ಮೌನ ಮುರಿದ ಕಾವ್ಯ…

ಸತೀಶ ಕುಲಕರ್ಣಿ

ಮೌನದೊಳಗಿನ ಮಾತು – ಶೇಖರ ಭಜಂತ್ರಿ ಅವರ ಮೊದಲ ಕವನ ಸಂಕಲನ. ಹಾವೇರಿಯ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ರಸಾಯನ ಶಾಸ್ತ್ರ ಉಪನ್ಯಾಸಕರು. ಇಷ್ಟು ದಿನ ಮನದೊಳಗಡಿಗಿದ ಮೌನವನ್ನು ಕಾವ್ಯವಾಗಿಸುವ ಪ್ರಯತ್ನವೇ ಮೌನದೊಳಗಿನ ಮಾತು. ಕೆಳಶ್ರೇಣಿ ಸಮಾಜದಿಂದ ಮೇಲೆ ಬಂದ ಭಜಂತ್ರಿ ಅವರು ಅಕ್ಷರ ಮತ್ತು ಅನ್ನದ ನೆಲೆಕಂಡುಕೊಂಡ ಅನುಭವಗಳಿಗೆ ಬಾಯಿ ಕೊಡುವ ಪ್ರಯತ್ನ ಈ ಸಂಕಲನದ್ದು. ತುಂಬ ಹ್ಯಾಂಡಿ ಅನ್ನಬಹುದಾದ ಪುಸ್ತಕದಲ್ಲಿ ನಲವತ್ತು ಕವಿತೆಗಳಿವೆ.

ಬಿಡುಗಣ್ಣಿನಿಂದ, ಒಂದಾಳ ವಿಷಾದದಲ್ಲಿ ತಾವುಂಡ ತಾಕಲಾಟಗಳನ್ನು ಕವಿತೆಗಳನ್ನಾಗಿಸಿದ್ದಾರೆ.

ನೀವು ದೇವಾಯಲಯ ಕಟ್ಟಿ ಸಂಭ್ರಮಿಸುವಾಗ
ನೋವಿಂದ ಅಲ್ಲಿಂದ ಎದ್ದು ಬಂದು
ನಿರ್ಗತಿಕರ ಗುಡಿಸಲಿಗೆ ಚಪ್ಪರವಾಗುತ್ತೇನೆ

ಇವು ಕವಿ ಉಂಡ ಸತ್ಯ, ಕವಿ ಕಾಣುವ ಆಶಯಗಳು. ನಾಲ್ಕಾರು ದಶಕಗಳಿಂದ ಕನ್ನಡದ ಮುಖ್ಯ ಕಾವ್ಯಧ್ವನಿಯಾದ ಪ್ರತಿರೋಧ ಮೌನದೊಳಗಿನ ಮಾತು ಸಂಕಲನದೊಳಗಿನ ಧಾರೆಯಾಗಿದೆ. ಬಿಚ್ಚು ಮನಸ್ಸಿನಿಂದ ಕಟು ಸತ್ಯಗಳನ್ನು ಹೇಳುವ ಕಾವ್ಯವಿದು. ಇದರೊಳಗೆ ಒಂದು ತಣ್ಣನ ವಿಷಾದ ಕೂಡ ತಳಾದಿಯಲ್ಲಿದೆ.

ಪತ್ತೆ ಹಚ್ಚಿರುವೆ ದೇವರಿರುವ ತಾಣಗಳ
ಮಂದಿರ ಮಸೀದೆ ಚರ್ಚುಗಳ ಮುಂದೆ ಕುಳಿತ
ನಿರ್ಗತಿಕರ ದಾನ ನೀಡುವ ಕೈಗಳಲ್ಲಿ
ಹಸಿದವರ ತುತ್ತಿನ ಚೀಲ ತುಂಬುವ ಅನ್ನದಲ್ಲಿ
ನೊಂದವರ ಕಣ್ಣೀರೊರೆಸುವ ಕೈಬೆರಳಲ್ಲಿ

ಕೂಗಿ ಹೇಳು ಕವಿತೆಯ ಈ ಸಾಲುಗಳು ಕವಿ ಶೇಖಕರು ಇಡೀ ಸಮಾಜದ ಹಿತ ಕಾಯ್ವ ದೃಷ್ಠಿಯದು. ಇಂತಹ ಹತ್ತಾರು ಕವಿತೆಗಳು ಸಂಕಲನದ ಮೌಲ್ಯ ಹೆಚ್ಚಿಸಿವೆ. ಬುಡ್ಡಿ ದೀಪದ ಬೆಳಕು, ಮೌನದೊಳಗಿನ ಮಾತು, ಕತ್ತಲೊಳಗಿನ ಕಾದಂಬರಿ, ಕ್ಷಮಿಸಿ ಶರಣರೆ, ಮೂರು ದಿನದ ಅತಿಥಿ ಕವಿತೆಗಳಲ್ಲಿ ಅರಿವು ಅರಳಿ ಹೊಸ ಹುಡುಕಾಟವೊಂದು ಆರಂಭವಾಗಿದೆ.

ತಮ್ಮೆಲ್ಲ ಚಿಂತನಾಶೀಲ ದರ್ಶನಕ್ಕೆ ಬುದ್ಧನೆ ಅಂತಿಮ ಆಯ್ಕೆ ಮಾಡಿಕೊಂಡಿದ್ದಾರೆ. ಶೇಖರ ಭಜಂತ್ರಿಯವರು ಮಾಗಿದ ಚಿಂತನೆಯ ಫಲವಾಗಿ ಬುದ್ಧನ ಮೇಲೆ ನಾಲ್ಕು ಕವಿತೆಗಳಿವೆ. ಜಗದ ಬೆಳಕು ಬುದ್ಧ, ಭುವನದ ನಕ್ಷತ್ರಗಳು, ಜ್ಞಾನ ದೀವಿಗೆ, ಬುದ್ಧ ಗುರುತ್ವ ಈ ಕವಿತೆಗಳಲ್ಲಿ ತಮ್ಮೆಲ್ಲ ತಳಮಳಗಳಿಗೆ ಬುದ್ಧನ ಸಂದೇಶಗಳನ್ನು ಸಾಂತ್ವನವಾಗಿ ಕಂಡುಕೊಂಡಿದ್ದಾರೆ.

ನಗುವಿನಲಿ ಮಗುವಾದ, ಮಗುವಂತೆ ಪ್ರಬುದ್ಧನಾದ
ಜಗಕೆ ಬೆಳದಿಂಗಳು ಚೆಲ್ಲುವ ನಕ್ಷತ್ರನಾದ ಬುದ್ಧ

ಬುದ್ಧನ ಪೂರ್ಣ ರೂಪವನ್ನು ಮಗುವಿನ ಮುಗ್ಧತೆಯಲ್ಲಿ ಕಾಣುವ ಕವಿ ಭಜಂತ್ರಿ ‘ಜಗಕೆ ಬೆಳಗಿಂಗಳು ಚೆಲ್ಲುವ ನಕ್ಷತ್ರಗಳ ದೀವಿಗೆʼಯಲ್ಲಿ ಕಾಣುತ್ತಾರೆ.

ಮರೆಯಾಗಿ ಹೋಗುವನೇ ಬುದ್ಧ
ನಮ್ಮೊಳಗೇ ಅವನಿರುವನಲ್ಲ

ಪ್ರತಿ ಜೀವಿಯ ಅಂತರಂಗದಲ್ಲಿ ಬುದ್ಧನನ್ನು ಕಾಣುವ ಮರೆಯಾಗಿ ಹೋಗುವನೇ ಬುದ್ಧ? ಎಂದು ಕೇಳುತ್ತ ಇದು ಅಸಾಧ್ಯವಲ್ಲ ನಮ್ಮೊಳಗೆ ಇರುವನು ಬುದ್ಧ ಎಂಬ ನಿಲುವಿಗೆ ಬರುತ್ತಾರೆ. ಬುದ್ಧನ ಜೊತೆ ಜೊತೆಯಲ್ಲಿ ತಮ್ಮ ತಂದೆಯನ್ನು ಕವಿ ತುಂಬ ಹೃದ್ಯವಾಗಿ ಚಿತ್ರಿಸುತ್ತಾರೆ. ಮರೆಯಲು ಸಾಧ್ಯವೆ ?, ಕನಸುಗಾರ ನನ್ನಪ್ಪ ಎಂಬೆರಡು ಕವಿತೆಗಳು ಕವಿಯ ಜೀವನ ಪ್ರೀತಿಗೆ ಸಾಕ್ಷಿಯಾಗಿವೆ.

ಅಪ್ಪ ಸೂರ್ಯನೇ ಆಗಿದ್ದ
ಗ್ರಹಣ ಹಿಡಿದಾಗೆಲ್ಲ ತಾನೇ ಬಿಡಿಸಿ ಕೊಳ್ಳುತ್ತಿದ್ದ
ತಾಪದ ಚುರುಕು ಮುಟ್ಟಿಸಿದರೂ
ಜೀವನ ಪೂರ್ತಿ ಬೆಳಕನ್ನೇ ನೀಡಿದ್ದ

ಮೌನದೊಳಗಿನ ಮಾತು ಸಂಕಲನದಲ್ಲಿ ಬಹಳ ಮುಖ್ಯವಾಗಿ ಕೊರೋನಾ ಕರಾಳ ಕಾಲಕ್ಕೆ ಹೊಸ ಅರ್ಥ ಕೊಡುವ, ಧನಾತ್ಮಕ ಚಿಂತನೆಯ ಕವಿತೆಗಳನ್ನು ಶೇಖರ ಕೊಟ್ಟಿದ್ದಾರೆ. ಜೀವ ಜಗತ್ತಿಗೆ ಪಾಠ ಕಲಿಸುವ ಮೇಸ್ಟ್ರಾಗಿ ಕೊರೋನಾವನ್ನು ಕಾಣುತ್ತಾರೆ.

ನಮ್ಮೊಳಗಿನ ನಮ್ಮನು ಬಡಿದೆಚ್ಚರಿಸಿದ
ಕೊರೋನಾ ಮೇಸ್ಟ್ರಿಗೊಂದು ಸಲಾಮ್

ಈ ಸಾಲುಗಳು ಸಾಕು ಕವಿ ಕೊರೋನಾವನ್ನು ಕಂಡಿರುವ ರೀತಿಗೆ. ಕವಿಯೊಬ್ಬ ವಸ್ತು ಸ್ಥಿತಿಯನ್ನು ವಿಭಿನ್ನವಾಗಿ ನೋಡುವ ಕ್ರಮಕ್ಕೆ ಸೃಜನಾತ್ಮಕ ಸ್ಪರ್ಶಕೊಟ್ಟಾಗ ಹೊಸ ಅರ್ಥ ಹೊಳಹುಗಳು ಸಿಗುತ್ತವೆ. ಜಡವನ್ನು ಜೀವವಾಗಿಸುವುದೇ ಕಾವ್ಯದ ಗುಣಲಕ್ಷಣ ನಂಬಿಕೆ ಅಪನಂಬಿಕೆಗಳ ಹೊಯ್ದಾಟ, ಸತ್ಯ ದರ್ಶನಕ್ಕೆ ಹಾತೊರೆಯುವುದು, ಜಡ ಸಮಾಜದ ಕುರಿತ ಗಾಢಸಿಟ್ಟು, ಅಳಲು ಅಹ್ವಾಲು, ಪ್ರೀತಿ ಸಂಕಷ್ಟ ಮೋಸದಾಟಗಳ ಕುರಿತು ತನ್ನೊಳಗೆ ತಾನು ಮಾತನಾಡಿಕೊಳ್ಳುತ್ತಲೇ ಸಮಾಜ ಮುಖಿಯಾಗುವ ಕವಿ ಶೇಖರ ಭಜಂತ್ರಿ ಅರಿವಿನ ದರ್ಶನವನ್ನು ಬುದ್ಧನ ಮೂಲಕ ಕಂಡುಕೊಳ್ಳಲು ಪ್ರಯತ್ನಿಸಿದ್ದಾರೆ.

ಇನ್ನಿಷ್ಟು ವಿಶಾಲವಾಗಿ ಪ್ರತಿಕ ರೂಪಕಗಳ ಮೂಲಕ ಕಾವ್ಯ ರಚಿಸಿಬೇಕು. ಮೊದಲ ಸಂಕಲನದ ಅಗ್ನಿ ಪರೀಕ್ಷೆಯಲ್ಲಿ ಸುಲಭವಾಗಿ ಗೆದ್ದಿದ್ದಾರೆ. ವ್ಯಕ್ತಿಗತ ನೆಲೆಯಿಂದ ಸಾರ್ವತ್ರಿಕಗೊಳ್ಳುತ್ತ ತನ್ನ ಕಾಲದ ಜೀವ ಬಿಂಬವನ್ನು ಹಿಡಿಯಲು ಸಫಲರಾಗಿದ್ದಾರೆ.

‍ಲೇಖಕರು Admin

September 17, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Nagaraj HUDED

    ಮನದೊಳಗಿನ ಮಾತು ಕವನ ಸಂಕಲನ ಕುರಿತು ಮೌನವಾಗಿಯೇ ಎಲ್ಲ ಹೇಳಿಬಿಟ್ಟಂತಿದೆ ಲೇಖನ. ಹಿರಿಯ ಸಾಹಿತಿಗಳಾದ ಸತೀಶ ಸರ್ ಅವರ ಪ್ರಬುದ್ಧ ಶಬ್ದಗಳು ಕೃತಿಯನ್ನು ಓದುವಂತೆ ಮಾಡಿವೆ.
    ಹೊಸಬರ ಕೃತಿ ಪರಿಚಯಿಸುವ ಓದು, ಬರೆಯುವ ತಾಳ್ಮೆ ನೋಡಿದಾಗ ಸತೀಶ ಸರ್ ನಮಗೆ ಆದರ್ಶವಾಗಿ ಕಾಣುತ್ತಾರೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: