ರವಿಕುಮಾರ್ ಟೆಲೆಕ್ಸ್ ಎಂಬ 'ಅಶಾಂತ ಸಂತ'

‘ಅವಧಿ’ಯ ಅಂಕಣಕಾರರಾದ ಎನ್ ರವಿಕುಮಾರ್ ಟೆಲೆಕ್ಸ್ ಅವರ ಮೊದಲ ಕವನ ಸಂಕಲನ ‘ನಂಜಿಲ್ಲದ ಪದಗಳು’
ಪ್ರತಿಷ್ಠಿತ ವಿಭಾ ಸಾಹಿತ್ಯ ಪ್ರಶಸ್ತಿ ಗಳಿಸಿದ ಈ ಕೃತಿಯನ್ನು ‘ಬಹುರೂಪಿ’ ಹೊರತಂದಿದೆ
ನಂಜಿಲ್ಲದ ಪದಗಳ ಹಿನ್ನೆಲೆಯ ಬಗ್ಗೆ ಜಿ ಎನ್ ಮೋಹನ್ ಅವರು ಬರೆದ ಮಾತುಗಳು ಇಲ್ಲಿವೆ-


ಈತನೊಬ್ಬ ‘ಅಶಾಂತ ಸಂತ’
-ಜಿ ಎನ್ ಮೋಹನ್  
—-
‘ಜನರನ್ನು ಕೊಂದ ಖಡ್ಗಗಳ ಮೇಲೆ ಶಾಂತಿ ಮಂತ್ರಗಳನ್ನೇಕೆ ಕೊರೆದಿದ್ದಾರೆ/ ಅಸತ್ಯದ ಕತ್ತಲೇಕೆ ಮನೆ ಮಾಡಿದೆ ಸತ್ಯದ ಬೆಳಕಿನಲ್ಲಿ/ ಸೂರ್ಯನೆ ಹೇಳು ಹೆಪ್ಪುಗಟ್ಟಿದ ಮನಸ್ಸುಗಳನ್ನು ಕರಗಿಸುವುದೆಂತು/ ಮೋಡಗಳೇ ತಿಳಿಸಿ ಮಳೆಯಲ್ಲಿ ಸೇರಿಲ್ಲವೆ ಬಡವರ ಕಣ್ಣೀರು/ ಭವಿಷ್ಯವೇ ತಾಳು ಎಲ್ಲೆಡೆ ಆವರಿಸಿದೆ ನೋವು/ ಪ್ರಳಯಕ್ಕೆ ಮೊದಲು ಎಚ್ಚರಾಗುತ್ತಾರೆ ಅವರು”  ಎಂದಿದ್ದರು ರಂಜಾನ್ ದರ್ಗಾ
ಹಾಗೆ ಪ್ರಳಯಕ್ಕೆ ಮೊದಲು ಎಚ್ಚರವಾದದ್ದು ಎನ್ ರವಿಕುಮಾರ್. ನಾವೆಲ್ಲರೂ ‘ಟೆಲೆಕ್ಸ್’ ಎಂದೇ ಪ್ರೀತಿಯಿಂದ ಕರೆಯುವ ರವಿಕುಮಾರ್ ಒಂದು ರೀತಿ ಇಂದಿನ ಭಯಾನಕ ಸತ್ಯಗಳ ಟೆಲೆಕ್ಸ್ ಸಂದೇಶವನ್ನು ಎಲ್ಲರಿಗೂ ಕಳಿಸುತ್ತಿರುವುದರ ಗುರುತೇ ಈ ಕವಿತಾ ಸಂಕಲನ. ಇದು ದುರಿತ ಕಾಲ. ಅಸತ್ಯದ ಕತ್ತಲಲ್ಲಿ ಸತ್ಯ ಮರೆಯಾಗಿ ಹೋಗಿರುವ ಕಾಲ. ಅಂತಹ ಸಮಯದಲ್ಲಿ ಹೆಪ್ಪುಗಟ್ಟಿದ, ಜಡ್ಡುಗಟ್ಟಿದ ಮನಸ್ಸುಗಳನ್ನು ಕರಗಿಸಲು ರವಿಕುಮಾರ್ ತಮ್ಮ ಕವಿತೆಗಳೊಂದಿಗೆ ಎಲ್ಲರೆದುರು ನಿಂತಿದ್ದಾರೆ.
ಹುಟ್ಟಿನ ಕಾರಣಕ್ಕಾಗಿ ಅವಮಾನವನ್ನು, ಹಸಿವನ್ನು, ಸಂಕಟವನ್ನು, ಬಡತನವನ್ನೂ ತಲೆಮಾರುಗಳ ಕಾಲ ಹೊದ್ದುಕೊಳ್ಳಬೇಕಾಗಿ ಬಂದಿರುವ ಈ ದಿನಗಳಲ್ಲಿ, ಬಹುತ್ವ ಎನ್ನುವುದೇ ಅಪರಾಧವಾಗಿರುವ ಈ ದಿನಗಳಲ್ಲಿ, ಆಲೋಚನೆ ಎನ್ನುವುದೇ ದೇಶದ್ರೋಹಿತನವಾಗಿರುವ ಈ ದಿನಗಳಲ್ಲಿ ರವಿಕುಮಾರ್ ತಮ್ಮ ‘ನಂಜಿಲ್ಲದ ಪದ’ಗಳನ್ನು ನಮ್ಮ ಮುಂದೆ ಹರಡಿದ್ದಾರೆ. ರವಿಕುಮಾರ್ ಅಥವಾ ಅವರಂತೆ ಯೋಚಿಸುವವರ ಬಗ್ಗೆ ನಮಗೆ ಭರವಸೆ ಮೂಡುವುದೇ ಅವರು ನಂಜಿನ ಕಾಲಕ್ಕೆ ನಂಜಿಲ್ಲದ ಮಾತುಗಳ ಮುಲಾಮು ಹೊಂದಿದ್ದಾರೆ ಎನ್ನುವ ಕಾರಣಕ್ಕೆ. ಅಂಗುಲಿಮಾಲನ ಎದುರು ಬುದ್ಧನಾಗುವುದು ಸುಲಭವಲ್ಲ. ಅದು ತನ್ನೊಳಗಿನ ಭಯವನ್ನು ಗೆದ್ದ ಪ್ರತೀಕ. ಹಾಗೆ ಗೆದ್ದವರು ಎಷ್ಟಿದ್ದಾರೆ ಎಂದು ಹತಾಶೆ ಆವರಿಸುವ ಸಮಯದಲ್ಲಿ ರವಿಕುಮಾರ್ ಅವರ ಕವಿತೆಗಳು ನಮ್ಮ ಮುಂದೆ ಭರವಸೆಯ ಬೆಳಕಾಗಿ ನಿಲ್ಲುತ್ತವೆ.
‘ಜನರು ಬೀದಿಯಲ್ಲಿದ್ದಾಗ ರಂಗಮಹಲುಗಳನ್ನೊದ್ದು, ಕನಸುಗಳ ಕೋಟೆಯನ್ನೊಡೆದು, ಭ್ರಮೆಯ ಲೋಕವ ದಾಟಿ, ತಾನೂ ಬದುಕಲೆಂದು.. ಕಾವ್ಯ ಬಂತು ಬೀದಿಗೆ’ ಎನ್ನುವಂತೆ ರವಿಕುಮಾರ್ ಕವಿತೆಗಳು ಕನಸುಗಳ ಹೆರುತ್ತಾ ಕೂರದೆ ಬೀದಿಗೆ ಬಂದು ನಿಂತಿವೆ. ಅಸೀಫಾಳ ಮೇಲಿನ ಅತ್ಯಾಚಾರ, ಉತ್ತರ ಪ್ರದೇಶದ ಆಸ್ಪತ್ರೆಯಲ್ಲಿ ಸಾಲು ಸಾಲು ಮಕ್ಕಳ ಸಾವು, ಗೌರಿ ಹತ್ಯೆ, ರೋಹಿತ್ ವೇಮುಲ ಆತ್ಮಹತ್ಯೆ.. ಹೀಗೆ ರವಿಕುಮಾರ್ ಪದ್ಯಗಳು ನೊಂದವರ ಹಿಂದೆ ಸಂಚಾರ ಹೊರಟಿವೆ. ಇವರ ಕವಿತೆಗಳು ಅಶಾಂತ ಸಂತನಂತೆ ದೇಶದುದ್ದಕ್ಕೂ ತಿರುಗುತ್ತವೆ. ಹೆಣದ ಮೆರವಣಿಗೆಯ ಹಿಂದೆ ಹೊರಟ ಕವಿತೆಗಳು ‘ಬನ್ನಿ ಮಣ್ಣಿಗೋಗೋಣ’ ಎಂದು ಕನಸ ಮರಿ ಹಾಕುತ್ತಾ, ರಂಗ ಮಹಲುಗಳಲ್ಲಿದ್ದವರನ್ನು ಕರೆಯುತ್ತವೆ.
ಇವರ ಕವಿತೆಗೆ ಒಡಲಾಳವನ್ನು ಹೊಕ್ಕುವ, ಇನ್ನಿಲ್ಲದಂತೆ ಮನ ಕಲಕುವ ಶಕ್ತಿ ಇದೆ. ಅಬ್ಬರದ ದನಿಗಿಂತ ತಣ್ಣನೆಯ ದನಿಯನ್ನು ಅವರು ಆಯ್ಕುಕೊಳ್ಳುತ್ತಾರೆ. ಹಾಗಾಗಿಯೇ ಗೌರಿ ತನಗೆ ಗುಂಡಿಕ್ಕಿದವನಿಗೆ ‘ನನ್ನೆದೆ, ಹಣೆಗೆ ಗುಂಡಿಕ್ಕುವ ಮುನ್ನ ಅದೆಷ್ಟು ಹಸಿದಿದ್ದೆಯೋ..’ ಎಂದು ಕಳವಳಿಸುತ್ತಾಳೆ. ‘ನನ್ನ ಕೊಂದ ಕತ್ತಿಯನ್ನು ದೇವರ ಕೋಣೆಯಲ್ಲಿಡಿ.. ನಿತ್ಯ ನಿಮ್ಮ ಪರಾಕ್ರಮ ನೆನಪಾಗುತ್ತಿರಲಿ’ ಎನ್ನಲು ಸಾಧ್ಯವಾಗುತ್ತದೆ.
‘ನೀ ಹೋದ ಮರುದಿನ ಮೊದಲಾಂಗ ನಮ್ಮ ಬದುಕು ಆಗ್ಯಾದೋ ಬಾಬಾಸಾಹೇಬ’ ಎಂದು ರವಿಕುಮಾರ್ ಕೊರಗುತ್ತಾ ಕೂರುವುದಿಲ್ಲ. ಅವರು ಬಾಬಾಸಾಹೇಬನ ಎದುರು ನಿಂತು ಕುಶಲ ವಿಚಾರಿಸುವವರು. ಬಾಬಾಸಾಹೇಬನ ಕಣ್ಣಲ್ಲಿ ನೀರುಕ್ಕಿದ್ದಕ್ಕೆ, ಕೊರಳ ಸೆರೆಯುಬ್ಬಿದ್ದಕ್ಕೆ ‘ಯಾಕಿಷ್ಟು ದುಃಖ ದೊರೆಯೇ?’ ಎಂದು ಕೇಳಬಲ್ಲವರು. ‘ಕಣ್ಣ ಕೆಂಡದಲ್ಲಿ ಹೋಳಿಗೆ ಸುಡುವವರ’ ಜೊತೆ ನಿಲ್ಲುವವರು.
ತಮ್ಮ ಕವಿತೆಗಳನ್ನು ರವಿಕುಮಾರ್ ‘ಇವು ನನ್ನ ಬಿಕ್ಕಳಿಕೆಗಳು’ ಎಂದು ಕರೆದುಕೊಳ್ಳುತ್ತಾರೆ. ಇವು ‘ಇಷ್ಟ ಬಂದ ಆಹಾರ ತಿಂದದ್ದಕ್ಕೆ, ಉಡುಗೆ ತೊಟ್ಟಿದ್ದಕ್ಕೆ, ನಕಲಿ ದೇಶಪ್ರೇಮವನ್ನು ಪ್ರಶ್ನಿಸಿದ್ದಕ್ಕೆ’ ತಮ್ಮ ಹತಾರಗಳನ್ನು ಹೊತ್ತು ಬಂದವರ ನಿಲೆ ಹಾಕಿ ಕಣ್ಣಲ್ಲಿ ಕಣ್ಣಿಟ್ಟು ‘ಏನು ಬಂದಿರಿ, ಹದುಳವೇ?’ ಎಂದು ಕೇಳುವ ಶಕ್ತಿಯನ್ನು ಹೊಂದಿವೆ. ಇಲ್ಲಿರುವ ಕವಿತೆಗಳು ನಿಮ್ಮನ್ನೂ ನಿಲೆ ಹಾಕಿ ಕೇಳುತ್ತದೆ ‘ಪ್ರಶ್ನಿಸಿ, ಯಾಕೆ ಸುಮ್ಮನಿದ್ದೀರಿ?’ ಎಂದು. ‘ನಂಜಿಲ್ಲದ ಕವಿತೆ’ಗಳ ಓದಿ ನಂಜುಳ್ಳವರ ಎದುರು ನಿಲ್ಲೋಣ ಬನ್ನಿ.

‘ಬಹುರೂಪಿ’ ಪ್ರಕಟಣೆಗಳನ್ನು ಕೊಳ್ಳಲು-


‍ಲೇಖಕರು avadhi

December 29, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: