ಯು ಆರ್ ಅನಂತಮೂರ್ತಿ ಸಮೀಪ ದರ್ಶನ

 

 

ಯು.ಆರ್. ಅನಂತಮೂರ್ತಿ – ನಾನು ಕಂಡ ಹಾಗೆ

-ಹೊರೆಯಾಲ ದೊರೆಸ್ವಾಮಿ

 

 

ಕನ್ನಡ ಸಾಹಿತ್ಯ ಲೋಕದಲ್ಲಿ ಬಹಳಷ್ಟು ಕಾಲ ಚರ್ಚಾಸ್ಪದ ವ್ಯಕ್ತಿಯಾಗಿ ಉಳಿದಿದ್ದ ಪ್ರೊ. ಯು. ಆರ್. ಅನಂತಮೂರ್ತಿ ಒಬ್ಬ ಸೂಕ್ಷ್ಮ ಚಿಂತಕರಾಗಿದ್ದರು; ತಮ್ಮ ವ್ಯಕ್ತಿತ್ವದ ಹೆಗ್ಗಳಿಕೆಯನ್ನು ಎತ್ತಿ ಹಿಡಿಯುವ ವಾತಾವರಣವೊಂದನ್ನು ನೇಯುವಲ್ಲಿ ಬಲು ನಿಪುಣರೂ ಆಗಿದ್ದರು. ಚಿಕಿತ್ಸಿಕ ಮನೋಭಾವದ ಅವರು ತಮ್ಮ ವೈಚಾರಿಕ ನಿಲುವುಗಳಲ್ಲಿ ಅನೇಕ ಸಲ ದ್ವಂದ್ವಾತ್ಮಕ ನಡವಳಿಕೆಗಳಿಂದ ಟೀಕೆಗೆ ಒಳಗಾಗುತ್ತಿದ್ದರು. ಜಡತೆಯಲ್ಲೆ ಮಡುಗಟ್ಟಿದ್ದ ನಮ್ಮ ಸಮಾಜಕ್ಕೆ ಆಗಿಂದ್ದಾಗೆ ‘ಶಾಕ್’ ನೀಡಬೇಕು, ಇಲ್ಲದ್ದಿದ್ದರೆ ಸಮಾಜ ಇನ್ನಷ್ಟು ಜಡವಾಗುತ್ತದೆ ಎಂದು ನಂಬಿ, ಅದರಂತೆ ನಡೆದುಕೊಂಡವರು. ಅವರೊಂದು ರೀತಿ ವ್ಯವಸ್ಥೆಯಲ್ಲಿದ್ದುಕೊಂಡೇ ವ್ಯವಸ್ಥೆಯ ಬದಲಾವಣೆಯನ್ನು ಬಯಸಿದವರು! ಇದು ವಿರೋಧಾಭಾಸವು ಹೌದು, ವಾಸ್ತವಿಕಕ್ಕೆ ದೂರಗಾಮಿಯಾದುದು ಹೌದು.

ನಾನು 1967ರಿಂದ ಕೆಲವು ಕಾಲ ಅವರ ವಿದ್ಯಾರ್ಥಿಯಾಗಿ ಅನಂತರ ಮೈಸೂರಿನ ಸರಸ್ವತಿಪುರದ ಏಳನೆಯ ಮೇನ್‍ನಲ್ಲಿ ಏಳು ವರ್ಷಗಳ ಕಾಲ ಒಂದೇ ಬೀದಿಯ ವಾಸಸ್ಥನಾಗಿ, 1981ರಲ್ಲಿ ಮೂರು ತಿಂಗಳ ಕಾಲ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಅವರ ಮೂಲ ಮನೆ ಬೇಗುವಳ್ಳಿಯಲ್ಲಿ ವಾಸವಿದ್ದವನಾಗಿ (ಅವರ ಸಹೋದರರಾದ ಗುರುರಾಜ್, ಡಾ.ಅನಿಲ್ ಕುಮಾರ್ ತಾಯಿ ಸತ್ಯಭಾಮ ಇತರರೊಂದಿಗೆ), PUCL ಸಂಘಟನೆಯ ಒಡನಾಡಿಯಾಗಿ ಗತಿಸುವ ವರ್ಷದವರೆಗೂ ಬೆಂಗಳೂರು ಮತ್ತಿತ್ತರ ಕಡೆ ಸಂಪರ್ಕ ಹೊಂದಿದವನಾಗಿ – ಅವರನ್ನು ನಾನು ಕಂಡ ಬಗೆ-ಯ ಬಗ್ಗೆ ಕೆಲವೊಂದು ಅನಿಸಿಕೆಗಳನ್ನು ಪ್ರಾಮಾಣಿಕವಾಗಿ ಅನಾವರಣಗೊಳಿಸಲು ಪ್ರಸ್ತುತ ಲೇಖನದಲ್ಲಿ ಪ್ರಯತ್ನಿಸುತ್ತೆದ್ದೇನೆ.

ಅನಂತಮೂರ್ತಿಯವರನ್ನು ನಾನು ಮೊದಲ ಬಾರಿ ನೋಡಿದ್ದು 1967ರಲ್ಲಿ. ಆಗ ನಾನು ಮಹಾರಾಜ ಕಾಲೇಜಿನಲ್ಲಿ ಎರಡನೆಯ ಬಿ.ಎ ಓದುತ್ತಿದ್ದೆ. ಆ ಹೊತ್ತಿಗೆ ಅವರು ಬರ್ಮಿಂಗ್ ಹ್ಯಾಂನಿಂದ ‘ಪ್ರಜಾವಾಣಿ’ ದಿನಪತ್ರಿಕೆಯಲ್ಲಿ ಬರೆದಿದ್ದ ಒಂದು ಪತ್ರವನ್ನು ಓದಿದ್ದೆ ಮತ್ತು ಅದರ ವೈಚಾರಿಕ ಚಿಂತನೆಗಳ ಬಗ್ಗೆ ಕಿರಿದಾಗಿ ಕೇಳಿದ್ದೆ.

1967ನೆಯ ಇಸವಿ ದಸರ ಕವಿಗೋಷ್ಠಿ ಆ ವರ್ಷ ಮೈಸೂರು ಪುರಭವನದಲ್ಲಿ ನಡೆಯಿತು. ಸಾಮಾನ್ಯವಾಗಿ ಅಲ್ಲಿಯೇ ದಸರ ಕವಿಗೋಷ್ಠಿ ನಡೆಯುತ್ತಿದ್ದುದು. ಆ ದಿನದ ಕವಿಗೋಷ್ಠಿಯಲ್ಲಿ ಮಂಗಳೂರಿನ ಕವಿಗಳಾದ ಬಿ.ಎಂ.ಇದಿನಬ್ಬ ಭಾಗವಹಿಸಿದ್ದರು. ಅವರು ತಮ್ಮ ಎತ್ತರದ ಕಂಠಸಿರಿಯಲ್ಲಿ ‘ಎಲ್ಲಿಹುದು ಮಾನವತೆ. . ತುಂಬಿಹುದು ದಾನವತೆ’ ಎಂದು ಪ್ರಾರಂಭವಾಗುವ ಕವನವನ್ನು ಓದಿ, ಸಭಿಕರನ್ನು ಮಂತ್ರಮುಗ್ಧರನ್ನಾಗಿಸಿದರು. ಅದೇ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಪ್ರೊ. ಎಸ್. ವಿ. ಪರಮೇಶ್ವರ ಭಟ್ಟರು ತಮ್ಮ ಕವಿತೆ ಹಾಗೂ ಹಾಸ್ಯ ಕವಿತೆಗಳನ್ನು ಎಂದಿನ ತಮ್ಮ ಹಾವಭಾವಗಳೊಂದಿಗೆ ಓದಿ ಸಭಿಕರನ್ನು ಹಿಡಿದಿಟ್ಟರು.

ವಿಶೇಷವೆಂದರೆ – ಆದಿನ ಅನಂತಮೂರ್ತಿಯವರು ಬಂದಿದ್ದುದು. ಅವರು ತಮ್ಮ ಮಗುವೊಂದನ್ನು ತಳ್ಳುಗಾಡಿಯಲ್ಲಿ ಕೂರಿಸಿಕೊಂಡು, ಹೆಂಡತಿ ಎಸ್ತಾರವರೊಂದಿಗೆ ಪುರಭವನದ ಮುಂಭಾಗದಿಂದ ಬಂದರು. ಮೊದಲ ನೋಟದಲ್ಲಿ ತಮ್ಮ ಠಾಕುಠೀವಿಗಳಿಂದ ಸುತ್ತ ನೆರೆದಿದ್ದ ಜನರನ್ನು ಏಕ್‍ದಂ ಆಕರ್ಷಿಸಿದರು. ಸಿಗರೇಟು ಸೇದುತ್ತ ನಿರ್ಭಿಡೆಯಿಂದ ಪರಿಚಯದವರೊಂದಿಗೆ ಮಾತನಾಡುತ್ತ, ಸಾಂಪ್ರದಾಯಿಕ ಮನಸ್ಥಿತಿಯ ಮೈಸೂರಿಗರಿಗೆ – ಸಾಮಾನ್ಯವಾಗಿ ಅನಂತಮೂರ್ತಿಯವರು ಆಗಾಗ್ಗೆ ಹೇಳುತ್ತಿದ್ದ ಹಾಗೆ ‘ಶಾಕ್’ ನೀಡಿದರು. ಸಾಹಿತ್ಯ ವಿದ್ಯಾರ್ಥಿಯಾಗಿದ್ದ ನನಗೆ ಮತ್ತು ನನ್ನಂಥವರಿಗೆ ಅವರ ಬಗ್ಗೆ ಇನ್ನಿಲ್ಲದ ಕುತೂಹಲವುಂಟಾಯಿತು. ಅನಂತಮೂರ್ತಿಯವರನ್ನು ನೋಡುವ ಮತ್ತು ಮಾತನ್ನು ಕೇಳುವ ಅವಕಾಶ ಅದೇ ವರ್ಷ ಒದಗಿ ಬಂದಿತು.

ಎರಡನೆಯ ಬಿ.ಎ. ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಭಾಷಾ-ಸಾಹಿತ್ಯ ಕಡ್ಡಾಯವಾಗಿತ್ತು ಮತ್ತು ಪದ್ಯಗಳನ್ನು ಪ್ರೊ. ಆರ್. ಗುರುರಾಜರವರು ಬೋಧಿಸುತ್ತಿದ್ದರು. ವಿದ್ಯಾರ್ಥಿಗಳಿಗೆ ಮನದಟ್ಟಾಗುವ ಹಾಗೆ ಅವರ ಬೋಧನೆ ಇರುತಿತ್ತು. ಒಂದು ದಿನ ಅವರು ಅನಂತಮೂರ್ತಿಯವರಿಂದ ವಿದ್ಯಾರ್ಥಿಗಳಿಗಾಗಿ ವಿಶೇಷ ಉಪನ್ಯಾಸವೊಂದನ್ನು ಏರ್ಪಡಿಸಿದ್ದರು. ಎಂದಿನ ತಮ್ಮ ಠಾಕುಠೀಕಿನ ಶೈಲಿಯಲ್ಲಿ ಮಹಾರಾಜ ಕಾಲೇಜಿನ ಜೂನಿಯರ್ ಬಿ.ಎ. ಹಾಲ್‍ಗೆ ಬಂದ ಅವರು ವಿಲಿಯಂ ಬ್ಲೇಕ್ ನ ‘Tiger’ ಪದ್ಯವನ್ನು ಕುರಿತು ಕನ್ನಡದಲ್ಲಿ ವ್ಯಾಖ್ಯಾನಿಸಿ ಅದರ ಸೊಗಸನ್ನು ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಿಕೊಟ್ಟರು.

‘Tiger tiger burning bright’ ಎಂದು ಪ್ರಾರಂಭವಾಗುವ ಪದ್ಯವನ್ನು ವಿಭಿನ್ನ ಸ್ವರೋಚ್ಚಾರದಿಂದ (accent) ಓದಿ, ಇಂಗ್ಲಿಷ್ ಪದ್ಯ ಓದುವದರಲ್ಲೊಂದು ಭಿನ್ನ ಶೈಲಿ (style) ಅನ್ನು ವಿದ್ಯಾರ್ಥಿಗಳಾದ ನಮಗೆಲ್ಲ ಪರಿಚಯಿಸಿದರೆಂದೇ ಹೇಳಬೇಕು. ಅಲ್ಲಿ Tiger ಅನ್ನುವುದಕ್ಕೆ ‘ಹುಲಿ’ ಬದಲಾಗಿ ‘ವ್ಯಾಘ್ರ’ ಅನ್ನುವುದು ಹೆಚ್ಚು ಸೂಕ್ತವಾಗುತ್ತದೆ ಅಂತ ಅದರ ಒಳಾರ್ಥವನ್ನು ಬಿಡಿಸಿಟ್ಟರು. ‘ಹೊಳೆಯುವ ಕೆಂಪು ಕಣ್ಣುಗಳ ವ್ಯಾಘ್ರವೆ’ ಎಂದು ಪದ್ಯದ ಅನುವಾದವನ್ನು ಮುಂದುವರೆಸಿದರು. ಈ ಅನುವಾದ ಕವಿಯ ಮೂಲ ಭಾವನೆಗೆ ಹತ್ತಿರವಾಗುತ್ತದೆ ಎಂದು ಆ ಪದ್ಯದ ‘ದರ್ಶನ’ವನ್ನು ಮಾಡಿಸಿದರೆಂದೇ ಹೇಳಬಹುದು. ಒಂದು ಗಂಟೆ ಕಾಲದ ಅವರ ಉಪನ್ಯಾಸ ಮುಗಿದಿದ್ದೇ ನಮಗೆ ಗೊತ್ತಾಗಲಿಲ್ಲ. ಬೆಲ್ಲುಹೊಡೆದಾಗ ‘ಛೆ’ ಅಂದುಕೊಂಡೆವು.

ಬಿ.ಎ. ಆದನಂತರ ನಾನು ಕನ್ನಡ ಎಂ.ಎ ಓದಲು ಮಾನಸ ಗಂಗೋತ್ರಿಯ ಕನ್ನಡ ಅಧ್ಯಯನ ಸಂಸ್ಥೆಗೆ ಸೇರಿದೆ. ಆ ಸಮಯದಲ್ಲಿ (1968-1970) ಅನಂತಮೂರ್ತಿಯವರು ಮೈಸೂರಿನಲ್ಲಿದ್ದ ರೀಜನಲ್ ಕಾಲೇಜಿನಲ್ಲಿ ಇಂಗ್ಲಿಷ್ ಉಪನ್ಯಾಸಕರಾಗಿದ್ದರು. ಆನಂತರ ಮಾನಸ ಗಂಗೋತ್ರಿಯ ಇಂಗ್ಲಿಷ್ ವಿಭಾಗಕ್ಕೆ ಸೇರಿದರು. 1969-70ರಲ್ಲಿ ಅವರ ಕಾದಂಬರಿ ‘ಸಂಸ್ಕಾರ’ ಆಧಾರಿತ ಚಲನಚಿತ್ರ ಬಿಡುಗಡೆಯಾಯಿತು. ಬ್ರಾಹ್ಮಣ್ಯದ ಮೌಲ್ಯಗಳನ್ನು ಪ್ರಶ್ನಿಸುವ ಈ ಕಾದಂಬರಿ ಸಾಕಷ್ಟು ವಾದವಿವಾದಗಳಿಗೆ ಒಳಗಾಗಿತ್ತು. ಅದರ ವಿರುದ್ಧ ಕೆಲವೊಂದು ಪ್ರತಿಭಟನೆಗಳೂ ನಡೆದವು; ಪರ-ವಿರೋಧವಾದ ಲೇಖನಗಳೂ ಪತ್ರಿಕೆಗಳಲ್ಲಿ ಪ್ರಕಟಗೊಂಡವು. ರಾಜ್ಯವನ್ನು ಮೀರಿ ಹೊರನಾಡುಗಳಲ್ಲಿಯೂ ‘ಸಂಸ್ಕಾರ’ ಬೌದ್ಧಿಕ ವಲಯವನ್ನು ಆಕರ್ಷಿಸಿತು. ಬ್ರಾಹ್ಮಣ ಸಮುದಾಯವನ್ನು ಕೆರಳಿಸಿತು. ಈ ಎಲ್ಲ ಕಾರಣಗಳಿಂದಾಗಿ, ಅನಂತಮೂರ್ತಿಯವರಿಗೆ ಭರ್ಜರಿ ಪ್ರಚಾರ ಸಿಕ್ಕಿ, ರಾಜ್ಯದಲ್ಲಿ ಅವರೊಬ್ಬ ಆಕರ್ಷಣೆಯ ಕೇಂದ್ರಬಿಂದುವಾದರು.

ಕನ್ನಡ ಪ್ರಥಮ ಎಂ.ಎ ಅಲ್ಲಿ ನಮಗೆ ಪ್ರಬಂಧ ಸಾಹಿತ್ಯ ಒಂದು ವಿಷಯವಾಗಿತ್ತು. ಡಾ. ಎಲ್.ಬಸವರಾಜು ಅವರು ಅತ್ಯಾಕರ್ಷವಾಗಿ ಅದನ್ನು ಬೋಧಿಸುತ್ತಿದ್ದರು. ಒಂದುದಿನ ಅವರು ಅನಂತಮೂರ್ತಿಯವರಿಂದ ಪ್ರಬಂಧ ಸಾಹಿತ್ಯ ಕುರಿತು ಒಂದು ವಿಶೇಷ ಉಪನ್ಯಾಸವನ್ನು ಏರ್ಪಡಿಸಿದ್ದರು. ಮಧ್ಯಾಹ್ನ 2ರಿಂದ 3ರವರೆಗೆ ಉಪನ್ಯಾಸ ನಡೆಯಿತು ಮತ್ತು ಅದೊಂದು ಸಾಧಾರಣ ಉಪನ್ಯಾಸವಾಗಿತ್ತು. ಆನಂತರ ನಡೆದ ಸಾಮಾನ್ಯ ಚರ್ಚೆಯಲ್ಲಿ ಡಾ.ಎಲ್. ಬಸವರಾಜು ಅವರು ಅನಂತಮೂರ್ತಿಯವರನ್ನು ‘ಈಗ ನೀವು ಹೊಸದಾಗಿ ಏನು ಬರಿತಿದ್ದೀರಿ?’ ಅಂತ ಕೇಳಿದಾಗ ಅವರು ‘ಏನೂ ತೋಚ್ತಾಯಿಲ್ಲ’ ಅಂತ ವಿನಮ್ರವಾಗಿ ಹೇಳಿದರು. ತಕ್ಷಣ ಡಾ.ಎಲ್. ಬಸವರಾಜು ಅವರು ವಿದ್ಯಾರ್ಥಿಗಳ ಕಡೆ ತಿರುಗಿ ‘ನೋಡಿ, ಅನಂತಮೂರ್ತಿಯವರಿಗೆ ಬರೆಯುವುದಕ್ಕೆ ಏನು ತೋಚ್ತಾಯಿಲ್ಲ ಅಂತ ಪ್ರಾಮಾಣಿಕವಾಗಿ ಹೇಳಿದ್ದಾರೆ. ನಾವಾದರೆ, ಬರಲಿರುವ ಪುಸ್ತಕಗಳ ಒಂದು ದೊಡ್ಡ ಪಟ್ಟಿಯನ್ನೇ ಕೊಟ್ಟುಬಿಡುತ್ತಿದ್ದೊ’ ಅಂತ ಹೇಳಿ ಅವರ ವಿನಮ್ರತೆಯನ್ನು ಶ್ಲಾಘಿಸಿದರು.

1969. ಮೋಹನದಾಸ ಕರ್ಮಚಂದ ಗಾಂಧಿಯವರ ಶತಮಾನೋತ್ಸವ. ಆ ವರ್ಷ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಭಾರತೀಯ ಭಾಷೆಗಳಲ್ಲಿ ಗಾಂಧಿ ಕುರಿತ ರಾಷ್ಟ್ರಮಟ್ಟದ ವಿಚಾರ ಸಂಕಿರಣವೊಂದನ್ನು ಏರ್ಪಡಿಸಲಾಗಿತ್ತು. ಅದರಲ್ಲಿ ಕನ್ನಡದ ಪರವಾಗಿ ಡಾ.ವಿ.ಕೃ.ಗೋಕಾಕ, ಅನಂತಮೂರ್ತಿ ಸಂಸ್ಕøತದ ಪರವಾಗಿ ಪ್ರೊ.ವಿ.ರಾಘವನ್ ಮೊದಲಾದವರು ಭಾಗವಹಿಸಿದ್ದರು. ಹಾಗೆಯೇ ಭಾರತದ ಬೇರೆ ಬೇರೆ ಭಾಷೆಯ ವಿದ್ವಾಂಸರು ಭಾಗವಹಿಸಿದ್ದರು. ಆ ದಿನಗಳಲ್ಲಿ ಪರಮ ಗಾಂಧಿಯನುಯಾಯಿಯಾಗಿದ್ದ ನಾನು ಆ ವಿಚಾರಗೋಷ್ಠಿಯಲ್ಲಿ ಪ್ರೇಕ್ಷಕನಾಗಿ ಭಾಗವಹಿಸಿದ್ದೆ.

ಅನಂತಮೂರ್ತಿಯವರ ಪ್ರಬಂಧ ಕನ್ನಡ ಭಾಷೆಯಲ್ಲಿ ಲಭ್ಯವಾಗುವ ಸಮಗ್ರ ಗಾಂಧಿ ಕುರಿತ ಸಾಹಿತ್ಯವನ್ನು ವಿವರಿಸಲು ಸಾಧ್ಯವಾಗಲಿಲ್ಲ ಅಂತಲೇ ನನ್ನ ಅನಿಸಿಕೆ. ಪ್ರೇಕ್ಷಕರಾಗಿ ಬಂದಿದ್ದ ಇನ್ನು ಕೆಲವರು ‘ಕನ್ನಡದಲ್ಲಿ ಗಾಂಧಿ ಸಾಹಿತ್ಯ’ದ ಬಗ್ಗೆ ಮಾತನಾಡಲು ಅನಂತಮೂರ್ತಿಯವರು ಎಷ್ಟು ಅರ್ಹರು ಎಂಬ ಅಸಮಾಧಾನವೂ ಇತ್ತು. ಚರ್ಚಾಗೋಷ್ಠಿ ಇಂಗ್ಲಿಷಿನಲ್ಲಿತ್ತು.

ಕನ್ನಡ ಎಂ.ಎ ಅನ್ನು 1970ರಲ್ಲಿ ಮುಗಿಸಿದ ನಾನು ಕನ್ನಡ ಅಧ್ಯಯನ ಸಂಸ್ಥೆಯಲ್ಲೇ ಸಹಾಯಕ ಸಂಶೋಧಕನಾಗಿ ಕೆಲಸಕ್ಕೆ ಸೇರಿದೆನು. ಆ ಹೊತ್ತಿಗಾಗಲೆ ನಾನು ಕೃಷ್ಣಮೂರ್ತಿಪುರದಿಂದ ಸರಸ್ವತಿಪುರಕ್ಕೆ ನನ್ನ ವಾಸಸ್ಥಳವನ್ನು ಬದಲಾಯಿಸಿದ್ದೆ. 1970ರ ಜೂಲೈನಿಂದ ಸರಸ್ವತಿಪುರದ ಏಳನೆಯ ಮುಖ್ಯ ರಸ್ತೆಯ ಮೂಲೆಮನೆಯಲ್ಲಿ ಒಂದು ದೊಡ್ಡ ರೂಮನ್ನು ಬಾಡಿಗೆಗೆ ಹಿಡಿದೆ. (ಬಾಡಿಗೆ ತಿಂಗಳಿಗೆ 25ರೂ) ಅನಂತಮೂರ್ತಿಯವರ ಮನೆ ಅದೇ ಬೀದಿಯಲ್ಲಿ ನಾಲ್ಕನೆಯದಾಗಿತ್ತು. ಸುಮಾರು ಏಳು ವರ್ಷಗಳ ಕಾಲ ನಾನು ಆ ರೂಮಿನಲ್ಲಿದ್ದೆ. ಮತ್ತು ಅನಂತಮೂರ್ತಿಯವರೂ ಅಲ್ಲೇ ವಾಸವಿದ್ದರು. ಇದೂ ಒಂದು ಕಾರಣವಾಗಿ ನಮ್ಮಿಬ್ಬರ ಪರಿಚಯ ಹೆಚ್ಚುತ್ತಾ ಹೋಯಿತು. ಅಲ್ಲದೆ ನಾನು 1971-72ರಲ್ಲಿ ಗಂಗೋತ್ರಿಯ ಇಂಗ್ಲಿಷ್ ವಿಭಾಗ ಸಂಜೆ ಹೊತ್ತು ನಡೆಸುತ್ತಿದ್ದ P.G. Diploma in English ತರಗತಿಗೆ ಸೇರಿದೆ. ಅನಂತಮೂರ್ತಿಯವರು ಆಗ ಕೆಲವು ತರಗತಿಗಳನ್ನು ತೆಗೆದುಕೊಳ್ಳುತ್ತಿದ್ದರು. ಹೀಗಾಗಿ ಗುರು-ಶಿಷ್ಯ ಸಂಬಂಧ ಗಟ್ಟಿಯಾಯಿತು. ಅದೂ ಅಲ್ಲದೆ ಸರಸ್ವತಿಪುರದ ಈಜುಕೊಳದ ರಸ್ತೆಯಲ್ಲೇ ಇದ್ದ ‘ಸಮತೆಂತೋ’ ಹವ್ಯಾಸಿ ರಂಗತಂಡದ ನಾಟಕಗಳಿಗೆ ಸಾಮಾನ್ಯವಾಗಿ ನಾನು ಹೋಗುತ್ತಿದ್ದೆ. ಅವರೂ ಬರುತ್ತಿದ್ದರು. ಅವರು ಆ ತಂಡದ ಬಳಗದಲ್ಲಿದ್ದರು.

1973. ಮಾನಸಗಂಗೋತ್ರಿಯಲ್ಲಿ ವಿವಿ.ನಿಲಯದ ಅಕ್ರಮಗಳ ವಿರುದ್ಧ (ಸೀಟು ಹಂಚಿಕೆ) ಒಂದು ದೊಡ್ಡ ಹೋರಾಟವೆ ನಡೆಯಿತು. ಆ ಸಂದರ್ಭದಲ್ಲಿ ಹೋರಾಟದ ಮುಂದಾಳತ್ವ ಹೊಂದಿದ್ದ ಬಾಟನಿ ವಿಭಾಗದ ಡಾ.ಎ.ರಾಮಲಿಂಗಂ ಮತ್ತಿತರೊಂದಿಗೆ ಅನಂತಮೂರ್ತಿಯವರು ಗುರುತಿಸಿಕೊಳ್ಳದಿದ್ದರೂ, ಮೈಸೂರು ವಿ.ವಿ. ನಿಲಯದ ಅಂದಿನ ಕುಲಪತಿಗಳಾಗಿದ್ದ ಪ್ರೊ. ದೇ. ಜವರೇಗೌಡ ವಿರುದ್ಧ ಅವರ ಸಿಟ್ಟು ಮತ್ತು ಅಸಮಧಾನ ಇತ್ತು. ಒಂದು ಮಧ್ಯಾಹ್ನ 1.30ರ ಸಮಯದಲ್ಲಿ ನಾನು ಅಧ್ಯಯನ ಸಂಸ್ಥೆಯಿಂದ ಹೊರಬಂದು, ಎದುರಿಗಿದ್ದ ಕ್ಯಾಂಟೀನ್‍ನತ್ತ ಹೋಗುತ್ತಿದ್ದಾಗ, ಅನಂತಮೂರ್ತಿ ಸಿಕ್ಕರು. ಬಳಿಯಲ್ಲೇ ಗಂಗೋತ್ರಿಯ ತೋಟಗಾರಿಕಾ ಇಲಾಖೆಯವರು ಬೆಳೆದಿದ್ದ ಸೊಗಸಾದ ಮೊಗರು ಬದನೆಕಾಯಿಯನ್ನು ಮಾರುವುದಕ್ಕೆ ಇಟ್ಟಿದ್ದರು. ಅನಂತಮೂರ್ತಿಯವರು ಆ ರಾಶಿಯನ್ನು ನೋಡುತ್ತ ‘ಈ ಜವರೇಗೌಡ ಇದಾನಲ್ಲ ಒಳ್ಳೆ ಬದನೆಕಾಯಿ ಬೆಳೆಯೋದಕ್ಕೆ ಲಾಯಕ್ಕು’ ಅಂತ ಸಣ್ಣಗೆ ನಕ್ಕು, ಆಮೇಲೆ ಒಂದಿಷ್ಟು ಬದನೆಕಾಯಿ ಕೊಂಡುಕೊಂಡರು.

1974ರಲ್ಲಿ ನಾನು ‘ನಾಲಿಗೆ ಅಕ್ಸರಕೆ ಒದುಗವ್ವ’ ಎಂಬ ಜನಪದ ಕಥನ ಕಾವ್ಯಗಳ ಕೃತಿಯನ್ನು ಪ್ರಕಟಿಸಿದೆ. ಅದರ ಒಂದು ಪ್ರತಿಯನ್ನು ಅನಂತಮೂರ್ತಿಯವರಿಗೆ ನೀಡಿದೆ. ಕೃತಿಯ ಶೀರ್ಷಿಕೆ ಮತ್ತು ವಸ್ತುವಿನ ಬಗ್ಗೆ ಮೆಚ್ಚುಗೆ ಸೂಚಿಸಿದರು ಮತ್ತು ಅಮೆರಿಕದ ಏಷ್ಯದ ಅಧ್ಯಯನ ಕೇಂದ್ರದ ನಿದೇರ್ಶಕರಾಗಿದ್ದ ಎ.ಕೆ. ರಾಮಾನುಜಮ್ ಅವರಿಗೆ ಪ್ರತಿಯೊಂದನ್ನು ಕಳಿಸಲು ಹೇಳಿದರು.

1974ರಲ್ಲಿ ಕರ್ನಾಟಕದಾದ್ಯಂತ ಆಹಾರ ಧಾನ್ಯಗಳ ಕೊರತೆಯುಂಟಾಗಿ ಮುಖ್ಯವಾಗಿ ಅಕ್ಕಿ ಸಿಗುವುದು ದುರ್ಲಭವಾಯಿತು. ಅನಂತಮೂರ್ತಿಯವರು ‘ಇಂಥ ಸಮಯದಲ್ಲಿ ಜನ ದಂಗೆ ಏಳಬೇಕು’ ಅಂತ ಅಭಿಪ್ರಾಯ ಹೊಂದಿದ್ದರು ಮತ್ತು ಮೈಸೂರು ಮತ್ತು ರಾಜ್ಯದ ಕೆಲವಾರು ಕಡೆ ಅಂಗಡಿಗಳು, ಅಕ್ಕಿಗಿರಣಿಗಳ ಲೂಟಿ ನಡೆದಾಗ ಅದನ್ನು ಸ್ವಾಗತಿಸಿದರು. ಆದರೆ, ಆ ಪರಿಸ್ಥಿತಿ ಬಹುಬೇಗ ಹೊರಟುಹೋಯಿತು. ದಿನಜೀವನ ಮಾಮೂಲಿಯಾಯಿತು.

ಅದೇ ಸಮಯದಲ್ಲಿ ಒಂದು ದಿನ ಅನಂತಮೂರ್ತಿಯವರು ಸರಸ್ವತಿಪುರದ ಈಜುಕೊಳದ ರಸ್ತೆಯಲ್ಲಿ ಸೈಕಲ್ ಸವಾರಿ ಮಾಡಿಕೊಂಡು ಬಂದು, ಮನೆ ಹತ್ತಿರದಲ್ಲೇ ಇದ್ದ ಚಂದ್ರು ಎಂಬುವವನ ಅಂಗಡಿಗೆ ಬಂದು ವಿಲ್ಸ್ ಸಿಗರೇಟು ಕೇಳಿದರು. ಅಂಗಡಿಯವನು ‘ಇಲ್ಲ’ ಅಂದ. ‘ಹೋಗಲಿ, ಬ್ರಿಸ್ಟಾಲ್ ಕೊಡು’ ಅಂದರು. ಅದೂ ‘ಇಲ್ಲ’ ಅಂದ. ‘ಅದೂ ಇಲ್ವ? ಹಾಗಾದ್ರೆ ಒಂದು ಗಣೇಶ ಬೀಡಿಕಟ್ಟು ಕೊಡು’ ಅಂದರು. ಅಂಗಡಿಯವನು ಕೊಟ್ಟ. ಬೀಡಿ ಹಚ್ಚಿಸಿಕೊಂಡು ಹೊಗೆ ಬಿಡುತ್ತ, ಪಕ್ಕದಲ್ಲೇ ಇದ್ದ ನನ್ನತ್ತ ‘ಏಯ್ ಹೊರೆಯಾಲ, ಈ ಬೀಡಿ ಮುಂದೆ ಯಾವ ಸಿಗರೇಟು ಇಲ್ಲ ಕಣೊ’ ಅಂದರು. ಬ್ರಿಸ್ಟಾಲ್ ಸಿಗರೇಟ್ ಹವ್ಯಾಸಿಯಾದ ನಾನು, ಹೌದೆಂಬಂತೆ ತಲೆಯಾಡಿಸಿದೆ. ಮೇಷ್ಟರು, ಬೀಡಿ ಸೇದುತ್ತ ಸೈಕಲ್ ಹತ್ತಿ ಮನೆಯ ಕಡೆ ತಿರುಗಿದರು.

ಅನಂತಮೂರ್ತಿ ಮತ್ತು ನಾನು ಕೆಲವಾರು ಬಾರಿ ಸಮಾಜ-ಸಂಸ್ಕøತಿ-ರಾಜಕೀಯ ಇತ್ಯಾದಿ ವಿಷಯಗಳ ಬಗ್ಗೆ ಮಾತನಾಡುತ್ತಿದ್ದೆವು. ಹಾಗೊಂದು ದಿನ ಮಾತನಾಡುತ್ತಿದ್ದಾಗ, ತೀರ ಬೇಸರ ಹೊಂದಿದ್ದ ಅವರು ‘ನೋಡು, ಈ ದೇಶದಲ್ಲಿ ಯಾವ ಕ್ರಾಂತಿನು ಆಗೊಲ್ಲ. ಇಲ್ಲಿ ಮಣ್ಣಿಗೆ ಆ ಗುಣವೆ ಇಲ್ಲ. ಅದಕ್ಕೆ ಜನವೂ ಹಾಗೆಯೇ ಇದಾರೆ’ ಅಂತ ಹೇಳಿದರು. 1974ರಲ್ಲಿ ಅವರು ಹೇಳಿದ ಮಾತು ಇಂದಿಗೂ ನನ್ನಲ್ಲಿ ಅನುರಣಿಸುತ್ತಲೇ ಇದೆ. ಬದಲಾವಣೆ ತರಬೇಕು. ಸಮಾಜಕ್ಕೆ ಆಗಾಗ್ಗೆ ‘ಶಾಕ್’ ಕೊಡುತ್ತಿರಬೇಕೆಂಬ ಅವರ ಅನಿಸಿಕೆಗಳು ಜಡಗಟ್ಟಿದ ಸಮಾಜದಿಂದ ನಾವು ಹೊರಬರಬೇಕೆಂಬುದರ ಆಶಯವೇ ಆಗಿತ್ತು. ಆದರೆ, ನಮ್ಮ ದೇಶ ಹೊಸತನವನ್ನು ಮೇಲ್ಪದರದಲ್ಲಿ ಕಂಡರೂ ಅಂತರಂಗದಲ್ಲಿ ಹಳೆಯದರದಲ್ಲೇ ಹೆಚ್ಚೆಚ್ಚು ಸಂತೃಪ್ತಿ ಪಡೆಯುತ್ತಿರುವುದು ವಿರೋಧಾಭಾಸವೂ ಹೌದು; ವಿಷಾದವೂ ಹೌದು.

ತುರ್ತು ಪರಿಸ್ಥಿತಿ ಕಾಲದಲ್ಲಿ (1975-77) ಅನಂತಮೂರ್ತಿಯವರು ಆತಂಕಕ್ಕೊಳಗಾಗಿದ್ದರು. ಆ ಸಂದರ್ಭದಲ್ಲಿ ಆರ್.ಎಸ್.ಎಸ್. ಬೆಂಬಲ ವತಿಯಿಂದ ಉಜಿರೆಯಲ್ಲಿ ನಡೆದ ಒಂದು ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿ, ತಮ್ಮ ಪ್ರತಿಭಟನೆಯನ್ನು ದಾಖಲಿಸಿದರು. ಅನ್ಯಾಯದ ವಿರುದ್ಧ ಯಾರೇ ಪ್ರತಿಭಟನೆಯನ್ನು ನಡೆಸಿದರೂ ಅದರೊಂದಿಗೆ, ಆ ಕಾರಣಕ್ಕಾಗಿ ಬೆರೆಯುವುದು ಉತ್ತಮವೆಂದು ಅವರು ನಂಬಿದ್ದರು. ಆ ಬಗ್ಗೆ ಭಿನ್ನಾಭಿಪ್ರಾಯಗಳೂ ಮೂಡಿಬಂದವು. ಅವುಗಳಿಂದ ಅವರೇನು ವಿಚಲಿತರಾಗಲಿಲ್ಲ.

1976ರಲ್ಲಿ ನಾಟಕದ ಪ್ರಸನ್ನ ಅವರು ಮೈಸೂರಿನಲ್ಲಿ ‘ಸಮುದಾಯ’ ನಾಟಕ ತಂಡದ ಶಾಖೆಯನ್ನು ಪ್ರಾಂಭಿಸಿ, ಆ ಮೂಲಕ ‘ತಾಯಿ’ ನಾಟಕವನ್ನು ಆಡಿಸಲು ಪ್ರಯತ್ನ ನಡೆಸಿದರು. ಮೈಸೂರಿನಲ್ಲಿ ಒಡನಾಡಿ ನಾರಾಯಣ ಅದರ ಮುಂದಾಳತ್ವ ವಹಿಸಿಕೊಂಡಿದ್ದರು. ನಾರಾಯಣ ಅವರು ಚೆನ್ನಾಗಿ ಜನಸಂಪರ್ಕ ಹೊಂದಿದ್ದರು ಮತ್ತು ಮೈಸೂರು ‘ಸಮುದಾಯ’ದ ಸ್ಥಾಪನಾ ಸಭೆ ಮಾನಸ ಗಂಗೋತ್ರಿಯ ಬಯಲು ರಂಗಮಂದಿರದಲ್ಲಿ ನಡೆಯಿತು. ಆ ಸಭೆಗೆ ಕಿಕ್ಕೇರಿ ನಾರಾಯಣ, ವಿಶ್ವನಾಥ ಮಿರ್ಲೆ, ರಾಮೇಶ್ವರಿ ವರ್ಮ, ಬಾಲಗೋಪಾಲ ವರ್ಮ, ಅಬ್ದುಲ್ ರೆಹಮಾನ್ ಪಾಷ, ಲಿಂಗದೇವರು ಹಳೆಮನೆ, ನಾನೂ ಸೇರಿದಂತೆ ಹತ್ತು ಜನ ಭಾಗವಹಿಸಿದ್ದೆವು.

ಸಭೆಯಲ್ಲಿ ‘ತಾಯಿ’ ನಾಟಕವನ್ನು ಪ್ರಸನ್ನ ಅವರು ಮೊದಲೇ ಗೊತ್ತು ಮಾಡಿದಂತೆ ನಿರ್ದೇಶಿಸುವುದೆಂದು ತೀರ್ಮಾನವಾಯಿತು. ನಾನೂ ಸೇರಿದಂತೆ ನಟ-ನಟಿಯರ ದೊಡ್ಡ ಗುಂಪೇ ಆ ನಾಟಕದಲ್ಲಿತ್ತು. ಮೊದಲು, ನಾಟಕದ ಒಂದು ಸಣ್ಣ ಪಾತ್ರಕ್ಕೆ ಆಯ್ಕೆಯಾದ ನಾನು ರಂಗಪ್ರದರ್ಶನದ ದಿನ ಎಂಟು ಪಾತ್ರಗಳನ್ನು ಮಾಡಿದ್ದೆ. ನನ್ನ ನಟನಾಸಾಮರ್ಥ್ಯವನ್ನು ಪ್ರಕಾಶಿಸಿದ ಪ್ರಸನ್ನ ಅವರಿಗೆ ಕೃತಜ್ಞತೆಗಳು ಸಲ್ಲಬೇಕು. ಈ ರಂಗತಂಡದಲ್ಲಿ ಎಸ್ತಾರ್ ಅನಂತಮೂರ್ತಿಯವರು ಕಟುಕನ ಹೆಂಡತಿಯಾಗಿ ಪಾತ್ರ ನಿರ್ವಹಿಸಿದ್ದರು. ರಂಗ ತಾಲೀಮಿಗೆ ಎಸ್ತಾರ್ ಅವರ ಜೊತೆ ಅನಂತಮೂರ್ತಿಯವರೂ ದಿನ ಬರುತ್ತಿದ್ದರು. ರಂಗ ನಟ – ನಟಿಯರಿಗೆ ಬೆಂಬಲ ನೀಡುತ್ತಿದ್ದರು. ಅದೂ ಅಲ್ಲದೆ ಎಸ್ತಾರ್ ಅವರು 1981ರಲ್ಲಿ ವಿ. ರಾಮಮೂರ್ತಿ ಅವರ ನಿರ್ದೇಶನದ ‘ಗೌತಮಬುದ್ಧ’ದಲ್ಲಿ (ರಚನೆ: ಬಿ. ಪುಟ್ಟಸ್ವಾಮಯ್ಯ) ಅಭಿನಯಿಸಿದರು. ನಾನು ಅದೇ ನಾಟಕದಲ್ಲಿ ದೇವದತ್ತನಾಗಿ ಅಭಿನಯಿಸಿದ್ದೆ. ಅಲ್ಲಿಗೂ ಅನಂತಮೂರ್ತಿಯವರು ಆಗಾಗ ಬಂದು ಹೋಗುತ್ತಿದ್ದರು.

1978ರಲ್ಲಿ ಅನಂತಮೂರ್ತಿಯವರು ನಾನು ಕನ್ನಡಕ್ಕೆ ಅನುವಾದಿಸಿದ ‘ಚೀನಿ ಜನತೆಯ ಪದ್ಯಗಳು’ ಎಂಬ ಕೃತಿಯನ್ನು ಬಿಡುಗಡೆ ಮಾಡಿದರು. ಆಗ ನಾನು ಇಂಡಿಯ-ಚೈನಾ ಪೀಪಲ್ಸ್ ಫ್ರೆಂಡ್‍ಶಿಪ್ ಅಸೋಷಿಯೇಷನ್’ (ಇಕ್ಫಾ)ದ ಕಾರ್ಯದರ್ಶಿ ಆಗಿದ್ದೆನು. ಜಂಟಿ ಕಾರ್ಯದರ್ಶಿಯೂ ಆಗಿದ್ದ ಚ. ಸರ್ವಮಂಗಳ ಅವರು ಆ ಕಾರ್ಯಕ್ರಮವನ್ನು ನಿಯೋಜಿಸಿದ್ದರು. ಅನಂತಮೂರ್ತಿಯವರು ಹೋರಾಟದ ಪದ್ಯಗಳನ್ನು ಚರ್ಚಿಸಿದರು. ಕಾರ್ಯಕ್ರಮ ಮೈಸೂರಿನ ಶಿವರಾಂಪೇಟೆಯಲ್ಲಿರುವ ವಾಸವಿ ಕಲ್ಯಾಣ ಮಂಟಪದಲ್ಲಿ ನಡೆಯಿತು.

1981ರ ಮಾರ್ಚ್, ಏಪ್ರಿಲ್, ಮೇ ತಿಂಗಳಲ್ಲಿ ನಾನು ಅನಂತಮೂರ್ತಿಯವರ ಮೂಲಮನೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಬೇಗುವಳ್ಳಿಯ ಮನೆಯಲ್ಲಿದ್ದೆ. ಅವರ ಕಿರಿಯ ಸಹೋದರರಾದ ಗುರುರಾಜ, ಡಾ.ಅನಿಲ್‍ಕುಮಾರ್ ಅವರ ಒಡನಾಟ ನನ್ನನ್ನು ಅಲ್ಲಿಗೆ ಕರೆದೊಯ್ದಿತ್ತು. ಅನಂತಮೂರ್ತಿಯವರ ತಾಯಿ ಮತ್ತು ಮನೆಯವರು ಅತಿಥಿಯಾಗಿದ್ದ ನನ್ನನ್ನು ಅತ್ಯಂತ ಆದರದಿಂದ ನೋಡಿಕೊಂಡರು ಎಂದು ಒಂದೇ ಮಾತಿನಲ್ಲಿ ಹೇಳಲಿಚ್ಛಿಸುತ್ತೇನೆ. ಅನಂತರವೂ ಮೂರು-ನಾಲ್ಕು ಬಾರಿ ನಾನು ಅಲ್ಲಿಗೆ ಹೋಗಿದ್ದೇನೆ. ಅಲ್ಲೇ ನಾನು ರೈತನಾಯಕ ಕಡಿದಾಳ್ ಶಾಮಣ್ಣನವರ ನೇತೃತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಎರಡನೆಯ ಹಂತದ ಹೋರಾಟದಲ್ಲಿ ಭಾಗವಹಿಸಿ ತೀರ್ಥಹಳ್ಳಿಯ ಜೈಲು ಸೇರಿದುದು. (ವಿವರಗಳಿಗೆ ನೋಡಿ: ‘ಗೊಂಚಲು’ ಪ್ರ: ಕನ್ನಡ ಪುಸ್ತಕ ಪ್ರಾಧಿಕಾರ, ಪ್ರ.ಮು.2009, ಪುಟ: 100-109)

1982-83ರ ರಾಜ್ಯಾದಂತ ಗೋಕಾಕ ಭಾಷಾಚಳುವಳಿಯಲ್ಲಿ ಭಾಗವಹಿಸಲಿಲ್ಲವಾದರೂ ಮೈಸೂರಿನಲ್ಲಿ ಕನ್ನಡ ಮಾಧ್ಯಮ ಹೋರಾಟ ಸಮಿತಿಯ ವತಿಯಿಂದ ನಡೆಸಿದ ಸಾರ್ವಜನಿಕ ಸಭೆಯಲ್ಲಿ ಭಾವಹಿಸಿ, ಕನ್ನಡ ಭಾಷೆ ಮಾಧ್ಯಮದ ಬಗ್ಗೆ ತಮ್ಮ ಖಚಿತ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ‘ಪ್ರೌಢಶಾಲೆಯ ಹತ್ತನೆಯ ತರಗತಿಯವರೆಗೆ ಕನ್ನಡವೇ ಭಾಷಾ ಮಾಧ್ಯಮವಾಗಿರಬೇಕು’ – ಅನಂತಮೂರ್ತಿ (ನೋಡಿ: ‘ಗೊಂಚಲು’ ಪ್ರ: ಕನ್ನಡ ಪುಸ್ತಕ ಪ್ರಾಧಿಕಾರ, ಪ್ರ.ಮು.2009, ಪುಟ: 31-38). ಆದರೂ ಅವರ ಪ್ರಕಾರ ಗೋಕಾಕ್ ಚಳುವಳಿ ಫ್ಯಾಸಿಸ್ಟ್ ರೂಪದ ಜನಪ್ರಿಯ ಚಳುವಳಿ.

ಅವರ ಈ ಅಭಿಪ್ರಾಯ – ಕನ್ನಡನಟ ರಾಜ್‍ಕುಮಾರ್ ಚಳುವಳಿಯಲ್ಲಿ ಭಾಗವಹಿಸಿದ್ದ ನಂತರದ್ದು. ಒಂದು ರೀತಿ ಸಾಮೂಹಿಕಸನ್ನಿ ಮನಸ್ಥಿತಿಯದು. ಹಿಂಸಾತ್ಮಕ ಘಟನೆಗಳಾದವು. ಆ ಸಂದರ್ಭದಲ್ಲಿ ರಾಜಕಾರಣಿ ಎ.ಕೆ.ಸುಬ್ಬಯ್ಯ ಅವರು ಬೆಂಗಳೂರಿನಲ್ಲಿ ರಾಜ್‍ಕುಮಾರ್ ವಿರುದ್ಧ ಅಂದರೆ ‘ಜನಪ್ರಿಯ’ ಚಳುವಳಿ ವಿರುದ್ಧದ ಮೆರವಣಿಗೆಯನ್ನು ತೆಗೆದರು. ಬೆಂಗಳೂರಿನ ಟ್ಯಾಂಕ್‍ಬಂಡ್ ರಸ್ತೆಯಮೇಲೆ (ಕೆರೆ ದಂಡೆಯ ಮೇಲೆ) ತೆಗೆದ ಆ ಮೆರವಣಿಗೆಯಲ್ಲಿ ಅನಂತಮೂರ್ತಿಯವರು ಭಾಗವಹಿಸಿ, ‘ಜನಪ್ರಿಯ’ ಚಳುವಳಿಯ ವಿರುದ್ಧ ತಮ್ಮ ಪ್ರತಿಭಟನೆಯನ್ನು ರುಜುವಾತುಪಡಿಸಿದರು.

ಆ ಮೆರವಣಿಗೆಯಲ್ಲಿ ಸುಮಾರು 150 ಪ್ರತಿಭಟನಾಕಾರರು ಭಾಗವಹಿಸಿದ್ದರೆಂದು ಪತ್ರಿಕೆಗಳಲ್ಲಿ ವರದಿಯಾಗಿತ್ತು. ರಾಜ್‍ಕುಮಾರ್‍ರವರ ಜನಪ್ರಿಯತೆಯ ನಡುವೆಯೂ ‘ಫ್ಯಾಸಿಸ್ಟ್’ ಧೋರಣೆ ವಿರೋಧಿಸಿ, ನಡೆಸಿದ ಅಂದಿನ ಮೆರವಣಿಗೆ ಕೆಲವು ವಾದವಿವಾದಗಳಿಗೆ ಎಡೆಮಾಡಿಕೊಟ್ಟರೂ, ಅದರ ಸಂಘಟಕರ ಧೈರ್ಯವನ್ನು ಮೆಚ್ಚಿದವರೂ ಇದ್ದರು.

ಹೀಗೆ, ಅನಂತಮೂರ್ತಿಯವರೊಂದಿಗೆ ಹತ್ತಿರದ ಒಡನಾಟವಿದ್ದಿತಾದರೂ ಒಂದು ರೀತಿಯ ಮಾನಸಿಕ ದೂರವೂ ಇದ್ದಿತು. ಅವರದು ದ್ವಂದ್ವಾತ್ಮಕ ನಿಲುವುಗಳೆಂದು ಅಂದಿನ ದಿನಗಳಲ್ಲಿ ಜನಜನಿತವಾಗಿತ್ತು. ಯಾವುದೇ ಸಮಸ್ಯೆಗೆ ಸಿಕ್ಕಿಹಾಕಿಕ್ಕೊಳ್ಳದೆ ಜಾರಿಕೊಳ್ಳುತ್ತಿದ್ದರು ಎಂಬ ಆರೋಪಗಳಿದ್ದರೂ ಕೆಲವೊಮ್ಮೆ ಧೈರ್ಯವಾಗಿ ಪ್ರತಿಭಟಿಸುತ್ತಿದ್ದರು. ಉದಾ: ರಾಜ್‍ಕುಮಾರ್ ವಿರುದ್ಧದ ಚಳುವಳಿ, ತುಂಗಾ ಮೂಲ ಉಳಿಸಿ ಚಳುವಳಿ ಇತ್ಯಾದಿ. ಆದರೆ, 1978ರ ಹೊತ್ತಿನಲ್ಲಿ ಮೈಸೂರಿನಲ್ಲಿ ನಡೆದ ಅವರ ಹೊಸಮನೆ (ಅಭಯ) ಗೃಹಪ್ರವೇಶ ಸಂದರ್ಭದಲ್ಲಿ ಹಿಂದೂಧಾರ್ಮಿಕ ಪದ್ದತಿಯಂತೆ ಹಸು ನುಗ್ಗಿಸಿದುದು. ಭಾರತೀಯ ಜನತಾ ಪಕ್ಷದ ಪ್ರಧಾನಮಂತ್ರಿ ಅಭ್ಯರ್ಥಿಯಾಗಿ ನರೇಂದ್ರ ಮೋದಿ ಅವರು ಆಯ್ಕೆಯಾದಾಗ ದೇಶ ಬಿಟ್ಟು ಹೋಗುತ್ತೇನೆಂದು ಹೇಳಿದುದು (‘ನರೇಂದ್ರ ಮೋದಿ ಈ ದೇಶದ ಪ್ರಧಾನಮಂತ್ರಿಯಾಗುವುದಾದರೆ ನಾನು ಈ ದೇಶವನ್ನು ಬಿಟ್ಟು ಹೋಗುತ್ತೇನೆ’), ತಮ್ಮ ದೇಹಾಂತ್ಯ ಸಂಸ್ಕಾರ ವೈದಿಕ ಪರಂಪರೆಯಲ್ಲಿ ಆಗಬೇಕೆಂದು ಅಪೇಕ್ಷಿಸಿದ್ದು ಇತ್ಯಾದಿ. ‘ರುಜುವಾತು’ ಎಂಬ ಸಾಹಿತ್ಯ – ಸಾಂಸ್ಕøತಿಕ ಪತ್ರಿಕೆಯ ಪ್ರಾರಂಭಿಸಿದರಾದರೂ ಅದರ ಪ್ರಾರಂಭಿಕ ಸಂಚಿಕೆಗಳನ್ನು ಹೊರತರಲು ಅಚ್ಚಿನ ಸಮಸ್ಯೆ ಎದುರಿಸಿದ್ದನ್ನು ನಾನು ಸ್ವತಃ ನೋಡಿದ್ದೇನೆ. ಪತ್ರಿಕೆ ಕೆಲವು ಕಾಲ ಪ್ರಕಟವಾಗಿ, ನಿಂತು, ಅನಂತರ ಸಾಗರದ ಹೆಗ್ಗೋಡಿನಿಂದ ನಾಟಕ ನಿದೇರ್ಶಕ ಪ್ರಸನ್ನ ಅವರ ನೇತೃತ್ವದಲ್ಲಿ ಹೊರಬಂದು ಆ ಮೇಲೆ ಅದೂ ನಿಂತುಹೋಯಿತು.

1987ರಲ್ಲಿ ಅನಂತಮೂರ್ತಿಯವರು ಕೇರಳದ ಕೊಟ್ಟಾಯಂನ ಮಹಾತ್ಮಗಾಂಧಿ ವಿ.ವಿ.ನಿಲಯದ ಕುಲಪತಿಗಳಾಗಿ ಹೋಗುವ ಹಿಂದಿನ ದಿನ ನಾನು ಅವರನ್ನು ‘ವನಿತಾ’ ಪತ್ರಿಕೆಗೆ (ಮದ್ರಾಸಿನಿಂದ ಪ್ರಕಟವಾಗುತ್ತಿತ್ತು) ಸಂದರ್ಶಿಸಲು ಅವರ ಮನೆಗೆ ಹೋದೆ. ಆ ಸಂದರ್ಭದಲ್ಲಿ ಅವರು ಹೇಳಿದ ಒಂದು ಮಾತೆಂದರೆ – ‘ಸರ್ಕಾರಿ ನೌಕರಿಯಲ್ಲಿರುವವರು ಅಂತರ್ಜಾತಿ ಮದುವೆ ಆಗಿ ಜಾತಿ ವ್ಯವಸ್ಥೆ ವಿರುದ್ಧ ಧ್ವನಿ ಎತ್ತಬಹುದು. ಬೇರೆಯವರಿಗೆ ಅಷ್ಟು ಸುಲಭವಲ್ಲ.’ ಎಂಬ ಅವರ ಮಾತು ಚರ್ಚಾಸ್ಪದವಾದುದೇ. ನ್ಯಾಷನಲ್ ಬುಕ್ ಟ್ರಸ್ಟ್, ಕೇಂದ್ರ ಸಾಹಿತ್ಯ ಅಕಾಡಮಿ ಮುಖ್ಯಸ್ಥರಾಗಿಯೂ ಅವರು ಹುದ್ದೆ ನಿರ್ವಹಿಸಿದರು. ನಂತರ, ಅನಂತಮೂರ್ತಿಯವರು ಮೈಸೂರನ್ನು ಬಿಟ್ಟು ಬೆಂಗಳೂರಿಗೆ ಸ್ಥಳಾಂತರಗೊಂಡರು. ಹಾಗಾಗಿ, ಅವರ ಸಂಪರ್ಕ ಕಡಿಮೆಯಾಗುತ್ತಾ ಬಂತು. ಒಂದೆರಡು ಸಾಹಿತ್ಯಿಕ ಸಮಾರಂಭಗಳಲ್ಲಿ ಹಾಗೂ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಅವರನ್ನು ನೋಡುವ – ಕ್ವಚಿತ್ತಾಗಿ ಮಾತನಾಡುವ ಸಂದರ್ಭಗಳು ಬಂತು ಮತ್ತು ಅವೆಲ್ಲ ಔಪಚಾರಿಕವಾಗಿರುತ್ತಿತ್ತು.

ನಾನು ಗಮನಿಸಿದ ಹಾಗೆ ಅವರೊಬ್ಬ ಆಕರ್ಷಕ ವ್ಯಕ್ತಿಯಾಗಿದ್ದರು. ಅವರ ಸಾಹಿತ್ಯ-ಸಂಸ್ಕøತಿಯ ಜೀವನದುದ್ದಕ್ಕೂ ಸಾಕಷ್ಟು ಪ್ರಚಾರ ಪಡೆಯುತ್ತಿದ್ದರು. ವಿವಾದಾತ್ಮಕ ಹೇಳಿಕೆಗಳಿಂದ ಜನಮನದಲ್ಲಿ ಒಂದಲ್ಲ ಒಂದು ರೀತಿ ಪ್ರತಿಧ್ವನಿಸುತ್ತಿದ್ದರು. ಆದರೆ ಅವರೊಬ್ಬ ಶ್ರೇಷ್ಠ ದರ್ಜೆಯ ಸಾಹಿತಿ ಎಂದು ಒಪ್ಪುವುದು ಕಷ್ಟ.
ನಾನು ಸೂಕ್ಷ್ಮವಾಗಿ ಗಮನಿಸಿದ ಹಾಗೆ ಅವರು ಜೀವನದುದ್ದಕ್ಕೂ ತಮ್ಮ ವೈಯಕ್ತಿಕ ಬದುಕಿನ ಏಳ್ಗೆಯನ್ನು ಬಯಸುತ್ತಿದ್ದರು ಮತ್ತು ಅದಕ್ಕೆ ಪೂರಕವಾದವರನ್ನು ಮಾತ್ರ ತಮ್ಮ ವೃತ್ತಪರಿಧಿಯೊಳಗೆ ಬಿಟ್ಟುಕ್ಕೊಳ್ಳುತ್ತಿದ್ದರು. ಯಾರು ತಮಗೆ ಪೂರಕವಾಗಿಲ್ಲವೊ ಅವರನ್ನು ಮೇಲ್ಮಟ್ಟದಲ್ಲೇ ದೂರವಿರಿಸುತ್ತಿದ್ದರು. ಬೇರೊಂದು ರೀತಿಯಲ್ಲಿ ಹೇಳುವುದಾದರೆ – ಪ್ರಶ್ನಿಸುವವರನ್ನು ದೂರವಿರಿಸಿ, ಶರಣಾಗತರಾದವರನ್ನು ಹತ್ತಿರ ಬರಮಾಡಿಕೊಳ್ಳುತ್ತಿದ್ದರು. ಸದಾ ಕಾಲ ಮೇಲ್ವರ್ಗದ ಮನಸ್ಥಿತಿಯ ಅವರು ಬಡವರ ಬಗ್ಗೆ ಅನುಕಂಪ ಮಾತನಾಡುತ್ತಿದ್ದರು, ಅಷ್ಟೆ. ಆದರೆ, ಸಹಾಯ ಹಸ್ತ ಚಾಚಿದ್ದು ತುಂಬಾ ಕಡಿಮೆಯೆ ಅನ್ನಬಹುದು. ಎದುರಿನವರೊಂದಿಗೆ ಅವರ ಮನಸ್ಥಿತಿಗನುಗುಣವಾಗಿ ಎಚ್ಚರಿಕೆಯಿಂದ ಮಾತನಾಡುತ್ತಿದುದು ಅವರ ಜಾಯಮಾನ.

‘ಸಂಸ್ಕಾರ’ದ ಪ್ರಾಣೇಶಾಚಾರ್ಯರಂತೆ ದ್ವಂದ್ವನಡೆ ಅವರ ಜೀವನಕ್ರಮ ಎಂದು ಅರ್ಥೈಸಿಕೊಂಡಾಗ – ಅವರ ವ್ಯಕ್ತಿತ್ವದ ಮಿತಿ ನಮಗೆ ಮನದಟ್ಟಾಗುತ್ತದೆ. ಭಾವನಾತ್ಮಕತೆಗಿಂತ ವಸ್ತುನಿಷ್ಠತೆಯಿಂದ ಅವರನ್ನು ಗಮನಿಸಿದಾಗ ನಮಗೆ ಅನಂತಮೂರ್ತಿಯವರ ನಿಜ ವ್ಯಕ್ತಿತ್ವ ಅರಿವಾಗುತ್ತಿದೆ. ಸಾಹಿತಿಯಾಗಿ ಅವರ ಕೊಡುಗೆ ಮೇಲ್ನೋಟಕ್ಕೆ ಗಮನಾರ್ಹವಾಗಿ ಕಂಡರೂ ಅವರ ಕಾದಂಬರಿಗಳಲ್ಲಿ ‘ಸಂಸ್ಕಾರ’ ಅವರು ಆಗಾಗ್ಗೆ ಹೇಳುತ್ತಿದ್ದ ಹಾಗೆ ಸಮಾಜಕ್ಕೆ ‘ಶಾಕ್’ ಕೊಡುವುದೇ ಆಗಿತ್ತು.

ಆದರೆ, ‘ಶಾಕ್’ ಅನ್ನು ಎಲ್ಲಾ ಕಾಲದಲ್ಲು ಕೊಡಲಾಗುವುದಿಲ್ಲ. ಉಳಿದ ಕಾದಂಬರಿಗಳು ವೈಚಾರಿಕ ಮಾತುಗಳಿಂದ ಬಳಲಿದಂತೆ ತೋರುತ್ತವೆ. ನಾಟಕ ‘ಆವಾಹನೆ’ಯೂ ಅದೇ ಜಾಡಿಗೆ ಸೇರಿದ್ದು. ಅವರ ಕವನಗಳು ಜಾಳುಜಾಳು. ಮೂಲಭೂತವಾಗಿ ಅವರೊಬ್ಬ ಗದ್ಯಲೇಖಕರೇ ಹೊರತು ಪದ್ಯಲೇಖಕರಲ್ಲ. ಸಾಹಿತ್ಯಿಕ ಸತ್ವ ಇರುವುದು ಅವರ ಕೆಲವೊಂದು ಸಣ್ಣ ಕಥೆಗಳಲ್ಲಿ ಮಾತ್ರ. ಎಂದೆಂದೂ ಮುಗಿಯದ ಕಥೆ, ಪ್ರಶ್ನೆ, ಮೌನಿ, ಆಕಾಶ ಮತ್ತು ಬೆಕ್ಕು ಇತ್ಯಾದಿ ಕಥಾಸಂಕಲನಗಳು. ಅವರ ಬಹಳಷ್ಟು ವೈಚಾರಿಕ ಚಿಂತನೆಗಳು ದ್ವಂದ್ವಾತ್ಮಕವಾದವು. ಆದರೆ, ಕನ್ನಡ ಸಾಹಿತ್ಯ-ಸಾಂಸ್ಕøತಿಕ ಕ್ಷೇತ್ರದಲ್ಲಿ ಅವರೊಬ್ಬ ಕುತೂಹಲದ ವ್ಯಕ್ತಿಯಾಗಿ ಮಾತ್ರ ಬಹುಕಾಲ ಉಳಿಯುತ್ತಾರೆ ಎಂಬುದು ನನ್ನ ದೃಢ ನಂಬಿಕೆ.

‍ಲೇಖಕರು avadhi

September 11, 2017

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: