ಸಂಗೀತ ರವಿರಾಜ್
ನನ್ನನ್ನು ಅತಿಯಾಗಿ ಕಾಡಿದ ಅಗಲಿಕೆಗಳಲ್ಲಿ ಇದೂ ಒಂದು. ನಿರಂತರ ಒಡನಾಟದಲ್ಲಿ, ಮಾತುಕತೆಯಲ್ಲಿ ಇಲ್ಲದೆ ಇದ್ದರು ಕೆಲವು
ಸಾವು ನಮ್ಮನ್ನು ತೀರಾ ವಿಚಲಿತಗೊಳಿಸಿಬಿಡುತ್ತದೆ. ಇಂತಹ ಅಪರೂಪದ ವ್ಯಕ್ತಿಗಳು ನಮ್ಮ ನಡುವಿನಿಂದ ಸದ್ದಿಲ್ಲದೆ ಎದ್ದುಹೋಗಿಬಿಡುತ್ತಾರೆ.
ನನ್ನನುಭವದಲ್ಲಿ ಹೀಗೆ ಇದ್ದು ಸಾದ ಸೀದವಾಗಿ ಬದುಕಿ ತರಾತುರಿಯಲ್ಲಿ ಎದ್ದು ಹೋದವರಂತೆ ಮೊನ್ನೆ ತಾನೆ ಮೋಹನ ಸೋನಾರವರು ನಮ್ಮನಗಲಿದರು. ಇವರೊಳಗೆ ಮಂತ್ರಮುಗ್ಧಗೊಳಿಸುವ ಪ್ರತಿಭೆ ಇದ್ದು, ಸುತ್ತಮುತ್ತ ಗುದ್ದಾಡುವ ಪರಿಪಾಠವೆ ಇಲ್ಲದೆ ತಮ್ಮ ಪಾಡಿಗೆ ತಾವು ಕೆಲಸ ಕಾರ್ಯದಲ್ಲಿ ತಲ್ಲೀನರಾಗಿ ಹೂವಿನಂತೆ ನಿಧಾನವಾಗಿ, ಸುಕೋಮಲವಾಗಿ, ಸಮಯೋಚಿತವಾಗಿ ಅರಳಿಕೊಳ್ಳುತ್ತಿದ್ದರು.
ಈ ಅರಳುವ ಕಲೆ ತನ್ನ ಪರಿಮಳವನ್ನು ನಾಲ್ಕು ದಿಕ್ಕಿಗು ಸೂಸಿದ್ದಂತು ನಿಜ. ವ್ಯಕ್ತಿ ತನ್ನ ವ್ಯಕ್ತಿತ್ವದಿಂದ ಮಾತ್ರವೆ ದೊಡ್ಡವನಾಗಬೇಕು ಎಂಬ ಮಾತಿಗೆ ಪೂರಕವಾಗಿ ಬದುಕಿದವರು ಸೋನಾರು. ನೀವು ಮಗದೊಮ್ಮೆ ಸೂಕ್ಷ್ಮ ಮನಸ್ಸಿನ ಕಲಾವಿದರಾಗಿ ಅಥವ ನಿರ್ದೇಶಕರಾಗಿ ಹುಟ್ಟಿ ಬರದಿದ್ದರು ಅಭ್ಯಂತರವೇನಿಲ್ಲ ಆದರೆ ನಿಮ್ಮ ಸರಳತೆ, ಸಜ್ಜನಿಕೆ ಮತ್ತೆಲ್ಲಒಳ್ಳೆಯತನದೊಂದಿಗೆ ಮಾತ್ರ ಮತ್ತೊಮ್ಮೆ ಹುಟ್ಟಿ ಬರಲೇಬೇಕೆಂಬ ಕಾಣದ ಅಭಿಲಾಷೆ……
ಕರ್ನಾಟಕ ರಾಜ್ಯ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿದ್ದ ಸಂಧರ್ಭದಲ್ಲಿ ಇವರೊಡನಾಟ ಅವರ ವ್ಯಕ್ತಿತ್ವವನ್ನೆ ಪರಿಚಯಿಸಿತು. ಸ್ವಾರ್ಥ ಎಂದರೆ ಏನೆಂಬುದೆ ಅರಿಯದ ವ್ಯಕ್ತಿ. ಈ ದಿನಗಳಲ್ಲಿ ಅವರು ಯೋಜನೆ ಸಹಿತ ಮಾಡಿದ, ಎರಡು ಕಾರ್ಯಕ್ರಮಗಳು ಶ್ಲಾಘನೀಯ ಮತ್ತು ದಾಖಲೀಕರಣವಾಗಿದೆ.
ನಮ್ಮೂರಿನ ಜೀವನ ಶೈಲಿಗೆ ಹೊಂದುವಂತಹ ಕಥಾಹಂದರದ ಪೂರ್ಣಚಂದ್ರ ತೇಜಸ್ವಿಯವರ ” ಕರ್ವಾಲೋ ” ದಂತಹ ಕ್ಲಿಷ್ಟಕರ ಕಾದಂಬರಿಯನ್ನು ಅರೆಭಾಷೆಯಲ್ಲಿ ನಾಟಕ ರೂಪಕ್ಕಿಳಿಸಿ, ನಿರ್ದೇಶನ ಮಾಡಿ ಪ್ರದರ್ಶನಗೊಂಡಿರುವುದು ಯಾರು ಮರೆಯುವಂತಿಲ್ಲ. ಅರೆಭಾಷೆ ನಾಟಕದ ಮೊದಲ ಪ್ರದರ್ಶನ ನೀಡಿದ ಹೆಗ್ಗಳಿಕೆ ಇವರಿಗೆ ಸಲ್ಲಬೇಕು.
ನಟನೆಯಲ್ಲಿ ಆಸಕ್ತಿ ಇದ್ದವರಿಗೆ ತಿಂಗಳಾನುಗಟ್ಟಲೆ ತಾವೆ ಖುದ್ದು ತರಭೇತಿ ನೀಡಿ, ಜೂನಿಯರ್ ಕಾಲೇಜ್ ನಲ್ಲಿ ಪ್ರದರ್ಶನ ನೀಡಿದ್ದಕ್ಕೆ ನಾನು ಸಂಪೂರ್ಣ ಸಾಕ್ಷಿಯಾಗಿದ್ದೆ ಮತ್ತು ಇವರ ಸಾಮರ್ಥ್ಯಕ್ಕೆ ಬೆರಗಾಗಿದ್ದೆ. ಇನ್ನೊಂದು ಕಾರ್ಯಕ್ರಮವೆಂದರೆ ಸರ್ವರನ್ನು ಆಕರ್ಷಿಸಿದಂತಹ ರಾಜ್ಯ ಮಟ್ಟದ ಚಿತ್ರಕಲಾ ಶಿಬಿರ.
ನಮ್ಮ ಸಂಸ್ಕೃತಿಯ ಬಗ್ಗೆ ತಿಳಿಯದೆ ಇರುವವರಿಗೆ, ಇದರ ಪರಿಚಯವಾಗಬೇಕು ಎಂಬುದು ಅಕಾಡೆಮಿಯಲ್ಲಿದ್ದ ಉದ್ದಕ್ಕು ಇವರ ಉದ್ದೇಶವಾಗಿತ್ತು. ಇದಕ್ಕೆ ಪೂರಕವಾಗಿ ರಾಜ್ಯದ ಮೂಲೆ ಮೂಲೆಯಿಂದ ಕಲಾವಿದರನ್ನು ಕನಕಮಜಲು ಗ್ರಾಮಕ್ಕೆ ಕರೆಯಿಸಿ, ವಾರದ ಮಟ್ಟಿಗೆ ಅವರನ್ನು ಗ್ರಾಮದಲ್ಲಿಯೆ ತಂಗುವಂತೆ ಮಾಡಿ, ನಮ್ಮ ಸಂಪ್ರದಾಯ, ಸಂಸ್ಕೃತಿಗಳ ಚಿಕ್ಕ ಪರಿಚಯವಾದ ನಂತರ ಅವರ ಕುಂಚದಲ್ಲಿ ನಮ್ಮ ಆಚಾರ ವಿಚಾರಗಳು ಅರಳಿ ನಿಲ್ಲುವಂತೆ ಮಾಡಿದರು.
ಕುಂಚದಲ್ಲರಳಿದ ಈ ಕಲಾಕೃತಿಗಳನ್ನು ಅಕಾಡೆಮಿ ಕಛೇರಿಯಲ್ಲಿ ಜತನದಿಂದ ಕಾಪಾಡಿಕೊಳ್ಳಲಾಗಿದೆ. ಅಕಾಡೆಮಿಯ ಅವಧಿಯಲ್ಲಿ ಇವರೊಡನಾಟದಿಂದ ಹಲವಾರು ಉತ್ತಮ ವಿಚಾರಗಳನ್ನು ಕಲಿತುಕೊಂಡಿದ್ದೆ. ಇದೆ ಸಮಯದಲ್ಲಿ ನನ್ನ ಲಲಿತಪ್ರಬಂಧಗಳ ಸಂಕಲನಕ್ಕೆ ” ಕಪ್ಪು ಹುಡುಗಿ ” ಎಂಬ ಹೆಸರು ಸೂಚಿಸಿ ಅದರ ಮುಖಪುಟವನ್ನು ಅದ್ಭುತವಾಗಿ ರಚಿಸಿಕೊಟ್ಟರು.
ಮುದೊಂದು ದಿನ ನನ್ನ ಕೃತಿಗು ಅವರ ಕುಂಚದ ಬಣ್ಣ ಮೆರುಗು ಪಡೆದುಕೊಳ್ಳಬಹುದು ಎಂಬುದಾಗಿ ನಾನು ಹಿಂದೆಂದು ಅಂದುಕೊಂಡವಳಲ್ಲ. ನನ್ನ ಕೃತಿಯ ಭಾಗ್ಯ ಇದು. ಇನ್ನು ಮುಂದಿನ ಪುಸ್ತಕಕ್ಕು ಅವರಿಂದಲೆ ಮುಖಪುಟ ಬರೆಯಿಸಿಕೊಳ್ಳುವ ಇರಾದೆ ಇತ್ತು.
ಆದರೆ ಇನ್ನೆಲ್ಲಿ? ಮೊದಲೆಲ್ಲ ಹಲವರ ಕೃತಿಗಳಲ್ಲಿ ಮೋಹನ ಸೋನರ ಮುಖಪುಟಗಳನ್ನು ನೋಡಿ ಮೆಚ್ಚಿಕೊಳ್ಳುತ್ತಿದ್ದೆ ಮತ್ತು ಕುತೂಹಲಕರವಾದ ಅವರ ಹೆಸರಿನ ಬಗ್ಗೆಯು ತಿಳಿಯುವ ಆಸಕ್ತಿ ಇತ್ತು. ಈ ಸೋನಾ ಎಂದರೆ ಏನು ಎಂಬುದು ಸೋಜಿಗದ ವಿಷಯವಾಗಿತ್ತು. (ಈಗಲೂ ಸೋನಾ ಎಂದರೆ ಏನೆಂಬುದು ತಿಳಿದಿಲ್ಲ) ಅವರೊಡನಾಟದ ಸಂಧರ್ಭದಲ್ಲಿ ಕೇಳಿ ತಿಳಿದುಕೊಳ್ಳಬೇಕೆಂದು ಅನಿಸಿದರು ಸಂಧರ್ಭವು ಬಂದಿಲ್ಲ, ಮಾತನಾಡುವಾಗ ನೆನಪಿಗು ಬರುತ್ತಿರಲಿಲ್ಲ.
ಮೋಹನ ಸೋನರು ನಮ್ಮ ನಡುವೆ ಇನ್ನು ಇರಬೇಕಿತ್ತು ಎಂಬುದಾಗಿ ಬಲವಾಗಿ ಅನ್ನಿಸುತ್ತಿದೆ. ಜೀವನದಲ್ಲಿ ಸಾವು ಎನ್ನುವ
ವಿಚಾರ ಕಾಡುವಷ್ಟು ಮತ್ಯಾವುದು ಕಾಡುವುದಿಲ್ಲ. ಈ ಕಾಡುವಿಕೆಯನ್ನು ಮೀರಿ ನಿಂತಿದ್ದೇನೆ ಎಂದು ಭಾವಿಸಿದರು ಮತ್ತೆ ಮತ್ತೆ ಕೇಳುವ ಸಾವಿನ ಸುದ್ದಿ ನಮ್ಮನ್ನು ಅಧೀರವಾಗಿಸಿಬಿಡುತ್ತದೆ.
ಅವರ ಮಡದಿ, ಪ್ರತಿಭಾವಂತ ಮಕ್ಕಳಿಗೆ, ಪ್ರೀತಿ ಪಾತ್ರರಿಗೆ ನೋವನ್ನು ಭರಿಸುವ ಅಂತಸ್ಥಶಕ್ತಿ ಬರಲಿ ಎಂಬುದಾಗಿ ಆಶಿಸೋಣ. ಅಕಾಡೆಮಿ ಅವಧಿ ಮುಗಿದ ನಂತರ ಒಡನಾಟ ,ಮಾತುಕತೆ ಏನು ಇಲ್ಲದಿದ್ದರೂ ನನ್ನ ಮನಸ್ಸಿನಲ್ಲಿ ಅಚ್ಚೊತ್ತಿ ಉಳಿದ ವ್ಯಕ್ತಿತ್ವ ಇವರದಾಗಿತ್ತು.ಯಾಕೆಂದರೆ ಅವರದ್ದು ಮೇರು ವ್ಯಕ್ತಿತ್ವ. ಅದಕ್ಕಾಗಿಯೆ ಇವರ ಮರಣ ನನ್ನಕ್ಷರಗಳಲ್ಲಿ ಹೀಗೆ ಅಶ್ರುತರ್ಪಣ ಪಡಕೊಂಡಿತು.
ಜಾ ಜಾಜಿಯ ನೆರಳಂತೆ
ಬದುಕು ಬುದ್ಧನ ನೆಲೆಯಲ್ಲಿ ಪವಡಿಸಲಿ
ಸಾವಿದೆ ಪ್ರತಿ ಜಗಲಿಗೂ
ಬುದ್ಧಿ ಭಾವದ ನೀತಿ – ಅನೀತಿಗೆ
ಸಾವು ಸಂಭ್ರಮ! ತೀರಾ ಹಳೆಯ ನನ್ನದೆ ಕವಿತೆಯ ಸಾಲೊಂದು ಮತ್ತೆ ಮತ್ತೆ ಯಾಕೊ ನೆನಪಿನಿಂದ ಮರುಕಳಿಸುತ್ತಿದೆ.””ಅಳಿಯುವುದು ದೇಹ ಉಳಿಯುವುದು ಕಾಯ”. ಎಂಬ ಮಾತು ಇವರಿಗೆ ಸೂಕ್ತವಾಗಿ ಒಪ್ಪುತ್ತದೆ. ಕೊನೆಯದಾಗಿ ನೋಡಿದಾಗ ತಣ್ಣಗೆ ಮಲಗಿದ್ದ ಅವರ ಮುಖದಲ್ಲಿ ಸ್ಥಿತಪ್ರಜ್ಞೆಯಿರುವಂತೆ ಭಾಸವಾಯಿತು. ಅಗಲಿದ ವ್ಯಕ್ತಿಯೊಬ್ಬರಿಗೆ ಬರೆದ ಮೊದಲ ಅಶ್ರುತರ್ಪಣ ಅವರ ಸಜ್ಜನಿಕೆಯಿಂದಾಗಿಯೆ ಹೊರಹೊಮ್ಮಿತು ಎಂಬುದನ್ನು ಹೆಮ್ಮೆಯಿಂದಲೆ ಹೇಳುತ್ತೇನೆ.
ಅವಧಿಗೆ ನನ್ನ ಅನಂತ ಧನ್ಯವಾದಗಳು
ನಮ್ಮೊಳಗನ್ನು ಆರ್ದ್ರಗೊಳಿಸುವ ವಿದಾಯ ಬರಹ. ಮೋಹನ್ ಸೋನಾ ಅವರು ಸಂಗೀತಾ ಅವರು ಇಚ್ಛಿಸಿದಂತೆ ಕಲಾವಿದರಾಗಿ ಅಲ್ಲದಿದ್ದರೂ ಸರಿ , ಸಜ್ಜನಿಕೆಯ ಉದಾಹರಣೆಯಾಗಿ ಮತ್ತೆ ಹುಟ್ಟಿ ಬರಲೆಂದು ನಾನೂ ಪ್ರಾರ್ಥಿಸುವೆ.
ನಿಜವಾಗಿಯೂ ಅಕ್ಕ