ರಂಜಿನಿ ಪ್ರಭು ಹೊಸ ಕಾಡುವ ಕವಿತೆ

ರಂಜಿನಿ ಪ್ರಭು

1.

ಕವಿತೆ—ಬಂದಳಿಕೆ
ಒಂದಿರುಳು ಕಳೆದು
ಬೆಳಗಾಗುವನಿತರಲ್ಲಿ
ಕಿಲಕಿಲ ನಗುವ
ಅರಮನೆ
ಯಾರು ತಾನೇ ಮಲಗಿದ್ದಾರೆ
ಅಯೋದ್ಯೆಯ ಅರಮನೆಯಲ್ಲಿ
ಕಳೆದಿರುಳು?
ಅದೇನು ಸಣ್ಣ ವಿಷಯವೇ
ರಘುರಾಮನಿಗೆ
ಪಟ್ಟಾಭಿಷೇಕ?
ಕೆಲವೇ ಜಾಮಗಳಲ್ಲಿ
ನಡೆಯಬೇಕಿದೆ ಸಿದ್ಧತೆ
ಇಳಿಯಬೇಕಿದೆ ಗಂಧರ್ವ
ಲೋಕವೇ ಧರೆಗೆ
ಗಡಿಬಿಡಿ..ಓಡಾಟ
ಹೂವು ಗಂಧ
ತೋರಣ

ಬಾಲ ಅರುಣ
ಮುಗಿಲ ಮೆತ್ತೆಯ
ಮೇಲೆ ಇನ್ನೂ
ಬಲ ಮಗ್ಗುಲಿಗೆ
ತಿರುಗಿದ್ದಾನೆ ಅಷ್ಟೇ
ರೆಪ್ಪೆ ಅಂಚಲ್ಲಿ
ಕನಸು
ತೂಗುತಿದೆ ಇನ್ನೂ…
ಮಲಗೇ ಇಲ್ಲದ
ಜನ ಎದ್ದಿದ್ದಾರೆ

ಜಾನಕಿಯ ಅಂತಃಪುರದಲ್ಲಿ
ಇದ್ದಾರೆ ಓರಗಿತ್ತಿಯರು
ಮಣ್ಣಿನ ಮಗಳೋ
ಕಡುಚೆಲುವೆ
ಆದರೆ..ಅಲಂಕಾರ ನಿಪುಣೆಯಲ್ಲ
ಶ್ರುತಕೀರ್ತಿ ಸೀತೆಯ
ಕಂಗಳಿಗೆ
ಕಪ್ಪು ಬರೆದು
ತಿಲಕ ತಿದ್ದುತ್ತಿದ್ದಾಳೆ
ಮಾಂಡವಿ ಹರವಾದ
ಅವಳ ಕೂದಲಿಗೆ
ಆಭರಣ ಇಡುತ್ತಿದ್ದಾಳೆ
ಕತ್ತಲ ಆಗಸಕ್ಕೆ
ನಕ್ಷತ್ರ ಜೋಡಿಸುವಂತೆ
ಊರ್ಮಿಳೆ
ಏನೋ ಗುಟ್ಟು ಹೇಳುತ್ತಾ
ಪಟ್ಟೆಪೀತಾಂಬರವ
ಸೀತೆಯ ಚೆಲುನಡುವಿಗೆ
ಸುತ್ತಿ
ನಿರಿಗೆಯ ಲಾಸ್ಯವ
ತೀಡುತ್ತಿದ್ದಾಳೆ..
ಬಂತು ಸಂದೇಶ….
ಜನಕ ಕುವರಿ
ಪಟ್ಟೆಸೀರೆ
ಉಡಬೇಕಿಲ್ಲ..
ಅರೇ ಏಕೆ? ಏಕೆ?
ಏನು ಕಾರಣ?
ಯಾರುಕಾರಣ?
ತಲ್ಲಣದ ಗುಸು ಗುಸು..

ಕೈಕಯಿಯಂತೆ
ಕೈಕಯಿಯಂತೆ
ರಾಮನ ಪಟ್ಟ ತಡೆದವಳು
ಕೈಕಯಿಯಂತೆ!!!
ರಾಮನಿಗೆ ಕೌಸಲ್ಯೆಗಿಂತ
ಹೆಚ್ಚು ಲಾಲಿ ಹಾಡಿದವಳು

ಕೈಕಯಿ…?
ಕೌಶಿಕನ ಜೊತೆ
ರಾಮ ಹೊರಟಾಗ
ಒದ್ದೆ ಕಣ್ಣಂಚಲಿ
ಅವನ ಬರುವ
ಕಾದವಳು

ಕೈಕಯಿ ದಶರಥನ
ಬಳಿ ವರ
ಬೇಡಿದಳಂತೆ..
ರಾಮನ
ವನವಾಸ
ಕೋರಿದಳಂತೆ..
ಕೈಕಯಿಯಂತೆ
ಕೈಕಯಿಯಂತೆ

ಮುರಿದು ಬಿತ್ತು
ಧರಣಿಸುತೆಯ
ಪಟ್ಟಾಭಿಷೇಕದ
ಕನಸು….
ಊರ್ಮಿಳೆಗೋ
ದಾಂಪತ್ಯವೇ
ಕನಸಾಗಿ ಹೋಯಿತು

2.

ಕಯಾದುವಿಗೆ
ಮತ್ತೊಮ್ಮೆ
ಸತ್ವ ಪರೀಕ್ಷೆ
ಒಂದೊಂದೇ ಸಂಕಟಗಳನ್ನು
ಪರಿಹರಿಸಿಕೊಂಡಂತೆಲ್ಲಾ
ಧುತ್ತೆಂದು ಮತ್ತೊಂದು
ಹಾಜರು

ಈ ಅರಮನೆಯಲ್ಲೇನಿಲ್ಲ??
ಶೂರಾಧಿಶೂರ ರಾಜ
ಗಂಡ ಹಿರಣ್ಯಕಶಿಪು
ಮಕ್ಕಳು
ಸದಾ ಅಮ್ಮಾ ಅಮ್ಮಾ
ಎಂದು ತನ್ನ ಸುತ್ತಲೇ
ಸುತ್ತುವ ಬಣ್ಣದ ಬುಗುರಿ
ಪ್ರಹ್ಲಾದ
ಅವನ ಮುಖ ನಗು
ಮಾತು ಎಲ್ಲ ಆಯಸ್ಕಾಂತ
ಅವನಿಗಿಂದು
ವಿಷವುಣಿಸುವುದಂತೆ
ಗೆಲ್ಲುತ್ತಾನೆ ತನ್ನ
ಕಂದ
ಗೊತ್ತು ಕಯಾದುವಿಗೆ
ಅಗ್ನಿದಿವ್ಯಗಳನ್ನು
ದಾಟಿದವನು
ಆದರೆ ತಾಯಿಕರುಳು
ಪಂಜರದೊಳಗಿನ
ಹಕ್ಕಿಯ ರೆಕ್ಕೆ ಬಡಿತ
ಹಿರಣ್ಯ ಕಶಿಪುವಿಗೆ
ಮೋಹ ಕಯಾದು ಎಂದರೆ
ಅವಳ ಒಡಲ ಕುಡಿ ಎಂದರೂ
ಪ್ರೀತಿ..ತಂದೆ ತಾನೇ
ರಾಜನ ಸಿಟ್ಟೆಲ್ಲಾ
ತನ್ನ ಸೋದರನನ್ನು
ಕೊಂದ
ವಿಷ್ಣುವಿನ ಮೇಲೆ
ಸಹಿಸಲಾರ ಹರಿನಾಮ
ಈ ಪ್ರಹ್ಲಾದನೋ
ಕೂತರೆ ನಿಂತರೆ
ನಡೆದರೆ ಹರಿ ಹರಿ ಹರಿ
ಮಲಗಿದಾಗ
ಉಸಿರಾಟದ
ಸದ್ದೂ ಹರಿ
ಏನು ಮಾಡುತ್ತಾಳೆ
ಕಯಾದು
ವಿಷ ಊಡುತ್ತಿರುವವ
ಬೇರಾರೂ ಅಲ್ಲ
ಲಾಲಿ ಹಾಡಿದ
ತಂದೆ
ಶಿಕ್ಷಿಸುತ್ತಿರುವವನು
ಬೇರಾರೂ ಅಲ್ಲ
ರಾಜ್ಯ ಕಾಯುವ ದೊರೆ
ಯಾರಿಗೆ ನೀಡುತ್ತಾಳೆ ದೂರು
ಯಾರಲ್ಲಿ ಇಡುತ್ತಾಳೆ ಮೊರೆ??

3.

ಕಾಲ ಕೆಳಗಿನ ನೆಲ
ಕುಸಿಯುತಿದೆ
ರಥದ ಗಾಲಿ ಕೆಸರಲ್ಲಿ
ಹೂತಿದೆ
ಕಲಿತ ವಿದ್ಯೆಗಳೆಲ್ಲಾ
ಶಾಪಕ್ಕೆ ಮರೆಯುತಿವೆ
ಕೊನೆಗಳಿಗೆಗಳು ಇವು
ಬದುಕ ರಥ ನಿಲ್ಲಲಿದೆ

ತಲೆಯ ಒಳಗೊಂದು
ಭೂಚಕ್ರ
ನೆನಪುಗಳು
ರಾಧೆ ಅತಿರಥರದು
ಬೆಸ್ತರ ಪಾಳ್ಯ
ಬಾಲ್ಯ
ಕೌರವನ ಸ್ನೇಹ
ಪಾಂಡವರ ದ್ವೇಷ
ಪಗಡೆಯಾಟ..
ಪಾಂಡವರ ಸೋಲು
ಕುರುಕ್ಷೇತ್ರಕ್ಕೆ
ಕೆಲದಿನಗಳ ಮೊದಲು
ಭೇಟಿಯಾದ
ಕೃಷ್ಣ
ನಂತರ ಕುಂತಿ
ಹುಟ್ಟಿದ ಹಸಿಕಂದನನ್ನು
ತೇಲಿಬಿಟ್ಟವಳಿಗೆ
ಈಗ ಎಲ್ಲಿಂದ
ಬಂತು??
ಪುತ್ರವ್ಯಾಮೋಹ.
ಅಮ್ಮಾ ಏಕೆ ಹೀಗೆ
ಮಾಡಿದೆ
ನಿನ್ನ ಹರೆಯದ ಕುತೂಹಲಕ್ಕೆ
ನನ್ನ ಬದುಕನ್ನೇಕೆ
ನೀರು ಪಾಲು ಮಾಡಿದೆ?
ಅನಂತರದ ಇರುಳುಗಳಲ್ಲಿ
ಹೇಗೆ ನಿದ್ರಿಸಿದೆ ತಾಯೇ
ಯುದ್ಧಕ್ಕೆ ಮೊದಲೇಕೆ
ಭೇಟಿಯಾದೆ?
ನಾನೇನೋ ಕೊಟ್ಟಮಾತನು
ಉಳಿಸಿಕೊಂಡೆನಮ್ಮಾ..
ನನ್ನ ಬದುಕಿನ ಸುತ್ತ
ಬೇಲಿ ಬಿಗಿದೆ..
ನನ್ನ ತಮ್ಮನೇ
ನನಗೆ ಬಾಣ
ಹೂಡಿದ..
ಅಮ್ಮಾ. ಈ ಕರ್ಣ
ಹಲವು ಬಾರಿ ಸತ್ತಿದ್ದಾನೆ
ಈಗ ಉಸಿರು ನಿಲ್ಲುತಿದೆ ಅಷ್ಟೇ..

4.

ಚೆಂದದ ಒಂದುಮರ
ಎದುರೇ ಕಾಣುತಿತ್ತು
ನಳನಳಿಸಿ
ಹೂಹಣ್ಣುಗಳ
ಕೂಡಾ..
ಕೆಲ ದಿನಗಳ
ಮುಂಚೆ
ಹಬ್ಬಿತೊಂದು ಬಳ್ಳಿ
ಅದಕೆ..
ಮಾಮರಕ್ಕೆ ಹಬ್ಬಿದ
ಮಲ್ಲಿಗೆಯಲ್ಲ
ಅಡಿಕೆಗೆ ಹಬ್ಬಿದ
ವೀಳೆಯವಲ್ಲ
ಯಾವುದೋ
ಬಂದಳಿಕೆ
ನಿಧಾನ…ಹಬ್ಬಿ
ಮರದ ರಸವನ್ನೇ ಹೀರಿ

ತಾನು ಕೊಬ್ಬಿತು
ಹಸನಾದ
ಬದುಕು
ಹದತಪ್ಪುವುದು
ಬದುಕಿಗೇ
ಅಂಟಿಕೊಂಡ
ಬಂದಳಿಕೆಯಿಂದ…

‍ಲೇಖಕರು Admin

December 4, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: