ಮೇಟಿ ಮಲ್ಲಿಕಾರ್ಜುನ ಓದಿದ ‘ಹಾವಳಿ’

ಹಾವಳಿ: ಭಾಷೆ ಮತ್ತು ವಿನ್ಯಾಸ

ಮೇಟಿ ಮಲ್ಲಿಕಾರ್ಜುನ

——-

ಭಾಗ -1

ಮುನ್ನೋಟ: ಸಾಹಿತ್ಯದ ಗ್ರಹಿಕೆಯಲ್ಲಿ ಭಾಷೆ ಏಕೆ ಮುಖ್ಯ?

ಸಾಹಿತ್ಯ ಪಠ್ಯವನ್ನು ಅರಿಯುವುದರಲ್ಲಿ ನುಡಿಯೂ ಅತ್ಯಂತ ಪ್ರಮುಖ ನೆಲೆಯಾಗಿದೆ. ಪಠ್ಯದ ವಿಭಿನ್ನ ಬಗೆಗಳು ಭಾಷಾ ಶೈಲಿಯ ವಿಭಿನ್ನ ಮಾದರಿ ಇಲ್ಲವೇ ಬಗೆಗಳನ್ನು ಸೃಷ್ಟಿಸುತ್ತವೆ. ಭಾಷಿಕ ಸೃಷ್ಟಿಯ ಇಂತಹ ವಿನ್ಯಾಸಗಳನ್ನು ಅರ್ಥೈಸಲು, ಶೈಲಿಯ ಬದಲಾಗಿ  ಸಂಕಥನ ಎನ್ನುವ ಒಂದು ವಿಶೇಷ ಪರಿಕಲ್ಪನೆಯನ್ನು ನಾನು ಇಲ್ಲಿ ಬಳಸುತ್ತೇನೆ. ಈ ಪರಿಕಲ್ಪನೆ ಎರಡು ಮಾದರಿಯಲ್ಲಿ ಪ್ರಧಾನವಾಗಿ ನಮ್ಮ ದೈನಂದಿನ ಚಟುವಟಿಕೆಗಳನ್ನು ನಿರೂಪಿಸುತ್ತದೆ. ಇವುಗಳನ್ನು ಸಾಮಾನ್ಯವಾಗಿ ನಾವು ಕಥನ ಎಂದು ಕರೆಯುತ್ತೇವೆ. ಒಂದು ಮಾದರಿಯ ಕಥನವು ಚರಿತ್ರೆಗೆ ಸಂಬಂಧಿಸಿದ್ದರೆ, ಮತ್ತೊಂದು ಬಗೆಯ ಕಥನವು ಸಾಹಿತ್ಯಕ ನಿರೂಪಣೆಗಳಿಗೆ ಸಂಬಂಧಿಸಿರುತ್ತದೆ. ಕೆಲವು ಸನ್ನಿವೇಶದಲ್ಲಿ ಈ ಎರಡೂ ಕಥನಗಳು ಏಕತ್ರಗೊಂಡು ಬದುಕಿನ ಅನುಭವ ಎಂಬ ಒಂದು ನಿರ್ದಿಷ್ಟ ವಿದ್ಯಮಾನವನ್ನು ವಿವರಿಸುವ ವಿನ್ಯಾಸವಾಗಿರುತ್ತವೆ. ಹಾಗಾಗಿ ಪ್ರಸ್ತುತ ಲೇಖನದಲ್ಲಿ ಇವೆರಡೂ ಮಾದರಿಯ ಕಥನಗಳು ಮೇಳೈಸುವ ವಿನ್ಯಾಸವನ್ನು “ಹಾವಳಿ” ಕಾದಂಬರಿಯ ನಿರೂಪಣೆಯನ್ನು ಬಿಡಿಸಿ ನೋಡುವ ಮೂಲಕ ಈ ಕಾದಂಬರಿಯ ಭಾಷಿಕ ವಿನ್ಯಾಸವನ್ನು ಅರಿಯುವ ಪ್ರಯತ್ನವನ್ನು  ಮಾಡಲಾಗಿದೆ.

ಹಾವಳಿ ಕಾದಂಬರಿಯ ಇಡೀ ಅನುಭವವನ್ನು ಒಂದು ಸಂಕಥನವನ್ನಾಗಿ ಪರಿಭಾವಿಸಲಾಗಿದೆ. ಸಂಕಥನ ಮೂಲಭೂತವಾಗಿ ಸಾಮಾಜಿಕತೆಯನ್ನು ರೂಪಿಸುವ ನೆಲೆಯಾಗಿದೆ.  ಅಂದರೆ ಸಂಕಥನವು ಸಾಮಾಜಿಕತೆಯ ಮೂರು ಆಯಾಮಗಳನ್ನು ಒಟ್ಟೊಟ್ಟಿಗೆ ಪ್ರತಿನಿಧಿಸುತ್ತದೆ.  ಇವುಗಳನ್ನು ಸಾಮಾಜಿಕ ಅರಿವು, ಸಾಮಾಜಿಕ ನಂಟಸ್ತಿಕೆ ಹಾಗೂ ಸಾಮಾಜಿಕ ಗುರುತು ಎಂದು ವರ್ಗೀಕರಿಸಬಹುದು. ಈ ಮೂರೂ ಆಯಾಮಗಳು ಬದುಕಿನ ಅತ್ಯಂತ ಸಹಜ ಹಾಗೂ ಸಾಮಾನ್ಯ ನಿಲುವುಗಳು ಆಗಿರುತ್ತವೆ. ಬದುಕಿನ ಬಗೆಗಿನ ಒಂದೊಂದು ಸನ್ನಿವೇಶವನ್ನೂ ವಿವರಿಸುವುದು ಬಹುತೇಕವಾಗಿ ಈ ಮೂರು ಆಯಾಮಗಳಿಂದ ಎನ್ನುವದು ಗಮನಾರ್ಹ. ಇನ್ನೂಂದು ಮಾತನ್ನು ಈ ಚರ್ಚೆಗಳಿಗೆ ಇಲ್ಲಿಯೇ ಸೇರಿಸಬೇಕು. ಅದೇನೆಂದರೆ, ಸಂಕಥನ ಎನ್ನುವ ಈ ವಿದ್ಯಮಾನವು ಅಧಿಕಾರ ಸಂಬಂಧಗಳಿಂದ ರೂಪಿಸಲ್ಪಟ್ಟಿರುತ್ತದೆ ಹಾಗೂ ಐಡಿಯಾಲಜಿಗಳ ಜೊತೆಗೆ ಇದನ್ನು ನೆಲೆಗೊಳಿಸಿ ಅರ್ಥೈಸಲಾಗುತ್ತದೆ. ಈ ಎಲ್ಲಾ ವಿನ್ಯಾಸಗಳು ಮೈದೋರುವುದು ಭಾಷೆಯ ಮೂಲಕವೇ ಅನ್ನುವುದನ್ನು ಮರೆಯುವಂತಿಲ್ಲ.

ಕಾದಂಬರಿಯ (ಹಾವಳಿ) ಒಳಗೊಂದು ಜಗತ್ತು ಸೃಷ್ಟಿಯಾಗಿರುತ್ತದೆ. ಮೇಲ್ನೋಟಕ್ಕೆ ಇದೊಂದು ಕಥಾ ಜಗತ್ತು. ಈ ಜಗತ್ತು ನಮ್ಮ ದೈನಂದಿನ ಜಗತ್ತಿಗಿಂತ ತೀರಾ ಭಿನ್ನವೂ ಮತ್ತು ವಿಶಿಷ್ಟವೂ ಆಗಿರುವುದಿಲ್ಲ ಎಂದು ಹೇಳುವವರನ್ನೂ ನೋಡಿದ್ದೇವೆ. ಒಂದು ರೀತಿಯಲ್ಲಿ ಈ ಮಾತನ್ನು ಅಲ್ಲಗಳೆಯುವಂತಿಲ್ಲ ಆದರೆ ಇದುವೇ ವಾಸ್ತವವೆಂದೂ ಭಾವಿಸುವಂತಿಲ್ಲ. ಏಕೆಂದರೆ ಕಾದಂಬರಿಯ ಲೋಕದ ನಿಲುವುಗಳು ಸಾಂದ್ರಗೊಂಡು ಬದುಕಿನ ನಿರ್ದಿಷ್ಟ ದೃಷ್ಟಿಕೋನಗಳನ್ನು ಒದಗಿಸಿಕೊಡುತ್ತವೆ. ಇಂತಹದೊಂದು ಅವಕಾಶ ಯಾವುದೇ ಒಂದು ಬದಕಿನ ಕಾಲದಲ್ಲಿ ಮಾತ್ರ ನೇರವಾಗಿ ನಮ್ಮ ಅನುಭವಕ್ಕೆ ಸೀಗುವುದಿಲ್ಲ. ಕಾರಣ, ಸಾಮಾಜಿಕತೆ ಮತ್ತು ಚಾರಿತ್ರಿಕತೆಯ ಪ್ರಶ್ನೆಗಳು ಒಟ್ಟಾಗಿ ಇಲ್ಲವೇ ಇಡಿಯಾಗಿ ನಮ್ಮ ಅನುಭವದ ವಿನ್ಯಾಸದಲ್ಲಿ ನೆಲೆಗೊಂಡಿರುವುದಿಲ್ಲ. ಬದುಕು ಅತ್ಯಂತ ಸಂಕೀರ್ಣತೆಯಿಂದ ಕೂಡಿರುವುದರ ಜೊತೆಗೆ ಕಾಲ ದೇಶಗಳನ್ನು ಮೀರಿದ ಭಾವಪ್ರಪಂಚವನ್ನು ರೂಪಿಸುವ ತುಡಿತವನ್ನು ಹೊಂದಿರುತ್ತದೆ. ಸಾಹಿತ್ಯ ಕಥನಗಳಲ್ಲಿ ಇಂತಹ ಪ್ರಕ್ರಿಯೆಯ ಸ್ವರೂಪವು ಪ್ರತಿಯೊಂದು ಓದಿಗೂ ವರ್ತಮಾನದ ವಿನ್ಯಾಸವಾಗಿಯೇ ಪರಿಣಮಿಸುತ್ತದೆ. ಹಾಗಾಗಿ ಸಾಮಾಜಿಕತೆ ಮತ್ತು ಚಾರಿತ್ರೆಕತೆಯ ನಡುವಣ ಅನುಸಂಧಾನ ಇಲ್ಲವೇ ಸಂಘರ್ಷದ ಮಾದರಿಗಳು ನಮಗೆ ಒಂದು ಪಟ್ಟಿನಲ್ಲಿ ಗೋಚರಿಸುತ್ತವೆ. ಆದ್ದರಿಂದ ಬದುಕಿನ ಬಗೆಗಿನ ಅನುಭವದ ತೀವ್ರತೆ ಕಲೆ ಅಥವಾ ಸಾಹಿತ್ಯದ ಮೂಲಕ ದೊರೆಯುವಷ್ಟು ತೀವ್ರವಾಗಿ ನಮ್ಮ ದೈನಂದಿನ ಬದುಕಿನಲ್ಲಿ ತೋರುವುದಿಲ್ಲ. ಅನುಭವದ ಸಂಕೀರ್ಣತೆಯಲ್ಲಿ ಮಾತ್ರ ಈ ಎರಡೂ ಲೋಕಗಳು ಕೂಡ ಒಂದೇ ಸ್ವರೂಪದ ಸಂಕೀರ್ಣತೆಯನ್ನು ಹೊಂದಿರುತ್ತವೆ. ಹಾಗಾಗಿ ನಾವು ಸಾಹಿತ್ಯವನ್ನು ಓದುವಾಗ ಇಲ್ಲವೇ ನೇರವಾಗಿ ದೈನಂದಿನ ಬದುಕನ್ನು ಅರ್ಥೈಸುವಾಗ, ಸಾಮಾಜಿಕ, ಚಾರಿತ್ರಿಕ ಮತ್ತು ಸಾಂಸ್ಕೃತಿಕ ಹಿನ್ನಲೆಯಿಂದಲೇ ಅರ್ಥಗಳನ್ನು ಕಂಡುಕೊಳ್ಳುತ್ತೇವೆ. ಈ ಹಿನ್ನಲೆ ಇಲ್ಲದೇ ಭಾಷೆಯನ್ನು, ದೈನಂದಿನ ಬದುಕಿನಲ್ಲಾಗಲೀ ಇಲ್ಲವೇ ಸಾಹಿತ್ಯ ಲೋಕದಲ್ಲಾಗಲೀ ಅರಿಯುವುದಕ್ಕೆ ಸಾಧ್ಯವೇ ಇಲ್ಲ.  

ಭಾಷೆ ಮತ್ತು ಬದುಕು ಇವೆರಡನ್ನೂ ಒಳಗೊಂಡ ರಾಚನಿಕ ಸ್ವರೂಪವನ್ನು ನಾವು ಭಾಷಿಕ ವಿನ್ಯಾಸ ಎಂದು ಗುರುತಿಸುತ್ತೇವೆ. ಇಂತಹದೊಂದು ವಿನ್ಯಾಸವನ್ನು ಹಾವಳಿ ಕಾದಂಬರಿಯಲ್ಲಿ ಕಂಡುಕೊಳ್ಳುವುದೇ ಈ ಬರಹದ ಆಶಯವಾಗಿದೆ. ಇನ್ನೂ ನಿಚ್ಚಳವಾಗಿ ಹೇಳಬೇಕೆಂದರೆ, ಭಾಷಿಕ ಮತ್ತು ಶೈಲಿಶಾಸ್ತ್ರೀಯ ವಿನ್ಯಾಸ ಹಾಗೂ ಪರಿಕರಗಳು ಕೇವಲ ಕಾದಂಬರಿಯ ವಿವರಗಳನ್ನು  ಹಾಗೂ ವ್ಯಾಖ್ಯಾನಗಳನ್ನು ಮಾತ್ರ ಅನ್ವೇಷಿಸಲು ಪೂರಕವಾಗಿರದೇ, ಕಾದಂಬರಿಯ ಸಾಹಿತ್ಯಕ ವಿನ್ಯಾಸಗಳನ್ನು ಅನಾವರಣಗೊಳಿಸಲು ಪೂರಕವಾಗಿರುತ್ತವೆ. ಇಂತಹ ವಿನ್ಯಾಸಗಳನ್ನು ಬಹುತೇಕವಾಗಿ ಸಾಹಿತ್ಯ ವಿಮರ್ಶಕರು ಗುರುತಿಸುವಲ್ಲಿ ಸೋಲುತ್ತಾರೆ. ಅಂದರೆ ಭಾಷಿಕ ರಚನೆಯ ಸ್ವರೂಪವನ್ನು ಬಿಡಿಸಿ ನೋಡುವ ಮೂಲಕ ಪ್ರಕಟಗೊಳ್ಳುವ ಸಂವೇದನೆಯ ಮಾದರಿಗಳು, ರೂಢಿಗತ ಸಾಹಿತ್ಯ ವಿಮರ್ಶೆಯ ಪ್ರಕ್ರಿಯೆಯಲ್ಲಿ ಹೊರಹೊಮ್ಮುವುದು ದುಸ್ತರವೇ ಸರಿ.  ಹಾಗಾಗಿ ಸಾಹಿತ್ಯ ಪಠ್ಯಗಳ ಭಾಷಿಕ ನಿರೂಪಣೆಗಳನ್ನು ಅರ್ಥೈಸುವ ಮುಖೇನ ಸೈದ್ಧಾಂತಿಕ ವಿನ್ಯಾಸಗಳನ್ನೂ ಅರ್ಥೈಸುವುದಾಗಿದೆ. ಇದು ಕ್ರಿಟಿಕಲ್ ಲಿಂಗ್ವಿಸ್ಟಿಕ್ಸ್ ನ ಪ್ರಮುಖ ಆಶಯವೇ ಆಗಿರುತ್ತದೆ. ಭಾಷಾಶಾಸ್ತ್ರದ ಇಂತಹ ಪ್ರಸ್ತಾನಗಳ ಮೂಲಕ ಸಾಹಿತ್ಯ ಕಥನಗಳಲ್ಲಿ (ಹಾವಳಿ) ನೆಲೆಗೊಂಡಿರುವ ‘ಐಡಿಯಾಲಜಿ’ ಇಲ್ಲವೇ ಸೈದ್ಧಾಂತಿಕ  ನಿಲುವುಗಳನ್ನು ಪತ್ತೆಹಚ್ಚಿ ನೋಡುವ ಬಗೆಯಾಗಿದೆ. ಸೈದ್ಧಾಂತಿಕ ನಿಲುವು ಅನ್ನುವುದು ಲೋಕದೃಷ್ಟಿ ಅಥವಾ ಮೌಲ್ಯವ್ಯವಸ್ಥೆಯನ್ನು ಪ್ರತಿನಿಧಿಸುವ ಪರಿಕಲ್ಪನೆ ಆಗಿರುತ್ತದೆ. ಈ ಲೋಕದಲ್ಲಿ ನೆಲೆನಿಂತಿರುವ ನಂಬಿಕೆ, ಅಭಿಪ್ರಾಯ, ಅನುಮಾನ, ಸಾಮಾಜಿಕ-ಸಾಂಸ್ಕೃತಿಕ ನಿಲುವುಗಳು ಹಾಗೂ ಪೂರ್ವಾಗ್ರಹಗಳ ಬಗೆಗಿನ ಜನರ ನಿಲುವುಗಳನ್ನು ಈ ಸೈದ್ಧಾಂತಿಕ ಪರಿಕಲ್ಪನೆ ಸೂಚಿಸುತ್ತದೆ. ಹಾವಳಿ ಕಾದಂಬರಿಯಲ್ಲಿ ಒಡಮೂಡಿದ ಹಿಂದೂ ಮುಸ್ಲಿಂ ಕೋಮು ಸಂಘರ್ಷದ ವಿನ್ಯಾಸವನ್ನು ಅರಿಯುವುದಕ್ಕೆ ಈ ಸೈದ್ಧಾಂತಿಕ ನಿಲುವು ಒತ್ತಾಸೆಯಾಗಿದೆ.

ಗ್ರಹಿಕೆ ಮತ್ತು ನಂಬಿಕೆಗಳ ಇಡೀ ಮೊತ್ತವೇ ಸಿದ್ಧಾಂತ ಅಥವಾ ಸಿದ್ಧಾಂತಗಳು ಆಗಿರುತ್ತವೆ. ಪರಿಣಾಮವಾಗಿ ಎಲ್ಲ ಸಾಹಿತ್ಯಕ ಪಠ್ಯಗಳು, ಒಂದು ಸೈದ್ಧಾಂತಿಕ ನೆಲೆಯಿಂದ ರೂಪುಗೊಂಡಿರುತ್ತವೆ. ಆದ್ದರಿಂದ ಪ್ರತಿಯೊಂದು ಸಾಹಿತ್ಯಕ ಪಠ್ಯವು ಇಂತಹದೇ ಸೈದ್ಧಾಂತಿಕತೆಯ ನಿಲುವುಗಳು ಇಲ್ಲವೇ ಮೌಲ್ಯವ್ಯವಸ್ಥೆ ಅಥವಾ ಚಿಂತನಾಧಾರೆಯನ್ನು ಪ್ರತಿಫಲಿಸುತ್ತವೆ. ಇಂತಹ ಪ್ರತಿಫಲನದ ಇಡಿತನವೇ ನಮ್ಮ ಲೋಕದೃಷ್ಟಿಯ ವಿನ್ಯಾಸ ಅಥವಾ ಸ್ವರೂಪ ಆಗಿರುತ್ತದೆ. ಒಂದು ಸಾಮಾಜಿಕ ಮನೋಧರ್ಮ ಇಲ್ಲವೇ ಸಾಂಸ್ಕೃತಿಕ ವಿನ್ಯಾಸದ ಒಟ್ಟು ಮೊತ್ತವೇ ‘ಸೈದ್ಧಾಂತಿಕ ನಿಲುವು’ಗಳಾಗಿ ಪ್ರಕಟಗೊಳ್ಳುತ್ತವೆ. ಇಂತಹ ಪ್ರಕಟಣೆಯ ರೂವಾರಿಯೇ ಭಾಷೆ ಆಗಿರುತ್ತದೆ. ಹಾಗಾಗಿ ಕ್ರಟಿಕಲ್ ಲಿಂಗ್ವಿಸ್ಟಿಕ್ಸ್ ನ ಪ್ರಮುಖ ಉದ್ದೇಶವೇ ಕೇವಲ ಪಠ್ಯದ ವ್ಯಾಕರಣಾತ್ಮಕ ಸಂಗತಿಗಳನ್ನು ಮಾತ್ರ ವಿಶ್ಲೇಷಿಸುವುದಲ್ಲ. ಬದಲಾಗಿ ಸಾಹಿತ್ಯ ಪಠ್ಯ ರೂಪಿಸಿದ ಸಾಂಸ್ಕೃತಿಕ-ಸಾಮಾಜಿಕ ಸನ್ನಿವೇಶಗಳ ಸ್ವರೂಪವನ್ನು ಬಿಡಿಸಿ ಹೇಳುವ ಬಗೆಯಾಗಿದೆ. ಎಂ.ಎ.ಕೆ ಹ್ಯಾಲಿಡೇ ಅವರು ತಮ್ಮ ಭಾಷಿಕ ವಿಶ್ಲೇಷಣೆಯ ವಿನ್ಯಾಸಗಳನ್ನು ರೂಪಿಸಿಕೊಳ್ಳುವುದು, ಪದಕೋಶ ಮತ್ತು ವ್ಯಾಕರಣಾತ್ಮಕ ಆಯ್ಕೆ, ವಿಧಾನ ಮತ್ತು ಪ್ರಕಾರಗಳೇ ಆಗಿರುತ್ತವೆ. ಆದಾಗ್ಯೂ ಈ ಸಂಗತಿಗಳ ಉದ್ದೇಶ ಮಾತ್ರ ಪಠ್ಯದ ಸಾಂಸ್ಕೃತಿಕ-ಸಾಮಾಜಿಕ ವಿದ್ಯಮಾನಗಳ ಸನ್ನಿವೇಶಗಳನ್ನು ವಿವರಿಸುವುದೇ ಆಗಿರುತ್ತದೆ. ಈ ಇಡೀ ತಾತ್ವಿಕ ನೋಟವನ್ನು ಹಾವಳಿ ಕಾದಂಬರಿಯ ಭಾಷಿಕ ವಿನ್ಯಾಸವನ್ನು ವಿಶ್ಲೇಷಿಸುವುದಕ್ಕೆ ರೂಪಿಸಿಕೊಳ್ಳಲಾಗಿದೆ.  

ಭಾಗ -2

ಕಾದಂಬರಿಯೊಳಗಣ ಚಾರಿತ್ರಿಕ ಮತ್ತು ರಾಜಕೀಯ ಕುರುಹುಗಳು

ಮಲ್ಲಿಕಾರ್ಜುನ ಹಿರೇಮಠ ಅವರ ಹಾವಳಿ ಕಾದಂಬರಿಯ ನಿರೂಪಣೆ, ಕಥನ ಕ್ರಿಯೆ ಹಾಗೂ ಭಾಷೆಯನ್ನು ಅರಿಯಬೇಕೆಂದರೆ ಈ ಮೇಲಿನ ತಾತ್ವಿಕ ಪಾತಳಿಯನ್ನು ಅನುಸರಿಸುವ ಅಗತ್ಯವಿದೆ.  ಏಕೆಂದರೆ ಕಾದಂಬರಿಯ ವಿಚಾರಧಾರೆಯ ಸ್ವರೂಪವನ್ನೂ ವಿಶ್ಲೇಷಿಸಿ  ನೋಡುವ ಜರೂರಿದೆ. ಅಂದರೆ ಪ್ರತಿಯೊಂದು ವಿಚಾರಧಾರೆಯ ಜೊತೆಗೆ ರಾಜಕೀಯ ನಿಲುವು ಕೂಡ ತಳುಕು ಹಾಕಿಕೊಂಡಿರುತ್ತದೆ. ಇವುಗಳನ್ನು ಅರ್ಥೈಸುವ ಬಗೆಗಳು ಭಾಷಿಕ ವಿನ್ಯಾಸವನ್ನು ನೆಲೆಯಾಗಿಸಿಕೊಂಡಿರುತ್ತವೆ.  ರಾಜಕೀಯ ನಿಲುವು ಅನ್ನುವುದು ಕೇವಲ ಅಧಿಕಾರ ಇಲ್ಲವೇ ಪ್ರಭುತ್ವ ರಾಜಕಾರಣಕ್ಕೆ ಸಂಬಂಧಿಸಿದ ಬಗೆಯಲ್ಲ. ಧರ್ಮ, ಸಂಸ್ಕೃತಿ, ಸಾಮಾಜಿಕ ವಿದ್ಯಮಾನಗಳನ್ನು ಕುರಿತು ಕೈಗೊಳ್ಳುವ ಪ್ರತಿಯೊಂದು ತೀರ್ಮಾನವು ಕೂಡ ರಾಜಕೀಯ ನಿಲುವುಗಳೇ ಆಗಿರುತ್ತವೆ. ಈ ಕಾದಂಬರಿಯಲ್ಲಿ ಎದುರಾಗುವ ಧರ್ಮದ ಪ್ರಶ್ನೆಗಳು ಹಾಗೂ ಕೋಮುವಾದದ ವಿನ್ಯಾಸಗಳು ರಾಜಕೀಯ ನಿಲುವುಗಳಿಂದಲೇ ಪ್ರೇರಣೆಗೊಂಡಿರುತ್ತವೆ. ಸಂಘರ್ಷ ಮತ್ತು ಅನುಸಂಧಾನ ಎರಡೂ ಬಗೆಗಳನ್ನು ರೂಪಿಸುವ, ಅರಿಯುವ ಹಾಗೂ ವಿಶ್ಲೇಷಿಸುವ ವಿಧಾನಗಳು ಭಾಷಿಕ ವಿನ್ಯಾಸಗಳಿಂದಲೇ ಏರ್ಪಡುತ್ತವೆ. ಪ್ರಸ್ತುತ ಕಾದಂಬರಿಯ ಕಥನ ಕ್ರಿಯೆಯಲ್ಲಿ ಸಂಘರ್ಷದ ವಿನ್ಯಾಸಗಳು ಇರುವಂತೆ ಅನುಸಂಧಾನದ ವಿನ್ಯಾಸಗಳೂ ಇರುವುದು ವಿಶೇಷ. ಒಟ್ಟಿನಲ್ಲಿ ಹಾವಳಿ ಕಾದಂಬರಿಯ ಅನುಭವ ಲೋಕವನ್ನು ವಿವರಿಸುವ ಮೂಲಕವೇ ಈ ಸಾಹಿತ್ಯ ಪಠ್ಯದ ನಿಲುವುಗಳನ್ನು ನಾವು ಮನಗಾಣಬೇಕಿದೆ. ಹಾವಳಿ ಕಾದಂಬರಿ ಮತ್ತು ಅದರ ಅನುಭವ ಲೋಕದ ನಿರೂಪಣೆಗಳು ಮೈದೋರುವುದು ಭಾಷಿಕ ವಿನ್ಯಾಸಗಳನ್ನು ನೆಲೆಯಾಗಿಸಿಕೊಂಡು ಎನ್ನುವುದು ಸಹಜ ಗ್ರಹಿಕೆಯೇ ಸರಿ. ಆದರೆ ರಾಜಕೀಯ, ಸಾಮಾಜಿಕ ಹಾಗೂ ಸಾಂಸ್ಕೃತಿಕ ನೆಲೆಗಳು ಮತ್ತು ಅಂತಹ ಪಡಿಯಚ್ಚು ಏರ್ಪಡುವಲ್ಲಿ ಭಾಷೆಯ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಅಂದರೆ ಪ್ರಸ್ತುತ ಕಾದಂಬರಿಯ ಅನುಭವ ಜಗತ್ತನ್ನು ಖಚಿತವಾಗಿ ಪ್ರತಿನಿಧಿಸುವ ಮತ್ತು ವ್ಯಾಖ್ಯಾನ ಮಾಡುವ ವಿದ್ಯಮಾನವನ್ನಾಗಿ ನುಡಿಯನ್ನು ಇಲ್ಲಿ  ಪರಿಗಣಿಸುತ್ತೇವೆ. ಬದುಕಿನ ಯಾವುದೇ ವಿನ್ಯಾಸವನ್ನು ನಿರ್ವಚಿಸಿದರೂ ಕೂಡ ಅದೊಂದು ಗ್ರಹಿಕೆ ಇಲ್ಲವೇ ಪರಿಕಲ್ಪನೆಯಾಗಿ ನಮಗೆ ದಕ್ಕುವುದು ನುಡಿಯ ಒತ್ತಾಸೆಯಿಂದಲೇ ಅನ್ನುವುದು ಅತೀ ಸಾಮಾನ್ಯ ತಿಳುವಳಿಕೆಯಾಗಿದೆ. ಆದರೆ ಅನುಭವದ ನಿರ್ವಚನೆಗೆ ಬಳಸುವ ಪರಿಕರ ಮತ್ತು ವಿಧಾನದಲ್ಲಿ ಭಾಷೆಯ ಅಸ್ತಿತ್ವವೇ ಕಾಣೆಯಾಗಿರುತ್ತದೆ. ಹಾವಳಿ ಕಾದಂಬರಿಯಲ್ಲಿ ತಲೆಯೆತ್ತಿದ ಕೋಮುದ್ವೇಷದ ಪ್ರಶ್ನೆಗಳು ಭಾರತದ ಸಾಮಾಜಿಕ ವಾಸ್ತವವನ್ನು ಪ್ರತಿನಿಧಿಸುವ ನೈಜ ನಿರೂಪಣೆಗಳಾಗಿ ಏರ್ಪಟ್ಟಿರುತ್ತವೆ. ಚಾರಿತ್ರಿಕ ಸನ್ನಿವೇಶದ ಘಟನೆಗಳನ್ನು ನೆಲೆಯಾಗಿಸಿಕೊಂಡ ಈ ಕಾದಂಬರಿಯ ಪ್ರತಿಯೊಂದು ಸನ್ನಿವೇಶವು ವರ್ತಮಾನದ ವಿದ್ಯಮಾನವಾಗಿಯೂ ಮತ್ತು ಆತ್ಯಂತಿಕ ವರ್ತಮಾನವನ್ನು ಪ್ರತಿಫಲಿಸುವ ಸಂಗತಿಯಾಗಿದೆ.

ಹಾವಳಿ ಕಾದಂಬರಿ ಒಂದು ರಾಜಕೀಯ ಪಠ್ಯವೂ ಹೌದು ಮತ್ತು ಚಾರಿತ್ರಿಕ ಪಠ್ಯವೂ ಹೌದು. ಈ ಕಾದಂಬರಿಯ ರಾಜಕೀಯ ಮತ್ತು ಚಾರಿತ್ರಿಕ ನಿಲುವುಗಳು, ವಸಾಹತು ಅಧಿಕಾರ (ಕಲೋನಿಯಲ್ ಪವರ್) ಮತ್ತುಇಸ್ಲಾಂ ದೊರೆಗಳ ಅಧಿಕಾರ ಹಾಗೂ ಇಂತಹ ಇಬ್ಬದಿಯ ಪರಿಣಾಮದಿಂದ ಏರ್ಪಟ್ಟಿರುವ ಸಾಮಾಜಿಕ-ಸಾಂಸ್ಕೃತಿಕ ಹಾಗೂ ಧಾರ್ಮಿಕ ಹಾವಳಿಗಳನ್ನು ಪ್ರತಿನಿಧಿಸುವ ಬಗೆಯಾಗಿ ಈ ಪರಿಕಲ್ಪನೆ (ಹಾವಳಿ) ಮುನ್ನೆಲೆಗೆ ಬಂದಿದೆ. ದಿಟ, ಕಾದಂಬರಿ ಇನ್ನು ಹಲವು ವಿದ್ಯಮಾನಗಳನ್ನು ಕುರಿತಾಗಿದೆ. ಆದರೆ ಈ ಹಾವಳಿ ಎಂಬ ಪರಿಕಲ್ಪನೆ ಪ್ರಧಾನವಾಗಿ ಕೋಮು ಭಯವನ್ನು (ಕಮ್ಯುನಲ್ ಫೋಬಿಯಾ) ಹುಟ್ಟಿಸುವ ವಿದ್ಯಮಾನದ ರೂಪಕವಾಗಿದೆ. ವಸಾಹತು ಪ್ರಾಬಲ್ಯ ಮತ್ತು ರಜಾಕಾರರಿಂದ ನೆಲೆಗೊಂಡಿದ್ದ ಶೋಷಣೆಯ ವಿನ್ಯಾಸವನ್ನು ಪ್ರಚುರಪಡಿಸುವ ಆಯಾಮ ಒಂದು ಕಡೆಯಾದರೆ, ಕೋಮು ಸಂಘರ್ಷಕ್ಕೆ ಎದುರಾಗಿ ಸಾಮಾಜಿಕ-ಧಾರ್ಮಿಕ ಸಾಮರಸ್ಯವನ್ನು ಬೆಳೆಸುವ ಬಗೆಗಳು ಇನ್ನೊಂದು ಕಡೆಗೆ ಈ ಕಾದಂಬರಿ ಒಳ್ಗೊಂಡಿದೆ. ಈ ಎರಡೂ ಬಗೆಯ ವೈರುಧ್ಯಗಳನ್ನು ಏಕಕಾಲಕ್ಕೆ ನಿರೂಪಿಸುವ ಒಂದು ಸಾಮಾಜಿಕ-ಸಾಂಸ್ಕೃತಿಕ-ಧಾರ್ಮಿಕ ಸಂಕೀರ್ಣತೆಯನ್ನು ಪ್ರಸ್ತುತ ಕಾದಂಬರಿ ಮಂಡಿಸುತ್ತದೆ.  ವಸ್ತು ವಿಷಯದ ಆಯ್ಕೆಯಲ್ಲಿ ಇದೊಂದು ಚಾರಿತ್ರಿಕ ಕಥನವಾಗಿದ್ದರೂ, ಇದರ ಗ್ರಹಿಕೆ ಮಾತ್ರ ವರ್ತಮಾನವೇ ಆಗಿರುತ್ತದೆ. ಚಾರಿತ್ರಿಕ ಸನ್ನಿವೇಶ ಮತ್ತು ಘಟನೆಗಳನ್ನು ವರ್ತಮಾನದ ನಿದರ್ಶನಗಳನ್ನಾಗಿ ರೂಪಾಂತರಿಸುವ ಸಾಧ್ಯತೆ ಭಾಷೆಗೆ ಇರುತ್ತದೆ. ಅಂದರೆ ನಿರೂಪಣೆಯ ಕಾಲ ಮತ್ತು ದೇಶ ಎಲ್ಲ ಕಾಲದ ವರ್ತಮಾನವನ್ನು ಸೃಷ್ಟಿಸುವುದೇ ಆಗಿರುತ್ತದೆ. ಹಾಗಾಗಿ ಹಾವಳಿ ಕಾದಂಬರಿಯ ಪ್ರತಿಯೊಂದು ನಿದರ್ಶನ ಮತ್ತು ಘಟನೆ ಸದ್ಯದ ರಾಜಕೀಯ ಹಾಗೂ ಸಾಮಾಜಿಕ ಸನ್ನಿವೇಶದ ಪ್ರತಿನಿಧೀಕರಣವಾಗಿದೆ. ಈ ಪ್ರತಿನಿಧೀಕರಣವು ಏಕಕಾಲಕ್ಕೆ ವರ್ತಮಾನದ ಜೊತೆಗಿನ ಅನುಸಂಧಾನವೂ ಹೌದು ಹಾಗೂ ಮುಖಾಮಖಿಯ ವಿನ್ಯಾಸವೂ ಹೌದು. ಭಾಷೆಯ ರಚನೆ ಮತ್ತು ಬಳಕೆಯೊಳಗೆಯೇ ಇಂತಹ ವೈರುಧ್ಯಗಳು ನೆಲೆಗೊಂಡಿರುತ್ತವೆ. ಪರಿಣಾಮವಾಗಿ ಓದುಗನ ದೃಷ್ಟಿಕೋನಕ್ಕೆ ಅನುಗುಣವಾಗಿ ಈ ವೈರುಧ್ಯಗಳ ನಡುವಣ ಆಯ್ಕೆ ಏರ್ಪಡುತ್ತದೆ. ಈ ಭಾಷಿಕ ಆಯಾಮ ಸಹಜವಾಗಿಯೇ ಹಾವಳಿ ಕಾದಂಬರಿಯಲ್ಲಿಯೂ ನೆಲೆಗೊಂಡಿದೆ.

ಸಾಮಾಜಿಕ, ಧಾರ್ಮಿಕ, ಚಾರಿತ್ರಿಕ ಹಾಗೂ ರಾಜಕೀಯ ರೂಢಿಗಳು ಬಹುತೇಕವಾಗಿ ಸಾಂಸ್ಥೀಕರಣಗೊಂಡಿರುತ್ತವೆ. ಯಾವುದೇ ಒಂದು ವಿಚಾರ ಅಥವಾ ಆಚಾರ ಇಲ್ಲವೇ ಸಿದ್ಧಾಂತ ಸಾಂಸ್ಥೀಕರಣಗೊಳ್ಳದೇ ಸಾಮಾಜದಲ್ಲಿ ನೆಲೆಯೂರಲು ಸಾಧ್ಯವಿಲ್ಲ. ಸಾಂಸ್ಥೀಕರಣದ ಪ್ರಕ್ರಿಯೆಯ ಸ್ವರೂಪವನ್ನೂ ಭಾಷೆ ವಿವರಿಸುತ್ತದೆ. ಏಕೆಂದರೆ ಬದುಕಿನ ಪ್ರತಿಯೊಂದು ವಿದ್ಯಮಾನವು ಸಾಮಾಜಿಕ ರಚನೆಯೇ  (ಶೋಶಿಯಲ್ ಕನಸ್ಟ್ರಕ್ಶನ್) ಆಗಿರುತ್ತದೆ. ಹಾಗಾಗಿ ಇದು ನಿಯಂತ್ರಣದ ವಿನ್ಯಾಸವೂ ಆಗಿರುತ್ತದೆ. ಧರ್ಮ, ಜಾತಿ, ಲಿಂಗ, ರಾಷ್ಟ್ರ ಇತ್ಯಾದಿ ನಿಲುವುಗಳನ್ನು ಪರಿಶೀಲಿಸಿ ನೋಡಿದರೆ, ಸಾಮಾಜಿಕ ಅಪಮೌಲ್ಯವನ್ನು ರೂಪಿಸುವ ಹಾಗೂ ಅದರ ತೀವ್ರತೆಯನ್ನು ನಿರಂತರಗೊಳಿಸುವ ಬಗೆಗಳು ಸಾಮಾಜಿಕ ರಚನೆಯ ಪರಿಣಾಮವೇ ಆಗಿರುತ್ತವೆ. ರಜಾಕಾರರು ಮಾಡುವ ದಾಂಧಲೆ ಇರಬಹುದು ಇಲ್ಲವೇ ಶಂಕರ, ಶೇಖರ ಅವರುಗಳ ವರ್ತನೆ ಇರಬಹುದು ಅಥವಾ ಜಯರಾಮಾಚಾರ್ಯರು, ಇಬ್ರಾಹಿಂ ಸಾಹೇಬ್ ಮೊದಲಾದವರ ನಿಲುವುಗಳು ಇರಬಹುದು, ಈ ಎಲ್ಲ ನಿಲುವುಗಳು ಕೂಡ ಸಾಂಸ್ಥೀಕರಣದ ಬೇರೆ ಬೇರೆ ಬಗೆಗಳೇ ಆಗಿರುತ್ತವೆ. ಗುರವ್ವನಂತಹ ಹೆಣ್ಣು ಮಗಳ ಒಟ್ಟು ಗ್ರಹಿಕೆಯೂ ಕೂಡ ಸಾಂಸ್ಥೀಕರಣದ ಪರಿಣಾಮವೇ ಆಗಿರುತ್ತದೆ. ಹಾವಳಿ ಕಥನದಲ್ಲಿ ಮೈದೋರಿದ ಎಂತಹದೇ ನಿಲುವು ಅಥವಾ ಅಭಿಪ್ರಾಯವಾಗಿದ್ದರೂ ಒಂದು ಧರ್ಮದ ಇಲ್ಲವೇ ಜಾತಿಯ ಅಥವಾ ಸಿದ್ಧಾಂತಕ್ಕೆ ಸಂಬಂಧಿಸಿದ ನಿಲುವು ಆಗಿರುತ್ತದೆ. ರಜಾಕಾರರು, ರಜವಿಗಳು, ನಾಟಕ ಮಾಸ್ತರ, ಶೇಖರ, ಶಂಕರ ಎಲ್ಲರೂ ಸಾಂಸ್ಥೀಕರಣದ ಸೃಷ್ಟಿಗಳೇ ಆಗಿದ್ದಾರೆ. ಆದ್ದರಿಂದ ಚಾರಿತ್ರಿಕವೋ, ವರ್ತಮಾನವೋ ಅಥವಾ ರಾಜಕೀಯವೋ ಯಾವುದೇ ಬಗೆಯ ತಿಳಿವು, ಗ್ರಹಿಕೆ ಹಾಗೂ ಅಭಿವ್ಯಕ್ತಿಗೆ ಸಂಬಂಧಿಸಿದ ವಿಚಾರಗಳು ಸಾಂಸ್ಥಿಕ ವಿದ್ಯಮಾನಗಳು ಆಗಿರುವುದರ ಜೊತೆಗೆ ಅವುಗಳು ವಿಭಿನ್ನ ಜಾಯಮಾನ ಮತ್ತು ವೈಚಾರಿಕ ಪ್ರಭಾವಕ್ಕೆ ಒಳಗಾಗಿರುತ್ತವೆ. ಈ ಪ್ರಭಾವ ಮತ್ತು ಪರಿಣಾಮವನ್ನು ನಿರೂಪಿಸುವ ಭಾಷಿಕ ಆಯ್ಕೆ ಹಾಗೂ ವಿಧಾನ ಅತ್ಯಂತ ಮಹತ್ವದ ಭಾಷಿಕ ವಿನ್ಯಾಸ ಆಗಿರುತ್ತದೆ. ಇಂತಹ ಭಾಷಿಕ ವಿನ್ಯಾಸಗಳು ವರ್ತಮಾನದ ವಿದ್ಯಮಾನಗಳನ್ನು ಚಾರಿತ್ರಿಕಗೊಳಿಸುವ ಹಾಗೂ ಚಾರಿತ್ರಿಕ ಸನ್ನಿವೇಶಗಳನ್ನು ವರ್ತಮಾನದ ದೃಷ್ಟಿಕೋನಗಳನ್ನಾಗಿ ರೂಪಾಂತರಿಸುವ ನಡೆಗಳೂ ಈ ಭಾಷಿಕ ನಡೆಗಳೇ ಆಗಿವೆ. ಹಾವಳಿ ಕಾದಂಬರಿಯಲ್ಲಿ ಇಂತಹ ಮುಖಾಮುಖಿಗೆ ಹಾಗೂ ಅನುಸಂಧಾನದ ನಿಲುವುಗಳಿಗೆ ಸಾಕಷ್ಟು ಸಾಕ್ಷ್ಯಾಧಾರಗಳು ದೊರೆಯುತ್ತವೆ. ಸಾಹಿತ್ಯ ಪಠ್ಯದ ಒಳಗೆ ಹುದುಗಿರುವ ರಾಜಕೀಯ ಇಲ್ಲವೇ ಚಾರಿತ್ರಿಕ ಅಥವಾ ವರ್ತಮಾನದ ಕುರುಹುಗಳು, ಅವು ಅರುವುಗಳಾಗಿ ಪರಿಣಮಿಸುವುದಕ್ಕೆ ಭಾಷಿಕ ಸಂಕಥನಗಳು ಹಾಗೂ ನಿರೂಪಣೆಗಳು ಕಾರಣವಾಗುತ್ತವೆ.

ಒಂದು ಪಠ್ಯದಲ್ಲಿ ಒಡಮೂಡಿದ ಯಾವುದೇ ಬಗೆಯ ಅನುಭವವು ಭಾಷಿಕ ವಿದ್ಯಮಾನಗಳ ಮೂಲಕ ಹೇಗೆಲ್ಲ ಅನಾವರಣಗೊಳ್ಳುತ್ತದೆ ಅನ್ನುವುದನ್ನು ಈಗಾಗಲೇ ಚರ್ಚಿಸಲಾಗಿದೆ. ಹೀಗೆ ಅನಾವರಣಗೊಂಡ ಪ್ರತಿಯೊಂದು ನಿರೂಪಣೆಯನ್ನು (1). ಹೇಳುವ ಬಗೆ (2). ಆಗುವ ಬಗೆ ಮತ್ತು (3). ಪರಿಣಾಮದ ಬಗೆ ಎಂದು ಮೂರು ಬಗೆಗಳಲ್ಲಿ ವಿಂಗಡಿಸಿ ಅರ್ಥೈಸಲಾಗುತ್ತದೆ. ಉದಾ.ಗೆ ಈ ಮುಂದಿನ ಮಾತುಗಳನ್ನು ಗಮನಿಸಿ. ಶಿಬಿರ ಕಪ್ಪತ್ತುಗುಡ್ಡದಿಂದ ಮತ್ತೆ ಮುಂಡರಗಿಯ ತೋಂಟದಾರ್ಯ ಮಠಕ್ಕೆ ಸ್ಥಳಾಂತರವಾಗಿದೆ’ (ಪುಟ:270). ಹಾಗೂ ರಜಾಕಾರರು ಮುನ್ನುಗ್ಗುತ್ತಿದ್ದಾಗ ಬಂಡೆಪ್ಪ ಬಂಗಾಳಿಗಿಡದ ಮರೀಗೆ ನಿಂತು ಸಿಕ್ಕಂಗ ಗುಂಡು ಹಾರಿಸಿಬಿಟ್ಟ. ಇಬ್ಬರು ರಜಾಕಾರರುಹೇ ಅಲ್ಲಾಅಂತ ಚೀರುತ್ತಾ ಸತ್ತು ಬಿದ್ದದ್ದು ಗಮನಿಸಿ ನಾಕೈದು ರಜಾಕಾರರು ಸೇರಿ ಬಂಡೆಪ್ಪನ ಮ್ಯಾಲೆ ಗುಂಡಿನ ಮಳೆಗರೆದರು’ (ಪುಟ:342). ಈ ಮಾತುಗಳಲ್ಲಿ ಅಂತಹದೇನೂ ವಿಶೇಷ ಕಂಡುಬರುವುದಿಲ್ಲ. ಆದರೆ ಈ ಮಾತುಗಳನ್ನು ಹೇಳುವ ಮೂಲಕ ಏನು ಕ್ರಿಯೆ ನಡೆದಿದೆ ಹಾಗೂ ಆ ಕ್ರಿಯೆಯ ಪರಿಣಾಮದಿಂದ ಏನು ಅಥವಾ ಯಾವ ವಿದ್ಯಮಾನ ಘಟಿಸಿದೆ ಅನ್ನುವುದನ್ನು ಪರಿಭಾವಿಸುವುದಕ್ಕೆ ಈ ಭಾಷಾ ಕ್ರಿಯೆಯಿಂದ ಸಾಧ್ಯವಾಗುತ್ತದೆ. ಅಂದರೆ ಭಾಷೆ ಎನ್ನುವುದು ಕ್ರಿಯೆಯೇ ಹೊರತು ಕೇವಲ ವಸ್ತು ವಿಷಯಗಳನ್ನು ಸೂಚಿಸುವ ಬಗೆ ಮಾತ್ರವಲ್ಲ. ಆದ್ದರಿಂದ ಪ್ರತಿಯೊಂದು ಅಭಿವ್ಯಕ್ತಿ ಇಲ್ಲವೇ ಅನುಭವವು ಕೂಡ  ಭಾಷಾ ಬಳಕೆಯ ಉದ್ದೇಶವನ್ನು ಪ್ರಚುರಪಡಿಸುವ ವಿನ್ಯಾಸವಾಗಿದೆ. ಅಂದರೆ ತಿಳಿವು (ಐಡಿಯಾ) ಕುರುಹು (ಎಕ್ಸಪಿರಿಯನ್ಸ್) ಮತ್ತು ಅರಿವು (ಇಂಪಲಿಕೇಶನ್) ಎಂಬ ಈ ಮೂರೂ ನಿಲುವುಗಳು ಭಾಷಿಕ ವಿನ್ಯಾಸದಲ್ಲಿಯೇ ಅಡಕವಾಗಿರುತ್ತವೆ.

ಭಾಷಾಶಾಸ್ತ್ರೀಯ ಈ ತಾತ್ವಿಕ ಚೌಕಟ್ಟುಗಳ ಮೂಲಕ ಸಮೂಹ ಇಲ್ಲವೇ ವ್ಯಕ್ತಿಗಳ ಅನುಭವ, ನೋವು, ಸಂಕಟ ಮತ್ತು ಸಂವೇದನಾ ಪೂರ್ಣ ತಿಳುವಳಿಕೆಯನ್ನು ಸಾಂದ್ರಗೊಳಿಸಿ ಹಾಗೂ ತೀವ್ರಗೊಳಿಸಿ ಮಂಡಿಸುವಲ್ಲಿ ಭಾಷೆ ಎಷ್ಟೊಂದು ಕ್ರಿಯಾಶೀಲವಾಗಿರುತ್ತದೆ ಅನ್ನುವುದನ್ನು ಇಲ್ಲಿ ಮನಗಾಣುವುದಾಗಿದೆ. ಇದು ಸಾಮಾಜಿಕ ವಾಸ್ತವದ ಕುರುಹು ಆಗಿರುತ್ತದೆ. ಈ ಸಾಮಾಜಿಕ ವಾಸ್ತವವನ್ನು ಇಡಿ ಮತ್ತು ಬಿಡಿ ನೆಲೆಗಳಲ್ಲಿ ಭಾಷೆ ಪ್ರತಿನಿಧಿಸುತ್ತದೆ. ಹಾವಳಿ ಕಾದಂಬರಿಯ ಅನುಭವ ಲೋಕವು ಈ ಎರಡೂ ನೆಲೆಗಳ ಮೂಲಕ  ನಮ್ಮರಿವಿಗೆ ದಕ್ಕುತ್ತದೆ. ಅಂದರೆ ಧರ್ಮ ಸಮೂಹವಾಗಿ ಅಥವಾ ಧರ್ಮದ ಪ್ರೇರಣೆಯಿಂದ ವ್ಯಕ್ತಿಗಳು ವರ್ತಿಸುವ ಬಗೆಗಳು ಪರಸ್ಪರ ಪೂರಕವೂ ಮತ್ತು ಭಿನ್ನವೂ ಆಗಿರುತ್ತವೆ. ಇಬ್ರಾಹಿಂ ಅಥವಾ ನಬಿಯ ವರ್ತನೆ ಇಲ್ಲವೇ ಶಂಕರ ಹಾಗೂ ನಾಟಕ ಮಾಸ್ತರ ಅವರುಗಳ ನಡೆ ನುಡಿಗಳನ್ನು ನಿಗಾವಹಿಸಿ ನೋಡಿದರೆ, ವ್ಯಕ್ತಿ ಮತ್ತು ಸಮೂಹಗಳ ನಡುವಣ ಸಾಮ್ಯತೆ ಹಾಗೂ ಭಿನ್ನತೆಯ ಸ್ವರೂಪಗಳು ಗೋಚರಿಸುತ್ತವೆ. ವ್ಯಕ್ತಿಗಳ ವರ್ತನೆಯ ಆಧಾರದ ಮೇಲೆ ಧರ್ಮದ ವ್ಯಾಖ್ಯಾನ ಮಾಡುವುದು ಇಲ್ಲವೇ ಸಮೂಹಗಳನ್ನು ಅವಹೇಳನ ಮಾಡುವುದು ಸಲ್ಲದು ಅನ್ನುವ ನಿರೂಪಣೆಗಳು, ಇಡಿ ಮತ್ತು ಬಿಡಿ ನೆಲೆಯಲ್ಲಿ ಮೈದೋರುತ್ತವೆ. ಭೂತ ಮತ್ತು ವರ್ತಮಾನದ ನಡುವಣ ಸಂಘರ್ಷ ಹಾಗೂ ಅತಂತ್ರತೆಯನ್ನು ಗುರುತಿಸುವ ಬಗೆಗಳು ಕೂಡ ಇಂತಹ ನೆಲೆಗಳಿಂದಲೇ ನಿರೂಪಿಸಲ್ಪಡುತ್ತವೆ.

ಗಂಡಸರ ಫ್ಯೂಡಲ್ ವರ್ತನೆ ಹೆಂಗಸರ ಮೇಲೆ ಎಂತಹ ಪ್ರಭಾವ ಬೀರುತ್ತದೆ? ಬದುಕಿನ ರಹಸ್ಯಗಳು, ಅಚಾನಕ್ ತಿರುವುಗಳು ಬದುಕಿನ ಯಾವ ಬಗೆಗಳನ್ನು ರೂಪಿಸುತ್ತವೇ? ಧರ್ಮದ ಪ್ರಶ್ನೆಗಳು ಚಾರಿತ್ರಿಕ ಲೇಪನವನ್ನು ಪಡೆದುಕೊಂಡಿದ್ದರೂ, ಇವತ್ತು ಅಂದರೆ ವರ್ತಮಾನದಲ್ಲಿ ಹೇಗೆ ಪ್ರಕಟಗೊಳ್ಳುತ್ತವೇ? ವಸಾಹತುಶಾಹಿ ಪ್ರಭಾವದಿಂದ ಏರ್ಪಡುವಂತಹ ಸಾಮಾಜಿಕ, ರಾಜಕೀಯ ಪಲ್ಲಟಗಳು ಎಂತಹವು? ಎಂಬೆಲ್ಲ ಪ್ರಶ್ನೆಗಳ ಹಿಂದಿನ ರಹಸ್ಯಗಳನ್ನು ಪರಿಶೀಲಿಸಿ ನೋಡಲು ಬದುಕಿನ ಇಡಿ ಮತ್ತು ಬಿಡಿ ಅನುಭವಗಳು ಒತ್ತಾಸೆಯಾಗುತ್ತವೆ. ಇಂತಹ ಅನುಭವ ಹಾಗೂ ಲೋಕನೋಟಗಳನ್ನು ಪರಿಕಲ್ಪಿಸಲು ಭಾಷೆ ಪ್ರಮುಖ ವಿದ್ಯಮಾನವಾಗಿದೆ ಅನ್ನುವುದು ಹಾವಳಿ ಕಾದಂಬರಿಯ ನಿರೂಪಣೆಗಳಿಂದ ನಮಗೆ ಮನವರಿಕೆಯಾಗುತ್ತದೆ. ಜೊತೆಗೆ ರೋಗಗ್ರಸ್ತ ಮನಸ್ಸುಗಳು ರೂಪುಗೊಳ್ಳುವ ಬಗೆಗಳನ್ನೂ ಈ ನಿರೂಪಣೆಗಳ ಮೂಲಕವೇ ಕಾಣಬಹುದಾಗಿದೆ. ದ್ವೇಷದ ಸ್ವರೂಪಗಳು ಹಾಗೂ ಅವುಗಳ ಹಿಂದಿನ ನಿಲುವುಗಳನ್ನು ಅರ್ಥೈಸಲು ಮತ್ತು ಈ ನಿಲುವುಗಳು ಹೇಗೆ ಪರಿಣಾಮ ಬೀರುತ್ತವೆ ಎಂಬುದನ್ನೂ ಬಿಡಿಸಿ ನೋಡಲು ಈ ನಿರೂಪಣೆಗಳು ಪೂರಕವಾಗಿರುತ್ತವೆ. ಈ ವಿನ್ಯಾಸವನ್ನು ಕೇವಲ ಹಾವಳಿ ಕಾದಂಬರಿಗೆ ಮಾತ್ರ ಸೀಮಿತಗೊಳಿಸಿ ಚರ್ಚಿಸಲು ಸಾಧ್ಯವಿಲ್ಲ ಅನ್ನುವ ಎಚ್ಚರದಿಂದಲೇ ಈ ವಿವರಣೆಗಳನ್ನು ಇಲ್ಲ ಮಂಡಿಸಲಾಗಿದೆ. ಸಾಮಾಜಿಕ ಐಕ್ಯತೆ ಹಾಗೂ ಸಾಮರಸ್ಯ ಹದಗೆಡುವುದಕ್ಕೆ ಧಾರ್ಮಿಕ ಇಲ್ಲವೇ ಸಾಮಾಜಿಕ ಕಾರಣಗಳಿದ್ದರೂ, ಅವುಗಳ ನಿರ್ವಚನೆಗೆ ಭಾಷಿಕ ವಿನ್ಯಾಸವೇ ನೆಲೆಯಾಗಿರುತ್ತದೆ.

ಹಾವಳಿ ಕಾದಂಬರಿಯ ಒಟ್ಟು ಗ್ರಹಿಕೆಯನ್ನು ಕ್ರೂಢೀಕರಿಸಿ ವಿವರಿಸುವುದಾದರೆ, ಅದನ್ನು ಹೀಗೆ ಹೇಳಬಹುದು: ಇಂದು ಮನುಷ್ಯನ ಸಂವೇದನೆಯನ್ನು ಹಿಂಡಲಾಗಿದೆ. ಮೌಲ್ಯಗಳನ್ನೆಲ್ಲ ದ್ವಂಸ ಮಾಡಲಾಗಿದೆ. ಸಹಜೀವನದ ಬದುಕಿಗೆ ತೊಂದರೆಗಳನ್ನು ಉಂಟು ಮಾಡಲಾಗಿದೆ. ಇತ್ಯಾದಿಯಾಗಿ ಹೇಳಬಹುದು. ಇಂತಹ ವಿಶ್ಲೇಷಣೆಗೂ ಭಾಷಿಕ ವಿನ್ಯಾಸವೇ ಹೊಣೆಯಾಗಿದೆ.  ಬದುಕಿನ ಯಾವುದೇ ಗ್ರಹಿಕೆ ಅಥವಾ ಅನುಭವವನ್ನು ಪ್ರತಿನಿಧಿಸಲು ಭಾಷೆ ಮಹತ್ವದ ವಿದ್ಯಮಾನ ಆಗಿದ್ದರಿಂದ, ಇಂತಹ ವಿದ್ಯಮಾನದ ಮೂಲಕವೇ ಸಾಹಿತ್ಯ ಪಠ್ಯಗಳನ್ನು ಬಿಡಿಸಿ ನೋಡುವ ಸಿದ್ಧಾಂತಗಳು ರೂಪುಗೊಂಡಿವೆ.

ಭಾಗ -3

ಹಾವಳಿಪರಿಕಲ್ಪನೆ: ಭಾಷಿಕ ಮತ್ತು ಸಂಕಥನಾ ವಿಶ್ಲೇಷಣೆ

ಕಾದಂಬರಿಯ ತಲೆಬರಹವು ಬಹುತೇಕವಾಗಿ ಒಂದು ಪರಿಕಲ್ಪನೆಯಾಗಿ ಮಾತ್ರ ಬಳಕೆಯಾಗದೇ, ಅದೊಂದು ಪ್ರ್ಯಾಗ್ಮಾಟಿಕ್ ದರ್ಶನವೂ (Pragmatic vision) ಆಗಿರುತ್ತದೆ ಮತ್ತು ಸಾಂಕೇತಿಕ ನೆಲೆಯೂ ಆಗಿರುತ್ತದೆ. ಆದ್ದರಿಂದ ಭಾಷಿಕ ಅಥವಾ ಸಂಕಥನಾ ವಿಶ್ಲೇಷಣೆ ಅಗತ್ಯವಾಗಿದೆ. ಕಾದಂಬರಿಯ ಕಥನ ಕ್ರಿಯೆಗೆ ಪದಗಳನ್ನು ಆಯ್ಕೆ ಮಾಡುವ ನಿಲುವುಗಳು ಎಂತಹವು? ಅವುಗಳ ಚಾರಿತ್ರಿಕ ಮತ್ತು ಸಾಂಸ್ಕೃತಿಕ ಸ್ವರೂಪ ಎಂತಹದು ಎಂಬ ಸಂಗತಿಗಳು ಮನವರಿಕೆಯಾಗುತ್ತವೆ. ಯಾವುದೇ ಒಂದು ಕಾದಂಬರಿಯ ಸಾಹಿತ್ಯಕ ಮೌಲ್ಯ ತೀವ್ರಗೊಳ್ಳಲು ಆಯಾ ಕಾದಂಬರಿಯ ಭಾಷಿಕ ಸ್ವರೂಪ, ವಿನ್ಯಾಸ, ನಿರೂಪಣೆ ಅತ್ಯಂತ ಮಹತ್ವದ ನೆಲೆಗಳು ಆಗಿರುತ್ತವೆ. ಇನ್ನೂ ನಿಚ್ಚಳವಾಗಿ ಹೇಳಬೇಕೆಂದರೆ, ಭಾಷಿಕ ಮತ್ತು ಶೈಲಿಶಾಸ್ತ್ರೀಯ ವಿನ್ಯಾಸ ಅಥವಾ ಸಂಕಥನಾ ವಿಶ್ಲೇಷಣೆಯ ಪರಿಕರಗಳು ಕೇವಲ ಕಾದಂಬರಿಯ ವಿವರಗಳನ್ನು ಹಾಗೂ ವ್ಯಾಖ್ಯಾನವನ್ನು ಮಾತ್ರ ಅನ್ವೇಷಿಸಲು ಪೂರಕವಾಗಿರದೇ, ಕಾದಂಬರಿಯ ಸಾಹಿತ್ಯಕ ವಿನ್ಯಾಸಗಳನ್ನು ಪೂರ್ಣವಾಗಿ ಅನಾವರಣಗೊಳಿಸಿ ಚರ್ಚಿಸಲು ಅನುವು ಮಾಡಿಕೊಡುತ್ತವೆ.

ಭಾಷಾಶಾಸ್ತ್ರದ ಹಿನ್ನಲೆಯಲ್ಲಿ ಒಂದು ಸಾಹಿತ್ಯ ಪಠ್ಯವನ್ನು ಹೇಗೆ ನೋಡಬೇಕು ಎನ್ನುವ ಚಿಂತನೆಗೆ ಪೂರಕವಾಗಿ ಈ ಹಾವಳಿ ಕಾದಂಬರಿಯನ್ನು ಅರ್ಥೈಸುವ ಪ್ರಯತ್ನವನ್ನು ಮಾಡಲಾಗಿದೆ.  ಸಾಹಿತ್ಯ ಪಠ್ಯಗಳ ವಿಶ್ಲೇಷಣೆಯಲ್ಲಿ ಕಥನ ಅನ್ನುವ ಪದವನ್ನು ಬಳಸಲಾಗುತ್ತದೆ. ಈ ಕಥನ ಎನ್ನುವುದು ಚರಿತ್ರೆ ಕಥನವೂ ಹೌದು ಸಾಹಿತ್ಯ ಕಥನವೂ ಹೌದು ಮತ್ತು ಸಂಸ್ಕೃತಿ ಕಥನವೂ ಹೌದು. ಅಷ್ಟೆಯಲ್ಲದೇ ಅದನ್ನು ಕತೆಯೆಂದೂ ಭಾವಿಸುತ್ತೇವೆ. ಹಾಗಾಗಿ ಈ ಕಥನ ಪರಿಕಲ್ಪನೆಯನ್ನು ಮುಖ್ಯವಾಗಿ ಸಾಹಿತ್ಯಕ ಪರಿಭಾಷೆಯಲ್ಲಿ  ನರೇಶನ್ (ನಿರೂಪಣೆ) ಹಾಗೂ ಡಿಸ್ಕೋರ್ಸ್ (ವಿಚಾರ) ಎಂದೂ ಕರೆಯುತ್ತೇವೆ. ಇವೆರಡೂ ಪರಿಕಲ್ಪನೆಗಳು ಮೈದೋರುವುದು ಭಾಷೆಯ ಮೂಲಕವೇ ಎಂಬ ವಿಷಯದಲ್ಲಿ ಈಗ ಹೆಚ್ಚು ಅನುಮಾನಗಳಿಲ್ಲ.

ಹಾವಳಿ ಎನ್ನುವ ಪರಿಕಲ್ಪನೆ ಒಂದು ರೂಪಕವಾಗಿ ಇಡೀ ಕಾದಂಬರಿಯ ಅನುಭವವನ್ನು ಪ್ರತಿನಿಧಿಸುತ್ತದೆ. ಈ ರೂಪಕ ಕೇವಲ ಒಂದು ಭಾಷಿಕ ವಿದ್ಯಮಾನ ಮಾತ್ರವಲ್ಲ ಬದಲಾಗಿ ಅದೊಂದು ಸಾಮಾಜಿಕ ಗ್ರಹಿಕೆಯೂ ಆಗಿರುತ್ತದೆ. ಈ ಗ್ರಹಿಕೆ ಒಂದು ಸಮುದಾಯದ ಜನರ ಮನಸ್ಸಿನಲ್ಲಿ ಹೇಗೆ ನೆಲೆಗೊಂಡಿರುತ್ತದೆ? ಹೀಗೆ ನೆಲೆಗೊಂಡ ಪ್ರತೀ ಅನುಭವ ಸಾಹಿತ್ಯ ಪಠ್ಯಗಳ ಮೂಲಕ ಅನಾವರಣಗೊಂಡರೂ, ಅದು ಸಾಮಾಜಿಕ ನಿಲುವು, ಆಚರಣೆ ಹಾಗೂ ವಾಸ್ತವವನ್ನು ಕಂಡರಿಯುವ ವಿಧಾನವಾಗುತ್ತದೆ. ಹಾಗಾಗಿ ಸಾಹಿತ್ಯದ ಮುಖೇನ ಒದಗುವ ಒಂದೊಂದು ಅನುಭವವನ್ನು ಸಾಮಾಜಿಕ ತತ್ವ, ಗ್ರಹಿಕೆ ಹಾಗೂ ವಿವೇಕವನ್ನಾಗಿ ಪರಿಗಣಿಸಲಾಗುತ್ತದೆ.  ಈ ತಾತ್ವಿಕ ಹಿನ್ನಲೆಯಲ್ಲಿ ಹಾವಳಿಯನ್ನು ಒಂದು ರೂಪಕವನ್ನಾಗಿ ವ್ಯಾಖ್ಯಾನಿಸಲಾಗಿದೆ. ಸಮೂಹಗಳ ಒಡಲಲ್ಲೇ ಹುದುಗಿರುವ ಭಾವ ವಿನ್ಯಾಸದ ಒಂದು ರೂಪವನ್ನು ಸೂಚಿಸುವ ಬಗೆಯೇ ಈ ಹಾವಳಿ. ಅಂದರೆ ಸಮಾಜದ ಐಕ್ಯತೆಯನ್ನು ಕದಡುವ, ದೈನಂದಿನ ಬದುಕಿನ ಲಯಗಳನ್ನು ಹಾಳು ಮಾಡುವ ಹಾಗೂ ಸಮಾಜದ ಸಾಂಗತ್ಯಕ್ಕೆ ತೊಡಕನ್ನುಂಟು ಮಾಡುವ ಭಯವೇ (ಫೋಬಿಯಾ) ಈ ಹಾವಳಿ. ರಜಾಕಾರರಿಂದ ಏರ್ಪಟ್ಟಂತಹ ಭಯ ಮಾತ್ರವಲ್ಲ ಅಥವಾ ಇದಕ್ಕೆ ಎದುರಾದ ಪಂಗಡದವರಿಂದ ಉಂಟಾಗುವ ಭಯವೆಂದೂ ಹೇಳಲು ಸಾಧ್ಯವಿಲ್ಲ. ಭಯ ಎಂಬ ವಿದ್ಯಮಾನ ನಿರಂತರವಾಗಿ ಸಮೂಹಗಳಲ್ಲಿ ಇರುತ್ತದೆ. ರಾಜಕೀಯ, ಸಾಮಾಜಿಕ, ಧಾರ್ಮಿಕ ಇಲ್ಲವೇ ಇನ್ಯಾವುದೇ ಕಾರಣಕ್ಕಾಗಿ ಸಮಾಜದಲ್ಲಿ ಈ ಹಾವಳಿಗಳು ಉಂಟಾಗುತ್ತವೆ. ಎಲ್ಲವೂ ಕ್ಷೇಮವಾಗಿದೆ, ಸಾಮಾಜಿಕ ಐಕ್ಯತೆ ಹಾಗೂ ಸಾಮರಸ್ಯನೆಲೆಗೊಂಡಿದೆ ಎನ್ನುವ ಸನ್ನಿವೇಶದಲ್ಲಿಯೇ, ನಾಟಕದಲ್ಲಿ ಪಾತ್ರವನ್ನು ನಿರ್ವಹಿಸುತ್ತಿದ್ದ ನಬಿಯ ಒಂದು ( ದ್ರೌಪದಿಯ ಸೀರೆ ಎಳೆಯುವ) ಕೃತ್ಯದಿಂದ ಇಡೀ ಕಾದಂಬರಿಯ ಅನುಭವ ಲೋಕವೇ ರೂಪುಗೊಳ್ಳುತ್ತದೆ. ಸಮುದಾಯಗಳ ಒಡಲಲ್ಲಿ ಹುದುಗಿರುವ ಕೋಮುದ್ವೇಷ ಹೊರಹೊಮ್ಮಲು ಈ ನಿರ್ದಿಷ್ಟ ಘಟನೆ ನೆಪವಾಗುತ್ತದೆ. ಇದು ಕೇವಲ ನೆಪವೆಂದು ಹೇಳಲು ಸಾಧ್ಯವಿಲ್ಲ ಹಾಗೂ ಇದುವೇ ಮೂಲ ಕಾರಣವೆಂದೂ ಹೇಳಲು ಆಗುವುದಿಲ್ಲ. ಏಕೆಂದರೆ ಸಾಮಾಜಿಕ, ರಾಜಕೀಯ, ಧಾರ್ಮಿಕ ಇಲ್ಲವೇ ಇನ್ಯಾವುದೇ ಬಗೆಯ ಸಾಂಸ್ಕೃತಿಕ ಪಲ್ಲಟಗಳು ಅಥವಾ ಅಪಚಾರಗಳು ನಡೆಯುವುದಕ್ಕೆ ನಬಿಯ ಮೂಲಕ ನಡೆದ ನಾಟಕದ ಈ ಘಟನೆ ನಮ್ಮ ಸಾಮಾಜಿಕ ವಿಘಟನೆಯನ್ನು ಸೂಚಿಸುವ ಒಂದು ಸುಳಿವು ಮಾತ್ರ. ಸಾಮಾಜಿಕ ಬಿರುಕು ಇಲ್ಲವೇ ಒಡಕು ಅನ್ನುವುದು ಯಾರಿಂದಲೋ ಆಗುವಂತಹದಲ್ಲ ಬದಲಾಗಿ ಸಮೂಹಗಳ ಒಡಲಲ್ಲಿ ಹುದುಗಿರುವ ಇಂತಹ ಕೋಮುದ್ವೇಷದ ನೆಲೆಗಳು ಸ್ಪೋಟಗೊಳ್ಳುವುದಕ್ಕೆ ಕೆಲವು ಕ್ಷುಲ್ಲಕ ಕಾರಣಗಳು ಪ್ರಮುಖ ಸಾಕ್ಷಿಗಳಾಗಿ ಮೈದೋರುತ್ತವೆ. ಪ್ರಸ್ತತ ಕಾದಂಬರಿಯ ನಾಟಕದ ಸೀರೆ ಎಳೆಯುವ ಘಟನೆ ಇಂತಹದೊಂದು ವಿನ್ಯಾಸಕ್ಕೆ ಸಾಕ್ಷಿಯಾಗಿದೆ. ಆದ್ದರಿಂದ ನಬಿ, ಶಂಕರ, ನಾಟಕದ ಮಾಸ್ತರ ಇವರುಗಳು ಕೇವಲ ವ್ಯಕ್ತಿಗಳು ಮಾತ್ರವಲ್ಲ. ಬದಲಾಗಿ ಸಾಮಾಜಿಕ ತಲ್ಲಣದ ವಿಭಿನ್ನ ಸಂಕೇತಗಳಾಗಿ ನೆಲೆಗೊಂಡಿದ್ದಾರೆ. ಹಾವಳಿ ಎಂಬುದು ಈ ಕಾದಂಬರಿಯಲ್ಲಿ ಹೇಗೆ ನೆಲೆಗೊಂಡಿದೆ ಅಥವಾ ಅನಾವರಣಗೊಂಡಿದೆ ಎಂಬ ವಾಸ್ತವವನ್ನು ಇಂತಹ ಭಾಷಾಶಾಸ್ತ್ರೀಯ ಓದು ಮತ್ತು ವಿಶ್ಲೇಷಣೆಗಳು ಒತ್ತಾಸೆಯಾಗುವುದರ ಜೊತೆಗೆ ಸಾಹಿತ್ಯ ಓದಿನ ವೈಧಾನಿಕ ವಿನ್ಯಾಸವೂ ಆಗಿರುತ್ತದೆ.

ಈ ಕಾದಂಬರಿಯ ಏಪಿಸೋಡುಗಳು ‘ಹಾವಳಿ’ ಅಥವಾ ಇಂತಹ ಅನುಭವ ಹಾಗೂ ರಾಜಕೀಯ ಅರಾಜಕತೆಯ ವಿವಿಧ ಸ್ವರೂಪವನ್ನು ಹೇಗೆ ಮನವರಿಕೆ ಮಾಡುತ್ತವೆ ಅನ್ನುವುದನ್ನು ಇಂತಹ ವಿಶ್ಲೇಷಣೆಗಳ ಮೂಲಕ ಕಾಣಬಹುದಾಗಿದೆ. ಕಾದಂಬರಿಯ ಆರಂಭ ಮತ್ತು ಮುಕ್ತಾಯವು ಅನಾಮದೇಯ ನಿರೂಪಣೆಗಳಿಂದ ಕೂಡಿರುತ್ತವೆ. ಇಂತಹ ವಿನ್ಯಾಸಕ್ಕೂ ಹೊರತಾಗಿ, ಸಾಕಷ್ಟು ಊರುಗಳು, ಸ್ಥಳಗಳು, ವ್ಯಕ್ತಿಗಳು ಮತ್ತು ಸನ್ಯಾಸಿ-ಸಾಧು-ಸಂತರು ಹಾಗೂ ಮೌಲ್ವಿಗಳ ಪ್ರಸ್ತಾಪ ಯಥೇಚ್ಛವಾಗಿ ಕಾದಂಬರಿಯ ಉದ್ದಕ್ಕೂ ನಿರೂಪಣೆಗೊಂಡಿವೆ. ಈ ನಿರೂಪಣೆಗಳು ಕಾಲ, ದೇಶ, ವ್ಯಕ್ತಿಗಳನ್ನು ಖಚಿತಪಡಿಸುವ ಭಾಷಿಕ ವಿನ್ಯಾಸಗಳೂ (ಡೈಕ್ಸಿಸ್) ಆಗಿವೆ ಜೊತೆಗೆ ಅತ್ಯಂತ ಪರಿಣಾಮಕಾರಿಯಾಗಿ ನಿರೂಪಣೆಗಳಲ್ಲಿ ಬಳಕೆಯಾಗಿವೆ. ಇಲ್ಲಿಯ ಪಾತ್ರಗಳು ಕೇವಲ ಹೆಸರುಗಳು ಮಾತ್ರವಲ್ಲ ಬದಲಾಗಿ ಜಾತಿ, ಧರ್ಮ, ವೃತ್ತಿ, ಸಾಮಾಜಿಕ ಧೋರಣೆ ಹಾಗೂ ಸಾಂಸ್ಕೃತಿಕ ಲೋಪಗಳ ಸಂಕೇತಗಳಾಗಿ ಅನಾವರಣಗೊಂಡಿರುತ್ತವೆ. ಇದಕ್ಕೆ ಪೂರಕವಾಗಿ ಹಾವಳಿ ಎನ್ನುವ ಪದವು ಮೇಲಿಂದ ಮೇಲೆ ಈ ಕಾದಂಬರಿಯ ನಿರೂಪಣೆಗಳಲ್ಲಿ ಪುನಾರ್ವತನೆ  ಆಗಿದೆ. ಈ ಪುನಾರ್ವತನೆ ಹಾವಳಿಯ ಭಾವತೀವ್ರತೆಯನ್ನು ಸೂಚಿಸುವ ಬಗೆಯಾಗಿದೆ. ಹಾಗಾಗಿ ಕಾದಂಬರಿಯ ಪಾತ್ರಗಳು ಭಿನ್ನರೂಪದ ಭಾಷಿಕ ಸಂಗತಿಗಳನ್ನು ಮಾತ್ರ ಬಳಸದೇ, ಭಿನ್ನ ಸಾಮಾಜಿಕ, ಸಾಂಸ್ಕೃತಿಕ ಹಾಗೂ ಧಾರ್ಮಿಕ ನಿಲುವುಗಳನ್ನು ಸೂಚಿಸುವ ಸಂಕೇತಗಳಾಗಿ ಇಲ್ಲಿಯ (ಭಾಷಿಕ) ನಿರೂಪಣೆಗಳು ನೆಲೆಗೊಂಡಿವೆ. ಹಾವಳಿ ಎನ್ನುವುದು ಕಾದಂಬರಿಯ ಉದ್ದಕ್ಕೂ the horror! ಧರ್ಪಗಳನ್ನು ಸೂಚಿಸುವ ಸೂಚಕವಾಗಿದೆ.  ಪರಿಣಾಮವಾಗಿ, ಈ ಕಾದಂಬರಿಯ ಇಡೀ ಕಥಾ ಹಂದರವೇ ಹಾವಳಿಯ ಭಾವತೀವ್ರತೆಯನ್ನು ಪ್ರಚುರಪಡಿಸುವ ವಿನ್ಯಾಸವಾಗಿದೆ ಹಾಗೂ ಸಾಮಾಜಿಕ ವೈದೃಶ್ಯವನ್ನು ನಿರೂಪಿಸುವ ಬಗೆಯೂ ಆಗಿರುತ್ತದೆ. ಹಾಗಾಗಿ ಕಾದಂಬರಿಯ ಪ್ರತೀ ಸನ್ನಿವೇಶ, ಘಟನೆ ಮತ್ತು ವರ್ತನೆಗಳು ಹಾವಳಿಯ ಪ್ರಭಾವ ಮತ್ತು ಪರಿಣಾಮವನ್ನು ಸೂಚ್ಯವಾಗಿ ಧ್ವನಿಸುತ್ತದೆ.      

ಈಗಾಗಲೇ ಚರ್ಚಿಸಿದಂತೆ, ಈ ಲೇಖನದಲ್ಲಿ ಬಳಸಿರುವ ಕಥನವೆಂಬ ಪರಿಕಲ್ಪನೆಯನ್ನು ಚರಿತ್ರೆ ಮತ್ತು ಸಾಹಿತ್ಯ ಎನ್ನುವ ಎರಡೂ ನೆಲೆಗಳಿಂದ ಬಳಸಲಾಗಿದೆ. ಪ್ರಸ್ತುತ ಕಾದಂಬರಿಯಲ್ಲಿ ಈ ಎರಡೂ ನೆಲೆಗಳು ಮೇಳೈಸಿರುವುದನ್ನು ನೋಡುತ್ತೇವೆ. ಸಾಹಿತ್ಯ ಮತ್ತು ಚರಿತ್ರೆ ಇವೆರಡಕ್ಕೂ ನಿರೂಪಣೆ ಎನ್ನುವುದು ಸಮಾನ ವಿನ್ಯಾಸವಾಗಿದೆ. ಚರಿತ್ರೆಯನ್ನು ಪರಿಕಲ್ಪಿಸುವುದಾಗಲೀ ಇಲ್ಲವೇ ಸಾಹಿತ್ಯವನ್ನು ಪರಿಕಲ್ಪಿಸುವುದಾಗಲೀ, ಇಲ್ಲೆರಡೂ ಸನ್ನಿವೇಶದಲ್ಲಿ ಭಾಷಿಕ ಪ್ರಾತಿನಿಧ್ಯ ಮತ್ತು ನಿರೂಪಣೆಯ ವಿನ್ಯಾಸಗಳು ಅತ್ಯಂತ ಕ್ರಿಯಾಶೀಲವಾಗಿ ಒಡಮೂಡುವ ಅಗತ್ಯವಿದೆ. ಏಕೆಂದರೆ ಕಥನ ಕ್ರಿಯೆ ನೆಲೆಗೊಳ್ಳದೆ ಹೋದರೆ ಇವೆರಡೂ ಪರಿಕಲ್ಪನೆಗಳ ಮೂಲ ಗ್ರಹಿಕೆಗೆ ಹೊಡೆತ ಬೀಳುತ್ತದೆ. ಚರಿತ್ರೆ ಗತವನ್ನು ಕುರಿತಾಗಿದ್ದರೂ ಅದು ಕೇವಲ ಗತದ ವ್ಯಾಖ್ಯಾನ ಮಾತ್ರವಲ್ಲ. ಬದುಕಿನ ಹಿನ್ನೋಟ ಮತ್ತು ಮುನ್ನೋಟಗಳ ನಡುವಣ ಅನುಸಂಧಾನವೇ ಆಗಿರುತ್ತದೆ. ಹಾಗೇನೆ ಸಾಹಿತ್ಯ ಜೀವನಾನುಭವವನ್ನು ಕುರಿತಾಗಿದ್ದರೂ ಅದು ಕೇವಲ ಜೀವನಾನುಭವದ ಬಣ್ಣನೆ ಮಾತ್ರ ಆಗಿರುವುದಿಲ್ಲ. ಹೊರತಾಗಿ ಬದುಕಿನ ಸಂವೇದನೆಗಳ ಕಥನ ಪರಂಪರೆಯನ್ನು ಮತ್ತು ಕಥನಗಳ ಗತಿತಾರ್ಕಿಕತೆಯ ವಿನ್ಯಾಸಗಳನ್ನು ನಿರಂತರಗೊಳಿಸುವ ಹಾಗೂ ರೂಪಿಸುವ ಬಗೆಯಾಗಿರುತ್ತದೆ. ಹಾವಳಿ ಕಾದಂಬರಿಯನ್ನು ಇಂತಹ ತಾತ್ವಿಕ ದೃಷ್ಟಿಕೋನಗಳ ಮೂಲಕ ಅರ್ಥೈಸುವುದು ಮುಖ್ಯ. ಕೆಲವು ಸನ್ನಿವೇಶಗಳಲ್ಲಿ ಸಾಮಾಜಿಕ ವೈವಿಧ್ಯತೆ, ಸಹಜೀವನ ಅಥವಾ ಸಹಬಾಳ್ವೆಯ ನಿರೂಪಣೆಗಳನ್ನು ಮಂಡಿಸುತ್ತೇವೆ. ಆದರೆ ಇಂತಹ ಮಂಡನೆಯ ವ್ಯಾಪ್ತಿ ಮಾತ್ರ ಅತ್ಯಂತ ಸಂಕುಚಿತವಾಗಿರತ್ತದೆ. ಅಂದರೆ ಚಾರಿತ್ರಿಕ ಕುರುಹುಗಳನ್ನು ಕಡೆಗಣಿಸಿ, ಸಾಮಾಜಿಕ ಲಯಗಳನ್ನು ವ್ಯಾಖ್ಯಾನ ಮಾಡುವ ಕೆಲಸದಲ್ಲಿ ತೊಡಗುತ್ತೇವೆ. ಹೀಗೆ ಮಾಡುವುದರಿಂದ ಕಥನದ ಹಂದರವು ಶಿಥಿಲಗೊಳ್ಳುತ್ತದೆ ಹೊರತು ಅದೊಂದು ಮಾನವ ಕುಲದ ಸಾಮಾಜಿಕ, ಸಾಂಸ್ಕೃತಿಕ ಹಾಗೂ ಧಾರ್ಮಿಕ ಚಹರೆಗಳನ್ನು ಚಾರಿತ್ರಿಕ ವಿನ್ಯಾಸದಲ್ಲಿ ನೆಲೆಗೊಳಿಸಿದಂತೆ ಆಗುವುದಿಲ್ಲ.

ಸಾಹಿತ್ಯ ಬದುಕಿನ ವಿದ್ಯಮಾನವಾಗುವುದು ಯಾವಾಗಂದರೆ, ಅದು ಚಾರಿತ್ರಿಕ ತಳಹದಿಯನ್ನು ಅನುಸರಿಸಿಕೊಂಡಿದ್ದರೆ ಮಾತ್ರ. ಇಲ್ಲವಾದರೆ ಅಂತಹದೊಂದು ಕಥನ ಬದುಕಿನ ಅನುಭವದ ವ್ಯಾಪ್ತಿಯನ್ನು ಗುರುತಿಸುವ ಸೂತ್ರವಾಗಲಾರದು. ಹಾಗಾಗಿ ಚರಿತ್ರೆ ಮತ್ತು ಸಾಹಿತ್ಯ ಕೃತಿಗಳ ನಡುವಣ ಅನುಸಂಧಾನ ಇಲ್ಲವೇ ಮುಖಾಮುಖಿಯ ಮಾದರಿಗಳನ್ನು ಪರಿಗಣಿಸುವ ಜರೂರಿದೆ. ಪ್ರಸ್ತುತ ಕಾದಂಬರಿ ಸಾಹಿತ್ಯ ಮತ್ತು ಚರಿತ್ರೆ ಎರಡನ್ನೂ ಮೇಳೈಸಿಕೊಂಡ ಕಥನವಾಗಿದೆ. ಚಾರಿತ್ರಿಕ ಸನ್ನಿವೇಶ ಮತ್ತು ವರ್ತಮಾನದ ನಿಲುವುಗಳ ಆಧಾರದ ಮೇಲೆ ಬದಕಿನ ಸಂವೇದನೆ ಮತ್ತು ಅದರ ಸ್ಥಿತ್ಯಂತರದ ಆಯಾಮಗಳನ್ನು ಮನಗಾಣಬಹುದಾಗಿದೆ. ಹಾವಳಿ ಕಾದಂಬರಿಯಲ್ಲಿ ಮುಸ್ಲಿಂ ವ್ಯಕ್ತಿಗಳು ನಾಟಕಗಳಲ್ಲಿ ಪೌರಾಣಿಕ (ಹಿಂದೂ ಪುರಾಣಗಳ)  ಪಾತ್ರಗಳನ್ನು ಅಭಿನಯಸುವ ಬಗೆ ಸಹಬಾಳ್ವೆಯ ಮಾದರಿಯಾಗಿ ಕಾಣುತ್ತವೆ. ವಾಸ್ತವದಲ್ಲಿ ಸಹಬಾಳ್ವೆಯ ಕಲ್ಪನೆ ಇಂತಹ ವಿವರಗಳಿಗೆ ಮಾತ್ರ ಸೀಮಿತವಾಗಿರುವುದಿಲ್ಲ. ಹಾಗಾಗಿಯೇ ನಬಿ ನಾಟಕದಲ್ಲಿ ಸೀರೆ ಎಳೆಯುವ ಪ್ರಸಂಗದ ಪರಿಣಾಮದಿಂದ ಸಾಮಾಜಿಕ, ಧಾರ್ಮಿಕ ಮತ್ತು ರಾಜಕೀಯ ಆವಾಂತರಗಳು ಕಾದಂಬರಿಯಲ್ಲಿ ಘಟಿಸುತ್ತಿದ್ದಿಲ್ಲ. ಹಿಂದೂ ಮತ್ತು ಮುಸ್ಲಿಂ ಸಮುದಾಯಗಳ ಚಾರಿತ್ರಿಕ ನಂಟಿನ ಸ್ವರೂಪವನ್ನು ಅರ್ಥ ಮಾಡಿಕೊಳ್ಳದೇ, ವರ್ತಮಾನದಲ್ಲಿ ಅವರ ನಂಟಸ್ತಿಕೆಯನ್ನು ಸಹಬಾಳ್ವೆಯ ಪ್ರತಿರೂಪದ ವಿನ್ಯಾಸವನ್ನಾಗಿ ಬಿಂಬಿಸುವುದು ಅತ್ಯಂತ ಸಂಕುಚಿತ ದೃಷ್ಟಿಕೋನವಾಗುತ್ತದೆ. ಒಳಗಿನವರು (ಹಿಂದೂ) ಮತ್ತು ಹೊರಗಿನವರು (ಮುಸ್ಲಿಂ) ಅನ್ನುವ ಸ್ಪಷ್ಟವಾದ ವರ್ಗೀಕರಣ ಶತಮಾನಗಳಿಂದ ನಮ್ಮಲ್ಲಿ ಬೇರೂರಿದೆ. ಇಂತಹ ವೈಚಿತ್ರ್ಯಗಳನ್ನು ಕಡೆಗಣಿಸಿ ಸಹಬಾಳ್ವೆಯ ಮಾದರಿ ಮತ್ತು ಸ್ವರೂಪವನ್ನು ವಿವರಿಸುವುದು ಸಾಧ್ಯವೇ ಇಲ್ಲ. ಈ ನಿಲುವುಗಳಿಗೆ ತಕ್ಕುದಾದ ಸಾಕ್ಷಾಧಾರಗಳು ಹಾವಳಿ ಕಾದಂಬರಿಯಲ್ಲಿ ಅಪಾರವಾಗಿ ಸಿಗುತ್ತವೆ. ಸಹಬಾಳ್ವೆಯ ಮಾದರಿ ಅನ್ನುವುದು ಅತ್ಯಂತ ಸಂಕೀರ್ಣವಾದದ್ದು.

ಸಾಹಿತ್ಯ ಪಠ್ಯದ ವಿಶ್ಲೇಷಣೆ ಮೇಲ್ಮೈ ವಿವರಗಳನ್ನು ಮಾತ್ರ ಗಮನಿಸಿ ಮಾಡುವಂತಹದಲ್ಲ. ಬದಲಾಗಿ ಆ ಪಠ್ಯದೊಳಗೆ ಮೈದೋರಿದ ಸಾಮಾಜಿಕ, ಸಾಂಸ್ಕೃತಿಕ, ಚಾರಿತ್ರಿಕ ಹಾಗೂ ರಾಜಕೀಯ ನಿಲುವುಗಳನ್ನು ಪರಿಗಣಿಸಬೇಕಾಗುತ್ತದೆ. ಏಕೆಂದರೆ ಸಾಹಿತ್ಯ ಪಠ್ಯದ ಸಂಕೀರ್ಣತೆ ಅನ್ನುವುದು ಕಾಲ ದೇಶಗಳ ಹಂಗು ತೊರೆದು ವಿಕಾಸಗೊಳ್ಳುವ ಬಗೆಯಾಗಿದೆ. ಇಂತಹ ಸಂಕೀರ್ಣತೆಯ ಪರಿಣಾಮದಿಂದ ವರ್ತಮಾನದಲ್ಲಿ ಏನು ಸಂಭವಿಸುತ್ತದೆ ಅನ್ನುವುದಕ್ಕೆ ಒಂದು ಗತಿತಾರ್ಕಿಕ ವಿನ್ಯಾಸವಿರುತ್ತದೆ. ಹಾವಳಿ ಕಾದಂಬರಿಯ ಇಡೀ ನಿರೂಪಣೆ ಮತ್ತು ಭಾಷಿಕ ವಿನ್ಯಾಸಗಳನ್ನು ಪರಿಶೀಲಿಸಿ ನೋಡಿದರೆ, ಒಂದು ಸಾಮಾಜಿಕ, ಸಾಂಸ್ಕೃತಿಕ ಹಾಗೂ ಪ್ರಾದೇಶಿಕ ವ್ಯಾಪ್ತಿಯಲ್ಲಿ ಬದುಕಿತ್ತಿರುವ ಸಮುದಾಯಗಳ ನಡುವಣ ತಿಕ್ಕಾಟದ ತೀವ್ರತೆ ಹೇಗೆ ನೆಲೆಪಡೆಯುತ್ತದೆ ಎಂಬುದು ನಮ್ಮ ಅರಿವಿಗೆ ಬರುತ್ತದೆ. ಕೊಲೆ, ಅತ್ಯಾಚಾರ, ಕೋಮು ದ್ವೇಷವನ್ನು ಕಾರುವ ಸಮುದಾಯಗಳ ನಡುವೆ ಪರಸ್ಪರ ಒಪ್ಪಿದ ಒಂದು ಸಹಬಾಳ್ವೆಯ ವಿನ್ಯಾಸ ನೆಲೆಗೊಳ್ಳುವುದಕ್ಕೆ ಹೇಗೆ ಸಾಧ್ಯ? ಕೇವಲ ರಾಜಕೀಯ ಸರಿತನ (ಪೊಲಟಿಕಲಿ ಕರೆಕ್ಟ್)ವನ್ನು ಸಾರುವುದಕ್ಕೆ ಸಹಬಾಳ್ವೆ ಇಲ್ಲವೇ ಸಹಜೀವನದಂತ ಪರಿಕಲ್ಪನೆಗಳನ್ನು ಬಳಸುವ ಜಾಯಮಾನವನ್ನು ಇವತ್ತಿನ ನಮ್ಮ ಸಮಾಜಗಳಲ್ಲಿ ಕಾಣುತ್ತೇವೆ. ಇದು ಆಶಾವಾದದಿಂದ ರೂಪುಗೊಂಡ ಭಾವನೆಯಲ್ಲ ಕೇವಲ ರಾಜಕೀಯ ಸರಿತನವನ್ನು ಬಿಂಬಿಸುವುದಕ್ಕೆ ಸಾಕ್ಷಿಯಾಗಿರುವ ಬೆಳವಣಿಗೆಯಾಗಿದೆ ಎನ್ನುವುದು ಗಮನಾರ್ಹ.  

ಭಾಗ -4

ನಿರೂಪಣಾ ಶೈಲಿಯ ಭಾಷಿಕ ಚಹರೆಗಳು

ಅನುಭವ ಲೋಕದ ಒಟ್ಟು ಗ್ರಹಿಕೆಯನ್ನು ಅರ್ಥೈಸುವುದಕ್ಕೆ ಹಾಗೂ ನಿರೂಪಿಸುವುದಕ್ಕೆ ಒತ್ತಾಸೆಯಾಗಿರುವುದೇ ಭಾಷೆ. ಹಾಗಾಗಿ ಭಾಷಿಕ ನಿಲುವುಗಳನ್ನು ವಿವರಿಸುವುದಕ್ಕೆ ಬಳಸುವ ಸೈದ್ಧಾಂತಿಕ ವಿನ್ಯಾಸಗಳನ್ನೂ ಕಾದಂಬರಿಯ ಭಾಷಿಕ ವಿನ್ಯಾಸವನ್ನು ಅರಿಯುವುದಕ್ಕೆ ಬಳಸಬಹುದಾಗಿದೆ ಎನ್ನುವುದನ್ನು ಮೇಲಿನ ಚರ್ಚೆಗಳ ಮೂಲಕ ಮನಗಾಣಬಹುದು. ಈ ಎಲ್ಲ ತಾತ್ವಿಕ ನಿಲುವುಗಳ ಸ್ವರೂಪ ಮತ್ತು ವ್ಯಾಪ್ತಿಯನ್ನು ಇನ್ನಷ್ಟು ವಿವರಿಸಿ ಅರ್ಥೈಸುವುದಕ್ಕೆ ನಿರೂಪಣಾ ಶೈಲಿ ಮತ್ತು ಭಾಷಿಕ ಚಹರೆಗಳನ್ನು ಬಿಡಿಸಿ ನೋಡುವುದು ಜರೂರಾಗಿದೆ. ಏಕೆಂದರೆ  ಪಠ್ಯದ ಸಾಹಿತ್ಯಕತೆ (ಲಿಟರರಿನೆಸ್)ಅನ್ನು ಹಾಗೂ ಸೃಜನಶೀಲ ವಿನ್ಯಾಸವನ್ನು ಗ್ರಹಿಸುವುದಕ್ಕೆ ನಿರೂಪಣಾ ಶೈಲಿ ಮತ್ತು ಭಾಷಿಕ ಚಹರೆಗಳು ನಮಗೆ ಒತ್ತಾಸೆಯಾಗುತ್ತವೆ. ಒಂದು ಪಠ್ಯದ ಇಡೀ ಅನುಭವ ಲೋಕವನ್ನು ಕಂಡರಿಯುವುದಕ್ಕೆ ನಾವು ಅನುಸರಿಸಬೇಕಾದ ವಿಮರ್ಶಾತ್ಮಕ ಮಾನದಂಡಗಳು ಎಷ್ಟು ಮುಖ್ಯವೋ, ಭಾಷಿಕ ಚಹರೆಗಳು ಕೂಡ ಅಷ್ಟೇ ಮುಖ್ಯ. ಸಾಹಿತ್ಯವೆಂಬುದು ಕೇವಲ ಕಾಲ್ಪನಿಕವಲ್ಲ ಅದೊಂದು ಸಾಮಾಜಿಕ ವಾಸ್ತವದ ಕಲಾ ಅಭಿವ್ಯಕ್ತಿ ಆಗಿರುತ್ತದೆ. ಈ ಸಾಮಾಜಿಕ ವಾಸ್ತವ ಇಡಿ ಮತ್ತು ಬಿಡಿ ನೆಲೆಗಳಲ್ಲಿ ಅನಾವರಣಗೊಳ್ಳುತ್ತದೆ. ಇಡಿ ಮತ್ತು ಬಿಡಿತನದ ಅನುಭವವನ್ನು ಭಾಷೆ ನಿಚ್ಚಳವಾಗಿ ತೋರಿಸುತ್ತದೆ. ಉದಾ.ಗೆ ಶೇಖರ, ಶಂಕರ, ಗುರವ್ವ, ಇಬ್ರಾಹಿಂ, ನಬಿ, ರಜವಿ ಸಾಹೇಬರು ಇವರನ್ನು ಬಿಡಿ ಬಿಡಿಯಾಗಿ ನಿರೂಪಿಸಿದರೆ ಕೇವಲ ವ್ಯಕ್ತಿಗಳಾಗಿ ಮಾತ್ರ ಕಾಣುತ್ತಾರೆ. ಆದರೆ ಈ ವ್ಯಕ್ತಿಗಳು ಸಮುದಾಯ ಇಲ್ಲವೇ ಧರ್ಮದ ಪ್ರತಿನಿಧಿಗಳಾಗಿ ಮಾತ್ರ ಚಹರೆಗಳನ್ನು ಪಡೆದುಕೊಳ್ಳುತ್ತಾರೆ. ಹಾಗಾಗಿ ಈ ವ್ಯಕ್ತಿಗಳಿಂದ ಏರ್ಪಡುವ ಕ್ರಿಯೆಗಳು ಸಮುದಾಯದ ಅಥವಾ ಅವರು ಪ್ರತಿನಿಧಿಸುವ ಧರ್ಮದ ಕ್ರಿಯೆಗಳಾಗಿ ಹೊರಹೊಮ್ಮುತ್ತವೆ. ಹೀಗೆ ಹೊರಹೊಮ್ಮಿದ ಕ್ರಿಯೆಗಳು ಮೂಲಭೂತವಾಗಿ ಭಾಷಿಕ ಕ್ರಿಯೆಗಳೇ ಆಗಿರುತ್ತವೆ. ಒಂದೊಂದು ಭಾಷಾ ಕ್ರಿಯೆಯೂ ಸಾಮಾಜಿಕ ಕ್ರಿಯೆಯ ಅಭಿವ್ಯಕ್ತಿ ಆಗಿರುತ್ತದೆ. ಅಂದರೆ ಸಮೂಹಗಳ ಒಳಗೆ ತಲೆಯೆತ್ತುವ ಪರಕೀಯತೆ, ಪ್ರತ್ಯೇಕತೆ, ಪರಜಾತಿ, ಪರಧರ್ಮ, ಹೆಣ್ಣು ಗಂಡು, ಹಿಂದೂ ಮುಸ್ಲಿಂ, ನಾವು ನೀವು ಎಂಬೆಲ್ಲ ನಿರೂಪಣೆಗಳನ್ನು ಇಲ್ಲಿ ಕಾಣುತ್ತೇವೆ. ಈ ನಿರೂಪಣೆಗಳು ಪ್ರಧಾನವಾಗಿ ರೂಪಕ (ಮೆಟಾಫರ್), ಒಡಹೆಸರು (ಮೆಟಾನಮಿ), ಮುನ್ನೆಣಿಕೆ (ಪ್ರಿಸಪೋಸಿಶನ್) ಮದಿಪು (ಪೊಲೈಟ್ನೆಸ್) ಮದಪಿನ ರೂಪ (ಹಾನರ್ಫಿಕ್ ಫಾರ್ಮ್), ತೋರ್ಕೆ (ಡೈಕ್ಸಿಸ್), ತೋರ್ಕೆಪದ (ಡೈಕ್ಟಿಕ್ ವರ್ಡ್) ಮೊದಲಾದ ಬಗೆಗಳಲ್ಲಿ ಹೊರಹೊಮ್ಮುತ್ತವೆ. ಈ ಎಲ್ಲ ಪರಿಕಲ್ಪನೆಗಳು ಪಾತ್ರಗಳ ಚಹರೆ, ಅಸ್ತಿತ್ವ, ಸ್ವರೂಪ, ಸಾಮಾಜಿಕ ಸ್ಥಾನಮಾನ, ಹಿನ್ನಲೆ ಇತ್ಯಾದಿ ಬಗೆಗಳ ಮೂಲಕ  ಭಾಷಿಕ ನಿರೂಪಣಾ ಶೈಲಿ ಹಾಗೂ ಚಹರೆಗಳನ್ನು ವಿವರಿಸುವ ವಿನ್ಯಾಸಗಳಾಗಿರುತ್ತವೆ. ಉದಾ.ಗೆ ರಾತ್ರಿ ನಾಟಕ ನೋಡಿ ತಡಮಾಡಿ ಮಲಗಿದ್ದ  ಊರು ಬೆಳಗ್ಗೆ ಹುಂಜಗಳ ಅಲಾರಂ ದನಿಗೆ, ದನಗಳ ಅಂಬಾ ಕೂಗಿಗೆ, ಗುಬ್ಬಿಗಳ ಚಿಲಿಪಿಲಿಗೆ ಕಣ್ದೆರೆಯುತ್ತಾ ದೊಡ್ಡದಾಗಿ ಆಕಳಿಸಿತು (ಪುಟ:14).  ಈ ನಿರೂಪಣೆ ಕೇವಲ ವಿವರಣೆ ಅಥವಾ ಮಾಹಿತಿ ಮಾತ್ರವಲ್ಲ. ಬದಲಾಗಿ ಬಸಾಪುರ ಎಂಬ ನಿರ್ಜೀವ ಸ್ಥಿತಿಯನ್ನು ಜೀವಂತಗೊಳಿಸುವ (ಪರ್ಸಾನಿಫಿಕೇಶನ್) ಬಗೆಯಾಗಿದೆ. ಇಂತಹ ನಿರೂಪಣಾ ಬಗೆಗಳಲ್ಲಿ ಹೋಲಿಕೆಯ ವಿಭಿನ್ನ ಮಾದರಿ ಅಥವಾ ಆಯಾಮಗಳನ್ನೂ ಕಾಣಬಹುದು. 

ಸಾಹಿತ್ಯ ಪಠ್ಯಗಳ ನಿರೂಪಣೆಯ ಸ್ವರೂಪವು ಮೌಖಿಕತೆಯ ಆಯಾಮವನ್ನು ಪಡೆಯದಿದ್ದರೆ, ಅದಕ್ಕೊಂದು ಸೃಜನಶೀಲತೆ ಮತ್ತು ಜೀವಂತಿಕೆ ಪ್ರಾಪ್ತವಾಗುವುದಿಲ್ಲ. ಹಾಗಾಗಿ ಯಾವುದೇ ಸಾಹಿತ್ಯ ಪಠ್ಯವನ್ನು ಸೃಜನಶೀಲಗೊಳಿಸಲು ಈ ಮೌಖಿಕತೆ ಅತ್ಯಂತ ಪೂರಕ ನೆಲೆಯಾಗಿದೆ. ಇದು ಏಕಕಾಲಕ್ಕೆ ಸಾಹಿತ್ಯ ಸಂವೇದನೆಯೂ ಹಾಗೂ ಸಾಮಾಜಿಕ ವಾಸ್ತವದ ನಿರೂಪಣೆಯೂ ಆಗಿರುತ್ತದೆ. ಉದಾ.ಗೆ ಮಸದೀಯ ಮುಂದೆ ನಿಂತಿರುವ ಅಂಗೈ ಅಗಲದ ಎಲೆಗಳಿಂದ ನಿಬಿಡವಾಗಿರುವ ಬಂಗಾಳಿ ಗಿಡ ತನ್ನ ಛತ್ರಿ ಚಾಮರಗಳನ್ನು ಹಿಡಿದು ಬೀಸತಿತ್ತು (ಪುಟ: 19). ಇದು ಒಂದು ಗಿಡದ ಬಣ್ಣನೆಯ ಜೊತೆಗೆ ಒಂದು ವಾತಾವರಣವನ್ನು ಬಣ್ಣಿಸುವ ವಿಧಾನ ಆಗಿರುತ್ತದೆ. ಈ ನಿರೂಪಣೆಯಲ್ಲಿ ಮೌಖಿಕತೆಯ ಮೂಲಕ ಒಂದು ಬಗೆಯ ಏಸ್ತಟಿಕ್ ಆಯಾಮವನ್ನೂ ಒದಗಿಸಲಾಗಿದೆ. ಇಂತಹ ನಿರೂಪಣೆಗೆ ವ್ಯತರಿಕ್ತವಾದ ಮತ್ತೊಂದು ನಿರೂಪಣೆಯನ್ನು ಇಲ್ಲಿ ಗಮನಿಸಬಹುದು. ಧರ್ಮದ ಆಧಾರದ ಮ್ಯಾಲೆ ನಮ್ಮ ರಾಜ್ಯವನ್ನು ಕಟ್ಟಬೇಕೆನ್ನುವುದು ರಜವಿ ಸಾಹೇಬರ ಕನಸು. ನಮ್ಮ ಧರ್ಮವನ್ನು ವಿಶ್ವಧರ್ಮವನ್ನಾಗಿಸುವ ರಜವಿ ಸಾಹೇಬರ ಕನಸನ್ನು ನನಸು ಮಾಡುವಲ್ಲಿ ನಾವು ಕೈಗೂಡಿಸಬೇಕಾಗೈತಿ. ನಮ್ಮ ಹಳ್ಳಿಯಲ್ಲಿ ಧಾರ್ಮಿಕ ಅರಿವನ್ನು ಬೆಳಸಬೇಕಾಗೈತಿ. ಐದು ಸಲ ತಪ್ಪದೇ ಮಸೀದಿಗೆ ಹೋಗಿ ನಮಾಜು ಮಾಡುವುದು, ನಮ್ಮದೇ ಉಡುಪುಗಳನ್ನು ಧರಿಸುವುದು. ನಮ್ಮ ಧರ್ಮದ ಲಾಂಛನ ನಮ್ಮ ಅಸ್ಮಿತೆಯ ಗುರುತಾಗಿರೋದ್ರಿಂದ ತಪ್ಪದೇ ಪಾಲಿಸುವುದು. ಇಲ್ಲಿ ನಮ್ಮ ಮಂದಿಗೆ ಧರ್ಮದ ಅರಿವೇ ಇಲ್ಲ. ಉರುಸು ಅಲೆಹಬ್ಬಗಳಲ್ಲಿ ಹಿಂದೂಗಳು ಪಾಲ್ಗೊಳ್ಳುವರು. ಧರ್ಮ ಶುದ್ಧೀ ಇಲ್ಲ (ಪುಟ:135). ಪ್ರತ್ಯೇಕತೆಯ ಭಾವನೆಯನ್ನು ಮೂಡಿಸುವ ಹುನ್ನಾರದ ಜೊತೆಗೆ ಧರ್ಮಾಂಧತೆಯನ್ನೂ ಬೆಳೆಸುವ ಅಧಿಕಾರ ಸಂಬಂಧದ ನಿರೂಪಣೆಯಾಗಿ ಈ ಮಾತುಗಳು ಮೂಡಿಬಂದಿವೆ. ಧಾರ್ಮಿಕತೆ ಇಲ್ಲವೇ ಸಾಮರಸ್ಯದ ನಿಲುವುಗಳನ್ನು ಪ್ರಚುರಪಡಿಸುವ ಬದಲಾಗಿ ಪ್ರತ್ಯೇಕತೆ ಹಾಗೂ ಧಾರ್ಮಿಕ ದ್ವೇಷದ ನಿಲುವುಗಳಾಗಿವೆ. ಆದರೆ ಇದೇ ಸಮಯದಲ್ಲಿ ಮೋದೀನ ಸಾಬನ ಮನೆಯ ಹುಂಜ ಬಸಾಪುರವನ್ನು ಎಚ್ಚರಿಸಿರಲಿಲ್ಲ. ಆತನ ಮನಿಯ ದರವಾಜ ರಪ್ ರಪ್ ಅಂತ ಬಡಕೋತು…..” (ಪುಟ:135). ಬಸಾಪುರವನ್ನು ಎಚ್ಚರಿಸುವ ಧರ್ಮಾತೀತ ಮಾಧ್ಯಮವಾಗಿ ಹುಂಜವನ್ನು ನಿರೂಪಿಸಲಾಗಿದೆ. ಧರ್ಮದ ಪ್ರಶ್ನೆಗಳಲ್ಲಿ ಪ್ರಾಣಿ, ಪಕ್ಷಿ ಮತ್ತು ಮರ ಗಿಡಗಳು ಪ್ರತ್ಯೇಕತೆಯ ಗುರುತುಗಳಾಗದೇ, ಊರಿನ ಸಾರ್ವತ್ರಿಕತೆಯ ಸಂಕೇತಗಳಾಗಿ ನೆಲೆಗೊಂಡಿರುವುದು ವಿಶೇಷವಾಗಿದೆ.  ಇದಕ್ಕೆ ಪೂರಕವಾದ ಇನ್ನೊಂದು ನಿರೂಪಣೆಯನ್ನು ಇಲ್ಲಿ ಉಲ್ಲೇಖಿಸಬಹುದು ಅದೇನೆಂದರೆ, ಶೂಟಿಂಗ್ ಜತೆಗೆ ಗ್ರೆನೇಡ್ ಎಸೆಯೋದು ಗೊತ್ತಿರಬೇಕುಕೆಲವು ಸಲ ಇವುಗಳನ್ನು ನೀವು ಬಳಸಬೇಕಾಗುತ್ತದೆ….ವೈರಿಗಳ ನೆಲೆಗಳ ಮ್ಯಾಲೆ, ಇಲ್ಲಾ ಬೀದಿ ಕಾಳಗದಲ್ಲಿ ವೈರಿಗಳೊಂದಿಗೆ ಮುಖಾಮುಖಿಯಾದಾಗ ಲೋಗೊಂಕೆ ಊಪರ್ ಎಸೆದು ಅವರನ್ನು ಚೆದುರಿಸಬಹುದು, ಬೆದರಿಸಬಹುದುಒಂದೆರಡು ಹೆಣ ಬಿದ್ರೆ, ಇಲ್ಲಾ ದುಕಾನ್, ಘರ್ ಭಸ್ಮ ಆದ್ರೆ ಅವರು ಎದೆಗುಂದತಾರೆ (ಪುಟ:258).  ಈ ಮೇಲೆ ಚರ್ಚಿಸಿದ ನಿರೂಪಣೆ ಒಂದರಲ್ಲಿ ಕೋಮುದ್ವೇಷ, ಪ್ರತ್ಯೇಕತೆಯ ಹುನ್ನಾರವಿದ್ದಂತೆ, ಪ್ರಸ್ತುತ ನಿರೂಪಣೆಯಲ್ಲಿಯು ಇನ್ನೊಂದು ಧರ್ಮಕ್ಕೆ ಸೇರಿದ ಪಾತ್ರಗಳು ಹೇಳುವ ಮಾತುಗಳು ಕೂಡ ಧರ್ಮಾಂಧತೆ ಹಾಗೂ ಪ್ರತ್ಯೇಕತೆಯನ್ನು ಮೂಡಿಸುವ ಹುನ್ನಾರಕ್ಕೆ ಸಾಕ್ಷಿಯಾಗಿವೆ ಹಾಗೂ ಆ ಧರ್ಮವನ್ನು ನಿರ್ನಾಮ ಮಾಡುವ ಕುತಂತ್ರವಿದೆ. ಭೀಷ್ಮ ಸಾಹನಿ ಅವರ ತಮಸ್ ಕೃತಿಯು ಸ್ವಾತಂತ್ರ್ಯ ಹೋರಾಟದ ಸನ್ನಿವೇಶದಲ್ಲಿ ತೆಲೆಯೆತ್ತಿದ್ದ ಅಂದಿನ ದಂಗೆಗಳು, ಜನಾಂಗ ದ್ವೇಷ ಮತ್ತು ಕೋಮುದ್ವೇಷವನ್ನು ನಿರೂಪಿಸುವ ಮಹತ್ವದ ಪಠ್ಯವಾಗಿದೆ. ಹಾವಳಿ ಕಾದಂಬರಿಯ ನಿರೂಪಣೆಗಳ ಸಾಂದ್ರತೆ ಮತ್ತು ತೀವ್ರತೆ ‘ಹಾವಳಿ’ಯ ಸ್ವರೂಪವನ್ನು ಬಣ್ಣಿಸುವ ವಿನ್ಯಾಸವಾಗಿವೆ. ಈ ತರಹದ ವಿವರಣೆಗಳು ಕೂಡ ಚರಿತ್ರೆ ಮತ್ತು ವರ್ತಮಾನದ ಬದುಕಿನ ಬಣ್ಣನೆಗಳಾಗಿ ಮೂಡಿ ಬಂದಿರುತ್ತವೆ. ಜನಾಂಗ ದ್ವೇಷ ಮತ್ತು ದಂಗೆಗಳ ಸ್ವರೂಪದಲ್ಲಿ ಹಾವಳಿ ಹಾಗೂ ತಮಸ್ ಪಠ್ಯಗಳು ಸಾಮ್ಯತೆಯನ್ನು ಪಡೆದಿದ್ದರೂ, ಇವುಗಳ ತಾತ್ವಿಕ ಬಿತ್ತಿ ಮತ್ತು ನಿರೂಪಣೆಯ ಕ್ರಮಗಳು ಭಿನ್ನವಾಗಿರುತ್ತವೆ ಅನ್ನುವುದು ಗಮನಾರ್ಹ.  ಹಾಗಾಗಿ ಹಾವಳಿ ಪರಿಕಲ್ಪನೆಯ ಅರ್ಥ ಮತ್ತು ವ್ಯಾಪ್ತಿಯು ದ್ವೇಷದ ವಿವಿಧ ನೆಲೆಗಳ ಸಾಂಕೇತಿಕಯನ್ನು ಸೂಚಿಸುವ ಬಗೆಯಾಗಿದೆ. 

ಹಳ್ಳಿಯ (ಬಸಾಪುರ) ಆಚಾರ-ವಿಚಾರಗಳು, ಅಧಿಕಾರ ಸಂಬಂಧಗಳು, ದೇಸಾಯಿ-ಗೌಡ್ರು, ಆಳುವವರು, ರಜಾಕಾರರು, ನಿಜಾಮರು, ಬ್ರಿಟಿಷರು ಎಂಬೆಲ್ಲ ನೆಲೆಗಳನ್ನು ಭಾಷಿಕ ವಿನ್ಯಾಸಗಳ ಮೂಲಕ ಸಾಮಾಜಿಕ-ರಾಜಕೀಯ ಹಾಗೂ ಸಾಂಸ್ಕೃತಿಕ-ಧಾರ್ಮಿಕ ವಿನ್ಯಾಸಗಳನ್ನಾಗಿ ನಿರೂಪಿಸಲಾಗಿದೆ.  ಈ ಎಲ್ಲ ನಿರೂಪಣೆಗಳನ್ನು ನೇರ ಅರ್ಥ, ಸಾಂದರ್ಭಿಕ ಅರ್ಥ ಹಾಗೂ ಸಾಂಕೇತಿಕ ಅರ್ಥಗಳ ಮೂಲಕ ಗ್ರಹಿಸಲಾಗುತ್ತದೆ. ಎಲ್ಲಮ್ಮ ಜೋಗತಿ ಅವರನ್ನು ಬದುಕಿನ ದಾರಿ ಮತ್ತು ದರ್ಶನದ ರೂಪಕಗಳನ್ನಾಗಿ, ಹೆಳವರು ಗತದ ಹಳಹಳಿಕೆ ಮತ್ತು ವಾಸ್ತವದ ನಡುವಣ ವೈರುಧ್ಯಗಳನ್ನು ಸೂಚಿಸುವ ಬಗೆಗಳಾಗಿ ನೋಡಲು ಸಾಧ್ಯವಿದೆ. ಒಳಗಿನವರು ಹಾಗೂ ಹೊರಗಿನವರು ಎಂಬ ಪ್ರತ್ಯೇಕತೆಯನ್ನು ರೂಪಿಸುವ ನಿಲುವುಗಳು ಇಲ್ಲಿಯ ಭಾಷಿಕ ನಿರೂಪಣೆಯ ಮುಖೇನವೇ ತಲೆಯೆತ್ತಿವೆ.

ಚರಿತ್ರೆ ಮತ್ತು ಸಮಕಾಲೀನ ನಡುವಣ ಸಂವಾದ, ಅನುಸಂಧಾನ, ಸಂಘರ್ಷ ಹಾಗೂ ಇನ್ನಿತರ ನಿಲುವುಗಳು ಅನಾವರಣಗೊಳ್ಳುವುದು ಭಾಷಿಕ ಕುರುಹುಗಳಲ್ಲಿಯೇ ಎಂಬುದನ್ನು ಇಲ್ಲಿ ಮನಗಾಣಲು ಸಾಧ್ಯವಾಗಿದೆ. ಜೊತೆಗೆ ಪ್ರಾದೇಶಿಕ ಒಳನುಡಿ, ಪರಿಭಾಷೆಗಳ ಬಳಕೆ ಕಥನದೊಳಗೆ ಕಥನ (ಎಂಬೆಡೆಡ್ ಸ್ಟೋರಿ)ವನ್ನು ಸೃಷ್ಟಿಸಲು ಪೂರಕವಾಗಿ ಬಂದಿರುತ್ತವೆ. ಈ ಕೃತಿಯ ಇಡೀ ಸಂದರ್ಭವನ್ನು ಭಾಷೆ ಮತ್ತು ಸಂಸ್ಕೃತಿಗಳ ನೆಲೆಯಲ್ಲಿ ವ್ಯಾಖ್ಯಾನಿಸಿ ವಿಶ್ಲೇಷಿಸಲು ನಿರೂಪಣಾ ಶೈಲಿ ಮತ್ತು ಭಾಷಿಕ ಚಹರೆಗಳು ಮಹತ್ವದ ಪರಿಕರಗಳಾಗಿ ಒದಗಿ ಬಂದಿವೆ. ಅಂದರೆ ಕಾದಂಬರಿಯ ವಿನ್ಯಾಸವನ್ನು ವ್ಯಾಖ್ಯಾನ ಮಾಡುವ ಬಗೆಯೇ ಭಾಷೆಯ ವಿನ್ಯಾಸದ ಮೂಲಕ ಮೈದೋರುತ್ತದೆ.

ಭಾಗ -5

ಚಾರಿತ್ರಿಕ ಕಾದಂಬರಿ: ಕಥನ ಕ್ರಿಯೆಯ ಭಿನ್ನ ರೂಪಗಳು

ಕಲ್ಗುಡಿ ಅವರ ಈ ಮಾತುಗಳ ಮೂಲಕ ಹಾವಳಿ ಕಾದಂಬರಿಯ ಚಾರಿತ್ರಿಕತೆಯ ವಿನ್ಯಾಸವನ್ನು ಅರಿಯಬಹುದು. ಕನ್ನಡದ ಬಹುಪಾಲು ಚಾರಿತ್ರಿಕ ಕಾದಂಬರಿಗಳ ಸ್ವರೂಪದ ಒಂದು ವಿಶಿಷ್ಟ ಲಕ್ಷಣವು ವ್ಯಕ್ತಿಯನ್ನು ಪ್ರಧಾನವಾಗಿರಿಸಿಕೊಂಡಿರುವುದೇ ಆಗಿದೆ. ಒಂದು ರೀತಿಯಲ್ಲಿ ಐತಿಹಾಸಿಕ ವ್ಯಕ್ತಿಯ ವ್ಯಕ್ತಿತ್ವದ ಪುನಾರಚನೆ ಇಲ್ಲಿಯ ಬರವಣಿಗೆಯ ಪ್ರಧಾನ ಬಿತ್ತಿ. ಇದಕ್ಕೆ ಸಂಬಂಧಿಸಿದಂತೆ ಘಟನೆ, ಸನ್ನಿವೇಶಗಳು ರೂಪು ತಳೆಯುತ್ತವೆ (ಪುಟ:131: ನಕ್ಷೆ ನಕ್ಷತ್ರ). ದಿಟ ಬಹುತೇಕ ಚಾರಿತ್ರಿಕ ಕಾದಂಬರಿಗಳ ಲಕ್ಷಣವು ಕಲ್ಗುಡಿ ಅವರ ಅಭಿಪ್ರಾಯಕ್ಕೆ ಪೂರಕವಾಗಿರುವುದು ಗಮನಾರ್ಹ. ಆದರೆ ಹಾವಳಿ ಕಾದಂಬರಿಯ ಐತಿಹಾಸಿಕತೆ ಮತ್ತು ಚಾರಿತ್ರಿಕತೆಯ ಸ್ವರೂಪವು ವ್ಯಕ್ತಿಕೇಂದ್ರಿತವಾಗಿರದೇ, ಒಂದು ಚಾರಿತ್ರಿಕ ಸನ್ನಿವೇಶದ ಮನೋಧರ್ಮ, ಜನಸಮೂಹ ಮತ್ತು ವಿದ್ಯಮಾನಕ್ಕೆ ಸಂಬಂಧಿಸಿದ ಬಗೆಯಾಗಿದೆ. ಹಾಗಾಗಿ ಈ ಕಾದಂಬರಿಯ ಪಾತ್ರಗಳ ಅಸ್ತಿತ್ವ ಮತ್ತು ಪ್ರಜ್ಞೆಯನ್ನು ಸಮುದಾಯ ಕೇಂದ್ರಿತ ಹಾಗೂ ಚಾರಿತ್ರಿಕ ಪ್ರಭಾವದ ಹಿನ್ನಲೆಯಿಂದ ಅರ್ಥೈಸುವುದಾಗಿದೆ. ಕಾದಂಬರಿಯ ವಿನ್ಯಾಸವನ್ನು ವ್ಯಾಖ್ಯಾನ ಮಾಡುವುದಕ್ಕೆ ಭಾಷಿಕ ವಿನ್ಯಾಸವನ್ನೇ ಪ್ರಧಾನ ವಿಶ್ಲೇಷಣೆಯ ಪರಿಕರವನ್ನಾಗಿ ಬಳಸಿದ್ದರೂ, ಚಾರಿತ್ರಿಕ ಗತಿಯ ಸ್ವರೂಪವನ್ನು ಗುರುತಿಸುವುದೇ ಆಗಿರುತ್ತದೆ. ಆದ್ದರಿಂದ ಗ್ರಾಮಾಯಣ, ಕಾನೂರು ಹೆಗ್ಗಡಿತಿ, ಮಲೆಗಳಲ್ಲಿ ಮದುಮಗಳು ಮುಂತಾದವು ತಮ್ಮ ಕಲಾ ಕೃತಿಯ ಚೌಕಟ್ಟಿನಲ್ಲಿ ಕೊಡುವ ಜೀವನ ದರ್ಶನದಲ್ಲಿಯೇ ಚಾರಿತ್ರಿಕ ಗತಿಯ ಸ್ವರೂಪವನ್ನು ಕೊಡುತ್ತವೆ. ಅಂದರೆ ಪ್ರತಿಯೊಂದು ಕಥನದ ಕುತೂಹಲ ಅಡಗಿರುವುದು ಆಯಾ ಕಥನದ ಚೌಕಟ್ಟಿನಲ್ಲಿ ಒಡಮೂಡುವ ಜೀವನ ದರ್ಶನವೇ ಆಗಿರುತ್ತದೆ. ಆದರೆ ಅದು ಕೇವಲ ವರ್ತಮಾನದ ನಿಲುವು ಮಾತ್ರ ಆಗಿರುವುದಿಲ್ಲ ಬದಲಾಗಿ ಚಾರಿತ್ರಿಕತೆಯ ಉತ್ಪಾದನೆ ಆಗಿರುತ್ತದೆ. ಹಾಗಾಗಿ ಹಾವಳಿ ಕಾದಂಬರಿಯ ಸನ್ನಿವೇಶ ಮತ್ತು ಘಟನೆಗಳು ಚಾರಿತ್ರಿಕ ಸನ್ನಿವೇಶಕ್ಕೆ ಸಂಬಂಧಿಸಿದ್ದರೂ, ವರ್ತಮಾನದ ಜೊತೆಗೆ ಅನುಸಂಧಾನ ನಡೆಸುವ ಚಾರಿತ್ರಿಕ ವಿದ್ಯಮಾನದ ರೂಪಕವಾಗಿದೆ. ಈ ವಿನ್ಯಾಸದ ಮೂಲಕ ಪ್ರತಿನೀಧೀಕರಣಗೊಳ್ಳುವ ಅನುಭವವು ವರ್ತಮಾನದ ಸಂದರ್ಭದಲ್ಲಿಯೇ ತನ್ನ ಚಾರಿತ್ರಿಕ ನಿಲುವುಗಳನ್ನು ಪ್ರಕಟಿಸುತ್ತದೆ. ಹಾವಳಿ ಕಾದಂಬರಿಯನ್ನು ಈ ಹಿನ್ನಲೆಯಿಂದ ಅರಿಯುವುದಕ್ಕೆ ಇಲ್ಲಿಯ ವಿಶ್ಲೇಷಣೆಗಳು ಒತ್ತಾಸೆಯಾಗಿರುತ್ತವೆ.

ಹಾವಳಿ ಕಾದಂಬರಿಯ ಕಥನವು ಮೂಲಭೂತವಾಗಿ ವೈರುಧ್ಯದ ನೆಲೆಯಿಂದ ಕೂಡಿದೆ. ಈ ವೈರುಧ್ಯದ ಸ್ವರೂಪವು ಹಿಂದೂ-ಮುಸ್ಲಿಂ, ಒಳಗಿನವರು-ಹೊರಗಿನವರು, ಬ್ರಿಟಿಷರು-ಭಾರತೀಯರು ಎಂಬಿತ್ಯಾದಿ ಡೈಕಾಟಮಿಗಳನ್ನು ಇಲ್ಲಿ ನೋಡಬಹುದು. ಈ ಎಲ್ಲ ಡೈಕಾಟಮಿಗಳು ಕಾಲದಿಂದ ಕಾಲಕ್ಕೆ ತೀವ್ರಗೊಳ್ಳಲು ಕಾದಂಬರಿಯ ಒಳಗೆ ವಿಕಾಸಗೊಂಡಿರುವ ಚಾರಿತ್ರಿಕ ಗತಿಯನ್ನು, ಹಾವಳಿ ಕಾದಂಬರಿಯ ನಿರೂಪಣೆಗಳ ಉದ್ದಕ್ಕೂ ನೋಡುತ್ತೇವೆ. ಹಾಗಾಗಿ ಕಾದಂಬರಿಯ ಇಡೀ ವಿನ್ಯಾಸವನ್ನು ವ್ಯಾಖ್ಯಾನ ಮಾಡುವ ಬಗೆ ಭಾಷೆಯ ವಿನ್ಯಾಸದ ಮೂಲಕ ಮೈದೋರಿದರೂ, ಅದರ ಉದ್ದೇಶ ಮತ್ತು ಗುರಿ ಚಾರಿತ್ರಿಕತೆಯ ಪರಿಣಾಮಗಳನ್ನು ವಿಶ್ಲೇಷಿಸುವುದಾಗಿದೆ.

ಹಾವಳಿ ಕಾದಂಬರಿ ಏಕಕಾಲಕ್ಕೆ ಮೂರು ನೆಲೆಯ ಕಥನಗಳನ್ನು ಹೊಂದಿದೆ. ಅಂದರೆ ಚಾರಿತ್ರಿಕ ಕಥನ, ರಾಜಕೀಯ ಕಥನ ಮತ್ತು ಸಾಮಾಜಿಕ ಕಥನಗಳು ಎಂದು ವಿಂಗಡಿಸಿ ಹೇಳಬಹುದು. ಇಂತಹ ಕಥನಗಳ ವೈಶಿಷ್ಟ್ಯವನ್ನು ಮನಗಾಣಲು ಅಥವಾ ಪರಿಣಾಮಕಾರಿಯಾಗಿ ನಿರೂಪಿಸಲು ಭಾಷೆಯೇ ಪ್ರಧಾನ ವಿದ್ಯಮಾನವಾಗಿದೆ.  ಕಾದಂಬರಿಯ ಭಾಷೆ ಯಾಕೆ ಮುಖ್ಯವಾಗುತ್ತದೆ ಅಂದರೆ, ಕಾದಂಬರಿಯ ಮೂಲಕ ಮೈದೋರುವ ಅಥವಾ ಪ್ರಚುರಪಡಿಸುವ ವೈಚಾರಿಕ ಅರಿವು ಮತ್ತು ತಾತ್ವಿಕತೆಯನ್ನು ರೂಪಿಸುವ ವಿನ್ಯಾಸವೇ ಭಾಷೆ ಆಗಿರುತ್ತದೆ. ಈ ಕಾದಂಬರಿಯಲ್ಲಿ ಮಂಡಿತವಾಗಿರುವ ಸಂಘರ್ಷವು ರಾಜಕೀಯ ಮತ್ತು ಸಾಮಾಜಿಕ ವಿದ್ಯಮಾನವಾಗಿರುತ್ತದೆ. ಆದರೆ ಇದು ಚಾರಿತ್ರಿಕ ಸನ್ನಿವೇಶವನ್ನು ನಿರೂಪಿಸುತ್ತದೆ. ಸಾಹಿತ್ಯ ಪಠ್ಯದ (ಕಾದಂಬರಿ) ಭಾಷೆ ಮತ್ತು ವಿನ್ಯಾಸವನ್ನು ಅರಿಯುವುದೆಂದರೆ ‘ಸಾಹಿತ್ಯಕ ಭಾಷೆ’ಯನ್ನು ಅರಿಯುವುದಾಗಿದೆ. ಸಾಹಿತ್ಯಕ ಭಾಷೆಯು ಏಸ್ತಟಿಕ್, ಸೃಜನಶೀಲವೂ ಮತ್ತು ಸೃಜನಶೀಲ ಪ್ರಜ್ಞೆಯೂ ಆಗಿರುತ್ತದೆ. ಹಾವಳಿ ಕಾದಂಬರಿಯ ಮೂಲಕ ನಿರೂಪಣೆಗೊಂಡ ಭಾಷೆಯನ್ನು ಅರಿಯುವುದೆಂದರೆ, ಇದರ ಸೃಜನಶೀಲತೆಯ ನಿರೂಪಣೆ ಹಾಗೂ ಪ್ರಜ್ಞೆಯ ಭಾಷೆಯನ್ನು ಅರಿಯುವುದಾಗಿದೆ.


ಮಲ್ಲಿಕಾರ್ಜುನ ಹಿರೇಮಠ ಅವರ ‘ಹಾವಳಿ’ ಕಾದಂಬರಿ ಕುರಿತು ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ

ದಿನಾಂಕ 09/07/2023ರಂದು ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ನೀಡಿದ ಉಪನ್ಯಾಸದ ವಿಸ್ತೃತಗೊಳಿಸಿದ ಬರಹ.

‍ಲೇಖಕರು avadhi

October 6, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: