ರಂಗಶಂಕರದಲ್ಲಿ ‘ಕೋವಿಗೊಂದು ಕನ್ನಡಕ’

ಕೋವಿ ಹಿಡಿದು ತನ್ನ ಶತೃವನ್ನು ಮುಗಿಸಲು ಹೊರಟ ಮುದುಕನೊಬ್ಬನಿಗೆ ಕಣ್ಣಿನ ದೃಷ್ಟಿಯೇ ಸರಿಯಿಲ್ಲ. ಶತೃವನ್ನು ಮುಗಿಸಲು ದೃಷ್ಟಿ ಸರಿಯಾಗಬೇಕು, ಹಾಗಾಗಿ ಆತನಿಗೊಂದು ಕನ್ನಡಕ ಬೇಕು. ಮೊಮ್ಮಗನೊಂದಿಗೆ ಕಣ್ಣಿನ ವೈದ್ಯನ ಬಳಿ ಬರುವ ಮುದುಕ ತನ್ನ ದೃಷ್ಟಿ ಸರಿಪಡಿಸಿಕೊಂಡನೇ? ನಿಜಕ್ಕೂ ಆತನ ಸಮಸ್ಯೆ ಕನ್ನಡಕದ್ದೇ? ಕನ್ನಡಕ ಆತನಿಗೆ ಬೇಕಿತ್ತೇ, ಆತನ ಶತೃವನ್ನು ಮುಗಿಸಲು ಬೇಕಾದ ಕೋವಿಗೇ ಕನ್ನಡಕ ಬೇಕಿತ್ತೇ? ಇವೆಲ್ಲ ಪ್ರಶ್ನೆಗಳಿಗೆ ಉತ್ತರ ಹುಡುಕಲು ,ನೋಡಿ ನಾಟಕ ‘ಕೋವಿಗೊಂದು ಕನ್ನಡಕ’ !

ನಿರ್ದೇಶಕರ ನುಡಿ
ಸ್ಲಾವೋಮೀರ್ ಮ್ರೊಝೆಕ್ ರ ‘ಚಾರ್ಲಿ’ ಒಂದು ಅಸಂಗತ, ವಿಡಂಬನಾತ್ಮಕ ನಾಟಕ. ಕಣ್ಣಿನ ದೃಷ್ಟಿ ಸರಿಯಿಲ್ಲದ ಮುದುಕನೊಬ್ಬ ತನ್ನ ಶತ್ರುವನ್ನು ಮುಗಿಸಲು ಕೋವಿ ಹಿಡಿದು ಹೋಗುವುದೇ ಒಂದು ರೂಪಕ. ತನ್ನ ಶತ್ರು ಯಾರು ಎನ್ನುವುದೇ ಗೊತ್ತಿಲ್ಲದೆಯೇ ಒಂದು ಅಮೂರ್ತ, ಕಾಲ್ಪನಿಕ ಶತ್ರುವನ್ನು ತಲೆಯಲ್ಲಿ ತುಂಬಿಕೊ೦ಡು ಅವರನ್ನು ಮುಗಿಸಬೇಕು ಎಂದು ಹೊರಡುವುದು ಜಗತ್ತಿನ ಹಲವಾರು ದೇಶಗಳಲ್ಲಿ ಕಂಡುಬ೦ದ ಸಂಗತಿ. ಈ ನಾಟಕ ಓದಿದಾಗ ಹಲವು ಆಯಾಮಗಳಲ್ಲಿ ನಮ್ಮ ಸಮಾಜಕ್ಕೂ ಈ ನಾಟಕ ಹೊಂದಬಹುದೆ೦ದು ನಾನು ಕೈಗೆತ್ತಿಕೊಂಡೆ. ಇದು ಕೇವಲ ಭಾಷಾಂತರವಲ್ಲ, ನಮಗೆ ಹೊಂದುವ ಹಾಗೆ ಮಾಡಿಕೊಂಡ ರೂಪಾಂತರ. ಹಲವು ಭಿನ್ನ ಸಂಸ್ಕೃತಿಗಳು, ಭಾಷೆಗಳು, ವಿಚಾರಗಳ ಜೊತೆ ನಾವು ಒಂದೇ ಎಂಬ ಸಾಮರಸ್ಯದಲ್ಲಿ ಬದುಕಬಹುದೇ ಅಥವಾ ನಾವು ಮತ್ತೆ ಅವರು ಎಂಬ

ವೈರುಧ್ಯಗಳೇ ಪ್ರಧಾನವಾಗಬೇಕೆ ಎಂಬ ಪ್ರಶ್ನೆಯನ್ನು ನಾಟಕ ಹುಟ್ಟಿಸಬಹುದು ಎನಿಸುತ್ತದೆ. ನಾಟಕದಲ್ಲಿ ಹಲವು ಪದರಗಳಿವೆ, ಜೊತೆಗೆ ವಿಡಂಬನೆಯ ಹಾಸ್ಯವೂ ಇದೆ. ಮನರಂಜನೆಯನ್ನು ಬಯಸಿ ಬಂದವರಿಗೆ ಮನರಂಜನೆ, ವಿಚಾರಗಳನ್ನು ಬಯಸಿ ಬಂದವರಿಗೆ ವಿಚಾರಗಳು ಸಿಗಬಹುದೆಂಬ ನಿರೀಕ್ಷೆ ನಮಗಿದೆ. ಇದರ ಮುಂಚಿನ ಪ್ರದರ್ಶನಗಳನ್ನು ನೋಡಿದ ಹಲವರು ಬಹಳ ಮೆಚ್ಚುಗೆಯ ಮಾತನಾಡಿರುವುದು ನಮ್ಮ ತಂಡಕ್ಕೆ ದೊಡ್ಡ ಉತ್ತೇಜನವನ್ನು ಕೊಟ್ಟಿದೆ.

ರೂಪಾಂತರ ಮತ್ತು ನಿರ್ದೇಶನ : ವೆಂಕಟೇಶ್ ಪ್ರಸಾದ್
ರಂಗ ಶಾಸ್ತ್ರ : ನಿಶಾ ಅಬ್ದುಲ್ಲಾ
ರಂಗ ವಿನ್ಯಾಸ: ಶ್ರೀಧರ್ ಮೂರ್ತಿ
ಸಂಗೀತ ಸಂಯೋಜನೆ : ಉತ್ಥಾನ ಭಾರಿಘಾಟ್
ಬೆಳಕು ವಿನ್ಯಾಸ : ವಿನಯ್ ಚಂದ್ರ ಪಿ.
ನಿರ್ಮಾಣ ನಿರ್ವಹಣೆ: ಅರುಣ್ ಡಿ.ಟಿ, ಸುಷ್ಮ
ರಂಗದ ಮೇಲೆ: ವಿಜಯ್ ಕುಲ್ಕರ್ಣಿ, ರಾಗ್ ಅರಸ್, ಸುನಿಲ್ ಕುಮಾರ್ ವಿ.
ಭಿತ್ತಿಪತ್ರ ವಿನ್ಯಾಸ : ಸತೀಶ್ ಗಂಗಯ್ಯ
ಬೆ೦ಗಳೂರು ಥಿಯೇಟರ್ ಕಲೆಕ್ಟಿವ್ ಪ್ರಸ್ತುತಿ

ನಾಟಕ ನೋಡಿದ ಕೆಲವರ ಅಭಿಪ್ರಾಯ

ಕೋವಿಗೊಂದು ಕನ್ನಡಕ: ವರ್ತಮಾನದ ಕನ್ನಡಿ

ಸ್ಲಾವೋಮಿರ್ ಮ್ರಾಜೆಕ್ ಅವರ ‘ಚಾರ್ಲಿ’ ನಾಟಕವನ್ನು ನಮ್ಮ ರಂಗಕರ್ಮಿ ವೆಂಕಟೇಶ್ ಪ್ರಸಾದ್ ಕನ್ನಡಕ್ಕೆ ಒಗ್ಗಿಸಿ ನಿರ್ದೇಶನ ಮಾಡಿದ್ದಾರೆ. ಮೂರೇ ಜನ ಪಾತ್ರಧಾರಿಗಳ ಈ ನಾಟಕವು ಭಾರತದ ವರ್ತಮಾನಕ್ಕೆ ಹಿಡಿದ ಕನ್ನಡಿಯಾಗಿದೆ. ಕೋವಿಯನ್ನು ಬೆನ್ನಿಗೆ ತೂಗಿಕೊಂಡು ‘ಅವರಿಗಾಗಿ’ ಹುಡುಕುತ್ತಾ ಕಣ್ಣಾಸ್ಪತ್ರೆಗೆ ಬರುವ ಅಜ್ಜ ಹಾಗು ಮೊಮ್ಮಗ ‘ಅವರನ್ನು’ ಹುಡುಕುವುದಕ್ಕಾಗಿ ಕನ್ನಡಕ ಕೇಳುತ್ತಾರೆ. ಮೊಮ್ಮಗನಿಗೆ ಕಾಣುತ್ತದೆ ಆದರೆ, ಅಜ್ಜನಿಗೆ ಕಾಣ್ತಿಲ್ಲ.

ನಮಗೆ ಪಕ್ಕದಲ್ಲೇ ಕೂತವರನ್ನು ‘ಅವರು’ ಅನ್ನೋದು ಗೊತ್ತಿದೆ. ಆದರೆ ಅವರನ್ನು ಯಾಕೆ ದ್ವೇಷಿಸಬೇಕೆನ್ನುವುದಕ್ಕೆ ಕಾರಣ ಗೊತ್ತಿಲ್ಲ. ವೈಜ್ಞಾನಿಕ ಮನಸ್ಥಿತಿಯ ಡಾಕ್ಟರರಂತ ‘ತಿಳಿದವರು’, ಯಾರನ್ನೋ ತೋರಿಸಿ ‘ಅವರೇ’ ಅವರು ಅನ್ನುತ್ತಿದ್ದಾರೆ. ನಾವು ‘ಅವರ’ ಮೇಲೆ ಕೋವಿ ಗುರಿ ಹಿಡಿದು ನಿಲ್ಲುತ್ತೇವೆ…..
ಭಾರತದಲ್ಲಿ ಕಳೆದ ದಶಕದಿಂದೀಚೆಗೆ ನಡೆಯುತ್ತಿರುವ ವಿದ್ಯಮಾನಗಳು ಹೇಗೆ ನಮ್ಮನ್ನು ಒಡೆದೂ ಒಡೆದೂ ಚೂರು ಮಾಡುತ್ತಿದ್ದಾವೆ ಎಂಬುದನ್ನು ನಿರುಮ್ಮಳವಾಗಿ ಯಾವುದನ್ನೂ ಉಲ್ಲೇಖಿಸದೆ ನಾಟಕ ನಮಗೆ ದಾಟಿಸುತ್ತದೆ…

ಸಣ್ಣ ಮತ್ತು ಕುತೂಹಲಕರವಾಗಿ ಕಾಣುವ ರಂಗಪರಿಕರ, ಹಿತಕಾರಿಯಾದ ಬೆಳಕಿನ ವಿನ್ಯಾಸ, ಸಂಗೀತ, ರೂಪಕಗಳನ್ನು ತಣ್ಣಗೆ ಅಭಿನಯಿಸುವ ಅನುಭವಿ ನಟರು…. ಇವೆಲ್ಲವನ್ನೂ ತುಂಬಿಕೊಳ್ಳಲು ‘ಕೋವಿಗೊಂದು ಕನ್ನಡಕ’ ನೋಡಿ…..
ಹುಲಿಕುಂಟೆ ಮೂರ್ತಿ

ವೆಂಕಟೇಶ ಪ್ರಸಾದ್ ನಿರ್ದೇಶಿಸಿದ ಕೋವಿಗೊಂದು ಕನ್ನಡಕ ಸಮಕಾಲೀನ ಕೋಮುಬಣ್ಣಗಳ ವಿವೇಚನಾರಹಿತ ನಡೆಯ ಕ್ಲಾಸಿಕ್ ಐರನಿಯಾಗಿದೆ. ಕಾರ್ಟೂನ್ ಮಾದರಿಯ ಅಭಿನಯವು ಕ್ರೌರ್ಯದ ಎಳೆಯನ್ನು ನೂತುಕೊಳ್ಳುತ್ತ ನಡೆಯುತ್ತದೆ.

ಮೂವರೇ ಅಭಿನಯಿಸುವ, ಅರ್ಥಪೂರ್ಣ ರಂಗಸಜ್ಜಿಕೆಯ ನಾಟಕ ಸಮಕಾಲೀನ ಪ್ರಸಂಗಗಳ ಸೂಕ್ತ ಅಭಿವ್ಯಕ್ತಿಯೂ ಆಗಿದೆ. ಆಪ್ತರಂಗದಲ್ಲಿಯೂ ಸಂಘಟಿಸಬಹುದಾದ ಈ ರಂಗಪ್ರಯೋಗವು ಹೆಚ್ಚು ಪ್ರದರ್ಶನ ಕಾಣಬೇಕಿದೆ.

“ಧೂಳು ತುಂಬಿದ ಗಾಜಿನ ಮೂಲಕ ನೋಡುವ ನೋಟ, ಇನ್ನೊಬ್ಬರ ಕಣ್ಣ ಕನ್ನಡಕ ಎರಡೂ ನಮ್ಮ ಕಾಣ್ಕೆಯನ್ನು ಮಲೀನಗೊಳಿಸುತ್ತದೆ”
ಡಾ.ಶ್ರೀಪಾದ ಭಟ್.

ಸಮಕಾಲೀನ ವಿಷಯಗಳನ್ನು ನೆನಪಿಸುವ ವಿಡಂಬನಾತ್ಮಕ ನಾಟಕ. ನಿರ್ದೇಶನ ನಿರೂಪಣೆ ಹಾಗೂ ವಿಶೇಷವಾಗಿ ರಂಗವಿನ್ಯಾಸ ದೀ ಬೆಸ್ಟ್. ನಿಮ್ಮೊಳಗೆ ಪ್ರಶ್ನೆಗಳನ್ನು ಹುಟ್ಟುಹಾಕುವಲ್ಲಿ ಯಶಸ್ವಿಯಾಗುವ ನಾಟಕ ಇದು, ಇಂದು ರಂಗಶ೦ಕರದಲ್ಲಿ ಪ್ರದರ್ಶನವಿದೆ. ತಪ್ಪದೇ ನೋಡಿ.
ಮನ್ಸೋರೆ, ಚಲನಚಿತ್ರ ನಿರ್ದೇಶಕ

“ಚಾರ್ಲಿ” ಅನ್ನುವ ಪೋಲಿಷ್ ನಾಟಕವನ್ನು ಸುಂದರವಾಗಿ ಕನ್ನಡಕ್ಕೆ ತಂದಿದ್ದಾರೆ.
ಮೇಲ್ಪದರಕ್ಕೆ ನಾಟಕ ಹಾಸ್ಯದಿಂದ ಕೂಡಿದೆ ಹಾಗಾಗಿ ನಾಟಕ ನೋಡಿ ನಕ್ಕು ಬರ್ತೀನಿ ಅನ್ನುವವರಿಗೆ ಕೊಟ್ಟ ದುಡ್ಡಿಗಂತೂ ಮೋಸವಾಗಲ್ಲ. ಮೂಲ ಕೃತಿ ೧೯೬೨ರಲ್ಲಿ ಬಂದಿತ್ತು, ಸೋಜಿಗ ಅಂದ್ರೆ ಅದು ಇಂದಿಗೂ ಕೂಡ ಭಾರತಕ್ಕೆ ರಿಲೆವಂಟ್ ಅನಿಸುತ್ತೆ.

ನನ್ನ ಪ್ರಕಾರ ನಾಟಕ ಅಥವಾ ಸಿನಿಮಾ ಕಥೆಯನ್ನು ದಾಟಿ ಹೋದಾಗ ಮಾತ್ರ ಧೀರ್ಘವಾಗಿ ಮನಸಿನಲ್ಲಿ ಉಳಿಯುತ್ತೆ.

“ಕೋವಿಗೊಂದು ಕನ್ನಡಕ” ನಿಶಿತವಾಗಿ ಕಥೆಯನ್ನು ದಾಟಿ, ಧರ್ಮಗುರುಗಳು, ರಾಜಕಾರಣಿಗಳು ಕಾಣದ ವೈರಿಗಳ ಯಾಕೆ ಶೃಷ್ಠಿಸುತ್ತಾರೆ ಹಾಗು “ನಮ್ಮವರು ಹಾಗು ಇತರರು” “ನಮ್ಮವರದ್ದು ಸರಿ, ಬೇರೆಯವರದ್ದು ತಪ್ಪು” ಎಂಬ ನಂಬಿಕೆಯಲ್ಲಿ ಅಡಗಿರುವ ಹಿಂಸಾಚಾರ ಎತ್ತಿ ತೋರಿಸುತ್ತದೆ!

ವೆಂಕಟೇಶ್ ಪ್ರಸಾದ್ ನಾಟಕದ ನಿರ್ದೇಶಕರು ಕೇವಲ ಮೂರು ಪಾತ್ರಗಳ ಬಳಸಿ ನಾಟಕ ಚನ್ನಾಗಿ ಕಟ್ಟಿದ್ದಾರೆ!ಮುಕುಂದ್ ಸೆಟ್ಲೂರ್, ರಂಗಾಸಕ್ತ

ತಾ೦ತ್ರಿಕವಾಗಿ ನಾಟಕ ಸರಳವಾಗಿಯೇ ಅದ್ಭುತವಾಗಿದೆ. ಕನ್ನಡ ರಂಗಭೂಮಿಯ ಹೊಸ ಅಲೆಯ ನಿರ್ದೇಶಕರು ರಿಯಲಿಸಂ ಮತ್ತು ರ‍್ರಿಯಲಿಸಂ ಜಾನ್ರಗಳಲ್ಲಿ?ಪ್ರಯೋಗಗಳನ್ನು ನಡೆಸುತ್ತಿರುವುದು ಕನ್ನಡ ರಂಗಭೂಮಿಯ ಬೆಳೆವಣಿಗೆಗೆ ಕಾರಣವಾಗುತ್ತಿದೆ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ. ವೆಂಕಟೇಶ್ ಪ್ರಸಾದರ ‘ಒಂದು ಪ್ರೀತಿಯ ಕತೆ’ ನೋಡಿದವರಿಗೆ?ಅವರ ಶೈಲಿ ಈ ನಾಟಕದಲ್ಲೂ ಎದ್ದೂ ಕಾಣುತ್ತದೆ. ಸಾಮಾನ್ಯವಾಗಿ ನಾವು ಶಿಬಿರಗಳಿಗಷ್ಟೇ ಸೀಮಿತಗೊಳಿಸುವ ಆಂಗಿಕ ಅಭ್ಯಾಸಗಳನ್ನು ರಂಗದ ಮೇಲೆ ಬಳಸಿ ಇಡೀ ಪ್ರಸಂಗಕ್ಕೊ೦ದು ಸಾಂಕಕೇತಿಕತೆಯನ್ನು ತರುವುದು ವೆಂಕಟೇಶ್ ಪ್ರಸಾದ್ ಅವರ ನೈಪುಣ್ಯತೆ.

ನಾಟಕದ ಮೊದಲಾರ್ಧದಲ್ಲಿ ಐರನಿ ಬಹಳ ಮುಖ್ಯ ಪಾತ್ರವನ್ನು??ನಿರ್ವಹಿಸುತ್ತದೆ. ಪಾತ್ರಗಳು ಹೇಳುವುದಕ್ಕೂ ಅವರ ಆಂಗಿಕ ಅಭಿನಯಕ್ಕೂ ವ್ಯತ್ಯಾಸ ಕಾಣುವುದು ಹಾಸ್ಯಕ್ಕೆ ಪೂರಕವಾಗಿದೆ. ಇಡೀ ನಾಟಕದಲ್ಲಿ?ಎದ್ದು ಕಾಣುವುದು ರೂಪಕಗಳು.

ಕನ್ನಡದಲ್ಲಿ ವಸ್ತು ಆಧಾರಿತ ನಾಟಕಗಳು ಹೆಚ್ಚು ಹೆಚ್ಚು ನಡೆಯುತ್ತಿರುವುದು ಸ್ವಾಗತಾರ್ಹ. ಇಡೀ?ತಂಡಕ್ಕೆ ಅಭಿನಂದನೆಗಳು. ಇನ್ನೂ ಹೆಚ್ಚು ಪ್ರದರ್ಶನಗಳಾಗಲಿ, ಮುಖ್ಯವಾಗಿ ಚರ್ಚೆಗಳಾಗಲಿ ಎಂದು ಆಶಿಸುತ್ತೇನೆ

ಸೂರ್ಯ ಸಾಥಿ, ರಂಗಕರ್ಮಿ

‍ಲೇಖಕರು Admin

May 10, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: