ಮ ಶ್ರೀ ಮುರಳಿ ಕೃಷ್ಣ ನೋಡಿದ ‘ನೆಪೋಲಿಯನ್‌’

ಇನ್ನೂ ಗಟ್ಟಿ ನಿರೂಪಣೆಯಿರಬೇಕಿದ್ದ ನೆಪೋಲಿಯನ್‌ ಚಲನಚಿತ್ರ…..

ಮ ಶ್ರೀ ಮುರಳಿ ಕೃಷ್ಣ

—-

ಬಯೋಪಿಕ್‌ ಚಲನಚಿತ್ರಗಳನ್ನು ನಿರ್ದೇಶಿಸಿ, ನಿರ್ಮಾಣ ಮಾಡುವುದು ಒಂದು ಪ್ರಾಯಾಸಕರವಾದ ಕೆಲಸವೇ ಸರಿ. ಇಂತಹ ಚಲನಚಿತ್ರಗಳು ನಿರ್ದೇಶಕನಿಗೆ ಹಲವು ತೆರನಾದ ಸವಾಲುಗಳನ್ನು ಒಡ್ಡುತ್ತವೆ.  ವಿಶ್ವದ ಇತಿಹಾಸದಲ್ಲೇ ಅತ್ಯಂತ ದಕ್ಷ ಸೇನಾಪತಿ ಮತ್ತು ನಂತರ ಫ್ರಾನ್ಸ್ ನ    ಸಾಮ್ರಾಟನಾಗಿದ್ದ, ಸಂಕೀರ್ಣ ವ್ಯಕ್ತಿತ್ವದ ನೆಪೋಲಿಯನ್‌ ಬೊನಾಪಾರ್ಟೆ ಕುರಿತ ಬಯೋಪಿಕ್‌ ಚಲನಚಿತ್ರವನ್ನು ಮಾಡುವುದು ಒಂದು ಸಾಹಸವೇ ಸರಿ. ಎಂಬತ್ತೈದು ವರ್ಷದ ಬ್ರಿಟನ್‌ನಿನ ನಿರ್ದೇಶಕ/ನಿರ್ಮಾಪಕರಾಗಿರುವ ರಿಡ್ಲಿ ಸ್ಕಾಟ್‌ ಈ ಸಾಹಸಕ್ಕೆ ಕೈ ಹಾಕಿದ್ದಾರೆ.

ಸುಮಾರು ಐವತ್ತು ವರ್ಷಗಳಿಗೂ ಹೆಚ್ಚಿನ ಕಾಲದಿಂದ ಚಲನಚಿತ್ರರಂಗದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿರುವ ಸ್ಕಾಟ್‌ ಐತಿಹಾಸಿಕ, ಕ್ರೈಮ್‌ ಮತ್ತು ವೈಜ್ಞಾನಿಕ ಕಥೆಗಳುಳ್ಳ ಚಲನಚಿತ್ರಗಳನ್ನು ನಿರ್ದೇಶಿಸಿದ್ದಾರೆ.  ಅವರು ನಿರ್ದೇಶಿಸಿದ ʼ ಥೇಲ್ಮ ಅಂಡ್‌ ಲೂಯಿಸ್ ʼ, ಗ್ಲೆಡಿಯೇಟರ್‌ ʼ, ʼ ಬ್ಲ್ಯಾಕ್‌ ಹಾಕ್‌ ಡೌನ್‌ ʼ, ʼ ದಿ ಮಾರ್ಶಿಯನ್‌ ʼ ಮುಂತಾದ ಚಲನಚಿತ್ರಗಳು ಅಂತರರಾಷ್ಟ್ರೀಯ ಮಟ್ಟದ ಪ್ರಶಸ್ತಿಗಳನ್ನು ಪಡೆದು, ವೀಕ್ಷಕರ ಮನ್ನಣೆಯನ್ನು ಗಳಿಸಿವೆ.

ಫ್ರೆಂಚ್‌ ಕ್ರಾಂತಿಯ ಮುನ್ನ ಆ ನಾಡಿನ ಕೊನೆಯ ರಾಣಿಯಾಗಿದ್ದ ಮ್ಯಾರಿ ಅಂಟೊನೆಟ್‌ಳನ್ನು ಗಿಲೋಟಿನ್‌ ಶಿಕ್ಷೆಗೆ ಒಳಪಡಿಸುವ ಬೀಭತ್ಸ ದೃಶ್ಯದೊಂದಿಗೆ ಈ ಚಲನಚಿತ್ರ ಶುರುವಾಗುತ್ತದೆ.  ಅಲ್ಲಿ ನೆರೆದಿದ್ದ ಅಪಾರ ಜನಸ್ತೋಮ ಆಕೆಯನ್ನು ವಧಾಸ್ಥಾನಕ್ಕೆ ಕರೆದೊಯ್ಯುವಾಗ, ವಾಚಾಮಗೋಚರ ಬೈಯುತ್ತದೆ; ಆಕೆಯ ಮೇಲೆ ಅಸಹ್ಯಕರ ತಾಜ್ಯ ವಸ್ತುಗಳನ್ನು ಒಗೆಯುತ್ತದೆ.  ಆ ಸಮಯದಲ್ಲಿ, ಮಿಲಿಟರಿಯಲ್ಲಿ ಒಬ್ಬ ಅಧಿಕಾರಿಯಷ್ಟೇ ಆಗಿದ್ದ ನೆಪೋಲಿಯನ್‌(ನಟ ಒಯಕಿನ್‌ ಫೀನಿಕ್ಸ್) ಬರೀ ಪ್ರೇಕ್ಷಕನಾಗಿರುತ್ತಾನೆ. ಇತರ ಮಂದಿಯಂತೆ ಆತ ವರ್ತಿಸುವುದಿಲ್ಲ!  ಆದರೆ.  ಆತ ಗಿಲೋಟಿನ್‌ ಪ್ರದೇಶದಲ್ಲಿ ಇರಲಿಲ್ಲ. ಒಬ್ಬ ಫಿರಂಗಿ ದಳದ ಅಧಿಕಾರಿಯಾಗಿ ಆತ ಫ್ರಾನ್ಸ್‌ನ ಇನ್ನೊಂದು ಭಾಗದ ಟೂಲಾನ್‌ನಲ್ಲಿ ಬ್ರಿಟೀಶರನ್ನು ಸದೆಬಡಿದು, ಯಶಸ್ವಿಯಾಗಿ ಹಿಮ್ಮೆಟ್ಟಿಸುವ ಮಿಲಿಟರಿ ಕಾರ್ಯಾಚರಣೆಯಲ್ಲಿ ತೊಡಗಿದ್ದ ಎಂದು ಇತಿಹಾಸದ ಮೂಲಗಳು ಬೇರೆಯೇ ವಿಷಯವನ್ನು ತಿಳಿಸುತ್ತವೆ.

ಈ ಚಲನಚಿತ್ರದಲ್ಲಿ ಈಜಿಪ್ಟ್‌ ಮೇಲಿನ ಯುದ್ಧದಲ್ಲಿ ಫ್ರಾನ್ಸ್‌ನ ಸೇನಾಪಡೆ ಅಲ್ಲಿನ ಪಿರಿಮಿಡ್ ಗಳ ಮೇಲೆ ಫಿರಂಗಿಗಳನ್ನು ಬಳಸಿ, ಮೇಲ್ಭಾಗಗಳು ಛಿದ್ರಗೊಂಡಂತೆ ತೋರಿಸಲಾಗಿದೆ. ಡೈವೊರ್ಸ್‌ ದೃಶ್ಯದಲ್ಲಿ ತನ್ನ ಮಡದಿ ಜೋಸಫೀನ್‌(‌ ನಟಿ ವನೆಸ್ಸಾ ಕಿರ್ಬಿ)ಳ ಕಪಾಳಕ್ಕೆ ನೆಪೋಲಿಯನ್‌ ಹೊಡೆಯುವಂತೆ ಬಿಂಬಿಸಲಾಗಿದೆ.  ಚಲನಚಿತ್ರದಲ್ಲಿ ಅಲೆಕ್ಸಾಂಡರ್‌ ಝಾರ್‌ನನ್ನು ಭೇಟಿ ಮಾಡುವ ಮುನ್ನ ಡೈವೊರ್ಸ್‌ ಆದಂತೆ ಕಟ್ಟಿಕೊಡಲಾಗಿದೆ.  ಇವೆಲ್ಲವೂ ಇತಿಹಾಸಕ್ಕೆ ವ್ಯತಿರಿಕ್ತವಾಗಿವೆ.  ಇದೊಂದು ಐತಿಹಾಸಿಕ ಕಥನ (ಹಿಸ್ಟಾರಿಕಲ್‌ ಫಿಕ್ಷನ್)‌ ಚಲನಚಿತ್ರವಾಗಿರುವುದರಿಂದ ನಿರ್ದೇಶಕನಾದವನು ಸಿನಿಮ್ಯಾಟಿಕ್‌ ಲಿಬರ್ಟೀಸ್‌ಗಳನ್ನು ತೆಗೆದುಕೊಳ್ಳಬಹುದು ಎಂಬ ಅಂಶವನ್ನು ಕೆಲವರು ಪ್ರತಿಪಾದಿಸಬಹುದು.  ಆದರೆ ಇದೊಂದು ಬಯೋಪಿಕ್‌ ಚಲನಚಿತ್ರ ಎಂದು ಪರಿಗಣಿಸಿದರೇ, ಒಬ್ಬ ನಿರ್ದೇಶಕ ಇಂತಹ ಸ್ವಾತಂತ್ರ್ಯಗಳನ್ನು ಎಷ್ಟು ಮತ್ತು ಹೇಗೆ ತೆಗೆದುಕೊಳ್ಳಬಹುದು ಎಂಬ ಪ್ರಶ್ನೆಯನ್ನು ತಳ್ಳಿ ಹಾಕುವಂತಿಲ್ಲ!

ಐವತ್ತೊಂದು ವರ್ಷಗಳ ಜೀವನವನ್ನು ನಡೆಸಿದ ನೆಪೋಲಿಯನ್‌ನ ಮೂವತ್ತು ವರ್ಷಗಳನ್ನು ಈ ಚಲನಚಿತ್ರದಲ್ಲಿ ಕಟ್ಟಿಕೊಡಲಾಗಿದೆ.  ಎರಡು ಗಂಟೆ ಮೂವತ್ತೆಂಟು ನಿಮಿಷಗಳ ಅವಧಿಯಲ್ಲಿ ಆತನ ಮೂರು ದಶಕಗಳ ಜೀವನವನ್ನು ಹಿಡಿದಿಡುವುದು ದೊಡ್ಡ ಸವಾಲೇ ಸರಿ!  ಹೀಗಾಗಿ ನಿರೂಪಣೆಯಲ್ಲಿ ವೇಗ ಇದೆ. ಆದುದರಿಂದ ಆತನ ಪಾತ್ರಪೋಷಣೆಯಲ್ಲಿ ಸಾವಯವ ಬೆಳವಣಿಗೆ ಕುಂಠಿತಗೊಂಡಿದೆ ಎಂದೆನಿಸಿತು! ಫ್ರೆಂಚ್‌ ಕ್ರಾಂತಿಯ ಆಶಯಗಳು ಆತನ ಮೇಲೆ ಎಂತಹ ಪ್ರಭಾವಗಳನ್ನು ಬೀರಿದವು? ತನ್ನ ಆಡಳಿತಾವಧಿಯಲ್ಲಿ ಆತ ಅವುಗಳನ್ನು ಅಳವಡಿಸಿಕೊಳ್ಳಲು ಪ್ರಯತ್ನಿಸಿದನೇ? ಒಬ್ಬ ಸಾಮಾನ್ಯ ಮಿಲಿಟರಿ ಅಧಿಕಾರಿಯಾಗಿ ಸಾಮ್ರಾಟನಾದುದರ ಹಿಂದಿನ ರಾಜಕೀಯ, ಮನಃಶಾಸ್ತ್ರೀಯ ಇತ್ಯಾದಿ ಕಾರಣಗಳು ಎಂತಹ ಪಾತ್ರವನ್ನು ವಹಿಸಿದವು? ಎಂಬಿತ್ಯಾದಿ ಪ್ರಶ್ನೆಗಳಿಗೆ ಈ ಚಲನಚಿತ್ರದಲ್ಲಿ ಸುಳಿವುಗಳಿಲ್ಲ!

ನೆಪೋಲಿಯನ್‌ ಮತ್ತು ಆತನ ಮಡದಿ ಜೋಸಫೀನ್‌ ನಡುವಿನ ಸಂಬಂಧದ ಮೇಲೆ ಚಲನಚಿತ್ರ ಬೀರಿರುವ ಬೆಳಕಿನಲ್ಲಿ ಅವರೀರ್ವರ ಕಂದು ಬಣ್ಣದ ಛಾಯೆಗಳು ಢಾಳಾಗಿಯೇ ಕಂಡು ಬರುತ್ತವೆ! ಅನೇಕ ಯುದ್ಧಗಳನ್ನು ಜಯಿಸಿ, ಬಲಿಷ್ಠನಾಗಿ ಬೆಳೆದ ನೆಪೋಲಿಯನ್‌ ಜೋಸಫೀನ್‌ಳ ಸಾಂಗತ್ಯದಲ್ಲಿ ಒಂದರ್ಥದಲ್ಲಿ ಒಬ್ಬ ಪ್ರೇಮೊನ್ಮತ್ತ ಮಾನವನಾಗಿ ತನ್ನಲ್ಲಿರುವ ನವಿರು ಭಾವನೆಗಳನ್ನು, ಕಾಡಿಸುವಂತಹ ವರ್ತನೆಗಳನ್ನು ವ್ಯಕ್ತಪಡಿಸುತ್ತಿದ್ದ! ಎರಡು ಮಕ್ಕಳ ತಾಯಿಯಾಗಿ,ವಿಧವೆಯಾಗಿದ್ದ ಜೋಸಫೀನ್‌ಳನ್ನು ವಿವಾಹವಾದ ನೆಪೋಲಿಯನ್‌ ಯುದ್ಧಭೂಮಿಯಿಂದಲೂ ಆಕೆಗೆ ಬರೆದ ಎನ್ನಲಾದ ಪತ್ರಗಳ ವೃತ್ತಾಂತವೂ ಚಲನಚಿತ್ರದಲ್ಲಿದೆ. ಗಂಡ- ಹೆಂಡತಿ ಇಬ್ಬರೂ ಮಹತ್ವಾಂಕ್ಷಿಗಳೇ. ನೆಪೋಲಿಯನ್‌ ಯುದ್ಧಗಳ ಮೂಲಕ ಅಧಕಾರದ ಅಗ್ರಸ್ಥಾನವನ್ನು ಗಳಿಸಲು ಪ್ರಯತ್ನಪಟ್ಟರೇ, ಜೋಸಫೀನ್‌ ಬೆಡರೂಂ ಪಾಲಿಟಿಕ್ಸ್‌ ಮೂಲಕವೇ ಆತನ ಮೇಲೆ ನಿಯಂತ್ರಣವನ್ನು ಸಾಧಿಸಲು ಯತ್ನಿಸುತ್ತಾಳೆ ಎನ್ನಬಹುದು! ಒಂದು ದೃಶ್ಯದಲ್ಲಿ ಆಕೆ ತನ್ನ ಗಂಡನನ್ನು ಉದ್ದೇಶಿಸಿ, “ನನ್ನ ಬಿಟ್ಟು ನೀನೇನೂ ಇಲ್ಲ “ ಎಂಬುದನ್ನು ಹೇಳಿ, ಆತ ಆ ವಾಕ್ಯವನ್ನು ಉಚ್ಚರಿಸುವಂತೆ ಮಾಡುತ್ತಾಳೆ!  ಚಲನಚಿತ್ರದ ಕೊನೆಯ ಘಟ್ಟದ ಇನ್ನೊಂದು ದೃಶ್ಯದಲ್ಲಿ ಆಕೆಯಿಂದ ಮೋಡಿಗೆ ಒಳಗಾದ ರಷ್ಯಾದ ಅಲೆಕ್ಸಾಂಡರ್‌ ಝಾರ್ನೊಡನೆ ಕಳೆದ ರಸನಿಮಿಷಗಳ ಸನ್ನಿವೇಶವೂ ಇದೆ. ಹೀಗೆ ಇವರೀರ್ವರ ಸಂಬಂಧ ರೋಲರ್‌-ಕೋಸ್ಟರ್‌ ರೈಡ್‌ ತರಹ ಇತ್ತು ಎನ್ನಬಹುದು!

ನೆಪೋಲಿಯನ್‌ನಿಂದ ಜಾರಿಯಾದ ʼ 1804ರ ಫ್ರೆಂಚ್‌ ಸಿವಿಲ್‌ ಕೋಡ್‌ ʼ(ನೆಪೋಲಿಯನಿಕ್‌ ಕೋಡ್)‌ ಫ್ರಾನ್ಸ್ ನ ಜನತೆಗೆ ಒಂದಿಷ್ಟು ಪ್ರಜಾತಾಂತ್ರಿಕ ಎನ್ನಬಹುದಾದ ಹಕ್ಕುಗಳನ್ನು ನೀಡಿತು.  ಆತನಿಂದ ಕಾರ್ಯಾಚರಣೆಗೊಂಡ ಇತರ ಕೆಲವು ಆಡಳಿತಾತ್ಮಕ ಸುಧಾರಣೆಗಳು ಈ ಚಲನಚಿತ್ರದಲ್ಲಿ ಸ್ಥಾನವನ್ನು ಪಡೆದಿಲ್ಲ.  ಮಿಲಿಟರಿ ಕಾರ್ಯಾಚರಣೆಗಳು ಮತ್ತು ತನ್ನ ಮಡದಿಯ ಜೊತೆಗಿನ ರೋಮ್ಯಾಂಟಿಕ್‌ ಸಂಬಂಧಗಳ ಮೂಲಕ ಆತನ ವ್ಯಕ್ತಿತ್ವವನ್ನು ಕಟ್ಟಿಕೊಡಲು ಪ್ರಯತ್ನಿಸಲಾಗಿದೆ ಎನ್ನಬಹುದು!

ಕೆಲವು ಇತಿಹಾಸಜ್ಞರ ಅನ್ವಯ ನೆಪೋಲಿಯನ್‌ ಸುಮಾರು 60-80 ಯುದ್ಧಗಳಲ್ಲಿ ಭಾಗವಹಿಸಿದ ಎಂದು ಹೇಳಲಾಗುತ್ತದೆ.  ಈ ಚಲನಚಿತ್ರದಲ್ಲಿ ಆಸ್ಟರ್ಲಿಟ್ಸ್‌, ವಾಟರ್ಲೂ ಮುಂತಾದ ಆರು ಯುದ್ಧಗಳನ್ನು ತೋರಿಸಲಾಗಿದೆ.  ಸಿನಿಮೋಟೋಗ್ರಾಫರ್‌ ವೋಲ್ಸ್ಕಿ ಯುದ್ಧಭೂಮಿಯ ಕಾರ್ಯಾಚರಣೆಗಳನ್ನು ಗಮನಾರ್ಹ ರೀತಿಯಲ್ಲಿ ಸೆರೆಹಿಡಿದಿದ್ದಾರೆ.  ಸಂಗೀತ ಚಲನಚಿತ್ರದ ಕಟ್ಟೋಣಕ್ಕೆ ಪೂರಕವಾಗಿದೆ.  ಮೇಕಿಂಗ್‌ನಲ್ಲಿ ನಿರ್ದೇಶಕ ಮತ್ತು ವಿವಿಧ ತಂತ್ರಜ್ಞರ ಶ್ರಮ ಸಫಲವಾಗಿರುವುದು ಎದ್ದು ಕಾಣುತ್ತದೆ. ಒಯಕಿನ್‌ ಫೀನಿಕ್ಸ್ ಮತ್ತು ವನೆಸ್ಸಾ ಅವರ ನಟನೆ ಈ ಚಲನಚಿತ್ರಕ್ಕೆ ಮೆರುಗನ್ನು ನೀಡಿದೆ.

ಸುಮಾರು ನಾಲ್ಕು ಗಂಟೆ ಹತ್ತು ನಿಮಿಷಗಳ ಈ ಚಲನಚಿತ್ರದ ʼ ಡೈರಕ್ಟರ್ಸ್‌ ಕಟ್‌ ʼ ಮುಂದೆ ಆಪಲ್‌ ಟಿವಿಯಲ್ಲಿ ಪ್ರದರ್ಶನಗೊಳ್ಳಲಿದೆ.  ಅದರಲ್ಲಿ ನೆಪೋಲಿಯನ್‌ನ ವ್ಯಕ್ತಿತ್ವದ ಇತರ ಆಯಾಮಗಳನ್ನು ನಿರೀಕ್ಷಿಸಬಹುದೇ?

ಫ್ರೆಂಚ್‌ ಕ್ರಾಂತಿಯನ್ನು ಒಳಗೊಂಡು, ಹದಿನೆಂಟನೇ ಶತಮಾನದ ಕೊನೆಯ ಘಟ್ಟ ಮತ್ತು ಹತ್ತೊಂಬತ್ತನೆಯದರ ಮೊದಲ ಎರಡು ದಶಕಗಳ ಫ್ರೆಂಚ್‌ ಇತಿಹಾಸವನ್ನು ತಿಳಿದವರು ಮತ್ತೊಮ್ಮೆ ಅದರ ಪ್ರವೇಶವನ್ನು ಮಾಡುವುದಕ್ಕೆ ಹಾಗೂ ತಿಳಿಯದೇ ಇರುವವರು ತಿಳಿದುಕೊಳ್ಳುವ ನಿಟ್ಟಿನಲ್ಲಿ ಉತ್ಸುಕರಾಗಿದ್ದರೇ ಈ ಚಲನಚಿತ್ರವನ್ನು ಖಂಡಿತ ವೀಕ್ಷಿಸಬಹುದು!

‍ಲೇಖಕರು avadhi

November 27, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: