಿ ಸಮವಯಸ್ಕರನ್ನು ಕರೆವಂತೆ ನಾನು ರಾಮು ಎಂದೇ ಕರೆಯುವುದು, ಅವರನ್ನು ಮೈಸೂರಿನ ಆಬಾಲ ವೃದ್ಧರೂ ಹೀಗೇ ಸಂಬೋಧಿಸುವರು. ನನ್ನದೊಂದು ಪುಸ್ತಕ ಅವರಿಗೆ ಅರ್ಪಿಸುವಾಗ ಹೀಗೆ ಬರೆದೆ: ‘ತಾಯಿ ಗುರು ಗೆಳೆಯ ಪ್ರೇಮಿ ರಾಮುಗೆ”. ೭೩ನೇ ನಂಬರಿನ ಈ ಮನೆಯಲ್ಲಿ ಪ್ರವೇಶ ಸಿಕ್ಕ ಬಳಿಕ ನಾನು ಬರವಣಿಗೆಯ ಅನೇಕ ಪಾಠಗಳನ್ನು ಕಲಿತೆ. ಕತ್ತಿ ಅಲುಗಿನ ಹೊಡೆತದಂತಹ ನಿಷ್ಠುರ ವಿಮರ್ಶೆ, ಜೇನನ್ನು ತೆಗೆದು ನಾಲಗೆಯಮೇಲಿಟ್ಟಂತಹ ಮೆಚ್ಚುಗೆ ಎರಡೂ ಸಿಕ್ಕವು. ೨೦೧೦ರಲ್ಲಿ ಪ್ರಜಾವಾಣಿ ಪತ್ರಿಕೆಗೆ ‘ನಡೆದಷ್ಟೂ ನಾಡು ಎಂಬ ಅಂಕಣ ಬರೆಯುತ್ತಿದ್ದೆ. ಅದು ಬಹಳ ಜನಪ್ರಿಯವಾಗಿತ್ತು. ವರ್ಷ ಕಾಲ ಬರೆದ ಬಳಿಕ ರಾಮು ‘ಹೊಸತೇನೂ ಹೇಳಿಲ್ಲ ನೀವು. ಬರೀಬೇಕಲ್ಲ ಅಂತ ಬರೀತಿರೋ ಹಂಗಿದೆ. ಕೂಡಲೇ ನಿಲ್ಲಿಸಿ ಎಂದು ಸೂಚಿಸಿದರು. ನಾನು ಬರೆದಿದ್ದರಲ್ಲಿ ಇಷ್ಟವಾದರೆ, ಈ ಮೇಲಿನಲ್ಲಿ ಒಂದೇ ಸಾಲಿನ ಪ್ರತಿಕ್ರಿಯೆ ಬರುತ್ತದೆ. ‘ಸಾ ಮುಂಡೇದು ನಿಮ್ಮ ಗದ್ಯ ಒಳ್ಳೆ ಕಾವ್ಯ ಇದ್ದಂಗದೆ’. ಮೊದಮೊದಲು ನನ್ನ ಪುಸ್ತಕಗಳನ್ನು ರಾಮು ಅವರ ಹೆಸರು ಬರೆದು ಕಳಿಸುತ್ತಿದ್ದೆ. ಈಗ ೭ನೇ ಕ್ರಾಸಿನ ೭೨ನೇ ನಂಬರಿನ ಮನೆಯ ಸರ್ವಸದಸ್ಯರಿಗೆ ಎಂದು ಬರೆದು ಕಳಿಸುತ್ತೇನೆ. ಈಚೆಗೆ ಆರೋಗ್ಯದ ಕಾರಣಕ್ಕೆ ರಾಮುಗೆ ಹೆಚ್ಚು ಓದಲಾಗುತ್ತಿಲ್ಲ. ಆದರೂ ಸಾಫ್ಟ್ ಕಾಪಿಯನ್ನು ತರಿಸಿಕೊಂಡು, ಅದರ ಅಕ್ಷರ ದೊಡ್ಡದಾಗಿಸಿ ಓದುವಂತೆ ಕಾಣುತ್ತದೆ. ಅವರು ಓದಿ ಬರೆವ ಪತ್ರಗಳಲ್ಲಿ ಕೊನೆಗೆ ಮಂಜುಗಣ್ಣಿನ ರಾಮು ಎಂದಿರುತ್ತದೆ. ಅದು ನನ್ನನ್ನು ಮಂಜಿನಲ್ಲಿ ಮುಳುಗಿಸುತ್ತದೆ.

ನಾನು ಸುಮಾರು ನಲವತ್ತರಷ್ಟು ಸಂಖ್ಯೆಯ ನಾಡಿನ ವಿದ್ವಾಂಸರ ಚಳವಳಿಗಾರರ ಸಂದರ್ಶನ ಮಾಡಿ ಪ್ರಕಟಿಸಿರುವೆ. ಈ ಸಾಲಿನಲ್ಲಿ ರಾಮು ಅವರ ಸಂದರ್ಶನ ಹೇಗಾದರೂ ಮಾಡಬೇಕೆಂದು ಹೊಂಚಿಕೊಂಡಿದ್ದೆ. ಒಮ್ಮೆ ಇದಕ್ಕೆ ಒಪ್ಪಿಸಿದೆ. ಕಿಕ್ಕೇರಿ ನಾರಾಯಣ ಅವರ ತೋಟಕ್ಕೆ ಉಪಾಯವಾಗಿ ಕರೆದುಕೊಂಡು ಹೋಗಿ ಊಟ ಮುಗಿದ ಮೇಲೆ, ತೋಟದ ಮನೆಯಲ್ಲಿ ಚಾಪೆಹಾಸಿ ಕೂರಿಸಿ, ಮೊದಲ ಪ್ರಶ್ನೆ ಹಾಕಿದೆ. ನನ್ನ ಪ್ರಶ್ನೆಯಲ್ಲಿದ್ದ ಔಪಚಾರಿಕತೆ ಕೃತಕವೆನಿಸಿತೊ ಏನೋ, ಉತ್ತರ ಕೊಡುವ ಬದಲು ಅವರು ಕಂಗಾಲಾಗಿ,

“ಸಾಸಾ…ನಿಮ್ಮ ಕಾಲಿಗೆ ಬೀಳ್ತಿನಿ ಸಾ. ಬೇಡಸಾ” ಎಂದವರೆ ರೆಕಾರ್ಡರನ್ನು ಎತ್ತಿಕೊಂಡು, ಕ್ಯಾಸೆಟ್ಟನ್ನು ತೆಗೆದು ಅದರೊಳಗಿನ ಟೇಪನ್ನು ಹೊರಗೆಳೆದುಬಿಟ್ಟರು. ಸಂದರ್ಶನದ ಹೆಸರಲ್ಲಿ ಹಿಂಸೆ ಮಾಡಬೇಕು ಎಂದೂ ನನಗೂ ಅನಿಸಲಿಲ್ಲವಾಗಿ ಮತ್ತೆ ಒತ್ತಾಯಿಸಲಿಲ್ಲ. ಆದರೆ ರಾಮು ಮನೆಯಲ್ಲಿ ಅನೇಕರ ಸಂದರ್ಶನಕ್ಕೆ ಅವಕಾಶ ಕಲ್ಪಿಸಿದರು. ಕರ್ನಾಟಕ ಸರ್ವೋದಯ ಪಕ್ಷಕ್ಕೆ ಹತ್ತು ವರ್ಷ ತುಂಬಿದಾಗ, ದೇವನೂರರನ್ನು ಸಂದರ್ಶಿಸಿದ ಘಟನೆ

ನೆನಪಾಗುತ್ತಿದೆ. ಇದಕ್ಕಾಗಿ ರಾಮು ತಮ್ಮ ಕೋಣೆಯನ್ನು ಸ್ವಚ್ಛಮಾಡಿ, ಊದುಬತ್ತಿ ಹಚ್ಚಿ, ಎದುರುಬದುರು ಎರಡು ಕುರ್ಚಿಗಳನ್ನಿಟ್ಟು ದೇವನೂರರನ್ನೂ ನನ್ನನ್ನೂ ಬಿಟ್ಟು ಕೆಳಗೆ ಹೋದರು. ಮಾತುಕತೆ ಮುಗಿವ ತನಕ ಕೆಳಗೆ ಮೆಟ್ಟಿಲ ಬಳಿ ನಿಂತು ಯಾರನ್ನೂ ಮೇಲಕ್ಕೆ ಬಿಡಲಿಲ್ಲ. ಇದು ನವದಂಪತಿಯನ್ನು ಸಿಂಗರಿಸಿದ ಸಜ್ಜೆಮನೆಯೊಳಗೆ ಕೂಡಿ ಹಾಕಿದಂತೆ ನನಗೆ ತೋರಿತು.

ರಾಮು, ಕನ್ನಡ ಸಾಹಿತ್ಯದ ಬಹಳ ಜನರಿಗೆ ಗೊತ್ತಿಲ್ಲದ ಒಬ್ಬ ಗುಪ್ತಸಾಧಕರು. ಅವರಷ್ಟು ಪ್ರಮಾಣದಲ್ಲಿ ಸಾಹಿತ್ಯ ಓದಿಕೊಂಡಿರುವವರು, ಆ ಬಗ್ಗೆ ಸೂಕ್ಷ್ಮಚಿಂತನೆ ಮಾಡಿರುವವರು ಬಹಳಿಲ್ಲ. ನಮ್ಮ ವಿಶ್ವವಿದ್ಯಾಲಯಗಳಲ್ಲಿರುವ ಎಷ್ಟೊ ಪ್ರೊಫೆಸರುಗಳಿಗೆ ಅವರ ಪಾಂಡಿತ್ಯದ ಕಿಂಚಿತ್ ಪ್ರಮಾಣವಿದ್ದರೂ, ಅವು ಜ್ಞಾನದಿಂದ ಬೆಳಗುತ್ತಿದ್ದವು.

ರಾಮು ಜತೆ ಸಾಹಿತ್ಯದ ಚರ್ಚೆ ಮಾಡುವುದು ಎಂದರೆ ಹೊಳಹುಗಳ ಸುರಿಮಳೆಗೆ ಮೈಯೊಡ್ಡಿದಂತೆ. ತೋಂಡಿ ಸಂಪ್ರದಾಯಕ್ಕೆ ಸೇರಿದ ಅವರು ಓದಿಕೊಂಡಿರುವುದಕ್ಕೆ ಹೋಲಿಸಿದರೆ ಬರೆದಿರುವುದು ಕಡಿಮೆ. ಪ್ರಕಟಿಸಿರುವುದು ಮತ್ತೂ ಕಡಿಮೆ. ಕುಮಾರವ್ಯಾಸ ಮತ್ತು ಪಂಪನ ಬಗ್ಗೆ ಒಳನೋಟಗಳುಳ್ಳ ಅವರ ಲೇಖನಗಳನ್ನು ಪ್ರಕಟಿಸುವ ಅವಕಾಶ, ‘ಕನ್ನಡ ಅಧ್ಯಯನ’ ಪತ್ರಿಕೆಯನ್ನು ಸಂಪಾದಿಸುವಾಗ ನನಗೆ ಸಿಕ್ಕಿತ್ತು. ಅವರ ಕವಿತೆಗಳಂತೂ ಯಾವತ್ತೂ ತಾಜಾತನದಿಂದ ಕೂಡಿವೆ.

೭೩ನೇ ನಂಬರಿನ ಮನೆ, ಒಂದು ಧರ್ಮಛತ್ರ ಕೂಡ. ಅಲ್ಲಿ ನಾನೂ ಬಾನೂ ಅದೆಷ್ಟು ಬಾರಿ ಉಂಡಿದ್ದೇವೆಯೋ? ಮನೆಯಲ್ಲಿ ಅನೇಕ ಪಾಕಪ್ರವೀಣರಿದ್ದಾರೆ. ಅವರಲ್ಲೆಲ್ಲ ಅಮ್ಮನ ಕೈವಾಡವೇ ಹೆಚ್ಚಿರಬೇಕು. ಅವರು ಬಂದುಹೋಗುವ ಎಲ್ಲರ ಯೋಗಕ್ಷೇಮ ವಿಚಾರಿಸುತ್ತಾರೆ. ಸಣ್ಣದನಿಯಲ್ಲಿ ‘ಚೆನ್ನಾಗಿದ್ದೀರಾ? ಬಾನು ಹೆಂಗಿದ್ದಾರೆ? ಯಾವಾಗ ಬಂದಿರಿ?’ -ಎರಡೂ ಮೂರೊ ಮಾತು. ಅವರ ಮುಖದ ಪ್ರಸನ್ನತೆ, ಅವರ ಕೈಯ ಕಾಫಿ, ದೋಸೆ-ಚಟ್ಟಿ, ಪೊಂಗಲುಗಳಷ್ಟೇ ಆಪ್ತ. ಕಚ್ಚೆಯುಟ್ಟು ಸಾಂಪ್ರದಾಯಿಕವಾಗಿ ಕಾಣುವ ಅಮ್ಮ, ಮಕ್ಕಳು ಬೇರೆಬೇರೆ ಜಾತಿಧರ್ಮಗಳಲ್ಲಿ ಮದುವೆಯಾಗಿರುವುದನ್ನು ಸಹಜವಾಗಿ ಸ್ವೀಕರಿಸಿದ್ದಾರೆ. ಸಹಜ ಕ್ರಾಂತಿಕಾರಿ.

೭೩ನೇ ನಂಬರಿನ ಮನೆ ನನ್ನ ಕಾಲದ ಅನೇಕ ಲೇಖಕರಿಗೂ ಸಾಹಿತ್ಯದ ಅಭ್ಯಾಸಿಗಳಿಗೂ ಗುರುಮಠದಂತೆ. ಅಲ್ಲಿ ದೇವನೂರ ಮಹಾದೇವ, ಎಚ್‌. ಎಸ್. ಶಿವಪ್ರಕಾಶ್, ಓ.ಎಲ್. ನಾಗಭೂಷಣಸ್ವಾಮಿ, ಅಬ್ದುಲ್ ರಶೀದ್, ರೂಪಾ ಹಾಸನ, ಬಿದರಹಳ್ಳಿ ನರಸಿಂಹಮೂರ್ತಿ ಮೊದಲಾಗಿ ಅನೇಕ ಲೇಖಕರು ಬಂದು ಹೋಗಿದ್ದಾರೆ. ದೇವನೂರರನ್ನು ಅವರ ಮನೆ ಮತ್ತು ತೋಟದಲ್ಲಿ ಸಿಗದಿದ್ದರೆ ರಾಮು ಮನೆಯಲ್ಲಿ ಹುಡುಕಬಹುದು. ಈ ಮನೆಯಲ್ಲಿ ನಾನು ತುಕಾರಾಂ ಜತೆ ಆರೂಢ ಪಂಥ ಮತ್ತು ಅಂಬೇಡ್ಕರ್ ಚಿಂತನೆಗಳನ್ನು ಚರ್ಚಿಸಿದ್ದೇನೆ. ವೇಣು-ಶೈಲಜ ಜತೆ ಅಮೀರ್‌ಬಾಯಿ, ಸಂಗೀತ, ರಂಗಭೂಮಿ ಬಗ್ಗೆ ಮಾತುಕತೆಯಾಡಿದ್ದೇನೆ. ರಾಮು ಜತೆ ಕನ್ನಡ ಕಾವ್ಯ ಮತ್ತು ಆಧುನಿಕ ವಿಮರ್ಶೆಯ ಜಿಜ್ಞಾಸೆ ನಡೆದಿದೆ.

ಅದರಲ್ಲೂ ಪಂಪ, ಕುಮಾರವ್ಯಾಸ, ಬೇಂದ್ರೆ ಕಾವ್ಯದ ಬಗ್ಗೆ ಅವರ ಒಳನೋಟಗಳನ್ನು ಕೇಳಿಸಿಕೊಂಡಿದ್ದೇನೆ. ರಾಜಕಾರಣ ಸಂಗೀತ ಸಾಹಿತ್ಯ ಭಾಷೆಗಳ ಬಗ್ಗೆ ಇಷ್ಟೊಂದು ಪ್ರಮಾಣದ ಚರ್ಚೆಯನ್ನು ಕೇಳಿಸಿಕೊಂಡ ಮತ್ತೊಂದು ಮನೆ ಸರಸ್ವತಿಪುರಂನಲ್ಲಿ ಮತ್ತೊಂದು ಇರಲಿಕ್ಕಿಲ್ಲ. ಕುವೆಂಪು ಅವರ ‘ಕಾನೂರು ಹೆಗ್ಗಡಿತಿ’ಯಲ್ಲಿ ಅಡುಗೆ ಕೋಣೆಯೊಂದರ ವರ್ಣನೆಯಿದೆ. ಅಲ್ಲಿರುವ ಕಡೆಗೋಲು ಕಂಬಕ್ಕೆ ಮಾತು ಬಂದರೆ ಏನೆಲ್ಲ ಕಲಹ ಮೈತ್ರಿ ಏರ್ಪಡಬಹುದೋ ಎಂದು ಕಾದಂಬರಿಯ ವಿಸ್ಮಯದಿಂದ ನಿರೂಪಿಸುತ್ತದೆ. ಇದರಂತೆ ೭೩ನೇ ನಂಬರಿನ ಮನೆಯ ಕಿಟಕಿ ಗೋಡೆಗಳಿಗೆ ಬಾಯಿ ಬಂದರೆ, ಅವು ಹೇಳುವ ರಾಜಕೀಯ ಸಾಮಾಜಿಕ ಸಾಹಿತ್ಯಕ ಚರ್ಚೆಗಳು ನೂರು ಸಂಪುಟಗಳಾದಾವು. ಅವನ್ನು ಕನ್ನಡಿಗರು ಓದಿದರೆ ಹಳೆಯ ಸರ್ಕಾರಗಳು ಉರುಳಿ ಹೊಸ ಸರ್ಕಾರಗಳು ಅಸ್ತಿತ್ವಕ್ಕೆ ಬರಬಹುದು.

‍ಲೇಖಕರು avadhi

June 13, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: