ರಂಗವೇ ಸಂಗಾತಿಯಾಗಿ…

ಶಶಿರಾಜರಾವ್ ಕಾವೂರು

ವೃತ್ತಿಯಲ್ಲಿ ವಕೀಲರು. ಹವ್ಯಾಸ, ರಂಗಭೂಮಿ. ನಾಟಕಕಾರರಾಗಿ ಈಗಾಗಲೇ ಪ್ರಸಿದ್ಧಿ ಪಡೆದವರು. ರಂಗಸಂಗಾತಿ, ಮಂಗಳೂರು ತಂಡದ ಸಂಚಾಲಕರು. ಬರ್ಬರೀಕ, ನೆಮ್ಮದಿ ಎಪಾರ್ಟ್ ಮೆಂಟ್, ಸಂಪಿಗೆ ನಗರ ಪೋಲಿಸ್ ಸ್ಟೇಷನ್, ಮಿನುಗೆಲೆ ಮಿನುಗೆಲೆ ನಕ್ಷತ್ರ ಮೊದಲಾದ ನಾಟಕಗಳು ಅವರಿಗೆ ಸಾಕಷ್ಟು ಹೆಸರು ತಂದುಕೊಟ್ಟಿದೆ.

ಮಂಗಳೂರು ಅಂದ್ರೆ ತುಳು ನಾಟಕಗಳ ಜಾತ್ರೆ. ಇದರ ನಡುವೆ ಅಲ್ಲೊಂದು ಇಲ್ಲೊಂದು ಅಪೂರ್ವಕ್ಕೆ ಕನ್ನಡ ನವ್ಯನಾಟಕಗಳ ಸಣ್ಣ ದರ್ಶನ ಆಗುತ್ತಿರುತ್ತದೆ. ಅದೂ ನೀನಾಸಂನಂತಹ ರಂಗ ತಂಡಗಳು ನೀಡಿದ್ರೆ ಮಾತ್ರ..! ಅದರ ಜತೆಗೆ ದಶಕದ ಹಿಂದೆ ಸೇರಿಕೊಂಡದ್ದು ನಮ್ಮದೊಂದು ತಂಡ-ರಂಗಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನ. 

ಒಂದು ನಾಟಕ ರಂಗ ವೇದಿಕೆಯ ಮೇಲೇರಲು ಇರಬೇಕಾದ ಒಂದೇ ಒಂದು ವ್ಯವಸ್ಥೆಗಳಿಲ್ಲದ ಮಂಗಳೂರಲ್ಲಿ ನವ್ಯ ನಾಟಕ ಕಟ್ಟಬೇಕೆಂದರೆ ನಿಜವಾಗಿಯೂ ಅದೊಂದು ಹರಸಾಹಸ. ಅಂತಹ ಸಾಹಸಕ್ಕೆಇಳಿದ ಮೇಲೆ ನಾವು ಪಟ್ಟಪಾಡು, ಅನುಭವಿಸಿದ ಕಷ್ಟ ಹೇಳತೀರದ್ದು. (ಇಡೀ ಜಿಲ್ಲೆಯಲ್ಲಿ ಸರಕಾರದ ಒಂದು ರಂಗಮಂದಿರ ಇನ್ನೂ ಆಗಿಲ್ಲ. ಅದಕ್ಕೆ ಹೋರಾಟ ನಡೀತಾ ಇದೆ ಇನ್ನೂ..!) ಆದರೆ ಇವೆಲ್ಲ ಪ್ರತಿಕೂಲ ಪರಿಸ್ಥಿತಿಗಳೆಲ್ಲ ಗೌಣವಾಗುವುದು ಪ್ರದರ್ಶನ ಯಶಸ್ವಿಯಾದಾಗ ಮತ್ತು ಸಭಿಕರು ರಸಾಸ್ವಾದನೆ ಮಾಡಿ ಸಂತೋಷಪಟ್ಟಾಗ..!

ನಮ್ಮ ತಂಡದ ಯಶಸ್ವಿ ನಾಟಕ- ‘ನೆಮ್ಮದಿ ಅಪಾರ್ಟ್ಮೆಂಟ್, ಫ್ಲಾಟ್ ನಂಬರ್ 252’. ನಗರ ಪ್ರದೇಶಗಳಲ್ಲಿ ಹೆಚ್ಚುತ್ತಿರುವ ಫ್ಲಾಟ್ ಕಲ್ಚರ್ ಸುತ್ತ ಕಥಾಹಂದರ. ವಿಡಂಬನೆಯಿಂದ ಕೂಡಿದ ಲಘು ಹಾಸ್ಯದ ನಾಟಕ. ಎಲ್ಲೆ ಪ್ರದರ್ಶನ ಕಂಡಾಗಲೂ ನಾಟಕ ಮುಗಿದ ನಂತರ, ನಾಟಕ ನೋಡಿದವರು ನೇಪಥ್ಯಕ್ಕೆ ಬಂದು ಅಭಿನಂದಿಸುತ್ತಿದ್ದರು. ಒಮ್ಮೆ ಮೂಡಬಿದ್ರೆಯಲ್ಲಿ ಪ್ರದರ್ಶನ. ನಾಟಕ ಮುಗಿದು ನಾವೆಲ್ಲ ಮೇಕಪ್ ಕಳಚುತ್ತಾ ಇರುವಾಗ ಒಂದೇ ಕುಟುಂಬದ ಏಳೆಂಟು ಸದಸ್ಯರು ನಮ್ಮನ್ನು ನೋಡಲು ಬಂದರು. ವಾಡಿಕೆಯಂತೆ ಅಭಿನಂದಿಸಿ ಹೊರಡುತ್ತಾರೆಂದು ಕೈಕುಲುಕಿದರೆ, ಅವರಲ್ಲಿ ಓರ್ವ ಮುದುಕಿ ನನ್ನ ಹಿಡಿದ ಕೈಯನ್ನು ಬಿಡಲು ತಯಾರೇ ಇಲ್ಲ. ‘ಮಗಾ, ನಾವೆಲ್ಲ ನಮ್ಮ ಊರಿನ ಆಸ್ತಿಯನ್ನು ಇಲ್ಲೊಬ್ಬ ಬಿಲ್ಡರ್‌ಗೆ ಮಾರಿ ಸಿಟಿಯಲ್ಲಿ ಫ್ಲಾಟ್ ತಗೋಬೇಕು ಅಂತ ಯೋಚನೆ ಮಾಡ್ತಿದ್ವಿ. ಆದರೆ ಇವತ್ತು.. ಈಗ.. ನಮ್ಮ ನಿರ್ಧಾರ ಬದಲು ಮಾಡಿದ್ದೀವಿ.. ನಿಮ್ಮನ್ನು ದೇವರು ಚೆನ್ನಾಗಿಟ್ಟಿರಲಿ’ ಎಂದು ಹರಸಿ ಹೋದರು. ನಾವೆಲ್ಲ ಮೂಕರಾಗಿ ಅವರನ್ನೆ ನೋಡಿ ನಿಂತೆವು..!

ನಾಟಕ ಪ್ರದರ್ಶನಕ್ಕೆ ಹಲವಾರು ಅಡೆತಡೆ, ವಿಘ್ನಗಳು ನಾವೆಣಿಸದೆಯೇ ಬರುತ್ತದೆ. ಒಮ್ಮೆ ನಮ್ಮ ನಾಟಕದ ಪ್ರಮುಖ ಪಾತ್ರಧಾರಿ ಅನಿವಾರ್ಯ ಕಾರಣಗಳಿಂದ ತನಗೆ ಬರಲಾಗುವುದಿಲ್ಲ ಎಂದು ನಾಟಕದ ಹಿಂದಿನ ದಿನ ಮಾಹಿತಿ ನೀಡಿದರು. ನಾಟಕ ನಿಲ್ಲಿಸಲಾಗದು. ಅದು ಬೇರೆ ಅಲ್ಲಿಯ ನಾಟಕೋತ್ಸವದ ಮೊದಲ ದಿನ. ರಾತೋರಾತ್ರಿ ಇ‌ನ್ನೋರ್ವ ನಟನನ್ನು ಗೊತ್ತು ಮಾಡಿ, ಅವನಿಗೆ ಸನ್ನಿವೇಶ, ಸಂಭಾಷಣೆ ಹೇಳಿಕೊಟ್ಟು ವ್ಯಾನ್‌ನಲ್ಲಿ ಹೋಗುವಾಗ ದಾರಿಯುದ್ದಕ್ಕೂ ಆ ಹೊಸ ನಟನನ್ನು ತಯಾರು ಮಾಡಿ ಯಶಸ್ವಿ ಪ್ರದರ್ಶನ ನೀಡಿದ್ದೆವು.

ಕೆಲವೊಂದು ಕಡೆ ಅನಿರೀಕ್ಷಿತ ಘಟನೆ ನಡೆಯುವುದೂ ಇದೆ. ಒಂದು ಕಡೆ ನಾಟಕ ಪ್ರದರ್ಶನ ನಡೆಯುತ್ತಿದೆ. ಆದರೆ ನಮಗೆ ನಾಟಕ ಏಕೋ ಅಷ್ಟು ರಸವತ್ತಾಗಿ ಹೋಗುತ್ತಿಲ್ಲ ಅನ್ನುವ ಗುಮಾನಿ ಹುಟ್ಟಿತು. ಯಾಕಿರಬಹುದು ಎಂದು ಯೋಚಿಸುವಾಗ ಎಲ್ಲರ ಗಮನ ಸಂಗೀತ ನೀಡುವವರ ಕಡೆ ಹೊರಳಿತು. ನಡುನಡುವೆ ಹಿನ್ನೆಲೆ ಸಂಗೀತವೇ ಕೇಳಿಸುತ್ತಿರಲಿಲ್ಲ. ಅವತ್ತು ಸಂಗೀತಕ್ಕೆ ಹೊಸಬರನ್ನು ಆಯ್ಕೆ ಮಾಡಿದ್ದೆವು. ಸನ್ನಿವೇಶಕ್ಕೆ ತಕ್ಕ ಸಂಗೀತ ನೀಡುವ ಜವಾಬ್ದಾರಿ ಹೊತ್ತು, ಅವುಗಳನ್ನೆಲ್ಲ ಒಂದು ಪುಸ್ತಕದಲ್ಲಿ ಬರೆದೂ ಇಟ್ಟಿದ್ದರು. ಪುಸ್ತಕವೂ ತೆರೆದ ಸ್ಥಿತಿಯಲ್ಲಿ ಅವರೆದುರಲ್ಲೆ ಇತ್ತು. ಪರದೆಯ ಹಿಂದಿನಿಂದ ಇಣುಕಿ ನೋಡಿದರೆ, ನಮ್ಮ ಸಂಗೀತ ನಿರ್ದೇಶಕರು ನಾಟಕ ನೋಡುವುದರಲ್ಲೆ ತಲ್ಲೀನರಾಗಿ ನಾಟಕದ ರಸಸ್ವಾದನೆಯಲ್ಲೆ ಮುಳುಗಿ ಸಂಗೀತ ನೀಡಲು ಮರೆತೆ ಬಿಟ್ಟಿದ್ದರು. ನಂತರ ಜನ ಕಳುಹಿಸಿ ಅವರನ್ನು ಎಚ್ಚರಿಸಿದೆವು. ‘ಮಾಸ್ಟ್ರೆ ಮ್ಯೂಸಿಕ್ ಕೊಡಿ ಮಾರಾಯರೆ…! ಅಂತ. ನಂತರ ಸಂಗೀತ ಕೇಳಿಸಲಾರಂಭಿಸಿತು.

ಕೆಲವೊಂದು ಕಡೆ ಒಳ್ಳೆಯ ಪ್ರೇಕ್ಷಕರ ವರ್ಗ ಮತ್ತು ನಾಟಕವನ್ನು ಆಮೂಲಾಗ್ರವಾಗಿ ನೋಡಿ, ವಿಮರ್ಶಿಸಿ ಅನುಭವಿಸುವ ಒಳ್ಳೆಯ ಪರಂಪರೆ ಇದೆ. ಅಲ್ಲಿ ಪ್ರದರ್ಶನ ಕೊಡಲು ತಂಡಕ್ಕೂ ವಿಶೇಷ ಆಸಕ್ತಿ. ಅಂತಹುದೊಂದು ಪ್ರೇಕ್ಷಕ ವರ್ಗ ಬೈಂದೂರಿನಲ್ಲಿ ಇದೆ. ಅಲ್ಲಿಯ ನಾಟಕಪ್ರೇಮಿಗಳಿಗೆ ಶರಣು. ಅಂತಹುದೇ ಪ್ರೇಕ್ಷಕವರ್ಗ ಬೆಂಗಳೂರಿನ ಕಲಾಗ್ರಾಮದ ಸಭಾಭವನದಲ್ಲಿ ಸೇರಿತ್ತು. ಧಾರವಾಡದ ಶ್ರೀಮತಿ ಪ್ರಜ್ಞಾ ಮತ್ತಿಹಳ್ಳಿ ಬರೆದ ‘ಕೇಳೆಸಖಿ ಚಂದ್ರಮುಖಿ’ ನಾಟಕದ ಪ್ರದರ್ಶನ. ಕೆಲವೊಂದು ದೃಶ್ಯಗಳಲ್ಲಿ ಕತೆಯ ಅನುಕೂಲಕ್ಕೆ ತಕ್ಕಂತೆ ಕೆಲವೊಂದು ಸ್ವರ ಮತ್ತು ಸಂಭಾಷಣೆಗಳನ್ನು ಮೊದಲೇ ಧ್ವನಿಮುದ್ರಣ ಮಾಡಿ ಸ್ವರತಟ್ಟೆಯಲ್ಲಿ ಹಾಕಿ ಇಟ್ಟಿದ್ದೆವು.

ನಾಟಕ ಪ್ರದರ್ಶನಕ್ಕೆ ಒಂದು ಗಂಟೆ ಇರುವಾಗ ಮೈಕ್ ಮತ್ತು ಸಿಡಿ ಪ್ಲೇಯರ್ ಸರಿಯಾಗಿದೆಯೇ ಎಂದು ನೋಡುವ ಹೊತ್ತಲ್ಲಿ ನಮ್ಮ ಧ್ವನಿಮುದ್ರಣ ಮಾಡಿದ ಸಿಡಿ ಕಾಣಿಸಲಿಲ್ಲ. ಬೆಂಗಳೂರಿಗೆ ಹೊರಡುವ ಗಡಿಬಿಡಿಯಲ್ಲಿ ಬ್ಯಾಗಲ್ಲಿ ಹಾಕಿಟ್ಟದ್ದು, ಅಲ್ಲಿಯೇ ಬಾಕಿಯಾಗಿತ್ತು..! ಕೊನೆಗೆ ನಿರ್ದೇಶಕರು ಅವೆಲ್ಲವನ್ನೂ ಮಿಮಿಕ್ರಿ ರೀತಿಯಲ್ಲಿ ಹೇಳಿ ನಿಭಾಯಿಸಿದರು. ಸಭಿಕರಿಗೆ ಗೊತ್ತೂ ಆಗಲಿಲ್ಲ. ಅದೇ ಹೆಗ್ಗಳಿಕೆ.

ನಾಟಕ ತಯಾರು ಮಾಡುವುದು ಒಂದು ಸಾಹಸವಾದರೆ ಅವುಗಳ ಪ್ರದರ್ಶನ ವ್ಯವಸ್ಥೆ ಮಾಡುವುದು ಇನ್ನೊಂದು ದೊಡ್ಡ ಸವಾಲಿನ ಕೆಲಸ. ಬೆರಳೆಣಿಕೆಯ ಕೆಲವೊಂದು ಪ್ರದರ್ಶನಗಳಲ್ಲಿ ಲಾಭ ಬಂದರೂ ಹೆಚ್ಚಿನವು ಅಲ್ಲಿಂದಲ್ಲಿಗೇ ಖರ್ಚು ಜಮೆ. ಕೆಲವೊಮ್ಮೆ ಕೈಯಿಂದ ಖರ್ಚಾಗುವುದೂ ಇದೆ. ಒಟ್ಟಿನಲ್ಲಿ ನಾಟಕ ಆಡುವುದು, ನೋಡುವುದು ಹೆಜ್ಜೇನು ಸವಿದಂತೆ.. ಆದರೆ ಸಂಘಟನೆ, ನಿರ್ಮಾಣ, ನಿರ್ವಹಣೆ ಹೆಜ್ಜೇನು ಕಡಿದಂತೆ..! ಆದರೂ ಮತ್ತೆ ಮತ್ತೆ ಕಚ್ಚಿಸಿಕೊಳ್ಳಬೇಕೆಂಬ ಸಿಹಿಯಾದ ಕಡಿತ ಇದು.

‍ಲೇಖಕರು Avadhi

December 27, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ನೀನು…

ನೀನು…

ದೊರೆ..

ದೊರೆ..

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: