ಮೇ ಸಾಹಿತ್ಯ ಮೇಳ ನೆನಪಲ್ಲಿ ಉಳಿಯುವ ಸಮಾವೇಶ…

ಪುರುಷೋತ್ತಮ ಬಿಳಿಮಲೆ

ಎರಡು ದಿನಗಳ‌ ಮೇ ಸಾಹಿತ್ಯ ಮೇಳ ಬಿಜಾಪುರದಲ್ಲಿ ಯಶಸ್ವಿಯಾಗಿ ಮುಕ್ತಾಯಗೊಂಡಿತು.‌ ಸುಮಾರು ಎರಡೂವರೆ ಸಾವಿರ ಜನ ಸೇರಿದ್ದ ಸಮಾವೇಶವದು.

ಸಮಾವೇಶದ ಮುಖ್ಯ ಆಶಯ ಭಾರತೀಯ ಪ್ರಜಾತಂತ್ರದ ಮುಂದಿರುವ ಸವಾಲುಗಳು ಮತ್ತು ಅದನ್ನು‌ ಮೀರುವ ಹಾದಿಗಳ ಹುಡುಕಾಟದ ಕುರಿತಾಗಿತ್ತು.‌ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪ್ರಕಾಶ್ ಅಂಬೇಡ್ಕರ್, ತೀಸ್ತಾ ಸೆಟಲ್ವಾಡ್ ಹಾಗೂ ಹರ್ಷ ಮಂದರ್ ಅವರು ಮೇಲಿನ ವಿಷಯವನ್ನು ರಾಷ್ಟ್ರೀಯ ಚೌಕಟ್ಟಿನಲ್ಲಿರಿಸಿ ಗಂಭೀರವಾಗಿ ವಿಶ್ಲೇಷಿಸಿದರು. ರಾಜೇಂದ್ರ ಚೆನ್ನಿಯವರು ಇಡೀ ಸಮಸ್ಯೆಯನ್ನು ಪ್ರಜಾ ಕೇಂದ್ರಿತವಾಗಿ ಚರ್ಚಿಸಿದರು.

ಎರಡನೇ ಗೋಷ್ಠಿಯಲ್ಲಿ ನಾನು ರಾಷ್ಟ್ರೀಯ ಹೋರಾಟದ ವಿಭಿನ್ನ ಧಾರೆಗಳನ್ನು ಗುರುತಿಸಿ, ಅವುಗಳ ಅಂತರ್ ಸಂಬಂಧಗಳ ಕಡೆಗೆ ಗಮನ ಸೆಳೆದೆ. ಡಾ. ಎಚ್ ಜಿ ಜಯಲಕ್ಷ್ಮಿಯವರು ಆ ಕಾಲದಲ್ಲಿ ನಡೆದ ಬುಡಕಟ್ಟು ಹೋರಾಟಗಳನ್ನು ಪರಿಚಯಿಸುವುದರ ಜೊತೆಗೆ ಅದಕ್ಕೆ ಸಂಬಂಧಿಸಿದ ಕೆಲವು ಹಾಡುಗಳನ್ನು ಸೊಗಸಾಗಿ ಹಾಡಿದರು. ಲೇಖಕ ಎ. ನಾರಾಯಣ ಅವರು ಸಂವಿಧಾನದ ಪರಿಕಲ್ಪನೆಯನ್ನು ವಿವರಿಸಿ ಮುಂದಿನ ದಿನಗಳಲ್ಲಿ ನಾವು ಮಾಡಬೇಕಾದ ಕೆಲಸಗಳ ಬಗ್ಗೆ ಹೇಳಿದರು. ಈ ಅರ್ಥದಲ್ಲಿ ನಾರಾಯಣರ ಭಾಷಣ ಚೆನ್ನಿಯವರ ಮಾತುಗಳ ಮುಂದರಿಕೆಯಾಗಿತ್ತು.

ಮೂರನೇ ಗೋಷ್ಠಿಯಲ್ಲಿ ಕೃಷ್ಣಮೂರ್ತಿ ಚಮರಂ ದಲಿತರ ಕುರಿತು, ಹನೀಫರು ಅಲ್ಪ ಸಂಖ್ಯಾತರ ಕುರಿತು ಮತ್ತು ಶೈಲಜಾ ಹಿರೇಮಠರು ಮಹಿಳೆಯರ ಕುರಿತೂ ಮಾತಾಡಿದರು. ಅನುಭವ ಮತ್ತು ಓದಿನ ಬಲದಿಂದ ಸಿದ್ಧಪಡಿಸಿದ ಈ ಭಾಷಣಗಳು ಸಮಕಾಲೀನ ಭಾರತದ ಇನ್ನೊಂದು ಚಿತ್ರವನ್ನು ನಮ್ಮ ಮುಂದಿಡಲು ಸಮರ್ಥವಾದುವು.‌ಮೊದಲ ದಿನದ ಕೊನೆಯಲ್ಲಿ ನಟರಾಜ್ ಬೂದಾಳ್ ಮಾಡಿದ ಬೌದ್ಧ, ಸೂಫಿ ಮತ್ತು ಶರಣ ಪರಂಪರೆಯ ಕುರಿತ ಭಾಷಣ ಸಮಾವೇಶದ ಅತ್ಯುತ್ತಮ ಉಪನ್ಯಾಸವಾಗಿತ್ತು. ವಸ್ತು ಮತ್ತು ಅದರ ಮಂಡನೆಯ ವಿಚಾರದಲ್ಲಿ ಬೂದಾಳ್ ನಾವೆಲ್ಲ ಅನುಸರಿಸಬಹುದಾದಂಥ ಮಾದರಿಯನ್ನು ನೀಡಿದರು.

ಎರಡನೇ ದಿವಸದಂದು ನಡೆದ ಯುವಸ್ಪಂದನದಲ್ಲಿ ಸುಭಾಸ್ ರಾಜಮಾನೆ ಮತ್ತು ಟಿ ಎಸ್ ಗೊರವರ ಮಾಡಿದ ಉಪನ್ಯಾಸಗಳು ಈ ತಲೆಮಾರು ಎಷ್ಟು ಪ್ರೌಢವಾಗಿ ಯೋಚಿಸುತ್ತಿದೆ ಎಂಬುದನ್ನು ತೋರಿಸಿಕೊಟ್ಟಿತು.‌ ಕೊನೆಯ ಗೋಷ್ಠಿಯಲ್ಲಿ ಮಾತಾಡಿದ ಮಾವಳ್ಳಿ ಶಂಕರ್, ಸಿದ್ದನಗೌಡ ಪಾಟೀಲ್, ನೂರ್ ಶ್ರೀಧರ್, ಕೆ ನೀಲಾ, ಬಡಗಲಪುರ ನಾಗೇಂದ್ರ ಹಾಗೂ ನಂದಕುಮಾರ್ ಕುಂಬ್ರಿಉಬ್ಬು ಅವರು ನಾವು ಮುಂದಿನ ದಿನಗಳಲ್ಲಿ ಇಡಬೇಕಾದ ಹೆಜ್ಜೆಗಳ ಕುರಿತು ಎಚ್ಚರದ ಮಾತುಗಳನ್ನಾಡಿದರು.

ಎರಡು ಕವಿಗೋಷ್ಠಿಗಳು ನಡೆಯಿತು. ಎರಡನೇ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಸಬಿತಾ ಬನ್ನಾಡಿಯವರು ಕವಿತೆ ಮತ್ತು ಸಮಾಜವನ್ನು ಒಟ್ಟು ಸೇರಿಸಿ ಮಾತಾಡಿದ ರೀತಿ ಬಹಳ ಪ್ರೌಢವಾಗಿತ್ತು.‌

ಕಾರ್ಯಕ್ರಮದ ನಡುನಡುವೆ ಕೇಳಿಬರುತ್ತಿದ್ದ ಹೋರಾಟದ ಹಾಡುಗಳು ಇಡೀ ಸಮಾವೇಶಕ್ಕೆ ಪೂರಕವಾಗಿದ್ದವು.

ರಾಜ್ಯದಾದ್ಯಂತದಿಂದ ಲೇಖಕರು, ಕಲಾವಿದರು, ಹೋರಾಟಗಾರರು ಉತ್ಸಾಹದಿಂದ ಭಾಗವಹಿಸಿದ್ದರು. ಸ್ವಂತ ಖರ್ಚಿನಿಂದ ಭಾಗವಹಿಸುವ ಜನರ ಬದ್ಧತೆ ಸರಕಾರೀ ಪ್ರಾಯೋಜಿತ ಕಾರ್ಯಕ್ರಮಗಳಲ್ಲಿ ಇರುವುದಿಲ್ಲ.

ಡಾ. ಅನುಪಮಾ ಹಾಗೂ ಲಡಾಯಿ ಬಸು ಸಮ್ಮೇಳನದ ಯಶಸ್ವಿಗೆ ಕಾರಣಕರ್ತರಾಗಿದ್ದಾರೆ. ಇವರಿಬ್ಬರ ಬಳಗ ಬಹಳ ದೊಡ್ಡದು. ಅವರಿಗೆ ಕೃತಜ್ಞತೆಗಳು.

ನಾನಂತೂ ಎಲ್ಲ ತಲೆಮಾರಿನ ಜನರನ್ನೂ ಭೇಟಿಯಾದೆ, ಸನತ್ ಕುಮಾರ್ ಬೆಳಗಲಿಯವರಿಂದ ಮೂರುವರ್ಷದ ಅಭೇದ್ಯಳ ವರೆಗೆ. ನವಕರ್ನಾಟಕ ಪುಸ್ತಕದಂಗಡಿಯಲ್ಲಿ ಓಡಾಡುತ್ತಿದ್ದ ಅಭೇದ್ಯಳು ನಿಂಬಾಳೆಯವರ ಆಕ್ರಮ ಸಂತಾನ ಪುಸ್ತಕ ತಗೊಂಡು, ಅದರಲ್ಲಿ ಅವಳ ಹೆಸರನ್ನು ನನ್ನ ಕೈಯಲ್ಲಿ ಬರೆಯಿಸಿಕೊಂಡಲ್ಲಿಗೆ ಸಮಾವೇಶ ಕೊನೆಗೊಂಡಿತು.

ಬಹಳ ಕಾಲ ನೆನಪಲ್ಲಿ ಉಳಿಯುವ ಸಮಾವೇಶವಿದು.

‍ಲೇಖಕರು avadhi

May 29, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: