ಪ್ರಸಾದ್ ರಕ್ಷಿದಿ
ಸುಳ್ಯ ತಾಲ್ಲೂಕಿನ ಸೋಣಂಗೇರಿಯಲ್ಲಿ ಒಂದು ಭಾವ ಪೂರ್ಣ ಸಂಜೆ. ಮೋಹನ ಸೋನ, ಕಲಾವಿದ, ರಂಗ ನಿರ್ದೇಶಕ ಮಗು ಮನಸ್ಸಿನ ಶಿಕ್ಷಕ, ಮೌನವನ್ನೇ ಮಾತಾಗಿಸುವ ಗೆಳೆಯ ಎಲ್ಲವೂ…
ಸೋಣಂಗೇರಿಯ ಬಯಲು ಚಿತ್ರಾಲಯವಿರಲಿ, ಕಾರವಾರದ ರಾಕ್ ಗಾರ್ಡನ್ ಇರಲಿ. ರಕ್ಷಿದಿಯಂತ ಹಳ್ಳಿಯ ಕಲಾಶಿಬಿರವಿರಲಿ. ಸೋನರಿಗೆ ಎಲ್ಲದರಲ್ಲೂ ತನ್ಮಯತೆ, ಎಲ್ಲವೂ ಸಮಾನ ಪ್ರಾಮುಖ್ಯದ ಸಂಗತಿಗಳೇ ಆಗಿದ್ದವು…
ಅವರ ಮನೆಯಲ್ಲಿನ ಕಲಾ ಗ್ಯಾಲರಿ ಅವರ ಕನಸಾಗಿತ್ತು.
ಸೋನ ನಮ್ಮೊಂದಿಗಿಲ್ಲ ಸೋನರ ಕನಸನ್ನು ಅವರ ಪತ್ನಿ, ಮಕ್ಕಳು ಮತ್ತು ಗೆಳೆಯರು ಅವರ ಕನಸನ್ನು ನನಸಾಗಿಸುವ ಪ್ರಯತ್ನ ಮಾಡಿದ್ದಾರೆ.. ಸೋಣಂಗೇರಿಯ ನಡುಮನೆಯಲ್ಲಿ ಮೋಹನ ಸೋನ ಕಲಾಗ್ಯಾಲರಿ ಉದ್ಘಾಟನೆಯಾಯಿತು.
ಸೋನ ಅನೇಕರಿಗೆ ಗುರು.. ಅವರಲ್ಲಿ ಅಮೃತಾ ರಕ್ಷಿದಿ ಒಬ್ಬಳು.. ಅಮೃತಾಳನ್ನು ಬಣ್ಣಗಳ ಲೋಕದಲ್ಲಿ ಕೈ ಹಿಡಿದು ನಡೆಸಿದವರು ಸೋನ… ಚಿಕ್ಕಂದಿನಿಂದ ಅವಳ ಕೊನೆಯ ದಿನಗಳವರೆಗೆ ಸೋನ ಅವಳ ಅಚ್ಚು ಮೆಚ್ಚಿನಗುರು…
ಅಮೃತಾ ಚಿತ್ರಗಳ ಪುಸ್ತಿಕೆಯೊಂದನ್ನು ನಾವು ತರುವ ಯೋಚನೆ ಮಾಡಿದಾಗ ಬಹಳ ಆಸಕ್ತಿ ಯಿಂದ ಚಿತ್ರಗಳ ಆಯ್ಕೆ ಅದಕ್ಕೆ ಒಂದಷ್ಟು ವಿವರಣಾತ್ಮಕ ಬರಹ ಮುಂತಾದವನ್ನೂ ಮಾಡಿಕೊಟ್ಡವರು ಸೋನ… ನಮಗೆ ತಿಳಿದಿರಲಿಲ್ಲ ಆಗಲೇ ಅವರ ಆರೋಗ್ಯ ಸೂಕ್ಷ್ಮ ವಾಗಿತ್ತು.
ಅಮೃತಾ ತನ್ನ ಯಾನವನ್ನು ಮುಗಿಸಿ ಬಿಟ್ಟಿದ್ದಳು. ಅಮೃತಾಳ ಚಿತ್ರಗಳ ಗುಚ್ಛವನ್ನು ಸೋನರಿಗೆ ಅರ್ಪಿಸಲಾಗಿದೆ.
ಬಹುಶಃ ಇದು ಅಮೃತಾ ಳ ಆಯ್ಕೆಯೂ ಆಗಿರುತ್ತಿತ್ತೆಂಬ ನಂಬಿಕೆ ನಮ್ಮದು. ಹಲವು ಕಾರಣಗಳಿಂದ ಚಿತ್ರಗಳ ಪುಸ್ತಕ ಇನ್ನೂ ಪೂರ್ಣ ಸಿದ್ಧವಾಗಿ ಬಂದಿಲ್ಲ. ಎಲ್ಲ ಅತಿಥಿಗಳ ಸಮ್ಮುಖದಲ್ಲಿ ‘ಅಮೃತ ಚಿತ್ರಗಳು’ ಚಿತ್ರ ಗುಚ್ಛ ದ ಕರಡು ಪ್ರತಿಯೊಂದನ್ನು ಸಾಂಕೇತಿಕವಾಗಿ ಸೋನರಿಗೆ ಸಮರ್ಪಿಸಲಾಯಿತು.
0 ಪ್ರತಿಕ್ರಿಯೆಗಳು