ರಂಗಭೂಮಿಯ ಚಿಕಿತ್ಸಕ ಗುಣ ಮತ್ತು ಸಾಮಾಜಿಕ ಜವಾಬ್ದಾರಿ…

ನಾ ದಿವಾಕರ

ಭಾರತೀಯ ಸಮಾಜ ಶತಮಾನಗಳಿಂದಲೂ ಕಾಪಾಡಿಕೊಂಡು ಬಂದಿರುವ ಜನಸಾಂಸ್ಕೃತಿಕ ನೆಲೆಯ ಸಾಮರಸ್ಯ ಮತ್ತು ಸಮನ್ವಯದ ನೆಲೆಗಳು ವಿಭಿನ್ನ ಕಾಲಘಟ್ಟಗಳಲ್ಲಿ ದಾಳಿಗೊಳಗಾಗುತ್ತಲೂ ಬಂದಿದೆ. ಜಾತಿ ಶ್ರೇಷ್ಠತೆ ಮತ್ತು ಪಾರಮ್ಯದ ಭೌತಿಕ ನೆಲೆಗಳು ಮೇಲ್‌ ಸ್ತರದಿಂದ ತಳಮಟ್ಟದ ಸಮಾಜದ ಮೇಲೆ ಮಾಡುತ್ತಿರುವ ಬೌದ್ಧಿಕ-ಸೈದ್ದಾಂತಿಕ-ಸಾಂಸ್ಕೃತಿಕ ಪ್ರಹಾರ ಅವ್ಯಾಹತವಾಗಿ ನಡೆಯುತ್ತಲೇ ಬಂದಿದೆಯಲ್ಲದೆ, ವರ್ತಮಾನದ ಸುಶಿಕ್ಷಿತ-ಆಧುನಿಕ ಸಮಾಜದ ದೃಷ್ಟಿಯಲ್ಲೂ ಸಹ ಅಪ್ಯಾಯಮಾನವಾಗಿಯೇ ಕಂಡುಬರುತ್ತಿದೆ. ಇದರ ನಡುವೆಯೂ ಭಾರತ ತನ್ನ ನೆಲಮೂಲದ ಸಾಂಸ್ಕೃತಿಕ ನೆಲೆಗಳನ್ನು ಸುರಕ್ಷಿತವಾಗಿ ಉಳಿಸಿಬಂದಿದೆ ಎಂದರೆ ಅದಕ್ಕೆ ಕಾರಣ ಈ ದೇಶದ ಶೋಷಿತ ಸಮುದಾಯಗಳಲ್ಲಿರುವ ಸಹಿಷ್ಣುತೆ ಮತ್ತು ಸಮನ್ವಯದ ಆಶಯಗಳು. ಈ ಆಶಯಗಳನ್ನು ಭಂಗಗೊಳಿಸಲು ಅಥವಾ ಸಹಿಷ್ಣುತೆಯ ನೆಲೆಗಳನ್ನು ಮಲಿನಗೊಳಿಸಲು ಬಳಸಲಾಗುತ್ತಿರುವ ಅಸ್ತ್ರಗಳಲ್ಲಿ ಕೋಮುವಾದ, ಮತೀಯವಾದ, ಮತಾಂಧತೆ ಮತ್ತು ʼಅನ್ಯʼರ ಪರಿಕಲ್ಪನೆಯೂ ಒಂದು.

ಈಗಲೂ ಕಣ್ಣೆದುರು ಢಾಳಾಗಿ ಕಾಣುತ್ತಿರುವ ಅಸ್ಪೃಶ್ಯತೆ, ಮಹಿಳಾ ದೌರ್ಜನ್ಯ, ಅತ್ಯಾಚಾರ ಮತ್ತು ಲೈಂಗಿಕ ದಾಳಿಗಳು ಸಮಾಜವನ್ನು ಮತ್ತಷ್ಟು ಪ್ರಕ್ಷುಬ್ಧಗೊಳಿಸುತ್ತಿರುವಂತೆಯೇ, ಸಮಾಜ ಸುಧಾರಣೆಯ ಮೂಲ ಭೂಮಿಕೆಗಳಾದ ಸಾಹಿತ್ಯ, ಕಲೆ ಮತ್ತು ರಂಗಭೂಮಿಯಂತಹ ಸೂಕ್ಷ್ಮ ಸಂವೇದನೆಯ ಚಿಂತನಾ ನೆಲೆಗಳನ್ನೂ ಕೆಣಕುತ್ತಲೇ ಬಂದಿವೆ. ಸಮಾಜ ಪರಿವರ್ತನೆ ಅಥವಾ ಸುಧಾರಣೆ ಎನ್ನುವ ವಿಶಾಲಾರ್ಥದ ಅಭಿವ್ಯಕ್ತಿಗಳನ್ನು ಬದಿಗಿಟ್ಟು ನೋಡಿದಾಗಲೂ, ಸಮಾಜದ ಆಂತರ್ಯವನ್ನೇ ಬಗೆದು ಬೌದ್ಧಿಕ-ಸಾಂಸ್ಕೃತಿಕ ಮಾಲಿನ್ಯದ ಹೂರಣವನ್ನು ಬಿತ್ತಲಾಗುತ್ತಿರುವುದನ್ನು ಗಮನಿಸಿದಾಗ, ಮನುಷ್ಯ ಸಮಾಜ ತನ್ನ ಸುತ್ತಲಿನ ಬೇಲಿಗಳನ್ನು ಕಿತ್ತುಹಾಕಿ ʼತಾನೊಂದೇ ವಲಂʼ ಎಂಬ ಪಂಪವಾಕ್ಯವನ್ನು ಅಪ್ಪಿಕೊಳ್ಳುವುದು ಅನಿವಾರ್ಯವಾಗಿಬಿಟ್ಟಿದೆ.

ಸಮಾಜದ ಒಡಲನ್ನು ಬಗೆದು ದ್ವೇಷಾಸೂಯೆಗಳ ವಿಭಜಕ ಬೀಜಗಳನ್ನು ಬಿತ್ತುವ ಪ್ರಕ್ರಿಯೆಯಲ್ಲಿ ಜಾತಿ-ಮತ-ಧರ್ಮಗಳ ಶ್ರೇಷ್ಠತೆಯನ್ನು ಪ್ರತಿಪಾದಿಸುವ ಬೌದ್ಧಿಕ ಕ್ರಿಯೆ ಪ್ರಧಾನವಾಗಿ ಕಾಣುತ್ತದೆ. ಈ ಕ್ರಿಯೆಯನ್ನು ಮತ್ತಷ್ಟು ಚುರುಕುಗೊಳಿಸಲು, ಹೊಸ ಬೇಲಿಗಳನ್ನು ಕಟ್ಟಲು ಇತಿಹಾಸದ ಸ್ಥಾವರಗಳನ್ನು ಸಾಂಕೇತಿಕವಾಗಿಯೂ, ಚರಿತ್ರೆಯ ಜಂಗಮ ಸ್ವರೂಪಿ ಚಿಂತನಾ ವಾಹಿನಿಗಳನ್ನು ಸಾಪೇಕ್ಷವಾಗಿಯೂ ಬಳಸಿಕೊಳ್ಳಲಾಗುತ್ತಿದೆ. ಈ ಕ್ರಿಯೆಯಲ್ಲಿ ಕಲೆ, ಸಾಹಿತ್ಯ ಮತ್ತು ರಂಗಭೂಮಿಯಂತಹ ಮಾನವೀಯ ನೆಲೆಗಳನ್ನು ಗಟ್ಟಿಗೊಳಿಸುವ ಸಾಂಸ್ಕೃತಿಕ ಭೂಮಿಕೆಗಳೂ ಕ್ರಮೇಣ ಕಲುಷಿತವಾಗುತ್ತಿವೆ.

ಇತಿಹಾಸ ಮತ್ತು ಚರಿತ್ರೆಯ ಆಗುಹೋಗುಗಳನ್ನು ರಂಗಭೂಮಿಯ ಪ್ರಯೋಗಗಳ ಮೂಲಕ ಸಾದರ ಪಡಿಸುವಾಗ ಅನುಸರಿಸಬೇಕಾದ ಸರಳ ಸೂಕ್ಷ್ಮತೆಗಳೂ ಸಹ ಈಗ ಕ್ರಮೇಣ ಮರೆಯಾಗುತ್ತಿದ್ದು, ವರ್ತಮಾನದ ಸಾಂಸ್ಕೃತಿಕ-ರಾಜಕೀಯ ಚೌಕಟ್ಟುಗಳಲ್ಲಿ ಅನಾವರಣಗೊಳ್ಳುತ್ತಿರುವುದನ್ನು ವಿಷಾದ ಮತ್ತು ಎಚ್ಚರಿಕೆಯೊಂದಿಗೇ ಗಮನಿಸಬೇಕಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲೇ ಸಾಹಿತ್ಯ ಮತ್ತು ರಂಗಭೂಮಿಯ ಸಾಮಾಜಿಕ ಜವಾಬ್ದಾರಿಯೂ ಹೆಚ್ಚಾಗುತ್ತಿರುವುದನ್ನೂ ಮನಗಾಣಬೇಕಿದೆ.

ಸಮಕಾಲೀನ ಹವ್ಯಾಸಿ ರಂಗಭೂಮಿಯ ವೈವಿಧ್ಯಮಯ ಪ್ರಯೋಗಗಳು ಈ ಜವಾಬ್ದಾರಿಯನ್ನು ಅರಿತು ಮುನ್ನಡೆಯುತ್ತಿರುವುದಕ್ಕೆ ಸಾಕಷ್ಟು ನಿದರ್ಶನಗಳೂ ನಮ್ಮ ಕಣ್ಣಮುಂದಿವೆ. ರಾವಿ ನದಿಯ ದಂಡೆಯಲ್ಲಿ, ಟ್ರೈನ್‌ ಟು ಪಾಕಿಸ್ತಾನ್‌, ಸಂಬಂಜ ಅನ್ನೋದು ದೊಡ್ಡದು ಕಣಾ, ಪ್ರಜಾಪ್ರಭುತ್ವದ ಮೂರು ಮಂಗಗಳು, ದೋಪ್ಡಿ, ವಾರಸುದಾರ ಹೀಗೆ ಹಲವು ಪ್ರಯೋಗಗಳು ನಮ್ಮ ನಡುವಿನ ಸಾಮಾಜಿಕ ಸೂಕ್ಷ್ಮತೆಯನ್ನೂ, ಸಾಂಸ್ಕೃತಿಕ ಸಂವೇದನೆಯನ್ನೂ ಉದ್ದೀಪನಗೊಳಿಸಿರುವುದು ವಾಸ್ತವ.

ಈ ಹಿನ್ನೆಲೆಯಲ್ಲೇ ಮೈಸೂರಿನ ಕಿರುರಂಗ ಮಂದಿರದಲ್ಲಿ ನಿರಂತರ ಫೌಂಡೇಷನ್‌ ಇದೇ ತಿಂಗಳ 25 ರಿಂದ 29ರವರೆಗೆ ನಡೆಸಲಿರುವ ಐದು ದಿನಗಳ ರಂಗ ಉತ್ಸವದತ್ತ ನೋಡಬಹುದು. ನಮ್ಮ ಸಾಂಸ್ಕೃತಿಕ ಸೌಂದರ್ಯ, ಭಿನ್ನಮತದ ಸೊಗಸು ಮತ್ತು ಪರಂಪರೆಯ ಸೊಗಡು ಇವೆಲ್ಲವನ್ನೂ ಉಳಿಸಿಕೊಂಡು ವರ್ತಮಾನದ ಸಮಾಜದ ವಿದ್ಯಮಾನಗಳಿಗೆ ಸ್ಪಂದಿಸುವ ಒಂದು ಕಲೆ ರಂಗಭೂಮಿಗೆ ಚಾರಿತ್ರಿಕವಾಗಿ ಸಿದ್ಧಿಸಿದೆ. ಈ ಸ್ಪಂದನೆಯಲ್ಲಿ ಸುಧಾರಣೆಯ ಅಲೆಗಳನ್ನು ಕಾಣುವುದಕ್ಕಿಂತಲೂ ಹೆಚ್ಚಾಗಿ ಚಿಕಿತ್ಸಕ ಗುಣಗಳನ್ನು ಶೋಧಿಸುವುದು ಔಚಿತ್ಯಪೂರ್ಣವಾಗುತ್ತದೆ.

ವರ್ತಮಾನದ ದುರಂತಗಳಿಗೆ ವಿಮುಖವಾಗಿ ಆಗಿಹೋದ ಚರಿತ್ರೆಯ ʼನಿಜ ಕನಸುಗಳಿಗೆʼ ಮುಖಾಮುಖಿಯಾಗುತ್ತಿರುವ ಸಂದರ್ಭದಲ್ಲಿ, ಸೃಜನಶೀಲತೆ ಮತ್ತು ಸೃಜನಾತ್ಮಕ ಸಂವೇದನೆಯ ತಂತುಗಳು ಸಡಿಲವಾಗುತ್ತಾ, ಶಿಥಿಲವಾಗುತ್ತಾ ಹೋಗುತ್ತಿರುವ ಪ್ರಸ್ತುತ ಸನ್ನಿವೇಶದಲ್ಲಿ ರಂಗಭೂಮಿಯ ಮೂಲಕ ಪ್ರಸ್ತುತಪಡಿಸುವ ನಾಟಕಗಳು ಮತ್ತು ಅವುಗಳಿಂದ ಹೊರಸೂಸುವ ಸಂದೇಶಗಳು ಈ ಚಿಕಿತ್ಸಕ ಗುಣಗಳನ್ನು ಹೊಂದಿರುವುದೇ ಆದರೆ ಅದನ್ನು ತೆರೆದ ಬಾಹುಗಳಿಂದ ಸ್ವಾಗತಿಸುವುದು ನಾಗರಿಕತೆಯ ಲಕ್ಷಣ.

ಕಳೆದ 25 ವರ್ಷಗಳಿಂದಲೂ ಇದೇ ಸೃಜನಾತ್ಮಕ ಮಾರ್ಗದಲ್ಲಿ ರಂಗಭೂಮಿಯನ್ನು ಶ್ರೀಮಂತಗೊಳಿಸುತ್ತಿರುವ ನಿರಂತರ ಫೌಂಡೇಷನ್‌ ರಂಗಭೂಮಿ, ಜಾನಪದ ಮತ್ತು ಪರಿಸರ ಸೂಕ್ಷ್ಮತೆಯ ನೆಲೆಗಳಲ್ಲಿ ರಂಗಪ್ರಯೋಗಗಳನ್ನು ನಡೆಸುವ ಮೂಲಕ, ಕನ್ನಡದ ಮತ್ತು ಅನ್ಯ ಭಾಷೆಯ ಸಂವೇದನಾಶೀಲ ಕಥಾವಸ್ತುಗಳನ್ನು ರಂಗಪ್ರಯೋಗಕ್ಕೆ ಅಳವಡಿಸುತ್ತಾ ಸಾಗಿದೆ. ರಂಗಭೂಮಿ ಒಂದು ಸೃಜನಾತ್ಮಕ ದೃಶ್ಯಕಲೆಯಾಗಿರುವಂತೆಯೇ ಪ್ರತಿಯೊಂದು ರಂಗಪ್ರಯೋಗದ ಮುನ್ನ ನಡೆಸುವ ರಂಗಶಿಬಿರಗಳು ಯುವ ಮನಸುಗಳಲ್ಲಿ ಸಂಯಮ, ಸಂವೇದನೆ ಮತ್ತು ಸಾಮರಸ್ಯದ ಭಾವನೆಗಳನ್ನು ಉದ್ಧೀಪನಗೊಳಿಸುವ ತಾಣಗಳೂ ಆಗಿರುತ್ತವೆ.

ಈ ನಿಟ್ಟಿನಲ್ಲಿ ಸಾಗುತ್ತಲೇ ನಿರಂತರ ಫೌಂಡೇಷನ್‌ ನಡೆಸುತ್ತಿರುವ ಐದು ದಿನಗಳ ರಂಗೋತ್ಸವದಲ್ಲಿ ಈ ಬಾರಿ ಐದು ವಿಶಿಷ್ಟ ಪ್ರಯೋಗಗಳನ್ನು ಮೈಸೂರಿನ ಜನತೆಯ ಮುಂದೆ ಪ್ರದರ್ಶಿಸಲು ಸಜ್ಜಾಗಿದೆ. ಪುರಾಣ, ಇತಿಹಾಸ, ಜನಪದ ಮತ್ತು ಮಹಾಕಾವ್ಯಗಳ ಜಗತ್ತನ್ನು ವರ್ತಮಾನದ ಸಮಕಾಲೀನ ಸಮಾಜದ ಕನ್ನಡಿಯ ಮೂಲಕ ನೋಡುವ ಒಂದು ಸದವಕಾಶವನ್ನು ಈ ರಂಗೋತ್ಸವ ಕಲ್ಪಿಸುತ್ತದೆ ಎಂಬ ವಿಶ್ವಾಸದೊಂದಿಗೇ ರಂಗೋತ್ಸವವನ್ನು ವೀಕ್ಷಿಸೋಣ.

ರಂಗ ಉತ್ಸವ ಮತ್ತು ಸಮಕಾಲೀನತೆ

ಜನವರಿ 25 ರಿಂದ 29ರವರೆಗೆ ನಡೆಯುವ ಈ ರಂಗೋತ್ಸವದಲ್ಲಿ ಐದು ನಾಟಕಗಳು ಪ್ರದರ್ಶನವಾಗಲಿವೆ. ಧಾರವಾಡದ ಗೊಂಬೆಮನೆ ತಂಡದ ʼ ಶಾಂತಕವಿಗಳ ವಿಶ್ರಾಂತಿ ʼ ; ಮೈಸೂರು ನಿರಂತರ ತಂಡದ ʼ ವಾರಸುದಾರಾ ʼ ; ಬೆಂಗಳೂರು ಅನೇಕ ತಂಡದ ʼ ನವಿಲು ಪುರಾಣ ʼ ; ಬೆಂಗಳೂರು ಸಮಷ್ಟಿ ತಂಡದ ʼ ಮಿಸ್‌ ಸದಾರಮೆ ʼ ಮತ್ತು ಬೆಂಗಳೂರಿನ ಜಂಗಮ ಕಲೆಕ್ಟೀವ್‌ ಪ್ರಾಯೋಜಿತ ʼ ದಕ್ಲಕಥಾ ದೇವಿಕಾವ್ಯ ʼ : ವಿಭಿನ್ನ ಕಥಾವಸ್ತು ಮತ್ತು ಚಾರಿತ್ರಿಕ ಹಿನ್ನೆಲೆ ಹೊಂದಿರುವ ಈ ಐದು ನಾಟಕಗಳ ಸಮಕಾಲೀನ ಸಂದೇಶ ಬಹುಶಃ ಒಂದೇ ಆಗಿರುತ್ತದೆ, ಅದೆಂದರೆ ಸಾಮರಸ್ಯ-ಸಮನ್ವಯ ಮತ್ತು ಮನುಜ ಸಂಬಂಧಗಳ ಸೂಕ್ಷ್ಮ ತುಡಿತಗಳು.

ಜನವರಿ 25ರಂದು ಪ್ರದರ್ಶನಗೊಳ್ಳಲಿರುವ ʼ ಶಾಂತಕವಿಗಳ ವಿಶ್ರಾಂತಿ ʼ ಕನ್ನಡದ ಆದ್ಯ ನಾಟಕಕಾರ ಸಕ್ಕರಿ ಬಾಳಾಚಾರ್ಯ ಶಾಂತಕವಿಗಳ ಜೀವನದ ಕಥಾವಸ್ತುವನ್ನು ಹೊಂದಿದೆ. ಪ್ರಕಾಶ್‌ ಗರುಡ ಅವರ ನಿರ್ದೇಶನದ ಈ ನಾಟಕದಲ್ಲಿ, ಶಾಂತಕವಿಗಳು ತಮ್ಮ ಜೀವನಕಾಲದಲ್ಲಿ ರಂಗಭೂಮಿಯನ್ನು ಕಟ್ಟಲು ಹಾಗೂ ಭವಿಷ್ಯದ ಪೀಳಿಗೆಗಾಗಿ ಉಳಿಸಲು ಪಟ್ಟ ಶ್ರಮ ಮತ್ತು ಅವರು ಜೀವನದ ಹಾದಿಯಲ್ಲಿ ಮುಖಾಮುಖಿಯಾದ ಹಲವು ಸಂಕಷ್ಟಗಳನ್ನು, ಬಿಕ್ಕಟ್ಟುಗಳನ್ನು, ಸವಾಲುಗಳನ್ನು ತೆರೆದಿಡಲಾಗಿದೆ. ಹಾಗೆಂದ ಮಾತ್ರಕ್ಕೆ ಇದು ವ್ಯಕ್ತಿಕೇಂದ್ರಿತ ಕಥಾನಕ ಎನ್ನಲಾಗುವುದೂ ಇಲ್ಲ. ಏಕೆಂದರೆ ಶಾಂತಕವಿಗಳ ನಡಿಗೆಯ ಜೊತೆಗೇ ಅವರ ಕಾಲಘಟ್ಟದ ಸಾಮಾಜಿಕ ಸ್ಥಿತ್ಯಂತರಗಳು ಮತ್ತು ತುಮುಲಗಳನ್ನೂ ಸಹ ಗುರುತಿಸಲು ಸಾಧ್ಯ.

ಜನವರಿ 26ರಂದು ಜಯರಾಮ ರಾಯಪುರ ರಚಿಸಿರುವ ʼವಾರಸುದಾರಾʼ ನಾಟಕ ಪ್ರಸಾದ್‌ ಕುಂದೂರು ಅವರ ನಿರ್ದೇಶನದಲ್ಲಿ ಪ್ರದರ್ಶನಗೊಳ್ಳಲಿದೆ. ಮುಘಲ್‌ ಸಾಮ್ರಾಜ್ಯದ ಪ್ರಮುಖ ಮೂರು ವ್ಯಕ್ತಿತ್ವಗಳ ನಡುವೆ ನಡೆಯುವ ಅಧಿಕಾರ ಸಂಘರ್ಷ ಮತ್ತು ರಾಜಕೀಯ ವೈಪರೀತ್ಯಗಳನ್ನು ಈ ನಾಟಕದಲ್ಲಿ, ಚರಿತ್ರೆಯ ರಾಜಕೀಯ ಕ್ರೌರ್ಯ ಮತ್ತು ಅಂದಿನ ಸಮಾಜದ ಸಾಂಸ್ಕೃತಿಕ-ಸಾಮಾಜಿಕ ಪರಿಸರದಲ್ಲಿ ಬಿಡಿಸಿಡಲಾಗಿದೆ. ಚಲನಶೀಲ ಸಮಾಜದಲ್ಲಿ ನಡೆಯುವ ಇಂತಹ ಚಾರಿತ್ರಿಕ ಘಟನೆಗಳನ್ನು ಸಮಕಾಲೀನ ವಾತಾವರಣದಲ್ಲಿ ಹೇಗೆ ನೋಡುವುದು ಎಂಬ ಜಿಜ್ಞಾಸೆ ಇರುವುದೇ ಆದರೆ, ಇಂತಹ ಪ್ರಯೋಗಗಳು ಉತ್ತರ ನೀಡುವುದರಲ್ಲಿ ಯಶಸ್ವಿಯಾಗುತ್ತವೆ. ಶಹಜಹಾನ ಮತ್ತು ಔರಂಗಜೇಬನ ಬದುಕಿನಲ್ಲಿ ಮತ್ತು ಇಬ್ಬರ ನಡುವೆ ನಡೆಯುವ ಅಧಿಕಾರ ರಾಜಕಾರಣದ ಪೈಪೋಟಿಯನ್ನು, ಅದರ ಹಿಂದಿನ ರೋಚಕ ಘಟನೆಗಳನ್ನು, ವರ್ತಮಾನದ ರಾಜಕಾರಣದ ನಡುವೆಯೂ ಸೂಕ್ಷ್ಮವಾಗಿ ಗುರುತಿಸಬಹುದಾದ ಒಳಸುಳಿವುಗಳನ್ನು ಇಂತಹ ಕಥಾಹಂದರಗಳು ಒದಗಿಸುತ್ತವೆ.

ಜನವರಿ 27ರಂದು ಪ್ರೊ ಕೆ. ಇ. ರಾಧಾಕೃಷ್ಣ ಅವರ ʼ ನವಿಲು ಪುರಾಣ ʼ ಸುರೇಶ್‌ ಅನಗಳ್ಳಿ ಅವರ ನಿರ್ದೇಶನದಲ್ಲಿ ಮೂಡಿಬರಲಿದೆ. ಪ್ರಸಿದ್ಧ ಉರ್ದು ಸಾಹಿತಿ ಇನ್ತಿಜಾರ್‌ ಹುಸೇನ್‌ ಅವರ ಕತೆಯೊಂದರ ಪ್ರೇರಣೆಯಿಂದ ರಚಿಸಲಾದ ʼ ನವಿಲುಪುರಾಣ ʼ ಯುದ್ಧ, ಯುದ್ಧಭೀಕರತೆ, ಯುದ್ಧೋತ್ಸಾಹ, ಯುದ್ಧೋನ್ಮಾದ ಈ ಪರಿಕಲ್ಪನೆಗಳ ಹಿನ್ನೆಲೆಯಲ್ಲಿ ಮಾನವ ಸಮಾಜದಲ್ಲಿ ಯುದ್ಧ ಎನ್ನುವ ವೈಷಮ್ಯದ ಭೌತಿಕ ಅಭಿವ್ಯಕ್ತಿ ಹೇಗೆ ವಿನಾಶಕಾರಿಯಾಗಿ ಪರಿಣಮಿಸಬಲ್ಲದು ಎಂಬ ಸೂಕ್ಷ್ಮ ಅಂಶಗಳನ್ನು ಒಂದು ನಿರಾಶ್ರಿತ ನವಿಲಿನ ರೂಪಕದ ಮೂಲಕ ಪ್ರಸ್ತುತಪಡಿಸುತ್ತದೆ. ಯುದ್ಧನಿರತ ಬಣಗಳಿಗೆ ಉನ್ಮಾದ, ವಿಜಯೋತ್ಸಾಹ ಮತ್ತು ಪರಾಭವದ ನಿರಾಸೆಗಳಷ್ಟೇ ಮುಖ್ಯವಾದರೆ, ಮನುಜ ಸಮಾಜಕ್ಕೆ ಈ ಕದನಗಳಿಂದ ಎದುರಾಗುವ ವಿಪತ್ತುಗಳು, ವಿನಾಶಕಾರಿ ಬೆಳವಣಿಗೆಗಳು ಮುಖ್ಯವಾಗುತ್ತದೆ. ಬಹುಶಃ ಈ ನಾಟಕದ ಮೂಲಕ ಮನುಜ ಸಂವೇದನೆಯನ್ನು ಸುಲಭವಾಗಿ ಕಲಕುವಂತಹ ಕಥಾವಸ್ತುವನ್ನು ಮುಂದಿಡಲಾಗುತ್ತಿದೆ.

ಜನವರಿ 28ರಂದು ಬೆಳ್ಳಾವೆ ನರಹರಿ ಶಾಸ್ತ್ರಿ ವಿರಚಿತ ʼ ಮಿಸ್‌. ಸದಾರಮೆ ʼ ಮಂಜುನಾಥ ಬಡಿಗೇರ ಅವರ ನಿರ್ದೇಶನದಲ್ಲಿ ಪ್ರದರ್ಶನಗೊಳ್ಳಲಿದೆ. ಮೂಲ ಸ್ವರೂಪದಲ್ಲಿ ಸಾವಿರಾರು ಪ್ರದರ್ಶನಗಳನ್ನು ಕಂಡು, ಹೊರನಾಡಿನಲ್ಲೂ ಪ್ರಸಿದ್ಧಿ ಪಡೆದಿರುವ ಈ ಕಥಾ ಹಂದರಕ್ಕೆ ಸಮಕಾಲೀನ ಸ್ವರೂಪ ನೀಡಿರುವುದು ಕೆ. ವಿ. ಸುಬ್ಬಣ್ಣನವರು. ಪ್ರೀತಿ ಪ್ರೇಮದ ಮೂಲಕ ಬೆಸೆದುಕೊಳ್ಳುವ ಮನುಜ ಸಂಬಂಧಗಳು ಮನುಷ್ಯ ಸಮಾಜದ ಅಂತಸ್ತು ಮತ್ತು ಸ್ಥಾನಮಾನಗಳನ್ನು ಲೆಕ್ಕಿಸದೆ ರೂಪುಗೊಳ್ಳುತ್ತವೆ. ಹಾಗೆಯೇ ನಮ್ಮ ಸಾಮಾಜಿಕ ಪರಿಸರವು ಇಂತಹ ಬೆಸೆದ ಸಂಬಂಧಗಳನ್ನು ಪಲ್ಲಟಗೊಳಿಸುವ ಸನ್ನಿವೇಶಗಳನ್ನೂ ಸೃಷ್ಟಿಸುತ್ತದೆ. ಮುಗ್ಧ ಹುಡುಗಿ ಮತ್ತು ಸಿರಿವಂತಿಕೆಯ ರಾಜಕುಮಾರ ನಡುವೆ ಏರ್ಪಡುವ ಪ್ರೇಮ, ಬೇರ್ಪಡುವ ಸಂಬಂಧ ಮತ್ತು ಒಂದಾಗುವಿಕೆಯ ಎಳೆಯಲ್ಲಿ ರಚಿಸಲಾಗಿರುವ ಈ ನಾಟಕ ಹಾಸ್ಯ, ವಿಲಾಸ ಮತ್ತು ಸೂಕ್ಷ್ಮತೆಗಳನ್ನು ಒಳಗೊಂಡಿರುವುದರಿಂದ ರಂಗಪ್ರಯೋಗದ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತದೆ.

ಜನವರಿ 29ರ ರಂಗ ಉತ್ಸವದ ಸಮಾರೋಪದ ಭಾಗವಾಗಿ ಕೆ.ಬಿ. ಸಿದ್ಧಯ್ಯನವರ ಖಂಡ ಕಾವ್ಯ ʼದಕ್ಲಕಥಾ ದೇವಿ ಕಾವ್ಯʼವನ್ನು ರಂಗಪ್ರಯೋಗಕ್ಕೆ ಅಳವಡಿಸುತ್ತಿರುವವರು ನಿರ್ದೇಶಕ ಕೆ. ಪಿ. ಲಕ್ಷ್ಮಣ. ಪರಿಶಿಷ್ಟ ಜಾತಿಗಳಲ್ಲೊಂದಾದ ದಕ್ಲ ಸಮುದಾಯದ ನೋವು, ತುಮುಲ, ತಲ್ಲಣ ಮತ್ತು ಒಡಲಾಳದ ಬೇಗುದಿಯನ್ನು ಅಸ್ಪೃಶ್ಯತೆಯ ಆಚರಣೆಯ ನೆಲೆಯಲ್ಲಿ ನೋಡುವ ಮೂಲಕ ಕೆ. ಬಿ. ಸಿದ್ಧಯ್ಯನವರು ಜಾತಿ ವ್ಯವಸ್ಥೆಯ ಕ್ರೌರ್ಯ ಮತ್ತು ಸಮಾಜದ ನಿಷ್ಕ್ರಿಯ ಮೌನವನ್ನೂ ಹೊರಗೆಡಹುವುದನ್ನು ಈ ಮಹಾಕಾವ್ಯದಲ್ಲಿ ಗುರುತಿಸಬಹುದು. ಇಂದಿಗೂ ನೀರಿನ ಟ್ಯಾಂಕಿನಲ್ಲಿ ಮಲ ಸುರಿಯುವಷ್ಟು ಕ್ರೌರ್ಯವನ್ನು ಹೊತ್ತುಕೊಂಡು ತಿರುಗುತ್ತಿರುವ ಸಮಾಜವನ್ನು ಇಂತಹ ಕಥಾನಕಗಳು ತಿದ್ದುವುದೋ ಇಲ್ಲವೋ ಖಚಿತವಾಗಿ ಹೇಳಲಾಗುವುದಿಲ್ಲ. ಆದರೆ ಇದೇ ಸಮಾಜದೊಳಗೆ ಇರುವ ಮನುಜ ಸೂಕ್ಷ್ಮತೆಗಳನ್ನು ಕದಡುವುದಂತೂ ನಿಶ್ಚಿತ. ಈ ಹಿನ್ನೆಲೆಯಲ್ಲಿ ಈ ರಂಗಪ್ರಯೋಗವನ್ನು ವೀಕ್ಷಿಸಬೇಕಿದೆ.

ಮೈಸೂರಿನ ನಿರಂತರ ಫೌಂಡೇ಼ಷನ್‌ ಪ್ರಸ್ತುತಪಡಿಸುತ್ತಿರುವ ಈ ಐದು ದಿನಗಳ ರಂಗೋತ್ಸವಕ್ಕೆ ಹೆಚ್ಚು ಜನಸ್ಪಂದನೆ ದೊರೆಯಲಿ ಎಂಬ ಆಶಯದೊಂದಿಗೇ ಈ ಬರಹವೂ ಮೂಡಿಬಂದಿದೆ.

‍ಲೇಖಕರು Admin

January 23, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: