ರಂಜನಿ ಪ್ರಭು
————————————
ಚಿನ್ನದ ಹರಿವಾಣದಲಿ
ಬೆಳ್ಳಿಬಟ್ಟಲನಿಟ್ಟು
ಬಟ್ಟಲಿನ ತುಂಬಾ
ಘಮಘಮಿಸುವ
ಕ್ಷೀರಾಮೃತವ ತಂದರೆ ತಾಯಿ, ಹಸಿವಿಲ್ಲವಮ್ಮಾ
ಎಂದು ಲಲ್ಲೆಗರೆವ ಗಿರಿಜೆ
ಬೂದಿಬಡುಕನಿಗಾಗಿ
ಒಂದೊಂದೇ ಎಲೆ ತಿಂದು ಅಪರ್ಣೆಯಾದುದು
ಅದ್ಯಾವ ಪ್ರೀತಿಯ ಮಾಯೆ…?

ತಪಕೆ ಕುಳಿತ ಯೋಗಿಯನ್ನು ಒಲಿಸಿಕೊಳ್ಳುವುದೇನು
ಸುಲಭವಿತ್ತೇ..
ಒಲಿದ..ಅಂತೂ ಕೊನೆಗೆ
ಅದೂ ಹೇಗೆ…?
ಗೌರೀ ಎಂದು ಕರೆದರೆ ಅವ ಜೇನು ಚಿಮ್ಮುವ ಹಾಗೆ
ದುರ್ಗಿಯಾದರೆ ಅವಳು
ಕೈ ಮುಗಿದು ಎದುರಲ್ಲಿ ಮಂಡಿಯೂರುವ ಹಾಗೆ
ಅವಳು ಕುಣಿದರೆ ಜೊತೆಗೆ ತಾನೂ ಕುಣಿಯುವ ಹಾಗೆ
ಜಗವ ಸುತ್ತಿ ಬರಲೆಂದು
ತವರಿಗೆ ಹೊರಟರೆ ಗೌರಿ
ಗಣೇಶನನು ಕಳಿಸಿ ಅವಳ ಜೊತೆ ಕುಶಲಕ್ಕೆ
ಕಂದ ಸ್ಕಂದನನು
ತಾನು ಸುಧಾರಿಸುವ ಹಾಗೆ..
ಶಿವನೊಳಗಿನ ಹೆಣ್ಣು
ಶಿವೆಯೊಳಗಣ ಗಂಡು
ಪೂರಕವಾಗಿ
ಅರ್ಧನಾರೀಶ್ವರರಾದ
ಹಾಗೆ….
ನಿಧಾನವಾಗಿ ದಾಂಪತ್ಯದಲ್ಲಿ ಶಿವ
ಅಮ್ಮನಾಗುತ್ತಾನೆ.
ನಲ್ಲಾ… ನೀನೂ ಹಾಗೇ
ಮನಸಾರ ಒಲಿದ ಮೇಲೆ
ಸರ್ವಾರ್ಪಣ ಸಮಭಾವ ಸಮಚಿತ್ತ
ಗೆಳೆಯ ಪ್ರಿಯನಾಗಿ
ಸಖನಾಗಿ ನಲ್ಲನಾಗಿ
ಒಮ್ಮೊಮ್ಮೆ ಮಗುವೂ ಆದೆ..
ಈಗ ಅಮ್ಮನಾಗಿರುವೆ
ಆಗುತ್ತಲೇ ಇರುವೆ
ಎಂದೋ ಇತ್ತು ಅಮ್ಮತನ ನಿನ್ನಲ್ಲಿ
ನಮ್ಮ ಮೊದಲ ಕಂದಮ್ಮ
ಜಗಕೆ ಕಣ್ತೆರೆದಾಗ
ನನ್ನೊಡನೆ ನೀನೂ
ಅಮ್ಮನಾದೆ..
ಎರಡನೆಬಾರಿ ತಾಯಿಯಾಗುವಾಗ
ನಾ ಕಳಕೊಂಡಿದ್ದೆ ಹೆತ್ತಮ್ಮನನ್ನು
ಅವಳಂತೆಯೇ ಕಾಳಜಿಯ ತೋರಿ
ಅಮ್ಮನಾದೆ

ನವುರಾಗಿ ನನ್ನತಲೆಗೂದಲ
ಸಿಕ್ಕು ಬಿಡಿಸುವಾಗ
ಅಡ್ಡಾದಿಡ್ಡಿ ಬೆಳೆದ ಕಾಲುಗುರುಗಳ ಜತನದಲಿ ಕತ್ತರಿಸುವಾಗ
ಅಮ್ಮನಾದೆ
ಅಡುಗೆ ಮಾಡಿ ಬುತ್ತಿಕಟ್ಟಿದಾಗ
ಕೈತುತ್ತು ಕೊಟ್ಟಾಗ
ಅಮ್ಮನಾದೆ
ಬಿದ್ದಾಗ ನಾನು ಎದೆಗಪ್ಪಿಕೊಂಡು
ಗೆದ್ದಾಗ ನಾನು
ಖುಷಿಯ ಕಣ್ಣಂಚಲ್ಲಿ
ಅಮ್ಮನಾದೆ
ಅದಕೆಂದೇ ಹೂವಿನ ಹಾಸಿಗೆಯಾಗಿದೆ ಬದುಕು
ಹೂವು ಬಾಡದ ಹಾಗೆ
ನೀ ಹಿಡಿವ ನೆರಳಿದೆ
ಹೊಂಗೆಮರದಡಿಯಲ್ಲಿ
ಮಾಧವನ ಕೊಳಲಿದೆ
ದಣಿದಾಗ ಒರಗಲಿಕೆ
ಈ ನಿನ್ನ ಹೆಗಲಿದೆ..
ಜಗದ ಮಾಯೆಯನೇ
ತೊಟ್ಟಿಲಲಿ ತೂಗುವ
ಜಗದೀಶ್ವರಿಗೂ ಬೇಕೊಂದು ಹೆಗಲು
ದಣಿದಾಗ ಒರಗಲು
ಎಲ್ಲ ಮರೆತು.
ಚೆನ್ನಾಗಿದೆ
ಪ್ರತಿಭಾ ನಂದಕುಮಾರ್