ರಜನಿ ನರಹಳ್ಳಿ ಅವರ ಸಾಹಿತ್ಯದ ಮೇಲೆ ಹೊಸ ಬೆಳಕು

ಚೆಲ್ಲವರಿದ ಬೆಳಕು’ – ಭುವನದ ಭಾಗ್ಯ

  •  ಟಿ. ಎ. ಲಲಿತಾ
  • ***
  • ಚೆಲ್ಲವರಿದ ಬೆಳಕು(೨೦೨೩)
  • ಲೇ: ಉಮಾ ರಾಜಣ್ಣ
  • ಪ್ರ: ಅಭಿನವ ಬೆಂಗಳೂರು
  • ಪುಟ: ೨೪೮ ಬೆಲೆ: ರೂ. ೩೦೦.೦೦

ಯಾವುದೇ ಒಬ್ಬ ಕವಿ ಅಥವಾ ಬರಹಗಾರನಿಗೆ ಸಹೃದಯ ಬಳಗವಿರುವುದು ಬಹಳ ಮುಖ್ಯ ‘ಬೆಲೆಯಿಂದಕ್ಕುಮೆ ಕೃತಿಗಾವಿಲ; ಭುವನದ ಭಾಗ್ಯದಿಂದಕ್ಕುಮೆ’ ಇದು ನಮ್ಮ ಹಿಂದಿನವರು ಒಂದು ಒಳ್ಳೆಯ ಕೃತಿಗೆ ನೀಡುತ್ತಿದ್ದ ಗೌರವ. ಪುಸ್ತಕ ಪ್ರೇಮವಿಲ್ಲದ ಈ ಕಾಲದಲ್ಲಿ ಈ ಉಲ್ಲೇಖ ಎಂತಹ ನಿಕಷವಾಗಿದೆ! ಆತ್ಮತೃಪ್ತಿಗಾಗಿ ಬರೆದರು ಓದುಗರಿದ್ದಾಗಲೇ  ಬರಹಗಾರರಿಗೆ ಬಲ ಬರುವುದು.

ಉಮಾ ರಾಜಣ್ಣ ಅವರ ಪರಿಚಯ ನನಗೆ ಬಹಳ ವರ್ಷಗಳಿಂದ ಇದ್ದರೂ, ಅವರೊಳಗಿನ ಸಾಹಿತ್ಯಾಭಿರುಚಿ, ಸಹೃದಯತೆ, ನನ್ನೆದುರು ಪ್ರತ್ಯಕ್ಷವಾದದ್ದು ಈಚೆಗೆ ಅವರು ಪ್ರಕಟಿಸಿದ ಚೆಲ್ಲವರಿದ ಬೆಳಕು ಪುಸ್ತಕದ ಮೂಲಕ. ರಜನಿ ನರಹಳ್ಳಿಯವರ ಆಪ್ತ ಸ್ನೇಹಿತೆಯಾಗಿ  ಅವರ ಕೃತಿಗಳನ್ನು ಸಹೃದಯ ಮನೋಭಾವದಿಂದ ಓದಿ, ನಂತರ ಸ್ವಲ್ಪ ಆರಾಧನಾಭಾವದಿಂದ  ಅವಲೋಕನ ಮಾಡಿರುವ ಕೃತಿ ‘ಚೆಲ್ಲವರಿದ ಬೆಳಕು’. ಇದೊಂದು ಅಪರೂಪದ ಮಾತ್ರವಲ್ಲ ಅಪೂರ್ವ ಪ್ರಯತ್ನವೇ ಸರಿ. `ಅವಲೋಕನ’ ಎಂಬ ಹೊಸ ಸಾಹಿತ್ಯ ಪ್ರಕಾರಕ್ಕೆ ಈ ಕೃತಿ ನಿರ್ವಿವಾದವಾಗಿ ಒಂದು ಹೊಸ ಮೈಲಿಗಲ್ಲು. ನಿಜ ಹೇಳಬೇಕೆಂದರೆ ನಾನಿನ್ನೂ ರಜನಿಯವರ ಯಾವ ಕೃತಿಯನ್ನೂ ಓದಿಲ್ಲ. ಆದರೆ ಉಮಾ ಅವರ ಕೃತಿ ರಜನಿಯವರ ಸೃಜನಶೀಲ ಪ್ರತಿಭೆಯ ಹಲವು ಆಯಾಮಗಳನ್ನು ತೆರೆದಿಡುತ್ತದೆ.

‘ನನ್ನ ಅಜ್ಜಿಯ ಜಗತ್ತು’ ಕೃತಿಯಲ್ಲಿ ಅಜ್ಜಿಯ ಜೀವನವನ್ನು ಉತ್ತರೋತ್ತರವಾಗಿ ದಾಖಲಿಸಿದ ರಜನಿಯವರ ಮನಸ್ಸಿನಲ್ಲಾದ ಬೆರಗಿನ ಭಾವವೇ `ಅವಲೋಕನ’ ಮಾಡಿದ ಉಮಾ ಅವರಿಗೂ ಉಂಟಾಗಿದೆ ಎನ್ನುವುದು ನನ್ನ ಭಾವನೆ. ಕೊಡಗಿನ ಪರಿಸರದಲ್ಲಿ ಬೆಳೆದ ರಜನಿಯವರಿಗೆ ಇರುವ ಅನುಭವ ಅವರ ಜೀವನದ ಒಂದು ಭಾಗ. ಅಲ್ಲಿ ದಟ್ಟವಾಗಿ ಮೇಳೈಸಿರುವ ಪ್ರಕೃತಿಯ ಒಡನಾಟ ಮನೆ, ಕೃಷಿ ಚಟುವಟಿಕೆಗಳು, ಪಶುಪಾಲನೆ, ಹಪ್ಪಳ, ಸಂಡಿಗೆಗಳ ಮೇಳ, ಇಂಧನ, ಜಲ ಮೂಲಗಳು, ಜೀವನದ ಸಂಘರ್ಷಗಳು ಇವುಗಳೊಟನೆ ಗಾಢವಾದ ತನ್ಮಯತೆ ರಜನಿಯವರ ಬರಹದಲ್ಲಿ ಅವಿನಾಭಾವವಾಗಿ ಒಡಮೂಡಿದೆ ಎಂದು ಅಂತಹದೇ ಪರಿಸರದಲ್ಲಿ ಬೆಳೆದ ಉಮಾ ಈ ಎಲ್ಲಾ ಸಂಗತಿಗಳನ್ನು ಆಧುನಿಕ ಜಗತ್ತಿನ ಅನಿವಾರ್ಯ ಬದಲಾವಣೆಗಳೊಂದಿಗೆ ವಿಶ್ಲೇಷಿಸಿರುವರು. ಇಂದಿನ ಯಾಂತ್ರಿಕ ಯುಗದಲ್ಲಿ ಬದಲಾದ ಕಾಲಮಾನದಲ್ಲಿ ನಮಗಿರುವ ಆಯ್ಕೆಗಳಾದರೂ ಯಾವುವು? ಮಹಿಳೆಯ ಜೀವನದಲ್ಲಿ ಹಿಂದಿಗಿಂತಲು ಈಗ ದೈಹಿಕ ಕಷ್ಟಗಳಿಲ್ಲದ ಬದುಕು, ಆಧುನಿಕ ಶಿಕ್ಷಣದ ಪ್ರಭಾವ ಪ್ರಶ್ನಾತೀತವಾಗಿ ಯಾವುದನ್ನೂ ಒಪ್ಪದಿರುವುದು ಇವು ರಜನಿಯವರ ಬರಹದಲ್ಲಿಯೇ ಹಲವು ಭಾಗಗಳಲ್ಲಿ ವ್ಯಕ್ತವಾಗಿರುವುದು ಕಾಣುತ್ತದೆ.

ಚೀಫ್ ಸಿಯಾಟಲ್ ಗವರ್ನರ್ ಸ್ಟಿವನ್ಸ್ನಿಗೆ ಬರೆದ ಪತ್ರದಲ್ಲಿರುವ ಪರಿಸರ ಕಾಳಜಿ, ನಮ್ಮ ನಿಮ್ಮೆಲ್ಲರ ಹೊಣೆಯು ಆಗುತ್ತಲ್ಲವೇ ಎನ್ನುವ ಪ್ರಶ್ನೆಯನ್ನು ಉಮಾ ಗಾಢವಾಗಿ ಹಾಕಿದ್ದಾರೆ. ಭಾರತದಲ್ಲಿ ಇದಕ್ಕಿಂತ ವಿಭಿನ್ನ ನಾಶ ನಡೆದಿಲ್ಲ! ನಾಗೇಶ ಹೆಗಡೆಯವರ ‘ಇರುವುದೊಂದೆ ಭೂಮಿ’ ಕೃತಿಯನ್ನು ನೆನಪಿಸಿಕೊಳ್ಳಬಹುದು. ಉಮಾರವರು `ಅವಲೋಕನ’ದ ಜೊತೆಜೊತೆಯಲ್ಲಿ ಹಿರಿಯ ವಿಮರ್ಶಕರಾದ ಡಾ. ಎಲ್. ಎಸ್ ಶೇಷಗಿರಿ ರಾಯರು, ರಾಘವೇಂದ್ರ ಪಾಟೀಲರು, ಕೆ. ಸತ್ಯನಾರಾಯಣ, ವಿಜಯ ಶಂಕರ ಮುಂತಾದವರ ಆಪ್ ತಅವಲೋಕನದ ಪರಿಚಯವೂ ಈ ಕೃತಿಯಲ್ಲಿ ಅಡಕವಾಗಿರುವುದು ಈ ಕೃತಿಯ ವಿಶೇಷ.

ರಜನಿಯವರು ಚಿತ್ರಿಸಿದ ವ್ಯಕ್ತಿ ಚಿತ್ರಗಳು – ಕಲಾಯಿ ಸಾಬ, ದನಗಾಹಿ ದೊಡ್ಡ, ದೋಸೆ ವೆಂಕಮ್ಮ, ಹೂವಿನಜ್ಜಿ, ಅಕಳಂಕಮ್ಮ (ಹೆಸರಿನಲ್ಲಿರುವ ಧ್ವನಿಯನ್ನು ಗಮನಿಸಿ) ಈ ಪಾತ್ರ ಚಿತ್ರಣಗಳು ಅವರ ಜೀವನದ ಸಂಘರ್ಷಗಳು ಗಾಢವಾಗಿ ತಟ್ಟುತ್ತವೆ. ನಾವು ಓದಿದ ಮಲೆನಾಡ ಚಿತ್ರಗಳು, ನಮ್ಮ ಊರಿನ ರಸಿಕರು, ಹಳ್ಳಿಯ ಹತ್ತು ಸಮಸ್ತರ ಕೃತಿಗಳ ನೆನಪನ್ನು ತರುತ್ತದೆ. ಹಾಸ್ಯಲೇಪಿತ, ಅನುಕಂಪಿತ ಪಾತ್ರಗಳಾಗಿ  ಅವು ನಮ್ಮ ಮನಸ್ಸಿನಲ್ಲಿ ನಿಲ್ಲುತ್ತವೆ.

ಉಮಾ ಅವರ ಇಂಗ್ಲಿಷ್ ಮತ್ತು ಕನ್ನಡ ಓದು ವ್ಯಾಪಕವಾಗಿರುವುದು ರಜನಿ ಅವರ ಕೃತಿಗಳ ವಿವರಗಳನ್ನು ನೀಡುವಲ್ಲಿ ಎದ್ದುಕಾಣುತ್ತದೆ. ಡೈಲಾನ್ ಥಾಮಸ್, ಎಲಿಯಟ್, ಗ್ಯಾವಿನ್ ಬೋಸ್ ಮುಂತಾದವರು ಸಾಹಿತ್ಯ ಪ್ರಜ್ಞೆಯ ಒಳನೋಟಗಳನ್ನು ದಾಖಲಿಸುತ್ತಾರೆ. ಮನುಷ್ಯನ ಭಾವನೆಗಳು – ಎಲ್ಲಾ ಸಂದರ್ಭಗಳಲ್ಲೂ ಸಾಹಿತ್ಯದಲ್ಲಿ ಮೇಲುಗೈ ಆಗಿರುವುದನ್ನು ರಜನಿಯವರ ಸಾಹಿತ್ಯವನ್ನು ವಿಶ್ಲೇಷಿಸುವುದರ ಮೂಲಕ ಸಮರ್ಥಿಸುತ್ತಾರೆ. ರಜನಿಯವರ ಮತ್ತೊಂದು ಕೃತಿ  ‘ಆತ್ಮ ವೃತ್ತಾಂತ’ದ ಆಂತರಿಕ ವಸ್ತು ಹೆಚ್ಚು ಗಾಢವಾದದ್ದು, ಈ ಕಾದಂಬರಿಯನ್ನು ನಿರೂಪಿಸಲು ಆಯ್ಕೆ ಮಾಡಿದ ಶೈಲಿಯೂ ಗಮನ ಸೆಳೆಯುವಂತದ್ದು.

ಉಮಾರವರು ಹೇಳುವಂತೆ ‘ಎರಡೆರಡು ಆತ್ಮಕಥೆಗಳನ್ನು ಅನಾವರಣಗೊಳಿಸುವ, ಸಮಾಜದ ಅಂಚಿಗೆ ತಳ್ಳಲ್ಪಟ್ಟ ಎರಡೆರಡು ಗುಂಪಿನ ಪ್ರತಿನಿಧಿಗಳ ಅನುಭವಗಳನ್ನು ಒಟ್ಟೊಟ್ಟಿಗೇ ಹೇಳುವ ನಿರ್ದಿಷ್ಟ ಗುರಿಯನಿಟ್ಟುಕೊಂಡು ರಚನೆಯಾದ ಕಥನವಿದು. ಒಂದು ಲಿಯೋ ಎಂಬ ಸಾಕು ನಾಯಿಯದು ಮತ್ತೊಂದು ಲಿಯೋನ ಗ್ರಹಿಕೆಯ ಮೂಲಕವೇ ನಿರೂಪಿಸಲ್ಪಡುವ ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣಿನ ಸ್ಥಾನವನ್ನು  ನಿರ್ಧರಿಸುವ ತನ್ನ ಒಡತಿಯದು. ಈ ಸಮೀಕರಣವು ಇಡೀ ವೃತ್ತಾಂತದ ಸಾರಭೂತವಾಗಿ ಉಮಾರವರ ಲೇಖನಿಯಿಂದ ಒಡಮೂಡಿದೆ. ರಜನಿಯವರ ಕೃತಿಯಲ್ಲಿ ಪ್ರಾಣಿ ಜಗತ್ತಿನ ಸಂವೇದನೆಯು, ಮನುಷ್ಯನ ಕಲ್ಪನೆಯ ಭಾಗವಾಗಿದ್ದರೂ, ಸಹ ಲಿಯೋ, ಗ್ರೇನಿ, ರೂಬಿ ಬಹಾದ್ದೂರ ಮುಂತಾದ ನಾಯಿಗಳ ಜಗತ್ತು. ಮನುಷ್ಯರ ಜಗತ್ತಿನಂತೆಯೇ ವಿಸ್ತೃತವಾದ ಅನುಭವಗಳಿಂದ ದಟ್ಟವಾಗಿದೆ.

ಡಾ. ರಹಮತ್ ತರೀಕೆರೆಯವರು ಹೇಳಿರುವಂತೆ ‘ನಾಯ್ನೋಟದ ಮೂಲಕ ಮನುಷ್ಯನ ಹಿಪಾಕ್ರಸಿ, ಸಣ್ಣತನ, ಮುಗ್ಧತೆ, ಸಾಂಪ್ರದಾಯಿಕತೆ, ಇಬ್ಬಂದಿತನ, ಬದಲಾಗುವಿಕೆ, ಉದಾರತೆಗಳನ್ನು ಇಲ್ಲಿನ ಕಥನ ಅನಾವರಣ ಮಾಡುತ್ತದೆ’. ಅನೇಕ ಘಟ್ಟಗಳಲ್ಲಿ ಪ್ರಾಣಿಗಳ ಪ್ರಾಜ್ಞತೆ, ಸ್ಥಿತ ಪ್ರಜ್ಞತೆಗಳು ಮನುಷ್ಯರ ಭಾವಗಳನ್ನು ಮೀರಿವೆ. ಇದಕ್ಕೆ ಪೂರಕವಾಗಿ ಉಮಾ ವಿಕಾಸವಾದದಲ್ಲಿ ವಿಶೇಷವಾಗಿ ನಾಯಿಗಳ ಕಣ್ಣುಗಳಲ್ಲಾದ ಮಾರ್ಪಟನ್ನು ಸಂದೇಹಗಳಿದ್ದರೂ ಸಮುಚಿತವಾಗಿ ಉಲ್ಲೇಖಸಿತ್ತಾರೆ.

ಪುರುಷ ಪ್ರಧಾನ ಸಮಾಜ ವ್ಯವಸ್ಥೆಯಲ್ಲಿ ಹೆಣ್ಣಿನ ಸಂವೇದನೆ, ನೋವು, ತುಡಿತ, ಹತಾಶೆ, ದ್ವಂದ್ವ ಇವೆಲ್ಲವೂ ಪ್ರತಿರೋಧವನ್ನು  ತೋರಿಸುತ್ತಲೇ ಒಪ್ಪಿಕೊಳ್ಳುವ ಪ್ರವೃತ್ತಿಯ ನಿರೂಪಣೆಯ ಮಟ್ಟದಲ್ಲಿಯೇ ಹಲವು ಕಡೆ ಉಳಿದುಬಿಡುತ್ತವೆ. ಆದರೆ ಪ್ರಾಣಿದಯಾ ಸಂಘಗಳಲ್ಲಿ ನಡೆಯುವ ಅವ್ಯವಹಾರಗಳು ಗ್ರೇಸಿಯನ್ನು ಪ್ರಾಣಿಗಳ ಆಶ್ರಯತಾಣದಲ್ಲಿ ಬಿಡಬಾಕಾದ ಪ್ರಸಂಗದಲ್ಲಿ ಬರುವ ದುಃಸ್ಥಿತಿ ಅಸಹಾಯಕತೆ ಪಾಪಪ್ರಜ್ಞೆಗಳ ಅನಾವರಣ ಹೆಚ್ಚು ತೀವ್ರವಾಗಿದೆ. ಹಿಂದಿನ ತಲೆಮಾರಿನ ಯೋಚನಾ ಸರಣಿಯನ್ನು ಎದುರಿಸಿ ಹೇಳುವ ‘ಈ ಜಗತ್ತಿನಲ್ಲಿ ನಾವು ಗಂಡಸರು ಹೇಳಿದಹಾಗೆ ಕೇಳಿಕೊಂಡು ಇರುವ ಅನುಯಾಯಿಗಳು. ನಾವು ನಾಯಿಗಳ ಹಾಗೆ ನಿಯತ್ತಿನ ಪ್ರಾಣಿಗಳು’ ಎಂಬೆಲ್ಲಾ ಆಕ್ರೋಶ ವಾಚ್ಯವಾಗಿದೆ.

ಪೂರಕವಾಗಿ ಉಮಾರವರು ತಮ್ಮ ಅವಲೋಕನದ ಭಾಗವಾಗಿ `ಮನುಷ್ಯನ ಮೂಲಕ ನಾಯಿಯ ಜಗತ್ತು ನಾಯಿಯ ಪ್ರಜ್ಞೆಯ ಮೂಲಕ ಮನುಷ್ಯ ಜಗತ್ತು ಎರಡೂ ಒಟ್ಟಿಗೆ ಇಷ್ಟೊಂದು ವೈವಿಧ್ಯತೆಗಳಿಂದ ಅನಾವರಣಗೊಳ್ಳುವ ಸನ್ನಿವೇಶವನ್ನು ಸೃಷ್ಟಿಸಿ ಒಟ್ಟಾರೆ ಒಂದು ಅನೂಹ್ಯ ಜಗತ್ತನ್ನೆ ನಮ್ಮ ಮುಂದೆ ತೆರೆದಿಡುವ ಈ ಪುಸ್ತಕವು ಒಂದು ಅಪರೂಪದ ಕೃತಿ. ‘ಆತ್ಮ ವೃತ್ತಾಂತ’ ಕಾದಂಬರಿಯ ಶುರುವಿನಲ್ಲಿಯೇ ಸ್ತಿ ಸಂವೇಧನೆಯಿಂದ ಉಂಟಾದ ಬರವಣಿಗೆಯ ಹಲವು ಕುರುಹುಗಳು ಕಾಣುತ್ತವೆ’ ಎಂಬ ಭಾಷ್ಯವನ್ನೆ ಬರೆಯುತ್ತಾರೆ.

ಉಮಾರವರು ಪಾಶ್ಚಾತ್ಯ ಮತ್ತು ಭಾರತೀಯ ಕವಿಗಳ ವ್ಯಾಪಕವಾದ ಬರಹಗಳನ್ನು ಸೋದಾಹರಣವಾಗಿ ಕೃತಿಯುದ್ದಕ್ಕೂ ಉದ್ದರಿಸುತ್ತಾರೆ. ಆ ಸಾಹಿತ್ಯದಲ್ಲಿ ಬರುವ ಹೆಣ್ಣಿನ ಅನಾಥಪ್ರಜ್ಞೆಯ ನಿಸ್ಸಹಾಯಕ ತೀವ್ರತೆಗಳು, ಉತ್ಕಟತೆಗಳು ರಜನಿಯವರ ಕೃತಿಯಲ್ಲಿದೆಯೇ? ತಮಿಳು ಕೂಲಿಕಾರನ ಪತ್ನಿಯ ತಲ್ಲಣಗಳು, `ಓ ದೇವರೆ ಈ ರಾತ್ರಿ ಮುಗಿಯದಿರಲಿ ಗ್ರೇಸಿಯ ಆರ್ತತೆ (ಬಾಲ್ಯದ ಕಹಿ ನೆನಪುಗಳನ್ನು ಹೊರತು ಪಡಿಸಿ) ಲೀಯೋನ ಒಡತಿಗಿತ್ತೇ?’ ಎಂಬುದನ್ನು ಅವರು ಎಲ್ಲಿಯೂ ವಿಮರ್ಶೆಯ ನೆಲಗಟ್ಟಿನಲ್ಲಿ ಹೇಳಿಲ್ಲ. ಈ ಎಲ್ಲಾ ವಿಚಾರಗಳ ಹೊರತಾಗಿಯೂ ಒಂದು ಉತ್ತಮ ಕಾದಂಬರಿಗೆ ಬೇಕಾದ ಆಪ್ತವಾದ ಶೈಲಿ, ಪ್ರಾಣಿಗಳ ಜೈವಿಕ  ಮನೋಭಾವಗಳನ್ನು ತೀವ್ರವಾಗಿ ನೋಡುವ ಮನೋಧರ್ಮ, ಅನುಭವಗಳ ತೀವ್ರತೆಯಿಂದ ರಜನಿಯವರ ‘ಆತ್ಮ ವೃತ್ತಾಂತ’ ನಮ್ಮ ಮೇಲೆ ಗಾಡವಾದ  ಪರಿಣಾಮವನ್ನು ಬೀರುತ್ತದೆ.  ಇಂತಹ ಕೃತಿಯನ್ನು ವ್ಯಾಪಕವಾಗಿ ಪರಿಚಯಿಸಿದ ಸಂಪೂರ್ಣ ಯಶಸ್ಸು ಉಮಾರವರಿಗೆ ಸಲ್ಲುತ್ತದೆ.

ಉಮಾರವರ ಭಾಷೆ ಬಹಳ ಶಿಷ್ಟವಾಗಿದ್ದರೂ ಆಕರ್ಷಕವಾಗಿದೆ ಮಾತ್ರವಲ್ಲ; ಅವಲೋಕನಕ್ಕೆ ಹೇಳಿಮಾಡಿಸಿದಂತಿದೆ.  ಅವರ ಓದಿನ ಕನ್ನಡ ಗ್ರಂಥಗಳ ವಿವರ, ವಿಮರ್ಶಕರ ಪ್ರಭಾವ ಅಪರೂಪದ ಶೈಲಿಯನ್ನು ರೂಡಿಸಿಕೊಳ್ಳಲು ಸಹಾಯಮಾಡಿದೆ. ಇಂಗ್ಲಿಷ್ ಸಾಹಿತ್ಯದ ವ್ಯಾಪಕವಾದ ಅಧ್ಯಯನ ಅವರನ್ನು ಒಳ್ಳೆಯ ಬರಹಗಾರ್ತಿಯಾಗಿ ರೂಪಿಸಿದೆ. ಅವರ ಮೊದಲ ಈ ಪ್ರಯತ್ನ ಕನ್ನಡ ಸಾಹಿತ್ಯ ಜಗತ್ತನ್ನು ಇನ್ನಷ್ಟು ವಿಸ್ತರಿಸಲು ಸಹಾಯಕವಾಗಲೆಂಬುದು ಸದಾಶಯ.

‍ಲೇಖಕರು avadhi

February 13, 2024

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

‘ಜಾಲಂದರ’ ನೀಡುವ ಸಾಹಿತ್ಯ ಸಿಂಚನ..

‘ಜಾಲಂದರ’ ನೀಡುವ ಸಾಹಿತ್ಯ ಸಿಂಚನ..

ಆರ್ ಎಸ್ ಹಬ್ಬು ** ಕಲಾ ಭಾಗ್ವತ್ ಅವರ ಕೃತಿ 'ಜಾಲಂದರ'. ಈ ಕೃತಿಯನ್ನು ಬೆಂಗಳೂರಿನ 'ಸ್ನೇಹಾ ಎಂಟರ್ ಪ್ರೈಸಸ್' ಪ್ರಕಟಿಸಿದ್ದಾರೆ. ಹಿರಿಯ...

ನವಮಾಧ್ಯಮದ ಹೊಸ ಶೋಧಗಳ ಅನಾವರಣ

ನವಮಾಧ್ಯಮದ ಹೊಸ ಶೋಧಗಳ ಅನಾವರಣ

ಬಿ.ಎ. ವಿವೇಕ ರೈ ** ಮಾಧ್ಯಮ ತಜ್ಞರಾದ ಪ್ರೊ. ಎ.ಎಸ್. ಬಾಲಸುಬ್ರಹ್ಮಣ್ಯ ಅವರ ಹೊಸ ಕೃತಿ 'ಪತ್ರಿಕೋದ್ಯಮದ ಪಲ್ಲಟಗಳು'. 'ಬಹುರೂಪಿ' ಈ...

ಒಂದು ವೃತ್ತಿ ಪಯಣ..

ಒಂದು ವೃತ್ತಿ ಪಯಣ..

ಮಧು ವೈ ಎನ್ ** ಹಿರಿಯ ಪತ್ರಕರ್ತ ಪದ್ಮರಾಜ ದಂಡಾವತಿ ಅವರ ಕೃತಿ 'ಉಳಿದಾವ ನೆನಪು'. 'ಅಂಕಿತ ಪುಸ್ತಕ' ಈ ಕೃತಿಯನ್ನು ಪ್ರಕಟಿಸಿದೆ. ಮಧು ವೈ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This