ಯು ಆರ್ ಅನಂತಮೂರ್ತಿ ಅನುವಾದಿತ ಬುದ್ಧ ದರ್ಶನ…

ಮಹೇಶ್ ಹರವೆ

ನಾನು ವಿಮಲ ಕೀರ್ತಿಯನ್ನು ಓದುವಾಗ ನನಗೆ ಬುದ್ಧ ಗುರುವಿನ ಅಪಾರತೆಯ ಒಂದು ಅಂದಾಜು ದೊರಕಿತ್ತು. ಆದರೆ ಜರ್ಮನ್ ಕವಿ ರೈನರ್ ಮಾರಿಯಾ ರಿಲ್ಕೆಯ ‘ಬುದ್ಧ ದರ್ಶನ’ ಕವಿತೆಯನ್ನು ಯು. ಆರ್.ಅನಂತಮೂರ್ತಿ ಅವರ ಅನುವಾದದ ಮೂಲಕ ಓದಿದಾಗ ಬುದ್ಧನೆಂಬ ವ್ಯೋಮ ಮೂರ್ತಿ ಕಾಣಿಸಿದ ಬಗೆ ಅವರ್ಣನೀಯ. ಎಲ್ಲದರಿಂದ ನಿವೃತ್ತಿಗೊಂಡ ಮನಸು ಮಾತ್ರ ಎಲ್ಲವನ್ನೂ ದರ್ಶಿಸಬಲ್ಲದು. ರಿಲ್ಕೆ ಬುದ್ದನನ್ನು ಕಂಡದ್ದೂ ಹಾಗೆಯೇ.

ಒಂದು ಇರುಳಿನಲ್ಲಿ ಅನಂತವನ್ನೂ ಆವರಿಸಿದ್ದ ಕತ್ತಲೆಯನ್ನು ಕಿಟಿಕಿಯ ಮೂಲಕ ದಿಟ್ಟಿಸುತ್ತ ಕೂತಲ್ಲೇ ಜಲ್ಲಿಯಿಂದ ರೂಪಿಸಿದ್ದ ರಸ್ತೆಯಲ್ಲಿ ಆರಾಮವಾಗಿ ನಡೆಯುತ್ತ ಪುಟ್ಟ ಬೆಟ್ಟದ ಮೇಲೆ ನಿರಾಳವಾಗಿ ನಿಂತಿದ್ದ ಮಿತಭಾಷಿ ಬುದ್ಧ ಆತನ ದಣಿವು, ನೋವುಗಳನ್ನು ಅಲುಗಾಡಿಸಿಬಿಡುತ್ತಾನೆ ಆ ಕ್ಷಣ ಕವಿಗೆ ಬಿಡುಗಡೆಯಾಗಿ ಕಾಣುವ ಬುದ್ಧ ದರ್ಶನ ಹೊಸ ಬಗೆಯ ಪದ ಸೃಷ್ಟಿಯಾಗಿ ರೂಪುಗೊಳ್ಳುವ ಕ್ರಮ ಕವಿತೆಯಾಗಿದೆ. ಇದೇ ಸಂದರ್ಭದಲ್ಲಿ ನನಗೆ ಕುಮಾರಗಂಧರ್ವ ನೆನಪಾಗುತ್ತಾರೆ.

ಪುಪ್ಪುಸದ ಕ್ಷಯದಿಂದ ನರಳುತ್ತಿದ್ದ ಅವರಿಗೆ ವೈದ್ಯರು ಅವರ ಜೀವದ ಜೀವವಾಗಿದ್ದ ಸಂಗೀತವನ್ನು ಕೆಲವು ವರ್ಷಗಳವರೆಗೆ ಹಾಡಬಾರದು ಎಂದು ಹೇಳಿರುತ್ತಾರೆ. ಈ ದಿನಗಳಲ್ಲಿ ಅವರಿಗೆ ಎಲ್ಲವೂ ಆಗಿ ಅವರ ಪತ್ನಿ ಅವರ ಶುಶ್ರೂಷೆ ಮಾಡುತ್ತಿರುತ್ತಾರೆ. ಈ ನಡುವೆ ಬರಸಿಡಿಲಿನಂತೆ ಪತ್ನಿಯ ಸಾವು ಅವರನ್ನು ಘಾಸಿಗೊಳಿಸುತ್ತೆ. ಎಲ್ಲವೂ ಆಗಿದ್ದ, ಇಂದು ಏನು ಮಾಡಲೂ ಆಗದ ಶೂನ್ಯ ಸ್ಥಿತಿಯಲ್ಲಿ ಒಂಟಿಯಾಗಿ ವೆರಾಂಡದಲ್ಲಿ ಕುಳಿತಿದ್ದ ಕುಮಾರ ಗಂಧರ್ವರಿಗೆ ಒಂದು ನಾದ ಕೇಳಿಸುತ್ತದೆ, ನಾದದ ಮೂಲಕ ಹಾಡು ಆಲಿಸು ಎನ್ನುತ್ತೆ.

ಕಿರಿಯ ವಯಸ್ಸಿನಲ್ಲೇ ಸಂಗೀತದಲ್ಲಿ ಬಹು ದೊಡ್ಡ ಹೆಸರು ಮಾಡಿದ್ದ ಕುಮಾರ ಗಂಧರ್ವರಿಗೆ ಈ ನಾದ ಸಂಯೋಜನೆ ಈ ಲೋಕದ ಸ್ಟುಡಿಯೋದಲ್ಲಿ ರೂಪಿಸಿದುದಲ್ಲಾ ಎನಿಸಿ, ಆ ನಾದದ ಅಲೆಯನ್ನೇ ಬೆಂಬಿಡಿದು ಗಾಯಕನನ್ನು ಕಂಡಾಗ ಆತ ಒಬ್ಬ ನಾಥಯೋಗಿ, ತನ್ನಲ್ಲೇ ತಾನಾಗಿ ತನ್ನನ್ನೇ ಕಾಣುವ ಗಾಯಕ. ಆತ ಕಾಣಿಸಿದ ಜನಪದ ಕಬೀರನನ್ನು, ಆತನ ನಿರ್ಗುಣ ಸಾಹಿತ್ಯವನ್ನು ತನ್ನ ಹಿಂದೂಸ್ತಾನಿ ಸಂಗೀತದ ಮೂಲಕ ಜನಪದವನ್ನೂ ಬೆರೆಸಿ ಹಾಡಲಾಗದ ಸ್ಥಿತಿಯಲ್ಲೂ ಹೊಸ ಬಗೆಯಾಗಿ ಹಾಡಿ ತನ್ನನ್ನೇ ರೂಪಿಸಿಕೊಂಡ ಕುಮಾರಗಂಧರ್ವರು ರಿಲ್ಕೆಯ ಬುದ್ದ ದರ್ಶನದಲ್ಲಿ ಕಾಣುತ್ತಾರೆ. ಮಿತಿಯ ಕೋಶವನ್ನು ದಾಟಿದಾಗಲೇ ತೆವಳುವ ಕಂಬಳಿಹುಳ ಪತಂಗವಾಗಿ ಹಾರಲು ಸಾಧ್ಯ ಎನಿಸುತ್ತದೆ.

ಕ್ಷಮಿಸಿ, ನನ್ನ ಮಾತಿನ ಹೊಸ್ತಿಲಲ್ಲೇ ನಿಮ್ಮ ನಿಲ್ಲಿಸಿಕೊಂಡಿದ್ದೇನೆ. ನಡೆಯಿರಿ ಬುದ್ಧ ದರ್ಶನ ಮಾಡಲು..

ಬುದ್ಧ ದರ್ಶನ

ಮೂಲ : ರೈನರ್ ಮಾರಿಯಾ ರಿಲ್ಕೆಯ
ಅನುವಾದ: ಯು ಆರ್ ಅನಂತಮೂರ್ತಿ

ಎಲ್ಲ ಕೇಂದ್ರಗಳ ಕೇಂದ್ರವೆ, ಎಲ್ಲ ತಿರುಳಿನ ತಿರುಳೆ,
ತನ್ನ ಕವಚದಲ್ಲೆ ಪೂರ್ಣ ಸ್ವಾದಗೊಂಡ ಬಾದಾಮಿಯೇ,
ಈ ಇಡೀ ವಿಶ್ವ, ಅನಂತ ಅವಕಾಶಗಳಲ್ಲಿ ಹುಟ್ಟಿ ಸಾಯುತ್ತಿರುವ ತಾರೆಗಳು
ಎಲ್ಲವುಗಳಾಚೆ ನಿನ್ನ ಈ ರಕ್ತ ಮಾಂಸದ ಕಾಯ, ತನ್ನಲ್ಲೆ ಮಾಗಿದ ಹಣ್ಣು.
ಏನು ಅಂಟದು ನಿನಗೆ, ನಿನ್ನ ಕೋಶವೇ ಅನಂತ ಆಕಾಶ.
ಪ್ರಾಣರಸ ಚಿಮ್ಮುವುದು ಅಲ್ಲಿ
ನಿನ್ನ ಅಪಾರ ಶಾಂತಿಯ
ಸ್ವಯಂ ಪ್ರತಿಭೆಯ ಕಾಂತಿಯಲ್ಲಿ.
ಅಹೋರಾತ್ರಿ ಕೋಟಿ ಕೋಟಿ ನಕ್ಷತ್ರಗಳು ಗಿರಕಿ ಹೊಡೆಯುತ್ತ
ಸುತ್ತುತ್ತವೆ
ನಿನ್ನ ಶಿರಸ್ಸಿನ ಮೇಲೆ
ಅಸಂಖ್ಯ ಜ್ವಾಲೆಗಳ ಆರತಿಯಂತೆ
ಇವು ಆರಿದ ಮೇಲೂ ನೀನು ಆಗುತ್ತಲೇ ಇರುವಿ
ನಿನ್ನಲ್ಲೆ ಮುದ್ದಾಮಾಗಿ
ತಥಾಗತ.

ಇದ ಓದಿದ ಮೇಲೆ ಅನಿಸಿತು ಅನುವಾದ ಅಂದ್ರೆ ಒಂದು ಚೇತನ ಮತ್ತೊಂದು ಚೇತನವಾಗಿ ಅನುವಾದಗೊಳ್ಳುವುದೆಂದು.

‍ಲೇಖಕರು Admin

August 2, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: