ರಮೇಶ ಗಬ್ಬೂರ್ ಯುದ್ಧ ವಿರೋಧಿ ಕವಿತೆಗಳು

ರಮೇಶ ಗಬ್ಬೂರ್

——

1

ಯುದ್ಧ ಬೇಕೆಂಬ ಗೆಳೆಯನಿಗೆ….

—-

ವಿಮರ್ಶೆ ಎಂಬುದು 

ಆಧುನಿಕ ರೋಗಗಳ 

ಸಾಲಿಗೆ ಸೇರಿ 

ಕೆಟ್ಟುಹೋಗಿದೆ ಗೆಳೆಯ

ಹರಿವ ರಕ್ತದಲ್ಲದ್ದಿದ 

ಬತ್ತಿಯ ಬೆಳಕಿನಲಿ ಬರೆಯಬೇಡ

ಕವಿತೆಗೆ ಬೆಂಕಿ ಹಚ್ಚಿಬಿಡು

ಯುದ್ಧ ಸಾಯಲಿ ಗೆಳೆಯ

ಕುಡಿವ ನೀರಿಗೆ 

ಕಣ್ಣೀರ ಬೆರೆಸಲಾಗಿದೆ

ಯುದ್ಧದ ಮೇಲಿನ ಸಂಭ್ರಮ

ಸಾವಲ್ಲವೇ ಗೆಳೆಯ

ಯುದ್ಧವೆಂದರೆ ಸಾವಿನ ಪಾಳಿ 

ಭೂಮಿಯ ಮೇಲೆ

ಸ್ಮಶಾನಗಳ ನಿದ್ದೆ ಗೆಡುವಿಕೆ

ಅಲ್ಲವೇ ಗೆಳೆಯ

ಸಾಯಿಸಿದವರ

ನರಕದ ಜೊತೆಗೆ

ಸತ್ತವರ ಸ್ವರ್ಗವ 

ಹೋಲಿಸಬೇಡ ಗೆಳೆಯ

ಪಕ್ಕದ ನೆಲವ ನೋಯಿಸಿ

ಪ್ರೀತಿಯ ಪಾಠ ಹೇಳುವವರ ಕಂಡು

ನನಗೆ ಮರುಕವಿದೆ ಗೆಳೆಯ

ಜೀವ ಎಂದೂ ಉಳಿಯುವುದಿಲ್ಲ 

ಎಂಬ ಸತ್ಯ 

ಇವರಿಗೇಕೆ ಅರ್ಥವಾಗುತ್ತಿಲ್ಲ ಗೆಳೆಯ

ಯದ್ಧವಾಗಲಿ 

ಬಾಂಬ್ ನಮ್ಮ ತಲೆ ಮೇಲೆ ಬೀಳದಿರಲಿ

ಕತ್ತಿ ಇರಲಿ 

ಅದರ ಮುಂದಿನ ರುಂಡ ನಾವಾಗದಿರಲಿ 

ಎಂದರೆ ಹೇಗೆ ಗೆಳೆಯ

ಬಾಂಬ್ ಒಸೆಯುವವರಾರು

ಕತ್ತಿ ಮಸೆಯುವವರಾರು ಗೆಳೆಯ

ದೇಶಾಭಿಮಾನದ ಯುದ್ಧಕ್ಕೆ

ಇಷ್ಟೊಂದು ಹೆಣಗಳು ಬೀಳಬೇಕಾ ?

ಉಳಿದವರು ಭೂಮಿ 

ಇರುವವರೆಗೂ ಇರುತ್ತಾರೆಯೇ?

ಹುಟ್ಟಿದ ಮೂರು ದಿನದೊಳಗೆಯೇ 

ಸಂತೆಯನು ಪ್ರವೇಶಿಸುವ ಮೊದಲೇ 

ಲೋಕದ ಸಂತೆ ಮುಗಿಸಬೇಕಿರುವುದು 

ಎಷ್ಟೊಂದು ಕಷ್ಟವಲ್ಲವೇ ಗೆಳೆಯ 

ಬೀಳುವ ಬಂದೂಕಿನ ತೂಟಾಗಳು 

ಹೆಗಲ ಪಾಠಿ ಚೀಲದಲಿ ಬೀಳುವಾಗ

ಮಕ್ಕಳಿಗೆ ಗಡಿಗಳು

ಧರ್ಮಗಳು ಅರ್ಥವಾಗದೆಂದು

ಯಾರು ಹೇಳಬೇಕು ಗೆಳೆಯ

ಬಾಂಬ್ ಹಾಕಿ ಯುದ್ಧ ಗೆಲ್ಲಬಹುದು

ಕೊಂದು‌ನಗುವ ಆಟಕ್ಕೆ 

ಕೊನೆ ಎಲ್ಲಿದೆ

ಗೆಲ್ಲುವುದು ಗೆಲುವಲ್ಲ ಗೆಳೆಯ

ಯುದ್ಧದ ಮೇಲಿನ ಗೆಲುವು

ಗೋರಿಯ ಮೇಲಿನ ಗೆಲುವು

ಗೆಲುವೆನ್ನಲಾಗದು ಗೆಳೆಯ

ಬದುಕೇ

ತುಂಡು ಜಾಗವೇ 

ಎರಡರಲ್ಲಿ ಒಂದು ಗೆಳೆಯ

ಒಂದು ಬುದ್ಧನ‌ಮಾತು

ಇನ್ನೊಂದು

ಯುದ್ಧದ ಮಾತು

ಒಂದು ಉಳಿಸುವುದು

ಇನ್ನೊಂದು ನಾಶ ಗೆಳೆಯ

ಬದುಕಿಗಿಂತ ದೊಡ್ಡದೇನಿದೆ 

ಧರ್ಮಕ್ಕೆ ರಕ್ತ ಕುಡಿಯಬೇಕೆನಿಸಿದರೆ 

ಏನು ಮಾಡಲಿ ಗೆಳೆಯ

ಧರ್ಮವನ್ನು ಒಪ್ಪಿಸಿ ಹಿಂಸೆ ಬಿಡಿಸುವೆ 

ಇಲ್ಲವೇ 

ಆ ಮನೆಯ ಬಿಟ್ಟು ಹೋಗುವೆ

ಒಂದೋ ಬುದ್ಧನಿರಬೇಕು

ಇಲ್ಲವೆ ಯುದ್ಧ ಇರಬೇಕು

ಆಯ್ಕೆ ಯಾವುದಿರಲಿ ಗೆಳೆಯ

ವಿಷ ಸವರಿದ ಗುಲಾಬಿಯ ಮುದ್ದಿಸಲು ಮುಂಜಾನೆಗಾಗಿ ಕಾಯಬೇಕು

ಅಲ್ಲಿ ನಾನು ನೀನು

ಸಾವಿನ ಜೊತೆ ಸಂಗೀತ ಹಾಡಬೇಕು..

2

ಸಾಯಿಸುವಾಟ…

              -೧-

ನೀ ಬಂದು ಹೋದ ಮರುದಿನ

ಛಿದ್ರಗೊಂಡ ಮನೆಯಂಗಳದಲ್ಲಿ

ರಕ್ತದ ಚೆಲ್ಲಿದ ಜಾಗದಲ್ಲಿ

ಹೊಸ ಮನೆಗಳು

ಮತ್ತೆ ಮೇಲೇಳುತ್ತವೆ

ನೀ ಬಂದು ಹೋದ ಮರುದಿನ

ಕತ್ತಲಾದ ಓಣಿಯ

ಬಿದ್ದು ಹೋದ 

ವಿದ್ಯುತ್ ಕಂಬಗಳಿಗೆ

ಮತ್ತೆ ಜೀವ ಬರುತ್ತದೆ

ನೀ ಬಂದು ಹೋದ ಮರುದಿನ

ನಲ್ಲಿಯಲ್ಲಿ ನೀರು ಬರುತ್ತದೆ 

ಸಾಂತ್ವನದ ಮಾತುಗಳ 

ಮಹಾಪೂರ ಹರಿಯುತ್ತದೆ

ಮೂರ್ಖರ ಪೆಟ್ಟಿಗೆಯಲ್ಲಿ 

ಸುದ್ದಿಯು ಕೂಡ ಬಿತ್ತರವಾಗುತ್ತದೆ 

ನೀ ಬಂದು ಹೋದ ಮರುದಿನ

ಒತ್ತೆಯಲ್ಲಿದ್ದವರು ಹೊರಗಡೆ ಬರುತ್ತಾರೆ 

ಅವರ ಬೇಡಿಕೆ ಪತ್ರಗಳು 

ಕೈಯಿಂದ ಕೈಗೆ ಬದಲಾಗುತ್ತವೆ

ನೀ ಬಂದು ಹೋದ ಮರುದಿನ

ಮದ್ದು ಗುಂಡುಗಳ ಟ್ಯಾಂಕರ್ ಗಳು 

ಮರಳಿ ಸ್ವಸ್ಥಾನ ಸೇರುತ್ತವೆ

ಒಪ್ಪಂದಗಳು ಮುನ್ನಲೆಗೆ ಬರುತ್ತವೆ. 

ನೀ ಬಂದು ಹೋದ ಮರುದಿನ

ನಾಯಕರು ಪರಸ್ಪರ ಕೈಕುಲುತ್ತಾರೆ

ಒಂದಾಗಿ ಅಧಿಕಾರ ಅನುಭವಿಸುತ್ತಾ ಸುಖವಾಗಿರುತ್ತಾರೆ

               –೨–

ನೀ ಬಂದು ಹೋದ ಮರುದಿನ

ಕಳೆದು ಹೋದ ತಾಯಿಗಾಗಿ 

ಕಂದನ ಆಕ್ರಂದನ 

ಮುಗಿಲು ಮುಟ್ಟುತ್ತದೆ

ಕಳೆದು ಹೋದ 

ಪ್ರೀತಿಯ ಗಂಡನಿಗಾಗಿ 

ಬಿದ್ದ ಕಟ್ಟಡಗಳ

ಅವಶೇಷಗಳಡಿ

ಹೆಂಡತಿ ಕಣ್ಣೀರು ಹಾಕುತ್ತಾಳೆ

ಹೆಣಗಳ ಹೂಳಲು

ಸ್ಮಶಾನ ಹಗಲು ರಾತ್ರಿ

ನಿದ್ದೆಗೆಡುತ್ತದೆ

ಎಲ್ಲಿಂದಲೋ ಬರುವ ಅಳುವ 

ಕೂಗು ಕೇಳಿ

ನವಮಾಸ ಹೊತ್ತ ತಾಯಿ 

ಕಾಣೆಯಾದ

ಕೂಸ ಹುಡುಕುತ್ತಾಳೆ

ನೀರಿಗಾಗಿ ಅನ್ನಕ್ಕಾಗಿ

ಶೌಚಕ್ಕಾಗಿ ನಿಂತ ಸಾಲು 

ಉದ್ದವಾಗುತ್ತದೆ

ಸಾಂಕ್ರಾಮಿಕಗಳು

ಸಾಲು ಸಾಲು ಮುತ್ತಿಗೆ ಹಾಕಿ

ಮನೆಯ ಬಾಗಿಲ

ಕಾವಲಲಿರುತ್ತವೆ

ಅರ್ಧಮರ್ಧ ಸತ್ತ

ಹಸುಳೆಗಳ ಆಕ್ರಂದನ

ಮುಗಿಲು ಸೀಳುತ್ತದೆ

ವಿಜಯ ಸಾಧಿಸಿದ ನೆಲದಲಿ

ವೀರ ತಂದೆಗಾಗಿ

ಮಗ ಹೂ ಮಾಲೆ 

ಹಿಡಿದು ಸ್ವಾಗತಿಸುತ್ತಾನೆ

ಸೋತ ನೆಲದಲಿ

ಕಣ್ಣೀರಿನ ಚಿತ್ರ ಬಿಡಿಸುತ್ತ

ಕಳೆದುಕೊಂಡ ತಂದೆಗಾಗಿ

ಮಗ ಮಮ್ಮಲ ಮರುಗುತ್ತಾನೆ

               ….೩….

ಹಾಗಾದರೆ 

ನೀ ಬರುವಂತೆ ಮಾಡಿದವರಾರು

ಪ್ರತೀ ವಿದಾಯವು 

ಹೊಸ ವಸಂತವೆನ್ನುವುದಾದರೆ 

ವಿದಾಯದಲ್ಲಿ

ಹುತಾತ್ಮರಾದವರನ್ನು 

ಯಾರು ತಂದುಕೊಡಬೇಕು..

ಬಿರುಗಾಳಿಗಳಿಂದ 

ಬಿರುಮಳೆಯಿಂದ 

ಭೂಕಂಪದಿಂದ ಪಾರಾಗಬಹುದು 

ನೀ ಬಂದರೆ

ಯಾರು ಪಾರಾಗುವುದಿಲ್ಲ

ನಾನು ನೀನು

ಮತ್ತು ಅವರು…..

ಸಾವಿನಾಟದ ಸರಸ

ಯುದ್ಧವೆ ನನ್ನ ಧಿಕ್ಕಾರವಿರಲಿ…

‍ಲೇಖಕರು avadhi

November 15, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: