ಯಾವ ಕೋಣನ ಮುಂದೆ ಈ ಕಿನ್ನರಿ?

ರಾಜಾರಾಂ ತಲ್ಲೂರು ರಾಜಾರಾಮ್ ತಲ್ಲೂರು
ಶಾಸಕರ ಅನರ್ಹತೆಯ ಕುರಿತಾದ ಸುಪ್ರೀಂ ಕೋರ್ಟಿನ ತೀರ್ಪು ಶಾಸಕರ ಕರ್ತವ್ಯ ನಿರ್ವಹಣೆಯಲ್ಲಿ ಲೋಪದ ಭಾಗವನ್ನು ಪರಿಗಣನೆಗೆ ತೆಗೆದುಕೊಂಡು, ಅದರ ಆಧಾರದಲ್ಲೇ ಅವರನ್ನು ಅನರ್ಹಗೊಳಿಸಿದ ಸ್ಪೀಕರ್ ತೀರ್ಮಾನವನ್ನು ಎತ್ತಿಹಿಡಿದಿದೆ.
ಅದೇ ವೇಳೆಗೆ ಶಾಸಕರ ಅನರ್ಹತೆಯ ಅವಧಿಯನ್ನು ನಿಗದಿಪಡಿಸುವ ಅಧಿಕಾರ ಸ್ಪೀಕರ್ ಗೆ ಇಲ್ಲ ಎಂಬ ಕಾರಣಕ್ಕಾಗಿ ಸ್ಪೀಕರ್ ಅವರ ತೀರ್ಮಾನದ ಉತ್ತರಾರ್ಧವನ್ನು ಬದಿಗೆ ಸರಿಸುವ ಮೂಲಕ ಅನರ್ಹ ಶಾಸಕರಿಗೆ ಮತ್ತೆ ಚುನಾವಣೆಗೆ ಸ್ಪರ್ಧಿಸಲು ಅನುವು ಮಾಡಿಕೊಟ್ಟಿದೆ.
ದೇಶದ ಅತ್ಯುನ್ನತ ನ್ಯಾಯಾಲಯ ತನ್ನ ತೀರ್ಮಾನಗಳನ್ನು ತೆಗೆದುಕೊಳ್ಳುವಾಗ ಹೇಗೆ ಎಚ್ಚರದಿಂದಿರಬೇಕು ಎಂಬ ಬಗ್ಗೆ ತನ್ನ ತೀರ್ಪಿನ ವಿವರಣೆಯ ಭಾಗದಲ್ಲಿ (ಪಾಯಿಂಟ್ 27) ನ್ಯಾಯಾಲಯ ಬಹಳ ಮಹತ್ವಾಕಾಂಕ್ಷೆಯ ಹೇಳಿಕೆ ನೀಡುತ್ತದೆ. ಸಾಂವಿಧಾನಿಕ ಜವಾಬ್ದಾರಿ ಹುದ್ದೆಯಲ್ಲಿರುವವರು ಹೇಗೆ ಕಾರ್ಯ ನಿರ್ವಹಿಸುತ್ತಿದ್ದಾರೆಂಬ ಬಗ್ಗೆ ತಾನೆಷ್ಟು ಎಚ್ಚರ ವಹಿಸುವ ಜವಾಬ್ದಾರಿ ಹೊಂದಿದ್ದೇನೆಂದು ವಿವರಿಸುತ್ತದೆ.

ಆದರೆ ಕಳೆದ ಚುನಾವಣೆಗಳ ಬಳಿಕ ರಾಜ್ಯದಲ್ಲಿ ಹಾಡುಹಗಲೇ ನಡೆದಿರುವ ಕುದುರೆ ವ್ಯಾಪಾರ, ಕುತ್ಸಿತ ರಾಜಕಾರಣಗಳು ಮನೆಮನೆಗೂ ಪರಿಚಿತ. ಹೀಗಿರುವಾಗ ಇದು ನ್ಯಾಯಪೀಠವೊಂದರ ಗಮನಕ್ಕೆ ಬಂದಿಲ್ಲ ಎಂದಾದರೆ ಈ ಸಾಂವಿಧಾನಿಕ ಮೂರು ಅಂಗಗಳಲ್ಲೇ ಎಲ್ಲೋ ಆ ಹಗಲುಗುರುಡುತನ ಇದೆ ಎಂದರ್ಥ.
ಸುಪ್ರೀಂ ಕೋರ್ಟು ಈ ವಿಚಾರದಲ್ಲಿ ಸಂವಿಧಾನ ಬಲಗೊಳ್ಳಲು ಹತ್ತನೇ ಷೆಡ್ಯೂಲನ್ನು ಬಲಪಡಿಸಬೇಕು ಎಂದು ಅಭಿಪ್ರಾಯಪಡುತ್ತದೆ. (ಪಾಯಿಂಟ್ 116) ಆದರೆ ಇದನ್ನು ಬಲಪಡಿಸುವ ಜಾಗಗಳಲ್ಲಿರುವವರು ಇದೇ ಕುದುರೆ ವ್ಯಾಪಾರದವರು ಎಂಬ ವಾಸ್ತವದ ಕುರಿತು ನ್ಯಾಯಾಲಯ ಜಾಣ ಕುರುಡು ತೋರಿಸುತ್ತದೆ.
ಸಾಂವಿಧಾನಿಕವಾಗಿ ಕೆಲಸ ಮಾಡುವ ಜವಾಬ್ದಾರಿ ಒಳ್ಳೆಯ ಜನರಿಗೆ ಸಿಕ್ಕಾಗ ಸಂವಿಧಾನ ಒಳ್ಳೆಯದು ಮಾಡಬಹುದು ಅದೇ ವೇಳೆ ಹಾಳು ಜನರ ಕೈಗೆ ಸಾಂವಿಧಾನಿಕ ಜವಾಬ್ದಾರಿಗಳನ್ನು ನಿರ್ವಹಿಸುವ ಅವಕಾಶ ಸಿಕ್ಕರೆ ಅದೇ ಸಂವಿಧಾನದಿಂದ ಕೆಡುಕಾಗಬಹುದು ಎಂಬ ಡಾ| ಅಂಬೇಡ್ಕರ್ ಅವರ ಪ್ರಸಿದ್ಧ ಹೇಳಿಕೆಯನ್ನು (ಪಾಯಿಂಟ್ 112) ಮತ್ತು ಅದೇ ಅರ್ಥ ಬರುವ ಡಾ| ರಾಜೇಂದ್ರ ಪ್ರಸಾದ್ ಅವರ ಹೇಳಿಕೆಯನ್ನು (ಪಾಯಿಂಟ್ 113) ಉಲ್ಲೇಖಿಸುವ ಸುಪ್ರೀಂ ಕೋರ್ಟು, ಈ ಕುರಿತು ತನ್ನ ಅಸಹಾಯಕತೆಯನ್ನೇ ತೋರಿಸಿದೆ.
ಆದರೆ ಇದೇ ವೇಳೆ ಮೊನ್ನೆಯ ಅಯೋಧ್ಯೆ ತೀರ್ಮಾನದ ವೇಳೆ, ನ್ಯಾಯಾಲಯ ತನ್ನ ವ್ಯಾಪ್ತಿಯ ಒಳಗೇ ತಾನೇ ವಿಧಿಸಿಕೊಂಡ ತತ್ವಗಳ ಹೊರಗೂ ತಾನು ತೀರ್ಮಾನಗಳನ್ನು ತೆಗೆದುಕೊಳ್ಳಬಲ್ಲೆ ಎಂದು ತೋರಿಸಿದೆ.
ಸಾರ್ವಜನಿಕ ಬದುಕು ತೀರಾ ವಿಕಾರಗೊಂಡಿರುವ ಈ ಹೊತ್ತಿನಲ್ಲಿ, ನಿರ್ಣಾಯಕ ತೀರ್ಮಾನಗಳನ್ನು ನ್ಯಾಯಾಂಗ ತೆಗೆದುಕೊಳ್ಳಬೇಕಾದ ಸಮಯ ಬಂದಿದೆ ಎಂಬ ಸಾರ್ವಜನಿಕ ಒತ್ತಾಸೆ ತೀವ್ರಗೊಳ್ಳುತ್ತಿರುವಾಗ ಈ ರೀತಿ ಅನುಕೂಲಕರ ಕೈಚೆಲ್ಲುವಿಕೆ ಪ್ರದರ್ಶಿಸಿದರೆ ದೇಶದ ಜನತೆಗೆ ನ್ಯಾಯಾಂಗದ ಮೇಲೆ ನಂಬಿಕೆ ಉಳಿಯುವುದೆಂತು?
ಹಾಲಿ ಪ್ರಕರಣದಲ್ಲಂತೂ ಕೋಟ್ಯಂತರ ರೂಪಾಯಿಗಳ ಆಸೆ-ಆಮಿಷಗಳು ಹರಿದಾಡಿರುವುದು, ರೆಸಾರ್ಟುವಾಸ, ಮಾತುಕಥೆಗಳ ರೆಕಾರ್ಡಿಂಗ್ ಗಳು ಎಲ್ಲೆಡೆ ಸದ್ದುಮಾಡುತ್ತಿವೆ. ಇಂತಹ ಸನ್ನಿವೇಶದಲ್ಲೂ ಈ ಸಾಕ್ಷ್ಯಾಧಾರಗಳನ್ನು ನ್ಯಾಯಾಲಯಕ್ಕೆ ಸಮಾಧಾನ ಆಗುವ ರೀತಿಯಲ್ಲಿ ಸಲ್ಲಿಸಿ, ತಪ್ಪಿತಸ್ಥರಿಗೆ ಶಿಕ್ಷೆ ನೀಡಲು ಸಾಧ್ಯ ಆಗದಿದ್ದರೆ, ಯಾವ ಸಂವಿಧಾನವೂ ನಮ್ಮನ್ನು ರಕ್ಷಿಸಲಾರದು. ಇವೆಲ್ಲವೂ ಹಾಡುಹಗಲಿನ ಕ್ರಿಮಿನಲ್ ಅಪರಾಧಗಳಲ್ಲವೇ? ಸಂವಿಧಾನ ಬಿಡಿ, ಕನಿಷ್ಠ ಯಾವುದೇ ಐಪಿಸಿ ಸೆಕ್ಷನ್ ಕೂಡ ಇದಕ್ಕೆ ಅನ್ವಯ ಆಗುವುದಿಲ್ಲವೆ?
ಹಾಗಿದ್ದರೆ ನಾವು ಯಾವ ಕೋಣಗಳ ಎದುರು ಕಿನ್ನರಿ ಬಾರಿಸುತ್ತಿದ್ದೇವೆ? ಯಾವ ಗೋರ್ಕಲ್ಲ ಮೇಲೆ ಮಳೆ ಸುರಿಸುತ್ತಿದ್ದೇವೆ??!!

‍ಲೇಖಕರು avadhi

November 15, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: