ಮೆಹಬೂಬ್ ಮಠದ ಓದಿದ ‘ಗಂಗೆ ಬಾರೆ ಗೌರಿ ಬಾರೆ’

ಮೂಕ ಲೋಕದೊಳಗಿನ ಮನುಷ್ಯತ್ವದ ಕತೆಗಳು

ಮೆಹಬೂಬ್ ಮಠದ

ಒಂದೇ ಒಂದು ರೊಟ್ಟಿ ಚೂರು ಸಿಕ್ಕರೆ ಸಾಕೆಂದು ಪರದಾಡುತ್ತಿದ್ದ, ಬೀದಿ ಬದಿಯ ಮಣ್ಣಿನಲ್ಲೇ ಸರ್ವ ಸುಖವನ್ನೂ ಕಾಣುತ್ತಿದ್ದ ಭಿಕಾರಿಯಿಂದ ಹಿಡಿದು ಜಗದ ಅತ್ಯಂತ ದುಬಾರಿ ಅರಮನೆಯಲ್ಲಿ ದೇವೇಂದ್ರನೂ ನಾಚುವಂತೆ ವಿಲಾಸಿ ಜೀವನ ನಡೆಸುತ್ತಿದ್ದ ಆಗರ್ಭ ಶ್ರೀಮಂತನವರೆಗೆ ಎಲ್ಲರನ್ನೂ ಹುರಿದು ಮುಕ್ಕಿದ ‘ಕರೋನ’ ಇಡೀ ಜಗತ್ತಿಗೆ ಎಂದೂ ಮರೆಯದ ಆರೋಗ್ಯದ ಪಾಠ ಮಾಡಿ ಹೋಯಿತು…. ಆಂ… ಆರೋಗ್ಯಾನ ಅಂದಾಕ್ಷಣ ನಮ್ಮೆಲ್ಲರ ಮನದ ಪರದೆಯ ಮೇಲೆ ಕಣ್ಣು, ಕಿವಿ, ಮೂಗು, ಹೃದಯ, ಕಿಡ್ನಿ, ಮೆದುಳು, ಎಲುಬು-ಕೀಲು ನರರೋಗ, ಮನೋರೋಗ ಇನ್ನೂ ಹತ್ತಾರು ಸ್ಪೆಶಲಿಸ್ಟ್ ಡಾಕ್ಟರುಗಳ ಚಿತ್ರಗಳು ಮಿಂಚಿನ ವೇಗದಲ್ಲಿ ಸುಳಿದು ‘ವ್ಯದ್ಯೋ ನಾರಾಯಣೋ ಹರಿ’ ಎಂಬ ಸಾಲುಗಳನ್ನು ಅರಿವಿಲ್ಲದೇ ಪಠಿಸುತ್ತೇವೆ ಆದರೆ ಇಡೀ ಜಗದ ಜನರ ಸುಸ್ಥಿರ ಬದುಕಿಗೆ ಕಾರಣವಾದ ‘ಮೂಕ ಲೋಕದ’ ಆರೋಗ್ಯಕ್ಕಾಗಿ ಟೈಮು ಟೇಬಲ್ಲು ಇಲ್ಲದೇ ಕೊನೆಗೆ ವೈಯಕ್ತಿಕ ಬದುಕನ್ನೂ ಮರೆತು ದುಡಿಯುವ ವೆಟರ್ನರಿ ಡಾಕ್ಟ್ರು ಓ ಗೊತ್ತಾಗಲಿಲ್ಲ ಅನ್ಸುತೆ ದನಿನ (ದನದ) ಡಾಕ್ಟ್ರೊಬ್ಬರ ಮನಕಲಕುವ ಘಟನೆಗಳ ಚಿತ್ರಣಗಳ ಒಟ್ಟು ಮೊತ್ತದಂತಿರುವ ಡಾ. ಮಿರ್ಜಾ ಬಷೀರ್ ರವರ ‘ಗಂಗೆ ಬಾರೆ ಗೌರಿ ಬಾರೆ’ ಎನ್ನುವ ಪುಸ್ತಕ ನನ್ನನ್ನು ಬಹಳ ಡಿಸ್ಟರ್ಬ ಮಾಡಿದೆ.

ತಮ್ಮ ವೃತ್ತಿ ಬದುಕಿನ 35 ಮಹತ್ವದ ಪ್ರಸಂಗಗಳನ್ನು ಬಹಳ ರಚನಾತ್ಮಕವಾಗಿ ಲೇಖಕರು ಕಟ್ಟಿಕೊಟ್ಟಿದ್ದಾರೆ. ತಮ್ಮ ಹೆಂಡತಿ ಮತ್ತು ಅವರ ಗೆಳತಿಯ ನಡುವಿನ ಪತ್ರ ವ್ಯವಹಾರವನ್ನು ಓದುಗರು ಬಿದ್ದು ಬಿದ್ದು ನಗುವಂತೆ ಬರೆವ ಅವರು ಮರುಕ್ಷಣವೇ ತಮ್ಮ ವೃತ್ತಿ ಬದುಕಿನ ಆರಂಭದ ದಿನಗಳಲ್ಲಿ ನೊಣವಿನಕೆರೆಯಲ್ಲಿದ್ದಾಗ ಚೆನ್ನಪ್ಪನೆಂಬ ರೈತನೊಬ್ಬ ನ ಸಬ್ಸಿಡಿ ಸಾಲದ ಅರ್ಜಿ ಸಲುವಾಗಿ ಅವನಿಂದ ತೀವ್ರ ವಾಗ್ದಾಳಿಗೊಳಗಾಗಿದ್ದಲ್ಲದೆ ಲೋನ್ ಪೂಜಾರಿ ಎಂದೇ ಖ್ಯಾತರಾಗಿದ್ದ ಅಂದಿನ ಮಂತ್ರಿ ಜನಾರ್ಧನ ಪೂಜಾರಿಯವರ ಮುಂದೆ ಮಾನ ಹರಾಜು ಹಾಕಿಸಿಕೊಳ್ಳುವದರ ಜೊತೆಗೆ ನೌಕರಿಗೇ ಗಂಡಾಂತರ ತರಿಸಿಕೊಳ್ಳುವ ಬೆದರಿಕೆಯನ್ನೂ ಎದುರಿಸುತ್ತಾರೆ ಇದೆಲ್ಲ ಆಗದ ಮಾತು ಎಂದೆಣಿಸಿ ಅಲ್ಲಿಂದ ತಲೆಮರಿಸಿಕೊಂಡು ಊರಿಗೆ ಹೋಗುವ ಇವರು ಪ್ರತಿ ದಿನ ಭಯದಲ್ಲೇ ಪತ್ರಿಕೆ ಓದಲು ಶುರು ಮಾಡುತ್ತಾರೆ ಇದರ ಕೊನೆಯನ್ನು ಓದಿಯೇ ಸವಿಯಬೇಕು.

ನಾವೆಲ್ಲರು ನಮ್ಮ ನಮ್ಮ ನೌಕರಿ ಹಾಗೂ ಕೆಲಸಗಳ ನಡುವೆ ನಮ್ಮೆದುರಿಗೆ ಇರುವ ಮನುಷ್ಯರಿಗೂ ಒಂದು ವ್ಯಕ್ತಿತ್ವವಿರುತ್ತದೆ ಎಂಬುದನ್ನೇ ಮರೆಯುತ್ತೇವೆ ಅದು ಎಷ್ಟರಮಟ್ಟಿಗೆ ದೊಡ್ಡ ಅಪರಾಧ ಎಂಬುದನ್ನು ‘ಅಮಾಸೆಗೌಡ’ನೆಂಬ ಹಿರಿಯ ಜೀವ ವನ್ನು ಲೇಖಕರು ತಮ್ಮ ಸಮಯ ವ್ಯರ್ಥಮಾಡಲೆಂದೇ ಎದುರುಗೊಳ್ಳುವವನೆಂದು ಎಣಿಸಿ ಆತನನ್ನು ಕಡೆಗಣಿಸುವವದನ್ನು ಓದುವಾಗ ಗೊತ್ತಾಗುತ್ತದೆ. ‘ಕತ್ತೆ ಸಿದ್ದಣ’್ಣ ನ ಜನನ ನಿಯಂತ್ರಣ ಆಪರೇಶನ್ನಿನ ಕತೆಯಂತೂ ಹೊಟ್ಟೆ ಹುಣ್ಣಾಗುವಂತೆ ನಗಿಸುತ್ತದೆ.

ಹಳೆಯ ಕನ್ನಡ ಚಿತ್ರಗಳ ಎಲ್ಲಾ ಖಳನಾಯಕರ ಸರ್ವ ದುರ್ಗುಣಳ ಪ್ರತಿರೂಪದಂತಿರುವ ‘ತಣ್ಣನೆ ರಕ್ತದ ಕೌರ್ಯದ ರೂಪಕವೇ’ ಆಗಿರುವ ‘ಕ್ಷೀರಸಾಗರ’ ತನ್ನ ಬಳಿ ಕೆಲಸಕ್ಕೆ ಬರುವ ಬಡ ಹೆಣ್ಣುಮಕ್ಕಳನ್ನು ಅವರ ಹಸಿವನ್ನೇ ಬಂಡವಾಳ ಮಾಡಿಕೊಂಡು ಹರೆಯದವರು ವಯಸ್ಸಾದವರೂ ಎಂಬುದನ್ನು ನೋಡದೆ ಅವರನ್ನು ತನ್ನ ಹಾಸಿಗೆಯ ಬಾಯಿಗೆ ಬಲಿ ಕೊಡುವದನ್ನು ಹಾಗೂ ಬಡವರಿಗೆ ಅನ್ಯಾಯ ಮಾಡಬಾರದು ಸ್ವಾಮಿ ಎನ್ನುವ ಅವನ ವ್ಯಂಗಭರಿತ ಮಾತುಗಳನ್ನು ಬರೆಯುವಾಗ ಮಿರ್ಜಾ ಬಷೀರರು ತಮ್ಮ ಹೆಂಗರುಳಿನ ಮನಸನ್ನು ಅಭಿವ್ಯಕ್ತಿಸುತ್ತಾರೆ ಇದನ್ನು ಓದುವಾಗ ಕಣ್ಣೀರು ಜಿನುಗದೆ ಇರದು.

ಸಾಬ್ರಾದ್ರೂ ಬಷೀರ್ ಡಾಕ್ಟ್ರು ಅಂಥವರಲ್ಲಾ ಎನ್ನುವ ಪಾಟೀಲರ ಮಾತುಗಳು ಸುರೆಬಾನದಲ್ಲಾದ ಕನ್ಯಾನ್ವೇಷಣಾ ಪ್ರಸಂಗದಲ್ಲಿ ಬರುತ್ತವೆ. ಒಂದಿಡೀ ಸಮುದಾಯನ್ನು ಗುಮಾನಿಯಿಂದ ನೋಡುವ ಕೆಲವೇ ಕೆಲವು ದುಷ್ಟ ಮನಸುಗಳು ಸೃಷ್ಟಿಸಿರುವ ಸುಳ್ಳುಗಳನ್ನು ಸಜ್ಜನರು ಕೂಡ ತುಂಬಾ ಸಹಜವಾಗಿ ಬಳಸುವುದನ್ನು ಹಾಗೂ ಅದರಿಂದಾಗುವ ಅತಿ ಸೂಕ್ಷ್ಮ ಆದರೆ ಭಯಂಕರ ಆಘಾತವನ್ನು ಲೇಖಕರು ನಗುತ್ತಲೇ ಎದುರಿಸುವ ಪರಿ ನಿಜಕ್ಕೂ ಅಪರೂಪದ್ದು. ತನ್ನೆಲ್ಲಾ ಭಾನಗಡಿಗಳಿಗೆ ‘ಮೆಂಡ್ಲ ಎಂಬ ಇಜ್ಞಾನಿಯೇ’ ಕಾರಣ ಎಂದು ಬಲವಾಗಿ ವಾದಿಸುವ ‘ಕಪಿನಪ್ಪ’ ನ ರಸಿಕ ಪ್ರಸಂಗ ಕುತೂಹಲಕರ.

ಎತ್ತಿಗೆ ಚಿಕಿತ್ಸೆ ನೀಡುವಾಗ ನಡೆದ ಅಪಘಾತದಿಂದ ತನ್ನ ಹಾಗೂ ತನ್ನ ಮಗನ ಬದುಕನ್ನೇ ನಾಶ ಮಾಡಿಕೊಂಡ ‘ಬೆಟ್ಟಯ್ಯ’ ನೆಂಬ ಪಶು ಸಹಾಕನ ಕತೆ, ಸಂಭ್ರಮವನ್ನಾಚರಿಸಲೆಂದೇ ಬೇಗ ಕೆಲಸ ಮುಗಿಸಿ ಮನೆಗೆ ವಾಪಸಾಗುವ ತಯಾರಿಯಲ್ಲಿದ್ದ ಡಾ. ಲೇಶಣ್ಣನವರ ದಾರುಣ ಅಂತ್ಯ, ಒಂದೇ ರಾತ್ರಿಯಲ್ಲಿ ಒಂದೇ ಮನೆಯ ಪಶುಗಳ ಸರಣಿ ಸಾವುಗಳು ಹಾಗೂ ಆ ಕರಾಳ ಸಾವುಗಳಿಗೆ ಕಾರಣನಾದ ‘ನಾಣು’ ವಿನ ಮೇಲೆ ಸಾಸಿವೆಯಷ್ಟೂ ಕೋಪ ತೋರಿಸದ ಯಜಮಾನರಾದ ‘ಗಿರೀಶರ’ ಮಾನವೀಯತೆ ನನ್ನನ್ನು ಕಾಡುತ್ತಲೇ ಇದೆ.

ಮದುವೆಗೂ ಮುಂಚೆ ಅವರ ಹೆಂಡತಿಯಾದ ‘ಹಸೀನಾ’ ಹಾಗೂ ಹಸೀನಾರವರ ಗೆಳತಿಯ ಪತ್ರ ವ್ಯವಹಾರದ ಮೂಲಕ ಆರಂಭವಾಗುವ ಪುಸ್ತಕದ ಪುಟ ‘ಹೆಂಡತಿಯೊಬ್ಬಳು ಮನೆಯೊಳಗಿದ್ದರೆ…’ ಎನ್ನುವ ಅಧ್ಯಾಯದೊಂದಿಗೆ ಮುಗಿಯುತ್ತದೆ ಇದನ್ನು ನೋಡಿದರೆ ಲೇಖಕರು ತಮ್ಮ ವೃತ್ತಿ ಬದುಕಿನ ಯಶಸ್ಸಿಗೆ ಕಾರಣರಾದ ಅವರ ಹೆಂಡತಿಯನ್ನು ಅದೆಷ್ಟು ಗೌರವಿಸುತ್ತಾರೆ ಎಂಬುದು ತಿಳಿಯುತ್ತದೆ. ಪುಸ್ತಕದಲ್ಲಿರುವ ಎಲ್ಲ ಪ್ರಸಂಗಗಳೂ ವಿಭಿನ್ನ ಅನುಭವಗಳನ್ನು ನೀಡುತ್ತವೆ. ಗ್ರಾಮೀಣ ಭಾರತದ ರಾಜಕೀಯ, ಆರ್ಥಿಕ ಹಾಗೂ ಸಾಂಸ್ಕøತಿಕ ಚಿತ್ರಣಗಳನ್ನು ಲೇಖಕರು ಸಶಕ್ತವಾಗಿ ಕಟ್ಟಿಕೊಟ್ಟಿದ್ದಾರೆ. ವೆಟರ್ನರಿ ವಿದ್ಯಾರ್ಥಿಗಳ ಪಾಲಿನ ವಿಶ್ವಕೋಶದಂತೆ, ಸಮಸ್ತ ದನಿನ ಡಾಕ್ಟರುಗಳ ಪಾಲಿನ ಆತ್ಮಕಥನದಂತೆ ಇರುವ ಈ ಕೃತಿ ಮೂಕಲೋಕದ ಪ್ರತಿನಿಧಿಯಾಗಿಯೂ ನಿಲ್ಲುತ್ತದೆ.

‍ಲೇಖಕರು Admin

November 3, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: