ರಂಜನಿ ಪ್ರಭು
—-
ಲಂಡನ್ನಿನ ಚಳಿಗಾಲದಲ್ಲಿ
ಮೂರೂವರೆ ಮಧ್ಯಾಹ್ನ
ನಿಧಾನ ಇಳಿಯತೊಡಗುವ ಕತ್ತಲ ಪರದೆ
ಯಾರಿಗ್ಯಾರೂ ಕಾಣದಂತೆ ದೀಪಹಚ್ಚದೆ..
ಷೇಕ್ಸಪಿಯರ್ ನ
ದೇಶದಲಿ ಪರದೆ ಇಳಿದಮೇಲೂ ನಾಟಕ ನಡೆಯಲೇ ಬೇಕು
ಹಗಲಿನಲ್ಲೂ ಎದುರಾಗುವ ಮುಖಗಳು ಕಡಿಮೆಯೇ
ಅಥವಾ ಇಲ್ಲವೇ ಇಲ್ಲ
ನಮ್ಮ ರೂಪಾಯಿಯಲ್ಲಿ
ಮಧ್ಯಮವರ್ಗದ ನಮ್ಮದೂ ರಾಯಲ್ ಬದುಕೇ…
ನೂರಕ್ಕೊಂದು ಪೌಂಡಾಗುವ ಇಲ್ಲಿ
ಲೆಕ್ಕಾಚಾರದ ಬದುಕು..
ಕಡುನೀಲಿ ಆಗಸ ಮಧ್ಯಾಹ್ನದವರೆಗೂ
ಕಣ್ಣ ತುಂಬುವ ಉದುರಿದ
ಹೊನ್ನಿನ ಮೇಪಲ್ ಎಲೆಗಳು
ಥಣ್ಣನೆಯ ಗಾಳಿ
ಚೆಂದವೋ ಚೆಂದ
ಸ್ವಲ್ಪ ಕಾಲದವರೆಗೆ..
ಮೌನ ಮೌನ ಮೌನ
ಕೊರೆವ ಚಳಿಗಿಂತ ಒಳಗಿಳಿದು ಆತ್ಮವನ್ನೇ
ಕೊರೆಯುವಂತೆ…
ಕೊಂಚ ಬಿಸಿಲು ಕಂಡಿದೆಯೆಂದು ಭ್ರಮಿಸಿ
ಹೊರಹೋದರೆ
ಇದ್ದಕ್ಕಿದ್ದಂತೆ ಷವರ್ ಆಕಾಶದಿಂದ
ದೇಹಕ್ಕಿಂತ ಭಾರದ ಕೋಟು ಷರಾಯಿ ಧರಿಸಿ
ನಡೆವ ಉಬ್ಬಸ
ನಗುವ ಗೆಜ್ಜೆ
ಹೊಳೆವ ಕಾಲುಂಗುರವ ಧರಿಸಿ ಮೆರೆವ ಪಾದಗಳಿಗೆ
ಸಾಕ್ಸ್ ಷೂಗಳ ಬಂಧನ
ಮನಸಿಗೋ ಕೊರಗು, ಬಿಟ್ಟುಬಂದ ನೆಲಜಲ ಪ್ರೀತಿ ಅಭಿಮಾನಗಳದ್ದು
ಇಲ್ಲೂ ಇರುವ ಆತ್ಮೀಯರನ್ನು ಕಾಣಲಾಗದ ಮೈಲುಗಳಂತರ
ಮುದ್ದು ಮಗ ಸೊಸೆಯರು
ಬರುತ್ತಾರೆ ವಿಡಿಯೋ ಕಾಲ್ ಗೆ..
ದಕ್ಕುತ್ತಾರೆಯೇ
ತಬ್ಬುವ ತೋಳುಗಳಿಗೆ?
ಮಗಳ ಪ್ರೀತಿಯೇ ಭರವಸೆಯ ಬೆಳಕು
ಕನಸಲ್ಲಿ ಕಾಡುತ್ತವೆ
ನನ್ನ ಮನೆ
ಉಯ್ಯಾಲೆ
ದೀಪ ನಗುವ ದೇವರ ಗೂಡು..
ಗೆಳೆಯ ಗೆಳತಿಯರ ಮಾತು ನಗೆ
ಯಾವುದೋ ವೇದಿಕೆ
ಬೆಳಕು ಕವಿತೆ ಚಪ್ಪಾಳೆ
ಉಡುಪಿ ಹೋಟೆಲು
ಕೃಷ್ಣ ಬೇಕರಿ..
ನಡುರಾತ್ರಿ ಎಚ್ಚರಾದರೆ
ಮತ್ತೆ ನಿದ್ರೆ ಇಲ್ಲ..
ಮನಸು ಜರುಗುತಿದೆ
ಬಾಲ್ಯಕ್ಕೆ
ಇಡೀ ಬೀದಿಯ ಹತ್ತಿಪ್ಪತ್ತು ಮಕ್ಕಳು
I spy ಎಂದು ತಿಳಿಯದೇ
ಆಡುತ್ತಿದ್ದ ಐಸ್ ಪೈಸ್ ಆಟದ ನೆನಪಿಗೆ..
ಎಲ್ಲ ಮನೆಗಳ ಒಳಹೊರಗುಗಳು
ಮಕ್ಕಳಾಟಕ್ಕೆ ಖುಲ್ಲಂ ಖುಲ್ಲಾ..
ಬಚ್ಚಿಟ್ಟುಕೊಳ್ಳಲು
ಎಷ್ಟೊಂದು ಜಾಗಗಳು..
ಒಮ್ಮೊಮ್ಮೆ ಅವಿತು ನಿಂತ ಕತ್ತಲ ಸಂದಿಯಲಿ
ನಿಂತೇ ಇದ್ದರೂ ಯಾರೂ ಬಂದು ಹುಡುಕದೇ
ಎಲ್ಲೆಲ್ಲೊ ಅಡಗಿರುವ
ಗೆಳೆಯರ ಸದ್ದೂ ಅಡಗಿದಂತಾಗಿ
ಸಣ್ಣ ಭಯ..
ನಾನಿಲ್ಲದೆಯೂ ಅದೆಷ್ಟು ಬಾರಿ ಆಟ ಪುನರಾವರ್ತನೆ
ಆಗಿದೆಯೋ..
ಇಲ್ಲಿ..ಈಗ..ನನಗೆ
ಬಚ್ಚಿಟ್ಟುಕೊಂಡ ನಾನು
ಕತ್ತಲಲೇ ನಿಂತಂತೆ..
ಜಗದ ಆಟ ಮಾತ್ರ
ಮುಂದುವರಿದಂತೆ ಭಾಸ..
ಯಾರಾದರೂ ಬಂದು
ಹುಡುಕುವವರೆಗೂ.
0 ಪ್ರತಿಕ್ರಿಯೆಗಳು