ಯಾವ ಸ್ವಾತಂತ್ರ್ಯದೇಶದಲ್ಲೂ, ಹೋರಾಟದಲ್ಲೂ ಹೆಣ್ಣಿನ ಕಷ್ಟಗಳೇ ಬೇರೆಯದ್ದಾಯಿತಲ್ಲ..

ಎಲೆನಾ ಹುಡುಗಿಯನ್ನ ಹುಡುಕಿಕೊಂಡು ಅವತ್ತು ಮನೆವರೆಗೆ ಬಂದಳು. “ಅಲ್ಲಾ ನೀನು ಮೊದಲನೇ ಸೆಮಿಸ್ಟರ್ ಪೂರ್ತಿ ನನ್ನ ಜೊತೆ ತಿರುಗಾಡಿ ಆಮೇಲೆ ಹೊಸ ಗೆಳೆಯ ಗೆಳತಿಯರನ್ನು ಪರಿಚಯ ಮಾಡಿಕೊಂಡು ನನ್ನನ್ನ ಮರೆತೇ ಬಿಟ್ಟೆಯಲ್ಲ.” ಎಂದು ಗಲಾಟೆ ಮಾಡಿಕೊಂಡೆ ಬಂದಳು. ಅಸಲಿಗೆ ಬೆಂಗಳೂರಿನಂತಹ ಕಾಸ್ಮೋಪಾಲಿಟನ್ ನಗರದ ಹುಡುಗಿಯನ್ನ ಸ್ವಾಯತ್ತತೆ ಸ್ವಾತಂತ್ರ್ಯ ಎಂದೆಲ್ಲಾ ಹುಚ್ಚು ಹಿಡಿಸಿ ಅದೆಷ್ಟೊಂದು ಮಾಹಿತಿ ಕೊಟ್ಟವಳು. ಮೊದಲನೇ ಸೆಮಿಸ್ಟರಿನ ನಂತರ ಉಗ್ರ ಹೋರಾಟ ಕೆಲವೊಮ್ಮೆ ಹುಡುಗಿ ಮತ್ತು ಅವಳ ನಡುವೆ ಆಗುವ ಮಾತುಕತೆಗಳು ಜಗಳಗಳನ್ನೇ ಏರ್ಪಡಿಸುತ್ತಿತ್ತು. ಹೀಗಾಗಿ ಆದಷ್ಟು ಉಗ್ರ ಹೋರಾಟದ ಮಾತುಗಳನ್ನು ಅವಾಯ್ಡ್ ಮಾಡುತ್ತಿದ್ದಳು ಹುಡುಗಿ. ಅವಳಿಗೆ ಹೋರಾಟದಲ್ಲಿ ಸ್ವಲ್ಪ ಆಸಕ್ತಿ ಬಂದಿದ್ದರೂ ಸಹ ಅದನ್ನೇ ಅವಳ ಜೀವನ ಮಾಡಿಕೊಳ್ಳುವ ಆಸೆ ಇರಲಿಲ್ಲ. “ಲೆಟ್ಸ್ ಗೋ ಟು ಸ್ಕೂಲ್” ಎಂದಳು ಎಲೆನಾ.

“ಯಾವ ಸ್ಕೂಲು, ನಿನ್ನ ಎಲಿಮೆಂಟರಿ ಶಾಲೆಯಾ?” ಎಂದು ಕೇಳಿದರೆ, “ಇಲ್ಲ ನಮ್ಮ ಯೂನಿಗೆ ಹೋಗೋಣ” ಎಂದಳು. “ಸ್ಕೂಲ್, ಕಾಲೇಜು ಮುಚ್ಚಿದಾಗಲೇ ಚೆನ್ನಾಗಿರೋದು” ಎಂದು ಇಷ್ಟು ವರ್ಷ ನಂಬಿದ್ದ ಹುಡುಗಿಗೆ ಇಲ್ಲಿನ ಶಿಕ್ಷಣ ಬೇರೆ ಥರವೇ ಅನ್ನಿಸುತ್ತಿತ್ತು. ಒತ್ತಾಯ ಪೂರ್ವಕವಾಗಿ ಯಾವುದೂ ಇಲ್ಲಿ ನಡೆಯುತ್ತಿರಲ್ಲಿಲ್ಲ. ಕ್ಲಾಸಿಗೆ ಬರಬಹುದು, ಕೂರಬಹುದು, ಅಥವಾ ಬರದೇ ಇದ್ದರೂ ಅದರ ಪಾಠಗಳನ್ನೆಲ್ಲಾ ಕಲಿತು ಪರೀಕ್ಷೆಗೆ ಹಾಜರಾಗಬಹುದು. ಅಥವಾ ೩ ಘಂಟೆಯ ಪರೀಕ್ಷೆಯ ಮೇಲೆ ಎಲ್ಲವು ಅವಲಂಬಿತವಾಗಿರುವುದಿಲ್ಲ. ಸ್ವಲ್ಪ ಪ್ರಾಜೆಕ್ಟು, ಸ್ವಲ್ಪ ಸೆಮಿನಾರು ಹೀಗೆ ಕ್ಲಾಸಿನಲ್ಲಿ ನಡೆಯುವ ಎಷ್ಟೋ ವಿಷಯಗಳ ಆಧಾರಿತ ಮಾರ್ಕ್ಸು ಬರುತ್ತದೆ.

ಹೀಗೆ ಎಲೆನಾ ಯೂನಿಗೆ ಎಳೆದುಕೊಂಡು ಹೋದಳು. “ನೀನು ಯಾವಾಗಲೂ ಹೀಗೆ ಸಿರಿಯಸ್ಸಾಗಿಯೇ ಇರ್ತೀಯಾ. ತಮಾಷೆ, ಅದು ಇದು ಎಲ್ಲಾ ಮಾಡೋದೇ ಇಲ್ಲವಾ” ಎಂದು ಹುಡುಗಿ ಎಲಿನಾಳನ್ನ ಕಿಕಾಯಿಸುತ್ತಿದ್ದಳು. ೨೨ ವರ್ಷಕ್ಕೆ ಪಟ್ ಎಂದು ಮಾಸ್ಟರ್ಸಿಗೆ ಸೇರಿಕೊಂಡು, ಇನ್ನೊಂದು ವರ್ಷಕ್ಕೆ ಪಿ ಎಚ್ ಡಿ ಸಹ ಮಾಡುವ ಆಸೆ ಇರುವ ಹುಡುಗಿಯನ್ನ ನೋಡಿ ಆಶ್ಚರ್ಯ ಆಗಿದ್ದು ಹುಡುಗಿಗೆ ಸುಳ್ಳಲ್ಲ. ತನ್ನ ಬಿ ಈ ಕೂಡ ಇಲ್ಲೇ ಮುಗಿಸಿದ್ದ ಅವಳು ಪೂರ್ತಿ ಈ ಊರಿನವಳೇ.
ಇವರಿಬ್ಬರೂ ಟ್ರಮಿನಲ್ಲಿ ಕೂತು ಮಾತಾಡೋವಾಗ ಯಾರೋ ಒಬ್ಬ ಹುಡುಗ ಅಲೋಝಾ ಎಂದು ಎಲಿನಾಳನ್ನ ಕರೆದು ತನ್ನ ಸ್ಟಾಪಿನಲ್ಲಿ ಇಳಿದ. ಇವಳು ಪಟಪಟ ಅವನ್ನನ್ನ ಬೈದ್ದದ್ದು ಕಂಡು ಹುಡುಗಿ ಕಕ್ಕಾಬಿಕ್ಕಿಯಾದಳು. “ಅವನು ನಿನ್ನ ಹಾರಾಸ್ ಮಾಡಿದ ತಾನೇ, ಬಾ ಪೊಲೀಸಿಗೆ ಹೇಳೋಣ” ಎಂದು ತನ್ನ ಊರಲ್ಲಿ ಇವೆಲ್ಲ ಮಾಡದ ಹುಡುಗಿ ಎಚ್ಛೆತ್ತುಕೊಂಡಳು. ಹೀಗಿದ್ದಾಗ ಎಲೆನಾ ಮಾತ್ರ, “ಇದು ನಮ್ಮ ಹೆಡ್ ಸ್ಟ್ರಾಂಗ್ ಹೆಣ್ಣುಮಕ್ಕಳನ್ನ ಕರೆಯುವ ಪರಿ” ಎಂದು ನಕ್ಕಳು.

“ಅಲೋಜಾ” ಎಂದರೇನು ಅದೊಂದು ಬೈಗುಳವಾ ಎಂದು ಹುಡುಗಿ ಕೇಳಿದಾಗ, “ಇಲ್ಲ ಕಣೆ ಇದು ನಮ್ಮ ಕತ್ತಲನ್ನರ ಮೈಥಾಲಜಿಯಲ್ಲಿ ಬರುವ ಒಂದು ಪಾತ್ರ. ಅದರಲ್ಲಿ ಆ ಒಂದು ಹುಡುಗಿ ನೀರಿನಲ್ಲೇ ಇರುವವಳು” ಎಂದಳು. “ಏನು ಮತ್ಸ್ಯ ಕನ್ಯೆಯಾ, ನಿಮ್ಮದು ಒಂದು ಪುರಾಣ ಕಥೆಗಳಿವೆಯಾ, ನಾನು ನೀವು ಗ್ರೀಕಿನ ಪುರಾಣದವರೇ ಅಂದುಕೊಂಡೆ” ಎಂದು ಪೆದ್ದುಪೆದ್ದಾಗಿ ಹುಡುಗಿ ಹೇಳಿದಾಗ, “ಹಾಗಾದರೆ ನಿಮ್ಮ ದೇಶದವರೆಲ್ಲಾ ಹಿಂದೂಸ್ ಅಷ್ಟೇನಾ, ಬೇರೆ ಧರ್ಮ, ಎಲ್ಲಾ ಇಲ್ವಾ?” ಎಂದು ಮರುಪ್ರಶ್ನೆ ಮಾಡಿ ಅವಳನ್ನ ಬಾಯಿ ಮುಚ್ಚಿಸಿದಳು.

“ಸರಿ ಹೋಗಲಿ ಬರಿ ರಿಯಲಿಸ್ಟಿಕ್ ಘಟನೆಯೇ ಹೇಳಿದ್ದಾಯಿತು ನೀನು, ಒಂದು ಕಥೆ ಹೇಳು ನೋಡೋಣ” ಎಂದು ಹುಡುಗಿ ಹೇಳಿದಳು. “ಯೂನಿವರ್ಸಿಟಿ ಕೆಫೆಟೇರಿಯಾದಲ್ಲಿ ಸರ್ವೇಸಾ ಕೊಡಿಸಿದ ಮೇಲೆ ಹೇಳುತ್ತೇನೆ” ಎಂದಳು. “ಸರಿ ಆಯ್ತು, ಇದು ಆರೆಂಜ್ ಪೇಯಕ್ಕಿಂತ ಕಡಿಮೆ ದುಡ್ಡಿನದ್ದು” ಎಂದು ಹೇಳಿ ಹುಡುಗಿ ಅವಳನ್ನ ಕರೆದುಕೊಂಡು ಹೋದಳು.

“ಅಲೋಜಾ ನೀರಿನಲ್ಲಿರುವ ಒಂದು ಹುಡುಗಿ, ಬೇಕಾದ ಕಾಲಕ್ಕೆ ಅವರು ಕಪ್ಪು ಪಕ್ಷಿಗಳಾಗಿ ಬದಲಾಗುವ ಶಕ್ತಿಯುಳ್ಳವರು. ಅವರಿಗೆ ಯಕ್ಷಿಣಿ ವಿದ್ಯೆಯೆಲ್ಲಾ ಗೊತ್ತಿರುತ್ತಿತ್ತು. ಇವರು ಯಾರೂ ಅಮರರಲ್ಲ ಆದರೆ ಸಾವಿರಾರು ವರ್ಷ ವಯಸ್ಸಾಗದೇ ಇರುತ್ತಿದ್ದರು.”

“ಹಹಹಃ” ಎಂದು ಹುಡುಗಿ ನಗೋದಕ್ಕೆ ಶುರು ಮಾಡಿದಳು. “ಏನು ನೀನು ನನ್ನ ಸಂಸ್ಕೃತಿಯ ಬಗ್ಗೆ ಹಾಸ್ಯ ಮಾಡೋದು” ಎಂದು ಕೋಪ ಮಾಡಿಕೊಂಡು ಹೇಳಿದಳು. “ಅಲ್ಲಾ ನಮ್ಮ ಕಥೆಯಲ್ಲೂ ಹೀಗೆಲ್ಲಾ ಇದೆ, ನಮ್ಮ ಅಪ್ಸರೆಯರೆಲ್ಲಾ ಹೀಗೆ ಅವರಿಗೆ ವಯಸ್ಸಾಗೋದೇ ಇಲ್ಲ ಮತ್ತು ಅವರು ನೀರಿನಲ್ಲಿ ಇರೋದಿಲ್ಲ, ಬಟ್  ಸಕತ್ ಚೆನ್ನಾಗಿರುತ್ತಾರೆ” ಎಂದು ಹೇಳೋ ಅಷ್ಟರಲ್ಲಿ, “ಸ್ವಲ್ಪ ಸಾವಧಾನವಾಗಿ ಕೇಳಿಕೊ” ಎಂದು ಮತ್ತೆ ಬಿಯರ್ ಬಾಟೆಲ್ಲನ್ನ ಟೇಬಲ್ಲಿಗೆ ಕುಟ್ಟಿ ಮುಂದುವರಿಸಿದಳು ಎಲೆನಾ.

“ಡೊನೆಸ್ ಡೇ ಅಗ್ವಾ ಇವರು ಇರುವ ಜಾಗಗಳು. ಅದೊಂದು ಶಾಂತವಾದ ಸರೋವರ, ಆದರೆ ಯಾರಾದರೂ ಅಪರಿಚಿತರು ಬಂದರೆ ಅದು ಬೆಂಕಿಯ ಸರೋವರವಾಗಿ ಅವರನ್ನ ಸುಡುತ್ತದೆ, ಸ್ಪಾನಿಷ್ ಜನರನ್ನ ಹಾಗೆ ನಾವು ತೊಲಗೋದಕ್ಕೆ ಹೇಳಬೇಕು” ಎಂದು ಹಲ್ಲು ಮಸೆದು ಹೇಳಿದಳು ಹುಡುಗಿ. “ನೋಡು ನೀನು ಥೇಟ್ ಯಾವುದೋ ಸೆನ್ಸೇಷನಲ್ ಪೋರ್ಟಲ್ ಥರ ಮಾತಾಡುತ್ತಿದ್ದೀಯ, ನಿಮ್ಮ ಪುರಾಣ ಕಥೆಯಲ್ಲೂ ಸ್ಪಾನಿಷ್ ಜನ ಇದ್ರಾ, ಒಳ್ಳೆ ಕಥೆ ಆಯ್ತು ನಿಂದು ಎಲ್ಲಾ ಕಥೆಯಲ್ಲೂ ಒಂದು ಹೀರೊ ಮತ್ತು ವಿಲ್ಲನ್ ಇರಲೇಬೇಕಾದ ಅವಶ್ಯಕತೆ ಇಲ್ಲ, ಈಗ ಕಥೆ ಮುಂದುವರೆಸು” ಎಂದು ಹುಡುಗಿ ಹೇಳಿದಳು.
“ಅಲೋಜಾ ಫರ್ಟಿಲಿಟಿಯ ಸಂಕೇತ, ಎಲ್ಲಾ ಹೆಣ್ಣುಮಕ್ಕಳು ಅವಳನ್ನ ಪೂಜ್ಯ ಸ್ಥಾನದಲ್ಲಿರಿಸುತ್ತಾರೆ” ಎಂದಳು. “ಒಹ್ ಸಂತಾನಲಕ್ಷ್ಮಿ ಟೈಪ್” ಇದು ಎಂದಳು ಹುಡುಗಿ. “ಆಮೇಲೆ ಇವಳು ತ್ರಿಪುರ ಸುಂದರಿ, ಯಾವುದೇ ಕ್ಷೇತ್ರದಲ್ಲಿ ಅವಳು ಕಾಲಿಟ್ಟರೂ ಜಯ ಗ್ಯಾರೆಂಟಿ, ಆದರೆ ಸ್ವಲ್ಪ ಚಂಚಲೆ, ಇರುವ ಎಲ್ಲಾ ಕಡೆ ಸಂಪತ್ತು ನಳನಳಿಸುತ್ತದೆ” ಎಂದು ಹೇಳುತ್ತಾ ಹೋದಳು.

“ನಮ್ಮ ಕಡೆ ಲಕ್ಷ್ಮಿ ಸಹ ಹಾಗೆ, ಸಂಪತ್ತಿನ ದೇವರು, ಸ್ವಲ್ಪ ಚಂಚಲೆ, ಆದರೆ ನಮ್ಮ ಕಡೆ ಲಕ್ಷ್ಮಿ ಅಂದರೆ ಯಾರೂ  ಕೋಪ ಮಾಡಿಕೊಳ್ಳುವುದಿಲ್ಲ, ಇನ್ಫ್ಯಾಕ್ಟ್  ಹಾಗೆಲ್ಲ ಹೇಳಿದರೆ ಖುಷಿಯಾಗುತ್ತಾರಪ್ಪ” ಎಂದು ಹುಡುಗಿ  ಹೇಳಿದಾಗ, “ಅಯ್ಯೋ ಕೇಳಿಲ್ಲಿ ಈ ಅಲೋಜಾಗಳು ನಿಶಾಚಾರಿಗಳು, ಚಿನ್ನದ ಬಣ್ಣದ ಕೂದಲು, ಅಥವಾ ಕೆಂಪು ಬಣ್ಣದ ಕೂದಲು, ಪಚ್ಚೆ ಬಣ್ಣದ ಕಣ್ಣು ಗುಡ್ಡೆ, ಬಹಳ ಸಾಹುಕಾರರ ಹಾಗಿನ ಬಟ್ಟೆಗಳು ಮತ್ತು ಒಡವೆಗಳು, ಹಾಕಿಕೊಂಡು ಹುಣ್ಣಿಮೆಯ ರಾತ್ರಿ ಈ ಸರೋವರದಲ್ಲಿ ತಮ್ಮ ಪ್ರತಿಬಿಂಬವನ್ನು ತಾವೇ ನೋಡಿಕೊಂಡು ಮೈಮರೆಯುವವರು. ಅವರಿಗೆ ರೆಕ್ಕೆಗಳು ಇದ್ದು ಹಾರುತ್ತಾರೆ, ಅವರ ಬಳಿ ಮಂತ್ರ ದಂಡಗಳು ಇರುತ್ತದೆ. ಅವರು ನಮಗೆ ವಾರ ಮತ್ತು ಶಾಪ ಎರಡೂ ಕೊಡಬಹುದು” ಎಂದು ಸಣ್ಣಮಕ್ಕಳಿಗೆ ಕಥೆ ಹೇಳುವ ಹಾಗೆ ಎಲೆನಾ ಹೇಳುತ್ತಾ ಹೋದಳು.

“ಅದು ಸರಿ ಈ ಕೋಪಕ್ಕೆ ಕಾರಣ ನನಗೆ ಗೊತ್ತಿಲ್ಲ” ಎಂದು ಮತ್ತೆ ಕೇಳಿದಾಗ, “ಈ ದೇವತೆ ಒಮ್ಮೊಮ್ಮೆ ರಾತ್ರಿ ನೀರಿನಿಂದ ಎದ್ದು ಮಕ್ಕಳನ್ನ ತನ್ನ ಕಡೆಗೆ ಎಳೆದುಕೊಂಡು ಅವರನ್ನ ಸಾಯಿಸುತ್ತಾಳೆ, ಅವಳು ಒಂದು ರೀತಿ ಕೊಲೆಗಡುಕಳು, ವಿಪರೀತ ಹಠವಾದಿ ಮತ್ತು ಗಂಡಿಗಿಂತ ಸಿಕ್ಕಾಪಟ್ಟೆ ಶಕ್ತಿಶಾಲಿಯಾದ ಹುಡುಗಿ ಅವಳು. ಈ ನಡುವೆ ನಮ್ಮ ಹೋರಾಟದಲ್ಲಿರುವ ಹೆಣ್ಣುಮಕ್ಕಳನ್ನು ಹೀಗೆ ಹೋಲಿಸಿ ಮಾತಾಡುವ ಪರಿಪಾಠ ಶುರುವಾಗಿದೆ. ಏನೆಂದರೆ ಅವರು ಹಠಮಾರಿಗಳು, ಸುಂದರವಾಗಿದ್ದರೂ ಬಿನ್ನಾಣ ಜಾಸ್ತಿ, ಕೊಬ್ಬು ಜಾಸ್ತಿ, ಹೀಗೆಲ್ಲಾ ಹೇಳಿ ಕಡೆಗೆ ನಮ್ಮ ಪುರಾಣದಲ್ಲಿ ಬರುವ ಹಾಗೆ ನಾವು ಮಾಟಗಾತಿಯರು, ಮತ್ತು ಸುಂದರವಾಗಿರುವ ಕಾರಣ ಗಂಡಸರಿಗೆ ಏನೇನೋ ಮಾಡೋದಕ್ಕೆ ಸಿಗುವವರು ಎಂದು ಹೀಯಾಳಿಸಿ ಎಷ್ಟೊಂದು ಪತ್ರಿಕೆಗಳಲ್ಲಿ ಕಾರ್ಟೂನುಗಳನ್ನು ಬರೆದು ಮಾಡಿ ಅವಮಾನ ಮಾಡಿದ್ದಾರೆ. ಹೆಣ್ಣುಮಕ್ಕಳು ಹೋರಾಟದಲ್ಲಿ ನೆಮ್ಮದಿಯಾಗಿ ಭಾಗವಹಿಸುವುದಕ್ಕೂ ಸಾಧ್ಯವಿಲ್ಲ. ನಮ್ಮ ಮೇಲೆ ಮಾನಸಿಕ ದೌರ್ಜನ್ಯಗಳು ಆಗುತ್ತಲೇ ಇರುತ್ತದೆ, ನೋಡು ಅವನ್ಯಾವನೋ ನನಗೆ ಗೊತ್ತೇ ಇಲ್ಲ ಆದರೆ ನನ್ನ ಫೋಟೋವನ್ನ ಪೇಪರಿನಲ್ಲೋ ಅಥವಾ ಈ ಪೋಲಿ ಹುಡುಗರು ಪ್ರತಿಭಟನೆಯಲ್ಲಿ ತೆಗೆದು ಹೊಸ ಅಲೋಜಾ ಎಂದು ಟ್ಯಾಗ್ ಮಾಡಿರಬೇಕು ಅದಕ್ಕೆ ನನ್ನನ್ನ ಕಂಡ ತಕ್ಷಣ ಅಂದು ಹೋದ. ಇದನ್ನೆಲ್ಲಾ ಕಂಪ್ಲೇಟ್ ಮಾಡಿದರೆ ಹೆಣ್ಣುಮಕ್ಕಳು ನೀವು ಇನ್ನು ಮುಂದೆ ಪ್ರತಿಭಟನೆಗೆ ಬರಲೇ ಬೇಡಿ ಎಂದು ಮನೆಯಲ್ಲಿ ಕೂರಿ ಅನ್ನುತ್ತಾರೆ. ನಮಗೆ ನಮ್ಮ ದೇಶದ ಸ್ವಾತಂತ್ರ್ಯದ ಕಥೆ ಬಿಟ್ಟು ಈ ಕಾಟಗಳು ಬೇರೆ” ಎಂದು ಪೂರ್ತಿ ಸರ್ವೇಸಾ ಮುಗಿಸಿ ಟಪ್ಪನೆ ಬಾಟಲ್ಲು ಕೆಳಗೆ ಇಟ್ಟಳು ಎಲೆನಾ.

ಹುಡುಗಿ ಅವಳನ್ನೇ ದಿಟ್ಟಿಸಿ ನೋಡಿ ಅಂದಳು, “ಯಾವ ಸ್ವಾತಂತ್ರ್ಯದೇಶದಲ್ಲೂ, ಹೋರಾಟದಲ್ಲೂ ಹೆಣ್ಣಿನ ಕಷ್ಟಗಳೇ ಬೇರೆಯದ್ದಾಯಿತಲ್ಲ” ಎಂದು. ಅಲೋಜಾಳ ಸಣ್ಣ ಪ್ರತಿಮೆ ಯೂನಿವರ್ಸಿಟಿಯ ಅಂಗಳದಲ್ಲಿ ನಗುತಲಿತ್ತು.

‍ಲೇಖಕರು nalike

August 1, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: