ರಮಾಕಾಂತ್‌ ಆರ್ಯನ್ commentary- ಬೆಂಗಳೂರು ಹುಡುಗ ABD ರಿಟೈರ್ಡ್ ಹೇಳಿದ…

ಕೋಹ್ಲಿ I love you ಎಂದು ಬರೆದ..

ರಮಾಕಾಂತ್‌ ಆರ್ಯನ್

ಕ್ರಿಕೆಟ್ ಅನ್ನ ಕೆಲವರು ಕಲಿತ ಕಾರಣಕ್ಕೆ ಆಡಬಹುದು. ಕೆಲವರು ವೃತ್ತಿಯ ಕಾರಣಕ್ಕೆ ಆಡಿರಬಹುದು. ಜೀವನದ ಕಾರಣಕ್ಕೆ ಆಡುತ್ತಿರಲೂ ಬಹುದು. ಆದರೆ ಬರಿಯ ಆನಂದದ ಕಾರಣಕ್ಕೆ ಆಡುವ ಕೆಲವೇ ಕೆಲವರಲ್ಲಿ ಎಬಿಡಿ ವಿಲಿಯರ್ಸ್ ಎದ್ದು ಕಾಣುತ್ತಾನೆ. ಹೌದು ಬೆಂಗಳೂರಿನ ಹುಡುಗನೇ ಆಗಿಬಿಟ್ಟಿರುವ ಎಬಿಡಿ, ವಿದಾಯ ಹೇಳಿದ್ದಾನೆ. ಇದರೊಂದಿಗೆ ಐಪಿಎಲ್ ನಲ್ಲಿ ಈ ಹುಡುಗನ ಆಟ ನೋಡುವ ಭಾಗ್ಯವೂ ಬರಿದಾಗಿದೆ.

ಇಲ್ಲೇ ಆಡುತ್ತಿದ್ದ ಹುಡುಗ ಎಲ್ಲಿ ಮರೆಯಾದ ಎಂದು ನೋಡುವಂತಾಗಿದೆ. ಮಿಸ್ ಮಾಡಿಕೊಳ್ಳಲಿಕ್ಕೆ ತುಂಬ ಕಾರಣಗಳನ್ನು ಬಿಟ್ಟು ಹೋದ ಹುಡುಗ ಎಬಿಡಿ. ಬೆಂಗಳೂರು ಸೋತ ಅಷ್ಟೂ ಮ್ಯಾಚ್ಗಳಲ್ಲಿ ನಿನ್ನ ಬ್ಯಾಟಿಂಗ್ ಮಾತ್ರ ಮೂಡಿಸುತ್ತಿದ್ದ ನಗೆ ಇತ್ತಲ್ಲಾ? ಅದೊಂಥರಾ ಮನಮೋಹಕ! ಯಾರಿದ್ದಾರೋ ನಿನ್ನಂತೆ ಆಡಿದವರು? ಆ ಗ್ಲಾನ್ಸ್, ಆ ಫ್ಲಿಕ್, ಆ ಸ್ಕೂಪ್, ಕೀಪರ್ ತಲೆ ಹಿಂದೆ ನಿನ್ನ ಸ್ಕೋರ್ ತಡೆಯಲು ಸಾಧ್ಯವಿತ್ತೇ? ಅದಕ್ಕೆ ಆರ್ಸಿಬಿಯ ಅಷ್ಟೂ ಸೋಲುಗಳೂ ಕೂಡಾ ಅಭಿಮಾನಿಗಳಿಗೆ ಯಾವತ್ತೂ ಮ್ಯಾಟರ್ ಆಗಲೇ ಇಲ್ಲ. ನೀನಿದ್ದೆಯಲ್ಲಾ, ಸೋಲನ್ನೂ ಮರೆಸುವಂಥ ಬ್ಯಾಟಿಂಗ್ ಸೊಗಸುಗಾರ. ಅದೇನೋ ನಂಬಿಕೆ ನೀನಿದ್ದರೆ… ಗೆಲ್ಲುತ್ತಿದ್ದೆಯೋ, ಸೋಲುತ್ತಿದ್ದೆಯೋ ಯಾವತ್ತಿಗೂ ವಿಷಯವೇ ಆಗಲಿಲ್ಲ. ಚೆನ್ನಾಗಿ ಆಡಿದ ಬಿಡೋ ಅನ್ನೊದೊಂದೇ ಕೇಳಿಸುತ್ತಿತ್ತು.

ಎಬಿಡಿ ಎಂಬ ವಿಸ್ಮಯ, ಕೆಲವು ಆಕಸ್ಮಿಕಗಳ ಕಾರಣಕ್ಕೆ ಹೀರೋ ಆದವನಲ್ಲ. ಅವನು ಅವನ ಪರ್ಫೆಕ್ಷನ್, ಶಾಟ್ ಸೆಲೆಕ್ಷನ್, ಕಾನ್ಸನ್ಟ್ರೇಷನ್ ಕಾರಣಕ್ಕೆ ಇಷ್ಟವಾಗಿಬಿಡುತ್ತಾನೆ. ಅವನು ಕಟ್ಟಕಡೆಯ ಬಾಲ್ವರೆಗೂ ಇದ್ದು ಬಿಡಲಿ ಆಮೇಲೆ ನೋಡಿ ಕಥೆನಾ ಅಂತ ಅದೆಷ್ಟು ಜನ ಹೇಳಿಕೊಂಡಿಲ್ಲ. ಒಂಥರಾ ಆಳಕ್ಕಿಳಿದ ಪ್ರೀತಿ ಅವನು.

ತಾನಾಡಿದ ಪ್ರತಿಯೊಂದು ತಂಡದ ಒಡನಾಡಿಗೆ, ಪ್ರತಿಸ್ಪರ್ಧಿಗೂ, ಕೋಚ್ಗೂ, ಫಿಸಿಯೋಗೂ, ಸ್ಟಾಫ್ ಮೆಂಬರ್ಸ್ಗೂ ಅವನು ಥಾಂಕ್ಸ್ ಹೇಳುತ್ತಾ ಜೀವನದ ಮುಂದಿನ ಅಧ್ಯಾಯದ ಕಡೆಗೆ ಎದ್ದು ನಡೆದಿದ್ದಾನೆ ಎಬಿಡಿ!

ಎಬಿಡಿ ಹೊಡೆದ ರನ್ ಗಳಿಗೆ ಅವನು ಇಷ್ಟವಾದನಾ? ಬರಿಯ ಸಿಕ್ಸರ್ ಕಾರಣಕ್ಕೆ ಅವನನ್ನ ಮೆಚ್ಚಬೇಕಾ? ಸ್ಕೋರ್ ಬೋರ್ಡ್ ಮೇಲೆ ರನ್ ಗಳನ್ನ ಮತ್ತೆ ಮತ್ತೆ ತಿದ್ದಿ ಬರೆಸುತ್ತಿದ್ದನಲ್ಲಾ ಆ ಕಾರಣಕ್ಕೆ ಅವನನ್ನ ಇಷ್ಟಪಡಬೇಕಾ? ಸರ್ಪಕಂಗಳ ಚೆಲುವಾಂತ ಚೆನ್ನಿಗ ಎಂಬ ಕಾರಣಕ್ಕಾ ಅವನು ಅಷ್ಟು ಇಷ್ಟವಾಗಬೇಕು. ಇರಬಹುದು ಆದರೆ ಇದರಾಚೆಗೂ ಅವನು ಇಷ್ಟವಾಗುತ್ತಿದ್ದ. ಅವನು ತನ್ನ ಬ್ಯಾಟನ್ನ ಕುಂಚದಂತೆ ಹಿಡಿದು ಮೈದಾನದ ಮೂಲೆ ಮೂಲೆಗೆ ಚೆಂಡನ್ನು ಸಿಡಿಸಿ ಒಂದು ಚಿತ್ರಕಲೆ ಬಿಡಿಸುತ್ತಿದ್ದನಲ್ಲಾ, ಜೊತೆಯಲ್ಲಿ ಬಾಲಂಗೋಚಿಯನ್ನ ಇಟ್ಟುಕೊಂಡು ತಂಡವನ್ನ ಗಡಿದಾಟಿಸುತ್ತಿದ್ದನಲ್ಲಾ, ತಂಡಕ್ಕೆ ಒಂದು ದೊಡ್ಡ inspiration ಆಗುತ್ತಿದ್ದನಲ್ಲಾ, ಎಲ್ಲಕ್ಕೂ ಹೆಚ್ಚಾಗಿ ಅವನು ನಮ್ಮವನೇ ಆಗಿದ್ದನಲ್ಲಾ, ಆ ಕಾರಣಕ್ಕೆ ಇಷ್ಟವಾದವನು ಎಬಿಡಿ ವಿಲ್ಲಿಯರ್ಸ್ ಎಂಬ ಸಮೂಹ ಸನ್ನಿ!

ಕ್ರಿಕೆಟ್ ನೋಡಿ ಅಥವಾ ಆಡಿ ಎಂದು ಹೇಳಲಿಕ್ಕೆ ಇವನಿಗಿಂತ ಮಿಗಿಲಾದ ರಾಯಭಾರಿ ಬೇಕಾ? ಸಿಗುವುದು ಕಷ್ಟ! ಅವನೊಂಥರಾ ಕ್ರಿಕೆಟ್ ಮೈದಾನದಲ್ಲಿ ಅರಳಿಬಿಡುತ್ತಿದ್ದ ದೃಶ್ಯಕಾವ್ಯ.

ಅವನ ದಾಖಲೆಗಳ ಬಗ್ಗೆ ಬರೆಯದಿದ್ದರೆ ಹೇಗೆ?

ಡಿವಿಲಿಯರ್ಸ್ ಎಂಬ ಕೋಲ್ಮಿಂಚು ಮಾಡಿದ ದಾಖಲೆಗಳು ಒಂಥರಾ ಇಂಟರೆಸ್ಟಿಂಗ್! ಅವನು ಏಕದಿನದಲ್ಲಿ ಸಿಡಿಸಿದ Fastest 50, 100 ಅಥವಾ 150 ಒಂದು ಅಬ್ಬರವಾದರೆ, ಕನಿಷ್ಠ 5000 ರನ್ ಪೂರೈಸಿರುವ ಬ್ಯಾಟ್ಸ್ಮನ್ ಗಳ ಪೈಕಿ 50 ಸರಾಸರಿಯನ್ನ ಉಳಿಸಿಕೊಂಡು 100ಕ್ಕೂ ಮೇಲಿನ ಸ್ಟ್ರೈಕ್ ರೇಟ್ ಹೊಂದಿರುವ one and only batsman ABD!

ಟೆಸ್ಟ್ ನಲ್ಲಿ ಸುಮಾರು 8000 ರನ್ಗಳಿಗೆ ಚೆಂಡನ್ನು ಹಿಗ್ಗಾ ಮುಗ್ಗಾ ಚಚ್ಚಿದ್ದಾನೆ. ಒನ್ಡೇನಲ್ಲಿ 9500 ಕ್ಕೂ ಮಿಗಿಲಾದ ರನ್ ಬಾರಿಸಿದ್ದಾನೆ. ಆ ಮಟ್ಟಿಗೆ ವಿಶ್ವದ ಅತ್ಯಂತ ನಿರ್ದಯಿ ಮತ್ತು ವಿಧ್ವಂಸಕ ಬ್ಯಾಟರ್ ಎಂದರೆ ಅದು ಎಬಿಡಿ. ಟೆಸ್ಟ್ ಚರಿತ್ರೆಗೆ 22 ಶತಕ, ಒನ್ ಡೇ ಹಿಸ್ಟರಿಗೆ 25 ಸೆಂಚುರಿ ಇದೆ. ಆದರೆ ವಿಷಯ ಇಷ್ಟೇ ಅಲ್ಲ. ಇವನಷ್ಟು unorthodox Shot ಹೊಡೆಯಬಲ್ಲ ಬ್ಯಾಟ್ಸ್ಮನ್ ಸದ್ಯ ಎಲ್ಲಿಯೂ ಆಡುತ್ತಿಲ್ಲ. ವಿಕೆಟ್ ಕೀಪರ್ ತಲೆಯ ಹಿಂದೆ ಉಳಿದ 9 ಫೀಲ್ಡರ್ಗಳನ್ನ ನಿಲ್ಲಿಸಿದರೂ ಇವನು ಸಿಕ್ಸರ್ ಅಥವಾ ಬೌಂಡರಿ ಹೊಡೆಯಬಲ್ಲ. ಎಷ್ಟೋ ಬಾರಿ ಗುರುತ್ವಾಕರ್ಷಣೆಯ ನಿಯಮಗಳಿಗೆ ತಿರುಗಿಬಿದ್ದಂತೆ ಎಬಿಡಿ ಆಡಿದ್ದಾನೆ.

ಪಿಚ್ನಲ್ಲಿಯ ಎಲ್ಲ ಉಬ್ಬುಗಳನ್ನೂ ದಾಟಿ ಹುಬ್ಬುಗಳು ಹಾರುವಂತೆ ಆಡಿದವನು, ಹಾರಿದವನು ಎಬಿಡಿ! ಅವನೇನು ಹಾವೋ, ಹಾರುವ ಹಕ್ಕಿಯೋ, ಸೂಪರ್ ಮ್ಯಾನ್ ಅಥವಾ ಸ್ಪೈಡರ್ ಮ್ಯಾನ್ ಎಂಬ ಇಂದ್ರಿಯಗಳ ಕಲ್ಪನೆಗಳಾಚೆಗಿನ ಶಕ್ತಿಯೋ, ಅರ್ಥವೇ ಆಗದಂತೆ ಆಡಿದವನು. 31 ಚೆಂಡುಗಳಿಗೆ ಸುಮ್ಮನೇ ನೂರರ ಗಡಿ ದಾಟಿದ್ದಾನೆ. ಆಮೇಲೆ ಅದನ್ಯಾರೋ ದಾಖಲೆ ಎಂದು ಬರೆದುಕೊಳ್ಳುತ್ತಾರೆ. ಅವನು ಬರೀ ದಾಖಲೆಗಳಾ? ಅದಲ್ಲ. ಅವನು ಅದರಾಚೆಗೆ ನಿಲ್ಲುವ ಸ್ಮೈಲಿಂಗ್ ಕಿಲ್ಲರ್! ಅದು ಇವನ ಸ್ಪೆಷಾಲಿಟಿ. ಒಂದು ಗುಂಪಿನಲ್ಲಿ ಸುಮ್ಮನೆ ABD ಎನ್ನಿ ಅದೆಷ್ಟು ಕಣ್ಣುಗಳು ಅರಳುತ್ತವೋ ನೋಡಿ!

ABD ಎಂದರೇ ಅದೇ!1984ರ ಫೆಬ್ರವರಿಯಲ್ಲಿ ದಕ್ಷಿಣ ಆಫ್ರಿಕಾದ Warm badನಲ್ಲಿ ಹುಟ್ಟಿದ ಹುಡುಗ ಇವನು. ಅಪ್ಪ ಡಾಕ್ಟರ್ ಮತ್ತು ಯೌವ್ವನದ ದಿನಗಳ ರಗ್ಬಿ ಆಟಗಾರ. ಇದೇ ಎಬಿಡಿಗೆ ಇಬ್ಬರು ಸಹೋದರರೂ ಇದ್ದಾರೆ. ಫಾಫ್ ಡುಪ್ಲೆಸಿಸ್ ಎಂಬ ದಕ್ಷಿಣ ಆಫ್ರಿಕಾದ ಮತ್ತೊಬ್ಬ ಕ್ರಿಕೆಟಿಗ ಡಿವಿಲ್ಲಿಯರ್ಸ್ಗೆ ಶಾಲಾ ದಿನಗಳ ಕ್ಲಾಸ್ ಮೇಟ್. ಆ ಮೇಲೆ ಇಬ್ಬರೂ ರಾಷ್ಟ್ರೀಯ ತಂಡಕ್ಕೆ ಹೆಜ್ಜೆ ಇಟ್ಟು ವಿಶ್ವವನ್ನೇ ಬೆರಗು ಮಾಡಿದವರು. ಮಾರ್ಕ್ ಬೌಷರ್ನಿಂದ ವಿಕೆಟ್ ಕೀಪಿಂಗ್ ಗ್ಲೌಸ್ಗಳನ್ನ ಪಡೆದುಕೊಂಡಿದ್ದ ಎಬಿಡಿ, ಆನಂತರ ಅದನ್ನ ಕ್ವಿಂಟನ್ ಡಿ ಕಾಕ್ಗೆ ಕೊಟ್ಟಿದ್ದಾನೆ.

ಎಬಿಡಿಯದ್ದು ಹತ್ತಿರ ಹತ್ತಿರ 17 ವರ್ಷಗಳ ಕ್ರಿಕೆಟ್ ಬದುಕು. ಅದರಲ್ಲಿ ಕನಿಷ್ಠ 9 ವರ್ಷಗಳ ಕಾಲ, ಬೆನ್ನುಹುರಿಯ ನೋವನ್ನು ನುಂಗಿಕೊಂಡೇ ಮನರಂಜನೆ ಕೊಟ್ಟವನು ಎಬಿಡಿ. ಎಷ್ಟೋ ಪಂದ್ಯಗಳಲ್ಲಿ ಒಂದೊಂದು ಶಾಟ್ ಹೊಡೆದಾಗಲೂ ಅವನ ಕೈ ತನಗೇ ಅರಿವಿಲ್ಲದಂತೆ ಬೆನ್ನುಹುರಿಗೆ ಆಸರೆಯಾಗಿ ನಿಲ್ಲುತಿತ್ತು. ಕ್ರಿಕೆಟ್ನಲ್ಲಿ ವಿಕೆಟ್ ಕೀಪರ್ ಮತ್ತು ಬ್ಯಾಟ್ಸ್ಮನ್ ಸಾಮಾನ್ಯವಾಗಿ ಅನುಭವಿಸುವ ಸಮಸ್ಯೆ ಇದು.

150 ಕಿಮೀ ವೇಗದಲ್ಲಿ ಬೌಲರ್ ಕುಕ್ಕುವ ವೇಗದ ಚೆಂಡನ್ನ ಫೇಸ್ ಮಾಡಬೇಕಾದರೆ, ತಪ್ಪಿಸಿಕೊಳ್ಳಬೇಕಾದರೆ, ಹುಕ್ ಮಾಡಬೇಕಾದರೆ ಒಬ್ಬ ಬ್ಯಾಟ್ಸ್ಮನ್ ಸೆಕೆಂಡಿನ ಹತ್ತನೇ ಒಂದು ಭಾಗ ಮುರಿಯುವಷ್ಟರಲ್ಲಿ 90 ಡಿಗ್ರಿಯಷ್ಟು ಹಿಂದಕ್ಕೆ ಅಥವಾ ಮುಂದಕ್ಕೆ ಬಗ್ಗಿರಬೇಕು ಇಲ್ಲವೇ ಇಡೀ ದೇಹವೇ ತಿರುಗಿರಬೇಕು. ಬೆನ್ನುಮೂಳೆಗೆ ಅದೆಂಥಾ ಹಿಂಸೆ ಗೊತ್ತಾ. ಜೊತೆಗೆ ಕೀಪಿಂಗ್ ಕೂಡಾ ಇದ್ದು ಬಿಟ್ಟರೆ ಬೆನ್ನುಹುರಿಯ ಕಥೆ ಅಷ್ಟೇ. ಇಂತದ್ದೇ ಇಂಜುರಿಗಳಿಂದ ತುಂಬಾ ನೋವಿಗೆ ತುತ್ತಾಗುತ್ತಿದ್ದ ಎಬಿಡಿ ಇದೀಗ ವಿದಾಯ ಬರೆದು ಎದ್ದು ನಡೆದಿದ್ದಾನೆ. ಒಂದು ಖಾಲಿತನ ಹಾಗೆ ಉಳಿಸಿಹೋಗಿದ್ದಾನೆ. ಒಂದು ಕ್ರೀಡಾಂಗಣವೇ ಬಿಕೋ ಎಂದಂತೆ. ಬರೆಯವುದು ಇನ್ನೂ ಒಂದಷ್ಟು ಬಾಕಿ ಇದೆ ಎಬಿಡಿ, ನಿನ್ನ ಮುಂದಿನ ಜೀವನ ಅಮೋಘವಾಗಲಿ!

‍ಲೇಖಕರು Admin

November 20, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: