ರಹಮತ್‌ ತರೀಕೆರೆ ಅವರ ಹೊಸ ಕೃತಿ- ಹಾಸುಹೊಕ್ಕು

ರಹಮತ್‌ ತರೀಕೆರೆ ಅವರ ಹೊಸ ಕೃತಿ- ಹಾಸುಹೊಕ್ಕು ಕೃತಿಯ ‘ಅರಿಕೆ’ ಇಲ್ಲಿದೆ

ರಹಮತ್‌ ತರೀಕೆರೆ

ಕಳೆದ ಐದಾರು ವರ್ಷಗಳಿಂದ ಬರೆದ ಚಿಂತನ ಬರೆಹಗಳಿವು. ಇವುಗಳಲ್ಲಿ ಭಾರತದ ಜನಸಮುದಾಯಗಳು ಸೃಷ್ಟಿಸಿದ ಅಪೂರ್ವ ಪರಂಪರೆಯ ದಾಖಲಾತಿಗಳಿವೆ; ನಮ್ಮ ಕಾಲದ ರಾಜಕೀಯ ಸಾಮಾಜಿಕ ಧಾರ್ಮಿಕ ವಿದ್ಯಮಾನಗಳಿಗೆ ಮಾಡಲಾದ ಪ್ರತಿಕ್ರಿಯೆಗಳಿವೆ; ನನ್ನಂಥವರ ತಲ್ಲಣ ಮತ್ತು ಅಸಹಾಯಕತೆಯ ನಿಟ್ಟುಸಿರುಗಳಿವೆ; ಇಕ್ಕಟ್ಟುಗಳಲ್ಲೂ ಒಡಮೂಡುತ್ತಿರುವ ಭರವಸೆಯ ಕದಿರುಗಳೂ ಇವೆ. ಕದಿರೆಂದರೆ ಬೆಳಕಿನ ಕಿರಣ. ಹತ್ತಿಯನ್ನು ನೂಲಾಗಿಸುವ ಉಪಕರಣ ಕೂಡ. ಸದರಿ ಪುಸ್ತಕದ ಶೀರ್ಷಿಕೆಯು ನೇಕಾರಿಕೆ ಲೋಕದಿಂದ ಬಂದಿದೆ. ಮಗ್ಗದ ರೂಪಕವು, ಅನುಭವ ಅಧ್ಯಯನ ಚಿಂತನೆ ಕಲ್ಪನೆಗಳು ಏಕೀಭವಿಸಿ ಹುಟ್ಟುವ ಸಾಹಿತ್ಯದ ಸೃಷ್ಟಿಕ್ರಿಯೆಯನ್ನು ಪ್ರತಿನಿಧಿಸುತ್ತದೆ; ಇದು ಬಹುತ್ವದ ನಾಡನ್ನು ಕಟ್ಟುವ ಅನೇಕ ಗುಟ್ಟುಗಳನ್ನು ಸಹ ಒಳಗೊಂಡಿದೆ.

ನೇಯ್ಗೆಯ ಮಾಧ್ಯಮವಾದ ಮಗ್ಗದ ರೂಪಕವನ್ನು ಧೇನಿಸುವುದು ಹಿಂದೆಂದಿಗಿಂತ ಈಗ ಜರೂರಾಗಿದೆ. ಯಾಕೆಂದರೆ, ಭೌಗೋಳಿಕ ಭಾಷಿಕ ಸಾಮಾಜಿಕ ಧಾರ್ಮಿಕ ಸಾಂಸ್ಕೃತಿಕ ಬಹುತ್ವವಿರುವ ನಮ್ಮೀ ನಾಡಲ್ಲಿ, ಸಂಕುಚಿತವಾದಿ ಧಾರ್ಮಿಕ-ರಾಜಕೀಯ ಸಿದ್ಧಾಂತಗಳು, ಜನರನ್ನು ಏಕರೂಪೀ ಪಡಿಯಚ್ಚಿನೊಳಗೆ ಹಾಯಿಸುತ್ತಿವೆ; ಸಾಂಸ್ಕೃತಿಕ ಅನಕ್ಷರತೆಯನ್ನು ಸೃಷ್ಟಿಸುತ್ತಿವೆ. ಆದರೆ ಸಮಾಜದಲ್ಲಿ ತರತಮ ಹಿಂಸೆ ದಮನಗಳು, ಸಾಂಸ್ಕೃತಿಕ ಅನಕ್ಷರತೆಯಿಂದ ಮಾತ್ರ ಸಂಭವಿಸುವುದಿಲ್ಲವಷ್ಟೆ. ಅವು ಅಧಿಕಾರಸ್ಥ ವರ್ಗಗಳು ತಮ್ಮ ಯಜಮಾನಿಕೆ ಸಾಧಿಸುವ ಯೋಜನಾಬದ್ಧ ಕಾರ್ಯಾಚರಣೆಯಿಂದಲೂ ಏರ್ಪಡುತ್ತವೆ.

ಈ ಹಿನ್ನೆಲೆಯಲ್ಲಿ ಕೇಡಿನ ಮೂಲಗಳನ್ನು ಗುರುತಿಸುವ ತಾತ್ವಿಕ ಸ್ಪಷ್ಟತೆ ಮತ್ತು ಮುಖಾಮುಖಿ ಮಾಡುವ ಸಂಘರ್ಷ ಪ್ರಜ್ಞೆಯನ್ನು ಅರ್ಜಿಸಿಕೊಳ್ಳುತ್ತಲೇ ಇರಬೇಕಿದೆ. ಸದ್ಯದ ಭಾರತವು ಮಹಿಳಾ ದೌರ್ಜನ್ಯ, ಪೌರತ್ವ ಪ್ರಮಾಣಿಸುವ ಕಾಯಿದೆ, ದಲಿತ ದಮನ ಹಾಗೂ ರೈತಾಪಿ ಸಂಕಷ್ಟಗಳ ವಿಷಯದಲ್ಲಿ ಈ ಪ್ರಜ್ಞೆಯನ್ನು ಪ್ರಕಟಿಸುತ್ತಿದೆ ಕೂಡ.

ಕಷ್ಟವೇನೆಂದರೆ, ಸಮಾನತೆ ನ್ಯಾಯ ಸ್ವಾತಂತ್ರ್ಯಗಳ ಹಕ್ಕುಪ್ರಜ್ಞೆಯಿಂದ ರೂಪುಗೊಳ್ಳುವ ಈ ಸಂಘರ್ಷ ಪ್ರಜ್ಞೆಯು, ಕೆಲವೊಮ್ಮೆ ತನ್ನ ಪ್ರತಿರೋಧದ ಭರದಲ್ಲಿ ಕೂಡುಬದುಕಿನ ತಾಣ ಮತ್ತು ತತ್ವಗಳನ್ನು ಗಮನಿಸದೆ ಹೋಗುವ ಸಾಧ್ಯತೆಗಳಿರುವುದು. ಆದ್ದರಿಂದ ಎಲ್ಲ ನ್ಯಾಯಬದ್ಧ ಸಂಘರ್ಷಗಳು ಕದನಭೂಮಿಯಲ್ಲಿ ಇರುವಾಗಲೇ, ಸಾಂಪ್ರದಾಯಿಕ ತರತಮಗಳ ಗಡಿಗೆರೆ ದಾಟುವ ಸಾಂಸ್ಕೃತಿಕ ಸೇತುಗಳನ್ನು ಕೂಡ ತಡಕುತ್ತಿರಬೇಕು. ಅನುಲ್ಲಂಘನೀಯ ಎಂದು ಎಳೆಯಲಾದ ನಿಷೇಧಿತ ಗೆರೆಗಳನ್ನು ದಾಟುವ ಸೀಮೋಲ್ಲಂಘನ ಗುಣವೊಂದು, ಭಾರತದ ಭಾಷೆ ಸಾಹಿತ್ಯ ಸಂಗೀತ ಆಹಾರಪದ್ಧತಿ ಧರ್ಮ ತತ್ವಶಾಸ್ತ್ರ ಪುರಾಣ ಹಾಗೂ ಆಚರಣ ಜಗತ್ತಿನಲ್ಲಿ ಜೀವಂತವಾಗಿ ಮಿಸುಗುತ್ತ ಬಂದಿದೆ; ಇದು ಊಹಾತೀತ ಸಂಕರಗಳಿಗೆ ಕಾರಣವಾಗುತ್ತಲೂ ಬಂದಿದೆ. ಈ ಸಂಕರವು ನವೋನ್ಮೇಷ ಸೃಷ್ಟಿಗಳಿಗೆ ಜನ್ಮಕೊಡುವ ತಾಯಗರ್ಭವಾಗಿದೆ.

ಹೀಗೆಂತಲೇ ಭಾರತದ ಸಾಂಸ್ಕೃತಿಕ ಬಹುತ್ವವು ಸಂಘರ್ಷಪ್ರಜ್ಞೆ, ಕೂಡುಬದುಕು, ಸೀಮೋಲ್ಲಂಘನೆ, ಸಂಕರಶೀಲತೆ ಮತ್ತು ಹೊಸಸೃಷ್ಟಿಗಳ ಪ್ರಕ್ರಿಯೆಯಲ್ಲಿ ರೂಪುಗೊಂಡಿದೆ. ಒಂದೇ ಸರಪಳಿಯ ಕೊಂಡಿಯಾಗಿರುವ ಈ ಪಂಚತತ್ವಗಳು, ನಮ್ಮ ದೊಡ್ಡ ಮೌಲ್ಯಾದರ್ಶಗಳು; ನಾಡನ್ನು ಕುಸಿಯದಂತೆ ತಡೆದಿರುವ ಮತ್ತು ಮುಂದೆಯೂ ತಡೆಯಬಲ್ಲ ಹಟ್ಟಿಕಂಬಗಳು ಕೂಡ.

ಈ ತತ್ವಗಳನ್ನು ಕಾಣಲು, ಮನ್ನಿಸಲು, ಕಾಪಿಡಲು ಹಾಗೂ ಹೊಸಗಾಲಕ್ಕೆ ತಕ್ಕಂತೆ ರೂಪಾಂತರಿಸಲು ಬೇಕಾದ ಮುಂಗಾಣ್ಕೆಯನ್ನೂ ಸೃಜನಶೀಲ ಉಪಾಯಗಳನ್ನೂ ಕಂಡುಕೊಳ್ಳುತ್ತಲೇ ಇರಬೇಕು. ಈ ದಿಸೆಯ ಕಿಂಚಿತ್ ಯತ್ನ ಇಲ್ಲಿನ ಕಿರು ಲೇಖನಗಳಲ್ಲಿದೆ. ಇವನ್ನು ಓದಿಗೆ ಅನುಕೂಲವಾಗಲೆಂದು ಸಂಸ್ಕೃತಿ, ತತ್ವ, ಚರಿತ್ರೆ ಭಾಷೆ ರಾಜಕಾರಣ ಎಂಬ ಆಶಯಗಳಲ್ಲಿ ವಿಂಗಡಿಸಿದೆ. ಆದರೆ ಈ ಆಶಯಗಳು ವಾಸ್ತವಿಕ ಬಾಳಿನಲ್ಲಿ ಬಿಡಿಸಲಾಗದಂತೆ ಹೆಣಿಕೆಗೊಂಡಿವೆ ಎಂಬುದನ್ನು ವಾಚಕರು ಬಲ್ಲರು.

ಹೀಗೆ, ಭಾರತದ ಸಾಂಸ್ಕೃತಿಕ ಬಹುತ್ವವು ಸಂಘರ್ಷಪ್ರಜ್ಞೆ, ಕೂಡುಬದುಕಿನ ತತ್ವ, ಸೀಮೋಲ್ಲಂಘನೆ, ಸಂಕರ ಮತ್ತು ಹೊಸಸೃಷ್ಟಿಗಳಿಂದ ರೂಪುಗೊಂಡಿದೆ. ಒಂದೇ ಸರಪಳಿಯ ಕೊಂಡಿಯಂತಿರುವ ಈ ಪಂಚತತ್ವಗಳು ನಮ್ಮ ಪರಮ ಆದರ್ಶಮೌಲ್ಯಗಳು.

ದೇಶವನ್ನು ಕುಸಿಯದಂತೆ ತಡೆದಿರುವ ಮತ್ತು ಮುಂದೆ ತಡೆಯಬಲ್ಲ ಹಟ್ಟಿಕಂಬಗಳು ಕೂಡ. ಈ ತತ್ವಗಳನ್ನು ಕಾಣಲು, ಮನ್ನಿಸಲು, ಕಾಪಿಡಲು ಹಾಗೂ ಹೊಸಗಾಲಕ್ಕೆ ತಕ್ಕನಾಗಿ ರೂಪಾಂತರ ಮಾಡಲು ತಕ್ಕ ಮುಂಗಾಣ್ಕೆ, ಸೃಜನಶೀಲತೆ ಮತ್ತು ವಿಧಾನಗಳನ್ನು ಕಂಡುಕೊಳ್ಳುವುದು ನಮ್ಮೆಲ್ಲರ ಮುಂದಿರುವ ಸವಾಲು. ಈ ದಿಸೆಯಲ್ಲಿ ನಾನು ಮಾಡಿರುವ ಒಂದು ಕಿರುಯತ್ನವು ಇಲ್ಲಿನ ಟಿಪ್ಪಣಿರೂಪೀ ಲೇಖನಗಳಲ್ಲಿದೆ. ಇವನ್ನು ಓದಿಗನುವಾಗಲಿ ಎಂದು ಆಶಯಾನುಸಾರ ವಿಂಗಡಿಸಿದೆ. ಆದರೆ ಭಾಷೆ ಸಾಹಿತ್ಯ ಸಂಸ್ಕೃತಿ ಚರಿತ್ರೆ ರಾಜಕಾರಣ ತತ್ವಶಾಸ್ತ್ರಗಳು, ವಾಸ್ತವಿಕ ಬಾಳಿನಲ್ಲಿ ಬಿಡಿಸಲಾಗದಂತೆ ಹೆಣೆದುಕೊಂಡಿರುತ್ತವೆ ಎಂಬುದನ್ನು ವಾಚಕರು ಬಲ್ಲವರೇ ಆಗಿದ್ದಾರೆ.

ಲೇಖನಗಳನ್ನು ಪ್ರಕಟಿಸಿದ ಪತ್ರಿಕೆಗಳಿಗೂ, ತಮ್ಮ ಪ್ರತಿಕ್ರಿಯೆಗಳ ಮೂಲಕ ಸ್ಪಂದಿಸಿದ ವಾಚಕರಿಗೂ, ಹಸ್ತಪ್ರತಿ ಓದಿ ಸಲಹೆ ಕೊಟ್ಟ ಮಿತ್ರರಾದ ಸುಭಾಷ್ ರಾಜಮಾನೆ, ದೊಡ್ಡಿ ಶೇಖರ್, ಇಸ್ಮಾಯಿಲ್ ಸಿದ್ದೀಕ್ ಅವರಿಗೂ, ಚಂದದ ಮುಖಪುಟ ರಚಿಸಿರುವ ಸೌಮ್ಯ ಕಲ್ಯಾಣಕರ್ ಅವರಿಗೂ ಕೃತಜ್ಞತೆ. ನನ್ನ ಅಂಡಮಾನ್ ಕನಸು ‘ಧರ್ಮಪರೀಕ್ಷೆ’ ನಡೆದಷ್ಟೂ ನಾಡು ‘ಕದಳಿ ಹೊಕ್ಕುಬಂದೆ’ ‘ಸಣ್ಣಸಂಗತಿ’ ಪ್ರಕಟಿಸಿದ ನವಕರ್ನಾಟಕವೇ ಇದನ್ನೂ ಹೊರತರುತ್ತಿದೆ.

ಶ್ರೀ ರಮೇಶ ಉಡುಪರ ವಿಶ್ವಾಸವನ್ನು ಸ್ಮರಿಸುವೆ.

‍ಲೇಖಕರು Admin

November 30, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: